ವಿಷಯಕ್ಕೆ ಹೋಗು

ಓಲ್ಡ್ ಬಾಯ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಓಲ್ಡ್‌ಬಾಯ್
ಚಿತ್ರಮಂದಿರ ಬಿಡುಗಡೆಯ ಪೋಸ್ಟರ್
올|드|보|이
ನಿರ್ದೇಶನಪಾರ್ಕ್ ಚ್ಯಾನ್-ವುಕ್
ನಿರ್ಮಾಪಕಲಿಮ್ ಸ್ಯುಂಗ್-ಯೊಂಗ್
ಚಿತ್ರಕಥೆ
  • ಹ್ವಾಂಗ್ ಜೊ-ಯುನ್
  • ಕಿಮ್ ಜುನ್-ಹ್ಯುಂಗ್
  • ಪಾರ್ಕ್ ಚ್ಯಾನ್-ವುಕ್
ಆಧಾರಗಾರೋನ್ ಸೂಚಿಯಾ ಮತ್ತು ನೊಬುವಾಕಿ ಮಿನೆಗಿಶಿಯವರ ಓಲ್ಡ್ ಬಾಯ್ ಮಾಂಗಾ ಮೇಲೆ ಆಧಾರಿತ
ಪಾತ್ರವರ್ಗ
  • ಚೊಯ್ ಮಿನ್-ಸಿಕ್
  • ಯೂ ಜೀ-ಟೇ
  • ಕಾಂಗ್ ಹ್ಯೆ-ಜುಂಗ್
ಸಂಗೀತಚೊ ಯೂಂಗ್-ವುಕ್
ಛಾಯಾಗ್ರಹಣಚುಂಗ್ ಚುಂಗ್-ಹೂನ್
ಸಂಕಲನಕಿಂ ಸಾಂಗ್-ಬುಮ್
ಸ್ಟುಡಿಯೋಶೋ ಈಸ್ಟ್
ವಿತರಕರುಶೋ ಈಸ್ಟ್
ಬಿಡುಗಡೆಯಾಗಿದ್ದು
  • 21 ನವೆಂಬರ್ 2003 (2003-11-21)
ಅವಧಿ120 ನಿಮಿಷಗಳು[]
ದೇಶದಕ್ಷಿಣ ಕೋರಿಯಾ
ಭಾಷೆಕೋರಿಯನ್
ಬಂಡವಾಳ$3 ಮಿಲಿಯನ್[]
ಬಾಕ್ಸ್ ಆಫೀಸ್$15 ಮಿಲಿಯನ್[]

ಓಲ್ಡ್‌ಬಾಯ್ ದಕ್ಷಿಣ ಕೋರಿಯಾದ ೨೦೦೩ರ ಒಂದು ನಿಯೊ-ನಾಯರ್ ಸಾಹಸಪ್ರಧಾನ ರೋಮಾಂಚಕಾರಿ ಚಲನಚಿತ್ರ.[][] ಚಾನ್-ವುಕ್ ಪಾರ್ಕ್ ಇದರ ನಿರ್ದೇಶಕರು ಮತ್ತು ಸಹಬರಹಗಾರರಾಗಿದ್ದರು. ಇದು ಗಾರೋನ್ ಸೂಚಿಯಾ ಬರೆದ ಮತ್ತು ನೊಬುವಾಕಿ ಮಿನೆಗಿಶಿ ಸಚಿತ್ರಗೊಳಿಸಿದ ಇದೇ ಹೆಸರಿನ ಜಾಪನೀಸ್ ಹಾಸ್ಯ ಚಿತ್ರಮಾಲೆಯ ಮೇಲೆ ಆಧಾರಿತವಾಗಿದೆ. ಓಲ್ಡ್‌ಬಾಯ್ ದ ವೆಂಜನ್ಸ್ ಚಿತ್ರತ್ರಯದ ಎರಡನೇ ಭಾಗವಾಗಿದೆ, ಮತ್ತು ಸಿಂಪತಿ ಫಾರ್ ಮಿ. ವೆಜಿಯಾನ್ಸ್ ಇದರ ಪೂರ್ವಭಾಗವಾಗಿದೆ ಹಾಗೂ ಸಿಂಪತಿ ಫಾರ್ ಲೇಡಿ ವೆಜಿಯಾನ್ಸ್ ಇದರ ಉತ್ತರಭಾಗವಾಗಿದೆ.

ಈ ಚಿತ್ರವು ಹೋಟೆಲ್ ಕೋಣೆಯನ್ನು ಹೋಲುವ ಜೈಲುಖಾನೆಯಲ್ಲಿ, ತನ್ನನ್ನು ಸೆರೆಹಾಕಿದವನ ಗುರುತು ಅಥವಾ ಉದ್ದೇಶಗಳನ್ನು ತಿಳಿಯದೆ ೧೫ ವರ್ಷ ಸೆರೆಯಾಗುವ ಓ ಡೇ-ಸೂನ ಕಥೆಯನ್ನು ಅನುಸರಿಸುತ್ತದೆ. ಅಂತಿಮವಾಗಿ ಬಿಡುಗಡೆಗೊಂಡ ಮೇಲೆ, ಡೇ-ಸೂ‍ಗೆ ತಾನು ಪಿತೂರಿ ಮತ್ತು ಹಿಂಸಾಚಾರದ ಜಾಲದಲ್ಲಿ ಆಗಲೂ ಸಿಕ್ಕಿಕೊಂಡಿರುವಂತೆ ತೋರುತ್ತದೆ. ಅವನು ಒಬ್ಬ ಆಕರ್ಷಕ ಯುವ ಸೂಶಿ ಶೆಫ಼್‍ನ್ನು ಪ್ರೀತಿಸತೊಡಗಿದಾಗ ಅವನ ಸ್ವಂತದ ಸೇಡಿನ ಅನ್ವೇಷಣೆಯು ಪ್ರಣಯದಲ್ಲಿ ಸಿಕ್ಕಿಹಾಕಿಕೊಂಡುಬಿಡುತ್ತದೆ.

ಈ ಚಲನಚಿತ್ರವು ೨೦೦೪ರ ಕಾನ್ ಚಲನಚಿತ್ರೋತ್ಸವದಲ್ಲಿ ಗ್ರಾಂಡ್ ಪ್ರೀ ಪ್ರಶಸ್ತಿ ಗೆದ್ದಿತು ಮತ್ತು ತೀರ್ಪುಗಾರರ ಸಮಿತಿಯ ಅಧ್ಯಕ್ಷರಾದ ನಿರ್ದೇಶಕ ಕ್ವೆಂಟಿನ್ ಟ್ಯಾರಂಟೀನೊರಿಂದ ಬಹಳ ಮೆಚ್ಚುಗೆ ಪಡೆಯಿತು. ಅಮೇರಿಕದಲ್ಲಿನ ವಿಮರ್ಶಕರು ಈ ಚಲನಚಿತ್ರವನ್ನು ಉತ್ತಮವಾಗಿ ಸ್ವೀಕರಿಸಿದ್ದಾರೆ. ಹಲವಾರು ಪ್ರಕಟಣೆಗಳಲ್ಲಿ ಈ ಚಿತ್ರವನ್ನು ೨೦೦೦ರ ದಶಕದ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದೆಂದು ಪಟ್ಟಿಮಾಡಲಾಗಿದೆ.

ಕಥಾವಸ್ತು

[ಬದಲಾಯಿಸಿ]

೧೯೮೮ರಲ್ಲಿ, ಓ ಡೇ-ಸೂ ಹೆಸರಿನ ಉದ್ಯಮಿ ಕುಡಿತಕ್ಕಾಗಿ ಬಂಧನಕ್ಕೊಳಗಾಗುತ್ತಾನೆ, ಮತ್ತು ತನ್ನ ಮಗಳ ನಾಲ್ಕನೇ ಹುಟ್ಟುಹಬ್ಬವನ್ನು ತಪ್ಪಿಸಿಕೊಳ್ಳುತ್ತಾನೆ. ಅವನ ಗೆಳೆಯ ಜೂ-ಹ್ವಾನ್ ಅವನನ್ನು ಪೋಲಿಸ್ ಠಾಣೆಯಿಂದ ಕರೆದುಕೊಂಡು ಹೊರಟ ನಂತರ, ಅವರು ಡೇ-ಸೂ ಮನೆಗೆ ಕರೆಮಾಡಲು ದೂರವಾಣಿ ಬೂತಿಗೆ ಹೋಗುತ್ತಾರೆ. ಜೂ-ಹ್ವಾನ್ ಡೇ-ಸೂನ ಹೆಂಡತಿಯೊಂದಿಗೆ ಮಾತನಾಡುತ್ತಿರುವಾಗ, ಡೇ-ಸೂನನ್ನು ಅಪಹರಿಸಲಾಗುತ್ತದೆ, ಮತ್ತು ಅವನಿಗೆ ಒಂದು ಮುಚ್ಚಲ್ಪಟ್ಟ ಹೋಟೆಲ್ ಕೋಣೆಯಲ್ಲಿ ಎಚ್ಚರವಾಗುತ್ತದೆ. ಇಲ್ಲಿ ಬೋನುಬಾಗಿಲಿನ ಮೂಲಕ ಆಹಾರವನ್ನು ಒದಗಿಸಲಾಗುತ್ತಿರುತ್ತದೆ. ಟೀವಿಯನ್ನು ನೋಡಿದಾಗ, ತನ್ನ ಹೆಂಡತಿಯನ್ನು ಕೊಲ್ಲಲಾಗಿದೆ ಮತ್ತು ತಾನು ಪ್ರಮುಖ ಆರೋಪಿಯಾಗಿದ್ದೇನೆ ಎಂದು ಡೇ-ಸೂ ಗೆ ಗೊತ್ತಾಗುತ್ತದೆ. ಡೇ-ಸೂ ಶ್ಯಾಡೊಬಾಕ್ಸಿಂಗ್, ಸೇಡಿನ ಯೋಜನೆಮಾಡುತ್ತಾ, ಮತ್ತು ತಪ್ಪಿಸಿಕೊಳ್ಳಲು ಸುರಂಗ ತೋಡುವುದನ್ನು ಪ್ರಯತ್ನಿಸುತ್ತಾ ಕಾಲ ಕಳೆಯುತ್ತಾನೆ.

ಸೆರೆಯಾಗಿ ೧೫ ವರ್ಷಗಳು ಕಳೆಯುತ್ತವೆ. ವರ್ಷ ೨೦೦೩ ಬರುತ್ತದೆ ಮತ್ತು ಹೊಸ ಶತಮಾನವು ಆರಂಭವಾಗಿರುತ್ತದೆ. ಸ್ವತಂತ್ರವಾಗಲು ದಾರಿ ತೋಡಿ ಹೊರಬರುವ ಸ್ವಲ್ಪ ಮೊದಲು, ಡೇ-ಸೂಗೆ ಶಾಮಕ ಮದ್ದು ನೀಡಿ ಸಂಮೋಹನಗೊಳಿಸಲಾಗುತ್ತದೆ ಮತ್ತು ಅವನು ಮೇಲ್ಛಾವಣಿ ಮೇಲೆ ಎಚ್ಚರಗೊಳ್ಳುತ್ತಾನೆ. ಮೇಲ್ಛಾವಣಿ ಮೇಲೆ, ಛಾವಣಿಯ ಮುಂಚಾಚಿನ ಮೇಲೆ ನಾಯಿಯನ್ನು ಹಿಡಿದುಕೊಂಡು ಸಾಯುವ ಸಲುವಾಗಿ ಹಾರಲು ತಯಾರಾಗಿರುವ ವ್ಯಕ್ತಿಯನ್ನು ಡೇ-ಸೂ ನೋಡುತ್ತಾನೆ. ಅವನು ಆ ವ್ಯಕ್ತಿಯ ಮುಖದ ಮುಂದೆ ಹೆಜ್ಜೆಯನ್ನಿಟ್ಟು ತಾನು ಕನಸು ಕಾಣುತ್ತಿಲ್ಲವೆಂದು ಖಚಿತಪಡಿಸಿಕೊಳ್ಳಲು ಅಹಿತವಾಗುವಷ್ಟು ಹತ್ತಿರ ಇರುತ್ತಾನೆ. "ನಾನು ಮೃಗಕ್ಕಿಂತ ಉತ್ತಮವಾಗಿಲ್ಲದಿದ್ದರೂ, ನನಗೆ ಜೀವಿಸುವ ಹಕ್ಕಿಲ್ಲವೇ", ಎಂದು ಅವನು ಡೇ-ಸೂ ಗೆ ಕೇಳುತ್ತಾನೆ. ಅಲ್ಲಿಯವರೆಗೆ ಆ ವ್ಯಕ್ತಿಯೊಂದಿಗೆ ನಡೆದಿದ್ದೆಲ್ಲವನ್ನು ಡೇ-ಸೂ ಸ್ಮರಿಸಿಕೊಳ್ಳುತ್ತಾನೆ. ಡೇ-ಸೂಗೆ ತನ್ನ ಆತ್ಮಹತ್ಯೆ ಪ್ರಯತ್ನಕ್ಕೆ ಕಾರಣವನ್ನು ಹೇಳಲು ಪ್ರಯತ್ನಿಸುವ ಮೂಲಕ ಆ ವ್ಯಕ್ತಿಯು ಪ್ರತಿಕ್ರಿಯಿಸುತ್ತಾನೆ. ಆಸಕ್ತಿ ಇಲ್ಲದ ಡೇ-ಸೂ ಅವನು ನಾಯಿಯೊಂದಿಗೆ ಛಾವಣಿ ಮೇಲಿಂದ ಹಾರಲು ಅವನನ್ನು ಬಿಡುತ್ತಾನೆ. ಡೇ-ಸೂ ತನ್ನ ಹೊಡೆದಾಡುವ ಕೌಶಲಗಳನ್ನು ಯುವ ಕೇಡಿಗಳ ಗುಂಪಿನ ಮೇಲೆ ಪರೀಕ್ಷಿಸುತ್ತಾನೆ. ನಂತರ ಒಬ್ಬ ನಿಗೂಢ ಭಿಕ್ಷುಕನು ಅವನಿಗೆ ಹಣ ಮತ್ತು ಮೊಬೈಲ್ ಫೋನನ್ನು ನೀಡುತ್ತಾನೆ. ಡೇ-ಸೂ ಒಂದು ಸೂಶಿ ರೆಸ್ಟೊರೆಂಟ್‍ನ್ನು ಪ್ರವೇಶಿಸಿ ಅಲ್ಲಿಯ ಯುವ ಅಡಿಗೆಯವಳಾದ ಮೀಡೊಳನ್ನು ಭೇಟಿಯಾಗುತ್ತಾನೆ. ಡೇ-ಸೂಗೆ ತನ್ನನ್ನು ಬಂಧಿಸಿದವನ ಮೂದಲಿಕೆಯ ದೂರವಾಣಿ ಕರೆ ಬರುತ್ತದೆ. ಆ ವ್ಯಕ್ತಿಯು ಡೇ-ಸೂನ ಬಂಧನದ ಕಾರಣವನ್ನು ವಿವರಿಸಲು ನಿರಾಕರಿಸುತ್ತಾನೆ. ಅವನು ಕುಸಿದುಬಿದ್ದಾಗ ಮೀಡೊ ಅವನನ್ನು ಮನೆಗೆ ಕರೆದೊಯ್ಯುತ್ತಾಳೆ. ಚೇತರಿಸಿಕೊಂಡ ಮೇಲೆ, ಡೇ-ಸೂ ತನ್ನ ಮಗಳು ಮತ್ತು ತನ್ನ ಸೆರೆಮನೆಯ ಸ್ಥಳವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಾನೆ. ಅವನ ಮಗಳನ್ನು ಒಬ್ಬ ಸ್ವೀಡಿಶ್ ದಂಪತಿಯು ದತ್ತು ಸ್ವೀಕರಿಸಿದ್ದಾರೆ ಎಂದು ತಿಳಿದುಕೊಂಡ ಮೇಲೆ, ಅವಳನ್ನು ಸಂಪರ್ಕಿಸುವ ಪ್ರಯತ್ನವನ್ನು ಬಿಟ್ಟುಬಿಡುತ್ತಾನೆ. ಡೇ-ಸೂ ತನ್ನ ಸೆರೆಮನೆಗಾಗಿ ಆಹಾರವನ್ನು ತಯಾರಿಸುತ್ತಿದ್ದ ಚೈನೀಸ್ ರೆಸ್ಟೊರೆಂಟ್‌ನ್ನು ಪತ್ತೆಹಚ್ಚಿ ಒಬ್ಬ ಬಟವಾಡೆ ಆಳನ್ನು ಹಿಂಬಾಲಿಸಿ ಸೆರೆಮನೆಯನ್ನು ಪತ್ತೆಹಚ್ಚುತ್ತಾನೆ. ಅದು ಖಾಸಗಿ ಸೆರೆಮನೆಯಾಗಿದ್ದು ಇತರರನ್ನು ಸೆರೆಯಾಗಿಸಲು ಪಾವತಿ ಮಾಡಬಹುದಾಗಿರುತ್ತದೆ. ಡೇ-ಸೂ ಸೆರೆಮನೆಯನ್ನು ಪ್ರವೇಶಿಸಿ ಮೇಲಧಿಕಾರಿ ಮಿ. ಪಾರ್ಕ್‌ಗೆ ಚಿತ್ರಹಿಂಸೆ ಕೊಟ್ಟಾಗ, ಅವನು ತನಗೆ ಡೇ-ಸೂನನ್ನು ಕೂಡಿಟ್ಟವನ ಗುರುತು ಗೊತ್ತಿಲ್ಲ ಆದರೆ ಬಹಳ ಮಾತಾಡಿದ್ದಕ್ಕಾಗಿ ಡೇ-ಸೂನನ್ನು ಸೆರೆಮಾಡಲಾಯಿತೆಂದು ಬಹಿರಂಗಗೊಳಿಸುತ್ತಾನೆ. ಸೆರೆಮನೆಯಿಂದ ಹೊರಟಾಗ, ಡೇ-ಸೂ ಮೇಲೆ ಅನೇಕ ಪಹರೆ ಸೈನಿಕರು ದಾಳಿಮಾಡಿ ಅವನ ಬೆನ್ನಿಗೆ ಚೂರಿಹಾಕುತ್ತಾರೆ ಆದರೆ ಅವನು ಎಲ್ಲರನ್ನು ಸೋಲಿಸುವಲ್ಲಿ ಸಫಲನಾಗುತ್ತಾನೆ.

ಡೇ-ಸೂನನ್ನು ಸೆರೆಮಾಡಿದ್ದ ಶ್ರೀಮಂತನಾದ ಲೀ ವೂ-ಜಿನ್ ಹೆಸರಿನ ವ್ಯಕ್ತಿಯು ಮತ್ತೆ ಡೇ-ಸೂನನ್ನು ಸಂಪರ್ಕಿಸಿ ಅವನಿಗೆ ಕೊನೆಯ ನಿರ್ಧಾರವನ್ನು ಹೇಳುತ್ತಾನೆ: ಡೇ-ಸೂ ತನ್ನ ಸೆರೆವಾಸದ ಉದ್ದೇಶವನ್ನು ಐದು ದಿನಗಳೊಳಗೆ ಪತ್ತೆಹಚ್ಚಿದರೆ, ತನ್ನ ಎದೆಯಲ್ಲಿರುವ ಗತಿ ನಿಯಂತ್ರಕವನ್ನು ನಿಲ್ಲಿಸುವ ಮೂಲಕ ವೂ-ಜಿನ್ ತನ್ನನ್ನು ಸಾಯಿಸಿಕೊಳ್ಳುವನು. ಇಲ್ಲವೆಂದರೆ ಮೀಡೊಳನ್ನು ಸಾಯಿಸುವನು ಎಂದು. ಡೇ-ಸೂ ಮತ್ತು ಮೀಡೊ ನಿಕಟವಾದಂತೆ ಅವರಿಬ್ಬರು ಸಂಭೋಗಿಸುತ್ತಾರೆ. ಈ ನಡುವೆ, ಜೂ-ಹ್ವಾನ್ ವೂ-ಜಿನ್‍ನ ಸೋದರಿಯ ಬಗ್ಗೆ ಸ್ವಲ್ಪ ಮುಖ್ಯವಾದ ಮಾಹಿತಿಯೊಂದಿಗೆ ಡೇ-ಸೂನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾನೆ. ಆದರೆ, ಡೇ-ಸೂ ವೂ-ಜಿನ್‍ನ ಎಲ್ಲ ವಿದ್ಯುನ್ಮಾನ ದೋಷಗಳನ್ನು ತೆಗೆದುಹಾಕಿದ ನಂತರ, ಅವನನ್ನು ರಹಸ್ಯವಾಗಿ ಅನುಸರಿಸುತ್ತಿದ್ದ ವೂ-ಜಿನ್ ಅವನನ್ನು ಸಾಯಿಸುತ್ತಾನೆ. ತಾನು ಮತ್ತು ವೂ-ಜಿನ್ ಒಂದೇ ಪ್ರೌಢಶಾಲೆಗೆ ಹೋಗಿದ್ದೇವೆಂದು ಮತ್ತು ತಾನು ವೂ-ಜಿನ್ ಅವನ ಸ್ವಂತ ಸೋದರಿಯೊಂದಿಗೆ ಅಗಮ್ಯ ಗಮನವನ್ನು ನಡೆಸಿದ್ದನ್ನು ನೋಡಿದ್ದನ್ನು ಅಂತಿಮವಾಗಿ ಡೇ-ಸೂ ನೆನಪಿಸಿಕೊಳ್ಳುತ್ತಾನೆ. ಶಾಲೆಯನ್ನು ಬಿಡುವ ಮೊದಲು ತಾನು ನೋಡಿದ್ದನ್ನು ಡೇ-ಸೂ ಜೂ-ಹ್ವಾನ್‌ಗೆ ಹೇಳಿದ್ದರಿಂದ ಆ ಘಟನೆ ಬಗ್ಗೆ ಅವನ ಸಹಪಾಠಿಗಳಿಗೆ ಗೊತ್ತಾಗಿರುತ್ತದೆ. ವೂ-ಜಿನ್‍ನ ಸೋದರಿಯ ಬಗ್ಗೆ ವದಂತಿಗಳು ಹರಡಲು ಶುರುವಾದಾಗ ಅಂತಿಮವಾಗಿ ಅವಳು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇದರಿಂದ ದುಃಖಿತನಾದ ವೂ-ಜಿನ್ ಸೇಡು ತೀರಿಸಿಕೊಳ್ಳಬೇಕೆಂದುಕೊಳ್ಳುತ್ತಾನೆ. ಮತ್ತೆ ಈಗಿನ ದಿನದಲ್ಲಿ, ವೂ-ಜಿನ್ ಮಿ. ಪಾರ್ಕ್‌ನ ಕೈಯನ್ನು ಕತ್ತರಿಸಿ ಡೇ-ಸೂನ ಮುಂಚಿನ ಬೆದರಿಕೆಯನ್ನು ತೀರಿಸಿಕೊಳ್ಳುತ್ತಾನೆ. ಇದರಿಂದ ಮಿ. ಪಾರ್ಕ್ ಮತ್ತು ಅವನ ತಂಡವು ಡೇ-ಸೂನ ಜೊತೆ ಸೇರಿದ್ದಾರೆಂದು ತೋರುತ್ತದೆ. ಡೇ-ಸೂ ಮೀಡೊಳನ್ನು ಮಿ. ಪಾರ್ಕ್‌ನ ಬಳಿ ಬಿಟ್ಟು ವೂ-ಜಿನ್‍ನನ್ನು ಎದುರಿಸಲು ಹೊರಡುತ್ತಾನೆ.

ವೂ-ಜಿನ್‍ನ ಬರಸಾತಿಯಲ್ಲಿ, ಮೀಡೊ ಡೇ-ಸೂನ ಮಗಳೆಂದು ವೂ-ಜಿನ್ ಬಹಿರಂಗಪಡಿಸುತ್ತಾನೆ. ಸಂಮೋಹನವನ್ನು ಬಳಸಿ ವೂ-ಜಿನ್ ಡೇ-ಸೂ ಸೂಶಿ ರೆಸ್ಟೊರೆಂಟ್‍ಗೆ ಹೋಗುವಂತೆ ಮಾಡಿದ್ದು, ವೂ-ಜಿನ್ ಅನುಭವಿಸಿದ್ದ ಅಗಮ್ಯ ಗಮನದ ನೋವನ್ನು ಡೇ-ಸೂ ಅನುಭವಿಸುವಂತೆ ಮಾಡಲು, ಅವರಿಬ್ಬರು ಭೇಟಿಯಾಗಿ ಒಬ್ಬರನ್ನೊಬ್ಬರು ಪ್ರೀತಿಸುವಂತೆ ಏರ್ಪಡಿಸಿದ್ದು ಎಲ್ಲವನ್ನು ಮಾಡಿರುತ್ತಾನೆ. ಡೇ-ಸೂ ವೂ-ಜಿನ್ ಮೇಲೆ ದಾಳಿಮಾಡಲು ಪ್ರಯತ್ನಿಸುತ್ತಾನೆ ಆದರೆ ವೂ-ಜಿನ್‍ನ ಅಂಗರಕ್ಷಕನು ಅವನಿಗೆ ಬಹಳವಾಗಿ ಹೊಡೆಯುತ್ತಾನೆ. ಕತ್ತರಿಯನ್ನು ಆಯುಧವನ್ನಾಗಿ ಬಳಸಿ, ಡೇ-ಸೂ ಅಂಗರಕ್ಷಕನಿಗೆ ಕಿವಿಗೆ ಚುಚ್ಚಿ ಕಿವುಡಾಗಿಸುವಲ್ಲಿ ಸಫಲನಾಗುತ್ತಾನೆ. ಈಗ ಗಂಭೀರವಾಗಿ ಗಾಯಗೊಂಡು ಸಿಟ್ಟುಗೊಂಡ ಕಿವುಡಾದ ಅಂಗರಕ್ಷಕನು ಡೇ-ಸೂನನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಅವನನ್ನು ತಡೆಯಲು ಸಾಧ್ಯವಾಗದೇ ವೂ-ಜಿನ್ ಮಧ್ಯ ಪ್ರವೇಶಿಸಿ ತನ್ನ ಅಂಗರಕ್ಷಕನಿಗೆ ಅನಾದರದಿಂದ ತಲೆಗೆ ಡೆರಿಂಗರ್ ಪಿಸ್ತೂಲಿನಿಂದ ಗುಂಡಿಕ್ಕುತ್ತಾನೆ. ಮಿ. ಪಾರ್ಕ್ ಈಗಲೂ ತನಗಾಗಿ ಕೆಲಸಮಾಡುತ್ತಿದ್ದಾನೆ ಮತ್ತು ಮಿ. ಪಾರ್ಕ್‌ಗೆ ಹೊಸದಾಗಿ ನವೀಕರಿಸಿದ ಸೆರೆಮನೆ ಕಟ್ಟಡವನ್ನು ಅವನು ತನ್ನ ಕೈಯನ್ನು ಕೊಯ್ದುಕೊಂಡಿದ್ದಕ್ಕೆ ಬದಲಾಗಿ ಮಾರಿದ್ದೇನೆ ಎಂದು ವೂ-ಜಿನ್ ಬಹಿರಂಗಪಡಿಸುತ್ತಾನೆ. ಮಿ. ಪಾರ್ಕ್‌ನ ಹೊಸ ಸೆರೆಮನೆಯಲ್ಲಿ ಕೂಡಿಹಾಕಲ್ಪಟ್ಟಿರುವ ಮೀಡೊಗೆ ಸತ್ಯವನ್ನು ಹೇಳುವುದಾಗಿ ವೂ-ಜಿನ್ ಬೆದರಿಸುತ್ತಾನೆ. ವೂ-ಜಿನ್‍ನ ಸೋದರಿಯ ಸಾವಿನಲ್ಲಿ ತಾನು ಒಳಗಾಗಿದ್ದಕ್ಕೆ ಡೇ-ಸೂ ಕ್ಷಮೆಯಾಚಿಸುತ್ತಾನೆ ಮತ್ತು ಮೀಡೊಗೆ ಹೇಳಬಾರದೆಂದು ವೂ-ಜಿನ್‍ನನ್ನು ಬೇಡಿಕೊಂಡು ನಾಯಿಯನ್ನು ಅನುಕರಿಸುವ ಮೂಲಕ ತನ್ನನ್ನು ತಾನು ಅವಮಾನಿಸಿಕೊಳ್ಳುತ್ತಾನೆ. ಪ್ರಭಾವಿತನಾಗದ ವೂ-ಜಿನ್ ನಕ್ಕಾಗ, ಪ್ರಾಯಶ್ಚಿತ್ತದ ಸಂಕೇತವಾಗಿ ಡೇ-ಸೂ ತನ್ನ ಸ್ವಂತ ನಾಲಿಗೆಯನ್ನು ಕತ್ತರಿಸಿಕೊಳ್ಳುತ್ತಾನೆ. ಅಂತಿಮವಾಗಿ ವೂ-ಜಿನ್ ಡೇ-ಸೂನ ಕ್ಷಮೆಯನ್ನು ಸ್ವೀಕರಿಸುತ್ತಾನೆ ಮತ್ತು ಮೀಡೊಳಿಂದ ಸತ್ಯವನ್ನು ಮುಚ್ಚಿಡಬೇಕೆಂದು ಮಿ. ಪಾರ್ಕ್‌ಗೆ ಹೇಳುತ್ತಾನೆ. ಲಿಫ಼್ಟನ್ನು ಪ್ರವೇಶಿಸಿದ ನಂತರ, ವೂ-ಜಿನ್ ತನ್ನ ಸೋದರಿಯ ಆತ್ಮಹತ್ಯೆಯನ್ನು ನೆನಪಿಸಿಕೊಂಡು ಡೆರಿಂಜರ್‌ನಿಂದ ತನ್ನ ತಲೆಗೆ ಗುಂಡು ಹೊಡೆದುಕೊಳ್ಳುತ್ತಾನೆ.

ಉಪಸಂಹಾರದಲ್ಲಿ, ಬಹಿರಂಗಪಡಿಸದ ಪ್ರಮಾಣದ ಸಮಯದ ನಂತರ, ತಾವಿಬ್ಬರು ಸಂತೋಷವಾಗಿ ಒಟ್ಟಾಗಿ ವಾಸಿಸುವಂತಾಗಲು, ಮೀಡೊ ತನ್ನ ಪುತ್ರಿಯಾಗಿದ್ದಾಳೆ ಎಂಬುದರ ಬಗ್ಗೆ ತನ್ನ ಜ್ಞಾನವನ್ನು ಅಳಿಸಲು ಡೇ-ಸೂ ಸಂಮೋಹಕನನ್ನು ಪತ್ತೆಹಚ್ಚುತ್ತಾನೆ. ಸಂಮೋಹಕನ ಮನವೊಲಿಸಲು, ಡೇ-ಸೂ ತಾನು ಮೇಲ್ಚಾವಣಿ ಮೇಲಿನ ವ್ಯಕ್ತಿಯಿಂದ ಕೇಳಿದ ಪ್ರಶ್ನೆಯನ್ನು ಮತ್ತೊಮ್ಮೆ ಕೇಳುತ್ತಾನೆ. ಹಾಗಾಗಿ ಅವಳು ಅವನ ನೆನಪುಗಳನ್ನು ಅಳಿಸಲು ಸಂಮೋಹನವನ್ನು ಆರಂಭಿಸುತ್ತಾಳೆ, ಮತ್ತು ಸತ್ಯ ತಿಳಿದಿರುವ ಡೇ-ಸೂ ದೂರ ಹೋಗುವನು ಎಂದು ಹೇಳುತ್ತಾಳೆ. ನಂತರ, ಡೇ-ಸೂ ಹಿಮದ ಮೇಲೆ ಮಲಗಿರುವುದನ್ನು ಕಾಣುತ್ತಾಳೆ ಮತ್ತು ಅವನಿಗಾಗಿ ತನ್ನ ಪ್ರೀತಿಯನ್ನು ಹೇಳಿಕೊಂಡು ಇಬ್ಬರೂ ತಬ್ಬಿಕೊಳ್ಳುತ್ತಾರೆ. ಸಂಮೋಹಕಿಯ ಯಾವುದೇ ಚಿಹ್ನೆಗಳಿರುವುದಿಲ್ಲ, ಹಾಗಾಗಿ ಡೇ-ಸೂ ನಿಜವಾಗಿಯೂ ಅವಳನ್ನು ಭೇಟಿಯಾಗಿದ್ದನೆ ಎಂಬುದು ಅಸ್ಪಷ್ಟವಾಗಿ ಉಳಿದುಬಿಡುತ್ತದೆ. ಡೇ-ಸೂ ಜೋರಾಗಿ ನಗಲು ಆರಂಭಿಸುತ್ತಾನೆ, ಮತ್ತು ಆಮೇಲೆ ನಿಧಾನವಾಗಿ ಮುಖದ ಮೇಲೆ ನೋವಿನ ನೋಟ ಕಾಣಿಸುತ್ತದೆ. ಸಂಮೋಹನವು ನಿಜವಾಗಿಯೂ ಕೆಲಸಮಾಡಿತೇ ಎಂಬುದು ಅಸ್ಪಷ್ಟವಾಗಿಯೇ ಉಳಿಯುತ್ತದೆ.

ಪಾತ್ರವರ್ಗ

[ಬದಲಾಯಿಸಿ]
ಚೂ ಮಿನ್-ಶಿ ಓಲ್ಡ್‌ಬಾಯ್‍ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದರು.
  • ಓ ಡೇ-ಸೂ ಆಗಿ ಚೂ ಮಿನ್-ಶಿ
    • ಯುವ ಓ ಡೇ ಸೂ ಆಗಿ ಓ ಟೇ ಕ್ಯುಂಗ್
  • ಲೀ ವೂ-ಜಿನ್ ಆಗಿ ಯೂ ಜೀ-ಟೇ
    • ಯುವ ವೂ-ಜಿನ್ ಆಗಿ ಯೂ ಯೂನ್-ಸಾ
  • ಮೀ-ಡೊ ಆಗಿ ಕಾಂಗ್ ಹ್ಯೇ-ಜುಂಗ್
  • ನೊ ಜೂ-ಹ್ವಾನ್ ಆಗಿ ಜೀ ಡೇ-ಹಾನ್
    • ಜೂ-ಹ್ವಾನ್ ಆಗಿ ವೂ ಇಲ್-ಹಾನ್
  • ಮಿ. ಹಾನ್ ಆಗಿ ಕಿಮ್ ಬ್ಯೋಂಗ್-ಓಕ್
  • ಲೀ ಸೂ-ಆ ಆಗಿ ಯೂನ್ ಜಿನ್-ಸ್ಯೂ
  • ಪಾರ್ಕ್ ಚ್ಯೋಲ್-ವೂಂಗ್ ಆಗಿ ಓ ಡಾಲ್-ಸೂ

ತಯಾರಿಕೆ

[ಬದಲಾಯಿಸಿ]

ಮೊಗಸಾಲೆ ಜಗಳಾಟದ ದೃಶ್ಯವನ್ನು ಪೂರ್ಣಗೊಳಿಸಲು ಮೂರು ದಿನಗಳಲ್ಲಿ ಹದಿನೇಳು ಸರಣಿ ಚಿತ್ರಣಗಳು ಬೇಕಾದವು ಮತ್ತು ಇದು ಒಂದು ನಿರಂತರ ಸರಣಿ ಚಿತ್ರಣವಾಗಿತ್ತು.

ಚಿತ್ರದ ಅಂತಿಮ ದೃಶ್ಯದ ಹಿಮಮಯ ಭೂದೃಶ್ಯವನ್ನು ನ್ಯೂ ಜೀಲ್ಯಾಂಡ್‌ನಲ್ಲಿ ಚಿತ್ರೀಕರಿಸಲಾಯಿತು.[] ಚಿತ್ರದ ಅಂತ್ಯವು ಉದ್ದೇಶಪೂರ್ವಕವಾಗಿ ಅಸ್ಪಷ್ಟವಾಗಿದೆ, ಮತ್ತು ಪ್ರೇಕ್ಷಕರ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಏಳುತ್ತವೆ.

ಬಾಕ್ಸ್ ಆಫ಼ಿಸ್ ಸಾಧನೆ

[ಬದಲಾಯಿಸಿ]

ದಕ್ಷಿಣ ಕೊರಿಯಾದಲ್ಲಿ, ಇದು ೨೦೦೩ರ ಐದನೇ ಹೆಚ್ಚು ಹಣ ಗಳಿಸಿದ ಚಲನಚಿತ್ರವಾಯಿತು.

ಇದು ವಿಶ್ವಾದ್ಯಂತ ಒಟ್ಟು US$14,980,005 ನಷ್ಟು ಹಣಗಳಿಸಿತು.

ಧ್ವನಿವಾಹಿನಿ

[ಬದಲಾಯಿಸಿ]

ಶಿಮ್ ಹ್ಯೆಯೋನ್-ಜೆಯೋಂಗ್, ಲೀ ಜೀ-ಸೂ ಹಾಗೂ ಚೊಯಿ ಸ್ಯೂಂಗ್-ಹ್ಯುನ್ ಸಂಯೋಜಿಸಿದ ಬಹುತೇಕ ಎಲ್ಲ ಸಂಗೀತ ಸಂಕೇತಗಳಿಗೆ ಚಲನಚಿತ್ರಗಳ ಹೆಸರನ್ನು ಪಡೆದಿವೆ, ಅನೇಕ ಚಲನಚಿತ್ರಗಳು ಫಿಲ್ಮ್ ನ್ವಾರ್‌ಗಳಾಗಿದ್ದವು.

ರೀಮೇಕ್‍ಗಳು

[ಬದಲಾಯಿಸಿ]

ಜ಼ಿಂದಾ ಬಗ್ಗೆ ಆದ ವಿವಾದ

[ಬದಲಾಯಿಸಿ]

ಲೇಖಕ-ನಿರ್ದೇಶಕ ಸಂಜಯ್ ಗುಪ್ತಾ ನಿರ್ದೇಶಿಸಿದ ಬಾಲಿವುಡ್ ಚಲನಚಿತ್ರ ಜ಼ಿಂದಾ ಕೂಡ ಓಲ್ಡ್‌ಬಾಯ್‌ನ್ನು ಗಮನಾರ್ಹವಾಗಿ ಹೋಲುತ್ತದೆ ಆದರೆ ಇದು ಅಧಿಕೃತವಾಗಿ ಮಂಜೂರಾದ ರೀಮೇಕ್ ಅಲ್ಲ. ಜ಼ಿಂದಾ ಕೃತಿಸ್ವಾಮ್ಯದ ಉಲ್ಲಂಘನೆಗಾಗಿ ತನಿಖೆಗೆ ಒಳಪಟ್ಟಿದೆ ಎಂದು ೨೦೦೫ರಲ್ಲಿ ವರದಿಯಾಗಿತ್ತು.

ಅಮೇರಿಕನ್ ರೀಮೇಕ್ ಚಲನಚಿತ್ರ

[ಬದಲಾಯಿಸಿ]

ಮೊದಲು ೨೦೦೮ರಲ್ಲಿ, ಸ್ಟೀವನ್ ಸ್ಪೀಲ್ಬರ್ಗ್ ವಿಲ್ ಸ್ಮಿತ್ ನಟನೆಯ ಈ ಚಲನಚಿತ್ರದ ರೂಪಾಂತರವನ್ನು ತಯಾರಿಸಲು ಉದ್ದೇಶಿಸಿದ್ದರು. ಸ್ಪೀಲ್‍ಬರ್ಗ್ ೨೦೦೯ರಲ್ಲಿ ಯೋಜನೆಯಿಂದ ಹಿಂದೆಸರಿದರು.[]

ಸ್ಪೈಕ್ ಲೀ ನಿರ್ದೇಶಿಸಿದ ಅಮೇರಿಕನ್ ರೀಮೇಕ್‍ನ್ನು ೨೭ ನವೆಂಬರ್ ೨೦೧೩ರಂದು ಬಿಡುಗಡೆಗೊಳಿಸಲಾಯಿತು.[]

ಉಲ್ಲೇಖಗಳು

[ಬದಲಾಯಿಸಿ]
  1. "Oldboy". British Board of Film Classification. Archived from the original on 31 ಜನವರಿ 2020. Retrieved 26 March 2018.
  2. "Oldboy (2003) - Financial Information". The Numbers. Retrieved 16 February 2019.
  3. "Oldboy (2005)". Box Office Mojo. Retrieved 20 May 2008.
  4. "OLDBOY (2003)". British Board of Film Classification. Archived from the original on 2020-04-03. Retrieved 2020-01-31.
  5. "From Mind-Numbing Thrillers To Refreshing Rom-Coms, 15 Korean Movies You Need To Watch ASAP!". Indiatimes.
  6. Baillie, Russell (9 April 2005). "Oldboy". The New Zealand Herald. Retrieved 24 February 2017.
  7. Kate Aurthur (30 November 2013). "Adapting "Oldboy": Its Screenwriter Talks About Twists And Spoilers". Buzzfeed.com. Retrieved 25 August 2014.
  8. "Spike Lee Confirmed to Direct 'Oldboy'". /Film. 11 July 2011.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]