ಉಭಯ ವೇದಾಂತ
ಉಭಯ ವೇದಾಂತ: ವೇದಾಂತದರ್ಶನದ ಸಮಗ್ರ ಸ್ವರೂಪವನ್ನು ತಿಳಿಯಲು ಸಂಸ್ಕೃತದಲ್ಲಿರುವ ಉಪನಿಷತ್ತುಗಳು, ಬ್ರಹ್ಮಸೂತ್ರ ಮತ್ತು ಗೀತೆಯೊಡನೆ, ದ್ರಾವಿಡ ಪ್ರಬಂಧಗಳ ಅನುಭವವಾಣಿಯನ್ನೂ ಸೇರಿಸಿಕೊಳ್ಳಬೇಕು ಎಂದು ವಾದಿಸಿ ಈ ದ್ವಿಮುಖವಾದ ಅನ್ಯೋನ್ಯ ಪೋಷಕ ಸಾಹಿತ್ಯರಾಶಿಗೆ ಉಭಯ ವೇದಾಂತವೆಂಬ ಪಾರಿಭಾಷಿಕ ನಿರ್ದೇಶವನ್ನು ಕೊಡಲಾಗಿದೆ.
ವೇದಾಂತವನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ರಾಮಾನುಜಾಚಾರ್ಯರು ನಿರೂಪಿಸಿದ್ದಾರೆ. ಅವರು ಸಂಸ್ಕೃತ ಆಧಾರಗಳಿಂದ ಒದಗಿಬಂದ ಈ ದರ್ಶನ ಸಂಪ್ರದಾಯ ದೊಡನೆ ದ್ರಾವಿಡದೇಶದಲ್ಲಿ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದ್ದ, ಆಳ್ವಾರುಗಳೆಂಬ ಭಕ್ತ ಪರಂಪರೆಯ, ಕೃತಿಗಳಾದ ದಿವ್ಯ ಪ್ರಬಂಧವನ್ನೂ ಸಂಯೋಜನೆ ಮಾಡುತ್ತಾರೆ. ಈ ಪ್ರಬಂಧಗಳು ವೇದ-ವೇದಾಂತದ ತಮಿಳು ಪರಿವರ್ತನೆಯೆಂದು ಶ್ರೀವೈಷ್ಣವ ಸಂಪ್ರದಾಯ ಪರಿಗಣಿಸುತ್ತದೆ. ಕೆಲವು ವೇಳೆ ಸಂಸ್ಕೃತ ಪ್ರಮಾಣಗಳ ಮೂಲಕ ನಿರ್ಣೀತವಾದ ವಿಷಯಗಳೂ ದ್ರಾವಿಡ ವೇದಗಳಲ್ಲಿ ಖಚಿತಗೊಳ್ಳುವುವೆಂದು ವೇದಾಂತದೇಶಿಕರೇ ಮೊದಲಾದ ಪ್ರಧಾನ ಸಾಧಕರು ಅಭಿಪ್ರಾಯಪಡುತ್ತಾರೆ. ಈ ಪ್ರಬಂಧಗಳಿಗೆ ವಿಪುಲವಾದ ಭಾಷ್ಯಗಳು ಬೆಳೆದಿವೆ. ಇವಕ್ಕೆ ಸಾಮೂಹಿಕ ಭಗವದ್ವಿಷಯ ಎಂದು ಹೆಸರು ಬಂದಿದೆ.
ಉಭಯ ವೇದಾಂತ ಸಂಪ್ರದಾಯದ ಅಂತಿಮ ತಾತ್ಪರ್ಯ ಒಂದೇ ಆದರೂ ಪ್ರತಿಪಾದನೆ ಮಾತ್ರ ಸಂಸ್ಕೃತ ವೇದಾಂತ ಮತ್ತು ದ್ರಾವಿಡವೇದಾಂತ ಇವೆರಡರ ಆಧಾರದಿಂದಲೂ ನಡೆಯುತ್ತದೆ ಎಂಬುದು ಇಲ್ಲಿನ ವಿಶೇಷ.