ಉಡ್ತಾ ಪಂಜಾಬ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಡ್ತಾ ಪಂಜಾಬ್
ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ
ನಿರ್ದೇಶನಅಭಿಶೇಕ್ ಚೌಬೆ
ನಿರ್ಮಾಪಕಶೋಭಾ ಕಪೂರ್
ಏಕ್ತಾ ಕಪೂರ್
ಅನುರಾಗ್ ಕಶ್ಯಪ್
ವಿಕ್ರಮಾದಿತ್ಯ ಮೋಟ್ವಾನೆ
ಅಮನ್ ಗಿಲ್
ಸಮೀರ್ ನಾಯರ್
ಮಧು ಮಂಟೇನಾ
ಚಿತ್ರಕಥೆಸುದೀಪ್ ಶರ್ಮಾ
ಅಭಿಷೇಕ್ ಚೌಬೆ
ಕಥೆಸುದೀಪ್ ಶರ್ಮಾ
ಅಭಿಷೇಕ್ ಚೌಬೆ
ಪಾತ್ರವರ್ಗಶಾಹಿದ್ ಕಪೂರ್
ಕರೀನಾ ಕಪೂರ್
ಆಲಿಯಾ ಭಟ್
ದಿಲ್ಜೀತ್ ದೋಸಾಂಝ್
ಸತೀಶ್ ಕೌಶಿಕ್
ಸುಹೇಲ್ ನಯ್ಯರ್
ಮಾನವ್ ವಿಜ್
ಪ್ರಭ್‍ಜ್ಯೋತ್ ಸಿಂಗ್
ಸಂಗೀತಮೂಲ ಹಾಡುಗಳು:
ಅಮಿತ್ ತ್ರಿವೇದಿ
ಹಿನ್ನೆಲೆ ಸಂಗೀತ:
ಬೆನೆಡಿಕ್ಟ್ ಟೇಲರ್
ನರೇನ್ ಚಂದಾವರ್ಕರ್
ಛಾಯಾಗ್ರಹಣರಾಜೀವ್ ರವಿ
ಸಂಕಲನಮೇಘನಾ ಸೇನ್
ಸ್ಟುಡಿಯೋಬಾಲಾಜಿ ಮೋಶನ್ ಪಿಕ್ಚರ್ಸ್
ಫ಼್ಯಾಂಟಮ್ ಫ಼ಿಲ್ಮ್ಸ್
ವಿತರಕರುಬಾಲಾಜಿ ಮೋಷನ್ ಪಿಕ್ಚರ್ಸ್
ವೈಟ್ ಹಿಲ್ ಸ್ಟೂಡಿಯೋಸ್
ಬಿಡುಗಡೆಯಾಗಿದ್ದು
 • 17 ಜೂನ್ 2016 (2016-06-17)
ಅವಧಿ147 ನಿಮಿಷಗಳು[೧]
ದೇಶಭಾರತ
ಭಾಷೆಹಿಂದಿ
ಬಂಡವಾಳ40 ಕೋಟಿ[೨][೩]
ಬಾಕ್ಸ್ ಆಫೀಸ್ಅಂದಾಜು 96.1–99.7 ಕೋಟಿ[೪][೫]

ಉಡ್ತಾ ಪಂಜಾಬ್ (ಅಕ್ಷರಶಃ ಸಂತೋಷದ ಸ್ಥಿತಿಯಲ್ಲಿರುವ ಪಂಜಾಬ್) 2016 ರ ಒಂದು ಹಿಂದಿ ಕರಾಳ ವಿನೋದ ಅಪರಾಧಪ್ರಧಾನ ಚಲನಚಿತ್ರ. ಅಭಿಷೇಕ್ ಚೌಬೆ ಇದರ ಸಹ-ಬರಹಗಾರರು ಮತ್ತು ನಿರ್ದೇಶಕರಾಗಿದ್ದಾರೆ. ಇದು ಸಡಿಲವಾಗಿ ಭಾರತದ ಪಂಜಾಬ್ ರಾಜ್ಯದ ಯುವಜನರ ಮಾದಕ ವ್ಯಸನವನ್ನು ಮತ್ತು ಅದರ ಸುತ್ತಲಿನ ವಿವಿಧ ಪಿತೂರಿಗಳನ್ನು ಆಧರಿಸಿದೆ ಮತ್ತು ಅದಕ್ಕೆ ಸಂಬಂಧಿತವಾಗಿದೆ. ಈ ಚಿತ್ರವನ್ನು ಅನುರಾಗ್ ಕಶ್ಯಪ್ ಅವರ ನಿರ್ಮಾಣಶಾಲೆ ಫ್ಯಾಂಟಮ್ ಫಿಲ್ಮ್ಸ್ ಸಹಯೋಗದೊಂದಿಗೆ ಶೋಭಾ ಕಪೂರ್ ಮತ್ತು ಏಕ್ತಾ ಕಪೂರ್ ತಮ್ಮ ಲಾಂಛನವಾದ ಬಾಲಾಜಿ ಮೋಷನ್ ಪಿಕ್ಚರ್ಸ್‌ನಡಿ ನಿರ್ಮಾಣ ಮಾಡಿದ್ದಾರೆ. ಇದು ಶಾಹಿದ್ ಕಪೂರ್, ಆಲಿಯಾ ಭಟ್, ಕರೀನಾ ಕಪೂರ್ ಮತ್ತು ದಿಲ್ಜಿತ್ ದೋಸಾಂಜ್ ಅವರನ್ನೊಳಗೊಂಡ ಸಮೂಹ ಪಾತ್ರವರ್ಗವನ್ನು ಹೊಂದಿದೆ.[೬][೭]

4 ಜೂನ್ 2016ರಂದು, ಚಿತ್ರದಲ್ಲಿ ತೋರಿಸಲ್ಪಟ್ಟ ವಿಷಯಗಳು ಸಾಮಾನ್ಯ ಪ್ರೇಕ್ಷಕರಿಗೆ ತುಂಬ ಅಶ್ಲೀಲವಾಗಿವೆಯೆಂದು ಹೇಳಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರದ ಬಿಡುಗಡೆಯ ಮೇಲೆ ತಡೆಯಾಜ್ಞೆಯನ್ನು ಕೋರಿತು. ಇದರ ಪರಿಣಾಮವಾಗಿ, ಚಿತ್ರದಲ್ಲಿ ಒಟ್ಟು 89 ಕಡಿತಗಳನ್ನು ಮಾಡಲು ನಿರ್ಮಾಪಕರಿಗೆ ನಿರ್ದೇಶನ ನೀಡಲಾಯಿತು. ಆದಾಗ್ಯೂ, 13 ಜೂನ್ 2016 ರಂದು, ಬಾಂಬೆ ಹೈಕೋರ್ಟ್ ತಡೆಯಾಜ್ಞೆಯನ್ನು ಅಮಾನ್ಯಗೊಳಿಸಿ ಚಿತ್ರಕಥೆಯಲ್ಲಿ ಒಂದೇ ಕಡಿತದೊಂದಿಗೆ ಚಿತ್ರದ ರಾಷ್ಟ್ರೀಯ ಬಿಡುಗಡೆಗೆ ಅನುಮತಿ ನೀಡಿತು.[೮] ಈ ಚಿತ್ರವು 17 ಜೂನ್ 2016 ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು.[೯] ₹470 ದಶಲಕ್ಷ ಬಂಡವಾಳದಲ್ಲಿ ತಯಾರಾದ ಉಡ್ತಾ ಪಂಜಾಬ್ ವಿಶ್ವಾದ್ಯಂತ ಸುಮಾರು ₹960 ದಶಲಕ್ಷದಷ್ಟು ಗಳಿಸಿತು.[೧೦] ಇದು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆಯಿತು.[೧೧] 62 ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ, ಈ ಚಿತ್ರವು ಅತ್ಯುತ್ತಮ ನಟಿ (ಆಲಿಯಾ ಭಟ್) ಮತ್ತು ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿ (ಶಾಹಿದ್ ಕಪೂರ್) ಸೇರಿದಂತೆ ನಾಲ್ಕು ಪ್ರಶಸ್ತಿಗಳನ್ನು ಗೆದ್ದುಕೊಂಡಿತು.[೧೨]

ಕಥಾವಸ್ತು[ಬದಲಾಯಿಸಿ]

ಪಾಕಿಸ್ತಾನದ ಮೂವರು ಯುವಕರು ಮಾದಕ ವಸ್ತುಗಳ ಪ್ಯಾಕೆಟ್‌ಗಳನ್ನು ನಂತರ ಆಯ್ದುಕೊಳ್ಳಲಾಗುವಂತೆ ಗಡಿಯಾಚೆಗೆ ಭಾರತದಲ್ಲಿ ಎಸೆಯುತ್ತಾರೆ. ತನ್ನ ಅಭಿಮಾನಿಗಳಲ್ಲಿ "ಗಬ್ರು" ಎಂದೂ ಕರೆಯಲ್ಪಡುವ, ತೇಜಿಂದರ್ "ಟಾಮಿ" ಸಿಂಗ್ (ಶಾಹಿದ್ ಕಪೂರ್) ಒಬ್ಬ ಯುವ ಮತ್ತು ಯಶಸ್ವಿ ಪಂಜಾಬಿ ಸಂಗೀತಗಾರನಾಗಿದ್ದು ಐಷಾರಾಮಿ ಜೀವನಶೈಲಿಯನ್ನು ನಡೆಸುತ್ತಿರುತ್ತಾನೆ. ತಾಯಾಜಿ (ಸತೀಶ್ ಕೌಶಿಕ್) ಮತ್ತು ಸೋದರಸಂಬಂಧಿ ಜಸ್ಸಿ (ಸುಹೇಲ್ ನಯ್ಯರ್) ನೇತೃತ್ವದ ಆಡಂಬರದ ಸಿಬ್ಬಂದಿಯೊಂದಿಗೆ ಒಟ್ಟಾಗಿ ಅವನು ಕೊಕೇನ್‍ನ ಅನಿಯಂತ್ರಿತ ಸೇವನೆಯಲ್ಲಿ ತೊಡಗುತ್ತಾನೆ. ಹಲವುವೇಳೆ ಹಿಂಸಾಚಾರ ಮತ್ತು ಮಾದಕ ವ್ಯಸನವನ್ನು ವೈಭವೀಕರಿಸುವ ಸಾಹಿತ್ಯವಿರುವ ತನ್ನ ಹುರುಪುಳ್ಳ ಹಾಡುಗಳಿಗೆ ಟಾಮಿ ಜನಪ್ರಿಯವಾಗಿರುತ್ತಾನೆ. ಆದರೆ, ಅವನ ಚಟವು ಅವನ ಸಂಗೀತ ಒಪ್ಪಂದದ ಅಂತ್ಯಕ್ಕೆ ಕಾರಣವಾಗಿ ಅವನನ್ನು ಜೈಲಿಗೆ ಕಳುಹಿಸುತ್ತದೆ. ಜೈಲಿನಲ್ಲಿ, ಅವನು ತನ್ನ ಇಬ್ಬರು ಮೊಂಡ ಅಭಿಮಾನಿಗಳನ್ನು ಭೇಟಿಯಾಗುತ್ತಾನೆ. ಟಾಮಿಯ ಜೀವನಶೈಲಿಯು ತಮ್ಮ ಜೀವನವನ್ನು ಹೇಗೆ ಪ್ರೇರೇಪಿಸಿತು ಮತ್ತು ತಮ್ಮ ಸ್ವಂತ ತಾಯಿಯ ಹತ್ಯೆ ಮಾಡುವುದಕ್ಕೆ ಕಾರಣವಾಯಿತು ಎಂಬುದನ್ನು ಅವರು ಹೇಳುತ್ತಾರೆ. ತನ್ನ ಹಾಡುಗಳು ಹದಿಹರೆಯದವರ ಮೇಲೆ ನಕಾರಾತ್ಮಕ ಪರಿಣಾಮ ಬೀರಿವೆ ಎಂದು ಅರಿತುಕೊಂಡ ಟಾಮಿ ಬಿಡುಗಡೆಯಾದ ನಂತರ ತನ್ನ ಮಾರ್ಗಗಳನ್ನು ಬದಲಾಯಿಸಲು ನಿರ್ಧರಿಸುತ್ತಾನೆ. ಕೆಲವು ದಿನಗಳ ನಂತರ, ಅವನು ತಾಯಾಜಿಯೊಂದಿಗೆ ವಾಗ್ವಾದದಲ್ಲಿ ತೊಡಗಿ ಆಕಸ್ಮಿಕವಾಗಿ ಅವನ ಮೇಲೆ ಗುಂಡು ಹಾರಿಸಿ, ಅವನ ಕಿವಿಗೆ ಗಾಯ ಮಾಡುತ್ತಾನೆ. ತಾಯಾಜಿ ಮುಂಬರುವ ಒಂದು ಸಂಗೀತ ಕಾರ್ಯಕ್ರಮಕ್ಕೆ ಸಿದ್ಧನಾಗಲು ಟಾಮಿ ಮತ್ತು ಅವನ ಸಿಬ್ಬಂದಿಯನ್ನು ತೋಟದ ಮನೆಯೊಂದಕ್ಕೆ ಕಳುಹಿಸುತ್ತಾನೆ.

ಹೊಲದಲ್ಲಿ ಬೌರಿಯಾ (ಆಲಿಯಾ ಭಟ್) ಎಂಬ ಹೆಸರಿನ ಬಿಹಾರಿ ವಲಸೆ ಕಾರ್ಮಿಕೆ ಕೆಲಸ ಮಾಡುತ್ತಿರುತ್ತಾಳೆ. ದೇಶಕ್ಕಾಗಿ ರಾಷ್ಟ್ರಮಟ್ಟದ ಹಾಕಿ ಆಡುವ ಬೌರಿಯಾಳ ಕನಸುಗಳು ಚೂರುಚೂರಾದ ಕಾರಣ ಅವಳು ಕಾರ್ಮಿಕಳಾಗಿ ಕೆಲಸ ಮಾಡಲು ಪಂಜಾಬ್‌ಗೆ ಬಂದಿರುತ್ತಾಳೆ. ಅವಳು ಒಬ್ಬ ಸ್ಥಳೀಯ ಭೂಮಾಲೀಕನಿಗಾಗಿ ಕೆಲಸ ಮಾಡುತ್ತಿರುತ್ತಾಳೆ. ಅವನು ಕೃಷಿಯನ್ನು ಮಾದಕ ವಸ್ತುಗಳ ಮಾರಾಟಕ್ಕಾಗಿ ಛದ್ಮವೃತ್ತಿಯಾಗಿ ಬಳಸುತ್ತಿರುತ್ತಾನೆ. ಒಂದು ರಾತ್ರಿ, ಅವಳಿಗೆ ಹೊಲದಲ್ಲಿ ಅನುಮಾನಾಸ್ಪದ ಪೊಟ್ಟಣವೊಂದು ಸಿಕ್ಕಿ ಅದು ಒಂದು ಬಗೆಯ ಮಾದಕವಸ್ತು ಎಂದು ಅವಳಿಗೆ ಅರಿವಾಗುತ್ತದೆ. ಅವಳು ಅದನ್ನು ಮಾರಾಟ ಮಾಡಲು ನಿರ್ಧರಿಸುತ್ತಾಳೆ. ಆದರೆ ಒಬ್ಬ ಸಂಭಾವ್ಯ ಖರೀದಿದಾರನ ಹುಡುಕಾಟವು ಅವಳನ್ನು ತೊಂದರೆಗೆ ಸಿಲುಕಿಸುತ್ತದೆ ಏಕೆಂದರೆ ಅವಳು ತಿಳಿಯದೆ ಹೆರಾಯಿನ್‌ನ ಮೂಲ ಮಾಲೀಕರನ್ನು ಸಂಪರ್ಕಿಸುತ್ತಾಳೆ. ಅವಳನ್ನು ಮಾದಕ ವಸ್ತು ವ್ಯಾಪಾರಿಗಳ ಗ್ಯಾಂಗ್ ಸೆರೆಹಿಡಿಯುವ ಮುನ್ನ ಅವಳು ಅದನ್ನು ಬಾವಿಗೆ ಬಿಸಾಡುತ್ತಾಳೆ. ತಮ್ಮ ಕಳೆದುಹೋದ ಮಾದಕ ವಸ್ತುಗಳಿಗೆ ಪರಿಹಾರವಾಗಿ, ಆ ವ್ಯಾಪಾರಿಗಳು ಅವಳನ್ನು ಬಲವಂತವಾಗಿ ತಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಅಲ್ಲಿ ಅವಳಿಗೆ ಲೈಂಗಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಲಾಗುತ್ತದೆ, ಮಾದಕ ವಸ್ತುಗಳನ್ನು ನೀಡಲಾಗುತ್ತದೆ ಮತ್ತು ಪುರುಷರಿಗೆ ವೇಶ್ಯೆಯಾಗಿ ಒಪ್ಪಿಸಲಾಗುತ್ತದೆ. ಕೆಲವು ವಾರಗಳ ನಂತರ, ಅವಳು ತಪ್ಪಿಸಿಕೊಳ್ಳಲು ಯಶಸ್ವಿಯಾಗುತ್ತಾಳೆ.

ನೆರೆಯ ಪಟ್ಟಣದಲ್ಲಿ ಒಂದು ಪುನರ್ವಸತಿ ಕೇಂದ್ರವನ್ನು ನಡೆಸುತ್ತಿರುವ ವೈದ್ಯೆ ಮತ್ತು ಕಾರ್ಯಕರ್ತೆಯಾದ ಪ್ರೀತ್ ಸಾಹ್ನಿ (ಕರೀನಾ ಕಪೂರ್) ವಾಸಿಸುತ್ತಿರುತ್ತಾಳೆ. ಸರ್ತಾಜ್ ಸಿಂಗ್ (ದಿಲ್ಜಿತ್ ದೋಸಾಂಝ್) ಒಬ್ಬ ಕಿರಿಯ ಪೊಲೀಸಿನವನಾಗಿದ್ದು, ತನ್ನ ಮೇಲಿನವರು ಅನುಮತಿಸುತ್ತಿರುವ ಮಾದಕವಸ್ತು ಕಳ್ಳಸಾಗಣೆ ಬಗ್ಗೆ ತಿಳಿದಿರುತ್ತಾನೆ. ಆದರೆ ಅದು ಅವನ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಅವನ ಸಹೋದರ ಬಲ್ಲಿ ಮಿತಿಮೀರಿ ಸೇವಿಸಿದಾಗ ಅವನನ್ನು ಪ್ರೀತ್‍ನ ಚಿಕಿತ್ಸಾಲಯಕ್ಕೆ ಕರೆತರಲಾಗುತ್ತದೆ. ಆಗ ಅವನಿಗೆ ಗಂಭೀರ ಪರಿಸ್ಥಿತಿಯ ಅರಿವಾಗುತ್ತದೆ. ಪ್ರೀತ್ ಮತ್ತು ಸರ್ತಾಜ್ ಒಟ್ಟಾಗಿ ಸಮಸ್ಯೆಯ ಮೂಲ ಕಾರಣವನ್ನು ಕಂಡುಹಿಡಿಯಲು ನಿರ್ಧರಿಸುತ್ತಾರೆ. ಬಲ್ಲಿಯನ್ನು ಅವನ ಇಚ್ಛೆಯ ವಿರುದ್ಧವಾಗಿ ಅವಳ ಮಾದಕ ವಸ್ತು ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗುತ್ತದೆ.

ತನ್ನ ಸಂಗೀತ ಕಚೇರಿಯಲ್ಲಿ ಟಾಮಿ ಹಾಡುವ ಬದಲಾಗಿ ಉಪದೇಶಿಸಲು ಪ್ರಾರಂಭಿಸುತ್ತಾನೆ. ಒಬ್ಬರು ತಮ್ಮ ಜೀವನವನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಅವನ ಭಾಷಣದಿಂದ ಕೋಪಗೊಂಡ ಅಭಿಮಾನಿಗಳು ಅವನ ಮೇಲೆ ಬಾಟಲಿಗಳನ್ನು ಎಸೆಯಲು ಪ್ರಾರಂಭಿಸುತ್ತಾರೆ. ಟಾಮಿ ಕೋಪಗೊಂಡು ಪಲಾಯನ ಮಾಡುವ ಮೊದಲು ಗುಂಪಿನ ಮುಂದೆ ಮೂತ್ರ ವಿಸರ್ಜನೆ ಮಾಡುತ್ತಾನೆ. ಅವನು ಒಂದು ಹಳೆಯ ಕಟ್ಟಡದಲ್ಲಿ ಅಡಗಿಕೊಂಡಾಗ ಅಲ್ಲಿ ಅಡಗಿಕೊಂಡ ಬೌರಿಯಾಳನ್ನು ಭೇಟಿಯಾಗುತ್ತಾನೆ. ಇಬ್ಬರೂ ತಮ್ಮ ಕಥೆಗಳನ್ನು ಮತ್ತು ಬಂಧವನ್ನು ಹಂಚಿಕೊಳ್ಳುತ್ತಾರೆ. ಆದರೆ, ಬೌರಿಯಾಳನ್ನು ಅದೇ ಗ್ಯಾಂಗ್ ಮತ್ತೆ ವಶಪಡಿಸಿಕೊಳ್ಳುತ್ತದೆ. ಗೋಷ್ಠಿಯಲ್ಲಿ ಸಾರ್ವಜನಿಕ ಗಲಾಟೆಯ ಕಾರಣ ತನಗಾಗಿ ಬಂಧನ ವಾರಂಟ್‍ನ್ನು ಹೊರಡಿಸಲಾಗಿದೆ ಎಂದು ಟಾಮಿಗೆ ಮರುದಿನ ತಿಳಿಯುತ್ತದೆ. ತಾನು ಅವಳನ್ನು ಪ್ರೀತಿಸುತ್ತಿರುವುದನ್ನು ಅರಿತುಕೊಂಡ ನಂತರ ಅವನು ಬೌರಿಯಾಳನ್ನು ಹುಡುಕಲು ಹೊರಡುತ್ತಾನೆ.

ಪಂಜಾಬ್‌ನಲ್ಲಿನ ಮಾದಕ ವಸ್ತುಗಳ ಸಮಸ್ಯೆಯ ಹಿಂದಿನ ಪ್ರೇರಕ ಶಕ್ತಿ ವೀರೇಂದ್ರ ಸಿಂಗ್ ಎಂಬ ವೃದ್ಧ ವ್ಯಕ್ತಿಯಾಗಿದ್ದು, ಅವನು ಸಂಸದ ಮಣಿಂದರ್ ಬ್ರಾರ್‌ನ ಬೆಂಬಲದೊಂದಿಗೆ ಏಳಿಗೆ ಹೊಂದಿದ್ದಾನೆಂದು ಪ್ರೀತ್ ಮತ್ತು ಸರ್ತಾಜ್ ಕಂಡುಕೊಳ್ಳುತ್ತಾರೆ. ರಾಜಕಾರಣಿಯ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಿ ಅಧಿಕಾರದಲ್ಲಿ ಮತ್ತೊಂದು ಅವಧಿಗೆ ಬ್ರಾರ್‌ನ ಪ್ರಚಾರವನ್ನು ತಡೆಯಲು ರಾಜ್ಯದ ಚುನಾವಣಾ ಆಯೋಗಕ್ಕೆ ಕಳುಹಿಸಬೇಕಾದ ವರದಿಯನ್ನು ಸಿದ್ಧಪಡಿಸಲು ಇಬ್ಬರೂ ತೀವ್ರ ಪ್ರಯತ್ನ ಮಾಡುತ್ತಾರೆ. ಸರ್ತಾಜ್ ಮತ್ತು ಪ್ರೀತ್ ಪರಸ್ಪತ ಪ್ರೀತಿಸತೊಡಗುತ್ತಾರೆ; ಆದರೆ ಒಂದು ರಾತ್ರಿ, ಪ್ರೀತ್ ಉನ್ಮಾದ ಬಂದ ಬಲ್ಲಿ ತನ್ನ ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ನೋಡುತ್ತಾಳೆ. ಅವನನ್ನು ತಡೆಯಲು ಪ್ರಯತ್ನಿಸಿದಾಗ, ಅವನು ಆಕಸ್ಮಿಕವಾಗಿ ಅವಳಿಗೆ ಇರಿಯುತ್ತಾನೆ. ಹಿರಿಯ ಅಧಿಕಾರಿ ಝುಜಾರ್ ಸಿಂಗ್ ಸೇರಿದಂತೆ ಆಕೆಯ ಹತ್ಯೆಯ ಬಗ್ಗೆ ತನಿಖೆ ನಡೆಸುವ ಪೊಲೀಸಿನವರು ಅವಳು ಮತ್ತು ಸರ್ತಾಜ್ ತಯಾರಿಸಿದ ವರದಿಯನ್ನು ನೋಡುತ್ತಾರೆ. ತಾನು ಸರ್ತಾಜ್‍ನ ಹತ್ತಿರದ ಸ್ನೇಹಿತನಾಗಿರುವುದರಿಂದ, ಝುಜಾರ್ ಬಲ್ಲಿಯನ್ನು ಭೂಗತ ಜಗತ್ತಿಗೆ ಕಳುಹಿಸುವ ಮೂಲಕ ರಕ್ಷಿಸಲು ನಿರ್ಧರಿಸುತ್ತಾನೆ. ಆದರೆ, ಡ್ರಗ್ಸ್ ದಂಧೆಯಲ್ಲಿ ತನ್ನನ್ನೂ ಹೆಸರಿಸಲಾಗಿದೆ ಎಂದು ನೋಡಿದಾಗ ಅವನು ಕೋಪಗೊಂಡು ಸರ್ತಾಜ್‍ಗೆ ಕರೆಮಾಡುತ್ತಾನೆ.

ತಮ್ಮ ತೋಟದ ಮನೆಯಲ್ಲಿ (ಬೌರಿಯಾ ಸೆರೆಯಾಗಿರುವ) ಸ್ಥಳೀಯ ಮಾದಕ ವಸ್ತು ಮಾಫಿಯಾದ ಉಪಸ್ಥಿತಿಯಲ್ಲಿ, ಮೂಗೇಟಿಗೊಳಗಾದ ಮತ್ತು ಥಳಿಸಲ್ಪಟ್ಟ ಸರ್ತಾಜ್‌ನನ್ನು ಮಾದಕವಸ್ತು ದಂಧೆಯ ಪ್ರಮುಖ ಸದಸ್ಯನಾದ ಝುಜಾರ್ ಪ್ರಶ್ನಿಸುತ್ತಾನೆ. ಸರ್ತಾಜ್ ತಾನು ಏನೇ ಮಾಡಿದರೂ ಪಂಜಾಬ್ ಸಲುವಾಗಿ ಮಾಡಿದೆ ಎಂದು ಹೇಳುತ್ತಾನೆ. ಅದೇ ಸಮಯಕ್ಕೆ, ಟಾಮಿ ಮನೆಗೆ ಪ್ರವೇಶಿಸುತ್ತಾನೆ. ಸರ್ತಾಜ್ ಝುಜಾರ್‌ನ ಪಿಸ್ತೂಲ್ ಕಸಿದು ಬಲ್ಲಿಯನ್ನು ಮುಕ್ತಗೊಳಿಸುವ ಮುನ್ನ ಇಡೀ ಗ್ಯಾಂಗನ್ನು ಗುಂಡು ಹಾರಿಸಿ ಕೊಲ್ಲುತ್ತಾನೆ. ತನ್ನ ಬಂಧಿತರಿಂದ ತಪ್ಪಿಸಿಕೊಳ್ಳಲು ಬೌರಿಯಾಗೆ ಟಾಮಿ ಸಹಾಯ ಮಾಡುತ್ತಾನೆ. ಬಲ್ಲಿ ತನ್ನ ಸಹೋದರನ ಮುಂದೆ ಮಂಡಿಯೂರಿ ಅಳುತ್ತಾನೆ. ಅವನ ಮುಖವು ಭಾವರಹಿತವಾಗಿರುತ್ತದೆ.

ಮಣಿಂದರ್ ಬ್ರಾರ್‌ನ ಚಟುವಟಿಕೆಗಳ ಬಗ್ಗೆ ಸರ್ಕಾರ ವಿಚಾರಣೆ ನಡೆಸಿ ಮಾದಕ ವಸ್ತು ಪೀಡೆಯ ಮೇಲೆ ಭಾರಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತೋರಿಸಲಾಗುತ್ತದೆ. ಗೋವಾದಲ್ಲಿ, ತನ್ನ ಸಿಬ್ಬಂದಿ ಸದಸ್ಯರ ಮಧ್ಯೆ, ಟಾಮಿ ಬೌರಿಯಾಳಿಗೆ ಕರೆಮಾಡಿ ಅವಳ ನಿಜವಾದ ಹೆಸರನ್ನು ಕೇಳುತ್ತಾನೆ. ಕಡಲತೀರದ ಬಳಿ ಕುಳಿತು, ಒಬ್ಬ ವಿದೇಶಿ ಮೋಜು ಮಾಡುತ್ತಿರುವುದನ್ನು ಅವಳು ನೋಡುತ್ತಾಳೆ. ಸ್ಫೂರ್ತಿಪಡೆದು, ಅವಳು "ಮೇರಿ ಜೇನ್" ಎಂದು ಹೇಳುತ್ತಾಳೆ.

ಪಾತ್ರವರ್ಗ[ಬದಲಾಯಿಸಿ]

 • ತೇಜಿಂದರ್ "ಟಾಮಿ" ಸಿಂಗ್ ಉರುಫ್ ಗಬ್ರು ಪಾತ್ರದಲ್ಲಿ ಶಾಹಿದ್ ಕಪೂರ್
 • ಡಾ.ಪ್ರೀತ್ ಸಾಹ್ನಿ ಪಾತ್ರದಲ್ಲಿ ಕರೀನಾ ಕಪೂರ್
 • ಬೌರಿಯಾ ಉರುಫ್ ಮೇರಿ ಜೇನ್ ಪಾತ್ರದಲ್ಲಿ ಆಲಿಯಾ ಭಟ್
 • ಎಎಸ್ಐ ಸರ್ತಾಜ್ ಸಿಂಗ್ ಪಾತ್ರದಲ್ಲಿ ದಿಲ್ಜಿತ್ ದೋಸಾಂಜ್
 • ತಾಯಾಜಿ ಪಾತ್ರದಲ್ಲಿ ಸತೀಶ್ ಕೌಶಿಕ್
 • ಜಸ್ಸಿ ಪಾತ್ರದಲ್ಲಿ ಸುಹೇಲ್ ನಯ್ಯರ್
 • ಬಲ್ಲಿ ಸಿಂಗ್ ಪಾತ್ರದಲ್ಲಿ ಪ್ರಭ್‍ಜ್ಯೋತ್ ಸಿಂಗ್
 • ಸರ್ತಾಜ್‍ನ ತಾಯಿಯಾಗಿ ಜಸ್ವಿಂದರ್ ಕೌರ್
 • ಝೂಜಾರ್ ಸಿಂಗ್ ಪಾತ್ರದಲ್ಲಿ ಮಾನವ್ ವಿಜ್
 • ಸಣ್ಣ ಪಾತ್ರದಲ್ಲಿ ಇಶಾನ್ ಖಟ್ಟರ್
 • ಆ್ಯನಾ ಅಡೋರ್ [೧೩]

ಯೋಜನೆ ಮತ್ತು ಚಿತ್ರೀಕರಣ[ಬದಲಾಯಿಸಿ]

ಮುಖ್ಯ ಮಹಿಳಾ ಪಾತ್ರಕ್ಕಾಗಿ ಮೊದಲು ಬೇರೆ ಇಬ್ಬರು ನಟಿಯರನ್ನು ಆರಂಭದಲ್ಲಿ ಸಂಪರ್ಕಿಸಲಾಗಿತ್ತು. ಚಿತ್ರದ ಪ್ರಧಾನ ಛಾಯಾಗ್ರಹಣ ಮಾರ್ಚ್ 2015 ರಲ್ಲಿ ಪ್ರಾರಂಭವಾಯಿತು.[೧೪] ಮೂವರು ನಟರಾದ ಶಾಹಿದ್ ಕಪೂರ್, ಕರೀನಾ ಕಪೂರ್ ಮತ್ತು ಆಲಿಯಾ ಭಟ್ ಚಿತ್ರಕ್ಕಾಗಿ ತಮ್ಮ ಶುಲ್ಕವನ್ನು ಅರ್ಧಕ್ಕೆ ಇಳಿಸಿದರು.[೧೫]

ಸಂಗೀತ[ಬದಲಾಯಿಸಿ]

ಉಡ್ತಾ ಪಂಜಾಬ್‍ನ ಸಂಗೀತವನ್ನು ಅಮಿತ್ ತ್ರಿವೇದಿ ಸಂಯೋಜಿಸಿದರು. ದಿವಂಗತ ಶಿವ್ ಕುಮಾರ್ ಬಟಾಲ್ವಿ, ಶೆಲಿ ಮತ್ತು ವರುಣ್ ಗ್ರೋವರ್ ಹಾಡುಗಳಿಗೆ ಸಾಹಿತ್ಯವನ್ನು ಬರೆದಿದ್ದಾರೆ ಹಿನ್ನೆಲೆ ಸಂಗೀತವನ್ನು ಬೆನೆಡಿಕ್ಟ್ ಟೇಲರ್ ಮತ್ತು ನರೇನ್ ಚಂದಾವರ್ಕರ್ ಸಂಯೋಜಿಸಿದ್ದಾರೆ. ಸಂಗೀತ ಹಕ್ಕುಗಳನ್ನು ಜ಼ೀ ಮ್ಯೂಸಿಕ್ ಕಂಪನಿ ಪಡೆದುಕೊಂಡಿದೆ.

7 ಹಾಡುಗಳನ್ನು ಒಳಗೊಂಡಿರುವ ಸಂಪೂರ್ಣ ಧ್ವನಿವಾಹಿನಿಯನ್ನು 18 ಮೇ 2016 ರಂದು ಬಿಡುಗಡೆ ಮಾಡಲಾಯಿತು.[೧೬][೧೭]

ಹಾಡುಗಳ ಪಟ್ಟಿ[ಬದಲಾಯಿಸಿ]

ಎಲ್ಲದಕ್ಕೂ ಅಮಿತ್ ತ್ರಿವೇದಿ ಅವರ ಸಂಗೀತ

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಗಾಯಕ(ರು)ಸಮಯ
1."ಚಿಟ್ಟಾ ವೇ"ಶೆಲಿಬಾಬು ಹಾಬಿ, ಶಾಹಿದ್ ಮಲ್ಯ, ಭಾನು ಪ್ರತಾಪ್ ಸಿಂಗ್4:48
2."ದಾ ದಾ ದಸ್ಸೆ"ಶೆಲಿಕನಿಕಾ ಕಪೂರ್, ಬಾಬು ಹಾಬಿ4:01
3."ಇಕ್ ಕುಡಿ"ಶಿವ್ ಕುಮಾರ್ ಬಟಾಲ್ವಿಶಾಹಿದ್ ಮಲ್ಯ4:02
4."ಉಡ್-ದಾ ಪಂಜಾಬ್"ವರುಣ್ ಗ್ರೋವರ್ವಿಶಾಲ್ ದಾದ್ಲಾನಿ, ಅಮಿತ್ ತ್ರಿವೇದಿ4:35
5."ಹಸ್ ನಚ್ ಲೇ"ಶೆಲಿಶಾಹಿದ್ ಮಲ್ಯ4:30
6."ವಾದಿಯಾ"ಶೆಲಿಅಮಿತ್ ತ್ರಿವೇದಿ4:29
7."ಇಕ್ ಕುಡಿ" (ಪುನರಾವರ್ತಿತ ಆವೃತ್ತಿ)ಶಿವ್ ಕುಮಾರ್ ಬಟಾಲ್ವಿದಿಲ್‍ಜೀತ್ ದೋಸಾಂಝ್4:07
8."ಇಕ್ ಕುಡಿ" (ಕ್ಲಬ್ ಮಿಕ್ಸ್)ಶಿವ್ ಕುಮಾರ್ ಬಟಾಲ್ವಿಆಲಿಯಾ ಭಟ್, ದಿಲ್ಜೀತ್ ದೋಸಾಂಝ್4:14
9."ಇಕ್ ಕುಡಿ" (ಅಸೀಸ್ ಕೌರ್ ಆವೃತ್ತಿ)ಶಿವ್ ಕುಮಾರ್ ಬಟಾಲ್ವಿಅಸೀಸ್ ಕೌರ್4:07
ಒಟ್ಟು ಸಮಯ:38:53

ಬಿಡುಗಡೆ[ಬದಲಾಯಿಸಿ]

ಆಲಿಯಾ ಭಟ್ ಮತ್ತು ಕರೀನಾ ಕಪೂರ್ 2016 ರಲ್ಲಿ ಈ ಚಿತ್ರದ ಒಂದು ಪ್ರಚಾರ ಕಾರ್ಯಕ್ರಮದಲ್ಲಿ.

ಚಲನಚಿತ್ರವು ಪಾಷಂಡ ಭಾಷೆ ಮತ್ತು ಮಾದಕವಸ್ತು ಬಳಕೆಯ ದೃಶ್ಯಗಳಿಗೆ ಸಂಬಂಧಿಸಿದಂತೆ ಸೆನ್ಸಾರ್ ಮಂಡಳಿಯೊಂದಿಗೆ ಸಮಸ್ಯೆಗಳನ್ನು ಹೊಂದಿದೆ ಎಂದು ವರದಿಯಾಯಿತು. [೧೮] 9 ಜೂನ್ 2016 ರಂದು, ಸೆನ್ಸಾರ್ ಮಂಡಳಿಯು (ಸಿಬಿಎಫ್‌ಸಿ) ಚಿತ್ರ ಬಿಡುಗಡೆಯ ಮೊದಲು 94 ಕಡಿತಗಳು ಮತ್ತು 13 ಶಿಫಾರಸುಗಳ ಪಟ್ಟಿಯನ್ನು ಹೊರತಂದಿತು. 13 ಜೂನ್ 2016 ರಂದು ಬಾಂಬೆ ಹೈಕೋರ್ಟ್ ಉಡ್ತಾ ಪಂಜಾಬ್ ಅನ್ನು ಒಂದು ಕಡಿತ ಮತ್ತು ಹಕ್ಕು ನಿರಾಕರಣೆಗಳೊಂದಿಗೆ ಅನುಮತಿ ನೀಡಿತು. ಟಾಮಿ ಸಿಂಗ್ ( ಶಾಹಿದ್ ಕಪೂರ್ ) ಗುಂಪಿನ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ತೋರಿಸುವ ದೃಶ್ಯವನ್ನು ಕತ್ತರಿಸಬೇಕಾಗಿದೆ ಎಂದು ನ್ಯಾಯಾಲಯವು ತೀರ್ಪು ನೀಡಿತು. ಉಡ್ತಾ ಪಂಜಾಬ್‌ಗೆ 'ಎ' ಪ್ರಮಾಣಪತ್ರವನ್ನು ನೀಡಲಾಯಿತು.

ಪರಾಮರ್ಶನ ಸಮಸ್ಯೆಗಳು[ಬದಲಾಯಿಸಿ]

ಸಹ ನಿರ್ಮಾಪಕ ಕಶ್ಯಪ್ ಮತ್ತು ಸಿಬಿಎಫ಼್‍ಸಿ ಮುಖ್ಯಸ್ಥ ಪಹಲಾಜ್ ನಿಹಲಾನಿ ನಡುವೆ ಮಾದಕ ವಸ್ತುಗಳ ವಿಷಯವುಳ್ಳ ಈ ಚಿತ್ರದ ಬಗೆಗಿನ ಕಲಹ ಉಲ್ಬಣಗೊಂಡಿತು. ಕಶ್ಯಪ್‍ರಿಗೆ ಹಲವಾರು ಚಿತ್ರ ತಯಾರಕರ ಬೆಂಬಲ ಸಿಕ್ಕಿತು. ಪಹ್ಲಾಜ್ ನಿಹಲಾನಿಯವರನ್ನು ಸರ್ಕಾರದ ಕೈಗೊಂಬೆ ಎಂದು ಕರೆಯಲಾಯಿತು.[೧೯] ಚಲನಚಿತ್ರದ ನಿಗದಿತ ಬಿಡುಗಡೆಗೆ ಮುನ್ನ 'ಎ' ಪ್ರಮಾಣಪತ್ರವನ್ನು ನೀಡುವಂತೆ ನ್ಯಾಯಾಲಯವು ಮಂಡಳಿಗೆ ನಿರ್ದೇಶನ ನೀಡಿತು.[೨೦]

ಆನ್‌ಲೈನ್ ಕೃತಿಚೌರ್ಯ ಸಮಸ್ಯೆ[ಬದಲಾಯಿಸಿ]

15 ಜೂನ್ 2016 ರಂದು, ಚಿತ್ರದ ಕೆಲವು ಭಾಗಗಳನ್ನು ಆನ್‌ಲೈನ್‌ನಲ್ಲಿ ವಿವಿಧ ಸಮಾನಸ್ಕಂಧ ಹಂಚಿಕೆ ಜಾಲತಾಣಗಳಲ್ಲಿ ಸೋರಿಕೆ ಮಾಡಲಾಯಿತು. ಇತರ ಮಾಧ್ಯಮ ಹಂಚಿಕೆ ತಾಣಗಳಲ್ಲಿ ಇಡೀ ಚಿತ್ರವನ್ನು ಸೋರಿಕೆ ಮಾಡಲಾಯಿತು.

ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ[ಬದಲಾಯಿಸಿ]

ಉಡ್ತಾ ಪಂಜಾಬ್ ಚಿತ್ರವನ್ನು ವಿಮರ್ಶಕರು ಪ್ರಶಂಸಿಸಿದರು.[೧೧]

ಈ ಚಿತ್ರವನ್ನು ಸಿಬಿಎಫ್‌ಸಿ ಪಾಕಿಸ್ತಾನವು "ನಿಂದನೀಯ ಭಾಷೆಯ ಬಳಕೆಗಾಗಿ" ನಿಷೇಧಿಸಿತು.[೨೧]

ಬಾಕ್ಸ್ ಆಫ಼ಿಸ್[ಬದಲಾಯಿಸಿ]

ಈ ಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಆ ಸಮಯದಲ್ಲಿ ಶಾಹಿದ್ ಕಪೂರ್‌ರ ಅತಿದೊಡ್ಡ-ಆರಂಭಿಕ ಚಿತ್ರವೆನಿಸಿಕೊಂಡಿತು.[೨೨] 9 ಜುಲೈ 2016ರ ವೇಳೆ, ಈ ಚಿತ್ರವು ವಿಶ್ವಾದ್ಯಂತ 15 ಕೋಟಿಯಷ್ಟು (ಯುಎಸ್ $16.6 ದಶಲಕ್ಷ) ಗಳಿಸಿತ್ತು.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ಫಿಲ್ಮ್‌ಫೇರ್ ಪ್ರಶಸ್ತಿಗಳು

 • ಅತ್ಯುತ್ತಮ ಚಲನಚಿತ್ರ - ನಾಮನಿರ್ದೇಶಿತ
 • ಅತ್ಯುತ್ತಮ ನಿರ್ದೇಶಕ - ಅಭಿಷೇಕ್ ಚೌಬೆ - ನಾಮನಿರ್ದೇಶಿತ
 • ಅತ್ಯುತ್ತಮ ನಟ - ಶಾಹಿದ್ ಕಪೂರ್ - ನಾಮನಿರ್ದೇಶಿತ
 • ವಿಮರ್ಶಕರ ಅತ್ಯುತ್ತಮ ನಟ - ಶಾಹಿದ್ ಕಪೂರ್ - ನಾಮನಿರ್ದೇಶಿತ
 • ಅತ್ಯುತ್ತಮ ನಟಿ - ಆಲಿಯಾ ಭಟ್ - ಗೆಲುವು
 • ಅತ್ಯುತ್ತಮ ಪುರುಷ ಪ್ರಥಮ ಪ್ರವೇಶ - ದಿಲ್ಜೀತ್ ದೊಸಾಂಝ್ - ಗೆಲುವು
 • ಅತ್ಯುತ್ತಮ ಪೋಷಕ ನಟ - ದಿಲ್ಜೀತ್ ದೊಸಾಂಝ್ - ನಾಮನಿರ್ದೇಶಿತ
 • ಅತ್ಯುತ್ತಮ ಪೋಷಕ ನಟಿ - ಕರೀನಾ ಕಪೂರ್ - ನಾಮನಿರ್ದೇಶಿತ
 • ಅತ್ಯುತ್ತಮ ಸಂಗೀತ ಧ್ವನಿಸುರುಳಿ - ಅಮಿತ್ ತ್ರಿವೇದಿ - ನಾಮನಿರ್ದೇಶಿತ
 • ಅತ್ಯುತ್ತಮ ಗೀತಸಾಹಿತ್ಯ - ದಿವಂಗತ ಶಿವ್ ಕುಮಾರ್ ಬಟಲ್ವಿ ("ಇಕ್ ಕುಡಿ" ಹಾಡಿಗಾಗಿ) - ನಾಮನಿರ್ದೇಶಿತ
 • ಅತ್ಯುತ್ತಮ ಹಿನ್ನೆಲೆ ಗಾಯಕಿ - ಕನಿಕಾ ಕಪೂರ್ ("ದಾ ದಾ ದಸ್ಸೆ" ಹಾಡಿಗಾಗಿ) - ನಾಮನಿರ್ದೇಶಿತ
 • ಅತ್ಯುತ್ತಮ ವಸ್ತ್ರವಿನ್ಯಾಸ - ಪಾಯಲ್ ಸಲೂಜಾ - ಗೆಲುವು

ಉಲ್ಲೇಖಗಳು[ಬದಲಾಯಿಸಿ]

 1. "UDTA PUNJAB | British Board of Film Classification". www.bbfc.co.uk. Archived from the original on 2020-07-29. Retrieved 2020-11-25.
 2. "Udta Punjab's biz prospects dim". Business Standard. Retrieved 9 June 2016.
 3. "Will Udta Punjab 'fly high' at the box office?". DNA. Retrieved 20 June 2016.
 4. "Udta Punjab - Movie - Box Office India". boxofficeindia.com.
 5. "Box Office: Worldwide Collections and Day wise breakup of Udta Punjab :Bollywood Box Office - Bollywood Hungama". 18 June 2016.
 6. "Balaji Motion Pictures acquires Udta Punjab". Bollywood Hungama. 10 March 2015. Retrieved 10 March 2015.
 7. Gera, Sonal (9 February 2015). "I was the first to suggest that Kareena was perfect for Udta Punjab': Shahid Kapoor". The Indian Express. Retrieved 7 March 2015.
 8. "Cautious optimism over HC verdict on 'Udta Punjab'". 14 June 2016. Retrieved 15 June 2016.
 9. "Udta "Punjab". Retrieved 6 June 2017.
 10. "Udta Punjab First Day Business – Box Office India". boxofficeindia.com. Retrieved 18 June 2016.
 11. ೧೧.೦ ೧೧.೧ Arora, Priya (2018-07-11). "'Ghoul,' Netflix's First Horror Series From India, Will Give You Serious Chills". Huffington Post (in ಅಮೆರಿಕನ್ ಇಂಗ್ಲಿಷ್). Retrieved 2018-12-03.
 12. "62nd Filmfare Awards 2017: Winners' list". The Times of India. 15 January 2017. Retrieved 15 January 2017.
 13. "Gujarati films going for global cast, expertise". ದಿ ಟೈಮ್ಸ್ ಆಫ್‌ ಇಂಡಿಯಾ. 3 November 2016.
 14. "Shahid Kapoor begins shooting for Abhishek Chaubey's 'Udta Punjab'". Deccan Chronicle. 7 March 2015. Retrieved 7 March 2015.
 15. "Udta Punjab actors slash fees by half". Deccan Chronicle. 28 April 2016. Retrieved 2 May 2016.
 16. "Udta Punjab music album out now – newkerala.com #65163". www.newkerala.com. Retrieved 20 May 2016.
 17. "Shahid Kapoor, Alia Bhatt's 'Udta Punjab' is OUT with full music galore! Check out here". Zee News. 19 May 2016. Retrieved 20 May 2016.
 18. "Udta Punjab Censor Board issues". Huffingpost India. 28 May 2016. Retrieved 31 May 2016.
 19. "Row over 'Udta Punjab' escalates, Kashyap calls Censor chief". Deccan Chronicle India. 7 June 2016. Retrieved 7 June 2016.
 20. "Punjab and Haryana HC clears the way for Udta Punjab's release". India Today. 16 June 2016. Retrieved 17 June 2016.
 21. "Udta Punjab banned in Pakistan". The Nation (Pakistan). 20 June 2016. Retrieved 27 May 2017.
 22. "IIFA 2016: Never expected 'Udta Punjab' to be my biggest opening, says Shahid Kapoor". The Indian Express (in ಅಮೆರಿಕನ್ ಇಂಗ್ಲಿಷ್). 2016-06-30. Retrieved 2018-12-03.

ಹೊರಗಿನ ಕೊಂಡಿಗಳು[ಬದಲಾಯಿಸಿ]