ಋತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೈದಿಕ ಧರ್ಮದಲ್ಲಿ, ಋತ ("ಸರಿಯಾಗಿ ಸೇರಿದ್ದು; ನಿಯಮಬದ್ಧತೆ, ವಿಧಿ; ಸತ್ಯ") ಬ್ರಹ್ಮಾಂಡದ ಕಾರ್ಯಾಚರಣೆ ಮತ್ತು ಅದರಲ್ಲಿನ ಎಲ್ಲದ್ದನ್ನು ನಿಯಂತ್ರಿಸುವ ಮತ್ತು ಸಂಘಟಿಸುವ ನೈಸರ್ಗಿಕ ಕ್ರಮದ ತತ್ವ. ವೇದಗಳ ಶ್ಲೋಕಗಳಲ್ಲಿ, ಋತವನ್ನು ಅಂತಿಮವಾಗಿ ನೈಸರ್ಗಿಕ, ನೈತಿಕ ಮತ್ತು ತ್ಯಾಗದ ವ್ಯವಸ್ಥೆಗಳ ಸರಿಯಾದ ಕಾರ್ಯನಿರ್ವಹಣೆಗೆ ಜವಾಬ್ದಾರವಾದಂಥದ್ದು ಎಂದು ವಿವರಿಸಲಾಗಿದೆ. ಪರಿಕಲ್ಪನಾತ್ಮಕವಾಗಿ, ಅದು ಅದನ್ನು ಎತ್ತಿಹಿಡಿಯುತ್ತದೆಂದು ಭಾವಿಸಲಾದ, ಒಟ್ಟಾಗಿ ಧರ್ಮವೆಂದು ಕರೆಯಲಾಗುವ ತಡೆಯಾಜ್ಞೆಗಳು ಮತ್ತು ಕಟ್ಟಲೆಗಳು, ಮತ್ತು ಕರ್ಮವೆಂದು ಕರೆಯಲಾಗುವ ಆ ಕಟ್ಟಲೆಗಳ ಸಂಬಂಧವಾಗಿ ವ್ಯಕ್ತಿಯ ಕ್ರಿಯೆಗೆ ನಿಕಟವಾಗಿ ಜೊತೆಗೂಡಿದೆ – ಈ ಎರಡೂ ಪದಗಳು ಪ್ರಾಮುಖ್ಯದಲ್ಲಿ ಅಂತಿಮವಾಗಿ ಋತವನ್ನು ಪ್ರಭಾವಹೀನವಾಗಿಸಿದವು ಮತ್ತು ನಂತರದ ಹಿಂದೂ ಧರ್ಮದಲ್ಲಿ ನೈಸರ್ಗಿಕ, ಧಾರ್ಮಿಕ ಹಾಗು ನೈತಿಕ ವ್ಯವಸ್ಥೆಯನ್ನು ಸೂಚಿಸಿದವು.

ಋತ ಎಂದರೇನು[ಬದಲಾಯಿಸಿ]

ಋತವೆಂದರೆ ವಿಶ್ವನಿಯಮ, ವಿಶ್ವಕ್ರಮ ಮತ್ತು ನಿತ್ಯಸತ್ಯ. ವಿಶ್ವದ ಸಕಲ ವ್ಯಾಪಾರಗಳೂ ಒಂದು ಕ್ರಮಕ್ಕೆ, ನಿಯಮಕ್ಕೆ ಅಧೀನವಾಗಿವೆ. ಪ್ರಜ್ಞಾ ಚಕ್ಷುಸ್ಸಿಗೆ ಈ ಕ್ರಮದಲ್ಲಿ ಒಂದು ಲಯಬದ್ಧತೆ, ಒಂದು ಸೌಂದರ್ಯ ಗೋಚರವಾಗುತ್ತದೆ. ಈ ಲಯಬದ್ಧವಾದ ಸುಂದರವಾದ ವಿಶ್ವವ್ಯಾಪಾರಕ್ಕೆ ಪ್ರೇರಕವಾದ ಮೂಲ ಶಕ್ತಿಯೂ ಋತವೇ. ಆ ಮೂಲಶಕ್ತಿಯ ಅಭಿವ್ಯಕ್ತಿಯೇ ಪ್ರಕಾಶವೇ ಈ ಚರಾಚರ ಜಗತ್ತು. ಹೀಗೆ ಅಭಿವ್ಯಕ್ತವಾದ ಈ ಜಗತ್ತು ಋತಶಕ್ತಿಯ ಮತ್ತೊಂದು ರೂಪವಷ್ಟೇ. ಋತವೇ ಸತ್ಯ. ಸತ್ಯವೆಂದರೂ ಶಾಶ್ವತವಾದ ಅನಂತಸ್ಥಾಯಿಯಾದ ತತ್ತ್ವವೆಂದರ್ಥ. ಸತ್ಯವೆಂದರೆ ಅನಿತ್ಯಾತ್ಮಕವಾದ ಜಗತ್ತನ್ನೊಳಗೊಂಡ ನಿತ್ಯಾತ್ಮಕ ತತ್ತ್ವ ಎಂದು ಉಪನಿಷತ್ತು ಹೇಳುತ್ತದೆ.

ಋತದ ಸ್ವರೂಪ[ಬದಲಾಯಿಸಿ]

ಆದುದರಿಂದ ಋತದ ಸ್ವರೂಪ ಎರಡು ವಿಧ. ಒಂದು-ವ್ಯತ್ಯಾಸವನ್ನು ಹೊಂದುವ ಜಗದ್‍ವ್ಯವಹಾರಗಳ ನಡುವೆ ವ್ಯತ್ಯಾಸವನ್ನು ಹೊಂದದೆ ಸ್ಥಾವರವೂ ನಿತ್ಯನಿಯಾಮಕವೂ ಆಗಿರುವ ಆದಿಶಕ್ತಿ. ಎರಡನೆಯದಾಗಿ-ಜಗತ್ತನ್ನೆಲ್ಲ ವ್ಯಾಪಿಸಿಕೊಂಡು ಕಾಲದೇಶಗಳ ನಿಯಮವನ್ನು ಪಾಲಿಸುವ ವ್ಯಾವಹಾರಿಕ ಶಕ್ತಿ. ಎಂದರೆ ವಿಶ್ವದಲ್ಲಿ ಯಾವ ಯಾವ ವ್ಯವಹಾರಗಳು ನಡೆಯುವುವೋ ಅವೆಲ್ಲವೂ ಋತದ ನಿಯಮವನ್ನೇ ಅನುಸರಿಸುತ್ತಿವೆಯೆಂದರ್ಥ.

ಋತದ ಶಕ್ತಿ[ಬದಲಾಯಿಸಿ]

ಋತದ ಸಹಾಯದಿಂದಲೆ ಇಂದ್ರ, ವರುಣ, ಆದಿತ್ಯ, ಅಗ್ನಿಮಿತ್ರ ಮುಂತಾದ ದಿವ್ಯಶಕ್ತಿಗಳಿಗೆ ಸ್ಫೂರ್ತಿ ದೊರಕುವುದು; ಅನಂತವೂ ಗಭೀರವೂ ಆದ ದ್ಯಾವಾ ಪೃಥಿವಿಗಳ ಅಸ್ತಿತ್ವ ಮತ್ತು ವಿಸ್ತøತಿಗೆ ಋತವೇ ಆಧಾರ; ಸಕಲ ಲೋಕಗಳೂ ಅವುಗಳ ಸಕಲ ವ್ಯಾಪಾರಗಳೂ ಋತಕ್ಕೆ ಅಧೀನವಾಗಿ ಅವುಗಳೆಲ್ಲ ಋತದಲ್ಲಿ ಅಂತರ್ಗತವಾಗಿವೆ; ಋತದ ಶಕ್ತಿ ಅಕ್ಷಯವಾದದ್ದು ಮತ್ತು ಅಕುಂಠಿತವಾದದ್ದು ಎಂದು ಶ್ರುತಿ ವರ್ಣಿಸುತ್ತದೆ. ಅಲ್ಲಿಗೆ ಋತಶಕ್ತಿಗೂ ಪರಂಜ್ಯೋತಿ ತತ್ತ್ವವಾದ ಪರಬ್ರಹ್ಮಕ್ಕೂ ತಾದಾತ್ಮ್ಯವನ್ನು-ಐಕ್ಯವನ್ನು-ಸ್ಥಾಪಿಸುತ್ತದೆಯೆಂದು ತೈತ್ತಿರೀಯ ಉಪನಿಷತ್ತು ತಿಳಿಸುತ್ತದೆ.

ಋತದ ಪಾಲನೆ ಯಜ್ಞದಿಂದ, ವಿಶ್ವವೆಲ್ಲ ಯಜ್ಞಮಯ. ಈ ವೈಶ್ವೀಯಜ್ಞ ಪಾಲನೆ, ಪೋಷಣೆ ಋತಗೋಪರಾದ ದೈವೀಶಕ್ತಿಗಳ ಮತ್ತು ಮಾನವರ ಅನ್ಯೋನ್ಯ ಭಾವನೆಯಿಂದ. ಅನ್ಯೋನ್ಯ ಭಾವಯನ್ತಃ ಶ್ರೇಯಃ ಪರಂ ಅವಾಪ್ಸ್ಯಥ ಎಂದು ಗೀತೆ ಬೋಧಿಸುತ್ತದೆ.

ಇವನ್ನೂ ನೋಡಿ[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಋತ&oldid=817168" ಇಂದ ಪಡೆಯಲ್ಪಟ್ಟಿದೆ