ಒಸಡಿನ ರೋಗಗಳು
ಒಸಡಿನ ರೋಗಗಳು : ನಡು ವಯಸ್ಸು ದಾಟಿದ ಮೇಲೆ ಹಲ್ಲು ಬೀಳಲು ಬಹುಮುಖ್ಯ ಕಾರಣ ಒಸಡಿನ ರೋಗಗಳು (ಪೆರಿಡಾಂಟಲ್ ಡಿಸೀಸಸ್[೧]). ಈ ರೋಗಗಳು ಮೊದಲು ಒಸಡಿನಲ್ಲಿ ಆರಂಭವಾಗಿ ಕ್ರಮೇಣ ಹಲ್ಲುಗಳಿಗೆ ಆಧಾರ ನೀಡುವ ಸುತ್ತಲಿನ ಅಂಗ ಭಾಗಗಳಿಗೆ ಅಂದರೆ ಹಲ್ಲು ಮತ್ತು ದವಡೆಯೊಳಗೆ ಸಂಬಂಧ ಕಲ್ಪಿಸುವ ದಂತಕೋಶದ ಎಳೆಗಳು, ಹಲ್ಲುಗಳನ್ನು ಹಿಡಿದಿಡುವ ಬಾಯಿ ಮೂಳೆಗಳು ಮತ್ತು ಹಲ್ಲಿನ ಬೇರನ್ನು ಮುಚ್ಚುವ ಸಿಮೆಂಟಿನಂಥ ವಸ್ತುಗಳಿಗೆ ಹರಡುತ್ತವೆ.
ಹಂತ
[ಬದಲಾಯಿಸಿ]ಒಸಡಿನ ರೋಗಗಳು ಅತಿ ಪ್ರಾಚೀನವೆನ್ನಲು ನಿದರ್ಶನಗಳಿವೆ. ಇವುಗಳ ಬೆಳೆವಣಿಗೆ ಸಾಮಾನ್ಯವಾಗಿ ಎರಡು ಹಂತಗಳಲ್ಲಿ ಇದೆ. ಒಸಡಿನ ಉರಿತ ಮೊದಲು ಪ್ರಾರಂಭವಾಗಿ ಅದು ಉಬ್ಬಿ ಕೀವುಗಟ್ಟುತ್ತದೆ. ಅನಂತರ ಹಲ್ಲಿಗೆ ಆಧಾರ ನೀಡುವ ಅಂಗ ಭಾಗಗಳಿಗೆ ರೋಗ ಹರಡುತ್ತದೆ. ಒಸಡಿನ ಉರಿತಕ್ಕೆ ಬಾಯಿಯ ಸ್ಥಿತಿಗತಿಗಳೇ ಕಾರಣ, ಯಾಂತ್ರಿಕ ನ್ಯೂನತೆ, ಉಷ್ಣತೆಯ ಪ್ರಭಾವ, ರಾಸಾಯನಿಕ ಪದಾರ್ಥಗಳು, ಜೀವಾಣುಗಳು ಮತ್ತು ಶಿಲೀಂಧ್ರಗಳ ಕಾರ್ಯ ಚಟುವಟಿಕೆ ಮತ್ತು ಒಗ್ಗದಿರುವಿಕೆಯ ವಸ್ತುಗಳ ಸೇವನೆಯ ಫಲವಾಗಿ ರೋಗ ಬರಬಹುದು. ಜೊಲ್ಲಿನಲ್ಲಿನ ಖನಿಜ ಪದಾರ್ಥಗಳು ಮತ್ತು ಬಾಯಲ್ಲಿನ ಅಣುಜೀವಿಗಳು ಸೇರ್ಪಡೆಗೊಂಡು ದಪ್ಪನಾಗಿ, ಒರಟಾಗಿ ಪಕಳೆಯಂತೆ ಹಲ್ಲಿನ ಮೇಲೆ ಭದ್ರವಾಗಿ ನೆಲೆಯೂರಬಲ್ಲುವು. ಈ ಪಕಳೆ ಅಥವಾ ಹಲ್ಲುಗಾರೆ ಒಸಡಿನಿಂದ ಆವೃತವಾದ ಹಲ್ಲಿನ ಬೇರಿನವರೆಗೂ ಹರಡುತ್ತದೆ. ಇದು ಒಸಡಿನ ಉರಿತವನ್ನುಂಟು ಮಾಡುತ್ತದೆ. ಒಮ್ಮೆ ಪ್ರಾರಂಭವಾಗಿ ಹಲ್ಲಿನ ಮೇಲೆ ನೆಲೆಯೂರಿದ ಹಲ್ಲುಗಾರೆಯನ್ನು ದಂತ ಮಂಜನದಿಂದ ತೆಗೆಯಲು ಸಾಧ್ಯವಿಲ್ಲ. ದಂತ ಶಸ್ತ್ರದ ಉಪಯೋಗದಿಂದ ಮಾತ್ರ ಅದನ್ನು ತೆಗೆಯಬಹುದು. ಸವಕಳಿಗೊಂಡ ಹಲ್ಲುಗಳು, ತುಂಬಿದ ಹಲ್ಲುಗಳು, ಕೊಳೆತ ಹಲ್ಲಿನೊಳಗಿನ ಪೊಳ್ಳಿನ ಚೂಪಾದ ಭಾಗಗಳು, ಬಾಯಿ ಮುಚ್ಚಿದಾಗ ಒಂದಕ್ಕೊಂದು ಸೇರಿಕೊಳ್ಳದ ಹಲ್ಲುಗಳು, ಜಗಿಯುವಾಗ ಹಲ್ಲು ಮತ್ತು ಒಸಡಿನ ಸಂದಿನಲ್ಲಿ ಸಿಕ್ಕಿಹಾಕಿಕೊಳ್ಳುವ ಆಹಾರ ಮತ್ತು ಆಗಾಗ್ಗೆ ಹಲ್ಲಿನ ಮೇಲೆ ಬೀಳುವ ಪೆಟ್ಟಿನ ಪ್ರಭಾವ-ಇವೆಲ್ಲ ಒತ್ತಡಗಳಿಗೆ ಒಳಗಾಗುವ ಒಸಡಿನ ಮೃದುಭಾಗಗಳ ಉರಿತಕ್ಕೆ ಕಾರಣವಾಗಿ ಕ್ರಮೇಣ ಒಸಡಿನ ರೋಗವನ್ನುಂಟು ಮಾಡುತ್ತವೆ. ನ್ಯೂನ ಆಹಾರ ಸೇವನೆ, ತನ್ಮೂಲಕ ಉಂಟಾದ ರೋಗನಿರೋಧ ಶಕ್ತಿಯ ಕುಂದುವಿಕೆಗಳು ರೋಗದ ಬೆಳೆವಣಿಗೆಗೆ ಚಾಲನೆಯನ್ನುಂಟು ಮಾಡುತ್ತವೆ. ಈ ರೋಗಗಳಿಂದ ನರಳುವವರು ಸಹಜವಾಗಿ ಮೆತ್ತನೆಯ ಆಹಾರವನ್ನು ಆಯ್ದುಕೊಳ್ಳುತ್ತಾರೆ. ಅದು ಸವಕಳಿಗೆ ಮತ್ತಷ್ಟು ಉತ್ತೇಜನ ಕೊಡುತ್ತದೆ. ಬಾಯಿಯಿಂದ ಉಸಿರಾಟ ಮಾಡುವವರಲ್ಲಿ ಒಸಡು ಒಣಗುತ್ತದೆ. ಗರ್ಭಿಣಿಯರಲ್ಲಿ, ಆಹಾರದಲ್ಲಿನ ಸಿ ಜೀವಾತುವಿನ ಕೊರತೆಯಿಂದಾಗಿ, ರಕ್ತಗಂತಿಯಾದಾಗ ಮತ್ತು ಡೈಲಾಂಟಿನ್ ಔಷಧಿಯ ಸೇವನೆಯ ಫಲವಾಗಿ ಒಸಡಿನ ಉರಿತ ತೋರಿಬರಬಹುದಾಗಿದೆ.
ಒಸಡುಗಳು ಕೆಂಪಗೆ ಸ್ಪಂಜಿನಂತೆ ಉಬ್ಬಿ ಹಲ್ಲುಗಳನ್ನು ಮುಚ್ಚುವಷ್ಟು ಜೋರಾಗಿ ಬೆಳೆಯುತ್ತವೆ. ಹಲ್ಲುಜ್ಜಿದಾಗ ರಕ್ತ ಸುರಿಯುತ್ತದಲ್ಲದೆ, ಅನೇಕ ಬಾರಿ ಅವನ್ನು ಮುಟ್ಟಿದರೇ ರಕ್ತ ಒಸರುತ್ತದೆ. ಆದರೂ ಪ್ರಾರಂಭದಲ್ಲಿ ಅದು ಅಷ್ಟೊಂದು ತೊಂದರೆ ಕೊಡದು. ಆದ್ದರಿಂದ ಅನೇಕರು ಅದನ್ನು ಉಪೇಕ್ಷಿಸಿ ಬಿಡುತ್ತಾರೆ. ಆಗಾಗ್ಗೆ ಒಸಡು ದಪ್ಪನಾಗಿ, ರೋಗಾಣು ಜೀವಿಗಳ ಬೆಳೆವಣಿಗೆಯ ಫಲವಾಗಿ ನೋವು ತೋರಿಬರಬಹುದು. ಇನ್ನು ಕೆಲವು ವೇಳೆ ಅಷ್ಟೊಂದು ತೀವ್ರತರವಲ್ಲದ ನೋವು ಆಹಾರವನ್ನು ಜಗಿಯುವಾಗ ಮತ್ತು ಅನಂತರ ತೋರಿಬರಬಹುದು. ರೋಗ ಒಳಗೇ ಬೆಳೆದು ಮುಂದೆ ಚಿಕಿತ್ಸೆಗೇ ಆತಂಕವನ್ನುಂಟು ಮಾಡಬಹುದು. ದಿನೇ ದಿನೇ ಒಸಡಿನ ಉರಿತ ಹಲ್ಲಿನ ಬೇರಿನತ್ತ ಸಾಗಿಹೋಗುತ್ತದೆ. ಹಲ್ಲುಗಳು ಒಸಡಿನಿಂದ ಬೇರ್ಪಡೆಗೊಳ್ಳುತ್ತ ಅಲ್ಲಿ ಚಿಕ್ಕ ಚಿಕ್ಕ ಕೋಶಗಳು ರೂಪುಗೊಳ್ಳುತ್ತವೆ. ಆಹಾರದ ಚೂರುಗಳು, ಅಣುಜೀವಿಗಳು, ರೋಗಾಣುಜೀವಿಗಳು ಮತ್ತು ಕೆಲವು ಬಾರಿ ಕೀವು ಆ ಪ್ರದೇಶವನ್ನು ತುಂಬಿಕೊಳ್ಳುತ್ತವೆ. ರೋಗ ಬಲಿತಂತೆ, ದಂತಕೋಶದ ಎಳೆಗಳು ಸವಕಳಿಗೊಳ್ಳುವುದಲ್ಲದೆ, ಹಲ್ಲುಗಳಿಗೆ ಆಧಾರವನ್ನೊದಗಿಸಿದ ಮೂಳೆಗಳ ಅನುವಳಿಕೆಯುಂಟಾಗುತ್ತದೆ. ಹಲ್ಲುಬೇರಿನ ಕುಳಿಗಳು ಸವೆದು ಹೋಗುತ್ತವೆ; ಸಿಮೆಂಟು ಬೇರ್ಪಡೆಗೊಂಡು ಆಧಾರ ಸಡಿಲಗೊಳ್ಳುತ್ತದೆ. ರೋಗಿಷ್ಟ ಹಲ್ಲುಗಳು ಅಲುಗಾಡುತ್ತ ಕ್ರಮೇಣ ಬಿದ್ದುಹೋಗುತ್ತವೆ. ಈ ರೋಗ ಒಂದೇ ಹಲ್ಲಿನ ಇಲ್ಲವೇ ಅನೇಕ ಅಥವಾ ಎಲ್ಲ ಹಲ್ಲುಗಳ ಒಸಡಿನ ಪ್ರದೇಶವನ್ನು ಒಳಗೊಳ್ಳಬಹುದು.
ಚಿಕ್ಕ ವಯಸ್ಸಿನಲ್ಲಿ ಹಲ್ಲಿನ ಬಗ್ಗೆ ಯಾವ ಕಾಳಜಿಯನ್ನೂ ವಹಿಸದೆ, ಉಪೇಕ್ಷೆ ಮಾಡುವವರಲ್ಲಿ ಈ ರೋಗಗಳು ಹೆಚ್ಚಾಗಿ ತೋರಿಬರುತ್ತವೆ. ಒಸಡಿನ ಉರಿತಕ್ಕೆ ಚಿಕಿತ್ಸೆ ನೀಡದಿದ್ದರೆ ಅದು ಬೆಳೆದು ರೋಗವಾಗಿ ಪರಿಣಮಿಸುವುದು. ಹಲ್ಲುಗಳನ್ನು ಉಜ್ಜಿ ಚೊಕ್ಕಟವಾಗಿಟ್ಟುಕೊಳ್ಳುವಲ್ಲಿ ಶ್ರದ್ಧೆ ವಹಿಸಬೇಕು. ಆಹಾರಾಂಶಗಳು ಹಲ್ಲಿನ ಸಂದುಗೊಂದುಗಳಲ್ಲಿ ಸೇರ್ಪಡೆಗೊಳ್ಳದಂತೆ ಊಟ ಆದ ಮೇಲೆ ನೀರಿನಿಂದ ಬಾಯನ್ನು ಚೆನ್ನಾಗಿ ಮುಕ್ಕಳಿಸಿ ತೊಳೆಯಬೇಕು, ಇಲ್ಲವೆ ಹಲ್ಲುಜ್ಜಬೇಕು. ಹಲ್ಲುಗಾರೆ ಸೇರ್ಪಡೆಗೊಳ್ಳದಂತೆ ಅದನ್ನು ತೆಗೆಸಿಕೊಳ್ಳಬೇಕು. ಸಮತೋಲ ಆಹಾರ ಮತ್ತು ಬಿರುಸಾದ ಆಹಾರ ಸೇವನೆಯಿಂದ ಒಸಡುಗಳ ಭದ್ರತೆ ಹೆಚ್ಚುತ್ತದೆ. ಒಸಡಿನಿಂದ ರಕ್ತ ಸೋರಿಕೆ, ಬಾಯ ದುರ್ವಾಸನೆ, ಒಸಡಿನಿಂದ ಹಲ್ಲುಗಳ ಬೇರ್ಪಡಿಕೆ ಮತ್ತು ಅವುಗಳ ಅಲುಗಾಟ ತೋರಿಬಂದಾಗ ದಂತವೈದ್ಯರಿಂದ ಯೋಗ್ಯ ಚಿಕಿತ್ಸೆ ಪಡೆಯಬೇಕು. (ಪಿ.ಎಸ್.ಎಸ್.)