ವಿಷಯಕ್ಕೆ ಹೋಗು

ಎಬನಿ ಮರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Gaub tree
Foliage and flowers
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
D. malabarica
Binomial name
Diospyros malabarica
(Desr.) Kostel.
Synonyms
  • D. biflora Blanco
  • D. citrifolia Wall. ex A.DC.
  • D. embryopteris Pers. [Illegitimate]
  • D. glutinifera (Roxb.) Wall.
  • D. glutinosa J.König ex Roxb.
  • D. malabarica var. siamensis (Hochr.) Phengklai
  • D. peregrina (Gaertn.) Gürke
  • D. peregrina f. javanica Kosterm.
  • D. siamensis Hochr.
  • Embryopteris gelatinifera G.Don
  • Embryopteris glutinifera Roxb.
  • Embryopteris glutinifolia Link
  • Embryopteris peregrina Gaertn.


ಎಬನಿಮರ ಡಯಾಸ್ಟೈರಸ್ ಎಂಬ ವೈಜ್ಜಾನಿಕ ಹೆಸರಿನ ಎಬಿನೇಸಿ ಕುಟುಂಬದ ಒಂದು ಪ್ರಮುಖ ವೃಕ್ಷಜಾತಿ. ಇದರಲ್ಲಿ ಸುಮಾರು 240 ಪ್ರಭೇದಗಳಿದ್ದು ಅವೆಲ್ಲ ಸಾಮಾನ್ಯವಾಗಿ ದೊಡ್ಡ ಮರಗಳಾಗಿವೆ ; ಕೆಲವು ಮಾತ್ರ ಪೊದರುಗಳು. ಮುಖ್ಯವಾಗಿ ಉಷ್ಣದೇಶಗಳಲ್ಲಿ ಕಂಡುಬರುತ್ತವೆ. ಭಾರತ ಮಲೆಯ ಮತ್ತು ಈಸ್ಟ್ ಇಂಡೀಸ್‍ಗಳಲ್ಲಿ ಅತಿ ಹೆಚ್ಚಾಗಿ ಹರಡಿವೆ. ಮತ್ತು ಕೆಲವು ಆಫ್ರಿಕದಲ್ಲೂ ಇವೆ. ಕಾಡು ಸಸ್ಯಗಳಲ್ಲಿ ಎಬನಿ ಅತಿ ಮುಖ್ಯವಾದುದು. ಭಾರತದ ಕಾಡುಗಳಲ್ಲಿ ಸುಮಾರು 41 ಪ್ರಭೇದಗಳು ಕಂಡು ಬಂದಿವೆ. ಅವೆಲ್ಲ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಹೆಚ್ಚಾಗಿ ಬೆಳೆಯುತ್ತವೆ. ಎಬೆನಮ್ ಮೆಲನೊ, ಕ್ಸೈಲಾನ್ ಬಕ್ಸಿಫೋಲಿಯ, ಕಾಕಿ, ಮಾಂಟಾನ, ಟೊಮಂಟೋಸ, ಕ್ಲೋರೋಕ್ಸೊಯ್‍ಲಾನ್-ಈ ಪ್ರಭೇದಗಳೂ ದಕ್ಷಿಣಭಾರತದ ಡೆಕ್ಕನ್, ಅಸ್ಸಾಂ ಮತ್ತು ಬಂಗಾಳದ ಕಾಡುಗಳಲ್ಲಿ ಅತಿ ಹೆಚ್ಚಾಗಿ ಬೆಳೆಯುತ್ತವೆ. ಕೆಲವು ಪ್ರಭೇದಗಳು 60 ರಿಂದ 80 ಅಡಿಗಳಷ್ಟು ಎತ್ತರವಾಗಿದ್ದು ಮರದ ವ್ಯಾಸ 7 ಅಡಿಗಳವರೆಗೂ ಇದೆ. ಎಲೆಗಳು ಅಚ್ಚಹಸಿರಾಗಿದ್ದು ಸ್ವಲ್ಪ ಒರಟಾಗಿವೆ. ಹೂಗಳು ಸಾಮಾನ್ಯವಾಗಿ ಸಣ್ಣವಾಗಿದ್ದು ಏಕಲಿಂಗಿಯಾಗಿವೆ. ಹೆಣ್ಣು ಮತ್ತು ಗಂಡು ಪುಷ್ಪಗಳು ಒಂದೇ ಸಸ್ಯದಲ್ಲಿ ಅಥವಾ ಬೇರೆ ಬೇರೆ ಸಸ್ಯಗಳಲ್ಲಿ ಕಾಣಬರುತ್ತವೆ. ಗಂಡು ಹೂಗಳು 4 ರಿಂದ 16 ಅಥವಾ 64 ಕೇಸರುಗಳನ್ನೂ ಹೆಣ್ಣುಹೂಗಳು 4 ರಿಂದ 5 ಕೋಣೆಗಳುಳ್ಳ ಸಂಯುಕ್ತ ಅಂಡಾಶಯವನ್ನೂ ಹೊಂದಿವೆ. ಹಣ್ಣುಗಳು ಹಾಲಿನಿಂದ ಕೂಡಿ ರಸಭರಿತವಾಗಿದ್ದು ಸ್ವಲ್ಪ ಕಹಿಯಾಗಿವೆ.[] ಕನ್ನಡ ಭಾಷೆಯಲ್ಲಿ ಇದಕ್ಕೆ ಕರಿಮರ ಎಂಬ ಹೆಸರಿದೆ.

ಡಯಾಸ್ಪೈರಸ್ ಮರಗಳ ಜಾತಿಯಲ್ಲಿ ಕಾಣಬರುವ ಎಲ್ಲ ಪ್ರಭೇದಗಳನ್ನೂ ಮುಖ್ಯವಾಗಿ ದಿಮ್ಮಿ ಮತ್ತು ಮರದಮುಟ್ಟು ಸಾಮಾನುಗಳನ್ನು ಮಾಡಲು ಉಪಯೋಗಿಸುತ್ತಾರೆ. ಅದರಲ್ಲೂ ವೈe್ಞÁನಿಕವಾಗಿ ಡಯಾಸ್ಪೈರಸ್ ಎಬೆನಮ್ ಎಂಬ ಕರಿಮರ ಬೇರೆ ಎಲ್ಲ ಪ್ರಭೇದಗಳಿಗಿಂತ ಉತ್ತಮವಾದದ್ದು. ಇದರಿಂದ ಮರದ ಸಾಮಾನುಗಳನ್ನು ಮಾಡುತ್ತಾರೆ. ಈ ಮರ ಮೈಸೂರಿನ ಹರಿದ್ವರ್ಣದ ಕಾಡುಗಳಲ್ಲಿದೆ. ಇದು ಗಟ್ಟಿಯಾದ ಮರದ ದಿಮ್ಮಿಯನ್ನು ಕೊಡುವುದಲ್ಲದೆ ತಿನ್ನಲು ಯೋಗ್ಯವಾದ ರಸಭರಿತ ಹಣ್ಣುಗಳನ್ನೂ ಕೊಡುತ್ತದೆ. ಪ್ರಕಾಶವಾಗಿ ಹೊಳೆಯುವ ಎಲೆಗಳನ್ನೂ ಬಣ್ಣದ ಹಣ್ಣುಗಳನ್ನೂ ಪಡೆದಿರುವುದರಿಂದ, ಉದ್ಯಾನ, ತೋಟ ಇತ್ಯಾದಿ ಸ್ಥಳಗಳಲ್ಲಿ ಅಲಂಕಾರವೃಕ್ಷವಾಗಿ ಇದನ್ನು ಬೆಳೆಸುತ್ತಾರೆ. ಕಾಂಡದ ಹೊರಭಾಗವನ್ನು ಕಿತ್ತುಹಾಕಿ, ಒಳಭಾಗದ ಕಪ್ಪಗಿರುವ ಸೇಗನ್ನು ಕೆಲಸಗಳಿಗೆ ಉಪಯೋಗಿಸುತ್ತಾರೆ. ಈ ಸೇಗಿಗೆ ಎಬನಿ ಎಂದು ಹೆಸರು.

ಡಯಾಸ್ಪೈರಸ್ ಮೆಲನೋಕ್ಸೈಲಾನ್ (ಅಬನಾಸಿ ಅಥವಾ ದೀರ್ಘಪತ್ರಕ) ಮತ್ತು ಡ.ಟೊಮೆಂಡೋಸ ಎಂಬ ಹೆಸರಿನ ಪ್ರಭೇದಗಳ ಮರ ಗುಣದಲ್ಲಿ ಮೇಲೆ ಹೇಳಿದ ಕರಿಮರಕ್ಕೆ ಸರಿಸಮವಾಗಿರುತ್ತದೆ.[] ಆದರೆ ಸೇಗು ಭಾಗದಲ್ಲಿ ವಿಶೇಷ ರೀತಿಯ ಕಪ್ಪು ಕಪ್ಪಾದ ಚುಕ್ಕೆಗಳು ಅಥವಾ ಗೆರೆಗಳಿವೆ. ಜನಪ್ರಿಯವಾಗಿ ಮಾರ್ಬಲ್ ಮರ (ಡ.ಮರ್ಮೊರೇಟ) ಮತ್ತು ಕಲಮಾಂಡರ್ (ಡ.ಕ್ವಾಸಿಟ) ಎಂದು ಕರೆಯುವ ಮರಗಳ ಸೇಗುಭಾಗ ವಿವಿಧರೀತಿಯ ಮಚ್ಚೆಗಳಿಂದ ಆವೃತವಾಗಿದೆ. (ನೋಡಿ- ಅಬನಾಸಿ)

ಬೆಳವಣಿಗೆ

[ಬದಲಾಯಿಸಿ]

ಎಬನಿಮರಗಳ ಬೆಳೆವಣಿಗೆಯ ಕಾಲದಲ್ಲಿ ಮರದ ಹೊರಭಾಗ (ಸ್ಯಾಪ್‍ವುಡ್) ಕ್ರಮೇಣ, ನಿಧಾನವಾಗಿ, ಒಳಭಾಗದ ಸೇಗು (ಹಾರ್ಟ್‍ವುಡ್) ಆಗಿ ಸ್ಥಿತ್ಯಂತರಗೊಳ್ಳುವುದು. ಈ ರೀತಿಯ ಬದಲಾವಣೆಯಾಗುವಾಗ, ಅಂಗಾಂಶಗಳಲ್ಲಿರುವ ಲಿಗ್ನಿನ್ ಎಂಬ ದಾರುಪದಾರ್ಥ ರಾಸಾಯನಿಕ ದೃಷ್ಟಿಯಿಂದ ಅಲ್ಮಿಕ್ (ಆಮ್ಲ) ವಸ್ತುವಾಗುವುದೆಂದು ತಿಳಿದುಬಂದಿದೆ. ಕೆಲವು ಮರಗಳಲ್ಲಿ ಸೇಗುಭಾಗ ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಎಬನಿ ಮರದ ದಿಮ್ಮಿಗಳಲ್ಲಿ ಸಾಮಾನ್ಯವಾಗಿ ಸೇಗು ಭಾಗ ಗಟ್ಟಿಯಾಗಿಯೂ ಅತಿ ಗಡುಸಾಗಿಯೂ ಇರುತ್ತದೆ. ಮರದ ಭಾಗವನ್ನು ಹದಮಾಡುವುದು ಕಷ್ಟ. ಆದರೂ ಮರದ ಸೇಗುಭಾಗ ದೀರ್ಘಕಾಲ ಬಾಳಿಕೆ ಬರುತ್ತದೆ. ಬಿದ್ದರೆ ಒಡೆದು ಹೋಗುವ, ಸೀಳುವ ಸಂದರ್ಭ ಹೆಚ್ಚು. ಇದಕ್ಕೆ ಅಂದವಾಗಿ ಮೆರಗು ಕೊಡಬಹುದು. ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಎಬನಿ ಮರಗಳ ದಿಮ್ಮಿಯನ್ನು ಅಷ್ಟು ಹೆಚ್ಚಾಗಿ ಉಪಯೋಗಿಸದೇ ಇದ್ದರೂ ಕೆತ್ತನೆಯ ಸಾಮಾನುಗಳನ್ನು ಕೊರೆಯುವುದು. ಪೀಠಾಲಂಕಾರದ ಕೆಲಸ ಮತ್ತು ವಿವಿಧ ಸಂಗೀತೋಪಕರಣಗಳು, ಕೊಡೆಕೋಲುಗಳೂ, ಕೈಕೋಲುಗಳು, ಬ್ರಷ್ಷಿನ ಮೈಭಾಗಗಳು, ಸಂವಾದ ಅಲಮಾರಗಳು ಇತ್ಯಾದಿಗಳನ್ನು ಮಾಡಲು ಹೆಚ್ಚಾಗಿ ಉಪಯೋಗಿಸುತ್ತಾರೆ. ಮರದ ಹೊರಭಾಗ ಸಹ ಅನೇಕ ರೀತಿಯ ಕೆಲಸಗಳಿಗೆ ಉಪಯೋಗವಾಗುತ್ತದೆ. ಇದು ಜೀವಂತ ಮರದಲ್ಲಿ ತಿಳಿಬಣ್ಣವುಳ್ಳದ್ದಾಗಿದ್ದು ಗಾಳಿಗೆ ಬಿಟ್ಟರೆ ಅಥವಾ ಒಣಗಿಸಿದರೆ ಕೆಂಪುಮಿಶ್ರಿತ ಕಂದು ಬಣ್ಣಕ್ಕೆ ತಿರುಗುತ್ತದೆ. ಇದನ್ನು ಸುಲಭವಾಗಿ ಮರಗೆಲಸಗಳಿಗೆ ಉಪಯೋಗಿಸಬಹುದಾದರೂ ಹೆಚ್ಚಿನ ಭಾರ, ಅತಿ ಶೈತ್ಯಾಂಶ ಇತ್ಯಾದಿ ಕಠಿಣ ಪರಿಸ್ಥಿತಿಗಳನ್ನು ಇದು ತಡೆಯಲಾರದು. ಒಟ್ಟಿನಲ್ಲಿ ಕೆಲವು ಪ್ರಭೇದದ ಮರಗಳಲ್ಲಾದರೂ ಈ ಭಾಗ ಬಲವುಳ್ಳದ್ದಾಗಿ, ಗಡುಸಾಗಿ ಧಕ್ಕೆಯನ್ನು ಸಹಿಸಬಲ್ಲದ್ದಾಗಿ ಇರುತ್ತದೆ. ನಾಟ ವ್ಯಾಪಾರೋದ್ಯೋಮದಲ್ಲಿ ಹೆಸರುವಾಸಿಯಾದ ಅನೇಕ ಜಾತಿಗಳಲ್ಲಿ ಎಬನಿ ಮರವೂ ಮುಖ್ಯವಾದದ್ದು.

ಉಪಯೋಗಗಳು

[ಬದಲಾಯಿಸಿ]

ಎಬನಿಯ ಹಲವು ಪ್ರಭೇದಗಳು ತಿನ್ನಲು ಯೋಗ್ಯವಾದ ರಸಭರಿತ ಹಣ್ಣುಗಳನ್ನು ಕೊಡುತ್ತವೆ. ಇವುಗಳಲ್ಲಿ ಡಯಾಸ್ಪೈರಸ್ ಕಾಕಿ ಮುಖ್ಯವಾದದ್ದು. ಇದನ್ನು ಕೆಗ್‍ಫಿಗ್, ಜಪಾನ್ ಪಾರ್ಸಿಮಾನ್, ಕಾಕಿ ಹಣ್ಣು (ಕಾಫಿ ಹಣ್ಣು) ಎಂದು ಮುಂತಾಗಿ ಕರೆಯುತ್ತಾರೆ. ಈ ಹಣ್ಣುಗಳನ್ನು ಜಪಾನ್ ಮತ್ತು ಚೀನದ ಜನ ವಿಶೇಷವಾಗಿ ಉಪಯೋಗಿಸುತ್ತಾರೆ. ಭಾರತದಲ್ಲಿ ಕಾಶ್ಮೀರ, ಕಲ್ಕತ್ತ, ಉದಕಮಂಡಲದ ಕೂನೂರ್, ಬೆಂಗಳೂರು ಇತ್ಯಾದಿ ಸ್ಥಳಗಳಲ್ಲಿ ಇದನ್ನು ಹಣ್ಣುಗಳಿಗಾಗಿ ಬೆಳೆಸುತ್ತಾರೆ. ಬೀಜಗಳನ್ನು ಕಾಫಿಗೆ ಬದಲಾಗಿ ಕೆಲವು ಕಡೆ ಉಪಯೋಗಿಸುತ್ತಾರೆ. ಭಾರತದ ಕಾಡುಗಳಲ್ಲಿ ಬೆಳೆಯುವ ಡ.ಟೊಮೆಂಟೋಸ್ ಮತ್ತು ಡ.ಮೆಲನೋಕ್ಸೈಲಾನ್ ಪ್ರಭೇದಗಳ ಹಣ್ಣುಗಳನ್ನು ತಿನ್ನಲು ಯೋಗ್ಯವಾಗಿದೆ. ಇವುಗಳಲ್ಲದೆ, ಇತ್ತೀಚೆಗೆ ಡ.ಲೋಟಸ್, ಡ.ಡಿಸ್ಕಲರ್, ಇತ್ಯಾದಿ ಪ್ರಭೇದಗಳನ್ನು ಹಣ್ಣಿಗಾಗಿ ಬೆಳೆಯುವ ಯತ್ನ ನಡೆದಿವೆ. ಈ ಹಣ್ಣುಗಳಲ್ಲಿ ಸಾಕಷ್ಟು ಸಕ್ಕರೆ ಅಂಶಗಳಿದ್ದು (ಅಂದರೆ 15%) ಆಮ್ಲೀಯ ಅಂಶಗಳು ಕಡಿಮೆ ಇವೆ. ಟ್ಯಾನಿನ್ ವಸ್ತುಗಳು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿವೆ. ಆದುದರಿಂದಲೇ ಇವು ತಿನ್ನಲು ಸ್ವಲ್ಪ ಒಗರಾಗಿರುವುದಲ್ಲದೇ ಅಂಟಂಟಾಗಿವೆ. ಭಾರತದಲ್ಲಿ ಬೆಳೆಯುವ ಡ. ಎಂಬ್ರಿಯಾಕ್ಟೆರಿಸ್ ಎಂಬ ಪ್ರಭೇದದ ಹಣ್ಣುಗಳಲ್ಲಿ ಶೇ. 50ರಷ್ಟು ಪೆಕ್ಟಿನ್ ವಸ್ತುಗಳಿವೆ. ಈ ವಸ್ತುಗಳನ್ನು ಬಟ್ಟೆಯ ಕಾರ್ಖಾನೆಗಳಲ್ಲಿ ಉಪಯೋಗಿಸುತ್ತಾರೆ.

ಅನೇಕ ಎಬನಿಮರಗಳ ವಿವಿಧ ಭಾಗಗಳಾದ ಹಣ್ಣು, ಬೀಜ, ತೊಗಟೆ, ಟೊಂಗೆ, ಎಲೆ, ಹೂ, ಇತ್ಯಾದಿಗಳನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ಡ.ಮೆಲನೋಕ್ಸೈಲಾನ್ ಮರದ ಚುಕ್ಕೆಯಿಂದ ಕಷಾಯ ತಯಾರಿಸಿ, ಡಯೋರಿಯ ಮತ್ತು ಕಣ್ಣುನೋವುಗಳನ್ನು ಶಮನಗೊಳಿಸಲು ಉಪಯೋಗಿಸುತ್ತಾರೆ. ಒಣಗಿದ ಹೂಗಳನ್ನು ಚರ್ಮರೋಗ, ಮೂತ್ರಪಿಂಡದ ರೋಗ, ರಕ್ತರೋಗ ಇತ್ಯಾದಿಗಳಿಗೆ ಉಪಯೋಗಿಸುತ್ತಾರೆ. ಡ.ಕ್ಯಾಂಡೋಲಿಯಾನ ಮರದ ತೊಗಟೆಯನ್ನು ಸಂದಿವಾತರೋಗ ಮತ್ತು ಹುಣ್ಣುರೋಗಗಳಿಗೆ ಉಪಯೋಗಿಸುತ್ತಾರೆ. ಡ.ಷ್ಯಾನಿಕುಲೇಟ ಮರದ ಹಣ್ಣುಗಳನ್ನು ಸುಟ್ಟಗಾಯಗಳನ್ನು ಮಾಯಿಸಲೂ ರಕ್ತಶುದ್ಧಿಗೂ ಉಪಯೋಗಿಸುತ್ತಾರೆ. ಚಕ್ಕೆಯ ಪುಡಿ ಸಂಧಿವಾತರೋಗಕ್ಕೆ ಒಳ್ಳೆಯದು.

ಆಫ್ರಿಕದಲ್ಲಿ ಬೆಳೆಯುವ ಕೆಲವು ಎಬನಿಮರಗಳ ತೊಗಟೆಯಲ್ಲಿ ವಿಷ ಇರುತ್ತದೆ. ಡ.ಮಸ್ಪಿಲಿಫಾರ್ಮಿಸ್ ಮರದ ತೊಗಟೆ ಅನೇಕ ರೋಗಗಳಿಗೆ ಔಷಧಿಯಾಗಿದೆ. ಎಲೆಗಳ ಕಷಾಯದಿಂದ ಕುಷ್ಠರೋಗ ವಾಸಿಯಾಗುತ್ತದೆ. ಬೇರು ಹುಳು ಕಡ್ಡಿರೋಗಕ್ಕೆ ಒಳ್ಳೆಯದು. ಡ.ಬಟೋಕ್ಯಾನ ಮರದ ಭಾಗಗಳನ್ನು ಹಲ್ಲು ಸ್ವಚ್ಛ ಮಾಡುವುದಕ್ಕೂ ಮತ್ತು ಹಲ್ಲುಗಳಿಗೆ ಬಣ್ಣಕೊಡುವುದಕ್ಕೂ ಉಪಯೋಗಿಸುತ್ತಾರೆ.

ಉಲ್ಲೇಖನಗಳು

[ಬದಲಾಯಿಸಿ]
"https://kn.wikipedia.org/w/index.php?title=ಎಬನಿ_ಮರ&oldid=1158604" ಇಂದ ಪಡೆಯಲ್ಪಟ್ಟಿದೆ