ಮಳೆನೀರು ಕೊಯ್ಲು
ಮಳೆನೀರು ಕೊಯ್ಲು ಎಂಬುದು ಮಳೆನೀರನ್ನು ಒಟ್ಟುಗೂಡಿಸುವ, ಅಥವಾ ಸಂಚಯನ ಮಾಡುವ ಮತ್ತು ಶೇಖರಿಸಿಟ್ಟುಕೊಳ್ಳುವ ವಿಧಾನಕ್ಕಿರುವ ಹೆಸರು.[೧] ಕುಡಿಯುವ ನೀರನ್ನು ಒದಗಿಸಲು ಜಾನುವಾರುಗಳಿಗೆ ನೀರುಣಿಸಲು ನೀರಾವರಿಗಾಗಿ ನೀರಿನ ವ್ಯವಸ್ಥೆ ಮಾಡಲು ಅಥವಾ ಅಂತರ್ಜಲ ಪುನರ್ಭರ್ತಿಕಾರ್ಯ ಎಂದು ಕರೆಯಲಾಗುವ ಪ್ರಕ್ರಿಯೆಯೊಂದರಲ್ಲಿ ನೀರುಪೊಟರೆಯನ್ನು ಪುನಃ ತುಂಬಿಸಲು ಮಳೆನೀರು ಕೊಯ್ಲು ಪದ್ಧತಿಯನ್ನು ಬಳಸಿಕೊಂಡು ಬರಲಾಗಿದೆ. ಮನೆಗಳು, ಗುಡಾರಗಳು ಮತ್ತು ಸ್ಥಳೀಯ ಸಾರ್ವಜನಿಕ ಕಟ್ಟಡಗಳ ಛಾವಣಿಗಳಿಂದ ಅಥವಾ ವಿಶೇಷವಾಗಿ ಸಿದ್ಧಗೊಳಿಸಲಾದ ನೆಲದ ಪ್ರದೇಶಗಳಿಂದ ಸಂಗ್ರಹಿಸಲಾದ ಮಳೆನೀರು, ಕುಡಿಯುವ ನೀರಿಗೆ ತನ್ನದೇ ಆದ ಪ್ರಮುಖ ಕೊಡುಗೆಯನ್ನು ನೀಡಬಲ್ಲದು. ಕೆಲವೊಂದು ಸಂದರ್ಭಗಳಲ್ಲಿ, ಮಳೆನೀರು ಮಾತ್ರವೇ ಲಭ್ಯವಿರುವ ಏಕೈಕ, ಅಥವಾ ಮಿತವ್ಯಯದ ನೀರಿನ ಮೂಲವಾಗಿರಲು ಸಾಧ್ಯವಿದೆ. ಸ್ಥಳೀಯವಾಗಿ ದೊರೆಯುವ ಹೆಚ್ಚು ದುಬಾರಿಯಲ್ಲದ ಸಾಮಗ್ರಿಗಳಿಂದ ಮಳೆನೀರು ಕೊಯ್ಲಿನ ವ್ಯವಸ್ಥೆಗಳನ್ನು ಸರಳವಾಗಿ ನಿರ್ಮಿಸಬಹುದು, ಮತ್ತು ಬಹುತೇಕ ವಾಸಯೋಗ್ಯ ತಾಣಗಳಲ್ಲಿ ಇವು ಸಾಮರ್ಥ್ಯದಿಂದೊಡಗೂಡಿ ಯಶಸ್ವಿಯಾಗಿವೆ.
ಛಾವಣಿಯ ಮಳೆನೀರು ಸಾಮಾನ್ಯವಾಗಿ ಉತ್ತಮ ಗುಣಮಟ್ಟದ್ದಾಗಿರುತ್ತದೆಯಾದ್ದರಿಂದ, ಬಳಕೆಗೆ ಮೊದಲು ಅದನ್ನು ಸಂಸ್ಕರಿಸುವ ಅಗತ್ಯ ಕಂಡುಬರುವುದಿಲ್ಲ. ವಾರ್ಷಿಕವಾಗಿ 200ಮಿಮೀಗಿಂತಲೂ ಹೆಚ್ಚಿನ ಪ್ರಮಾಣದ ಒಂದು ಸರಾಸರಿ ಮಳೆಸುರಿತ ಕಂಡುಬರುವ, ಮತ್ತು ಸುಲಭಲಭ್ಯ ನೀರಿನ ಮೂಲಗಳು ಇರದ ಇನ್ನಾವುದೇ ಪ್ರದೇಶಗಳಲ್ಲಿ ಗೃಹಬಳಕೆಯ ಮಳೆಸುರಿತದ ಜಲಸಂಗ್ರಹಣಾ ವ್ಯವಸ್ಥೆಗಳು ಸೂಕ್ತವಾಗಿ ಕಂಡುಬರುತ್ತವೆ (ಸ್ಕಿನ್ನರ್ ಮತ್ತು ಕಾಟನ್, 1992). ಸರಳವಾದ ವಿಧಾನದಿಂದ ಮೊದಲ್ಗೊಂಡು ಸಂಕೀರ್ಣವಾದ ಕೈಗಾರಿಕಾ ವ್ಯವಸ್ಥೆಗಳವರೆಗೆ, ಮಳೆನೀರನ್ನು ಕೊಯ್ಲು ಮಾಡಲು ಹಲವಾರು ವಿಧದ ವ್ಯವಸ್ಥೆಗಳಿವೆ.
ಸಾಮಾನ್ಯವಾಗಿ, ಮಳೆನೀರನ್ನು ನೆಲದಿಂದ ಇಲ್ಲವೇ ಛಾವಣಿಯೊಂದರಿಂದ ಕೊಯ್ಲು ಮಾಡಲಾಗುತ್ತದೆ. ಈ ಎರಡೂ ವ್ಯವಸ್ಥೆಗಳಿಂದ ನೀರನ್ನು ಸಂಗ್ರಹಿಸಬಹುದಾದ ವೇಗವು ಸದರಿ ವ್ಯವಸ್ಥೆಯ ಯೋಜನಾ ಪ್ರದೇಶ, ಅದರ ಸಾಮರ್ಥ್ಯ, ಮತ್ತು ಮಳೆಸುರಿತದ ತೀವ್ರತೆಯನ್ನು ಅವಲಂಬಿಸಿರುತ್ತದೆ.
ನೆಲದ ಸಂಗ್ರಹಣಾ ವ್ಯವಸ್ಥೆಗಳು
[ಬದಲಾಯಿಸಿ]ನೆಲದ ಸಂಗ್ರಹಣೆಗಳ ವ್ಯವಸ್ಥೆಗಳು ನೀರನ್ನು ಒಂದು ಸಿದ್ಧಪಡಿಸಲಾದ ಸಂಗ್ರಹಣಾ ಪ್ರದೇಶದಿಂದ ಶೇಖರಣಾ ಪ್ರದೇಶಕ್ಕೆ ಹರಿಸುತ್ತವೆ ಅಥವಾ ನಿರ್ದೇಶಿಸುತ್ತವೆ. ಮಳೆಯ ನೀರಿನ ಅತ್ಯಂತ ಕೊರತೆಯಿರುವ ಮತ್ತು ಇತರ ಜಲಮೂಲಗಳು ಲಭ್ಯವಿಲ್ಲದಿರುವ ಪ್ರದೇಶಗಳಲ್ಲಿ ಮಾತ್ರವೇ ಸಾಮಾನ್ಯವಾಗಿ ಅವನ್ನು ಪರಿಗಣಿಸಲಾಗುತ್ತದೆ. ಪ್ರತ್ಯೇಕ ಕುಟುಂಬಗಳಿಗಿಂತ ಹೆಚ್ಚಾಗಿ ಸಣ್ಣ ಸಮುದಾಯಗಳಿಗೆ ಅವು ಹೆಚ್ಚು ಸೂಕ್ತವಾಗಿರುತ್ತವೆ. ನೆಲದ ಜಲಸಂಗ್ರಹಣಾ ವ್ಯವಸ್ಥೆಗಳನ್ನು ಸೂಕ್ತವಾಗಿ ವಿನ್ಯಾಸಗೊಳಿಸಿದ್ದೇ ಆದಲ್ಲಿ, ಅವು ಬೃಹತ್ ಪ್ರಮಾಣದಲ್ಲಿ ಮಳೆನೀರನ್ನು ಸಂಗ್ರಹಿಸಬಲ್ಲವಾಗಿರುತ್ತವೆ
ಛಾವಣಿಯ ಸಂಗ್ರಹಣಾ ವ್ಯವಸ್ಥೆಗಳು
[ಬದಲಾಯಿಸಿ]ಛಾವಣಿಯೊಂದರ ಮೇಲೆ ಬೀಳುವ ಮಳೆನೀರನ್ನು ಸೂರುದೋಣಿಗಳು ಮತ್ತು ಕೊಳಾಯಿಗಳ ಒಂದು ವ್ಯವಸ್ಥೆಯ ಮೂಲಕ ಶೇಖರಣಾ ವ್ಯವಸ್ಥೆಯೊಳಗೆ ಬೀಳುವಂತೆ ಛಾವಣಿಯ ಸಂಗ್ರಹಣಾ ವ್ಯವಸ್ಥೆಗಳು ನಿರ್ದೇಶಿಸುತ್ತವೆ. ಬೇಸಿಗೆ ಕಾಲವೊಂದರ ನಂತರದ ಮಳೆನೀರಿನ ಮೊದಲ ರಭಸವನ್ನು ಹಾಗೆಯೇ ಹರಿದುಹೋಗಲು ಬಿಡಬೇಕು. ಏಕೆಂದರೆ ಧೂಳು, ಪಕ್ಷಿಗಳ ಹಿಕ್ಕೆಗಳು ಇತ್ಯಾದಿಗಳಿಂದ ಅದು ಮಲಿನಗೊಂಡಿರುತ್ತದೆ. ನೀರು ನಿಲ್ಲುವುದನ್ನು ತಡೆಗಟ್ಟುವುದಕ್ಕಾಗಿ ಛಾವಣಿ ಸೂರುದೋಣಿಗಳು ಸಾಕಷ್ಟು ವಾಲಿಕೊಂಡಿರುವುದು ಅತ್ಯಗತ್ಯವಾಗಿರುತ್ತದೆ. ಗರಿಷ್ಟ ಪ್ರಮಾಣದ ನೀರಿನ ಹರಿವನ್ನು ಹೊತ್ತೊಯ್ಯುವಷ್ಟು ಅವು ಬಲವಾಗಿ ಮತ್ತು ದೊಡ್ಡದಾಗಿ ಇರಬೇಕಾಗುತ್ತದೆ.
ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟಲು ಹಾಗೂ ಆವಿಯಾಗುವಿಕೆಯ ನಷ್ಟಗಳು, ಅಶುದ್ಧವಾಗುವಿಕೆ ಮತ್ತು ಪಾಚಿಯ ಬೆಳವಣಿಗೆಯನ್ನು ತಗ್ಗಿಸಲು ಶೇಖರಣಾ ತೊಟ್ಟಿಗಳನ್ನು ಮುಚ್ಚಿರುವುದು ಅತ್ಯಗತ್ಯವಾಗಿರುತ್ತದೆ. ಮಳೆನೀರು ಕೊಯ್ಲು ವ್ಯವಸ್ಥೆಗಳನ್ನು ನಿರ್ಮಲವಾಗಿ ಹಾಗೂ ಉತ್ತಮ ಕಾರ್ಯನಿರ್ವಹಣಾ ಸ್ಥಿತಿಯಲ್ಲಿ ಇಟ್ಟುಕೊಳ್ಳಲು, ಅವುಗಳ ಕ್ರಮಬದ್ಧವಾದ ನಿರ್ವಹಣೆ ಹಾಗೂ ಶುದ್ಧೀಕರಣ ಕಾರ್ಯವು ಅಗತ್ಯವಾಗಿರುತ್ತದೆ.
ಕೆಳಮೇಲ್ಮೈ ಕಾಲುವೆ
[ಬದಲಾಯಿಸಿ]ಅಂತರ್ಜಲದ ಸ್ವಾಭಾವಿಕ ಹರಿವನ್ನು ತಡೆಗಟ್ಟಲು ನೀರುಪೊಟರೆಯೊಂದರಲ್ಲಿ ಒಂದು ಕೆಳಮೇಲ್ಮೈ ಕಾಲುವೆಯನ್ನು ನಿರ್ಮಿಸಲಾಗುತ್ತದೆ. ಇದರಿಂದಾಗಿ ಅಂತರ್ಜಲದ ಮಟ್ಟದಲ್ಲಿ ಹೆಚ್ಚಳವಾಗುತ್ತದೆ ಹಾಗೂ ನೀರುಪೊಟರೆಯಲ್ಲಿ ಶೇಖರಗೊಂಡ ನೀರಿನ ಪ್ರಮಾಣದಲ್ಲೂ ಹೆಚ್ಚಳವಾಗುತ್ತದೆ.
ICARನ ಬೆಂಬಲದೊಂದಿಗೆ ಕೇರಳ ಕೃಷಿ ವಿಶ್ವವಿದ್ಯಾಲಯದ ಅಡಿಯಲ್ಲಿ, ಕಣ್ಣೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಿರ್ಮಿಸಲಾಗಿರುವ ಕೆಳಮೇಲ್ಮೈ ಕಾಲುವೆಯು, ಮಳೆನೀರು ಕೊಯ್ಲಿನ ತಂತ್ರಜ್ಞಾನಗಳ ಮೂಲಕ ನೆಲದ ನೀರಿನ ಸಂರಕ್ಷಣೆಗೆ ಮೀಸಲಾದ ಒಂದು ಪರಿಣಾಮಕಾರೀ ವಿಧಾನವಾಗಿ ಮಾರ್ಪಟ್ಟಿದೆ. ಭಾರತದ ಕೇರಳ ರಾಜ್ಯದ ಅಂತರ್ಜಲ ಸಂಪನ್ಮೂಲಗಳನ್ನು ಸಂರಕ್ಷಿಸುವ ಮತ್ತು ಉಪಯೋಗಕ್ಕೆ ಬರುವಂತೆ ಮಾಡುವುದಕ್ಕಾಗಿರುವ ಒಂದು ಕಾರ್ಯಸಾಧ್ಯ ವಿಧಾನವಾಗಿ ಕೆಳಮೇಲ್ಮೈ ಕಾಲುವೆಯು ತನ್ನನ್ನು ಸಮರ್ಥಿಸಿಕೊಂಡಿದೆ. ಈ ಕಾಲುವೆಯು ಈಗ ಆ ಪ್ರದೇಶದಲ್ಲಿನ ಅತಿದೊಡ್ಡ ಮಳೆನೀರು ಕೊಯ್ಲು ವ್ಯವಸ್ಥೆಯಾಗಿದೆ.
ಅಂತರ್ಜಲ ಪುನರ್ಭರ್ತಿಕಾರ್ಯ
[ಬದಲಾಯಿಸಿ]ಮಳೆನೀರನ್ನು ಅಂತರ್ಜಲ ಪುನರ್ಭರ್ತಿಕಾರ್ಯಕ್ಕೂ ಬಳಸಬಹುದಾಗಿದ್ದು, ಇದರಲ್ಲಿ ನೆಲದ ಮೇಲೆ ಹರಿಯುವ ಹೆಚ್ಚುವರಿ ಪ್ರಮಾಣದ ನೀರು ಸಂಗ್ರಹಿಸಲ್ಪಡುತ್ತದೆ ಹಾಗೂ ಹೀರಿಕೆಗೆ ಒಳಗಾಗುವುದರ ಮೂಲಕ ಅಂತರ್ಜಲದ ಪ್ರಮಾಣದಲ್ಲಿ ಹೆಚ್ಚಳವಾಗಲು ಕಾರಣವಾಗುತ್ತದೆ. USನಲ್ಲಿ, ಛಾವಣಿ ಮೇಲಣ ಮಳೆನೀರನ್ನು ಒಟ್ಟುಗೂಡಿಸಿ ಸಂಪಿನಲ್ಲಿ ಶೇಖರಿಸಿಡಲಾಗುತ್ತದೆ.[೨] ಭಾರತದಲ್ಲಿ ಇದು ಬಾವ್ಡಿಗಳು ಮತ್ತು ಜೊಹಾಡ್‌ಗಳನ್ನು, ಅಥವಾ ಕೊಳಗಳನ್ನು ಒಳಗೊಳ್ಳುತ್ತದೆ. ಇವು ಸಣ್ಣ ತೊರೆಗಳಿಂದ ಬರುವ ನೆಲದ ಮೇಲೆ ಹರಿಯುವ ಹೆಚ್ಚುವರಿ ನೀರನ್ನು ವಿಶಾಲವಾದ ಪ್ರದೇಶದಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತವೆ.[೩][೪]
ಭಾರತದಲ್ಲಿ, ಟಂಕಾಗಳು ಎಂದು ಕರೆಯಲಾಗುತ್ತಿದ್ದ ಜಲಾಶಯಗಳನ್ನು ನೀರಿನ ಸಂಗ್ರಹಣೆಗೆಂದು ಬಳಸಲಾಗುತ್ತಿತ್ತು; ಇವು ಮಣ್ಣಿನ ಗೋಡೆಗಳನ್ನು ಹೊಂದುವುದರೊಂದಿಗೆ ಆಳವಿಲ್ಲದ ವಿಶಿಷ್ಟತೆಯನ್ನು ಹೊಂದಿದ್ದವು. ಪ್ರಾಚೀನ ಟಂಕಾಗಳು ಈಗಲೂ ಕೆಲವೊಂದು ಪ್ರದೇಶಗಳಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ.[೪]
ನಗರ ಪ್ರದೇಶಗಳಲ್ಲಿನ ಪ್ರಯೋಜನಗಳು
[ಬದಲಾಯಿಸಿ]ನಗರ ಪ್ರದೇಶಗಳಲ್ಲಿನ ಮಳೆನೀರು ಕೊಯ್ಲು ಪ್ರಕ್ರಿಯೆಯು ಬಗೆಬಗೆಯ ಕಾರಣಗಳನ್ನು ಹೊಂದಲು ಸಾಧ್ಯವಿದೆ. ನಗರದ ಅಗತ್ಯತೆಗಳಿಗಾಗಿ ಪೂರಕವಾದ ನೀರನ್ನು ಒದಗಿಸಲು, ನಗರ ಪ್ರದೇಶದ ಗಿಡ-ಮರಗಳಿಗಾಗಿ ಮಣ್ಣಿನ ತೇವಾಂಶದ ಮಟ್ಟವನ್ನು ಹೆಚ್ಚಿಸಲು, ಕೃತಕ ಮರುಭರ್ತಿ ವಿಧಾನದ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು, ನಗರ ಪ್ರದೇಶದಲ್ಲಿನ ನೀರಿನ ಉಕ್ಕಿಹರಿಯುವಿಕೆಯನ್ನು ತಗ್ಗಿಸಲು ಮತ್ತು ಅಂತರ್ಜಲದ ಗುಣಮಟ್ಟವನ್ನು ಸುಧಾರಿಸಲು ನಗರಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಒಂದು ಅಗತ್ಯ ಕ್ರಮವಾಗಿ ಕಂಡುಬರುತ್ತದೆ.
ಅಭಿವೃದ್ಧಿ ಹೊಂದಿದ ಪ್ರಪಂಚದ ನಗರ ಪ್ರದೇಶಗಳಲ್ಲಿ, ಗೃಹಬಳಕೆಯ ಮಟ್ಟವೊಂದರಲ್ಲಿ, ಕೊಯ್ಲುಮಾಡಲಾದ ಮಳೆನೀರನ್ನು ಶೌಚಾಲಯಗಳನ್ನು ಚೊಕ್ಕಟಗೊಳಿಸಲು ಹಾಗೂ ಬಟ್ಟೆ ಒಗೆಯಲು ಬಳಸಬಹುದು. ಗಡಸು ನೀರಿನ ಪ್ರದೇಶಗಳಲ್ಲಿ, ಇದಕ್ಕಾಗಿರುವ ಕೇಂದ್ರೀಯ ವಿತರಣಾ ಜಾಲದ ನೀರಿಗಿಂತ ಇದು ನಿಸ್ಸಂಶಯವಾಗಿ ಉಚ್ಚಮಟ್ಟದ್ದಾಗಿರುತ್ತದೆ. ಇದನ್ನು ಸ್ನಾನ ಅಥವಾ ವೃಷ್ಟಿ ಸ್ನಾನಕ್ಕಾಗಿಯೂ (ಷವರ್ ಬಾತ್) ಬಳಸಬಹುದು. ಆದರೆ ಕುಡಿಯುವುದಕ್ಕೆ ಮುಂಚಿತವಾಗಿ ಇದನ್ನು ಸಂಸ್ಕರಿಸಬೇಕಾಗಬಹುದು.
ನ್ಯೂಜಿಲೆಂಡ್‌ನಲ್ಲಿ, ದೊಡ್ಡ ಪಟ್ಟಣಗಳು ಹಾಗೂ ನಗರಗಳಿಂದ ದೂರವಿರುವ ಅನೇಕ ಮನೆಗಳು, ಎಲ್ಲಾ ಗೃಹಕೃತ್ಯದ ಚಟುವಟಿಕೆಗಳಿಗಾಗಿರುವ ಏಕೈಕ ನೀರಿನ ಮೂಲವಾಗಿ ಛಾವಣಿಗಳಿಂದ ಸಂಗ್ರಹಿಸಿದ ಮಳೆನೀರನ್ನು ವಾಡಿಕೆಯಂತೆ ಅವಲಂಬಿಸಿವೆ. ಅನೇಕ ವಿರಾಮಧಾಮಗಳದ್ದೂ ಹೆಚ್ಚೂಕಮ್ಮಿ ಇದೇ ಅನಿವಾರ್ಯ ಪರಿಸ್ಥಿತಿ ಎನ್ನಬಹುದು.
ಗುಣಮಟ್ಟ
[ಬದಲಾಯಿಸಿ]ಮಳೆನೀರು ಮಲಿನಗೊಳ್ಳುವ ಸಾಧ್ಯತೆಗಳಿರುತ್ತವೆಯಾದ್ದರಿಂದ, ಸಂಸ್ಕರಣೆ ಪ್ರಕ್ರಿಯೆಗೆ ಒಳಪಡಿಸದೆ ಅದನ್ನು ಕುಡಿಯುವುದಕ್ಕಾಗಿ ಬಳಸುವುದು ಅಷ್ಟು ಸೂಕ್ತವೆಂದು ಪರಿಗಣಿಸಲ್ಪಟ್ಟಿಲ್ಲ. ಆದಾಗ್ಯೂ, ಸಂಸ್ಕರಣೆಗೆ ಒಳಪಡಿಸಿದ ನಂತರ ಕುಡಿಯುವುದೂ ಸೇರಿದಂತೆ, ಮಳೆನೀರನ್ನು ಎಲ್ಲಾ ಉದ್ದೇಶಗಳಿಗೂ ಬಳಸಲಾಗುತ್ತಿರುವುದಕ್ಕೆ ಅನೇಕ ಉದಾಹರಣೆಗಳಿವೆ.
ಚಾವಣಿಗಳಿಂದ ಕೊಯ್ಲು ಮಾಡಿದ ಮಳೆನೀರಿನಲ್ಲಿ ಈ ಎಲ್ಲಾ ಘಟಕಗಳೂ ಇರಲು ಸಾಧ್ಯವಿದೆ: ಪ್ರಾಣಿ ಮತ್ತು ಪಕ್ಷಿಯ ಹಿಕ್ಕೆ, ಪಾಚಿಗಳು ಮತ್ತು ಕಲ್ಲುಹೂವುಗಳು, ಗಾಳಿಯಲ್ಲಿ ತೂರಿಬಂದ ಧೂಳು, ನಗರಪ್ರದೇಶದ ಮಾಲಿನ್ಯದಿಂದ ಬಂದ ಪೃಥಕ್ಕಣ ವಸ್ತುಗಳು, ಕೀಟನಾಶಕಗಳು, ಮತ್ತು ಸಮುದ್ರದಿಂದ ಬಂದ ಅಕಾರ್ಬನಿಕ ಅಯಾನುಗಳು (Ca, Mg, Na, K, Cl, SO4), ಮತ್ತು ಕರಗಿಹೋದ ಅನಿಲಗಳು (CO2, NOx, SOx). ಯುರೋಪ್‌ನಲ್ಲಿನ ಮಳೆನೀರಿನಲ್ಲಿ ಕೀಟನಾಶಕಗಳ ಉನ್ನತ ಮಟ್ಟಗಳು ಕಂಡುಬಂದಿದ್ದು, ಬೇಸಿಗೆಕಾಲ ಮುಗಿದ ತಕ್ಷಣವೇ ಬೀಳುವ ಮೊದಲ ಮಳೆಯಲ್ಲಿ ಇವುಗಳ ಸಾಂದ್ರತೆಗಳು ಹೆಚ್ಚಿರುತ್ತವೆ;[೫] ಮೇಲೆ ವಿವರಿಸಲಾದ ವಿಧಾನದಂತೆ ನೀರಿನ ಆರಂಭಿಕ ಹರಿವನ್ನು ತ್ಯಾಜ್ಯವಾಗಿ ದಿಕ್ಕುಬದಲಿಸಿ ಹರಿಯಬಿಡುವ ಮೂಲಕ ಇವುಗಳ ಸಾಂದ್ರತೆ ಹಾಗೂ ಇತರ ಮಾಲಿನ್ಯಕಾರಕಗಳನ್ನು ಗಣನೀಯವಾಗಿ ತಗ್ಗಿಸಲಾಗುತ್ತದೆ. ಸದರಿ ನೀರನ್ನು ಸೂಕ್ತವಾಗಿ ವಿಶ್ಲೇಷಿಸುವುದು ಅಗತ್ಯವಾಗಿದ್ದು, ನಂತರ ಇದನ್ನು ಅದರ ರಕ್ಷಣೆಗೆ ಸೂಕ್ತವಾಗಿರುವ ರೀತಿಯಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ ಗನ್ಸು ಪ್ರಾಂತ್ಯದಲ್ಲಿ, ಕೊಯ್ಲು ಮಾಡಲಾದ ಮಳೆನೀರನ್ನು ಕುಡಿಯಲು ಬಳಕೆ ಮಾಡುವುದಕ್ಕೆ ಮುಂಚಿತವಾಗಿ, ಪರವಲಯಾಕೃತಿಯ ಸೌರ ಅಡುಗೆಪಾತ್ರೆಗಳಲ್ಲಿ (ಪ್ಯಾರಬಾಲಿಕ್ ಸೋಲಾರ್ ಕುಕರ್) ಕುದಿಸಲಾಗುತ್ತದೆ.[೬] ಬ್ರೆಝಿಲ್‌ನಲ್ಲಿ ಇಂಥ ನೀರನ್ನು ಕುಡಿಯುವುದಕ್ಕೆ ಮುಂಚಿತವಾಗಿ ಅದರ ಸೋಂಕು ನಿವಾರಿಸಲು ಪಟಿಕ ಮತ್ತು ಕ್ಲೋರೀನ್‌ಗಳನ್ನು ಸೇರಿಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಸೌರ ನೀರು ಸೋಂಕುನಿವಾರಣೆಯಂಥ "ಸೂಕ್ತ ತಂತ್ರಜ್ಞಾನ" ಎಂದು ಕರೆಯಲಾಗುವ ವಿಧಾನಗಳು, ಶೇಖರಿಸಿಡಲಾದ ಮಳೆಯ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಬಳಸುವುದರ ಸಂಸ್ಕರಣೆಗಾಗಿರುವ ಕಡಿಮೆ-ವೆಚ್ಚದ[ಸೂಕ್ತ ಉಲ್ಲೇಖನ ಬೇಕು] ಸೋಂಕುನಿವಾರಣಾ ಆಯ್ಕೆಗಳನ್ನು ಒದಗಿಸುತ್ತವೆ.
ವ್ಯವಸ್ಥೆಯ ಗಾತ್ರವನ್ನು ನಿರ್ಧರಿಸುವಿಕೆ
[ಬದಲಾಯಿಸಿ]ಬೇಸಿಗೆ ಕಾಲದಾದ್ಯಂತ ಕಂಡುಬರುವ ನೀರಿನ ಬೇಡಿಕೆಯನ್ನು ಪೂರೈಸಲು ಅನುವಾಗುವಂತೆ ವ್ಯವಸ್ಥೆಯ ಗಾತ್ರವನ್ನು ನಿರ್ಧರಿಸುವುದು ಅಥವಾ ವಿಂಗಡಿಸುವುದು ಅತಿಮುಖ್ಯ ವಿಷಯವಾಗಿದೆ. ಸಾಮಾನ್ಯವಾಗಿ ಹೇಳುವುದಾದರೆ, ಬೇಸಿಗೆ ಕಾಲದಾದ್ಯಂತ ಕಂಡುಬರುವ ನೀರಿನ ದೈನಂದಿನ ಅವಶ್ಯಕತೆಯನ್ನು ಪೂರೈಸಲು ಸಾಕಾಗುವಷ್ಟು ಸಂಗ್ರಹಣಾ ತೊಟ್ಟಿಯ ಗಾತ್ರವಿರಬೇಕು. ಇದರ ಜೊತೆಗೆ, ಸಂಗ್ರಹಣಾ ಪ್ರದೇಶ ಅಥವಾ ಛಾವಣಿಯ ಗಾತ್ರವು ತೊಟ್ಟಿಯನ್ನು ತುಂಬಿಸಬಲ್ಲಷ್ಟು ದೊಡ್ಡದಾಗಿರಬೇಕು.
ವಿಶ್ವದಾದ್ಯಂತದ ವ್ಯವಸ್ಥೆಗಳು
[ಬದಲಾಯಿಸಿ]- ಪ್ರಸ್ತುತ ಚೀನಾ ಮತ್ತು ಬ್ರೆಝಿಲ್‌ನಲ್ಲಿ, ಕುಡಿಯುವ ನೀರು, ಗೃಹಬಳಕೆಯ ನೀರು, ಜಾನುವಾರುಗಳಿಗೆ ಬೇಕಾಗುವ ನೀರು, ಸಣ್ಣ ನೀರಾವರಿಗೆ ಬೇಕಾಗಿರುವ ನೀರನ್ನು ಒದಗಿಸಲು ಹಾಗೂ ಅಂತರ್ಜಲ ಮಟ್ಟಗಳನ್ನು ಪುನಃ ಭರ್ತಿಮಾಡುವ ಒಂದು ವಿಧಾನವಾಗಿ ಛಾವಣಿ ಮೇಲಣ ಮಳೆನೀರು ಕೊಯ್ಲು ಪದ್ಧತಿಯನ್ನು ಆಚರಿಸಲಾಗುತ್ತಿದೆ. ಚೀನಾದಲ್ಲಿನ ಗನ್ಸು ಪ್ರಾಂತ್ಯ ಹಾಗೂ ಅರೆ-ಶುಷ್ಕ ಈಶಾನ್ಯ ಬ್ರೆಝಿಲ್ ಪ್ರದೇಶಗಳಲ್ಲಿ ಬೃಹತ್ ಪ್ರಮಾಣದ ಛಾವಣಿ ಮೇಲಣ ಮಳೆನೀರು ಕೊಯ್ಲು ಯೋಜನೆಗಳು ಪ್ರಗತಿಯಲ್ಲಿವೆ.
- ಭಾರತದ ರಾಜಾಸ್ತಾನದಲ್ಲಿ, ಥಾರ್ ಮರುಭೂಮಿ ಪ್ರದೇಶದ ಜನರಿಂದ ಮಳೆನೀರು ಕೊಯ್ಲು ವಿಧಾನವು ಸಾಂಪ್ರದಾಯಿಕವಾಗಿ ಆಚರಿಸಲ್ಪಡುತ್ತಿದೆ.
- ಬರ್ಮುಡಾದಲ್ಲಿ, ಎಲ್ಲಾ ಹೊಸ ನಿರ್ಮಾಣ ಕಾಮಗಾರಿಗಳಲ್ಲಿ ಅದರ ನಿವಾಸಿಗಳಿಗೆ ಸಾಕಾಗುವಷ್ಟು ಪ್ರಮಾಣದಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸುವುದನ್ನು ಅಲ್ಲಿನ ಕಾನೂನು ಕಡ್ಡಾಯವಾಗಿಸಿದೆ.
- U.S. ವರ್ಜಿನ್ ದ್ವೀಪಗಳು ಕೂಡಾ ಇದೇ ಬಗೆಯ ಒಂದು ಕಾನೂನನ್ನು ಹೊಂದಿವೆ.
- ಇಂಡಸ್ ಕಣಿವೆ ನಾಗರಿಕತೆಯಲ್ಲಿ, ಮುಂಬಯಿಯಲ್ಲಿನ ಎಲಿಫೆಂಟಾ ಗುಹೆಗಳು ಮತ್ತು ಕನ್ಹೇರಿ ಗುಹೆಗಳಲ್ಲಿ ಅವುಗಳ ನೀರಿನ ಅವಶ್ಯಕತೆಗಳನ್ನು ಪೂರೈಸಲು ಮಳೆನೀರು ಕೊಯ್ಲು ವಿಧಾನವೊಂದನ್ನೇ ಬಳಸಲಾಗಿದೆ.
- ಸೆನೆಗಲ್/ಗಿನಿಯಾ-ಬಿಸ್ಸಾವು ಪ್ರದೇಶದಲ್ಲಿನ ಡಿಯೋಲಾ-ಜನರ ಮನೆಗಳು ಮನೆಯಲ್ಲಿ ನಿರ್ಮಿತವಾದ ಸ್ಥಳೀಯ ಸಾವಯವ ವಸ್ತುಗಳಿಂದ ಮಾಡಲ್ಪಟ್ಟ ಮಳೆನೀರು ಕೊಯ್ಲು ವ್ಯವಸ್ಥೆಗಳನ್ನು ಅಳವಡಿಸಿಕೊಂಡಿವೆ.
- ಯುನೈಟೆಡ್ ಕಿಂಗ್‌ಡಂನಲ್ಲಿನ ಸ್ಥಳೀಯ ತೋಟಗಳಲ್ಲಿ ನೀರು ಪೀಪಾಯಿಗಳು ಸಾಮಾನ್ಯವಾಗಿದ್ದು, ಇವು ಮಳೆನೀರನ್ನು ಸಂಗ್ರಹಿಸಿ ನಂತರ ತೋಟಕ್ಕೆ ನೀರುಣಿಸಲು ಅದನ್ನು ಬಳಸುತ್ತವೆ.
- ಮೈನ್‌ಮಾರ್‌ನ ಆಯೆರ್‌ವಾಡಿ ನದೀಮುಖಜ ಭೂಮಿಯಲ್ಲಿ ಅಂತರ್ಜಲವು ಲವಣಯುಕ್ತವಾಗಿರುತ್ತದೆ ಮತ್ತು ಬೇಸಿಗೆ ಕಾಲದಾದ್ಯಂತ ತಮ್ಮ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಇಲ್ಲಿನ ಸಮುದಾಯಗಳು ಮಣ್ಣು-ಲೇಪಿತ ಮಳೆನೀರಿನ ಕೊಳಗಳನ್ನು ಅವಲಂಬಿಸುತ್ತವೆ. ಇವುಗಳ ಪೈಕಿ ಕೆಲವೊಂದು ಕೊಳಗಳು ಶತಮಾನಗಳಷ್ಟು ಹಳೆಯದಾಗಿವೆ ಹಾಗೂ ಇವುಗಳನ್ನು ಅತೀವ ಪವಿತ್ರಭಾವನೆ ಮತ್ತು ಗೌರವಗಳೊಂದಿಗೆ ನೋಡಿಕೊಳ್ಳಲಾಗುತ್ತದೆ.
- 2009ರ ತನಕ ಕೊಲರೆಡೋನಲ್ಲಿ, ನೀರಿನ ಹಕ್ಕುಗಳ ಕಾನೂನುಗಳು ಮಳೆನೀರು ಕೊಯ್ಲಿಗೆ ನಿರ್ಬಂಧ ಹೇರಿದವು; ಓರ್ವ ಸ್ವತ್ತುಮಾಲೀಕನು ಮಳೆಯ ನೀರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಜಲಾನಯನ ಪ್ರದೇಶದಿಂದ ನೀರನ್ನು ಪಡೆಯುವ ಹಕ್ಕುಗಳನ್ನು ಹೊಂದಿರುವ ಜನರಿಂದ ಅದನ್ನು ಕಸಿದುಕೊಳ್ಳುತ್ತಾನೆ ಎಂಬುದು ಈ ನಿರ್ಬಂಧದ ಹಿಂದಿನ ದೃಷ್ಟಿಕೋನವಾಗಿತ್ತು. 2007ರಲ್ಲಿನ ಅಧ್ಯಯನವೊಂದು ಸದರಿ ಕಾನೂನನ್ನು ಬದಲಾಯಿಸುವಂತೆ ಕೊಲರೆಡೋ ಶಾಸನಸಭೆಯ ಮನವೊಲಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಈ ಅಧ್ಯಯನವು, ಸರಾಸರಿ ವರ್ಷವೊಂದರಲ್ಲಿ ಡೆನ್ವರ್‌ನ ದಕ್ಷಿಣದ ಉಪನಗರಗಳಲ್ಲಿನ ಡೊಗ್ಲಸ್ ಪ್ರಾಂತ್ಯದಲ್ಲಿ ಬಿದ್ದ ಮಳೆಯ ಪ್ರಮಾಣದ 97%ನಷ್ಟು ಭಾಗವು ತೊರೆಯೊಂದನ್ನು ಸೇರಲೇ ಇಲ್ಲ; ಬದಲಿಗೆ ಇದನ್ನು ಸಸ್ಯಗಳು ಬಳಸಿದವು, ಇಲ್ಲವೇ ಭೂಮಿಯ ಮೇಲೆಯೇ ಅದು ಆವಿಯಾಗಿ ಹೋಯಿತು ಎಂಬ ಅಂಶವನ್ನು ಹೊರಹಾಕಿತ್ತು. ಅಟಾಹ್ ಮತ್ತು ವಾಷಿಂಗ್ಟನ್ ಸಂಸ್ಥಾನಗಳಲ್ಲಿ, ಛಾವಣಿಯ ಮಾಲೀಕನು ನೆಲದ ಮೇಲಿನ ನೀರಿನ ಹಕ್ಕುಗಳನ್ನೂ ಹೊಂದದ ಹೊರತು, ಛಾವಣಿಯಿಂದ ಮಳೆನೀರನ್ನು ಸಂಗ್ರಹಿಸುವುದು ಕಾನೂನುಬಾಹಿರವಾಗಿದೆ. ನ್ಯೂಮೆಕ್ಸಿಕೊದಲ್ಲಿ, ಸಾಂಟಾ ಫೆಯಲ್ಲಿನ ಹೊಸ ವಾಸದ ಅವಕಾಶಗಳಿಗಾಗಿ ಮಳೆನೀರು ಸಂಗ್ರಹಣಾ ವಿಧಾನದ ಅಳವಡಿಕೆಯು ಕಡ್ಡಾಯವಾಗಿದೆ.[೭]
ಇದನ್ನೂ ಗಮನಿಸಿ
[ಬದಲಾಯಿಸಿ]ಆಕರಗಳು
[ಬದಲಾಯಿಸಿ]- ↑ ಡೆಫನಿಷನ್ ಆಫ್ ರೇನ್‌ವಾಟರ್ ಹಾರ್ವೆಸ್ಟಿಂಗ್
- ↑ ರೇನ್‌ವಾಟರ್ ಹಾರ್ವೆಸ್ಟಿಂಗ್ ಅಂಡ್ ವಾಟರ್ ಪ್ಯೂರಿಫಿಕೇಷನ್ ಸಿಸ್ಟಮ್.
- ↑ ದಿ ರಿವರ್ ಮೇಕರ್, ನ್ಯೂ ಸೈಂಟಿಸ್ಟ್, 2002ರ ಸೆಪ್ಟೆಂಬರ್ 7. ಆನ್‌ಲೈನ್ ಆವೃತ್ತಿ (ಚಂದಾದಾರಿಕೆಯ ಮೂಲಕ ಸಂಪೂರ್ಣ ಲೇಖನ ಲಭ್ಯ)
- ↑ ೪.೦ ೪.೧ "ರೀಮಾ ಹೂಜಾ: "ಚಾನೆಲಿಂಗ್ ನೇಚರ್: ಹೈಡ್ರಾಲಿಕ್ಸ್, ಟ್ರೆಡಿಷನಲ್ ನಾಲೆಜ್ ಸಿಸ್ಟಮ್ಸ್, ಅಂಡ್ ವಾಟರ್ ರಿಸೋರ್ಸ್ ಮ್ಯಾನೇಜ್‌ಮೆಂಟ್ ಇನ್ ಇಂಡಿಯಾ - ಎ ಹಿಸ್ಟಾರಿಕಲ್ ಪರ್‌ಸ್ಪೆಕ್ಟಿವ್"". Archived from the original on 2010-09-03. Retrieved 2010-01-15.
- ↑ ಇಟ್ಸ್ ರೇನಿಂಗ್ ಪೆಸ್ಟಿಸೈಡ್ಸ್, ನ್ಯೂ ಸೈಂಟಿಸ್ಟ್ , 1999ರ ಏಪ್ರಿಲ್ 3.
- ↑ [೧]
- ↑ Johnson, Kirk (June 28, 2009). "It's Now Legal to Catch a Raindrop in Colorado". ದ ನ್ಯೂ ಯಾರ್ಕ್ ಟೈಮ್ಸ್. Retrieved 2009-06-30.
Precipitation, every last drop or flake, was assigned ownership from the moment it fell in many Western states, making scofflaws of people who scooped rainfall from their own gutters. In some instances, the rights to that water were assigned a century or more ago.
{{cite news}}
: Cite has empty unknown parameter:|coauthors=
(help)
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಳಒಳಗೊಂಂ
- ರ
- ಟೆಕ್ಸಾಸ್ A&