ಅಬುಧಾಬಿಯ ಶೇಖ್ ಜಾಯೆದ್ ಮಸೀದಿ'

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಬು ಧಾಬಿಯಲ್ಲಿರುವ ಪ್ರಸಿದ್ಧ ಮಸೀದಿ. ಸರ್ವಧರ್ಮೀಯರಿಗೂ ಕೆಲವು ನಿರ್ಬಂಧನೆಗಳೊಂದಿಗೆ ಪ್ರವೇಶಕ್ಕೆ ಅನುಮತಿಯಿರುವುದು ಇಲ್ಲಿಯ ವಿಶೇಷ. ೨೬, ೩೦೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿದ ಈ ಕಟ್ಟಡ ಹಲವು ವೈಶಿಷ್ಠ್ಯಗಳಿಂದ ದಾಖಲೆಗಳನ್ನು ಸ್ಥಾಪಿಸಿದೆ. ಇಲ್ಲಿ ದ್ವನಿಮುದ್ರಿತ ಕುರಾನ್ ಮಂತ್ರಗಳನ್ನು ೨೪ ಘಂಟೆಗಳೂ ಪ್ರಸಾರ ಮಾದಲಾಗುತ್ತದೆ. ಮಹಿಳೆಯರೂ ಪ್ರಾರ್ಥನೆಮಾಡಲು ಬರುವುದು ಮತ್ತೊಂದು ವಿಶೇಷ. ವಿವಿಧ ದೇಶಗಳ ವಾಸ್ತುತಂತ್ರಗಳ ಜೊತೆಜೊತೆಯಾಗಿ, ಇಸ್ಲಾಂ ಧರ್ಮದ ಮೂಲ ಸಂಹಿತೆಗಳನ್ನೂ ಅಳವಡಿಸಿಕೊಳ್ಳಲಾಗಿದೆ. ವಿಶ್ವದ ವಿಶಾಲ ಮತ್ತು ಸುಂದರ ಮಸೀದಿಗಳ ಪೈಕಿ ಇದನ್ನೂ ಪರಿಗಣಿಸಲಾಗುತ್ತದೆ.

ಮೂಲ ಕಲ್ಪನೆ[ಬದಲಾಯಿಸಿ]

ಯುಎಇ ನ ರಾಜಥಾನಿ ನಗರವಾದ ಅಬು ಧಾಬಿಗೆ ಕಲಶಪ್ರಾಯವಾಗಿರುವ ಮಸೀದಿ ವಿಶ್ವದ ಅತಿದೊಡ್ಡ ಮಸೀದಿಗಳಲ್ಲಿ ಒಂದಾಗಿದೆ. ಸಂಸ್ಥಾಪಕರೂ ಪ್ರಥಮ ಅಧ್ಯಕ್ಷರೂ ಆದ ದಿವಂಗತ ಶೇಖ್ ಜಾಯೆದ್ ಬಿನ್ ಸುಲ್ತಾನ್ ಆಲ್ ನಯಾನ್ರವರ ಕನಸಿನ ಕೂಸಾದ ಮಸೀದಿಗೆ ಅವರ ಹೆಸರನ್ನೇ ಇಡಲಾಗಿದೆ. ಅವರ ಇಚ್ಛೆಯಂತೆ ಮಸೀದೆಯ ಅಂಗಣದಲ್ಲೇ ಅವರ ಸಮಾಧಿಯೂ ಇದೆ. ಆ ಸ್ಥಳದಲ್ಲಿ ೨೪ ಗಂಟೆಯೂ ಕುರಾನ್ ಮಂತ್ರದ ಧ್ವನಿಮುದ್ರಿಕೆ ಸತತವಾಗಿ ಇರುತ್ತದೆ. ಯುಎಇಸಂಸ್ಕೃತಿಯನು ಪ್ರತಿಬಿಂಬಿಸುವ, ಅತ್ಯಂತ ಗುಣಮಟ್ಟದ ಸಾಮಗ್ರಿಗಳನ್ನು ಉಪಯೋಗಿಸಿರುವ, ಇಸ್ಲಾಮ್ ಧರ್ಮದ ಮೂಲೋದ್ದೇಶಗಳನ್ನು ಸಾರುವ, ಹತ್ತಿರದ ಎಲ್ಲಾ ಕಡೆಗಳಿಂದಲೂ ಕಾಣುವಂತಿರುವ ಮಸೀದಿ ಅವರ ಕನಸಾಗಿತ್ತು. ಅದರ ಪ್ರಕಾರ , ೧೯೮೦ ರ ದಶಕದ ಕೊನೆಯಲ್ಲಿ, ಒಂಬತ್ತೂವರೆ ಮೀಟರ್ ಎತ್ತರದ ದಿಬ್ಬದಮೇಲೆ, ೨೩ ಸಾವಿರ ಚ. ಮೀ ವಿಸ್ತೀರ್ಣದ ಸ್ಥಳವನ್ನು ಕಾದಿರಿಸಲಾಯಿತು. ಮಸೀದಿಯ ವಿನ್ಯಾಸ ಹೇಗಿರಬೇಕೆಂಬ ಬಗ್ಗೆ , ಕಟ್ಟಡಕ್ಕೆ ಬಳಸಬೇಕಾದ ಸಾಮಗ್ರಿಗಳ ಬಗ್ಗೆ ಮಾಹಿತಿ ಸಂಗ್ರಹಕ್ಕಾಗಿಯೇ ಸುಮಾರು ೧೦ ವರ್ಷಗಳು ಕಳೆದವು. ೧೯೯೯ ರಲ್ಲಿ ಮಸೀದಿಯ ಶಂಕುಸ್ಥಾಪನೆಯನ್ನು ಮಾಡಲಾಯಿತು. ಆರಂಭದಲ್ಲಿ ಕಾಮಗಾರಿ ನಿಧಾನವಾಗಿ ೪-೫ ವರ್ಷಗಳು ಕಳೆದವು. ೨೦೦೪ ರ ನವೆಂಬರ್, ೨ ರಂದು ಶೇಖ್ ರು ದೈವವಶರಾದರು. ಇದಾದ ಕೇವಲ ಮೂರು ವರ್ಷಗಳಲ್ಲಿ ಮಸೀದಿಯ ಕೆಲಸ ಮುಗಿಯಿತು.

ಬಳಸಲಾದ ಸಾಮಗ್ರಿಗಳು[ಬದಲಾಯಿಸಿ]

 • ೩೩ ಸಾವಿರ ಟನ್ ಉಕ್ಕು
 • ೨೧೦ ಚ.ಮೀಟರ್ ಕಾಂಕ್ರೀಟ್
 • ೭,೦೦೦ ಹೆಚ್ಚು ಕಾಂಲ್ರೀಟ್ ಕಂಭಗಳು ಕಟ್ಟಡಕ್ಕೆ ಭದ್ರವಾದ ಬುನಾದಿಯನ್ನು ಒದಗಿಸಿವೆ.
 • ಅಬುಧಾಬಿಯ ನೆಲ ಮರಳಿನದಾದ್ದರಿಂದ ಕಲ್ಲಿನ ತಳಪಾಯದ ಭದ್ರತೆಯ ಸಾಕಾಗುವುದಿಲ್ಲ. ಇದಕ್ಕೆ ನೆಲದ ಆಳದಲ್ಲಿ ಲಂಬವಾಗಿ ಕಾಂಕ್ರೀಟ್ ಕಂಭಗಳ ಸರಣಿಯನ್ನು ನೆಟ್ಟು ಅವುಗಳಮೇಲೆ ಕಾಂಕ್ರೀಟ್ ಹಲಗೆಗಳನ್ನುಸ್ಥಾಪಿಸಿವ ಮೂಲಕ ಭದ್ರವಾದ ಅಡಿಪಾಯದ ರೂಪಿಸುತ್ತಾರೆ. ಬ್ರಿಟನ್ ನ 'ಹಾಲ್ಕ್ರೋ ನಿರ್ಮಾಣ ಸಂಸ್ಥೆ'ಯ ನಾಯಕತ್ವದಲ್ಲಿ ಕಾರ್ಯಗಳೆಲ್ಲಾ ನಡೆದವು. ಇದಕ್ಕೆ ಪೂರಕವಾಗಿ ಹಲವಾರು ಸಂಸ್ಥೆಗಳು ತಮ್ಮ ಯೋಗದಾನವನ್ನು ಮಾಡಿದವು.

ದೇಶ ವಿದೇಶದ ಕಟ್ಟಡ ಸಾಮಗ್ರಿಗಳ ಸಂಗಮ[ಬದಲಾಯಿಸಿ]

ಮಸೀದಿಯ ನಿರ್ಮಾಣ ಕಾರ್ಯದಲ್ಲಿ ಇಟಲಿ, ಜರ್ಮನಿ, ಮೊರಾಕ್ಕೊ, ಭಾರತ, ಟರ್ಕಿ, ಇರಾನ್ ಚೀನಾ, ಗ್ರೀಸ್ ದೇಶಗಳಿಂದ ಹಲವು ತರಹೆಯ ಸಾಮಗ್ರಿಗಳು ಕಟ್ಟಡದ ವೈಭವವನ್ನು ನೂರ್ಮಡಿಸಿವೆ. ಆಯ್ದು ನೇಮಿಸಲಾದ ೩೮ ಶ್ರೇಷ್ಠ ಸಂಸ್ಥೆಗಳ ೩,೦೦೦ ಕ್ಕೂ ಹೆಚ್ಚಿನ 'ಕುಶಲ ಕಾರೀಗರ್ ಗಳು' ಇದರ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಅಮೃತ ಶಿಲೆ, ಚಿನ್ನ, ವೈಢೂರ್ಯ, ಸೆರಾಮಿಕ್, ಕ್ರಿಸ್ಟಲ್ ಹರಳುಗಳನ್ನು ಬಳಸಲಾಗಿದೆ. 'ಮೊರಾಕ್ಕೊದೇಶದ ವಾಸ್ತು ವಿನ್ಯಾಸ' ವನ್ನೇ ಹೋಲುವ ಮಸೀದಿಗೆ ಮತ್ತೂ ಹಲವು ದೇಶಗಳ 'ವಾಸ್ತುಶೈಲಿ'ಗಳನ್ನು ಧಾರಾಳವಾಗಿ ಬಳಸಿಕೊಂಡಿದ್ದಾರೆ. ಒಟ್ಟು ೮೨ ವಿವಿಧ ಗಾತ್ರದ 'ಗುಂಬಝ್' ಗಳಿವೆ. ಪ್ರಧಾನ ಗುಂಬಝ್ ೩೨. ೮ ಮೀ ವ್ಯಾಸಹೊಂದಿದ್ದು, ಒಳಭಾಗದಿಂದ ೭ ಮೀ. ಎತ್ತರ ಹಾಗೂ ಹೊರಭಾಗದಿಂದ ೮೫ ಮೀ ಎತ್ತರ, ಹೊಂದಿದೆ. ವಿಶ್ವದಲ್ಲೇ ಎತ್ತರದ ಈ 'ಗುಂಬಝ್' ವಿಶ್ವದಲ್ಲೇ ಅತಿ ದೊಡ್ಡದು. ಅಮೃತ ಶಿಲೆ ಅತಿ ನಯವಾದದ್ದು ಹಾಗೂ ಮೃದು ಸಹಿತ. ಏನಾದರೂ ಹೆಚ್ಚು ಒತ್ತಡ ಹಾಕಿದರೆ, ಮುರಿದು ಪುಡಿಯಾಗುತ್ತದೆ. ಇಂತಹ ಶಿಲೆಯನ್ನು ಗುಂಬಜಿನ ರಚನೆಮಾಡಿರುವುದು ಒಂದು ಸಾವಾಲೇ ಸರಿ. ಗುಂಬಜುಗಳ ಒಳ ಆವರಣದಲ್ಲಿ ಅಡ್ಡಲಾಗಿ ಕುರಾನ್ ವಾಕ್ಯಗಳನ್ನು ಬರೆಯಲಾಗಿದೆ. ಈ ಗುಂಬಜುಗಳ ನಡುವಣ ಅಂತರ ಪ್ರತಿಧ್ವನಿಯನ್ನು ಪ್ರತಿಬಂಧಿಸುವಷ್ಟು ಮಾತ್ರ ನಿಖರವಾಗಿರುವುದರಿಂದ ಇಷ್ಟು ದೊಡ್ಡ ಸಭಾಂಗಣದಲ್ಲಿ ಶಬ್ದ ಪ್ರತಿಧ್ವನಿಸುವುದೇ ಇಲ್ಲ. ಇದರಿಂದಾಗಿ ಇಮಾಮ್ ರು ನೀಡುವ ಪ್ರವಚನಗಳು ಹಾಗೂ ನಮಾಜ್ ಸಮಯದಲ್ಲಿ ಕುರಾನ್ ಪಠಣ ಸ್ಪಷ್ಟವಾಗಿ ಕೇಳಬರುತ್ತದೆ.

ವೈಶಿಷ್ಟ್ಯಗಳು[ಬದಲಾಯಿಸಿ]

 • ಮಸೀದಿಯ ಆವರಣದೊಳಗೆ, ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕಂಬಗಳಿವೆ. ಈ ಕಂಬಗಳ ಹೊರಭಾಗಕ್ಕೆ ಅಮೃತಶಿಲೆಯ ಚಿಕ್ಕಚಿಕ್ಕ ಚಪ್ಪಡಿಗಳನ್ನು ಅಳವಡಿಸಲಾಗಿದೆ. ಹೀಗೆ ಅಳವಡಿಸಿರುವ ಚಪ್ಪಡಿಗಳ ಸಂಖ್ಯೆ ೨೦ ಸಾವಿರಕ್ಕೂ ಮಿಗಿಲಾಗಿವೆ. ನಡುನಡುವೆ ಲ್ಯಾಪಿಸ್ ಲಜೂಲಿ, ಕೆಂಪು ಆಗೇಟ್, ಅಮಿಥೈಲಿಸ್ಟ್, ಅಬಲೋನ್ ಶೆಲ್, ಹಾಗೂ ಮದರ್ ಆಫ್ ಪರ್ಲ್ ಎಂಬ ಹೆಸರಿನ ಹಲವಾರು ಅಮೂಲ್ಯ ಹರಳುಗಳನ್ನು ಅಳವಡಿಸಲಾಗಿದೆ.
 • ಮಸೀದಿಯ ನಾಲ್ಕೂ ಮೂಲೆಗಳಲ್ಲಿ ರುವ ತಲಾ ೧೦೭ ಮೀಟರ್, ಎತ್ತರದ ಮಿನಾರುಗಳು ನಗರಕ್ಕೆ ಆಗಮಿಸುವ ಶ್ರದ್ಧಾಳುಗಳಿಗೆ ದೂರದಿಂದಲೇ ಸ್ವಾಗತ ಕೋರುತ್ತವೆ.
 • ಪ್ರಾಂಗಣ ಸುಮಾರು ೧೭ ಸಾವಿರ ಚ. ಮೀಟರ್, ವಿಸ್ತಾರವಿದ್ದು ಗ್ರೀಸ್ ದೇಶದ ಅಪ್ಪಟ ಬಿಳಿಬಣ್ಣದ ಅಮೃತ ಶಿಲೆಯ ಚಪ್ಪಡಿಗಳನ್ನು ಹರಡಲಾಗಿದೆ.
 • ಕಟ್ಟಡದ ಸುತ್ತಲೂ ವಿಸ್ತಾರವಾದ ಸುಂದರ ನೀರಿನ ಕೊಳಗಳನ್ನು ನಿರ್ಮಿಸಲಾಗಿದೆ.
 • ಒಳಭಾಗದಲ್ಲಿ ಗಾಢಬಣ್ಣದ ಟೈಲುಗಳನ್ನು ಹೊದಿಸಿದ್ದು ಹೊರಾವರಣದ ಒಟ್ಟು ವಿಸ್ತಾರ, ೭,೮೭೪ ಚದರ ಮೀಟರ್, ಇದೆ. ರಾತ್ರಿ ಹೊತ್ತಿನಲ್ಲಿ ಮಸೀದಿಗೆ ಹಾಕಿರುವ ಸುಂದರ ಹಾಗೂ ಪ್ರಜ್ವಲ ಬೆಳಕಿನ ಕಾಂತಿಯನ್ನು ಪ್ರತಿಫಲಿಸಿ ಸೌಂದರ್ಯ ನೂರ್ಮಡಿ ಹೆಚ್ಚಿಸುತ್ತವೆ.
 • ಸುತ್ತಲೂ ಸ್ಥಾಪಿಸಲಾಗಿರುವ ಚೌಕಾಕಾರದ ಸ್ತಂಭಗಳಲ್ಲಿ ಪ್ರಖರವಾದ ಬೆಳಕಿನ ಕಿರಣಗಳನ್ನು ಹಾಯಿಸುವ ಫೋಕಸ್ ದೀಪಗಳನ್ನು ಅಳವಡಿಸಲಾಗಿದ್ದು ಇವು ಮಸೀದಿಯ ಹೊರಮೈಯನ್ನು ಬೆಳಗುತ್ತವೆ. ಇಲ್ಲಿಯ ತೂಗು ದೀಪಗೊಂಚಲು (ಶಾಂಡಲಿಯರ್)ವಿಶ್ವದ ವಿಶೇಷ ದಾಖಲೆ.
' ವಿಶೇಷ ಮಹ್ರಾಬ್ ನಮಾಜ್ ಪೀಠ'
 • ಮೆಹ್ರಾಬ್ (ಇಮಾಮರು ನಮಾಜಿಗೆ ನಿಲ್ಲುವ ತಾಣ) ಸುಮಾರು ೩ ಮೀ. ಎತ್ತರವಿದ್ದು ಅತ್ಯಾಧುನಿಕ ಆಪ್ಟಿಕಲ್ ಫೈಬರ್ ದೀಪಗಳಿಂದ ಸಜ್ಜುಗೊಂಡಿದೆ. ಇದರ ಗೋಡೆ ೨೩ ಮೀ. ಎತ್ತರ, ಹಾಗೂ ೫೦ ಮೀ. ಅಗಲವಿದೆ. ಗೋಡೆಯ ಮೇಲೆ ಅರೇಬಿಕ್ ಬರಹ ಶೈಲಿಯಲ್ಲಿ ಅಲ್ಲಾಹನ ೯೯ ನಾಮಗಳನ್ನು ಬರೆಯಲಾಗಿದೆ. ಒಟ್ಟು ೨೫೦ ಆಪ್ಟಿಕಲ್ ಫೈಬರ್ ದೀಪಗಳು ಈ ನಾಮಗಳ ಹಿನ್ನೆಲೆಯಲ್ಲಿ ಬೆಳಗುತ್ತಾ ಗೋಡೆಗೆ ಒಂದು ವಿಶಿಷ್ಟ ಕಳೆಯನ್ನು ನೀಡುತ್ತವೆ. ಇದರ ಕರ್ತೃ ಮೊಹಮ್ಮದ್ ಮೇಂದಿ ಯುಎಇಯ ಖ್ಯಾತ ಕ್ಯಾಲಿಗ್ರಫಿ ಬರಹಗಾರರು. ಇವರ ಜೊತೆ ಕೈಯಾಡಿಸಿದವರು ಸಿರಿಯಾ ದೇಶದ ಫಾರೂಖ್ ಹದ್ದಾದ್ ಹಾಗೂ ಜೋರ್ಡಾನ್ ನ ಮೊಹಮ್ಮದ್ ಆಲಮ್.
 • ಮೆಹ್ರಾಬ್ ಹಾಗೂ ಒಳಾಂಗಣದ ಗೋಡೆಯಮೇಲಿನ ಕಲಾತ್ಮಕ ರಚನೆಗಳು, ಮುಖ್ಯ ಮಿನಾರ್ ಮತ್ತುಗುಂಬಜುಗಳ ಮೇಲಿರುವ ಕಳಸಗಳನ್ನು ಅಪ್ಪಟ ೨೪ ಕ್ಯಾರೆಟ್ ಬಂಗಾರದ ಲೇಪನದಿಂದ ಶ್ರೀಮಂತ ಗೊಳಿಸಲಾಗಿದೆ. ಪಕ್ಕದಲ್ಲಿರುವ ಕಂದು ಬಣ್ಣದ ಮಿಂಬರ್ ಸಹಿತ, ಸುಮಾರು ೧೦ ಅಡಿಗಳಷ್ಟು ಎತ್ತರವಿದ್ದು ಸುಂದರವಾಗಿದೆ.ಕುರಾನ್ ವಾಕ್ಯಗಳಿಗೆ ಚಿನ್ನದ ಲೇಪನ ಭವ್ಯವಾಗಿದೆ. ಮಸೀದಿಯ ಪ್ರಧಾನ ದ್ವಾರದ ವಿನ್ಯಾಸದ ಸೊಬಗನ್ನು ಕಣ್ಣಿನಲ್ಲಿ ನೋಡಿಯೇ ಆನಂದಿಸತಕ್ಕದ್ದು.

ಪ್ರವಾಸಿಗಳಿಗೆ ಸೌಲಭ್ಯ[ಬದಲಾಯಿಸಿ]

ಮಸೀದಿಯನ್ನು ವೀಕ್ಷಿಸಲು ಬರುವ ಅತಿಥಿ-ಅಭ್ಯಾಗತರ ಸಂಖ್ಯೆ, ರಂಜಾನ್ ಹಬ್ಬ]ದಲ್ಲಿರುವಂತೆ ಇತರೆ ದಿನಗಳಲ್ಲೂ ಹೆಚ್ಚು. ಮಸೀದಿಯ ಹೊರಗಡೆ ಸ್ಥಾಪಿಸಲಾಗಿರುವ ಡೇರೆಯಲ್ಲಿ ಸುಮಾರು ೧೫ ಸಾವಿರ ಜನಕ್ಕೆ ಉಚಿತ ಇಫ್ತಾರ್ ವ್ಯವಸ್ಥೆಯಿದೆ. ಇದರ ವ್ಯವಸ್ಥೆಯನ್ನೆಲ್ಲಾ ಸರಕಾರ ವಹಿಸಿಕೊಂಡಿದೆ. ಮುಸಲ್ಮಾನರಿಗೆ ಮತ್ತು ಇತರಧರ್ಮೀಯರಿಗೂ ಉಚಿತವ್ಯವಸ್ಥೆಯ ಏರ್ಪಾಟಿದೆ.

ಹೂವಿನಾಕಾರದ ೧೨ ಎಸಳುಗಳ ಗಡಿಯಾರ[ಬದಲಾಯಿಸಿ]

ಚಿತ್ರ:Azan or prayer clock.jpg
'ಅಝಾನ್ ಅಥವಾ ಪ್ರಾರ್ಥನಾವೇಳಾ-ಸೂಚಿ ಗಡಿಯಾರ'
 • ಪ್ರಾರ್ಥನಾ ವೇಳೆಯನ್ನು ತೋರಿಸುವ ಗಡಿಯಾರ, ೧೨ ಎಳೆಯ ಹೂವಿನ ಮಾದರಿಯಲ್ಲಿದೆ. ಹರಳುಗಳನ್ನು ಹೊಂದಿಸಿದ್ದಾರೆ. ದಿನದ ಐದು ಹೊತ್ತಿನ ನಮಾಜಿನ ವೇಳೆಗಳನ್ನು ಕರಾರುವಾಕ್ಕಾಗಿ ತೋರಿಸುವುದರ ಜೊತೆಗೆ, ಸೂರ್ಯೋದಯದ ವೇಳೆಯನ್ನೂ ದಾಖಲಿಸುತ್ತದೆ. ಗಡಿಯಾರದ ನಿಖರತೆ, ಒಂದು ವರ್ಷದ ಅವಧಿಯಲ್ಲಿ ಕೇವಲ ೦.೧ ಸೆಕೆಂಡ್ ವ್ಯತ್ಯಯದಷ್ಟು ಮಾತ್ರ.
 • ಪ್ರಧಾನ ಪ್ರಾರ್ಥನಾ ಸ್ಥಳದಲ್ಲಿ ನೆಲಕ್ಕೆ ಹಾಸಿರುವ ಅತಿ ಬೆಲೆಬಾಳುವ ರತ್ನ ಕಂಬಳಿ ವಿಶ್ವದಾಖಲೆಯನ್ನು ಹೊಂದಿದೆ. ಇತರ ಕೊಠಡಿಗಳಲ್ಲಿ ಒಟ್ಟು ೨೮ ಬಗೆಯ ವೈವಿಧ್ಯಮಯ ಅಮೃತಶಿಲೆಯ ಚಪ್ಪಡಿಗಳನ್ನು ಕಲಾತ್ಮಕವಾಗಿ ಅಳವಡಿಸಿದ್ದಾರೆ. ಗ್ರೀಸ್ ಹಾಗೂ ಮ್ಯಾಸಿಡೋನಿಯದಿಂದ ತರಿಸಲಾದ ಸಿವೆಕ್ ಮಾರ್ಬಲ್ ಹೊರಭಾಗದ ೪ ಮಿನಾರ್ ಗಳೂ ಸೇರಿದಂತೆ ಮಸೀದಿಯ ಪೂರ್ತಿ ಹೊರ ಆವರಣವನ್ನು ಆವರಿಸಿವೆ. ಇದರ ಒಟ್ಟು ವಿಸ್ತಾರ, ೧೧೫,೧೧೯ ಚ. ಮೀಟರ್ ಗಳು. ಈ ಮಾರ್ಬಲ್ ಚಪ್ಪಡಿಗಳ ವಿಶೇಷತೆಯೆಂದರೆ, ಸೂರ್ಯನ ಶಾಖವನ್ನು ಅತಿ ಕಡಿಮೆಯಾಗಿ ಹೀರುವ ಗುಣ ಹೊಂದಿರುವುದು. ಇದರಿಂದಾಗಿ ಅತಿ ಬೇಸಗೆಯಲ್ಲೂ ನೆಲ ತಣ್ಣಗೆ ಹಿತವಾಗಿರುತ್ತದೆ. ಲ್ಹಾಸಾ ಮಾರ್ಬಲ್ ಮತ್ತೊಂದು ವಿಧದ ಇಟಲಿಯ ಅಮೃತ ಶಿಲೆಯನ್ನು ಮಸೀದಿಯ ಒಳವಲಯದ ಗೋಡೆಗಳಿಗೆ ಲಂಬವಾಗಿ ನಿಲ್ಲಿಸಲು ಉಪಯೋಗಿಸಲಾಗುತ್ತದೆ. ಮಕರಾನಾ ಅಮೃತ ಶಿಲೆ (ಭಾರತದ ಕೊಡುಗೆ)ಯನ್ನು ಕಚೇರಿ ಹಾಗೂ ಮತ್ತಿತರ ಕೋಣೆಗಳಿಗೆ ಬಳಸಿದ್ದಾರೆ. ನೆಲದ ಮೇಲೆ ವಿವಿಧ ಸುಂದರ ವಿನ್ಯಾಸಗಳನ್ನು ರಚಿಸಲು ಇಟಲಿಯ ಆಕ್ವಾ ಬಿಯಾನಾ ಮತ್ತು ಬಿಯಾನೋ ಮಾರ್ಬಲ್ ಗಳನ್ನೂ ಚೀನಾದೇಶದ ಈಸ್ಟ್ ವೆಸ್ಟ್ ಮತ್ತು ಮಿಂಗ್ ಗ್ರೀನ್ ಮಾರ್ಬಲ್' ಗಳು ಹೆಚ್ಚಾಗಿ ಉಪಯೋಗಿಸಲ್ಪಟ್ಟಿವೆ. ಅಬುಧಾಬಿ ಸಹಿತ ಯು.ಎ.ಇ ಯ ನಗರಗಳು ಭೂಕಂಪ ಸಂಭಾವ್ಯ ಪ್ರದೇಶಗಳಲ್ಲಿರುವುದರಿಂದ ಭೂಕಂಪದಿಂದ ರಕ್ಷಣೆ ಪಡೆಯಲು ಅಗತ್ಯವಾದ ಎಲ್ಲಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ.

ಇಸ್ಲಾಂ ಧರ್ಮದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ[ಬದಲಾಯಿಸಿ]

ಸನ್, ೨೦೦೭ ರ ’ರಮ್ಜಾನ್ ಮಾಸ’ದಲ್ಲಿ ಆರಂಭವಾದ ಈ ಮಸೀದಿ, ಕೇವಲ ಪ್ರಾರ್ಥಗೆ ಮಾತ್ರ ಮೀಸಲಾಗಿರದೆ ಸರ್ವಧರ್ಮೀಯರಿಗೆ ಇಸ್ಲಾಂ ಧರ್ಮದ ಪರಿಚಯ ನೀಡುವ ಹಾಗೂ ಪ್ರೇರೇಪಿಸುವ ಮುಕ್ತಾವಕಾಶವನ್ನು ಕಲ್ಪಿಸಿವೆ. ಮಸೀದಿಗೆ ಬರುವ 'ಸಂದರ್ಶಕರು' ಪಾಲಿಸಬೇಕಾದ ಕೆಲವು ನಿಯಮಗಳು, ಕೆಲವು ಕಟ್ಟುಪಾಡುಗಳು, ಕಡ್ಡಾಯವಾಗಿದೆ. ಮಹಿಳೆಯರಿಗೆ 'ಬುರ್ಖಾ' ಹಾಗೂ ಪುರುಷರಿಗೆ 'ಪೂರ್ಣ ಪ್ರಮಾಣದ ವಸ್ತ್ರಗಳ ಧಾರಣೆ' ಅತ್ಯಗತ್ಯವಾಗಿವೆ. 'ರಿಸೆಪ್ಷನ್' ನಲ್ಲಿಯೇ ಮಹಿಳೆಯರಿಗೆ ಮತ್ತು ಪುರುಷರಿಗೆ 'ಶರಾಯಿ'ಗಳನ್ನು ಒದಗಿಸಲಾಗುವುದು.

ಟೂರ್ ಗೈಡ್ ವ್ಯವಸ್ಥೆ[ಬದಲಾಯಿಸಿ]

ಶನಿವಾರದಿಂದ ಗುರುವಾರದ ವರೆಗೆ ಮಸೀದಿ ತೆರೆದಿರುವುದರಿಂದ ಸಂಪೂರ್ಣ ಮಾಹಿತಿಯನ್ನು ಕೊಡಲು ಒಬ್ಬ ಗೈಡ್ (ಮಾರ್ಗ ದರ್ಶಕ) ವ್ಯವಸ್ಥೆಯಿದೆ. ಪ್ರತಿದಿನ ಬೆಳಿಗ್ಯೆ ವೀಕ್ಷಕ ವಿವರಣೆಗಳಲ್ಲೊಳಗೊಂಡ ಮಾರ್ಗದರ್ಶಕನನ್ನು ನಿಯೋಜಿಸಲಾಗಿದೆ. ಮಸೀದಿಯ ವಿವರಣೆಗಳೊಂದಿಗೆ ಇಸ್ಲಾಂ ಧರ್ಮದ ಮೂಲೋದ್ದೇಶಗಳನ್ನು ತಿಳಿಸಲಾಗುತ್ತದೆ. ಛಾಯಾಚಿತ್ರಗಳನ್ನು ಜಾಯೆದ್ ಅವರ ಸಮಾಧಿಯ ಆವರಣದ ಚಿತ್ರಗಳನ್ನು ಬಿಟ್ಟು ಬೇರೆ ಎಲ್ಲೂ ನಿಷೇಧವಿಲ್ಲ. ಶುಕ್ರವಾರ ಹಾಗೂ ಸರಕಾರಿ ರಜಾದಿನಗಳಂದು ಸಾರ್ವಜನಿಕರಿಗೆ ಪ್ರವೇಶಾವಕಾಶವಿದ್ದರೂ ಮಾರ್ಗ ದರ್ಶನವಿಲ್ಲ. ನಮಾಜ್ ಸಮಯದಲ್ಲಿ ಸಂದರ್ಶಕರನ್ನು ಹೊರಗೆ ಕಳಿಸಲಾಗುವುದು. ಪ್ರಧಾನ ಸಭಾಂಗಣದಲ್ಲಿ ಒಂಬತ್ತುಸಾವಿರಜನ ಶ್ರದ್ಧಾಳುಗಳು ಒಟ್ಟಿಗೆ ಪ್ರಾರ್ಥನೆಯಲ್ಲಿ ಭಾಗವಹಿಸಬಹುದು. ಹೊರಭಾಗದ ಪ್ರಾಂಗಣದಲ್ಲಿ ಒಟ್ಟಾರೆ, ೩೧ ಸಾವಿರ ಜನ ಸಾಮೂಹಿಕವಾಗಿ, ಪ್ರಾರ್ಥನೆ ಮಾಡಬಹುದು.

ಮಹಿಳೆಯರಿಗೂ ಪ್ರಾರ್ಥನೆಮಾಡಲು, ಪ್ರತ್ಯೇಕವಾದ ಸ್ಥಳವಿದೆ[ಬದಲಾಯಿಸಿ]

ಪ್ರಧಾನ ಸಭಾಂಗಣದ ಎಡಬಲಗಳಲ್ಲಿನ ಎರಡು ವಿಶಾಲ ಕೋಣೆಗಳನ್ನು ಮಹಿಳೆಯರಿಗಾಗಿ ಪ್ರಾರ್ಥನೆಮಾಡಲು ಮೀಸಲಾಗಿಟ್ಟಿದ್ದಾರೆ. ಪ್ರತಿಕೋಣೆಯಲ್ಲಿ ೧, ೫೦೦ ಜನ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಬಹುದು. ಮಸೀದಿಯ ಮೊದಲ ಮಹಡಿಯಮೇಲೆ 'ಅಬುಧಾಬಿ ಪ್ರವಾಸೋದ್ಯಮ ಗ್ರಂಥಾಲಯ'ವಿದೆ. ಇಸ್ಲಾಂ ಧರ್ಮದ ಸಂಬಂಧಿಸಿದಂತೆ ಒಂದು 'ಬೃಹತ್ ಗ್ರಂಥ ಭಂಡಾರ'ವಿದೆ. ಇತರ ಕಡೆಗಳಲ್ಲೂ ಕೈಗೆಟುಕುವ ಹಾಗೆ 'ಕುರಾನ್' ಗ್ರಂಥಗಳನ್ನು ಇರಿಸಲಾಗಿದೆ. ಈ ಭವ್ಯ ಮಸೀದಿಯ ನಿರ್ಮಾಣದ ಸಂಪೂರ್ಣ ವೆಚ್ಚ ಸುಮಾರು ೨, ೧೬೭ ಬಿಲಿಯನ್ ದಿರ್ಹಾಂಗ್ ಗಳು. ಭಾರತೀಯ ಮೌಲ್ಯದಲ್ಲಿ , ೬, ೨೮೪,೯೦೦,೦೦೦ ರೂಪಾಯಿಗಳು. ಸುಮಾರು ೨೬,,೩೦೦, ಕೋಟಿ ರೂಪಾಯಿಗಳು.

'ಶೇಖ್ ಜಾಯೆದ್ ಮಸೀದಿಯ ಹೆಸರಿನ ಅಂಚೆ ಚೀಟಿ'[ಬದಲಾಯಿಸಿ]

'ಶೇಖ್ ಜಾಯೆದ್ ಮಸೀದಿಯ ಹೆಸರಿನ ಅಂಚೆ ಚೀಟಿ' ಯನ್ನು 'ಯು.ಎ.ಐ.ಸರಕಾರ' ಬಿಡುಗಡೆಗೊಳಿಸಿದೆ. '೧ ದಿರ್ಹಾಂ', ಮತ್ತು '೫ ದಿರ್ಹಾಂ' ಬೆಲೆಯ ಅಂಚೆಚೀಟಿಗಳು 'ಅಬುಧಾಬಿಯ ಎಲ್ಲಾ ಅಂಚೆ ಕಚೇರಿಗಳಲ್ಲೂ ಸಿಕ್ಕುತ್ತವೆ. ಸಂಗ್ರಹಕಾರರಿಗೆ ಅಮೂಲ್ಯವಾದ 'ಸೊವೆನೀರ್ ಅಂಚೆಚೀಟಿಗಳಿರುವ ಪುಟ' ವೊಂದು '೨೫ ದಿರ್ಹಾಂ' ಬೆಲೆಗೆ, 'ಪ್ರಮುಖ ಅಂಚೆ ಕಚೇರಿ'ಗಳಲ್ಲಿ ದೊರೆಯುತ್ತದೆ. ಅಲ್ಲದೆ 'ಫಸ್ಟ್ ಡೇ ಕವರ್' ಬೆಲೆ, '೭ ದಿರ್ಹಾಂ' ಮೇಲೂ, 'ಮಸೀದಿಯ ದಿವ್ಯ ಚಿತ್ರ' ವಿದೆ.

ಋಣ[ಬದಲಾಯಿಸಿ]

 • ಲೇಖನ : ಅಬುಧಾಬಿಯ ಮಹಾ ಮಸೀದಿ, ಅರ್ಶದ್-ಇರ್ಶಾದ್, ದುಬೈ, 'ತರಂಗ' ೧೧, ನವೆಂಬರ್, ೨೦೧೦, ಪುಟ ೪೦

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಚಿತ್ರ ಗುಚ್ಛ[ಬದಲಾಯಿಸಿ]