ವಿಷಯಕ್ಕೆ ಹೋಗು

ಒಡೆಯರ ಕಾಲದ ಕನ್ನಡ ಸಾಹಿತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಡೆಯರ ಕಾಲದ ಕನ್ನಡ ಸಾಹಿತ್ಯ ಅರ್ಥಾತ್ ಮೈಸೂರು ಸಂಸ್ಥಾನದ ಮಹಾರಾಜರುಗಳಾದ ಒಡೆಯರ್ ವಂಶಸ್ಥ ಅರಸರ ಸಮಯದಲ್ಲಿ, ಕನ್ನ್ನಡ ಸಾಹಿತ್ಯದ ಘಟ್ಟವು ಪ್ರಮುಖವಾದುದು. ೪೦೦ ವರ್ಷಗಳಷ್ಟು ದೀರ್ಘ ಕಾಲ ಆಳಿದ ಮೈಸೂರು ಅರಸರು, ಕನ್ನಡ ಸಾಹಿತ್ಯವನ್ನು ಬಹುವಾಗಿ ಪೋಷಿಸಿದರು.[]

ಕಾಲಘಟ್ಟ

[ಬದಲಾಯಿಸಿ]

ಒಂದನೆಯ ರಾಜ ಒಡೆಯರು ವಿಜಯನಗರ ಸಾಮ್ರಾಜ್ಯದ ಪರಮಾಧಿಕಾರವನ್ನು ಅಲ್ಲಗಳೆದು ಸ್ವತಂತ್ರವಾದಾಗಿನಿಂದ (೧೫೫೨ರಿಂದ) ಮೈಸೂರು ಒಡೆಯರ ಕಾಲ ಆರಂಭವಾಯಿತು.. ಅಲ್ಲಿಂದ ಮೊದಲುಗೊಂಡು ಜಯಚಾಮರಾಜ ಒಡೆಯರ್ ಕಾಲದವರೆಗೂ ಕನ್ನಡ ಸಾಹಿತ್ಯದ ಸರ್ವತೋಮುಖವಾದ ಅಭಿವೃದ್ದಿಗೆ ರಾಜಮಹಾರಾಜರಿಂದ ದೊರೆತ ಪ್ರೋತ್ಸಾಹದ ಅದ್ವಿತೀಯವಾದುದು. [][] ಹಲವು ಕವಿಗಳ ಕಾವ್ಯಗಳೇ ರಾಜರುಗಳ ಐತಿಹ್ಯಕ್ಕೆ ಸಾಕ್ಷಿಯನ್ನು ಒದಗಿಸಿರುವುದು, ಒಡೆಯರ ಕಾಲದ ಕನ್ನಡ ಸಾಹಿತ್ಯ ವೈಶಿಷ್ಟ್ಯ.

ರಾಜ ಒಡೆಯರು

[ಬದಲಾಯಿಸಿ]

ಚಿಕ್ಕದೇವರಾಯನ ವಂಶಾವಳಿ ರಾಜನೃಪಚರಿತ್ರೆಯಿಂದಲೇ ಆರಂಭವಾಗಿದೆ. ಈ ದೊರೆ ಶ್ರೀವೈಷ್ಣವ ಧರ್ಮವನ್ನು ಸ್ವೀಕರಿಸಿದ. ಈತನ ಪ್ರಧಾನಮಂತ್ರಿ ಯಾಗಿದ್ದ 'ತಿರುಮಲಾರ್ಯ'ನೆಂಬ ಶ್ರೀವೈಷ್ಣವ ಕವಿ "ಕರ್ಣವೃತ್ತಾಂತಕಥೆ "ಎಂಬ ಸಾಂಗತ್ಯಕಾವ್ಯವನ್ನು ರಚಿಸಿದ್ದಾನೆ. ಇದು ಅಪೂರ್ವವಾದ ಕಾವ್ಯ. ಈಗ ದೊರೆತಿರುವ ಗ್ರಂಥದಲ್ಲಿ ಹನ್ನೊಂದು ಸಂಧಿಗಳೂ ಹನ್ನೆರಡನೆಯದರಲ್ಲಿ ಕೆಲವು ಪದ್ಯಗಳೂ ಇವೆ. ಮಹಾಭಾರತಶಾಂತಿಪರ್ವದಲ್ಲಿ ಬಂದಿರುವ ಕರ್ಣನ ಚರಿತ್ರೆಯೇ ಈ ಗ್ರಂಥದ ವಸ್ತು.

ಆರನೆ ಚಾಮರಾಜ ಒಡೆಯರು

[ಬದಲಾಯಿಸಿ]

ರಾಜ ಒಡೆಯನ ತರುವಾಯ ಪಟ್ಟಕ್ಕೆ ಬಂದ ಆರನೆ ಚಾಮರಾಜ ಒಡೆಯರ್ ಚಾಮರಾಜೋಕ್ತಿವಿಲಾಸ" ಎಂಬ ಹೆಸರಿನಲ್ಲಿ ವಾಲ್ಮೀಕಿ ರಾಮಾಯಣವನ್ನು ಸರಳಗನ್ನಡ ಗದ್ಯಕಾವ್ಯವಾಗಿ ಬರೆದಿದ್ದಾನೆ. ಇದು ಮೂಲ ಗ್ರಂಥಕ್ಕೆ ಅನುಸಾರವಾದ ಗದ್ಯಾನುವಾದ. ಈ ಗ್ರಂಥವನ್ನು ಲೋಕೋಪಕಾರಕ್ಕಾಗಿ ಧೀಮಂತ ವಿದ್ವಾಂಸನಾದ ವಿರೂಪಾಕ್ಷನಿಂದ ಅರಸ ಬರೆಯಿಸಿದನೆಂಬ ಅರ್ಥಬರುವ ಒಂದು ಸಂಸ್ಕೃತ ಶ್ಲೋಕ ಗ್ರಂಥದ ಆರಂಭದಲ್ಲಿಯೇ ಬಂದಿದೆ. ಆದ್ದರಿಂದ ಇದು ಅರಸನ ಹೆಸರಿನಲ್ಲಿ ಅವನ ಆಶ್ರಿತನಾದ ವಿದ್ವಾಂಸನೊಬ್ಬ ಬರೆದದ್ದಾಗಿರಬಹುದೆಂದು ತೋರುತ್ತದೆ. ಚಾಮರಾಜ ಮಗೆಪ್ರಕಾಶವೆಂಬ ಇನ್ನೊಂದು ಗ್ರಂಥವನ್ನೂ ರಚಿಸಿರುವನೆಂಬ ಪ್ರತೀತಿ ಇದೆ. ಆದರೆ ಅದು ಬ್ರಹ್ಮೋತ್ತರಖಂಡದ ಕನ್ನಡ ಟೀಕೆಯೇ ಹೊರತು ಕಾವ್ಯವಲ್ಲ. ಈ ಎರಡು ಕೃತಿಗಳೂ ಆ ಕಾಲಕ್ಕೆ ರಾಜ ಮತ್ತು ಪ್ರಜೆಗಳಿಬ್ಬರಿಗೂ ಸಂಸ್ಕೃತದಲ್ಲಿದ್ದ ವೈದಿಕ ಸಾಹಿತ್ಯವನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಕನ್ನಡದಲ್ಲಿ ಬರೆಯುವ, ಬರೆಯಿಸುವ ಶ್ರದ್ದೆ ಹೆಚ್ಚಿದ್ದಿತೆಂಬುದನ್ನು ಸ್ಪಷ್ಟಪಡಿಸುತ್ತವೆ. ಈ ರಾಜನ ಆಶ್ರಯದಲ್ಲಿದ್ದ ರಾಮಚಂದ್ರನೆಂಬ ವಿದ್ವಾಂಸ ಒಂದು "ಅಶ್ವಶಾಸ್ತ್ರ"ವನ್ನು ರಚಿಸಿದ್ದಾನೆ. ಶಾಲಿಹೋತ್ರಕೃತವಾದ ಸಂಸ್ಕೃತ ಗ್ರಂಥವನ್ನು ಬಾಲಕರಿರುವಂತೆ ಸಾಮಗೋಪಾಂಗವಾಗಿ ಕನ್ನಡಿಸಿ ಬರೆದ ಅನುವಾದವಿದು. ಪದ್ಮಣಪಂಡಿತ ಈ ರಾಜನ ಆಣತಿಯಂತೆ "ಹಯಸಾರಸಮುಚ್ಚಯ" ಎಂಬ ಪದ್ಯಗ್ರಂಥವನ್ನು ರಚಿಸಿದ್ದಾನೆ. ತಾನು ವಿದ್ವಜ್ಜನಮಂಡನನೆಂದೂ ವೈದ್ಯಸುವಂಶಾಂಬರ ಸೂರ್ಯನೆಂದೂ ಕವಿ ಹೊಗಳಿಕೊಂಡಿದ್ದಾನೆ.[]

ರಣಧೀರ ಕಂಠೀರವ ಅಥವಾ ಕಂಠೀರವ ನರಸರಾಜ ಒಡೆಯರು

[ಬದಲಾಯಿಸಿ]

ಚಾಮರಾಜನ ಅನಂತರ ಪ್ರಭುಪಟ್ಟಕ್ಕೆ ಬಂದ ಕಂಠೀರವ ನರಸರಾಜ I ಒಡೆಯ ಮೈಸೂರಿನ ರಾಜ್ಯವನ್ನು ವಿಸ್ತರಿಸಿ ಅಂತ್ಯಶ್ಶತ್ರುಗಳನ್ನೂ ಅಡಗಿಸಿ ಮೈಸೂರು ರಾಜ್ಯದ ಅಭ್ಯುದಯವನ್ನು ಸಾಧಿಸಿದ.ಒಡೆಯರ್ ರಾಜಮನೆತನವು ಹಲವು ಬಾರಿ ದತ್ತು ಮಕ್ಕಳನ್ನು ಸ್ವೀಕರಿಸಿದೆ. ಇದರಲ್ಲಿ ಮೊದಲ ಅರಸು ರಣಧೀರ ಕಂಠೀರವ ಎಂದೇ ಖ್ಯಾತಿ ಪಡೆದ ಕಂಠೀರವ ನರಸರಾಜ ಒಡೆಯರ್. ಈತನ ಆಸ್ಥಾನಕವಿಯಾದ ಗೋವಿಂದ ವೈದ್ಯ "ಕಂಠೀರವನರಸರಾಜವಿಜಯಂ" ಎಂಬ ವಿಸ್ತಾರವಾದ ಒಂದು ಸಾಂಗತ್ಯಗ್ರಂಥವನ್ನು ರಚಿಸಿದ್ದಾನೆ. ಇದರಲ್ಲಿ ತನ್ನ ಅರಸನ ಯುದ್ಧವಿಜಯಗಳನ್ನು ಹೊಗಳಿದ್ದಾನೆ. ರಣದುಲ್ಲಾಖಾನನೆಂಬ ಬಿಜಾಪುರದ ಮುಸಲ್ಮಾನ ಸರದಾರನ ಮೇಲೆ ಕಂಠೀರವ ನರಸರಾಜ ಗಳಿಸಿದ ಯುದ್ಧವಿಜಯ ಇಲ್ಲಿ ಪ್ರಧಾನವಾಗಿದೆ. ಇಪ್ಪತ್ತಾರು ಸಂಧಿಗಳುಳ್ಳ ಈ ಗ್ರಂಥದಲ್ಲಿ ರಾಜನ ವಂಶವರ್ಣನೆಯಿಂದ ತೊಡಗಿ ಅವನು ನಡೆಸಿದ ದಿಗ್ವಾಜಯ ಕಥೆಗಳನ್ನೆಲ್ಲ ವಿವರವಾಗಿ ನಿರೂಪಿಸಲಾಗಿದೆ. ಅನುಷಂಗಿಕವಾಗಿ ಶ್ರೀರಂಗಪಟ್ಟಣದ ವರ್ಣನೆ, ರಂಗನಾಥಸ್ವಾಮಿಯ ಮಹಿಮಾ ವರ್ಣನೆ, ಸ್ವಾಮಿಯ ರಥೋತ್ಸವ ವರ್ಣನೆ, ರಾಜಸಭೆಯ ವರ್ಣನೆ, ಜಂಬೂ ಸವಾರಿಯ ವರ್ಣನೆ-ಮೊದಲಾದ ಹಲವು ಸ್ವಾರಸ್ಯವಾದ ವರ್ಣನಾಭಾಗಗಳು ಈ ಕಾವ್ಯಕ್ಕೆ ಮೆರುಗನ್ನು ಕೊಟ್ಟಿವೆ. ಮುಖ್ಯಕಥೆಗೆ ಸಂಬಂಧಿಸಿದ ಮದನಮೋಹಿನಿಯ ಕಥೆ ಶೃಂಗಾರಭರಿತವಾಗಿದ್ದು ಓದುಗರಿಗೆ ಆಕರ್ಷಕವೆನಿಸಿದರೂ ಗ್ರಂಥದ ಮೂಲ ವಸ್ತುವಿನ ಏಕತೆಗೆ ಭಂಗ ತಂದಿದೆ. ಆದರೆ ತನ್ನ ಕಾವ್ಯದಲ್ಲಿ ಶೃಂಗಾರರಸ ನಿರೂಪಣೆಗೆ ಒಂದು ಅವಕಾಶ ಕಲ್ಪಿಸಿಕೊಳ್ಳುವ ಹವಣಿಕೆ ಕವಿಯದು.

ದೇವತಾಸ್ತುತಿಯಲ್ಲ ಕೇಳ್ವೊಡೆ, ನರಸ್ತುತಿ ಯಾವ ವೆಗ್ಗಳವೆನಬೇಡ ನಾವಿಷ್ಣುಃ ಪೃಥಿವೀಪತಿಯೆಂದು ವೇ ದಾವಳಿಗಳು ಸಾರುತಿವೆ ಕೊ

ಎಂದು ಹೇಳಿ ಮಾನವ ಚರಿತ್ರೆಯನ್ನು ಬರೆಯಹೊರಟುದರ ಔಚಿತ್ಯವನ್ನು ಕವಿ ಸಮರ್ಥಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಇದು ಅಂದಿನ ನರಸಿಂಹಸ್ವಾಮಿ ಕಲಿಯುಗದ ಮನುಜರನ್ನು ಸಂಹರಿಸುವ ಸಲುವಾಗಿ ನರಜನ್ಮದಲ್ಲಿ ಬಂದು ಕಂಠೀರವ ನರಸರಾಜನಾದನಂತೆ. ನರಸಿಂಹಸ್ವಾಮಿ ಅವತರಿಸಿದ ತಿಂಗಳು, ತಿಥಿವಾರ ಮುಹೂರ್ತಗಳಲ್ಲಿಯೇ ಈ ದೊರೆ ಹುಟ್ಟಿದನೆಂದು ಹೇಳಿ ತನ್ನ ಅರಸ ನರಸಿಂಹನ ಅವತಾರವೇ ಆಗಿರಬೇಕೆಂದು ಕವಿ ಸ್ವಾರಸ್ಯವಾಗಿ ತರ್ಕಿಸುತ್ತಾನೆ.

ಈ ಕೃತಿಯನ್ನು ರಚಿಸಿದ ಗೋವಿಂದವೈದ್ಯ ಶ್ರೀನಿವಾಸಪಂಡಿತನ ಮಗ. ವೇದಾಧ್ಯಯನಸಂಪನ್ನನೂ ಮಂತ್ರಶಾಸ್ತ್ರವೇತ್ತನೂ ಆದ ಗೋವಿಂದವೈದ್ಯ ಕಾವ್ಯ ನಾಟಕಾಲಂಕಾರಗಳನ್ನೂ ಚೆನ್ನಾಗಿ ಅಭ್ಯಾಸಮಾಡಿದ್ದ. ಇವನ ಹೆಸರಿನಲ್ಲಿಯೇ ವೈದ್ಯಶಬ್ದ ಸೇರಿಕೊಂಡಿದೆ. ಈತನ ತಂದೆಯೂ ಪಂಡಿತ. ಬಹುಶಃ ಇವರು ವೈದ್ಯವೃತ್ತಿಯವರೂ ಆಗಿರಬಹುದು. ಅರಸನ ದಳವಾಯಿಯಾದ ನಂಜರಾಜೇಂದ್ರನ ಪ್ರೇರಣೆಯಂತೆ ಈ ಕಾವ್ಯವನ್ನು ರಚಿಸಿದುದಾಗಿ ಕವಿ ಪೀಠಿಕಾಸಂಧಿಯ ಕೊನೆಯಲ್ಲಿ ಹೇಳಿಕೊಂಡಿದ್ದಾನೆ.

ಗೋವಿಂದವೈದ್ಯ ತನ್ನ ಅರಸನ ಈ ಪುಣ್ಯಚರಿತ್ರೆಯನ್ನು ಬರೆದು ಭಾರತಿನಂಜ ಎಂಬ ಗಮಕಿಯಿಂದ ರಾಜಸಭೆಯಲ್ಲಿ ಓದಿಸಿದ. ಪೀಠಿಕಾಸಂಧಿಯಲ್ಲಿ ದೊರೆರಾಯ ನರಸರಾಜೇಂದ್ರನ ಚರಿತೆಯ ನೊರೆದ ಭಾರತಿ ನಂಜನೊಲಿದು ಎಂಬ ಹೇಳಿಕೆ ಇರುವುದರಿಂದ ಈ ಕೃತಿಯನ್ನು ಭಾರತಿನಂಜನೇ ರಚಿಸಿದನೆಂಬ ಭಾವನೆ ಬರಲು ಕಾರಣವಾಯಿತು. ಆದರೆ ಗ್ರಂಥಾಂತ್ಯದ ಗದ್ಯದಲ್ಲಿ ಗೋವಿಂದವೈದ್ಯ ಕಂಠೀರವನರಸರಾಜವಿಜಯವನ್ನು ವಿರಚಿಸಿ ಆಚಂದ್ರಾರ್ಕವಾಗಿ ಭೂಮಿಯೊಳಿರಲಿಯೆಂದು ಭಾರತಿನಂಜನ ಮುಖದಿಂದ ವಾಚಿಸಿ ರಾಜಾಸ್ಥಾನದಲ್ಲಿ ವಿಸ್ತಾರ ಪಡಿಸಿದುದು ಎಂಬ ಸ್ಪಷ್ಟವಾದ ಹೇಳಿಕೆಯಿದೆ.

ಪಂಪರನ್ನರು ಪೌರಾಣಿಕ ಕಥೆ ಹೇಳುತ್ತ ಹಿಂದಿನ ವೀರರೊಡನೆ ತಮ್ಮ ಅರಸರನ್ನು ಹೋಲಿಸಿ ಕವಿತೆ ಕಟ್ಟಿದರೆ ಈ ಕವಿ ಅಂಥ ತೊಡಕು ಏನೂ ಇಲ್ಲದೆ ನೇರವಾಗಿ ತನ್ನ ದೊರೆಯ ಕಥೆಯನ್ನೇ ವಸ್ತುವನ್ನಾಗಿ ಆರಿಸಿಕೊಂಡು ಸಮಕಾಲೀನ ಇತಿಹಾಸವನ್ನು ಬರೆದು ಕೃತಕೃತ್ಯನಾಗಿದ್ದಾನೆ. ಕವಿಯ ಕಾಲದ ಜನಜೀವನದ ಒಂದು ನೈಜ ಚಿತ್ರ ಇಲ್ಲಿ ಕಾಣಸಿಕ್ಕುತ್ತದೆ. ಕಾವ್ಯದ ಭಾಷೆಯೂ ಆಡುಮಾತಿಗೆ ಹೆಚ್ಚು ಹತ್ತಿರವಾಗಿದೆ. ಅಂದಿನ ಕಾಲಕ್ಕೆ ಕನ್ನಡದಲ್ಲಿ ಬಳಕೆಗೆ ಬಂದಿದ್ದ ಹಲವು ಉರ್ದು ಪದಗಳನ್ನು ಕವಿ ಬಳಸಲು ಹಿಂತೆಗೆದಿಲ್ಲ, ಪಾತ್ಸ್ಯಾವು, ದರವೇಸಿ, ಸಲಾಮು ಮೊದಲಾದ ಹಲವು ಶಬ್ದಗಳು ಅಲ್ಲಲ್ಲಿ ಕಾಣಿಸುತ್ತವೆ. ಇಡೀ ಪದ್ಯಗಳನ್ನೇ ಉರ್ದು ಪದಗಳಿಂದಲೇ ನಿರ್ವಹಿಸಿರುವ ನಿದರ್ಶನಗಳೂ ಇವೆ.

ಚಿಕ್ಕದೇವರಾಜ ಒಡೆಯರು

[ಬದಲಾಯಿಸಿ]

ಕಂಠೀರವ ನರಸರಾಜರ ತರುವಾಯ ಪಟ್ಟಕ್ಕೆ ಬಂದ ಶ್ರೀ ಚಿಕ್ಕ ದೇವರಾಜ ಒಡೆಯರ ಈ ಕಾಲದ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಅತ್ಯಂತ ಪ್ರಧಾನನೆಂದು ಹೇಳಬಹುದು. ಈ ರಾಜ ಮೈಸೂರಿನ ಸರಹದ್ದುಗಳನ್ನು ವಿಸ್ತರಿಸಿ ರಾಜ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದ. ಹಲವಾರು ಶತ್ರುಗಳನ್ನು ನಿಗ್ರಹಿಸಿ ತನ್ನ ಯುದ್ಧ ಪರಾಕ್ರಮವನ್ನು ಮೆರೆದ. ಅದಕ್ಕಿಂತ ಹೆಚ್ಚಾಗಿ ಈ ದೊರೆ ಸ್ವಹಸ್ತ-ಪರಹಸ್ತಗಳಿಂದ ಸಾಹಿತ್ಯ ಕೈಂಕರ್ಯವನ್ನು ನಡೆಯಿಸಿ ಕೀರ್ತಿವಂತನಾದ. ಈತ ಸ್ವಯಂ ಕವಿ. ಚಿಕದೇವರಾಜ ಬಿನ್ನಪಂ, ಗೀತಗೋಪಾಲ, ಭಾಗವತ, ಶೇಷಧರ್ಮ, ಭಾರತ-ಎಂಬ ಗ್ರಂಥಗಳನ್ನು ರಚಿಸಿದನೆಂದು ತಿಳಿದುಬಂದಿದೆ. ಗೀತಗೋಪಾಲದಲ್ಲಿ ತಿರುಮಲಾರ್ಯನೆಂಬ ಆಸ್ಥಾನಕವಿಯಿಂದ ರಚಿತವಾದ ಕೆಲವು ಪದ್ಯಗಳೂ ಸೇರಿವೆಯಾದ್ದರಿಂದ ಅದನ್ನು ಅರಸನೇ ಬರೆದನೆ, ಎಂಬ ವಿಷಯದಲ್ಲಿ ಸಂಶಯ ಮೂಡಿದೆ.

ಗೀತಗೋಪಾಲ ಜಯದೇವನ ಗೀತ ಗೋವಿಂದವೆಂಬ ಸಂಸ್ಕೃತ ಗ್ರಂಥದ ಮಾದರಿಯಲ್ಲಿ ರಚಿತವಾದ ಉತ್ತಮ ಹಾಡುಗಳ ಸಂಕಲನ. ಮೋಕ್ಷೋಪಾಯವನ್ನು ಸಾಧಿಸುವುದಕ್ಕೆ ಉಪಾಯವಾದ ಪ್ರಪತ್ತಿಸ್ವರೂಪವನ್ನು ಕೀರ್ತನೆಗಳ ಮುಖಾಂತರ ಪ್ರಚಾರ ಮಾಡುವುದೇ ಇಲ್ಲಿ ಕವಿಯ ಧ್ಯೇಯ. ಗೋಪಿಕಾವೃತ್ತಾಂತವನ್ನು ವರ್ಣಿಸುವ ವ್ಯಾಜದಲ್ಲಿ ಕವಿ ಭಗವಂತನ ಗುಣಾತಿಶಯಗಳನ್ನು ಕೊಂಡಾಡಿದ್ದಾನೆ. ಈ ಕೀರ್ತನೆಗಳು ಸಂಗೀತಕ್ಕೆ ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಚಿಕ್ಕದೇವರಾಯ ಸಂಗೀತ ರಸಿಕನಾಗಿದ್ದನೆಂಬುದರಲ್ಲಿ ಸಂಶಯವಿಲ್ಲ. ಸಾಹಿತ್ಯ, ಸಂಗೀತ, ಸಮರಾಂಗಣಗಳಲ್ಲಿ ಈ ದೊರೆಗೆ ಸಮಾನವಾದ ಪ್ರಭುತ್ವ ಸಿದ್ದಿಸಿತ್ತು. ಭಾಗವತವೇ ಮೊದಲಾದ ಪುರಾಣಗಳಲ್ಲಿನ ಭಕ್ತ ಭಾಗವತೋತ್ತಮರು ಉಪದೇಶಿಸಿದ ತತ್ತ್ವಗಳನ್ನೂ ತಮಿಳುನಾಡಿನ ಆಳ್ವಾರರ ತತ್ವ್ತಗಳನ್ನೂ ಆಳವಾಗಿ ಅಭ್ಯಾಸಮಾಡಿ ಅವುಗಳ ಸಾರವತ್ತಾದ ಅಂಶವನ್ನು ಈ ಕೀರ್ತನೆಗಳಲ್ಲಿ ಬಹಳ ಸರಳವಾದ ರೀತಿಯಲ್ಲಿ ದೊರೆ ನಿರೂಪಿಸಿದ್ದಾನೆ. ಕವಿ ಮೊದಲು ತಾನು ಹೇಳಬೇಕಾದ ತತ್ತ್ವವನ್ನು ವಚನದಲ್ಲಿ ಹೇಳಿ ಆಮೇಲೆ ಅದಕ್ಕೆ ಹೊಂದಿಕೆಯಾಗುವ ಕೀರ್ತನೆಯನ್ನು ಹೇಳಿದ್ದಾನೆ. ಮಹತ್ತ್ವದ ಸಂಗತಿಗಳನ್ನು ಸುಲಭ ಭಾಷೆಯಲ್ಲಿ, ಲಯಬದ್ದವಾದ ಸಂಗೀತದ ಭಾಷೆಯಲ್ಲಿ ಹೇಳಿರುವುದು ಈ ರಾಜಕವಿಯ ಹಿರಿಮೆ.

ಚಿಕದೇವರಾಜಬಿನ್ನಪ ಒಂದು ಗದ್ಯಕಾವ್ಯ. ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿಯ ತಿರುವಡಿಗಳಲ್ಲಿ ಅರಸ ಮಾಡಿಕೊಂಡ ಮೂವತ್ತು ಭಕ್ತಿಯ ಬಿನ್ನಪಗಳು ಇಲ್ಲಿ ಇವೆ. ಶ್ರೀವಿಶಿಷ್ಟಾದ್ವೈತ ತತ್ತ್ವಗಳ ನಿರೂಪಣೆ ಇಲ್ಲಿ ಕಾವ್ಯ ಶೈಲಿಯಲ್ಲಿ ರೂಪುಗೊಂಡಿದೆ. ಅರಸನಿಗೆ ವೈಷ್ಣವಧರ್ಮದಲ್ಲಿದ್ದ ವಿಶೇಷವಾದ ನಿಷ್ಠೆ, ಯದುಗಿರಿ ನಾರಾಯಣಸ್ವಾಮಿಯಲ್ಲಿದ್ದ ದೃಢಭಕ್ತಿ ಇಲ್ಲಿ ಸುವ್ಯಕ್ತವಾಗಿವೆ. ಈತನ ಹೆಸರಿನಲ್ಲಿ ಪ್ರಸಿದ್ದವಾಗಿರುವ ಭಾಗವತಕ್ಕೆ ಚಿಕ್ಕದೇವರಾಜ ಸೂಕ್ತಿವಿಲಾಸ ಎಂಬ ಹೆಸರೂ ಇದೆ. ಸಂಸ್ಕೃತ ಭಾಗವತಕ್ಕೆ ಇದು ಒಂದು ಕನ್ನಡ ಟೀಕೆ. ಇವನ ಭಾರತವೂ ಅಷ್ಟೇ. ಶಾಂತಿಪರ್ವದಿಂದ ಮುಂದಿನ ಪರ್ವಗಳಿಗೆ ಮಾತ್ರ ಇದರಲ್ಲಿ ಕನ್ನಡ ಟೀಕೆಯಿದೆ. ಶೇಷಧರ್ಮ ಅದೇ ಹೆಸರಿನ ಸಂಸ್ಕೃತ ಗ್ರಂಥಕ್ಕೆ ಕನ್ನಡ ಟೀಕೆ. ಈ ಕಾಲದಲ್ಲಿ ಶ್ರೀವೈಷ್ಣವರೂ ಇತರ ಬ್ರಾಹ್ಮಣಕವಿಗಳೂ ಸಂಸ್ಕೃತದ ಗ್ರಂಥಗಳನೇಕಕ್ಕೆ ಕನ್ನಡದಲ್ಲಿ ವ್ಯಾಖ್ಯಾನ ಬರೆಯುವ ಕೆಲಸದಲ್ಲಿ ತೊಡಗಿದರು. ಶ್ರೀವೈಷ್ಣವಧರ್ಮ ಪ್ರಚಾರ ಅವರ ಗುರಿಯಾಗಿತ್ತು.

ಚಿಕ್ಕದೇವರಾಯನಿಗೆ ಸಾಹಿತ್ಯವಿದ್ಯಾನಿಕಷಪ್ರಸ್ತರಂ, ರಸಿಕಜನಕರ್ಣರಸಾಯನೀಕೃತ ಸಂಗೀತವಿಸ್ತರಂ ಎಂಬ ಸಾರ್ಥಕವಾದ ಬಿರುದುಗಳಿದ್ದುವು. ಈತನ ವಿಷಯವಾಗಿ ಚಿಕದೇವರಾಜವಿಜಯಂ, ಚಿಕದೇವರಾಯವಂಶಾವಳಿ, ಚಿಕದೇವರಾಜಯಶೋ ಭೂಷಣಂ, ಚಿಕದೇವರಾಜವಂಶಪ್ರಭಾವ-ಮೊದಲಾದ ಹಲವು ಗ್ರಂಥಗಳು ಹುಟ್ಟಿವೆ. ಚಿಕದೇವರಾಯನ ಪರಾಕ್ರಮ, ಶರಣಾಗತ ರಕ್ಷಣೆ, ಔದಾರ್ಯ ಮೊದಲಾದ ಗುಣಗಳನ್ನು ಹೊಗಳುವ ಕೆಲವು ತೆಲಗು ಚಾಟುಪದ್ಯಗಳೂ ಪ್ರಸಿದ್ದವಾಗಿವೆ.

ಸ್ವಯಂ ಕವಿಯೂ ಸಂಗೀತಜ್ಞನೂ ಆದ ಚಿಕ್ಕದೇವರಾಜ ಅನೇಕ ಕವಿಗಳನ್ನು ತನ್ನ ಆಸ್ಥಾನದಲ್ಲಿ ಆದರಿಸಿ ಅವರಿಂದ ಕಾವ್ಯರಚನೆ ಮಾಡಿಸಿದ. ತಿರುಮಲಾರ್ಯ ಚಿಕುಪಾಧ್ಯಾಯ, ಸಿಂಗರಾರ್ಯ, ತಿಮ್ಮಕವಿ, ಮಲ್ಲರಸ, ಚಿದಾನಂದಕವಿ, ವೇಣುಗೋಪಾಲ ವರಪ್ರಸಾದ,ಮಹಲಿಂಗರಂಗ ,ವಿಶಾಲಾಕ್ಷ ಪಂಡಿತ -ಮೊದಲಾದ ಅನೇಕರು ಇವನ ಆಶ್ರಿತರಾಗಿದ್ದರು. ಶೃಂಗಾರಮ್ಮ, ಹೊನ್ನಮ್ಮ ಎಂಬ ಇಬ್ಬರು ಕವಯಿತ್ರಿಯರೂ ರಾಜಾಶ್ರಯದಲ್ಲಿ ಇದ್ದು ಕೃತಿರಚನೆ ಮಾಡಿದರು. ಲೋಕಪ್ರಸಿದ್ದನಾದ ವಿಜಯನಗರದ ಶ್ರೀಕೃಷ್ಣದೇವರಾಯನ ಹಾಗೆಯೇ ಚಿಕ್ಕದೇವರಾಯ ಒಡೆಯನೂ ಸಾಹಿತ್ಯಸಂಗೀತ ಸಮರಾಂಗಣ ಸಾರ್ವಭೌಮನೆನಿಸಿಕೊಂಡು; ಕವಿಜನರಿಗೆ ಆಶ್ರಯದಾತನಾಗಿ ಮೈಸೂರು ಒಡೆಯರ ಪರಂಪರೆಯಲ್ಲಿ ಅತ್ಯಂತ ಮಹಿಮಾನ್ವಿತನಾಗಿ ರಾರಾಜಿಸಿದ.

ಮುಮ್ಮಡಿ ಕೃಷ್ಣರಾಜ ಒಡೆಯರು

[ಬದಲಾಯಿಸಿ]

ಮುಮ್ಮಡಿ ಕೃಷ್ಣರಾಜ ಒಡೆಯರು ಪ್ರಭುತ್ವವನ್ನು ಪಡೆದಮೇಲೆ ಕನ್ನಡಕ್ಕೆ ಹೆಚ್ಚಿನ ಪೋಷಣೆ ಲಭಿಸಿತು.[] ರಾಜಾಶ್ರಯದಲ್ಲಿ ಅನೇಕ ವಿದ್ವಜ್ಜನ ಕೃತಿರಚನೆ ಮಾಡಿದರು. ಆಡಳಿತ ಕೈತಪ್ಪಿದಾಗಲೂ ಕವಿ, ವಿದ್ವಾಂಸರನ್ನು ರಾಜ ಅನಾದರಣೆ ಮಾಡಲಿಲ್ಲ. ಕೃಷ್ಣರಾಜ ಒಡೆಯನೇ ಸ್ವಯಂ ಪಂಡಿತನೂ ಗ್ರಂಥಕರ್ತನೂ ಆಗಿದ್ದ. ಅವನ ಹೆಸರಿನಲ್ಲಿ ಸುಮಾರು ಐವತ್ತು ಗ್ರಂಥಗಳು ಪ್ರಸಿದ್ದವಾಗಿವೆ. ಸಂಸ್ಕೃತದಲ್ಲಿನ ಪುರಾಣೇತಿಹಾಸ ನಾಟಕಾದಿಗಳನ್ನು ಕನ್ನಡದಲ್ಲಿ ಬರೆಯಿಸಿದ ಯಶಸ್ಸು ಮುಮ್ಮಡಿ ಕೃಷ್ಣರಾಜನದು. ಶ್ರೀ ಕೃಷ್ಣರಾಜ ವಾಣಿವಿಲಾಸ ಎಂಬ ಹೆಸರಿನಿಂದ ಪ್ರಸಿದ್ದವಾಗಿರುವ ಭಾರತ ಟೀಕೆಯನ್ನು ಈತ ಬರೆಯಿಸಿದುದಲ್ಲದೆ ಸೌಗಂಧಿಕಾಪರಿಣಯ ಎಂಬ ವಿಸ್ತಾರವಾದ ಕಾವ್ಯವನ್ನು ಗದ್ಯಪದ್ಯಾತ್ಮಕವಾಗಿ ತಾನೇ ರಚಿಸಿದ್ದಾನೆ. ದೂರ್ವಾಸಮುನಿಯ ಶಾಪದ ದೆಸೆಯಿಂದ ತನ್ನ ಪದವಿಯನ್ನು ಕಳೆದುಕೊಂಡ ದೇವೇಂದ್ರ ಸುಗಂಧರಾಯನೆಂಬ ಹೆಸರಿನಿಂದ ಹುಟ್ಟಿ ಸೌಗಂಧಿಕೆ ಎಂಬ ಹೆಸರಿನಿಂದ ಭೂಲೋಕದಲ್ಲಿ ಅವತರಿಸಿದ ಶಚೀದೇವಿಯನ್ನು ಮದುವೆಯಾದನೆಂಬುದೇ ಈ ಗ್ರಂಥದ ಕಥಾಸಾರ. ಇದನ್ನೇ ಕವಿ ಮೂವತ್ತಾರು ಆಶ್ವಾಸಗಳಾಗಿ ಬೆಳೆಸಿ ಆರು ಸಾವಿರಕ್ಕೂ ಹೆಚ್ಚಿನ ಪದ್ಯಗಳಿಂದ ಕೂಡಿದ ಮಹಾಕಾವ್ಯವನ್ನಾಗಿ ಮಾಡಿದ್ದಾನೆ.

ಅಧ್ಯಾತ್ಮ ರಾಮಾಯಣದ ಕನ್ನಡ ಟೀಕೆಯಲ್ಲಿ ಮೊದಲಿಗೆ ಮೈಸೂರು ಅರಸರ ಚರಿತ್ರೆಯನ್ನು ಸಂಗ್ರಹವಾಗಿ ಹೇಳಿದೆ. ಇದಲ್ಲದೆ ನಂಜುಂಡ ಶತಕ, ದೇವೀ ಮಹಾತ್ಮ್ಯ, ಶಂಕರಸಂಹಿತೆ, ಸಂಖ್ಯಾರತ್ನ ಮಾಲಾಟೀಕೆ ಎಂಬ ಗ್ರಂಥಗಳು ಜನಪ್ರಿಯವಾಗಿವೆ. ಶ್ರೀಧರೀಯ ವ್ಯಾಖ್ಯಾನವನ್ನು ಅನುಸರಿಸಿ ಭಾಗವತಕ್ಕೆ ಯಥಾತಥದಿಂದ ಕನ್ನಡ ಟೀಕೆಯನ್ನು ಕೃಷ್ಣದೇವರಾಯ ಬರೆದಿದ್ದಾನೆ. ಶಾಕುಂತಲ ನಾಟಕನವೀನಟೀಕೆ ಈತನ ಕೃತಿಗಳಲ್ಲಿ ಮುಖ್ಯವಾದದ್ದು. ಪುರಾಣ ಪುಣ್ಯಕಥೆಗಳಷ್ಟಕ್ಕೇ ಗಮನವನ್ನು ಮೀಸಲಾಗಿಡದೆ ನಾಟಕಗಳನ್ನೂ ಓದಿ ಸ್ವಾರಸ್ಯಾನುಭವ ಮಾಡಿ ಅವುಗಳ ಸಾರವನ್ನು ಕನ್ನಡಕ್ಕೆ ತರುವ ಪ್ರಯತ್ನವನ್ನಿಲ್ಲಿ ಮಾಡಲಾಗಿದೆ.

ಈ ರಾಜನ ಕಾಲದಲ್ಲಿನ ಇಬ್ಬರು ಗದ್ಯಕವಿಗಳು ಬಹಳ ಮುಖ್ಯರಾದವರು; ಒಬ್ಬ ರಾಜಾವಳೀ ಕಥೆಯನ್ನು ರಚಿಸಿದ ದೇವಚಂದ್ರ. ಇನ್ನೊಬ್ಬ ಮುದ್ರಾಮಂಜೂಷವನ್ನು ರಚಿಸಿದ ಕೆಂಪುನಾರಾಯಣ. [][]ದೇವಚಂದ್ರ ಜೈನಕವಿ; ರಾಮ ಕಥಾವತಾರ ಮತ್ತು ರಾಜಾವಳೀ ಕಥೆ ಎಂಬ ಎರಡು ಗ್ರಂಥಗಳನ್ನು ಬರೆದಿದ್ದಾನೆ. ರಾಮಕಥಾವತಾರ ಜೈನ ಸಂಪ್ರದಾಯಾನುಸಾರವಾದ ರಾಮಾಯಣ. ವಿಶೇಷವಾಗಿ ನಾಗಚಂದ್ರ ವಿರಚಿತವಾದ ರಾಮಚಂದ್ರ ಚರಿತ ಪುರಾಣದ ಅನುಸರಣೆಯಾಗಿದೆ. ಅದರಲ್ಲಿನ ಹಲವು ಪದ್ಯಗಳನ್ನು ದೇವಚಂದ್ರ ಅನುವಾದ ಮಾಡಿದ್ದಾನೆ. ಇದಕ್ಕಿಂತ ಇವನ ರಾಜಾವಳೀ ಕಥೆ ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ಮುಖ್ಯವಾಗಿದೆ. ಇದು ಬಹಳ ಮಟ್ಟಿಗೆ ಗದ್ಯದಲ್ಲಿದೆ.[] ಕೆಲವು ಶ್ಲೋಕಗಳೂ ಪದ್ಯಗಳೂ ಮಧ್ಯೆ ಮಧ್ಯೆ ಬಂದಿವೆ. ಇದರಲ್ಲಿ ದೇವಚಂದ್ರ ಜೈನಮತಕ್ಕೆ ಸಂಬಂಧಿಸಿದ ಹಲವು ಕಥೆಗಳನ್ನೂ ಅನೇಕ ರಾಜರ ಚರಿತ್ರೆಯನ್ನೂ ಹೇಳಿದ್ದಾನೆ. ಮೈಸೂರು ಒಡೆಯರ ವಂಶಾವಳಿಯ ಕಥೆಯೂ ಇದರಲ್ಲಿ ಸಂಕ್ಷೇಪವಾಗಿ ಬಂದಿದೆ. ಈ ಕವಿ ಮುಮ್ಮಡಿ ಕೃಷ್ಣರಾಜ ಒಡೆಯರ ಆಶ್ರಿತನಾದ ವೈದ್ಯಸೂರಿಪಂಡಿತನ ಪ್ರೋತ್ಸಾಹದಿಂದ ಸು. 1838ರಲ್ಲಿ ಗ್ರಂಥರಚನೆ ಮಾಡಿದಂತೆ ತಿಳಿಸಿದ್ದಾನೆ.

ಕೆಂಪುನಾರಾಯಣ ಹೊಯಿಸಣೆಗ ಕುಲದ ಬ್ರಾಹ್ಮಣ ಕವಿ (1823). ಇವನ ಗ್ರಂಥ ಮುದ್ರಾಮಂಜೂಷ. ಈ ಗದ್ಯಗ್ರಂಥ ಹಲವು ದೃಷ್ಟಿಗಳಿಂದ ಮುಖ್ಯವಾಗಿದೆ. ಆಧುನಿಕ ಗದ್ಯಶೈಲಿ ಈ ಗ್ರಂಥದಿಂದ ಆರಂಭವಾಯಿತೆಂದು ಹೇಳಿದರೆ ತಪ್ಪಲ್ಲ. ಸುಲಲಿತವಾದ ಸರಳಗನ್ನಡದ ವಚನರಚನೆಯನ್ನು ಇಲ್ಲಿ ಕಾಣಬಹುದು. ಚಾಣಕ್ಯ ಚಂದ್ರಗುಪ್ತರು ನಂದರ ವಿನಾಶವನ್ನು ಸಾಧಿಸಿ ಪಾಟಲೀಪುರದ ಸಿಂಹಾಸನವನ್ನು ವಶಪಡಿಸಿಕೊಂಡ ಕಥೆ ಈ ಗ್ರಂಥದ ಕಥಾವಸ್ತು. ಇದರ ಉತ್ತರಾರ್ಧಕ್ಕೆ ಸಂಸ್ಕೃತದ ಮುದ್ರಾರಾಕ್ಷಸವೆಂಬ ವಿಶಾಖದತ್ತನ ನಾಟಕ ಸ್ಫೂರ್ತಿಯನ್ನು ಒದಗಿಸಿದೆ. ಪುರ್ವಾರ್ಧದ ಕಥೆಯನ್ನು ಕವಿ ಬೇರೆ ಆಧಾರಗಳಿಂದ ಪಡೆದುಕೊಂಡಿದ್ದಾನೆ. ಈ ಕೃತಿ ಓದುಗರ ಮನಸ್ಸನ್ನು ಒಲಿಸಿ ನಲಿಸುವಂಥ ಕಥಾಸ್ವಾರಸ್ಯ, ಸನ್ನಿವೇಶ ರಚನಚಾತುರ್ಯ ಮತ್ತು ಪದಲಾಲಿತ್ಯಗಳಿಂದ ಕೂಡಿ ಅತ್ಯಂತ ಜನಪ್ರಿಯವಾಗಿದೆ.[]

ಮುಮ್ಮಡಿ ಕೃಷ್ಣರಾಜನ ಪೋಷಣೆಯಲ್ಲಿದ್ದು ಕೃತಿರಚನೆ ಮಾಡಿದ ಇನ್ನೊಬ್ಬ ಕವಿ ಅಳಿಯ ಲಿಂಗರಾಜ (1823-74) ಅನೇಕ ಗ್ರಂಥಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ಚಂಪು ರೂಪದಲ್ಲಿರುವ ನರಪತಿಚರಿತವೆಂಬ ಅಲಂಕಾರಗ್ರಂಥ ಮುಖ್ಯವಾದದ್ದು. ಇದರ ಉದಾಹರಣಪದ್ಯಗಳೆಲ್ಲ ಮುಮ್ಮಡಿ ಕೃಷ್ಣರಾಜನ ಸ್ತುತಿರೂಪವಾಗಿವೆ. ತಿರುಮಲಾರ್ಯ ತನ್ನ ಅಲಂಕಾರ ಗ್ರಂಥದಲ್ಲಿ ಚಿಕ್ಕದೇವರಾಯನನ್ನು ಹೊಗಳಿದ ಮಾದರಿಯನ್ನು ಈ ಕವಿ ಅನುಕರಿಸಿದಂತೆ ತೋರುತ್ತದೆ. ಈತ ಚಂಪು, ಷಟ್ಪದಿ, ಸಾಂಗತ್ಯಗಳಲ್ಲಿ ಕೃತಿರಚನೆಮಾಡಿ ತನ್ನ ಕವಿತಾ ಪ್ರೌಢಿಮೆಯನ್ನು ಮೆರೆದಿದ್ದಾನೆ. ಪುತ್ರಕಾಮೇಷ್ಟಿಯೆಂಬ ಒಂದು ಯಕ್ಷಗಾನವನ್ನು ಮಹಲಿಂಗಶತಕ ಮತ್ತು ವೀರಭದ್ರಶತಕಗಳೆಂಬ ಎರಡು ಶತಕ ಗ್ರಂಥಗಳನ್ನು ಈತ ರಚಿಸಿದ್ದಾನೆ.[೧೦]

ಚಾಮರಾಜ ಒಡೆಯರು

[ಬದಲಾಯಿಸಿ]

ಮುಮ್ಮಡಿ ಕೃಷ್ಣಭೂಪಾಲನ ತರುವಾಯ ರಾಜಪಟ್ಟವನ್ನೇರಿದ ಶ್ರೀ ಚಾಮರಾಜ ಒಡೆಯರು ಹಿರಿಯರ ಸಂಪ್ರದಾಯವನ್ನು ಅನುಸರಿಸಿ ವಿದ್ವತ್ಕವಿಪೋಷಕರಾಗಿ ಕೀರ್ತಿಗಳಿಸಿದರು. ಇವರ ಆಸ್ಥಾನ ಕವಿ ಬಸವಪ್ಪಶಾಸ್ತ್ರಿಗಳು ರಚಿಸಿದ ಕರ್ಣಾಟಕ ಅಭಿಜ್ಞಾನಶಾಕುಂತಲ ನಾಟಕ ಇಂದಿಗೂ ಪ್ರಸಿದ್ದವಾಗಿದೆ. ಚಂಡಕೌಶಿಕ ಮತ್ತು ಉತ್ತರ ರಾಮಚರಿತೆ ಎಂಬ ಬೇರೆ ಎರಡು ಸಂಸ್ಕೃತನಾಟಕಗಳನ್ನೂ ಈ ಕವಿ ಕನ್ನಡಕ್ಕೆ ಅನುವಾದ ಮಾಡಿದ್ದಾನೆ. ಇವಲ್ಲದೆ ದಮಯಂತೀ ಸ್ವಯಂವರ, ಸಾವಿತ್ರೀ ಚರಿತ್ರೆ ಎಂಬ ಎರಡು ಕಾವ್ಯಗಳನ್ನೂ ರಚಿಸಿದ್ದಾನೆ. ಮೊದಲನೆಯದು ಚಂಪು ಎರಡನೆಯದು ಷಟ್ಪದಿ. ಒಥೆಲೋಎಂಬ ಇಂಗ್ಲಿಷ್ ನಾಟಕವನ್ನು ಪರಿವರ್ತಿಸಿ ಶೂರಸೇನಚರಿತ್ರೆ ಎಂಬ ನಾಟಕವನ್ನು ರಚಿಸಿದುದಲ್ಲದೆ ಬಸವಪ್ಪ ಶಾಸ್ತ್ರಿಗಳು ಭರ್ತೃಹರಿ ಸುಭಾಷಿತವನ್ನೂ ಕನ್ನಡಿಸಿದ್ದಾರೆ.

ಶತಮಾನದಲ್ಲಿ ಕನ್ನಡಕ್ಕೆ ಒಡೆಯರ ವಂಶಜರು ನೀಡಿದ ದೊಡ್ಡ ಕಾಣಿಕೆ ಶ್ರೀಜಯಚಾಮರಾಜೇಂದ್ರ ಗ್ರಂಥಮಾಲೆ. ಶ್ರೀ ಜಯಚಾಮರಾಜ ಒಡೆಯರು ಋಗ್ವೇದವನ್ನೂ ಅನೇಕ ಪುರಾಣಗಳನ್ನೂ ಕನ್ನಡದಲ್ಲಿ ಅರ್ಥಸಮೇತವಾಗಿ ಪ್ರಕಟಣೆ ಮಾಡಿಸಿ ಕನ್ನಡ ಜನಕ್ಕೆ ಮಹೋಪಕಾರ ಮಾಡಿದ್ದಾರೆ. ವೈದಿಕ ಧರ್ಮದ ಮೂಲಾಧಾರಗಳಿಂದ ಈ ಪವಿತ್ರ ಗ್ರಂಥಗಳನ್ನು ಕನ್ನಡ ಲಿಪಿಯಲ್ಲಿ ಅಚ್ಚುಮಾಡಿಸಿ ಯಥಾರ್ಥವಾದ ಕನ್ನಡ ಅನುವಾದವನ್ನೂ ಕೊಟ್ಟಿರುವುದು ಸಂಸ್ಕೃತ ಪಾಂಡಿತ್ಯವಿಲ್ಲದ ಕನ್ನಡಿಗರಿಗೂ ಜ್ಞಾನಭಂಡಾರದ ಬಾಗಿಲುಗಳನ್ನು ತೆರೆದಂತಾಗಿದೆ. ಹೀಗೆ ರಾಜ ಒಡೆಯನ ಕಾಲದಿಂದಲೂ ಒಡೆಯರ ಅರಸುಮನೆತನ ಸಾಹಿತ್ಯ, ಸಂಗೀತಾದಿ ಲಲಿತಕಲೆಗಳಿಗೆ ಅಪಾರ ಪ್ರೋತ್ಸಾಹವನ್ನು ಕೊಡುತ್ತ ಬಂದಿದೆ.[೧೧]

ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜಯಚಾಮರಾಜೇಂದ್ರ ಒಡೆಯರ್, ಇವರಿಬ್ಬರೂ ಸ್ವತಃ ಸಾಹಿತಿಗಳಾಗಿದ್ದು, ಸಾಹಿತಿಗಳಿಗೆ ಒತ್ತಾಸೆಯಾಗಿ ರಾಜ್ಯಭಾರ ನಡೆಸಿದರು.

ಉಲ್ಲೇಖಗಳು

[ಬದಲಾಯಿಸಿ]
  1. http://shodhganga.inflibnet.ac.in/jspui/bitstream/10603/129892/7/07_chapter%201.pdf
  2. http://www.karnataka.gov.in/Gazetteer/Publications/Special%20Publications/History%20of%20Mysore-%20%20by%20C.Hayavadana%20Rao/History%20of%20Mysore%20Volume%20I/History%20of%20Mysore%20Volume%201.pdf[ಶಾಶ್ವತವಾಗಿ ಮಡಿದ ಕೊಂಡಿ]
  3. http://meerajcode11.blogspot.com/2013/02/17th-century-writings-mysore-literature.html
  4. "ಆರ್ಕೈವ್ ನಕಲು" (PDF). Archived from the original (PDF) on 2019-06-02. Retrieved 2020-01-09.
  5. http://ksu.ac.in/en/mummadi-krishnaraja-wodeyar/
  6. https://www.rarebooksocietyofindia.org/postDetail.php?id=196174216674_10152089340101675
  7. http://shodhganga.inflibnet.ac.in/bitstream/10603/95127/7/07_chapter%201.pdf
  8. https://commons.wikimedia.org/wiki/File:%E0%B2%AE%E0%B3%81%E0%B2%A6%E0%B3%8D%E0%B2%B0%E0%B2%BE%E0%B2%AE%E0%B2%BE%E0%B2%82%E0%B2%9C%E0%B3%82%E0%B2%B7-Mudramanjusha.jpg
  9. "ಆರ್ಕೈವ್ ನಕಲು". Archived from the original on 2018-11-20. Retrieved 2020-01-09.
  10. https://books.google.co.in/books?id=wclA8r5f_LcC&pg=PA20&lpg=PA20&dq=wodeyar+dynasty+literature+review&source=bl&ots=OobnsPSJex&sig=ACfU3U395ksdQ27HMPq5n1no1jVyy5Sg6g&hl=en&sa=X&ved=2ahUKEwjg8pzd7PbmAhU_4jgGHRvrCN04FBDoATASegQIChAB
  11. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಒಡೆಯರ ಕಾಲದ ಕನ್ನಡ ಸಾಹಿತ್ಯ