ವಿಷಯಕ್ಕೆ ಹೋಗು

ಯುದ್ಧರಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರಣರಂಗ ಇಂದ ಪುನರ್ನಿರ್ದೇಶಿತ)

ಯುದ್ಧರಂಗವು ನೆಲದ ಮೇಲಿನ ಸೇನಾ ಕಾರ್ಯಾಚರಣೆಗಳನ್ನು ಒಳಗೊಂಡ ವರ್ತಮಾನದ ಅಥವಾ ಐತಿಹಾಸಿಕ ಕದನದ ಸ್ಥಳ. ಸಾಮಾನ್ಯವಾಗಿ ಇದು ವಿರೋಧಿ ಪಡೆಗಳ ನಡುವಿನ ಸಂಪರ್ಕ ಸ್ಥಳಕ್ಕೆ ಸೀಮಿತವಾಗಿರುತ್ತದೆ ಎಂದು ತಿಳಿಯಲಾಗುತ್ತದೆ, ಆದರೆ ಕದನಗಳು/ಯುದ್ಧಗಳು ವಿಶಾಲ ಭೌಗೋಳಿಕ ಪ್ರದೇಶಗಳನ್ನು ಆವರಿಸಿರುವ ಪಡೆಗಳನ್ನು ಒಳಗೊಳ್ಳಬಹುದು. ಕದನಗಳನ್ನು ಸಾಮಾನ್ಯವಾಗಿ ರಣರಂಗದಲ್ಲಿ (ಮಟ್ಟಸ ನೆಲದ ತೆರೆದ ಹರಹು) ಹೋರಾಡಲಾಗುತ್ತದೆ ಎಂದು ಈ ಪದವು ಸೂಚಿಸುತ್ತದಾದರೂ, ಇದು ಯಾವುದರ ಮೇಲೆ ಕದನವನ್ನು ಆಡಲಾಗುತ್ತದೆಯೋ ಅಂತಹ ಯಾವುದೇ ಬಗೆಯ ಭೂಪ್ರದೇಶಕ್ಕೆ ಅನ್ವಯಿಸುತ್ತದೆ. ಈ ಪದವು ಕಾನೂನಾತ್ಮಕ ಮಹತ್ವವನ್ನು ಕೂಡ ಹೊಂದಿರಬಹುದು, ಮತ್ತು ಯುದ್ಧರಂಗಗಳು ಗಣನೀಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವನ್ನು ಹೊಂದಿವೆ—ಯುದ್ಧರಂಗವು "ಆದರ್ಶಗಳು ಮತ್ತು ನಿಷ್ಠೆಗಳನ್ನು ಪರೀಕ್ಷೆಗೆ ಒಡ್ಡಲ್ಪಡುವ ಸ್ಥಳ" ಎಂದು ವರ್ಣಿಸಲಾಗಿದೆ.[] ವಿವಿಧ ಕಾಯಿದೆಗಳು ಮತ್ತು ಒಪ್ಪಂದಗಳು ಒಂದು ಗುರುತಿಸಲ್ಪಟ್ಟ ಯುದ್ಧರಂಗದಲ್ಲಿ ನಿರ್ದಿಷ್ಟ ವೈರದ ನಡತೆಯನ್ನು ನಿರ್ಬಂಧಿಸುತ್ತವೆ. ಇತರ ಕಾನೂನಾತ್ಮಕ ಆಡಳಿತಗಳು ಐತಿಹಾಸಿಕ ಮಹತ್ವದ ಸ್ಥಳಗಳಾಗಿ ಕೆಲವು ಯುದ್ಧರಂಗಗಳ ಸಂರಕ್ಷಣೆಯನ್ನು ಪ್ರೋತ್ಸಾಹಿಸುತ್ತವೆ.

ಒಂದು ನಿರ್ದಿಷ್ಟ ಸ್ಥಳದಲ್ಲಿ ಕದನದ ಸಂಭವನವು ಸಂಪೂರ್ಣವಾಗಿ ಆಕಸ್ಮಿಕವಾಗಿರಬಹುದು, ವೈರಿ ಪಡೆಗಳ ನಡುವಿನ ಸೆಣಸಾಟವು ಎರಡೂ ಪಕ್ಷಗಳು ನಿರೀಕ್ಷಿಸದೇ ಸಂಭವಿಸಿದರೆ. ಆದರೆ ಸಾಮಾನ್ಯವಾಗಿ ಸ್ಥಳವನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಲಾಗುತ್ತದೆ, ಎರಡೂ ಪಕ್ಷಗಳ ಸಮ್ಮತಿಯಿಂದ, ಅಥವಾ ಹೆಚ್ಚು ಸಾಮಾನ್ಯವಾಗಿ ಒಂದು ಪಕ್ಷದ ದಂಡನಾಯಕನಿಂದ. ದಂಡನಾಯಕನು ಆಕ್ರಮಣಕ್ಕೆ ಅನುಕೂಲಕರವಾದ ಭೂಪ್ರದೇಶದ ಮೇಲೆ ಆಕ್ರಮಣವನ್ನು ಆರಂಭಿಸಲು, ಅಥವಾ ಆಕ್ರಮಣವನ್ನು ನಿರೀಕ್ಷಿಸುತ್ತಿದ್ದರೆ ಪಡೆಗಳನ್ನು ರಕ್ಷಣೆಗೆ ಅನುಕೂಲಕರವಾದ ಪ್ರದೇಶದ ಮೇಲೆ ನಿಲ್ಲಿಸಲು ಪ್ರಯತ್ನಿಸುತ್ತಾನೆ.

ಅನೇಕ ಯುದ್ಧರಂಗಗಳು ಸೇನಾ ಕಾರ್ಯಾಚರಣೆಗಳ ಸಂದರ್ಭದಲ್ಲಿ ಉದ್ಭವಿಸುತ್ತವಾದರೂ, ಔಪಚಾರಿಕ ಸಂಪ್ರದಾಯಗಳು ಯುದ್ಧರಂಗದ ಸ್ವರೂಪ ಮತ್ತು ಸ್ಥಳವನ್ನು ನಿಷ್ಕರ್ಷಿಸಿದ ಅನೇಕ ಸಂದರ್ಭಗಳಿವೆ. ಸಾವುನೋವುಗಳನ್ನು ಕನಿಷ್ಠೀಕರಿಸುವ ನಿಯಮಗಳಿಂದ ಬದ್ಧವಾದ ಸಾಂಪ್ರದಾಯಿಕ ಹೋರಾಟದ ರಂಗಗಳ ಮೇಲಿನ ಕಾಳಗಗಳನ್ನು ಒಳಗೊಂಡ ಧಾರ್ಮಿಕ ಸಂಸ್ಕಾರ ಸಂಬಂಧಿ ಕದನವು ಮುಂಚಿನ ಸಮಾಜಗಳಲ್ಲಿ ಸಾಮಾನ್ಯವಾಗಿದ್ದಿರಬಹುದು ಎಂದು ಮಾನವಶಾಸ್ತ್ರ ಸಂಶೋಧನೆಯ ಆಧಾರದ ಮೇಲೆ ಸೂಚಿಸಲಾಗಿದೆ. ಯೂರೋಪ್‍ನ ಮಧ್ಯಯುಗದಲ್ಲಿ, ಯುದ್ಧರಂಗದ ಔಪಚಾರಿಕ ಪೂರ್ವಸಿದ್ಧತೆಯು ಸಾಂದರ್ಭಿಕವಾಗಿ ಉಂಟಾಗುತ್ತಿತ್ತು. ವೈಕಿಂಗ್‍ಗಳು "ಹೇಸಲ್ಡ್ ರಂಗದ" ಪರಿಕಲ್ಪನೆಯನ್ನು ಹೊಂದಿದ್ದರು, ಅಂದರೆ ಕಾಳಗದ ಮುಂಚೆ ಒಂದು ಒಪ್ಪಲಾದ ಸ್ಥಳವನ್ನು ಹೇಸಲ್ ಸಸ್ಯದ ಕಡ್ಡಿಗಳಿಂದ ಗುರುತಿಸಲಾಗುತ್ತಿತ್ತು.

ಉಲ್ಲೇಖಗಳು

[ಬದಲಾಯಿಸಿ]
  1. Veronica Fiorato, Anthea Boylston, Christopher Knüsel, Blood Red Roses: The Archaeology of a Mass Grave from the Battle of Towton AD 1461 (2007), p. 3.