ವಿಷಯಕ್ಕೆ ಹೋಗು

ಟ್ರೇಜನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟ್ರೇಜನ್ 53-117. ಲ್ಯಾಟಿನ್ ಹೆಸರು ಮಾರ್ಕಸ್ ಅಲ್ಪಿಯಸ್ ಟ್ರಜೇನಸ್. 98ರಿಂದ 117ರ ವರೆಗೆ ಆಳಿದ ರೋಮನ್ ಚಕ್ರವರ್ತಿ. ರೋಮನ್ ಸಾಮ್ರಾಜ್ಯದ ಇತಿಹಾಸದಲ್ಲಿ ಐವರು ಒಳ್ಳೆಯ ಚಕ್ರವರ್ತಿಗಳು ಎಂದು ಪ್ರಸಿದ್ಧರಾದವರಲ್ಲಿ ಟ್ರೇಜನ್ ಎರಡನೆಯವನು

ಬದುಕು ಮತ್ತು ಸಾಧನೆ[ಬದಲಾಯಿಸಿ]

ಸ್ಪೇನಿನ ಸೆವಿಲ್ ಎಂಬಲ್ಲಿ 53ರಲ್ಲಿ ಹುಟ್ಟಿದ. ಈತ ಬಹುಶಃ ಇಟಾಲಿಯನ್ ಮೂಲದ ಸ್ಪ್ಯಾನಿಷ್ ಕುಟುಂಬದವನು. ಇವನ ತಂದೆ ಚಕ್ರವರ್ತಿ ವೆಸ್ಪಸಿಯನ್‍ನ ಬಳಿ ಉನ್ನತ ಹುದ್ದೆಯಲ್ಲಿದ್ದ ಶ್ರೀಮಂತ. ಟ್ರೇಜನ್ ಹತ್ತು ವರ್ಷ ಸೇನಾ ಟ್ರಿಬ್ಯೂನ್ ಆಗಿ ಸೇವೆ ಸಲ್ಲಿಸಿದ. ಈ ಸಮಯದಲ್ಲಿ ಸ್ವಲ್ಪಕಾಲ ತಂದೆಯ ನಾಯಕತ್ವದಲ್ಲಿ ಸಿರಿಯ ಯುದ್ಧರಂಗದಲ್ಲೂ ಇದ್ದ. ಆಂಟೋನಿಯಸ್ ಸ್ಯಾಟರ್ನೈನಸನ ವಿರುದ್ಧ ತೋರಿಸಿದ ಸಾಹಸಕ್ಕಾಗಿ (81/89) ರೋಮನ್ ಚಕ್ರವರ್ತಿ (81-96) ಇವನಿಗೆ ಕಾನ್ಸಲ್ ಪದವಿ ನೀಡಿದ. ಆದರೆ ಮತ್ತೆ ಇವನನ್ನು ಆ ಚಕ್ರವರ್ತಿ ನೇಮಿಸಿಕೊಂಡಂತೆ ಕಾಣುವುದಿಲ್ಲ. ಮಾರ್ಕಸ್‍ಕೋರ್ಸಿಯಸ್ ನರ್ವನು ಚಕ್ರವರ್ತಿಯಾದಾಗ ಇವನನ್ನು ಉತ್ತರ ಜರ್ಮನಿಯ ರಾಜ್ಯಪಾಲನಾಗಿ ನೇಮಿಸಲಾಯಿತು. ನರ್ವ ಸೈನಿಕ ಬಂಡಾಯಗಳನ್ನು ಎದುರಿಸಬೇಕಾಗಿ ಬಂದಾಗ ಟ್ರೇಜನನನ್ನು ತನ್ನ ಉತ್ತರಾಧಿಕಾರಿಯೆಂದು ಘೋಷಿಸಿದ. ಸೇನಾನಾಯಕನಾಗಿ ನೇಮಕವಾದ ಟ್ರೇಜನ್ ಆಂತರಿಕ ಗಲಭೆಗಳನ್ನು ಅಡಗಿಸಿದನಲ್ಲದೆ ರೋಮನ್ ಚಕ್ರಾಧಿಪತ್ಯದ ವಿವಿಧ ಭಾಗಗಳಿಗೆ ಭೇಟಿ ಕೊಟ್ಟು ಗಡಿನಾಡನ್ನು ಭದ್ರಪಡಿಸಿದ. 98ರಲ್ಲಿ ಚಕ್ರವರ್ತಿ ನರ್ವ ಸತ್ತಾಗ ಟ್ರೇಜನ್ ರೋಮಿಗೆ ಹಿಂದಿರುಗಿ ರೋಮನ್ ಸೆನೇಟಿನ ಬೆಂಬಲದೊಂದಿಗೆ ಚಕ್ರವರ್ತಿಯಾದ. ಟ್ರೇಜನನ ಆಳ್ವಿಕೆಯಲ್ಲಿ (98-117) ರೋಮನ್ ಸೆನೇಟಿಗೂ ಚಕ್ರವರ್ತಿಗೂ ಮಧುರಬಾಂಧವ್ಯ ಏರ್ಪಟ್ಟಿತ್ತು. ಇವನು ಆಪ್ಟಿಮಸ್ (ಉತ್ತಮ ವ್ಯಕ್ತಿ) ಎಂಬ ಬಿರುದಿಗೆ ಪಾತ್ರನಾಗಿದ್ದ.

ಉತ್ತಮ ಆಡಳಿತಗಾರನಾದ ಚಕ್ರವರ್ತಿ ಟ್ರೇಜನ್ ತನ್ನ ಆಳ್ವಿಕೆಯಲ್ಲಿ ಇಟಲಿಯ ಸರ್ವತೋಮುಖ ಪ್ರಗತಿಗಾಗಿ ಶ್ರಮಿಸಿದ. ಇವನು ಅದಕ್ಕಾಗಿ ನಾನಾ ಕಾರ್ಯಕ್ರಮಗಳನ್ನು ಕೈಗೊಂಡ, ವ್ಯವಸಾಯವನ್ನು ಅಭಿವೃದ್ಧಿಗೊಳಿಸಲು ಪ್ರೋತ್ಸಾಹ ನೀಡಿದ. ಉತ್ತಮ ಮತ್ತು ದಕ್ಷ ಸ್ಥಳೀಯ ಆಡಳಿತವನ್ನೇರ್ಪಡಿಸಿ ರೋಮಿನ ಪ್ರಜೆಗಳನ್ನು ಅಧಿಕಾರಿಗಳು ವಾತ್ಸಲ್ಯದಿಂದ ಕಾಪಾಡುವಂತೆ ಮಾಡಿದ. ಅವನು ರೋಮಿನಲ್ಲಿ ಕಟ್ಟಿಸಿದ ಭವ್ಯ ಕಟ್ಟಡಗಳು ಅವನ ಕಲಾಪ್ರಜ್ಞೆಗೆ ಸಾಕ್ಷಿಯಾಗಿವೆ. ರಾಜಧಾನಿಯ ಸೌಂದರ್ಯವನ್ನು ಹೆಚ್ಚಿಸುವ ದೃಷ್ಟಿಯಿಂದಲೂ ವ್ಯಾಪಾರ, ವ್ಯವಸಾಯಗಳಿಗೆ ಅನುಕೂಲವಾಗಲೆಂದೂ ಒಳ್ಳೆಯ ರಸ್ತೆಗಳನ್ನೂ ಕಲ್ಲಿನ ಕಾಲುವೆಗಳನ್ನೂ ಬಸಿಲಿಕಗಳನ್ನೂ ರೇವುಗಳನ್ನೂ ಕಮಾನುಗಳನ್ನೂ ಕಟ್ಟಿಸಿದ. ಅವನ ಕಟ್ಟಡಗಳಲ್ಲಿ ಪ್ರಸಿದ್ಧವಾದವು ರೋಮಿನಲ್ಲಿರುವ ಟ್ರೇಜನ್ ಫೋರಮ್ ಮತ್ತು ಟ್ರೇಜನ್ ಕಾಲಮ್. ಈತನಿಗೆ ಕ್ರೀಡೆಗಳಲ್ಲೂ ವಿಶೇಷ ಆಸಕ್ತಿ ಇತ್ತು.

ವಿದೇಶಾಂಗ ನೀತಿಯಲ್ಲಿ ಟ್ರೇಜನ್ ವಿಸ್ತರಣಾ ನೀತಿಯನ್ನು ಅನುಸರಿಸಿ ಸಾಮ್ರಾಜ್ಯದ ಪೂರ್ವದ ಗಡಿಯನ್ನು ವಿಸ್ತರಿಸಿದ. ಮಹಾವಿಜೇತನಾದ ಅವನು ಅನೇಕ ಯುದ್ಧಗಳನ್ನು ನಡೆಸಿದ. ಅವನ ಯುದ್ಧಗಳಲ್ಲಿ ನಡೆಸಿದ. ಅವನ ಯುದ್ಧಗಳಲ್ಲಿ ಪ್ರಸಿದ್ಧವಾದವು ಡೇಸಿಯನ್ ಯುದ್ಧಗಳು (101-102 ಮತ್ತು 105-106) ಮತ್ತು ಪ್ರಾಚ್ಯಯುದ್ಧ (113-117). ಪ್ರಾಚ್ಯಯುದ್ಧದಲ್ಲಿ ಟ್ರೇಜನ್ ತನ್ನ ಸೈನ್ಯಗಳ ನಾಯಕತ್ವ ವಹಿಸಿ ಆರ್ಮೇನಿಯ ಮತ್ತು ಮೆಸೊಪೊಟೇಮಿಯಗಳನ್ನು ವಶಪಡಿಸಿಕೊಂಡ. ಸಾಮ್ರಾಜ್ಯದ ಗಡಿ ವಿಸ್ತಾರ ಹೊಂದಿದರೂ ಈ ಯುದ್ಧಗಳಿಂದಾಗಿ ರೋಮಿನ ಜನಶಕ್ತಿ ಮತ್ತು ಆರ್ಥಿಕಶಕ್ತಿ ಕುಂದಿತು.

ಮೆಸೊಪೊಟೇಮಿಯದಲ್ಲಿರುವಾಗಲೆ ಈತ ತೀವ್ರ ರೋಗಕ್ಕೆ ಒಳಗಾದ. ಟ್ರೇಜನ್ ಯುದ್ಧವನ್ನು ಬಿಟ್ಟು ಹಿಂದಿರುಗುತ್ತಿದ್ದಾಗ ಮಾರ್ಗಮಧ್ಯದಲ್ಲೇ ಸಿಲೀಷಿಯದ ಸಿಲೈನಸ್‍ನಲ್ಲಿ 117ರ ಆಗಸ್ಟ್ 8ರಂದು ತೀರಿಕೊಂಡ. ಅವನ ಅನಂತರ ಏಡ್ರಿಯನ್ ಚಕ್ರವರ್ತಿಯಾದ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಟ್ರೇಜನ್&oldid=1152802" ಇಂದ ಪಡೆಯಲ್ಪಟ್ಟಿದೆ