ಉತ್ತರದೇವಿ

ವಿಕಿಪೀಡಿಯ ಇಂದ
Jump to navigation Jump to search

ಉತ್ತರದೇವಿ: ಕನ್ನಡ ಜನಪದ ಕಥನಗೀತೆಗಳಲ್ಲೊಂದು. ಬೀಸುವಾಗ, ಹೊಲಗಳಲ್ಲಿ ಕಳೆ ಕೀಳುವಾಗ, ನಾಟಿ ಹಾಕುವಾಗ, ಹೀಗೆ ಇತರ ಹಲವಾರು ಸಂದರ್ಭಗಳಲ್ಲಿ ಹಾಡುವ ಚಿಕ್ಕ ಹಾಡುಗಬ್ಬಗಳಲ್ಲಿ ಇದು ಬಹಳ ಮುಖ್ಯವಾದದ್ದು. ಇಂಥ ಹಾಡುಗಳನ್ನು ಪುರುಷರಿಗಿಂತ ಸ್ತ್ರೀಯರೇ ಹೆಚ್ಚು ಸಂಖ್ಯೆಯಲ್ಲಿ ಹಾಡುತ್ತಾರೆ. ವಾದ್ಯವಿಶೇಷಗಳೊಡನೆ ಹಾಡುವ ವೃತ್ತಿಗಾಯಕರ ಕಥನಗೀತಗಳು ವ್ಯಾಪ್ತಿಯಲ್ಲಿ ದೊಡ್ಡವು; ಇಡೀ ರಾತ್ರಿ ಹಾಡಬಹುದಾದಂಥವು. ಪಿರಿಯಾಪಟ್ಟಣದ ಲಾವಣಿ, ಸಾರಂಗಧರನ ಕಥೆ, ಘನಪತಿರಾಯನ ಕಥೆ, ಕರಿರಾಯನ ಕಥೆ ಇವು ವಿಸ್ತಾರವಾದ ಜನಪದ ಖಂಡಕಾವ್ಯಗಳು. ಇವಕ್ಕಿಂತ ಅಡಕವಾಗಿ, ಭಾವಗರ್ಭಿತವಾಗಿ ಒಂದೋ ಎರಡೋ ಘಟನೆಗಳ ಆಧಾರದ ಮೇಲೆ ರಚಿತವಾದ ಅನೇಕ ಕಥನಗೀತೆಗಳು ಹಳ್ಳಿಯ ಗರತಿಯರ ಬಾಯಲ್ಲಿ ಪರಂಪರಾನುಗತವಾಗಿ ಉಳಿದು ಬಂದಿವೆ. ಸುದೀರ್ಘವಾದ ಕಥನಗೀತೆಗಳನ್ನು ಸ್ತ್ರೀಯರೂ ವಿಶೇಷವಾದ ಸಂದರ್ಭಗಳಲ್ಲಿ ಹಾಡುತ್ತಾರೆ. ಗುಣಸಾಗರಿ, ಕಾಳಿಂಗರಾಯ, ಅಣಜಿ ಹೊನ್ನಮ್ಮ ಇಂಥವೂ ಕಥನಗೀತೆಗಳೇ. ಆದರೆ ಉತ್ತರದೇವಿಯ ಕಥೆ ಗಾತ್ರದಿಂದಲೂ ಉದ್ದೇಶ ಮತ್ತು ಬಳಕೆಯ ದೃಷ್ಟಿಯಿಂದಲೂ ಇವೆಲ್ಲಕ್ಕಿಂತ ಬೇರೆಯದಾಗಿದೆ. ಹೆಣ್ಣುಮಕ್ಕಳ ಗೀತೆ, ಕಥನಗೀತೆಗಳಲ್ಲಿ ವಿಷಯದ ಗಾಂಭೀರ್ಯ ಗಮನಾರ್ಹವಾದದ್ದು. ಗರತಿ ಬಹಳಮಟ್ಟಿಗೆ ತನ್ನ ದಿನನಿತ್ಯದ ಸಮಸ್ಯೆಗಳನ್ನೇ ತನ್ನ ಹಾಡುಗಳಲ್ಲೂ ತೋಡಿಕೊಂಡಿ ದ್ದಾಳೆ. ತಾನು, ತನ್ನ ಕುಟುಂಬ, ತನ್ನ ತೌರು, ತನ್ನ ದೈವ, ಪತಿ, ತ್ಯಾಗ ಬಲಿದಾನಗಳಿಂದ ಪುಣ್ಯಸ್ಮರಣೀಯರಾದ ವ್ಯಕ್ತಿಗಳು, ಕಷ್ಟನಷ್ಟಗಳಿಗೊಳಗಾಗಿ ಅಸುವನ್ನೀಗಿದ ನತದೃಷ್ಣ ಹೆಣ್ಣು ಮಕ್ಕಳು-ಇಂಥ ವಸ್ತುವಿನ್ಯಾಸದ ಹಿನ್ನೆಲೆಯಲ್ಲಿಯೇ ಅವರ ಸಾಹಿತ್ಯ ಮೈದುಂಬಿಕೊಂಡಿರುತ್ತದೆ. ಇದು ಅವರದೇ ಹಾಡು; ಅಥವಾ ಅವರಂತೆಯೇ ನೋವನ್ನುಂಡ ಅಸಹಾಯಕ ಜೀವಿಗಳ ಹಾಡು. ಇಂಥ ಅಸಹಾಯಕ ಜೀವಿಗಳ ಸಾಲಿಗೆ ಸೇರಿದ ಉತ್ತರದೇವಿ, ಈರೋಬಿ, ನಾಗವ್ವ, ಹುಳಿಯೂರು ಕೆಂಚಮ್ಮ, ಹಿರಿದಿಮ್ಮವ್ವ ಮುಂತಾದ ಅಪೂರ್ವ ತ್ಯಾಗಪೂರ್ಣ ಸ್ತ್ರೀರತ್ನಗಳನ್ನು ಕುರಿತ ಕಥೆಗಳು ಕನ್ನಡ ಜನಪದ ಸಾಹಿತ್ಯ ಭಂಡಾರದಲ್ಲಿ ಅಪಾರವಾಗಿವೆ. ಉತ್ತರದೇವಿಯ ಕಥೆ ಕರ್ನಾಟಕದಲ್ಲಿ ಎಲ್ಲ ಕಡೆಗಳಲ್ಲೂ ದೊರೆಯುತ್ತದೆ. 1933ರ ವೇಳೆಗೇ ಅರ್ಚಕ ಬಿ. ರಂಗಸ್ವಾಮಿಯವರು ತಮ್ಮ “ಹುಟ್ಟಿದ ಹಳ್ಳಿ ಹಳ್ಳಿಯ ಹಾಡು” ಎಂಬ ಸುಂದರ ಜಾನಪದ ಗ್ರಂಥದಲ್ಲಿ ಉತ್ತರ ದೇವಿಯ ಕಥೆಯನ್ನು ಸಂಗ್ರಹಿಸಿ ಅದರ ಬಗ್ಗೆ ಹೀಗೆ ಬರೆದಿದ್ದಾರೆ: ಉತ್ತರೆಗೂ ಅತ್ತೆಗೂ ಸರಿಬೀಳಲಿಲ್ಲ. ಆದ್ದರಿಂದ ಅತ್ತೆ ತನ್ನ ಮಗನನ್ನು ತನ್ನ ಕಡೆಗೆ ಒಲಿಸಿಕೊಂಡು ಸೊಸೆಯನ್ನು ಮನೆಬಿಟ್ಟು ಹೊರಡಿಸಿದಳು. ಉತ್ತರೆ ಗಂಡನ ಮನೆಯನ್ನು ಬಲು ಕಷ್ಟದಿಂದ ಬಿಟ್ಟು ತನ್ನ ಎಳೆಯ ಮಕ್ಕಳನ್ನು ಕಟ್ಟಿಕೊಂಡು ತಂದೆಯ ಮನೆಗೆ ಹೊರಟಳು. ಹೋಗುವ ದಾರಿಯಲ್ಲಿ ಅನೇಕರು ಅವಳನ್ನು ಅಡ್ಡಕಟ್ಟಿ ತಮ್ಮವಳನ್ನಾಗಿ ಮಾಡಿಕೊಳ್ಳಬೇಕೆಂಬ ಆಶೆಗಳನ್ನು ತೋರಿಸಿದರು. ಉತ್ತರೆ ಅವುಗಳೆಲ್ಲಕ್ಕೂ ಬಲಿಯಾಗದೆ ತನ್ನ ನಿಜವೊಂದನ್ನೇ ನಂಬಿಕೊಂಡು ತಂದೆಯ ಮನೆಗೆ ಬಂದಳು. ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ, ಅಜ್ಜಿ, ಅಜ್ಜ ಒಬ್ಬರೂ ಅವಳಿಗೆ ಇರಲು ಆಶ್ರಯ ಕೊಡಲಿಲ್ಲ. ಕೊನೆಗೆ ಅಜ್ಜಿ ಅತಿ ದುಃಖದಿಂದ ಹೇಳಿದ ಮಾತನ್ನೇ ಗತಿಯೆಂದು ನಂಬಿ ಹೋಗಿ ಹಂಪೆಯ ಹೊಳೆಯಲ್ಲಿ ಬಿದ್ದು ಮಕ್ಕಳ ಸಹಿತ ಪ್ರಾಣತ್ಯಾಗ ಮಾಡಿದಳು. ಈ ತಾಯಿ ಮಕ್ಕಳೇ ಆ ಹೊಳೆಯ ನಾಲ್ಕು ಕವಲುಗಳೆಂದು ಜನರ ನಂಬಿಕೆ. ಅರ್ಚಕ ರಂಗಸ್ವಾಮಿಯವರು ಗದ್ಯದಲ್ಲಿ ಕಥಾ ಪರಿಚಯ ಮಾಡಿಕೊಟ್ಟು ಪದ್ಯರೂಪದ ಕಥನಗೀತೆಯನ್ನೂ ನೀಡಿದ್ದಾರೆ. ಈ ಕಥಾಸ್ವರೂಪವೇ ಈವರೆಗೆ ಸಂಗ್ರಹಿತವಾಗಿರುವ ಹದಿನೈದಕ್ಕೂ ಹೆಚ್ಚು ರೂಪಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳೊಡನೆ ಉಳಿದು ಬಂದಿದೆ. ಮತಿಘಟ್ಟ ಕೃಷ್ಣಮೂರ್ತಿ, ಕರೀಂಖಾನ್, ಕರಾಕೃ, ಜೀ.ಶಂ. ಪರಮಶಿವಯ್ಯ. ಕೆ.ವಿ. ಲಿಂಗಪ್ಪ. ಎಲ್. ಆರ್. ಹೆಗಡೆ. ಡಿ. ಲಿಂಗಯ್ಯ, ಚಂದ್ರಶೇಖರ ಐತಾಳ, ಕಾಳೇಗೌಡ, ನಾಗವಾರ, ಕೆ. ನಾರಾಯಣ. ಎ.ಎನ್. ಲಕ್ಷ್ಮೀ ನಾರಾಯಣ ಹಾಗೂ ಅನೇಕ ಸಂಗ್ರಾಹಕರು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿನ ಈ ಕಥನ ಗೀತೆಯನ್ನು ಗುರುತಿಸಿ ಸಂಗ್ರಹಿಸಿದ್ದಾರೆ. ಕೆಲವು ಪ್ರಕಟವಾಗಿವೆ. ಪ್ರಕಟಿತ ರೂಪಗಳಲ್ಲಿ ಮುಖ್ಯವಾದವನ್ನು ಆಧರಿಸಿ ದೇ. ಜವರೇಗೌಡರು ಕನ್ನಡದಲ್ಲಿ ಉತ್ತರ ದೇವಿಯ ಕಥೆಯ ಒಂದು ವಿವೇಚನೆಯನ್ನು ನಡೆಸಿದ್ದಾರೆ. ಈ ಕಥನಗೀತೆಯ ವಸ್ತುವನ್ನು ಕುರಿತು ಅವರು ಹೀಗೆ ಹೇಳಿದ್ದಾರೆ: ಜನಪದ ಸಾಹಿತ್ಯವೆಲ್ಲ ಒಂದರ್ಥದಲ್ಲಿ ಸಂಸಾರ ಸಂಹಿತೆಯೆಂದು ಕರೆಯಬಹುದು. ಅದರಲ್ಲಿ ಮೈಗೊಂಡಿರುವ ವಿಷಯ ಭಾವಾಲೋಚನೆಗಳೆಲ್ಲ ಹಳ್ಳಿಯ ಒಗತನಕ್ಕೆ ಸಂಭವಿಸಿದುವು. ಆ ಒಗತನದ ಸುಖದುಃಖಗಳಿಗೆ ಕಾರಣವಾದ ವ್ಯಕ್ತಿಗಳೂ ಅವರ ಕ್ರಿಯೆ ಪ್ರತಿಕ್ರಿಯೆಗಳೂ ಆ ಸಾಹಿತ್ಯದಲ್ಲಿ ಕಂಡುಬರುವ ಪ್ರಧಾನ ವಿಷಯ...ಅದು ನೆಲದಿಂದ ದೂರವಾದ, ಕೈಗೆಟುಕದ, ಕಲ್ಪನೆಗೆ ಸಿಗದ ಇಂದ್ರ ನಂದನವಲ್ಲ; ಅದರಲ್ಲಿ ನೆಲದ ಸೊಗಡು ಮೂಗಿಗಡರುತ್ತದೆ; ಅದು ಮುಷ್ಟಿಗ್ರಾಹ್ಯವೆನ್ನುವಷ್ಟರಮಟ್ಟಿಗೆ ಮೂರ್ತಿಮತ್ತಾಗಿದೆ. ಆ ಬದುಕು ಪರಿಮಿತವಾದ ವ್ಯಾಪ್ತಿಯುಳ್ಳದ್ದಾದರೂ ಅದರಲ್ಲಿ ಏಳುಬೀಳುಗಳಿವೆ, ಕೋಪತಾಪಗಳಿವೆ, ಸುಖದುಃಖಗಳಿವೆ. ಕಷ್ಟಕ್ಲೇಶಗಳಿವೆ. ಅದನ್ನು ಕಹಿಗೊಳಿಸುವ ಮುಖ್ಯ ಸಂಗತಿಗಳಲ್ಲಿ ಅತ್ತೆ ಸೊಸೆಯರ ಕಲಹ ವೊಂದು. ಈ ಕಲಹವಿಲ್ಲದ ಸಂಸಾರಗಳು ವಿರಳ. ಅತ್ತೆಯ ಅಟ್ಟಹಾಸ, ಸೊಸೆಯ ಗೋಳು ಜಾನಪದ ಸಾಹಿತ್ಯದಲ್ಲಿ ಸಾಕಷ್ಟು ಮೂಡಿದ್ದರೂ ಎಲ್ಲ ಸೊಸೆಯರಿಗೆ ಪ್ರಾತಿನಿಧಿಕವೆಂಬಂತೆ ಉತ್ತರದೇವಿಯ ಕಥೆ ಮಾತ್ರ ಕರ್ಣಾಟಕದಲ್ಲೆಲ್ಲ ಪ್ರಚಲಿತವಾಗಿದೆ. ದೇ. ಜವರೇಗೌಡರು ಉತ್ತರದೇವಿಗೆ ಸಂಬಂಧಿಸಿದ ಕಥೆಗಳನ್ನು ಉತ್ತರ, ಮಧ್ಯ ಮತ್ತು ದಕ್ಷಿಣ ಸಂಪ್ರದಾಯಗಳೆಂದು ವಿಂಗಡಿಸಿಕೊಂಡು ಅವುಗಳಲ್ಲಿ ಅತ್ಯುತ್ತಮ ಕಥೆ ಯಾವುದು ಎಂದು ನಿರ್ಧರಿಸಿದ್ದಾರೆ. ಈ ಎಲ್ಲ ಕಥೆಗಳ ಆಧಾರದ ಮೇಲೆ ಉತ್ತರದೇವಿಯ ಮೂಲಕಥೆಯನ್ನು ಕಟ್ಟಲು ಐತಿಹಾಸಿಕ ಭೌಗೋಳಿಕ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಇದು ಅಪಾರ ಸಂಖ್ಯೆಯ ಪಾಠಗಳು ಲಭ್ಯವಾದಾಗ ಮಾತ್ರ ಸಾಧ್ಯ. ಈಗ ದೊರೆತಷ್ಟೆ ಕಥೆಗಳ ಹಿನ್ನೆಲೆಯಲ್ಲಿ ಅದನ್ನು ಪರಿಶೀಲಿಸಬಹುದು. ಅತ್ತೆ ಸೊಸೆಯರ ಜಗಳ ಯಾವ ಕಾಲಕ್ಕೂ ತಪ್ಪಿದ್ದಲ್ಲ. ಈ ಸಮಸ್ಯೆ ಹಿಂದೂ ಇಂದೂ ಮುಂದೂ ಇದ್ದದ್ದೇ, ಇರುವುದೇ. ಆದ್ದರಿಂದ ಈ ಕಥೆ ನಾಡಿನ ಸ್ತ್ರೀ ಹೃದಯದಲ್ಲಿ ಸ್ಥಿರವಾಗಿ ನಿಂತಿದೆ. ಪ್ರತಿಯೊಬ್ಬ ಸೊಸೆಯೂ ತನ್ನ ಅತ್ತೆಯಿಂದ ದೊರೆಯಬಹುದಾದ ಕಿರುಕುಳಕ್ಕೆ ಕಣ್ಣೀರು ಮಿಡಿಯುವಾಗ ಉತ್ತರದೇವಿಯನ್ನು ನೆನೆಯದಿರಳು. ಅವಳ ಬದುಕಿನೊಡನೆ ತನ್ನ ಬದುಕನ್ನು ಹೋಲಿಸ ದಿರಳು. ಉತ್ತರದೇವಿಯ ಕಡುಕಷ್ಟವನ್ನು ಸ್ಮರಿಸಿಕೊಂಡಾಗ ತನ್ನ ಕಷ್ಟ ಅಲ್ಪವೆನಿಸಬಹುದು. ಏನೋ ನೆಮ್ಮದಿ ಶಾಂತಿ ದೊರೆಯಬಹುದು. ಅಸಹಾಯಕಳಾದ ಉತ್ತರದೇವಿ ಎಲ್ಲರಿಂದಲೂ ನಿರ್ಲಕ್ಷಿತಳಾಗಿ ಹರಿಸಿದ ಕಣ್ಣೀರು ಅನಂತವಾದದ್ದು. ಅವಳ ಗೋಳು ಮುಗಿಲನ್ನೂ ತಟ್ಟಿದಿಲ್ಲ. ಆಶ್ವಯುಜ ಮಾಸದಲ್ಲಿ ಅನಿರೀಕ್ಷಿತವಾಗಿ ಅಪಾರ ಮಳೆಯಾಗುವುದುಂಟು. ಕೆರೆಕಟ್ಟೆಗಳೊಡೆದು, ನದಿಗಳು ಉಕ್ಕಿ ಹರಿಯುತ್ತವೆ. ಭೂಮಿ ತಾಯಿ ಸುಯ್ಯೋ ಎಂದು ನಿಟ್ಟುಸಿರು ಬಿಡುತ್ತಾಳೆ. ಉತ್ತರದೇವಿಯ ಅಂತ್ಯಕ್ಕೂ ಉತ್ತರೆ ಮಳೆಯ ನೈಸರ್ಗಿಕ ಕ್ರಿಯೆಗೂ ಸಂಬಂಧ ಏರ್ಪಟ್ಟಿರು ವುದು ಇಂಥ ಸಾಂಕೇತಿಕ ಹಿನ್ನೆಲೆಯಲ್ಲಿಯೇ ಇರಬೇಕು. ಉತ್ತರದೇವಿಯ ಕಥೆಯನ್ನು ಹಾಡುವಾಗ ಕೆಲವು ಕಡೆ ಸುಯ್ಯೋ ಎಂಬ ಪಲ್ಲವಿಯನ್ನು ಸೇರಿಸಿಕೊಂಡಿರುತ್ತಾರೆ. ಈವರೆಗೆ ಲಭ್ಯವಾಗಿರುವ ಉತ್ತರದೇವಿಯ ಹಾಡ್ಗತೆಗಳಲ್ಲಿ, ಆರಂಭ ಹಾಗೂ ಅಂತ್ಯ ಎರಡರಲ್ಲೂ ಅಸ್ಪಷ್ಟತೆಯಿದೆ. ನಡುವಿನ ಕಥಾಸೂತ್ರವೂ ಅಲ್ಲಲ್ಲಿ ಕಡಿದು ಬೀಳುತ್ತದೆ. ಯಾವುದೇ ಒಂದು ಕೃತಿಯನ್ನು ಆಧರಿಸಿ ಇದೇ ಕಥೆಯೆಂದು ಸ್ಪಷ್ಟವಾಗಿ ಹೇಳುವುದು ಕಷ್ಟವಾಗುತ್ತದೆ. ಮಲೆನಾಡಿನ ವಿಭಿನ್ನ ರಚನೆಗಳನ್ನು ಬಿಟ್ಟರೆ ಉಳಿದ ಹತ್ತು ಪಾಠಗಳನ್ನು ಪರೀಕ್ಷಿಸಿ ಸ್ಥೂಲವಾಗಿ ಮೂಲಕಥೆಯನ್ನು ಕಲ್ಪಿಸಿಕೊಳ್ಳಬಹುದು. ಕಥೆಯಲ್ಲಿ ಏರುಪೇರುಗಳಿದ್ದರೂ ಆದಿ ಅಂತ್ಯಗಳಲ್ಲಿ ಕ್ಲಿಷ್ಟತೆ ಕಂಡರೂ ಕಥೆಯ ಉದ್ದಕ್ಕೂ ಹರಿಯುವ ಒಂದು ರೀತಿಯ ಶೋಕದ ಧ್ವನಿ ಎಲ್ಲ ಕಥೆಗಳ ಅಂತಸ್ಸತ್ವವಾಗಿದೆ. ಹೃದಯವನ್ನು ಹಿಂಡುವಂಥದಾಗಿದೆ. ಉತ್ತರದೇವಿ ಇದ್ದ ನಾಡು ಸುಖಸಂಪತ್ತಿನ ಆಗರ. ಆಲೂರು ಬೇಲೂರು ಕುಣಿಗಲುಗಳನ್ನು ಒಳಗೊಳ್ಳುವ ನೆಲೆ. ಸುವ್ವಿ ಆಲೂರು ಸುವ್ವಿ ಬೇಲೂರು ಸುವ್ವಿ ಶಂಕುರನ ಕುಣಿಗ್ಯಲ-ಏರಿಮೇಲೆ ಕಂಚಿನ ಕಹಳೆ ನುಡಿದ್ಯವು ಕಂಚಿನ ಕಹಳೆ ನುಡಿದು ಬಿಟ್ಟಿತ್ತಾವು ಬಿಚ್ಚಿ ಮಾತ್ಯಾವೊ ಬಿಳಿಯೆಲೆ ಒತ್ತಿನಲಿ ಕತ್ತರಿಸಿ ಮಾರ್ಯಾವೊ ಕಳಿಯಡಕೆ ಕತ್ತರಿಸಿ ಮಾರ್ಯಾವೊ ಕಳಿಯಡಕೆ ಒತ್ತಿನಲಿ ಬೇಸಿ ಮಾರ್ಯಾವೊ ಕೆನಿಸುಣ್ಣ (ಜೀಶಂಪ: ಜಾನಪದ ಖಂಡ ಕಾವ್ಯಗಳು) ಒಮ್ಮೆ ಉತ್ತರದೇವಿ ಬಾವಿಯಿಂದ ನೀರು ತರಲು ಹೊರಟಳು. ಅತ್ತೆಯನ್ನು ಕೇಳಿದಳು- ನೀರಿಗೋಯ್ತಿನತ್ತೆ ನಿಜಗಲ್ಲದುರುಗಕೆ ತಡವಾದರತ್ತೆ ಬೈಬೇಡ (ಡಿ. ಲಿಂಗಯ್ಯ: ಅಪ್ರಕಟಿತ ಹಸ್ತಪ್ರತಿ) ಆದರೆ ಮರಳುವುದು ತಡವಾಯಿತು. ಬಾವಿಯ ಬಳಿ ಆಗಂತುಕನೊಬ್ಬನ ಕೈಗೆ ಸಿಕ್ಕಿ ಪಾರಾಗಿ ಬರುವುದು ಕಷ್ಟವೇ ಆಯಿತು. ಆ ಆಗಂತುಕ ಬಲವಂತಪಡಿಸಿದ್ದ. ಅರಗಳಗಿ ನೀರ ಮೊಗೆಯೋಳೆ ಉತ್ತರದೇವಿ ಬಾಯಾರಿಕೆಗೆ ನೀರ ಕೊಡು ಬಾರೆಹಿ ಉದಕ ಕೊಡುವೋಕೆ ಪದಕ ನಾ ತೊಡಲಿಲ್ಲ ಹೋಗಯ್ಯ ಹರಿಯೋ ಜಲಧೀಗೆಹಿ (ಕರಾಕೃ: ಜನಪದ ಕಥನಗೀತೆಗಳು) ಇತ್ತ ಅತ್ತೆಯ ಆತಂಕ ಹೆಚ್ಚಿತು- ಉತ್ತರದೇವಿ ನೀರಿಗ್ಹೋಗಿ ಮತ್ಯಾಕೆ ಬರಲಿಲ್ಲ ! ಉತ್ತರದೇಶದ ಮಳೆ ಹೂದು | ಅತ್ತೆಮ್ಮ ಕೆರೆ ತುಂಬಿ ನೀರು ತಿಳಿತ್ಯವೆ (ಕೆ. ನಾರಾಯಣ, ಎ. ಎನ್. ಲಕ್ಷ್ಮಿನಾರಾಯಣ: ಆಪ್ತರ ಹಿತಸಾಹಿತ್ಯ) ಉತ್ತರದೇವಿಯ ಮಾತು ನಂಬಲಾಗಲಿಲ್ಲ, ಅತ್ತೆಗೆ, ಸಿಡಿಮಿಡಿಗೊಂಡಳು. ಉತ್ತರೆÀ ಮತ್ತೆ ನಡುಗುತ್ತ ಉತ್ತರವಿತ್ತಳು. ನೀರಿಗ್ಹೋದೇವು ನಿಜಗಲ್ಲದುರುಗಕೆ ತಡವಾದರತ್ತೆ ಬೈಬೇಡಿ ! ಪಟ್ಟಣದ ಗಿಣಿ ಬಂದು ನೀರ ಕಲಕಿದೆ ಕಲಕಿದರೆ ಕಲಕಲಿ ನೆರಿಯಾಕೆ ಕಲಕ್ಯಾವ ಮಾವಯ್ನ ತ್ವಾಟದ ಮರಗನ | ಕುಯ್ಯೋಕ್ಹೋಗಿ ಬಾಳೆಯ ಮುಳ್ಳು ಸೆಣೆದವು (ನಾಗವಾರ ಕಾಳೇಗೌಡ: ಅಪ್ರಕಟಿತ ಪ್ರತಿ) ಅತ್ತೆಗೂ ಸೊಸೆಗೂ ಈ ಕಾರಣಕ್ಕಾಗಿ ಜಗಳ ಹತ್ತಿತು. ಬಾಳೆಗೆ ಮುಳ್ಳುಂಟು ಎಂದ ಸೊಸೆಯ ಶೀಲದ ಬಗ್ಗೆ ಅತ್ತೆಗೆ ಶಂಕೆ. ತಾನು ಶುದ್ಧವಾಗಿದ್ದರೂ ರಾಚುತ್ತಿರುವ ಅತ್ತೆಯ ಬಗ್ಗೆ ಇನ್ನಿಲ್ಲದ ಕೋಪ ಸೊಸೆಗೆ. ಅತ್ತೆಗೂ ಸೊಸೆಗೂ ಹತ್ತಿತು ಕಾಳಗ ಅತ್ತೆಸೊಸೇರು ಒತ್ತಿ ಜಗಳಾಡಿದರು (ಕರೀಂಖಾನ್: ಜನಪದ ಗೀತೆ) ಉತ್ತರದೇವಿಯ ಕಥೆಯ ಆರಂಭ, ಅತ್ತೆ ಸೊಸೆಯರ ಜಗಳದ ಮೂಲ, ಇಲ್ಲಿ ಸ್ಪಷ್ಟವಾಗುತ್ತದೆ. ಉತ್ತು ಬಂದ ಮಗನಿಗೆ ತಾಯಿ ದೂರನ್ನು ಹೇಳುತ್ತಾಳೆ. ಉತ್ತುರು ದೇವೆಂಬೊ ಸೊಸೆ ಬೇಡ-ಬಿಟ್ಟು ಬಿಡವಳ ಬಸವೀಯಹಿ ಎಂದು ಒತ್ತಾಯಪಡಿಸುತ್ತಾಳೆ. ಉತ್ತರೆಯ ಪತಿ ಒಪ್ಪಲಿಲ್ಲ. ಆದರೂ ತಾಯ ಒತ್ತಾಯಕ್ಕೆ ಮೌನ ಧರಿಸುತ್ತಾನೆ. ಬೇರೊಂದು ಹೆಣ್ಣನ್ನು ತಂದು ಲಗ್ನಮಾಡುವ ಭರವಸೆಯನ್ನು ತಾಯಿ ನೀಡುತ್ತಾಳೆ. ಉತ್ತರೆ ತನ್ನ ಮಕ್ಕಳೊಡನೆ, ಒಡವೆ ವಸ್ತುಗಳೊಡನೆ ಬೆಳ್ಳಿಚುಕ್ಕಿಯ ಬೆಳಕಿನಲ್ಲಿ ತೌರಿಗೆ ಹೊರಡುವ ಸನ್ನಿವೇಶ ಕರುಣಾಜನಕವಾದದ್ದು. ಅಟ್ಟದ ಮೇಲಿನ ಕುಂಬಳವನ್ನು ಅಟ್ಟುಂಡು ಹೋಗಲಿ, ಪೆಟ್ಟಿಗೆಯಲ್ಲಿರುವ ಪಟ್ಟೆ ಸೀರೆಯನ್ನು ಉಟ್ಟಾದರು ಹೋಗಲಿ ಎಂದು ಅತ್ತೆ ಹಂಗಿಸುತ್ತಾಳೆ. ಉತ್ತರೆಯ ದುಃಖ ಉಕ್ಕಿ ಬಂತು. ಕುಂಬಳವನ್ನು ನೀನಾದರು ಉಣ್ಣು, ನಿನ್ನ ಮಗನಿಗಾದರೂ ಇಕ್ಕು ಎನ್ನುತ್ತಾಳೆ. ಅದನ್ನು ಮುಂದೆ ಬರುವ ಸೊಸೆಗೆ ಮಡಗಿಕ್ಕು ಎನ್ನುತ್ತಾಳೆ. ತಾನು ಹಾಕಿ ಬೆಳೆಸಿದ ಅಡಕೆ, ಬಾಳೆ ಎಲ್ಲವೂ ಉರಿದು ಹೋಗುವಂತೆ ಶಾಪ ಹಾಕುತ್ತಾಳೆ. ಒಂದನೆತ್ತಿಕೊಂಡು ಕಂದನ ಕೈಲ್ಹಿಡಕೊಂಡು ಗೆಜ್ಜೆ ಒಜ್ಜುರನ ನಡೆಸೂತ-ಉತ್ತರದೇವಿ ಹೋದಳು ತೌರ ಹಾದಿಗೊಂಡು. ದಾರಿಯಲ್ಲಿ ತಿಪ್ಪುರಗೌಡ ತಡೆದು ತನ್ನ ಮನೆಯಲ್ಲಿ ಇರು ಬಾರೆ ಎಂದು ಕರೆಯುತ್ತಾನೆ. ಎಲ್ಲೂ ನಿಲ್ಲದೆ ಉತ್ತರದೇವಿ ತೌರಿಗೆ ಮರಳುತ್ತಾಳೆ. ಅಲ್ಲೋ ಅವಳ ತಾಯಿಯನ್ನು ಬಿಟ್ಟು ಬೇರೊಬ್ಬಳನ್ನು ಲಗ್ನವಾಗಿದ್ದ ತಂದೆ ಮನೆಯಲ್ಲಿ ಚಿಕ್ಕಮ್ಮನೊಡನೆ ಮಲಗಿದ್ದಾನೆ. ಮುಚ್ಚಿದ ಬಾಗಿಲು ತೆರೆಯಲಿಲ್ಲ. ಯಾವ ಬಂಧುಗಳೂ ಅವಳನ್ನು ಕರೆದು ಆದರಿಸಲಿಲ್ಲ. ಕೊನೆಗೆ ತನ್ನ ತಾಯಿಯ ತೌರಿಗೇ ಅವಳು ಹೋಗುತ್ತಾಳೆ. ಶಿಶುವನೆತ್ತಿಕೊಂಡು ನಾರಿ ಕೈಲಿಡಕೊಂಡು ಅಪ್ಪ ಕೊಟ್ಟೆಮ್ಮೆ ಹೊಡಕೊಂಡು-ಉತ್ತರದೇವಿ ಹೋದಳವ್ವನ ಅರಮನೆಗೆ-ಉತ್ತರದೇವಿ ನನ್ನವ್ವ ನನಗೆ ಕದ ತೆಗೆಯೆ ? ಒಂದರಿಬೆ ಹಾಸಿದ್ದೆ ಒಂದರಿಬೆ ಚೆಲ್ಲಿದ್ದೆ ಒಂದೊರುಷ ನಿನ್ನ ಸಲವಿದ್ದೆ-ಕಂದಮ್ಮ ನನ್ಹಾಡು ನಿನಗೆ ಮಡಗಿತ್ತೆ-ನನ ಮಗಳೆ ನೀನುತ್ತರೆ ಮಳೆಯಾಗಿ ಹೊರಡವ್ವ (ಜೀಶಂಪ: ಖಂಡಕಾವ್ಯಗಳು) ಉತ್ತರದೇವಿ ಮುಂದೆ ಏನಾದಳು ಎನ್ನುವುದು ಅಸ್ಪಷ್ಟ. ಅವಳ ಬದುಕು ದುರಂತದಲ್ಲಿ ಕೊನೆಗೊಳ್ಳುತ್ತದೆ. ಗಂಗೆಯ ಬಳಿಗೆ ನಡೆದಾಳು | ನುಡಿದಳು ಗಂಗಮ್ಮ ನನ್ನ ಎಳಕೊಳ್ಳೆ ತಾವರೆ ಎಲೆ ಮೇಲೆ ತಾನಾಗಿ ಕೂತುಗಂಡು ತಪಸು ಗೈದಾಳು ಶಿವನಿಗೆ | ಉತ್ತರದೇವಿ ಉತ್ತರ ಮಳೆಯಾಗಿ ಹರಿದಾಳು (ಕರೀಂಖಾನ್: ಜನಪದ ಗೀತೆ) ಆಕೆಯ ಅಂತ್ಯದ ಬಗ್ಗೆ ಹೀಗೆ ಸ್ಪಷ್ಟತೆ ಕೆಲವು ಕಡೆ ಇದ್ದರೂ ಅನೇಕ ಕಡೆ ಈ ಅಂಶ ಅನಿಶ್ಚಯದ ಮಬ್ಬಿನಲ್ಲೇ ನಿಂತು ಬಿಡುತ್ತದೆ. ಉತ್ತ್ತರೆಯ ಪತಿ ತಾಯಿಯ ಮಾತಿಗೆ ಕಟ್ಟುಬಿದ್ದರೂ ಪತ್ನಿಯಲ್ಲಿ ಅಪಾರ ಪ್ರೇಮವನ್ನೇ ತುಂಬಿಕೊಂಡ ವ್ಯಕ್ತಿಯಾಗಿ ಕೆಲವು ಕೃತಿಗಳಲ್ಲಿ ಗೋಚರವಾಗುತ್ತಾನೆ. ಉತ್ತರೆ ಮನೆಯನ್ನು ಬಿಟ್ಟ ಮೇಲೆ ಬಾಗಿಲಿಗೆ ಬಂದ ಬಳೆಗಾರನಿಗೆ ಆತ ಹೇಳುವ ನುಡಿ ಮಾರ್ಮಿಕವಾದುದು. ಬಳೆಗಾರ ಶೆಟ್ಟಿ ಬಳೆಯ ಯಾರಿಗೆ ತಂದೆ ಬಳೆ ತೊಡೊ ನಾರಿ ಒಳಗಿಲ್ಲ-ಬಳೆಗಾರ ನನ್ನವ್ವ ನನಗೆ ಹಗೆಯಾದಳು ಮಲೆನಾಡಿನ ಒಂದು ಕೃತಿಯಲ್ಲಿ ಆದರ್ಶಪ್ರೇಮದ ಅಪೂರ್ವ ಚಿತ್ರಣ ಲಭ್ಯವಾಗುತ್ತದೆ. ತನ್ನ ಮಡದಿಯ ಅಗಲಿಕೆಯ ನೋವನ್ನು ತಾಳಲಾರದೆ ಅರಸಿಕೊಂಡು ಪತಿ ಅವಳ ತೌರಿಗೆ ಬರುತ್ತಾನೆ. ದಾರಿಯಲ್ಲಿ ದನ ಕಾಯುವ ಹುಡುಗರು- ಮೊಸರು ಅನ್ನ ಉಂಟು ಪಟ್ಟೆಜೋತರ ಹೊದ್ದು ಇನ್ನೊಬ್ಬರ ಕೈಯ್ಯಾಗೆ ಒರಗ್ಯಾಳೆ (ಕೆ.ವಿ.ಲಿಂಗಪ್ಪ: ಮಲೆನಾಡ ಮಡಿಲಲ್ಲಿ) ಎಂದು ನುಡಿದಾಗ ಸಂಪಿಗೆ ಹೂವನ್ನು ಕೊಯ್ದು, ಉತ್ತರದೇವಿಗೆ ಕಳಿಸಿ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೆ. ಇದನ್ನು ಕೇಳಿದ ಉತ್ತರೆ ಸಂಕಟವನ್ನು ತಾಳಲಾರದೆ ಕೆಂಡಕೊಂಡವಾಗುತ್ತಾಳೆ. ಎಲ್.ಆರ್. ಹೆಗಡೆಯವರು ಸಂಗ್ರಹಿಸಿರುವ ಉತ್ತರ ಕನ್ನಡ ಜಿಲ್ಲೆಯ ಕಥೆಯ ಅಂತ್ಯ ಇನ್ನೂ ಘೋರವಾದುದು. ತನ್ನೊಡನೆ ಮತ್ತೆ ಬದುಕಲು ಬಾರದ ಮಡದಿಯನ್ನು ಕಡಿದು ಅವಳ ತಲೆಯನ್ನು ಕೊಂಡೊಯ್ದು ತನ್ನ ಬಚ್ಚಲ ಬಳಿಯಲ್ಲಿ ಹೂತು ಕಣ್ಣೀರಿಡುವ ಪತಿಯ ಹೃದಯವಿದ್ರಾವಕ ಚಿತ್ರ ಅಲ್ಲಿ ಬರುತ್ತದೆ. ಉತ್ತರೆಯ ಕಥೆ ಹತ್ತು ಕಡೆ ಹತ್ತು ರೂಪಾಂತರವನ್ನು ಪಡೆದರೂ ಅವಳ ದಿವ್ಯವಾದ, ಉಜ್ಜ್ವಲವಾದ ಪಾತ್ರ ಮಾತ್ರ ಎಲ್ಲೂ ಮಸುಕಾಗುವುದಿಲ್ಲ. ತಾನು ಪತಿವ್ರತೆ ನಿಜ. ತನ್ನನ್ನು ಶಂಕಿಸಿದ ಅತ್ತೆಯ ಮೇಲೆ ಅವಳಿಗೆ ಇನ್ನಿಲ್ಲದ ಕೋಪ. ತಾನು ಸಾಕಿ ಸಲಹಿದ ಗಿಡಬಳ್ಳಿಗಳೊಡನೆ ಅವಳು ನುಡಿಯುವ ರೀತಿ ಅವಳ ದುಃಖದ ತೀವ್ರತೆಯನ್ನು ಪರಿಚಯಿಸುತ್ತದೆ. ಕತ್ತಲಲ್ಲಿ ಪತಿಯ ಮನೆಯನ್ನು ಬಿಟ್ಟು ತನ್ನದಾದ ಎಲ್ಲ ವಸ್ತುಗಳನ್ನು ಬಿಡದೆ ತೆಗೆದುಕೊಂಡು, ದಾರಿಯಲ್ಲಿ ಯಾರಿಗೂ ಸೋಲದೆ ಛಲದಿಂದ ತೌರ ದಾರಿಯನ್ನು ತುಳಿದ ಅವಳ ನಿಲುವು ಅವಳ ಆತ್ಮಾಭಿಮಾನದ, ಛಲದ, ನಿಷ್ಠೆಯ ಸಂಕೇತ. ಆದರೆ ತೌರವರು ತೋರಿದ ತಾತ್ಸಾರಕ್ಕೆ ಅವಳು ಕುಸಿದು ಬೀಳುತ್ತಾಳೆ. ಜಿಗುಪ್ಸೆಗೊಳ್ಳುತ್ತಾಳೆ. ಅವಳ ಪವಿತ್ರ ಬದುಕು ಗಂಗೆಯ ಪಾಲಾಗುತ್ತದೆ. ಹೆಣ್ಣಿನ ಈ ಅನಂತ ದುಃಖವನ್ನು ಉತ್ತರದೇವಿಯ ಕಥೆ ಅತ್ಯಂತ ಸಮರ್ಥವಾಗಿ ಚಿತ್ರಿಸಿದೆ. ಕಥೆಯ ಅಂಶಕ್ಕಿಂತ ಅವಳ ದುಃಖವನ್ನೆ ಬೆಳೆಸುವ ಸನ್ನಿವೇಶಗಳು ಹೆಚ್ಚು. ಮನಸ್ಸನ್ನು ಕಲಕುವ ಈ ಕಥೆ ಮತ್ತೊಮ್ಮೆ ನಮ್ಮ ಕಣ್ಣೆದುರಿಗೆ ಪುರಾಣ ಪ್ರಪಂಚದ ಸೀತೆ, ಸಾವಿತ್ರಿ, ದ್ರೌಪದಿಯರ ಚಿತ್ರವನ್ನು ತಂದು ನಿಲ್ಲಿಸುತ್ತದೆ. ಕನ್ನಡ ಜನಪದ ಕಥೆಗಳಲ್ಲಿ ಇದೊಂದು ಅನರ್ಘ್ಯರತ್ನ. (ಜೆ.ಎಸ್.ಪಿ.)