ಆರ್. ಕೆ. ಶ್ರೀಕಂಠನ್
ರುದ್ರಪಟ್ಟಣ ಕೃಷ್ಣ ಶಾಸ್ತ್ರಿ ಶ್ರೀಕಂಠನ್ | |
---|---|
ಜನನ | ಜನವರಿ ೧೪, ೧೯೨೦ ರುದ್ರಪಟ್ಟಣ, ಹಾಸನ ಜಿಲ್ಲೆ, ಕರ್ನಾಟಕ, |
ಮರಣ | ಫೆಬ್ರುವರಿ ೧೭, ೨೦೧೪ ಬೆಂಗಳೂರು |
ವೃತ್ತಿ(ಗಳು) | ಕರ್ನಾಟಕ ಶಾಸ್ತ್ರಿಯ ಸಂಗೀತ ಗಾಯಕ, ಆಕಾಶವಾಣಿ ಕಲಾವಿದ |
ಸಕ್ರಿಯ ವರ್ಷಗಳು | ೧೯೩೦–೨೦೧೪ |
ಮಕ್ಕಳು | ರತ್ನಮಾಲ ಪ್ರಕಾಶ್ ಸೇರಿದಂತೆ ೬ |
ರುದ್ರಪಟ್ಟಣ ಕೃಷ್ಣಶಾಸ್ತ್ರಿ ಶ್ರೀಕಂಠನ್ ರವರು, ಎ. ಐ. ಆರ್ ನಲ್ಲಿ ಪ್ರಥಮಶ್ರೇಣಿಯ ಕಲಾವಿದರಾಗಿ, ಸಂಗೀತ ಪ್ರಾಯೋಜಕರಾಗಿ, ಸುಮಾರು ೩೨ ವರ್ಷ ಅಸಮಾನ್ಯ ಸೇವೆಸಲ್ಲಿಸಿದ್ದಾರೆ. ಶ್ರೀಕಂಠನ್ ಅವರು, ರಾಷ್ಟೀಯ ಹಾಗೂ ಅಂತಾರಾಷ್ಟ್ರೀಯ ಸಂಗೀತ ಸಭೆಗಳಲ್ಲಿ ಕಛೇರಿಗಳನ್ನು ಮಾತ್ರವಲ್ಲದೆ ಸಂಗೀತ ಉಪನ್ಯಾಸಗಳನ್ನು ಕೊಡುತ್ತಾ ೯೨ ರ ಪ್ರಾಯದಲ್ಲೂ ಭಾರತದಾದ್ಯಂತ ಸಂಗೀತ ಕಛೇರಿಗಳನ್ನು ನಿರ್ವಹಿಸುತ್ತಾ, ಬಂದಿರುವ ಮನೋಧಾರ್ಢ್ಯಕ್ಕೆ ಹೆಸರಾದ ಸಂಗೀತ ವಿದ್ವಾಂಸರು. ೭೦ ರ ದಶಕದಲ್ಲಿ, ಬೆಂಗಳೂರು ಆಕಾಶವಾಣಿಯಲ್ಲಿ ಬೆಳಗಿನ ವೇಳೆ ಮೇಳಗಾನವೆಂಬ ಕಾರ್ಯಕ್ರಮ ಮೂಡಿ ಬರುತ್ತಿತ್ತು. ಪುರಂದರದಾಸರ ಕೀರ್ತನೆಗಳನ್ನು ಕಲಾವಿದರು, ಜೊತೆಯಾಗಿ ಪ್ರಸ್ತುತ ಪಡಿಸುತ್ತಿದ್ದ ಧಾಟಿ, ಹಾಗೂ ಅದರ ಮಾಧುರ್ಯ ಅವಿಸ್ಮರಣೀಯವಾಗಿರುತ್ತಿತ್ತು. ಆ ಕಾರ್ಯಕ್ರಮಗಳನ್ನು ಸಂಯೋಜಿಸಿ, ಅದ್ಬುತವಾಗಿ ಪ್ರಸ್ತುತ ಪಡಿಸುತ್ತಿದ್ದವರು, ಆರ್.ಕೆ.ಶ್ರೀಕಂಠನ್ ಅವರು. ಜೀವನದುದ್ದಕ್ಕೂ ಪರಿಶ್ರಮದಿಂದ ಕಲಿತ ಸಂಗೀತ-ಸಾಧನೆಯ ಬಲದಿಂದ ಶೃತಿ, ಲಯ, ಸಾಹಿತ್ಯದ ಮೇಲೆ ಅಪಾರ ಜ್ಞಾನ, ಪ್ರಭುತ್ವವನ್ನು ಹೊಂದಿದ್ದಾರೆ. ಅವರ ಸಂಗೀತದಲ್ಲಿ ಸಮನ್ವಯತೆ, ಉದ್ದ, ಅಗಲ, ಆಳಗಳ ಬಗ್ಗೆ ವಿಶೇಷ ಜ್ಞಾನದ ಛಾಯೆ ಸ್ಪಷ್ಟವಾಗಿ ಕಾಣಿಸುತ್ತದೆ. ಅವರೊಬ್ಬ ದಣಿವರಿಯದ ವಿದ್ವಾಂಸರೆಂದು ಹೆಸರಾದವರು.
ಬಾಲ್ಯ- ಕುಟುಂಬ - ಶಿಕ್ಷಣ
[ಬದಲಾಯಿಸಿ]೧೯೨೦ ರ, ಜನವರಿ ೧೪ ರಂದು, ಹಾಸನದ ಬಳಿಯಿರುವ ರುದ್ರಪಟ್ಟಣದಲ್ಲಿ ಆರ್. ಕೆ. ಶ್ರೀಕಂಠನ್ ಜನಿಸಿದರು. ತಂದೆ, ಕೃಷ್ಣ ಶಾಸ್ತ್ರಿಗಳು, ಮತ್ತು ಇಬ್ಬರು ಸೋದರರು. ಶ್ಯಾಮ ಶಾಸ್ತ್ರಿಗಳು ವೇದಾಧ್ಯಯನ ಶೀಲರೂ, ಸಂಸ್ಕೃತ ಪಂಡಿತರೂ, ಹರಿಕಥಾ ವಿದ್ವಾಂಸರೂ ಅಗಿದ್ದರು. ಹಿರಿಯರಾದ ಆರ್.ಕೆ. ವೆಂಕಟರಾಮ ಶಾಸ್ತ್ರಿಗಳು, ತಂದೆಯವರ ಬಳಿಕ, ಆರ್.ಕೆ.ಯವರ ಮೊದಲ ಗುರುಗಳು. ಅವರಿಗೆ ಮದರಾಸ್ ಕಾರ್ಪೊರೇಶನ್ ರೇಡಿಯೋದಲ್ಲಿ ಕೆಲಸ ಸಿಕ್ಕ ಪರಿಣಾಮವಾಗಿ ಅವರ ಜೊತೆಯಲ್ಲಿ ಚೆನ್ನೈಗೆ ತೆರಳಿದ ಶ್ರೀಕಂಠನ್ ಅವರಿಗೆ, ಅಲ್ಲಿನ ಮೇರು ಸಂಗೀತ ಶಾಸ್ತ್ರಜ್ಞರ ಸಹವಾಸ ದೊರೆಯಿತು. ಅವರಲ್ಲಿ ಮುಖ್ಯರಾದವರು, ಶಮ್ಮನ್ ಗುಡಿ ಶ್ರೀನಿವಾಸ ಐಯ್ಯರ್, ಮುಸಿರಿ ಸುಬ್ರಹ್ಮಣ್ಯ ಅಯ್ಯರ್, ಮಹಾರಾಜಪುರಂ ವಿಶ್ವನಾಥ ಐಯ್ಯರ್, ಮೊದಲಾದ ಹಿರಿಯ ಕಲಾವಿದರು. ಆ ಕಲಾವಿದರು ಮೈಸೂರಿಗೆ ಬಂದಾಗ ಹೊಸ-ಹೊಸ ರಾಗಗಳನ್ನು ಪರಿಚಯಿಸಿ ಹೋಗುತ್ತಿದ್ದರು. ಯುವ ಪ್ರತಿಭೆಯಾಗಿದ್ದ ಶ್ರೀಕಂಠನ್ ಅವರು, ಆಸ್ಥೆಯಿಂದ ಆ ರಾಗಗಳನ್ನು ಅಭ್ಯಸಿಸಿ, ಬೆಳೆಯುತ್ತಾ ನಡೆದರು, ಮುಂದೆ ಮಹಾಸಾಧಕರಾದರು. ೧೩-೧೪ ನೇ ವಯಸ್ಸಿಗೇ ಕಛೇರಿಗಳನ್ನು ಕೊಡುವಷ್ಟು ಸಾಮರ್ಥ್ಯ ಗಳಿಸಿದರು. ಮೈಸೂರಿನಲ್ಲಿ ಬಿ.ಎ. ಪದವಿ ಗಳಿಸಿದ ಬಳಿಕ, ಮೈತ್ರೇಯಿಯವರ ಜೊತೆ ವಿವಾಹವಾದರು. ಈ ದಂಪತಿಗಳಿಗೆ ೭ ಜನ ಮಕ್ಕಳು. ದಿವಂಗತ ಅಶ್ವತ್ಥರ ಮಾದರಿ, ಸುಗಮ ಸಂಗೀತದಲ್ಲಿ ಅತ್ಯಂತ ಹೆಸರುಗಳಿಸಿರುವ ಕಲಾವಿದೆ, ರತ್ನಮಾಲಾ ಪ್ರಕಾಶ್, ಆರ್. ಕೆ. ಶ್ರೀಕಂಠನ್ ಅವರ ಪುತ್ರಿ.
ಸಂಗೀತ ಕ್ಷೇತ್ರದಲ್ಲಿ
[ಬದಲಾಯಿಸಿ]೧೯೪೯ ರಲ್ಲಿ, ಬೆಂಗಳೂರು ಆಕಾಶವಾಣಿಯಲ್ಲಿ ಅವರಿಗೆ ವೃತ್ತಿ ದೊರೆಯಿತು. ಜಿ.ಎನ್.ಬಿ, ಶ್ರೀನಿವಾಸ ಅಯ್ಯರ್ ಮೊದಲಾದ ಅಕಾಶವಾಣಿ ಕಲಾವಿದರೊಡನೆ ಒಡನಾಟದಿಂದ ಅವರ ಸಂಗೀತ ಕಲೆ ಪಕ್ವವಾಯಿತು. ಹೀಗೆ ಬೆಳೆದ ಆರ್.ಕೆ.ಎಸ್. ರವರಿಗೆ ಮುಂದೆ ಪಕ್ಕವಾದ್ಯಗಾರರಾಗಿದ್ದವರು, ಪಾಲ್ಘಾಟ್ ಮಣಿ ಅಯ್ಯರ್, ಪಳನಿ ಸುಬ್ರಹ್ಮಣ್ಯ ಪಿಳ್ಳೆ, ಸಿ.ಎಸ್.ಮುರಗ ಭೂಪತಿ, ಲಾಲ್ಗುಡಿ ಜಯರಾಮನ್, ಬಿ.ಎನ್.ಕೃಷ್ಣನ್, ಎಂ. ಎಸ್. ಗೋಪಾಲಕೃಷ್ಣನ್ ಅವರಂತಹ ಘನ ವಿದ್ವಾಂಸರುಗಳು. ಸಂಗೀತವೇ ಸರ್ವಸ್ವವೆಂದು ಪರಿಗಣಿಸಿ ಅದರಲ್ಲೇ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದ ಆರ್.ಕೆ.ಎಸ್. ಅವರಿಗೆ ತಮಿಳು, ತೆಲುಗು, ಸಂಸ್ಕೃತದಲ್ಲಿ ಅಪಾರ ಜ್ಞಾನವಿತ್ತು. ಕನ್ನಡ ಇಂಗ್ಲೀಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತಾಡಬಲ್ಲವರಾಗಿದ್ದರು; ಬರೆಯಬಲ್ಲವರಾಗಿದ್ದರು. ಅವರು ನಡೆಸಿಕೊಡುತ್ತಿದ್ದ, ಸಂಗೀತ ಶಿಬಿರ ಕಾರ್ಯಕ್ರಮಗಳು ಇಂದಿಗೂ ಪ್ರಸ್ತುತವಾಗಿವೆ. ದರ್ಬಾರ್-ಗಾಯಕಿ, ರೀತಿ ಗೌಳ-ಆನಂದ ಭೈರವಿ, ನಿಶಾದಾಂತ ರಾಗಗಳು ಬಹುಮುಖ್ಯವಾದವುಗಳು. ಇಂದಿಗೂ ಪ್ರಸ್ತುತ. ಮೇಳರಾಗ ಮಾಲಿಕ ಎಂಬ ದ್ವನಿ ಮುದ್ರಿತ ಪ್ರಕಾರ, ಎಂ. ಎಸ್. ಶೆಲ್ವಪಿಳ್ಳೆ ಅಯ್ಯಂಗಾರ್ ಜೊತೆ. (ಇಲ್ಲಿ ಕರ್ನಾಟಕ ಸಂಗೀತ ಪ್ರಕಾರದ ೭೨ ಮೇಳ ಕರ್ತ/ಥಾಟ್ ರಾಗಗಳು ಬಳಸಲ್ಪಟ್ಟಿವೆ).
'ಗಾನವಿಹಾರ' ಕಾರ್ಯಕ್ರಮ
[ಬದಲಾಯಿಸಿ]ನವರಾತ್ರಿ ಮಹೋತ್ಸವದಲ್ಲಿ ಬೆಂಗಳೂರು ಮತ್ತು ಮೈಸೂರು ಆಕಾಶವಾಣಿಯವರು ಪ್ರಸ್ತುತಪಡಿಸುತ್ತಿದ್ದ ನವಾವರಣ ಕೀರ್ತನೆಗಳು, ಗಾನವಿಹಾರ ಕಾರ್ಯಕ್ರಮ ಗಳು ಪ್ರಮುಖವಾದವುಗಳು.
ದಾಸರ ಪದಗಳು
[ಬದಲಾಯಿಸಿ]ಶ್ರೀಕಂಠನ್ ಅವರು ಇಂದಿಗೂ ರಸಿಕರ ಮನಸ್ಸಿನಲ್ಲಿ ಮನೆಮಾಡಿರುವುದು, ಅವರ ದಾಸ ಸಾಹಿತ್ಯ ಸೇವೆಯಿಂದ. ಹೊಸರಾಗಗಳನ್ನು ಆಧರಿಸದೆ ಸಂಪ್ರದಾಯಬದ್ಧವಾದ ರಾಗ-ತಾಳಗಳನ್ನೇ ಆಧಾರವಾಗಿಟ್ಟುಕೊಂಡು, ಸಂಪೂರ್ಣ ಕಛೇರಿಯನ್ನು ನಡೆಸಿ ಒಂದು ಹೊಸ ಆವಿಷ್ಕಾರವನ್ನು ಕಂಡು ಹಿಡಿದ ಕೀರ್ತಿ ಸಲ್ಲುತ್ತದೆ. ಕೇರಳದ ಪಾಲ್ಘಾಟ್ ಸರ್ಕಾರಿ ಸಂಗೀತ ವಿಶ್ವವಿದ್ಯಾಲಯಗಳಲ್ಲಿ, ಅಮೆರಿಕದ ಹಲವು ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಹೋಗಿ ಬಂದಿದ್ದಾರೆ. ಧ್ವನಿಮುದ್ರಣಗಳು ಬೇಕಾದಷ್ಟಿವೆ. ಪ್ರಿಯವಾದ ರಾಗಗಳೆಂದರೆ, ಶಹನ, ದರ್ಬಾರ್, ಬೇಗಡೆ, ಶಂಕರಾಭರಣ, ತೋಡಿ. ತಿರುವಾಂಕೂರಿನ ನವರಾತ್ರೋತ್ಸ್ಯವದಲ್ಲಿ, ಶ್ರೀ. ಸ್ವಾತಿತಿರುನಾಳ್ ಮಹಾರಾಜ ನವರಾತ್ರಿ ಮಂಟಪದಲ್ಲಿ ೬ ವರ್ಷಗಳು ಸತತವಾಗಿ, ಪ್ರಥಮ ಕನ್ನಡಿಗರಾಗಿ ಹಾಡಿದ್ದಾರೆ.
ಶಿಷ್ಯ ವೃಂದ
[ಬದಲಾಯಿಸಿ]ಅಪಾರ ಶಿಷ್ಯವೃಂದವನ್ನು ಹೊಂದಿದ್ದಾರೆ. ಅವರಲ್ಲಿ
- ವಿದುಷಿ ಎಂ.ಎಸ್. ಶೀಲಾ
- ಡಾ. ಟಿ.ಎಸ್. ಸತ್ಯವತಿ
- ವಿದ್ವಾನ್ ರಮಾಕಾಂತ್, (ಆರ್.ಕೆ.ಎಸ್.ರವರ ಮಗ)
- ವಿದ್ವಾನ್ ರವಿಕಿರಣ್
- ವಿದ್ವಾನ್ ಎಚ್.ಕೆ. ನಾರಾಯಣ್ (ಮರಣಿಸಿದ್ದಾರೆ)
ಪ್ರಶಸ್ತಿಗಳು
[ಬದಲಾಯಿಸಿ]- ೧೯೭೪ ಗಾನ ಭಾಸ್ಕರ ಪ್ರಶಸ್ತಿ,
- ೧೯೭೦ ರಲ್ಲಿ, ಕೇಂದ್ರ ಸರ್ಕಾರದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ,
- ೧೯೮೧ ರಲ್ಲಿ ರಾಜ್ಯ ಸಂಗೀತ ನಾಟಕ,
- ಗಾನ ಕಲಾಪರಿಷತ್ತಿನಿಂದ ಗಾನಕಲಾಶ್ರೀ
- ೧೯೪೪ ರಲ್ಲಿ ಕರ್ನಾಟಕ ರಾಜ್ಯಸಂಗೀತ ವಿದ್ವಾನ್
- ೧೯೬೬ ಮದರಾಸ್ ಸಂಗೀತ ಅಕಾಡೆಮಿಯಿಂದ, ಸಂಗೀತ ಕಲಾನಿಧಿ
- ೧೯೯೭ ಕನಕ ಪುರುಂದರ ಪ್ರಶಸ್ತಿ,
- ಹೈದರಾಬಾದ್ ನ ಸಂಗೀತ ಕಲಾಸಾಗರ
- ತಿರುವಾಂಕೂರಿನ, ಸ್ವಾತಿ ತಿರುನಾಳ್ ಸಂಗೀತ ಸಭೆಯಿಂದ ಗಾಯಕ ರತ್ನ,
- ಶೃಂಗೇರಿ ಶಾರದಾ ಪೀಠದಿಂದ ಆಸ್ಥಾನ ವಿದ್ವಾನ್ ಬಿರುದು,
- ಯು.ಎಸ್.ನಿಂದ ಸಂಗೀತ ರತ್ನಾಕರ,
- ಬೆಂಗಳೂರಿನ ಎಸ್.ವಿ.ಎಸ್. ಅಕಾಡೆಮಿಯಿಂದ ಜೀವನ ಸಾಧನಾ ಪ್ರಶಸ್ತಿ
- ೨೦೧೧ ರಲ್ಲಿ, ಭಾರತ ಸರಕಾರದ ಪದ್ಮ ಭೂಷಣಪ್ರಶಸ್ತಿ (೯೧ ನೆಯ ವಯಸ್ಸಿನಲ್ಲಿ ದೊರೆಯಿತು)[೧]
ನಿಧನ
[ಬದಲಾಯಿಸಿ]೯೪ ವರ್ಷ ಪ್ರಾಯದ ರುದ್ರ ಪಟ್ಟಣ ಕೃಷ್ಣಶಾಸ್ತ್ರಿ ಶ್ರೀಕಂಠನ್, ೨೦೧೪ ರ, ಫೆಬ್ರವರಿ ೧೭, ಸೋಮವಾರ ರಾತ್ರಿ, ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದರು. [೨]ಅವರ ಪಾರ್ಥಿವ ಶರೀರವನ್ನು ೨ ಗಂಟೆಗಳ ಕಾಲ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲುರಂಗದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿತ್ತು. ನಂತರ ೨೦, ಗುರುವಾರ, ಚಾಮರಾಜಪೇಟೆಯ ಸ್ಮಶಾನದಲ್ಲಿ ಅಂತಿಮ ವಿಧಿವಿಧಾನ ಜರುಗಿತು. ೩ ಸುತ್ತು ಗುಂಡುಹಾರಿಸಿ ಗೌರವ ಸಲ್ಲಿಸಲಾಯಿತು.[೩]