ಅಯಾನ್‍ಗೋಳ
ಅಯಾನ್‍ಗೋಳ ಭೂಮಿಯನ್ನು ಸುತ್ತುವರೆದಿರುವ ವಿದ್ಯುದಂಶವನ್ನು ಹೊಂದಿದ ಪರಮಾಣು ಮತ್ತು ಅಣುಗಳ ಪದರ. ಇದು ಭೂಮಿಯಿಂದ ೫೦ ಕಿ.ಮೀ ಎತ್ತರದಿಂದ ೧೦೦೦ ಕಿ.ಮೀ ಎತ್ತರದವರೆಗೆ ಹಬ್ಬಿದೆ[೧]. ಇದು ಸೂರ್ಯನಿಂದ ಭೂಮಿಗೆ ಬರುವ ನೇರಳಾತೀತ ಕಿರಣಗಳಿಂದ ಉಂಟಾಗುತ್ತದೆ.
ಉಂಟಾಗುವಿಕೆ
[ಬದಲಾಯಿಸಿ]ಸೂರ್ಯನ ಅತಿನೇರಳೆ ಅಥವಾ ಬೇರೆ ಅಯಾನೀಕರಿಸುವ ಕಿರಣಗಳಿಂದ ಭೂಮಿಯ ವಾತಾವರಣದಲ್ಲಿ ಅಯಾನೀಕರಣ ಉಂಟಾಗುತ್ತದೆ. ಭೂಮಿಯಿಂದ (90) ಕಿ.ಮೀ. ಕಡಿಮೆ ಎತ್ತರದಲ್ಲಿ ಈ ರೀತಿ ಉಂಟಾದ ಎಲೆಕ್ಟ್ರಾನುಗಳು ಮತ್ತು ಅಯಾನ್‍ಗಳು ಪುನರ್ಮಿಲನ ಹೊಂದುತ್ತವೆ. ಆದರೆ ಸುಮಾರು (90-300) ಕಿ.ಮೀ. ಎತ್ತರದಲ್ಲಿರುವ ವಿರಳವಾದ ಗಾಳಿಯಲ್ಲಿ ಈ ಬಿಡಿಯಾದ ಎಲೆಕ್ಟ್ರಾನುಗಳು ಮತ್ತು ಅಯಾನ್‍ಗಳು ರೇಡಿಯೊತರಂಗಗಳ ಮೇಲೆ ಪ್ರಭಾವ ಬೀರುವಷ್ಟು ಸಂಖ್ಯೆಯಲ್ಲಿ ಯಾವಾಗಲೂ ಬಿಡಿಯಾಗಿಯೇ ಇರುತ್ತವೆ. ಭೂಮಿಯನ್ನಾವರಿಸಿರುವ ವಾತಾವರಣದ ಈ ಅಯಾನೀಕರಣ ಹೊಂದಿದ ಭಾಗದ ಹೆಸರು ಅಯಾನ್‍ಗೋಳ (ಅಯೋನೋಸ್ಫಿಯರ್). ಈ ರೀತಿ ಸೂರ್ಯನ ಅತಿನೇರಳೆ ಕಿರಣಗಳ ಬಹುಭಾಗವನ್ನು ಅಯಾನ್‍ಗೋಳ ಹೀರಿಕೊಳ್ಳದೆ ಇದ್ದಿದ್ದರೆ ಭೂಮಿಯಲ್ಲಿನ ಜೀವನಕ್ರಮವೇ ಬದಲಾಗುತ್ತಿತ್ತು.
ಅಯಾನ್‍ಗೋಳದ ಪದರಗಳು
[ಬದಲಾಯಿಸಿ]ಭೂಮಿಯ ಕಾಂತಕ್ಷೇತ್ರದ ಕ್ರಮವಾದ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಇಂಥ ಗೋಳವೊಂದು ಇರಬೇಕು ಎಂದುಕೊಳ್ಳಲಾಗಿತ್ತು. ರೇಡಿಯೊ ಅಲೆಗಳನ್ನು ಅಟ್ಲಾಂಟಿಕ್ ಸಾಗರದಾಚೆಗೆ ಮಾರ್ಕೊನಿ ಕಳುಹಿಸಿದಾಗ ಅಯಾನ್‍ಗೋಳವಿರುವುದು ಮತ್ತಷ್ಟು ಖಚಿತವಾಯಿತು. ಎ.ಇ.ಕೆನ್ನೆಲಿ ಮತ್ತು ಒ. ಹೆವಿಸೈಡ್‍ರವರು ಇದಕ್ಕೆ ಅಯಾನ್‍ಗೋಳ ಕಾರಣವೆಂದು ಸೂಚಿಸಿದ್ದರಿಂದ ಇದನ್ನು ಕೆನ್ನೆಲಿ ಹೆವಿಸೈಡ್ ಪದರ ಎಂದೂ ಕರೆಯುತ್ತಾರೆ. ರೇಡಿಯೊತರಂಗಗಳ ಮೇಲೆ ಅಯಾನ್‍ಗೋಳದ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಶೂನ್ಯಪ್ರದೇಶದಲ್ಲಿರುವ ಒಂದು ಎಲೆಕ್ಟ್ರಾನನ್ನು ಪರಿಗಣಿಸಬೇಕು; ಅದು ರೇಡಿಯೊತರಂಗದ ಸ್ಥಿರ-ವಿದ್ಯುತ್‍ಕ್ಷೇತ್ರದಿಂದ (ಎಲೆಕ್ಟ್ರೊಸ್ಟ್ಯಾಟಿಕ್ ಫೀಲ್ಡ್) ಅದಕ್ಕನುಗುಣವಾಗಿ ಕಂಪಿಸುತ್ತದೆ. ಹೀಗೆ ಕಂಪಿಸುವ ಎಲೆಕ್ಟ್ರಾನುಗಳು ರೇಡಿಯೊತರಂಗದ ಶಕ್ತಿಯನ್ನು ಹೀರಿ ಮರುಪ್ರಸಾರ ಮಾಡುತ್ತವೆ. ಅಯಾನ್‍ಗೋಳದ ಒಟ್ಟು ಪರಿಣಾಮ ರೇಡಿಯೊತರಂಗಗಳ ದಿಕ್ಕನ್ನು ಹೆಚ್ಚು ಎಲೆಕ್ಟ್ರಾನ್ ಸಾಂದ್ರತೆಯಿರುವ ಕಡೆಯಿಂದ ಕಡಿಮೆ ಎಲೆಕ್ಟ್ರಾನ್ ಸಾಂದ್ರತೆಯ ಕಡೆಗೆ ಬದಲಾಯಿಸುವುದು. ಈ ಪರಿಣಾಮ ಎಲೆಕ್ಟ್ರಾನ್‍ನ ಕಂಪನವಿಸ್ತಾರ (ಆ್ಯಂಪ್ಲಿಟ್ಯೂಡ್) ಮತ್ತು ಸರಾಸರಿ ವೇಗ ಇವುಗಳನ್ನು ಅವಲಂಬಿಸಿರುವುದರಿಂದ, ಆವರ್ತ ಸಂಖ್ಯೆ (ಫ್ರೀಕ್ವೆನ್ಸಿ) ಕಡಿಮೆಯಾದಂತೆ ಹೆಚ್ಚುತ್ತದೆ. ಅಯಾನ್‍ಗಳೂ ಹೀಗೇ ಮಾಡಿದರೂ ಅವುಗಳ ಜಡತ್ವ ಹೆಚ್ಚಾದ್ದರಿಂದ ಅವುಗಳಿಂದಾಗುವ ಪರಿಣಾಮ ಬಲು ಕಡಿಮೆ. ಪ್ರಸಾರಯಂತ್ರದಿಂದ ಹೊರಟ ಭೂತರಂಗಕ್ಕಿಂತ (ಗ್ರೌಂಡ್‍ವೇವ್) ಅಯಾನ್‍ಗೋಳದ ಪ್ರತಿಫಲನದಿಂದ ಬರುವ ಆಕಾಶತರಂಗ (ಸ್ಕೈವೇವ್) ಹೆಚ್ಚು ಪ್ರಯಾಣ ಮಾಡಬೇಕು. ಆದ್ದರಿಂದ ರೇಡಿಯೊತರಂಗಗಳ ಕ್ಷಣಿಕ ಮಿಡಿತವೊಂದನ್ನು (ಷಾರ್ಟ್ ಪಲ್ಸ್) ಕಳಿಸಿ ಪ್ರಸಾರಯಂತ್ರದಿಂದ ಸ್ವಲ್ಪದೂರದಲ್ಲಿರುವ ಆಸಿಲೊಗ್ರಾಮ್‍ಗೆ ಇವೆರಡು ಬರಲು ಆಗುವ ಕಾಲವ್ಯತ್ಯಾಸದಿಂದ ಅಯಾನ್‍ಗೋಳದ ಎತ್ತರವನ್ನು ಲೆಕ್ಕಹಾಕಬಹುದು. ಇಂಥ ಅಧ್ಯಯನದಿಂದ ಅಯಾನ್‍ಗೋಳದಲ್ಲಿ ಹಲವಾರು ಪದರಗಳಿರುವುದು ತಿಳಿಯಿತು. ಇವುಗಳಲ್ಲಿ ಎರಡು ಪ್ರಧಾನ. (90-120) ಕಿ.ಮೀ. ಎತ್ತರದವರೆಗೆ ಕೆಳಗಿನ E ಪದರವಿದೆ. ಮೇಲಿನ F ಪದರ (150-300) ಕಿ.ಮೀ. ಎತ್ತರದಲ್ಲಿದೆ. ಇವಲ್ಲದೆ ಸುಮಾರು (70) ಕಿ.ಮೀ. ಎತ್ತರದಲ್ಲಿ D ಪದರವೂ ಉಂಟು. ಹಗಲು ಹೊತ್ತಿನಲ್ಲಿ E ಪದರದ ಪರಮಾವಧಿ ಬೆಲೆ ಒಂದು ಘನ ಸೆಂ.ಮೀ.ಗೆ 105 ಸ್ವತಂತ್ರ ಎಲೆಕ್ಟ್ರಾನ್‍ಗಳು. ಆದರೆ ಅದೇ ವೇಳೆ F ಪದರಕ್ಕೆ ಎರಡು ಪರಮಾವಧಿ ಬೆಲೆಗಳಿವೆ. F1 ಮತ್ತು F2 ಪದರಗಳೆಂದು ಇವುಗಳ ಹೆಸರು.F2 ಪದರ F1ಪದರದ ಮೇಲೆ ಇದೆ. ರಾತ್ರಿಯಲ್ಲಿ F1ಮತ್ತು F2 ಪದರಗಳ ಬದಲು (250) ಕಿ.ಮೀ. ಎತ್ತರದಲ್ಲಿ F ಪದರವೊಂದೇ ಇರುವುದು. ಊಧ್ರ್ವದಿಶೆಯಲ್ಲಿ ರೇಡಿಯೊತರಂಗವನ್ನು ಕಳುಹಿಸಿದಾಗ ಅದು ಪ್ರತಿಫಲನವಾಗುವ ಸ್ಥಳದಲ್ಲಿರುವ ಎಲೆಕ್ಟ್ರಾನ್ ಸಾಂದ್ರತೆಗೂ (Ne) ಆ ತರಂಗದ ಆವರ್ತಸಂಖ್ಯೆಗೂ (ಮೆಗಾಸೈಕಲ್ಲಿನಲ್ಲಿ) ಇರುವ ಸಮೀಕರಣ Ne=1.24x104f2. ಅಲ್ಲದೆ ಅದು ಭೂಮಿಗೆ ಹಿಂದಿರುಗಿ ಬರಲು ಆಗುವ ಕಾಲದಿಂದ ಪ್ರತಿಫಲನ ಹೊಂದುವ ಸ್ಥಳದ ಎತ್ತರವೂ ತಿಳಿಯುತ್ತದೆ. ಇಂಥ ಅಧ್ಯಯನದಿಂದ ಭೂಮಿಯಿಂದ ಸುಮಾರು (100-350) ಕಿ.ಮೀ. ಎತ್ತರದವರೆಗೆ ಎತ್ತರ ಹೆಚ್ಚಾದಂತೆ ಎಲೆಕ್ಟ್ರಾನ್ ಸಾಂದ್ರತೆ ಹೆಚ್ಚುತ್ತದೆ ಎಂದು ತಿಳಿಯಿತು. ಆದ್ದರಿಂದ D, E, F1, F2ಪದರಗಳು ಮೊದಲು ತಿಳಿದುಕೊಂಡಿದ್ದ ಹಾಗೆ ಸ್ಪಷ್ಟವಾದ ಪ್ರತ್ಯೇಕ ಪದರಗಳಲ್ಲ. ಆದರೆ ಎಲೆಕ್ಟ್ರಾನ್ ಸಾಂದ್ರತೆ ಪರಮಾವಧಿಯಾಗಿದ್ದು ಸ್ವಲ್ಪ ಎತ್ತರದವರೆಗೂ ಒಂದೇ ಸಾಂದ್ರತೆಯಿರುವ ಸ್ಥಳಗಳು; ಅಂದರೆ ಈ ಪದರಗಳ ನಡುವೆಯೂ ಬಿಡಿ ಎಲೆಕ್ಟ್ರಾನ್‍ಗಳು ಇವೆಯೆಂದಾಯಿತು.
ಅಯಾನ್‍ಗೋಳದ ಅಧ್ಯಯನ
[ಬದಲಾಯಿಸಿ]ಸುಮಾರು (60-90) ಕಿ.ಮೀ. ಎತ್ತರದವರೆಗೆ ಹರಡಿರುವ ಪದರದಲ್ಲಿ ಹೈಡ್ರೊಜನ್ನಿನ ಲೈಮಾನ್ ಆಲ್ಫ ಕಿರಣದಿಂದ ಅಯಾನೀಕರಣವಾಗುವುದು. ಅಯಾನ್‍ಗೋಳಕ್ಕೆ ಈ ಕಿರಣದ ಕಂಪನಸಂಖ್ಯೆಯ ಕಿಟಕಿ ಅಥವಾ ಕಿಂಡಿ ಇರುವುದರಿಂದ ಈ ಕಿರಣ (60) ಕಿ.ಮೀ. ಎತ್ತರದವರೆಗೂ ಬರಲು ಸಾಧ್ಯ. ಸೌರಜ್ವಾಲೆಯಿಂದ (ಸೋಲಾರ್ ಫ್ಲೇರ್) ಬರುವ ಶಕ್ತಿಯುತವಾದ ಕ್ಷ-ಕಿರಣಗಳಿಂದ ಮತ್ತು ಹಲವಾರು ದಶಲಕ್ಷದಿಂದ ನೂರಾರು ದಶಲಕ್ಷ ಮಿಲಿಯನ್ ಎಲೆಕ್ಟ್ರಾನ್ ವೋಲ್ಟ್‍ಶಕ್ತಿಯ ಪ್ರೊಟಾನ್‍ಗಳಿಂದ ಈ ಪದರದ ಎಲೆಕ್ಟ್ರಾನ್ ಸಾಂದ್ರತೆ ಬಹಳ ಹೆಚ್ಚುತ್ತದೆ ಮತ್ತು ಎತ್ತರ ಕಡಿಮೆಯಾಗುತ್ತದೆ. ಹೀಗೆ ಎಲೆಕ್ಟ್ರಾನ್ ಸಾಂದ್ರತೆ ಬಲು ಹೆಚ್ಚಿದಾಗ ರೇಡಿಯೊ ಪ್ರಸಾರವೇ ಸಾಧ್ಯವಾಗದಿರಬಹುದು. ಸುಮಾರು (90-140) ಕಿ.ಮೀ. ಎತ್ತರದವರೆಗೆ ಹರಡಿರುವ E ಪದರದಲ್ಲಿ ಸೂರ್ಯಜನಿತ ಮೃದು ಕ್ಷ-ಕಿರಣಗಳಿಂದ ಅಯಾನೀಕರಣ ಉಂಟಾಗುತ್ತದೆ. ಅತಿ ಕಡಿಮೆ ಸೂರ್ಯಕಲೆಯಿರುವಾಗ ಇದರ ಎಲೆಕ್ಟ್ರಾನ್ ಸಾಂದ್ರತೆ ಸುಮಾರು (105) (ಮಧ್ಯಾಹ್ನಕಾಲ) ಮತ್ತು ಅತಿ ಹೆಚ್ಚು ಸೂರ್ಯಕಲೆಯಿರುವಾಗ (1.5x105) (ಮಧ್ಯಾಹ್ನಕಾಲ) ಈ ಪದರದ ಎಲೆಕ್ಟ್ರಾನ್ ಸಾಂದ್ರತೆ ಸಾಧಾರಣವಾಗಿ ಮಧ್ಯಾಹ್ನ (12) ಗಂಟೆಗೆ ಅತಿ ಹೆಚ್ಚಾಗಿ, ಅಲ್ಲಿಂದ ಎರಡು ಕಡೆಯೂ ಕಾಲಕ್ಕೆ ಸರಿಯಾಗಿ ಕಡಿಮೆಯಾಗುತ್ತ ಇರುತ್ತದೆ. ಸುಮಾರು (140-200) ಕಿ.ಮೀ. ಎತ್ತರದವರೆಗೂ ಹರಡಿರುವ F1 ಪದರದಲ್ಲಿ ಅಯಾನೀಕರಣವುಂಟಾಗುವುದು ಸೂರ್ಯಜನಿತ ಹೀಲಿಯಂ (304) ಕಿರಣದಿಂದ. ಅತಿ ಕಡಿಮೆ ಸೂರ್ಯಕಲೆಯಿರುವಾಗ ಇದರ ಎಲೆಕ್ಟ್ರಾನ್ ಸಾಂದ್ರತೆ ಸುಮಾರು (5x105) (ಮಧ್ಯಾಹ್ನಕಾಲ) : ಮತ್ತು ಅತಿಹೆಚ್ಚು ಸೂರ್ಯಕಲೆಯಿರುವಾಗ ಸುಮಾರು (2x106) (ಮಧ್ಯಾಹ್ನಕಾಲ). F ಪದರ E ಮತ್ತು F2ಪದರಗಳಿಂದ ಸ್ಪಷ್ಟವಾಗಿ ಬೇರೆಯಾಗಿಲ್ಲ ಮತ್ತು ರಾತ್ರಿಕಾಲದಲ್ಲಿ ಸಾಂದ್ರತೆ 104ಗಿಂತ ಕಡಿಮೆಯಿದ್ದು ಇದು ಇರುವುದೇ ತಿಳಿಯುವುದಿಲ್ಲ.
ಸುಮಾರು (200-300) ಕಿ.ಮೀ. ಎತ್ತರದವರೆಗೂ ಹರಡಿರುವ F2 ಪದರದಲ್ಲಿ ಅಯಾನೀಕರಣವುಂಟಾಗಿರುವುದು ಸಹ ಹೀಲಿಯಂ (304) ಕಿರಣಗಳಿಂದಲೇ ಇರಬೇಕು. ಈ ಪದರದ ವಿಷಯ ಅಷ್ಟು ನಿಖರವಾಗಿ ತಿಳಿದಿಲ್ಲ. ಇದರ ಎಲೆಕ್ಟ್ರಾನ್ ಸಾಂದ್ರತೆ ಸುಮಾರು 106ಎತ್ತರ ಹೆಚ್ಚಾದ ಹಾಗೆ ಅಯಾನೀಕರಣ ವ್ಯತ್ಯಾಸವಾಗುವದರಕ್ಕಿಂತ ಪುನರ್ಮಿಲನ ಕಡಿಮೆಯಾಗುವ ದರ ಹೆಚ್ಚು. ಆದ್ದರಿಂದ ಅದೇ ಅಯಾನೀಕರಿಸುವ ಕಿರಣಗಳಿಂದ ಹೆಚ್ಚು ಎಲೆಕ್ಟ್ರಾನ್ ಸಾಂದ್ರತೆಯ ಎರಡನೆಯ ಪದರವುಂಟಾಗಿದೆ. 300 ಕಿ.ಮೀ. ಗಿಂತ ಮೇಲೆ ಎತ್ತರ ಹೆಚ್ಚಾದ ಹಾಗೆ ಎಲೆಕ್ಟ್ರಾನ್ ಸಾಂದ್ರತೆ ಕಡಿಮೆಯಾಗುತ್ತದೆ. ಈ ಪದರಗಳ ಗುಣಾತಿಶಯಗಳು ಮೇಲೆ ಹೇಳಿರುವಂತೆ ದಿನದ ಕಾಲಕ್ಕೆ ಸೂರ್ಯನಲ್ಲಾಗುವ ಬದಲಾವಣೆಗಳಿಗೆ ಮತ್ತು ಸೂರ್ಯಕಲೆಗಳ ಆವರ್ತಕ್ಕೆ (ಸನ್‍ಸ್ಪಾಟ್ ಸೈಕಲ್) ಅನುಸಾರವಾಗಿ ಬದಲಾಗುವುವಲ್ಲದೆ ವರ್ಷದ ಋತುವಿಗೆ ಅಧ್ಯಯನ ಕೇಂದ್ರದ ಭೌಗೋಳಿಕ ಸ್ಥಾನಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಕಾಂತೀಯ ಬಿರುಗಾಳಿ (ಮ್ಯಾಗ್ನೆಟಿಕ್ ಸ್ಟಾರ್ಮ್) ಬಂದಾಗಲಂತೂ ಈ ಗುಣಾತಿಶಯಗಳು ಬಲು ಏರುಪೇರಾಗಿರುತ್ತವೆ.
ರೇಡಿಯೋ ತರಂಗಗಳ ಮೇಲೆ ಪ್ರಭಾವ
[ಬದಲಾಯಿಸಿ]ಗ್ರಾಹಕ (ರಿಸೀವರ್) ಗ್ರಹಿಸುವ ರೇಡಿಯೊ ಸಂಜ್ಞೆಯ ಶಕ್ತಿ ಇದ್ದಕ್ಕಿದ್ದಂತೆ ಬದಲಾಗುವುದಕ್ಕೆ ಕುಗ್ಗುವಿಕೆ (ಫೇಡಿಂಗ್) ಎನ್ನುತ್ತೇವೆ. ಇದಕ್ಕೆ ಅಯಾನ್‍ಗೋಳದ ಸ್ಥಳೀಯ ವ್ಯತ್ಯಾಸಗಳಿಂದ ಚದರಿದ ತರಂಗಗಳ ಪ್ರತಿಯೋಗ (ಇಂಟರ್‍ಫಿಯರೆನ್ಸ್), ಅಯಾನ್‍ಗೋಳದ ಹಲವಾರು ಮಾರ್ಗಗಳಲ್ಲಿ ಬಂದ ತರಂಗಗಳ ಪ್ರತಿಯೋಗ, ಭೂತರಂಗ, ಆಕಾಶತರಂಗಗಳ ಪ್ರತಿಯೋಗ ಹೀಗೆ ಹಲವಾರು ಕಾರಣಗಳುಂಟು. ಅಲ್ಲದೆ ಈ ಪ್ರತಿಯೋಗದ ಸ್ಥಿತಿ ಆವರ್ತಸಂಖ್ಯೆಯನ್ನು ಅವಲಂಬಿಸಿರುವುದರಿಂದ ವಿವಿಧ ಆವರ್ತಸಂಖ್ಯೆಯ ತರಂಗಗಳು ವಿವಿಧ ಮಟ್ಟಕ್ಕೆ ಕುಗ್ಗಿಸಲ್ಪಟ್ಟು ಗ್ರಹಿಸಿದ ಸಂಜ್ಞೆಯ ಗುಣ (ಕ್ವಾಲಿಟಿ) ಮೂಲಸಂಜ್ಞೆಯಂತಿರುವುದಿಲ್ಲ. ಇದನ್ನು ಆರಿಸಿದ ಕುಗ್ಗುವಿಕೆ (ಸೆಲೆಕ್ಟಿವ್ ಫೇಡಿಂಗ್) ಎನ್ನುತ್ತೇವೆ. ಅಯಾನ್‍ಗೋಳದ ಸ್ಥಳೀಯ ವ್ಯತ್ಯಾಸಗಳ ಜರುಗುವಿಕೆಯ (ಡ್ರಿಫ್ಟ್) ಮೇಲಾಗುತ್ತಿರುವ ಅಧ್ಯಯನಗಳಿಂದಲೂ ಮತ್ತು ಕೃತಕ ಉಪಗ್ರಹಗಳಿಂದ ನಡೆಸುತ್ತಿರುವ ಅಧ್ಯಯನಗಳಿಂದಲೂ ಅಯಾನ್‍ಗೋಳದ ವಿವರಗಳು ಮತ್ತಷ್ಟು ತಿಳಿಯುತ್ತವೆ. ಹೆಚ್ಚು ಆವರ್ತ ಸಂಖ್ಯೆಯ ಭೂಮಿತರಂಗ ಒಂದೆರಡು ಕಿ.ಮೀ.ನಲ್ಲೇ ಕ್ಷಯಿಸಿ ಹೋಗುತ್ತದೆ ಮತ್ತು ಈ ಪರಮಾವಧಿ ಪತನಕೋನವಿದ್ದಾಗ ಭೂಮಿಗೆ ಹಿಂತಿರುಗುವ ಸ್ಥಳಕ್ಕೂ ಪ್ರಸಾರ ಯಂತ್ರಕ್ಕೂ ನಡುವೆ ಆಕಾಶತರಂಗ ಬರಲು ಸಾಧ್ಯವಿಲ್ಲ. ಯಾವ ಮಾರ್ಗದಿಂದಲೂ ಆ ಪ್ರಸಾರಯಂತ್ರದ ಸಂಜ್ಞೆಗಳು ಬರಲು ಸಾಧ್ಯವಿಲ್ಲದ ಈ ದೂರಕ್ಕೆ ಹಾರುದೂರ (ಸ್ಕಿಪ್ ಡಿಸ್ಟೆನ್ಸ್) ಎಂದು ಹೆಸರು.ಪ್ರೇಕ್ಷಕಕೇಂದ್ರದಿಂದ ಗ್ರಾಹಕಕೇಂದ್ರಕ್ಕೆ ಹೋಗುವಾಗ ರೇಡಿಯೊ ಅಲೆಯೊಂದು ಭೂಮಿ ಮತ್ತು ಅಯಾನ್‍ಗೋಳದ ನಡುವೆ ಹಿಂದಕ್ಕೂ ಮುಂದಕ್ಕೂ ಪ್ರತಿಫಲನಗೊಳ್ಳುತ್ತದೆ. ಹೆಚ್ಚು ದೂರದ ರೇಡಿಯೊ ಪ್ರಸಾರಕ್ಕೆ (550) ಕಿಲೊಸೈಕಲ್‍ಗಳಿಂದ (30) ಮೆಗಾಸೈಕಲ್‍ಗಳವರೆಗಿನ ಆವರ್ತ ಸಂಖ್ಯೆಯ ತರಂಗಗಳನ್ನೇ ಉಪಯೋಗಿಸುತ್ತಾರೆ. ಆವರ್ತಸಂಖ್ಯೆ ಇದಕ್ಕಿಂತ ಹೆಚ್ಚಾದರೆ ಅಯಾನ್‍ಗೋಳದಿಂದ ಪ್ರತಿಫಲನವಾಗದೇ ಅದನ್ನು ತೂರಿಕೊಂಡು ಹೊರಟುಹೋಗುತ್ತದೆ. ಆವರ್ತಸಂಖ್ಯೆ ಇದಕ್ಕಿಂತ ಕಡಿಮೆಯಾದರೆ ತರಂಗದ ಶಕ್ತಿಯೆಲ್ಲ ಆ ಪದರದ ಎಲೆಕ್ಟ್ರಾನ್‍ಗಳೇ ಹೀರಿ ಅಲ್ಲಿರುವ ಗಾಳಿಯ ಅಣುಗಳೊಡನೆ ಡಿಕ್ಕಿ ಹೊಡೆದು ಕಳೆದುಹೋಗುತ್ತದೆ. ಬಾಹ್ಯಾಕಾಶ ನೌಕೆಯೊಡನೆ (ಸ್ಪೇಸ್ ಸ್ಯಾಟೆಲ್ಲೈಟ್) ಅಥವಾ ಬೇರೆ ಗ್ರಹಗಳೊಡನೆ ರೇಡಿಯೂ ಸಂಪರ್ಕಕ್ಕೆ 30 ಮೆ.ಸೈ.ಗಿಂತ ಹೆಚ್ಚಿನ ಆವರ್ತಸಂಖ್ಯೆಯ ತರಂಗಗಳನ್ನೇ ಉಪಯೋಗಿಸಬೇಕು.
ಇತ್ತೀಚಿಗಿನ ಆವಿಷ್ಕಾರಗಳು
[ಬದಲಾಯಿಸಿ]ಪ್ರಕೃತಿದತ್ತವಾದ ಅಯಾನ್‍ಗೋಳದ ಬದಲು ವೆಸ್ಟ್ ಫೋರ್ಡ್ ಯೋಜನೆಯಲ್ಲಿ ಲಕ್ಷಗಟ್ಟಲೆ ಅತಿಸೂಕ್ಷ್ಮ ತಾಮ್ರದ ತಂತಿಗಳನ್ನು ಭೂಮಿಯ ಸುತ್ತಲೂ ಸೂಕ್ತ ಎತ್ತರದಲ್ಲಿ ಹರಡಿ ಆ ಕೃತಕಾವರಣದ ಸಹಾಯದಿಂದ ಹೆಚ್ಚು ದೂರ ರೇಡಿಯೊ ಪ್ರಸಾರಕ್ಕೆ ಪ್ರಯತ್ನ ನಡೆಯುತ್ತಿದೆ. ಎಕೊ, ಟೆಲ್‍ಸ್ಟಾರ್, ಸಿಂಕಾಮ್ ಮತ್ತು ರಿಲೇ ಕೃತಕ ಉಪಗ್ರಹಗಳ ಸಹಾಯದಿಂದ ಅಯಾನ್‍ಗೋಳದ ಸಹಾಯವಿಲ್ಲದೆಯೇ ಭೂಮಿಯಾದ್ಯಂತ ಸದಾಕಾಲ ರೇಡಿಯೊ ಸಂಪರ್ಕವಿಟ್ಟುಕೊಳ್ಳಬಹುದು; ಮತ್ತು ಅಯಾನ್‍ಗೋಳದಿಂದಾಗದ, 30 ಮೆ.ಸೈ.ಗಿಂತ ಹೆಚ್ಚಿನ ಆವರ್ತಸಂಖ್ಯೆಯ ತರಂಗಗಳನ್ನೇ ಉಪಯೋಗಿಸುವ, ಟೆಲಿವಿಷನ್ನಿನ ಅಧಿಕ ದೂರ ಪ್ರಸಾರವನ್ನೂ ಮಾಡಬಹುದು ಎಂದು ತಿಳಿದು ಬಂದಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Ionosphere". Archived from the original on 2016-03-05. Retrieved 2016-04-13.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Gehred, Paul, and Norm Cohen, SWPC's Radio User's Page Archived 2003-12-03 ವೇಬ್ಯಾಕ್ ಮೆಷಿನ್ ನಲ್ಲಿ..
- Amsat-Italia project on Ionospheric propagation (ESA SWENET website) Archived 2008-07-19 ವೇಬ್ಯಾಕ್ ಮೆಷಿನ್ ನಲ್ಲಿ.
- NZ4O Solar Space Weather & Geomagnetic Data Archive Archived 2009-09-23 ವೇಬ್ಯಾಕ್ ಮೆಷಿನ್ ನಲ್ಲಿ.
- NZ4O 160 Meter (Medium Frequency)Radio Propagation Theory Notes Archived 2009-09-23 ವೇಬ್ಯಾಕ್ ಮೆಷಿನ್ ನಲ್ಲಿ. Layman Level Explanations Of "Seemingly" Mysterious 160 Meter (MF/HF) Propagation Occurrences
- USGS Geomagnetism Program
- Encyclopaedia Britannica, Ionosphere and magnetosphere
- Current Space Weather Conditions Archived 2005-12-19 ವೇಬ್ಯಾಕ್ ಮೆಷಿನ್ ನಲ್ಲಿ.
- Current Solar X-Ray Flux Archived 2005-04-05 ವೇಬ್ಯಾಕ್ ಮೆಷಿನ್ ನಲ್ಲಿ.
- Super Dual Auroral Radar Network
- European Incoherent Scatter radar system
- Millstone Hill incoherent scatter radar Archived 2006-08-28 ವೇಬ್ಯಾಕ್ ಮೆಷಿನ್ ನಲ್ಲಿ.