ವಿಷಯಕ್ಕೆ ಹೋಗು

ಆಂಟೊನೈನ್ ಸಾಮ್ರಾಟರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಕ್ರವರ್ತಿ ನರ್ವ
ಆಂಟೊನೈಸ್ ಪಯಸ್

ಆಂಟೊನೈನ್ ಸಾಮ್ರಾಟರು

ಕ್ರಿ.ಶ. ೯೬ - ೧೮೦ರವರೆಗೆ ರೋಂ ಸಾಮ್ರಾಜ್ಯವನ್ನಾಳಿದ ಐದು ಒಳ್ಳೆಯ ಚಕ್ರವರ್ತಿಗಳಿಗೆ(ಫೈವ್ ಗುಡ್ ಎಂಪರರ್ಸ್) ಈ ಹೆಸರು ಬಂದಿದೆ. ಈ ಕಾಲಕ್ಕೆ ಮುಂಚೆ ಆಳಿದ ಫ್ಲೇವಿಯನ್ ಸಾಮ್ರಾಟರ ಕಾಲದಲ್ಲಿ ಒಳ್ಳೆಯ ಆಡಳಿತ ವ್ಯವಸ್ಥೆ ರೂಪುಗೊಂಡಿತು. ಆ ಸಾಮ್ರಾಟರ ಸೆನೆಟ್ ಸಭೆಯ ಗೌರವ ಸ್ಥಾನಕ್ಕೆ ಕುಂದು ಬಾರದಂತೆ ನೋಡಿಕೊಂಡು ಸೈನ್ಯದ ಪ್ರಾಬಲ್ಯವನ್ನು ಬಹುಮಟ್ಟಿಗೆ ತಗ್ಗಿಸಿದರು. ಕೊಂಚ ಕೊಂಚವಾಗಿ ಚಕ್ರವರ್ತಿಗಳ ನಿರಂಕುಶ ಪ್ರವೃತ್ತಿ ಬೆಳೆಯುತ್ತಿದ್ದರೂ ಅವರ ಸಮರ್ಥ ಆಡಳಿತದಿಂದ ಜನ ತೃಪ್ತರಾಗಿದ್ದರು. ಈ ಪರಿಸ್ಥಿತಿಯನ್ನರಿತು, ಒಂದು ಶತಮಾನ ಕಾಲ ಆಳಿದ ಆಂಟೊನೈನ್ ಸಾಮ್ರಾಟರು ಅವರ ನೀತಿಯನ್ನು ಮುಂದುವರಿಸಿ ರಾಜ್ಯದಲ್ಲಿ ಶಾಂತಿ ಸುಭಿಕ್ಷಗಳನ್ನೇರ್ಪಡಿಸಿದ್ದರು. ಈ ಕಾಲವನ್ನು ಕೆಲವರು ರೋಮನ್ ಸಾಮ್ರಾಜ್ಯದ ಸುವರ್ಣಯುಗವೆಂದೂ ಕರೆದಿದ್ದಾರೆ.[]

ಚಕ್ರವರ್ತಿ ನರ್ವ (೯೬-೯೮) ಸೆನೆಟ್ ಮತ್ತು ಸೈನ್ಯವೆರಡರ ಮೆಚ್ಚುಗೆಯನ್ನೂ ಸಂಪಾದಿಸಿದ. ರಾಜ್ಯದಲ್ಲಿ ದಾರಿದ್ರ್ಯ ನಿವಾರಣೆಗಾಗಿ ಸಣ್ಣ ರೈತರ ಪರಿಸ್ಥಿತಿಯನ್ನು ಉತ್ತಮಗೊಳಿಸುವುದಕ್ಕಾಗಿ, ಜನಸಂಖ್ಯಾ ಪ್ರಮಾಣವನ್ನು ಹೆಚ್ಚಿಸುವುದಕ್ಕಾಗಿ ಆತ ಅನುಸರಿಸಿದ ನೀತಿಯಿಂದ ಪ್ರಜಾನುರಾಗವನ್ನೂ ಗಳಿಸಿದ. ಅವನಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಸಮರ್ಥ ಸೇನಾ ನಾಯಕನೂ ಉತ್ತರ ಜರ್ಮನಿಯ ಪ್ರಾಂತ್ಯಾಧಿಪತಿಯೂ ಆಗಿದ್ದ 'ಟ್ರೇಜನ್' ಎಂಬುವನನ್ನು ದತ್ತು ತೆಗೆದುಕೊಂಡು ಸಹಪ್ರಭುವನ್ನಾಗಿ ನೇಮಿಸಿದ. ಇದರಿಂದ ರಾಜಸಂತತಿಯವರೇ ದೊರೆಯಾಗಬೇಕೆಂಬ ನಿಯಮ ಸಡಿಲಿಸಿತು. ಚಕ್ರಾಧಿಪತ್ಯದ ಯಾವ ಪ್ರಾಂತ್ಯದವರಾದರೂ ಸಾಮ್ರಾಟರಾಗಬಹುದೆಂಬ ಸಂಪ್ರದಾಯ ಪ್ರಾರಂಭವಾಯಿತು. ಟ್ರೇಜನ್ ೯೮ರಲ್ಲಿ ಸಾಮ್ರಾಟನಾದ. ಈತ ತಮ್ಮ ರಾಜ್ಯಕ್ಕೆ ನಿರಂತರ ಕಿರುಕುಳ ಕೊಡುತ್ತಿದ್ದ ಡೇಸಿಯನ್ನರನ್ನಡಗಿಸಿ ಡೇಸಿಯ ಎಂಬ ಹೊಸ ಪ್ರಾಂತ್ಯವನ್ನು ನಿರ್ಮಿಸಿದ. ಇತರ ಗಡಿ ಪ್ರದೇಶಗಳಲ್ಲಿ ದಂಗೆಯೆದ್ದಿದ್ದ ಪಾರ್ಥಿಯನ್ನರು ಯೆಹೂದ್ಯರು ಮುಂತಾದವರ ಹಾವಳಿಯನ್ನಡಗಿಸಿದ. ಹತ್ತೊಂಬತ್ತು ವರ್ಷದ ಆಳ್ವಿಕೆಯೆಲ್ಲ ಯುದ್ಧದಲ್ಲೇ ಕಳೆದರೂ ಆತ ಆಡಳಿತವನ್ನು ಕಡೆಗಣಿಸಲಿಲ್ಲ. ತಪ್ಪು ಮಾಡಿದ ಪ್ರಾಂತ್ಯಾಧಿಪತಿಗಳಿಗೂ ನಿರ್ದಾಕ್ಷಿಣ್ಯವಾಗಿ ಶಿಕ್ಷೆಯಾಗುತ್ತಿತ್ತು. ರೋಂ ನಗರದಲ್ಲಿ ಭವ್ಯವಾದ ಅರಮನೆಗಳನ್ನೂ ರಮ್ಯವಾದ ಉದ್ಯಾನವನಗಳನ್ನೂ ನಿರ್ಮಿಸಲಾಯಿತು. ವಿಶಾಲವಾದ ರಸ್ತೆಗಳು, ಸೇತುವೆಗಳು, ನೀರಾವರಿ ಕಾಲುವೆಗಳು, ವ್ಯಾಪಾರಕ್ಕನುಕೂಲವಾದ ರೇವುಗಳು ನಿರ್ಮಿತವಾದವು. ಭವ್ಯವಾದ ಫೋರಂ ಟ್ರೇಜನ್ ಎಂಬ ಸಾರ್ವಜನಿಕ ಸಭಾಭವನವೊಂದು ನಿರ್ಮಾಣವಾಯಿತು. ದೊರೆ ಕ್ರೈಸ್ತರ ವಿಷಯದಲ್ಲಿ ಕ್ರೌರ್ಯದಿಂದ ವರ್ತಿಸಿದರೂ ಆಡಳಿತ ನೀತಿ ಸೌಮ್ಯವಾಗಿತ್ತು. ೧೧೭ ರಲ್ಲಿ ಆತ ಕಾಲವಾದ. ಕೊಂಚಕಾಲದಲ್ಲೇ ಅವನ ಸಂಬಂಧಿ 'ಹೇಡ್ರಿಯನ್‍'ನನ್ನು ಚಕ್ರವರ್ತಿಯನ್ನಾಗಿ ಸೈನ್ಯವೇ ಚುನಾಯಿಸಿತು. ಈತ ಟ್ರೇಜನ್‍ನ ಜೊತೆ ಅನೇಕ ಯುದ್ಧಗಳಲ್ಲಿ ಭಾಗವಹಿಸಿದ್ದ ನುರಿತ ಯೋಧ. ಸಾಮ್ರಾಜ್ಯದ ಸರಹದ್ದು ಭಾಗಗಳಲ್ಲಿ ತಲೆದೋರಿದ ದಂಗೆಗಳೆಲ್ಲವನ್ನೂ ಅಡಗಿಸಿದ್ದಲ್ಲದೆ, ದೊಡ್ಡ ಪ್ರವಾಸ ಕೈಗೊಂಡು ಎಲ್ಲ ಪ್ರಾಂತ್ಯಗಳಿಗೂ ಭೇಟಿಯಿತ್ತ. ಇವನ ಕಾಲವೂ ಹೆಚ್ಚಾಗಿ ರಣರಂಗದಲ್ಲೇ ಕಳೆದರೂ ದಕ್ಷ ಆಡಳಿತವನ್ನೂ ಮುಂದುವರಿಸಿದ. ವಿದ್ಯಾಪಕ್ಷಪಾತಿಯೂ ಕಲಾಭಿರುಚಿಯುಳ್ಳವನೂ ಆಗಿದ್ದುದರಿಂದ ಭವ್ಯವಾದ ಹೊಸ ಕಟ್ಟಡಗಳನ್ನು ನಿರ್ಮಿಸಿದ. ಗ್ರೀಕ್ ಸಾಹಿತ್ಯದಲ್ಲಿ ಅಭಿರುಚಿ ಹೊಂದಿದ್ದು, ಅದನ್ನು ಹರಡಲು ಪ್ರೋತ್ಸಾಹ ನೀಡಿದ. ೧೩೪ರಲ್ಲಿ ಕಾಲವಾದ.

ಇವನ ತರುವಾಯ ಅನುಕ್ರಮವಾಗಿ ಆಳಿದ ಆಂಟೊನೈಸ್ ಪಯಸ್ ಮತ್ತು ಮಾರ್ಕಸ್ ಅರೇಲಿಯಸ್ ಇಬ್ಬರೂ ಖ್ಯಾತ ಪರಂಪರೆಗನುಗುಣವಾಗಿ ರಾಜ್ಯಭಾರ ಮಾಡಿ ದೇಶದ ಕೀರ್ತಿಯನ್ನು ಹೆಚ್ಚಿಸಿದರು.[]

ಉಲ್ಲೇಖಗಳು

[ಬದಲಾಯಿಸಿ]