ಆವಣಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮುಖ್ಯ ದೇವಾಲಯ
ಸೀತ ದೇವಿ ದೇವಾಲಯದ ಗೊಪುರ

ಕೋಲಾರ ಜಿಲ್ಲೆಮುಳಬಾಗಿಲು ತಾಲೂಕಿನಲ್ಲಿರುವ ಪುಣ್ಯಕ್ಷೇತ್ರ ಆವನಿ. ರಾಮಾಯಣ ಬರೆದ ಆದಿ ಕವಿ ವಾಲ್ಮೀಕಿ ಮಹರ್ಷಿಗಳ ತಪೋಭೂಮಿಯೂ, ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರದ ಧರ್ಮಪತ್ನಿ ಸೀತಾಮಾತೆ, "ಲವ" ಮತ್ತು "ಕುಶ" ರಿಗೆ ಜನ್ಮ ನೀಡಿದ ಪುಣ್ಯಭೂಮಿಯೂ ಆದ ಈ ಕ್ಷೇತ್ರ ವಾಲ್ಮೀಕಿ ಮಹರ್ಷಿಗಳ ತಪೋಭೂಮಿಯಾಗಿ ಅಹವನೀಯಾಗಿತ್ತು, ಅವಣ್ಯ, ಅವಣೆ ಎಂದೂ ಕರೆಸಿಕೊಂಡಿದ್ದ ಈ ಊರು ಕಾಲಾನಂತರದಲ್ಲಿ ಆವನಿಯಾಯಿತು. ಈ ಕ್ಷೇತ್ರದಲ್ಲಿ ರುದ್ರಭಟ್ಟಾರಕರು ಅಹವನೀಯ ಯಾಗ ಮಾಡಿದ ಕಾರಣ ಈ ಕ್ಷೇತ್ರ ಆಹವನೀಯವಾಯಿತು. ಇಲ್ಲಿ ವಾಲ್ಮೀಕಿ ಮಹರ್ಷಿಗಳ ಆಶ್ರಮವಿತ್ತು. ರಾಮನಿಂದ ಪರಿತ್ಯಕ್ತಳಾದ ಸೀತಾದೇವಿ ಇಲ್ಲಿ ಬಂದ ನೆಲೆಸಿ, ಲವನಿಗೆ ಜನ್ಮವಿತ್ತರಂತೆ. ಕುಶನ ಸೃಷ್ಟಿಯಾದದ್ದೂ ಇಲ್ಲಿಯೇ. ಶ್ರೀರಾಮಚಂದ್ರ ಪಾಪ ಪ್ರಾಯಶ್ಚಿತ್ತಾರ್ಥ ಲಿಂಗ ಪ್ರತಿಷ್ಠಾಪಿಸಿ ಪೂಜಿಸಿದನಂತೆ. ಈ ಕ್ಷೇತ್ರದ ಬೆಟ್ಟದ ಮೇಲೆ ಸೀತಾ ಮಾತೆ, ವಾಲ್ಮೀಕಿ ಮಹರ್ಷಿಗಳ ಆಣತಿಯಂತೆ ಸ್ವರ್ಣಗೌರಿ ವ್ರತವನ್ನಾಚರಿಸಿದ್ದಳಂತೆ. ಆಗ ಪಾರ್ವತಿ ಇಲ್ಲಿ ಸೀತಾದೇವಿಗೆ ದರ್ಶನವಿತ್ತು ಹರಸಿದಳು. ಹೀಗಾಗಿ ಈ ಬೆಟ್ಟ ಪಾರ್ವತಿ ಬೆಟ್ಟವೆಂದೇ ಕರೆಸಿಕೊಂಡಿತ್ತು. ಇಷ್ಟೆಲ್ಲಾ ಮಹಿಮಾನ್ವಿತವಾದ ಈ ಕ್ಷೇತ್ರದಲ್ಲಿ ಶ್ರೀಶ್ರೀ ಆವನಿ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನಕ್ಕೆ ಸೇರಿದ ಶ್ರೀ ಶಾರದಾಪೀಠವಿದೆ. ಸನಾತನ ಧರ್ಮವನ್ನು ಪುನಶ್ಚೇತನಗೊಳಿಸಿದ ಶಂಕರ ಭಗವತ್ಪಾದರು ದೇಶದ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಿದ ಚತುರಾಮ್ನಾಯ ಪೀಠಗಳ ಪೈಕಿ ಒಂದಾದ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ೧೨ನೇ ಪೀಠಸ್ಥ ಆಚಾರ್ಯರಾಗಿದ್ದ ಜಗದ್ಗುರು ಶ್ರೀ ನರಸಿಂಹ ಭಾರತೀ ಸ್ವಾಮೀಜಿಯವರು ಧರ್ಮ ಪ್ರಚಾರ ಉದ್ದೇಶದಿಂದ ತೀರ್ಥಯಾತ್ರೆ ಕೈಗೊಂಡಾಗ, ಕೋಲಾಹಲಪುರ ಇಂದಿನ ಕೋಲಾರದ ಬಳಿ ತಾಯಿ ಶಾರದಾ ಮಾತೆಯ ಆದೇಶದಂತೆ ಧರ್ಮಪೀಠ ಸ್ಥಾಪಿಸಿದರು. ಅವರ ನಂತರ ಸಿದ್ಧ ಪುರುಷರು ಆವಿರ್ಭಾವಗೊಂಡು ಆ ಜ್ಞಾನಪೀಠದ ಪರಂಪರೆಯನ್ನು ಮುಂದುವರಿಸಿದರು. ಸ್ವತಂತ್ರ ಪೀಠವಾಗಿ ಅಂದಿನಿಂದ ಇಂದಿನವರೆಗೂ ಜಗದ್ಗುರುಗಳ ಸಂಸ್ಥಾನದಲ್ಲಿ ೨೧ ಆಚಾರ್ಯರು ವಿರಾಜಮಾನರಾಗಿದ್ದಾರೆ. ಕೋಲಾಹಲ ಪುರದಲ್ಲಿ ಸ್ಥಳ ಮಹಿಮೆಯಿಂದ ಆಗಿದ್ದಾಗ್ಗೆ ತಪೋಭಂಗವಾಗುತ್ತಿದ್ದ ಕಾರಣ ಮಹಿಮಾನ್ವಿತವಾದ ಆವನಿಗೆ ಪೀಠವನ್ನು ೫೦೦ ವರ್ಷಗಳ ಹಿಂದೆ ಅಂದಿನ ಪೀಠಾಧ್ಯಕ್ಷರು ವರ್ಗಾಯಿಸಿದರು ಎಂದು ತಿಳಿದುಬರುತ್ತದೆ. ಅಂದಿನಿಂದ ಶ್ರೀಮಠವು ಶತಶೃಂಗ ಪರ್ವತ ಸನ್ನಿಹಿತ ಕೋಲಾಹಲಪುರೀ ಪೀಠವಾಗಿ ಧರ್ಮ ಪ್ರಚಾರ ಮಾಡುತ್ತಾ ಬಂದಿದೆ. ಸಂಸ್ಥಾನದ ೨೧ನೇ ಜಗದ್ಗುರುಗಳಾದ ಶ್ರೀ ಅಭಿನವೋದ್ದಂಡ ವಿದ್ಯಾರಣ್ಯ ಭಾರತೀ ಸ್ವಾಮೀಜಿಯವರು ತಮ್ಮ ೧೬ನೇ ವಯಸ್ಸಿನಲ್ಲಿಯೇ ಸನ್ಯಾಸ ಸ್ವೀಕರಿಸಿ ಪೀಠದ ಮಹತ್ವವನ್ನು ತಿಳಿಸಿದ ದೇಶದ ಉದ್ದಗಲ ಸಂಚರಿಸಿ ಧರ್ಮ ಪ್ರಚಾರ ಮಾಡಿದ ಸಂದರ್ಭದಲ್ಲಿ ರಾಜ ಮಹಾರಾಜರು ನೀಡಿದ ಕಾಣಿಕೆಗಳಿಂದ ಮಠವನ್ನು ಅಭಿವೃದ್ಧಿ ಪಡಿಸಿದರು. ಈ ಪರಂಪರಾಗತ ಭವ್ಯಪೀಠದಲ್ಲಿ ಪ್ರಸ್ತುತ ೨೨ನೇ ಜಗದ್ಗುರುಗಳಾದ ಶ್ರೀ ಅಭಿನವ ವಿದ್ಯಾಶಂಕರ ಭಾರತೀ ಸ್ವಾಮೀಜಿಗಳವರು ಪಟ್ಟಾಭಿಷಿಕ್ತರಾಗಿದ್ದಾರೆ. ೧೯೮೭ರಲ್ಲಿ ಪೀಠಾರೋಹಣ ಮಾಡಿದ ಜಗದ್ಗುರುಗಳು, ೧೯೯೮ರಲ್ಲಿ ಇಲ್ಲಿ ಭವ್ಯವಾದ ಹಾಗೂ ಪ್ರಮಾಣಬದ್ಧವಾದ ನಿಂತಿರುವ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪಿಸಿ, ಸುಂದರ ದೇವಾಲಯ ನಿರ್ಮಿಸಿದ್ದಾರೆ. ಮಠದಲ್ಲಿ ಗೋಶಾಲೆ ತೆರೆದು ಗೋಸೇವೆಯನ್ನೂ ಮಾಡುತ್ತಿದ್ದಾರೆ. ಶ್ರೀಮಠದಲ್ಲಿ ಶ್ರೀಚಂದ್ರಮೌಳೀಶ್ವರರು ಕಾಲತ್ರಯದಲ್ಲಿ ಆರಾಧಿಸಲ್ಪಡುವ ಸ್ಫಟಿಕಲಿಂಗವೂ ಇದೆ. ಸುಂದರವಾದ ಪರಿಸರದಲ್ಲಿರುವ ಮಠಕ್ಕೆ ಭೇಟಿ ನೀಡಿದರೆ ಮನಸ್ಸು ಪ್ರಫುಲ್ಲವಾಗುತ್ತದೆ. ಆವನಿ ಕ್ಷೆತ್ರದ ಪಕ್ಕದ್ದಲ್ಲಿ ಕಮ್ಮದಟ್ಟಿ ನಿಲಾಂಬಿಕ ಕ್ಷೇತ್ರವಿದೆ ದರ್ಶಿಸಿ.

"https://kn.wikipedia.org/w/index.php?title=ಆವಣಿ&oldid=715204" ಇಂದ ಪಡೆಯಲ್ಪಟ್ಟಿದೆ