ಎಚ್ ೧.ಎನ್ ೧. ಜ್ವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಚ್ ೧.ಎನ್ ೧. ಇನ್ಫ್ಲುಯೆನ್ಸ ವೈರಸ್
ಹೊಸದಾಗಿ ಗುರುತಿಸಲಾದ ಎಚ್1ಎನ್1 ಜ್ವರದ ವೈರಸ್, ಸಿಡಿಸಿ ಫ್ಲೂ ಪ್ರಯೋಗಾಲಯದಲ್ಲಿ ತೆಗೆದುಕೊಂಡ ಚಿತ್ರ. H1N1 influenza virus

ಹಂದಿ ಜ್ವರ[ಬದಲಾಯಿಸಿ]

ಎಚ್ ೧.ಎನ್ ೧.ಜ್ವರವನ್ನು ಸಾಮಾನ್ಯವಾಗಿ ಹಂದಿ ಜ್ವರ (ಹಂದಿ ಪ್ಲ್ಯೂ -ಸ್ವೈನ್ ಪ್ಲ್‍ಯೂ) ಎಂದು ಕರೆಯುತ್ತಾರೆ. ಈ ಜ್ವರವು ಒಂದರಿಂದ ಮೂರು ದಿನಗಳ ಕಾಲ ಉಲ್ಬಣಾವಸ್ಥೆಯಲ್ಲಿದ್ದು ನಂತರ ಉಪಶಮನವಾಗುತ್ತದೆ. 7-8 ದಿನಗಳಲ್ಲಿ ಮನುಷ್ಯ ಮಾಮೂಲಿಯಾಗುತ್ತಾನೆ. ಇದೊಂದು ವಾಯುಗಾಮಿ ರೋಗ. ವಾಯುಗಾಮಿ ರೋಗ ಎಂದರೆ ಗಾಳಿಯ ಮೂಲಕ ಹರಡುವ ರೋಗ. ಉಸಿರಾಟದ ತುಂತುರು ಹನಿಗಳ ಮೂಲಕ ಇವು ಹರಡುತ್ತವೆ.

ಹರಡುವ ವಿವರ[ಬದಲಾಯಿಸಿ]

  • ಆದರೆ ಇದರಲ್ಲೊಂದು ಸಮಸ್ಯೆಯಿದೆ - ಇದು ಬಹು ಬೇಗನೇ ಜ್ವರ ಪೀಡಿತನಿಂದ ಮತ್ತೊಬ್ಬರಿಗೆ ಹಬ್ಬುತ್ತದೆ. ಜ್ವರ ಪೀಡಿತ ರೋಗಿಯು ಕೆಮ್ಮುವುದರಿಂದ, ಸೀನುವುದರಿಂದ ರೋಗಾಣುಗಳನ್ನು ಗಾಳಿಗೆ ಬಿಡುತ್ತಾನೆ. ಅದು ಸುತ್ತಲಿನ ಪರಿಸರದಲ್ಲಿ ಜಮೆಯಾಗಬಹುದು -ಗಾಳಿ, ಟೀಪಾಯಿ, ಲೋಟ, ಪೇಪರ್ರು, ಫೋನ್ ಸೆಟ್ಟು, ಬಾಗಿಲುಗಳು ಹೀಗೆ ಎಲ್ಲೆಡೆ ಹರಡುವುದು. ಆ ಪರಿಸರದಲ್ಲಿ ಮತ್ತೊಬ್ಬರು ಉಸಿರಾಡುವುದರಿಂದ ಈ ರೋಗಾಣುವು ಅವರ ದೇಹವನ್ನೂ ಪ್ರವೇಶಿಸಿ ಜ್ವರ ಪೀಡಿತರನ್ನಾಗಿ ಮಾಡುತ್ತದೆ. ರೋಗಿಯ ದೇಹದಿಂದ ಹೊರಬಿದ್ದ ರೋಗಾಣುವು ಪರಿಸರದಲ್ಲಿ ಸುಮಾರು ಎರಡು ಘಂಟೆಗಳ ಕಾಲ ಜೀವಿಸಬಲ್ಲದು, ಅಷ್ಟರಲ್ಲಿ ಯಾರ ದೇಹವನ್ನಾದರೂ ಅದು ಹೊಕ್ಕರೆ ಅದಕ್ಕೆ ಪನರ್ಜನ್ಮ ಬಂದು ಬೇಗ ಲಕ್ಷ - ಲಕ್ಷ ಸಂಕ್ಯಾವೃದ್ಧಿ ಹೊಂದುತ್ತದೆ.

ರೋಗ ಲಕ್ಷಣಗಳು[ಬದಲಾಯಿಸಿ]

ಹಂದಿ ಜ್ವರದ ಮುಖ್ಯ ಲಕ್ಷಣಗಳು
  1. ಜ್ವರ
  2. ಭೇಧಿ
  3. ಶೀತ
  4. ನೋಯುತ್ತಿರುವ ಗಂಟಲು
  5. ತಲೆನೋವು
  6. ದೇಹದ ನೋವು ಮತ್ತು ಬಳಲಿಕೆ.
  7. ಇತರ ಜ್ವರ ಲಕ್ಷಣಗಳು ಕೆಮ್ಮು ಮತ್ತು ವಾಂತಿ

ಜ್ವರದ ಅವಧಿ[ಬದಲಾಯಿಸಿ]

  • ಸಾಮಾನ್ಯವಾಗಿ ಈ ಲಕ್ಷಣಗಳು ಸೋಂಕು ತಗುಲಿದ ಮೂರರಿಂದ ಐದು ದಿನಗಳ ನಂತರ ಅಭಿವೃದ್ಧಿಗೊಳ್ಳುತ್ತವೆ. ವಯಸ್ಕ ರೋಗಿಗಳು ಸುಮಾರು ರೋಗ ಬಂದಾಗಿನಿಂದ ಸುಮಾರು ಏಳು-ಎಂಟುದಿನಗಳು ಮತ್ತು ಮಕ್ಕಳು ಸುಮಾರು 10 ದಿನಗಳು ಈ ರೋಗವನ್ನು ಇತರರಿಗೆ ಹರಡಬಲ್ಲರು. ರೋಗಿಗಳು ಶಾಲಾ, ಕಾಲೇಜು, ಕಚೇರಿಗಳಿಂದ ಕನಿಷ್ಠ ಏಳು ದಿನಗಳ ಕಾಲ ದೂರವುಳಿದರೇನೆ ಒಳ್ಳೆಯದು. ಇದು ರೋಗ ಮತ್ತೆ ಹಲವರಿಗೆ ಹರಡದಂತೆ ತಡೆಯುವಲ್ಲಿ ಸಹಕಾರಿ.
  • ಈ ಹಂದಿ ಜ್ವರ ಕಾಲನಿಯತಿಯ (ಸೀಜನಲ್) ರೋಗ. ವೈರಾಣುವಿನ ಪ್ರಸರಣಕ್ಕೆ ತಂಪು ವಾತಾವರಣ ಮತ್ತು ಹವೆ ಅತ್ಯಂತ ಪ್ರಶಸ್ತ್ಯ. ಮಳೆ, ಚಳಿಗಳು ಸಮ್ಮಿಳಿತವಾಗಿ ಒಳ್ಳೆ ತಂಪು ಹವೆ ಇದ್ದಾಗ ಈ ವೈರಾಣುಗಳು ಹರಡುವುದು. ಮಳೆಗಾಲದಲ್ಲಿ ಹೆಚ್ಚು. ಬೇಸಿಗೆಯಲ್ಲಿ ವೈರಾಣು (ವೈರಸ್ಸ್) ಸತ್ತು ಹೋಗುತ್ತದೆ. ಈ ರೋಗ ಮಾರಣಾಂತಿಕವೂ ಅಲ್ಲ, ಶಾಶ್ವತವೂ ಅಲ್ಲ.[೧]

ಹರಡುವ ಬಗೆ ಮತ್ತು ಜ್ವರ[ಬದಲಾಯಿಸಿ]

  • ಮೊದಲಿಗೆ ಈ ವೈರಾಣು ನಮ್ಮ ಮೂಗು ಅಥವಾ ಬಾಯಿಯಿಂದ ದೇಹದ ಒಳ ಪ್ರವೇಶಿಸುತ್ತದೆ. ಮೊದಲಿಗೆ ಅದು ದಾಳಿ ಮಾಡುವುದೇ ಶ್ವಾಸಕೋಶವನ್ನು. ಈ ವೈರಾಣು ರಕ್ತದಲ್ಲಿ ಅದರ ಸಂತಾನಾಭಿವೃದ್ಧಿ ಮಾಡುತ್ತದೆ. ಹಂದಿ ಜ್ವರದ ಲಕ್ಷಣಗಳು ಸಾಧಾರಣವಾಗಿ ಇತರ ಜ್ವರ ಅಥವಾ ಇನ್‍ಫ್ಲುಎನ್ಜಾ ಜ್ವರಗಳಂತೆಯೇ ಇರುತ್ತವೆ. ತೀವ್ರ ಅಥವಾ ಸಾಧಾರಣ ತಾಪಮಾನದ ಜ್ವರ, ಕೈ-ಕಾಲು ನೋವು, ಗಂಟಲು ನೋವು, ತಲೆನೋವು, ಸುಸ್ತು, ಕೀಲು ನೋವು, ಕಟ್ಟಿದ ಮೂಗು ಅಥವಾ ಮೂಗಿನ ಸೋರುವಿಕೆ. ಹಂದಿ ಜ್ವರದ ಮುಖ್ಯ ಲಕ್ಷಣವೆಂದರೆ ಉಸಿರಾಟದ ತೊಂದರೆ. ಈ ರೋಗ ಲಕ್ಷಣಗಳನ್ನು ಮೊಳಕೆಯಲ್ಲೇ ಗುರುತಿಸಿ ಚಿಕಿತ್ಸೆ ತೆಗೆದುಕೊಂಡರೆ ಯಾವುದೇ ಸಮಸ್ಯೆಯಿರುವುದಿಲ್ಲ. ಇವುಗಳನ್ನು ನಿರ್ಲಕ್ಷಿಸಿದರೆ, ಈ ಲಕ್ಷಣಗಳು ಉಲ್ಬಣಾವಸ್ಥೆಗೆ ಹೋಗಿ ಸಾವಿನಲ್ಲಿ ಅಂತ್ಯಗೊಳ್ಳುತ್ತದೆ. ಈಗ ದೇಶದಲ್ಲಿ ನಡೆಯುತ್ತಿರುವ ಸಾವಿನ ಪ್ರಕರಣಗಳೆಲ್ಲವೂ ಇಂಥವೇ.

ರೋಗಕಾರಕ ಜೀವಿ[ಬದಲಾಯಿಸಿ]

  • ಎಚ್ ೧.ಎನ್ ೧. ಇನ್ಫ್ಲುಯೆನ್ಸ ವೈರಸ್ಗಳಿಂದ ಎಚ್ ೧.ಎನ್ ೧. ಜ್ವರ ಬರುತ್ತದೆ.
  • ಸಮಸ್ಯೆಯೆಂದರೆ ಹಂದಿ ಜ್ವರವಲ್ಲದೇ ಬೇರೆ ಇನ್ನಿತರ ಅನೇಕ ಜ್ವರಗಳು ಚಾಲ್ತಿಯಲ್ಲಿರುವುದು. ಇದೇ ರೀತಿಯ ಲಕ್ಷಣಗಳನ್ನು ಹೊಂದಿರುವ ರೋಗಗಳು ಡೆಂಗ್ಯೂ, ಚಿಕನ್ ಗುನ್ಯಾ. ಆದ್ದರಿಂದ ಈ ಲಕ್ಷಣಗಳು ಕಂಡು ಬಂದ ತಕ್ಷಣವೇ ಇದು ಹಂದಿ ಜ್ವರ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅದು ಡೆಂಗ್ಯೂ ಆಗಿರಬಹುದು, ಇಲ್ಲ ಗುನ್ಯಾ ಕೂಡ ಆಗಿರಬಹುದು, ಇಲ್ಲ ಸಾಮಾನ್ಯ ಜ್ವರವೇ ಆಗಿರಬಹುದು. ಯಾವುದಕ್ಕೂ ಈ ಲಕ್ಷಣಗಳ ಸುಳಿವು ಕಂಡಕೂಡಲೇ ವೈದ್ಯರ ಬಳಿ ತೆರಳಿ ಪರೀಕ್ಷಿಸಿಕೊಳ್ಳುವುದು ಒಳಿತು.[೨]

ತಪಾಸಣೆ[ಬದಲಾಯಿಸಿ]

  • ಹಂದಿ ಜ್ವರ ತಪಾಸಣೆಯನ್ನು ಎಲ್ಲ ವೈದ್ಯರೂ ಮಾಡಲಾಗುವುದಿಲ್ಲ. ಅದರ ಪತ್ತೆಗೆಂದೇ ಒಂದು ಪ್ರತ್ಯೇಕ ಕಿಟ್ ಬರುತ್ತದೆ. ಅದನ್ನು ಕೇಂದ್ರ ಸರ್ಕಾರವೇ ಪೂರೈಸುತ್ತದೆ. ಈ ಕಿಟ್ಗಳನ್ನು ಸದ್ಯ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಮೊದಲಿಗೆ ಸರ್ಕಾರವು ಜ್ವರ ಲಕ್ಷಣಗಳು ಕಂಡಾಕ್ಷಣ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಬೇಕು, ಕಾರಣ ಖಾಸಗಿ ಆಸ್ಪತ್ರೆಗಳಲ್ಲಿ ಇದರ ತಪಾಸಣೆ ಮತ್ತು ಚಿಕಿತ್ಸೆಯ ಸೌಲಭ್ಯಗಳಿಲ್ಲ ಎಂದು ಘೋಷಿಸಿತು. ಆದರೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಈ ಸೌಲಭ್ಯವಿಲ್ಲ. ಕೆಲವೇ ಕೆಲವು ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಮಾತ್ರ ಈ ಸೌಲಭ್ಯವಿದೆ. ಇಡೀ ಕರ್ನಾಟಕಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿವಿ ಒಂದೇ ಇತ್ತು. ಹಾಗಾಗಿ ಅಲ್ಲಿ ನೂಕುನುಗ್ಗಲು ಮತ್ತು ಗೊಂದಲಗಳಿಗೆ ಕಾರಣವಾಗಿತ್ತು. ಇದರಿಂದ ಎಚ್ಚೆತ್ತ ಕೇಂದ್ರ ಆರೋಗ್ಯ ಸಚಿವಾಲಯ ಖಾಸಗಿ ಆಸ್ಪತ್ರೆಗಳೂ ಇನ್ನು ಮುಂದೆ ಹಂದಿ ಜ್ವರ ಪೀಡಿತರ ತಪಾಸಣೆ ಮತ್ತು ಚಿಕಿತ್ಸೆ ಮಾಡುತ್ತವೆ ಎಂದು ಘೋಷಿಸಿದೆ. ಎಲ್ಲೋ ಕೆಲ ಆಸ್ಪತ್ರೆಗಳು ಮಾತ್ರ ಈಗ ಈ ಸೇವೆಯನ್ನು ಪ್ರಾರಂಭಿಸಿದೆ. ೨೦೧೭ರ ಹೊತ್ತಿಗೂ ಇದು ಸ್ವಲ್ಪ ಗೊಂದಲಮಯ.

ತಪಾಸಣೆ ಕ್ರಮ[ಬದಲಾಯಿಸಿ]

  • ತಪಾಸಣೆಗೆ, ಸೋಂಕಿನ ಶಂಕೆಯಿರುವವರ ಮೂಗಿನ ಸ್ರಾವ, ಉಗುಳು ಅಥವಾ ಉಸಿರಾಟದ ಅಂಗಗಳಿಂದ ಹೊರತೆಗೆಯುವ ಮಾದರಿಯನ್ನು ಪರೀಕ್ಷೆಗೊಳಪಡಿಸಿ ಅದು ಹಂದಿ ಜ್ವರವೋ ಅಲ್ಲವೋ ಎಂಬುದನ್ನು ಹೇಳುತ್ತಾರೆ. ಜ್ವರ ಪೀಡಿತರು ಅಂತ ಗೊತ್ತಾದರೆ ಅವರ ಮನೆಯವರು ಸುತ್ತಲಿನವರು ಮುಂಜಾಗ್ರತೆ ತೆಗೆದುಕೊಳ್ಳಬೇಕು.

ಮುಂಜಾಗ್ರ್ರತೆಗಳು[ಬದಲಾಯಿಸಿ]

  • ಈ ಇನ್ಫ್ಲುಯೆನ್ಸ ವೈರಸ್ ಸೋಂಕಿಗೊಳಗಾಗುವ ಸಾಧ್ಯತೆಗಳನ್ನು ತಡೆಗಟ್ಟಲು ಅಥವಾ ಕಡಿಮೆ ಮಾಡಲು ಲಸಿಕೆ ಉತ್ತಮ ಮಾರ್ಗವಾಗಿದೆ.
  • ಮೊದಲಿಗೆ ಮೂಗು ಮತ್ತು ಬಾಯಿಗೆ ಅಡ್ಡವಾಗಿ ಒಂದು ಬಾಯಿಮುಸುಕನ್ನು (ಮಾಸ್ಕ್) ಹಾಕಿಕೊಳ್ಳುವುದೊಳಿತು. ಇದು ರೋಗ ಬೇರೆಯವರಿಗೆ ಹರಡದಂತೆ ತಡೆಯುತ್ತದೆ. ರೋಗಿಗಳ ಜೊತೆ ಹತ್ತಿರದಲ್ಲೇ ಓಡಾಡುವವರೂ ಕೂಡ ಇಂಥದೊಂದು ಮಾಸ್ಕನ್ನು ಹಾಕಿಕೊಳ್ಳುವುದು ಒಳಿತು. ಈ ಮಾಸ್ಕು ಎಲ್ಲ ಔಷಧೀ ಅಂಗಡಿಗಳಲ್ಲೂ ಸಿಗುತ್ತದೆ. ರೋಗಿಗಳು ಸದಾ ಕಾಲ ಬೆಚ್ಚನೆಯ ಬಟ್ಟೆ ಧರಿಸಿದ್ದರೆ ಒಳ್ಳೆಯದು. ಇನ್ನು ಹೆಚ್ಚುಹೆಚ್ಚು ಬಿಸಿನೀರನ್ನು ಸೇವಿಸುವುದು ಕೂಡ ಒಳ್ಳೆಯದು. ರೋಗಿ ಬಳಸಿದ ಊಟದ ತಟ್ಟೆ, ಲೋಟ...ಇತ್ಯಾದಿ ಸಾಮಾನುಗಳು ಮತ್ತು ತೊಟ್ಟ ಬಟ್ಟೆಯ ನಿರ್ವಹಣೆ ಸರಿಯಾಗಿರಬೇಕು. ಅವನ್ನು ಮುಟ್ಟಿದ ನಂತರ ಬಿಸಿನೀರಿನಲ್ಲಿ ಕೈತೊಳೆಯುವುದು ಉತ್ತಮ. (ಕಾರ್ಬಾಲಿಕ್) ಸೋಪು ತಿಕ್ಕಿ ಬಿಸಿನೀರಿನಲ್ಲಿ ಕೈತೊಳೆಯುವುದು ಸೂಕ್ತ. ವಿಶೇಷವಾಗಿ ಮಕ್ಕಳನ್ನು ರೋಗಿಗಳಿಂದ ದೂರವುಳಿಸುವುದು ಶ್ರೇಯಸ್ಕರ. ಈ ರೋಗವು ಮುಖ್ಯವಾಗಿ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ವಯಸ್ಸಾದವರಿಗೆ ಬಹುಬೇಗನೇ ಹರಡುತ್ತದೆ.ಆದ್ದರಿಂದ ಅವರ ವಿಷಯದಲ್ಲಿ ಹೆಚ್ಚಿನ ಕಾಳಜಿ ಅಗತ್ಯ.ಕ್ಲೋರೀನ್ ಉಪಯೋಗಿಸಿ ಕೈ ತೊಳೆಯುವುದು, ಶುಚಿಮಾಡುವುದು ಕ್ಷೇಮ. [೩]

ಚಿಕಿತ್ಸೆ[ಬದಲಾಯಿಸಿ]

  • ಇನ್ಫ್ಲುಯೆನ್ಸ ವೈರಸ್ ಸೋಂಕಿಗೊಳಗಾಗುವ ಸಾಧ್ಯತೆಗಳನ್ನು ತಡೆಗಟ್ಟಲು ಅಥವಾ ಕಡಿಮೆ ಮಾಡಲು ಲಸಿಕೆ ಉತ್ತಮ ಮಾರ್ಗವಾಗಿದೆ. ಎರಡು ಆಂಟಿವೈರಸ್ ಏಜೆಂಟ್‍ಗಳಾದ, ಝನಮಿವಿರ್ (ರೆಲೆಂಜಾ) ಮತ್ತು ಒಸೆಲ್ಟಮಿವಿರ್ (ಟ್ಯಾಮಿಫ್ಲೂ) ರೋಗಲಕ್ಷಣಗಳು ಕಂಡ ೪೮ ಗಂಟೆಗಳ ಒಳಗೆ ತೆಗೆದುಕೊಂಡರೆ ಹಂದಿ ಜ್ವರ ಪರಿಣಾಮಗಳನ್ನು ತಡೆಯಲು ಅಥವಾ ಕಡಿಮೆ ಮಾಡಲು ಸಹಾಯಕಾರಿಯಾಗಿದೆ.(Antivirals : oseltamivir or zanamivir) [೪]
  • ಹಂದಿ ಜ್ವರಕ್ಕೆ ಚಿಕಿತ್ಸೆಗೆ ಮೇಲೆ ತಿಳಿಸಿದಂತೆ ಟ್ಯಾಮಿಫ್ಲೂ ಅನ್ನೋ ಮಾತ್ರೆಯನ್ನು ವೈದ್ಯರು ಇದಕ್ಕೆ ಕೊಡುತ್ತಾರೆ. ಇದನ್ನು ಒಸೆಲ್ಟಾಮಿವಿರ್ ಎಂದೂ ಕರೆಯುತ್ತಾರೆ. ಆದರೆ ಇದರ ರೀಟೇಲ್ ಮಾರಾಟವನ್ನು ಸರ್ಕಾರ ನಿಷೇಧಿಸಿದೆ. ಇದರ ಸಮಸ್ಯೆಯೆಂದರೆ ಇದನ್ನು ಸಾಧಾರಣ ಜ್ವರಗಳಿಗೆ ತೆಗದುಕೊಂಡುಬಿಟ್ಟರೆ, ನಂತರ ಹಂದಿ ಜ್ವರ ಬಂದರೂ ಇದು ಕೆಲಸ ಮಾಡುವುದಿಲ್ಲ. ದೇಹ ಇದಕಲ್ಕನುಗುಣವಾಗಿ ಅಷ್ಟರಲ್ಲಿ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡುಬಿಟ್ಟಿರುತ್ತದೆ. ಈ ಮಾತ್ರೆಯನ್ನು ಹಂದಿ ಜ್ವರ ಖಚಿತವಾದ ಮೇಲೆ ವೈದ್ಯರೇ ಸೂಚಿಸುತ್ತಾರೆ. ಆಗಲೇ ತೆಗೆದುಕೊಳ್ಳಬೇಕು. ಭಯ ಪಡುವ ಅಗತ್ಯವಿಲ್ಲ ಹಂದಿ ಜ್ವರ ಮತ್ತೊಂದು ರೀತಿಯ ಸಾಮಾನ್ಯ ಜ್ವರ ಅಷ್ಟೆ,
  • ಅದು ರೋಗ ನಿರೋಧಕ ಶಕ್ತಿಯನ್ನು ನಾಶಮಾಡಿ ಸಾವಿಗೆ ದೂಡುವ ಏಡ್ಸನಂತೆ ಅಲ್ಲ, ಲಿವರನ್ನು ನಾಶಪಡಿಸುವ ಹ್ಯಪಟೈಟಿಸ್ ಬಿ, ಅಲ್ಲ, ಅದೊಂದು ಸಾಮಾನ್ಯ ಜ್ವರ. ಆತಂಕ ಬೇಡ ಆದರೆ ಎಚ್ಚರವಿರಲಿ.[೫]

೨೦೧೭ರಲ್ಲಿ ಸೋಂಕು ಪ್ರಕರಣ[ಬದಲಾಯಿಸಿ]

  • 8 Feb, 2017;
  • ಮಣಿಪಾಲದ ರೋಗಾಣು ಸಂಶೋಧನಾ ಕೇಂದ್ರದಿಂದ ಮಂಗಳವಾರ ಬಂದ ವೈದ್ಯಕೀಯ ವರದಿಯಲ್ಲಿ ಕರ್ನಾಟಕದ ತೀರ್ಥಹಳ್ಳಿ ತಾಲೂಕಿನಲ್ಲಿ ಹೊಸದಾಗಿ ಹತ್ತು ಜನರಲ್ಲಿ ಎಚ್‌೧ಎನ್‌೧ ರೋಗಾಣು ಇರುವುದು ದೃಢಪಟ್ಟಿದೆ. ಇದುವರೆಗೆ ವಿವಿಧ ಆ ಭಾಗದ ೩೬ ಜನರಲ್ಲಿ ಈ ರೋಗಾಣು ಇರುವುದು ಕಂಡುಬಂದಿದೆ. ಆಗುಂಬೆ, ಅರಳಸುಳಿ, ಮಾಳೂರು ಭಾಗದಲ್ಲಿ ಈ ರೋಗ ಹೆಚ್ಚು ಕಾಣಿಸಿಕೊಂಡಿದೆ. ಅದೇ ತಾಲ್ಲೂಕಿನ ಹೊನ್ನೆತಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾರಳಿಯ ನಾಗೇಶ್‌ ಅವರು ಇದೇ 4ರಂದು ಎಚ್‌1ಎನ್‌1 ಕಾಯಿಲೆಯಿಂದ ಮೃತಪಟ್ಟಿದ್ದಾರೆ.[೬]

ಜಗತ್ತಿನಲ್ಲಿ ಇದಕ್ಕೆ ಬಲಿಯಾದವರು[ಬದಲಾಯಿಸಿ]

  • ಸಂಶೋಧಕರು ೨೦೦೯ ಎಚ್1ಎನ್1 ಜಾಗತಿಕ ಸೋಂಕು ಆರಂಬವಾದ ನಂತರ ದರ ಶೇ.೨೧ರ ಬದಲು ಹಿಂದೆ ಊಹಿಸಿದ್ದಕ್ಕಿಂತಲೂ ಕಡಿಮೆ ಅಂದಾಜು ಶೇ.೧೧ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಆದಾಗ್ಯೂ, ೨೦೧೨ ಸಂಶೋಧನೆ ಮೂಲಕ ಒಟ್ಟು ೫೭೯.000 ಜನರು ರೋಗದಿಂದ ಮೃತಪಟ್ಟರು ಎಂದು ಒಂದು ಸಂಶೋದನೆ ತೋರಿಸಿದೆ. ಈ ಸಾವುಗಳು ಹೆಚ್ಚಾಗಿ ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದಲ್ಲಿ ಸಂಭವಿಸಿದೆ. ಅಂದಾಜು ೨೮೪.೫00 ಕ್ಕೂ ಹೆಚ್ಚು ಜನರು ಆರಂಭಿಕ ರೋಗದಲ್ಲಿ ಮೃತಪಟ್ಟರು ಮತ್ತು ಆರೋಗ್ಯ ಸೌಲಭ್ಯಗಳ ಲಭ್ಯತೆ ಇಲ್ಲದೆ ಆ ಅನೇಕ ಸಾವುಗಳು ಲೆಕ್ಕಕ್ಕೆ ಸೇರಿಲ್ಲ ಎಂದು ತಜ್ಞರು ಸೇರಿದಂತೆ ವರದಿಗಾರರು ಒಪ್ಪಿಕೊಂಡಿದ್ದಾರೆ. [೭]
  • ಆಗಸ್ಟ್ 2010 10 ರಂದು WHO ವಿನ ಮಹಾನಿರ್ದೇಶಕರಾದ ಮಾರ್ಗರೇಟ್ ಚಾನ್, ಎಚ್1ಎನ್1 ಸಾಂಕ್ರಾಮಿಕದ ಅಂತ್ಯವಾಗಿದೆ ಎಂದು, [22] ಘೋಷಿಸಿದ್ದರು ಮತ್ತು H1N1 ಫ್ಲೂ ಕ್ರಿಯೆಯನ್ನು ಸಾಂಕ್ರಾಮಿಕ-ಗತಕಾಲದ ಅವಧಿಗೆ ವರ್ಗಾಯಿಸಲಾಗಿದೆ ಎಂದು ಘೋಷಿಸಿತ್ತು. ಆದರೆ ಇತ್ತೀಚಿನ WHO ಅಂಕಿಅಂಶಗಳ ಪ್ರಕಾರ ಏಪ್ರಿಲ್ 2009 ರಲ್ಲಿ ಕಾಣಿಸಿಕೊಂಡ ವೈರಸ್ (2010 ರ)ನಂತರ, 18,000 ಹೆಚ್ಚು ಜನರ ಸಾವಿಗೆ ಕಾರಣವಾಗಿದೆ.[೮]


ನೋಡಿ[ಬದಲಾಯಿಸಿ]


ಉಲ್ಲೇಖಗಳು[ಬದಲಾಯಿಸಿ]

  1. Diseases and Conditions;Swine flu (H1N1 flu)
  2. Geographic Dependence, Surveillance, and Origins of the 2009 Influenza A (H1N1) Virus
  3. "Chlorine Bleach: Helping to Manage the Flu Risk". Archived from the original on 2009-06-07. Retrieved 2017-02-11.
  4. New mothers urged to get swine flu vaccine;10 January 2011
  5. ಹಂದಿ ಜ್ವರ - ಜಗತ್ತೇ ಜ್ವರ ಪೀಡಿತ!
  6. "ತೀರ್ಥಹಳ್ಳಿ : 36 ಜನರಿಗೆ ಎಚ್‌1ಎನ್‌1 ಸೋಂಕು;ಪ್ರಜಾವಾಣಿ ವಾರ್ತೆ;8 Feb, 2017". Archived from the original on 2017-02-07. Retrieved 2017-02-12.
  7. Swine flu killed 250,000 - 15 TIMES the number of people reported, claims international studyBy Tom Goodenough;PUBLISHED: 13:08 GMT, 26 June 2012 ;27 June 2012
  8. "Influenza updates". Archived from the original on 2016-12-10. Retrieved 2017-02-12.

ಉಲ್ಲೇಖ[ಬದಲಾಯಿಸಿ]