ವಿಷಯಕ್ಕೆ ಹೋಗು

ಅಖಿಲ ಭಾರತ ಕ್ರೀಡಾಮಂಡಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಖಿಲ ಭಾರತ ಕ್ರೀಡಾಮಂಡಲಿ

[ಬದಲಾಯಿಸಿ]

ಭಾರತದಲ್ಲಿ ಕ್ರೀಡಾಭಿವೃದ್ಧಿಯನ್ನು ಸಾಧಿಸಲು ಕೇಂದ್ರ ಸರ್ಕಾರ 1954ರಲ್ಲಿ ಸ್ಥಾಪಿಸಿದ ಮಂಡಲಿ. ಆರಂಭದಲ್ಲಿ ರಾಷ್ಟ್ರೀಯ ಕ್ರೀಡಾಸಂಘಗಳ ಅಧ್ಯಕ್ಷರು ಹಾಗೂ ಕೇಂದ್ರ ಸರ್ಕಾರದಿಂದ ನಾಮಕರಣ ಹೊಂದಿದ 5 ಮಂದಿ ಕ್ರೀಡಾತಜ್ಞರನ್ನೊಳಗೊಂಡ 25 ಸದಸ್ಯರು ಈ ಮಂಡಲಿಯಲ್ಲಿ ಇದ್ದರು. 1959ರಲ್ಲಿ ಮಂಡಲಿ ಪುನಾರಚಿತವಾಗಿ ಇದರಲ್ಲಿನ 15 ಮಂದಿ ಸರ್ಕಾರದಿಂದ ನಾಮಕರಣ ಹೊಂದಿದ ಸದಸ್ಯರಾಗಿದ್ದರು. ದೇಶದಲ್ಲಿ ಕ್ರೀಡಾಭಿವೃದ್ಧಿಗಾಗಿ ಭಾರತ ಸರ್ಕಾರಕ್ಕೆ ಸಲಹೆ ಸೂಚನೆಗಳನ್ನು ನೀಡುವುದು, ವಿವಿಧ ಆಟಗಳ ಮಟ್ಟವನ್ನು ಉತ್ತಮಗೊಳಿಸಲು ರಾಷ್ಟ್ರೀಯ ಕ್ರೀಡಾಸಂಘಗಳಿಗೆ ಸಲಹೆ ಹಾಗೂ ಸಹಾಯವನ್ನೊದಗಿಸುವುದು, ಕ್ರೀಡಾಸಂಘಗಳಿಗೆ ಆರ್ಥಿಕ ನೆರವನ್ನು ಕೊಡಲು ಭಾರತ ಸರ್ಕಾರಕ್ಕೆ ಶಿಫಾರಸು ಮಾಡುವುದು, ಕ್ರೀಡಾಂಗಣಗಳ ರಚನೆ, ಉತ್ತಮ ಕ್ರೀಡೋಪಕರಣಗಳನ್ನು ಒದಗಿಸುವುದು, ಹಾಗೂ ವಿವಿಧ ಆಟಗಳಲ್ಲಿ ತರಬೇತಿ ಶಿಬಿರಗಳನ್ನೇರ್ಪಡಿಸುವುದು - ಇವೇ ಮೊದಲಾದವುಗಳಿಗೆ ಧನಸಹಾಯ ಒದಗಿಸಲು ಸರ್ಕಾರಕ್ಕೆ ಶಿಫಾರಸು ಮಾಡುವುದು, ವಿದೇಶಗಳಿಗೆ ಭಾರತದ ಆಟಗಾರರ ತಂಡಗಳನ್ನು ಕಳುಹಿಸಲು ಮತ್ತು ವಿದೇಶಗಳಿಂದ ಆಟದ ತಂಡಗಳು ದೇಶದಲ್ಲಿ ಸಂಚಾರ ಕೈಕೊಂಡಾಗ ತಗಲುವ ವೆಚ್ಚದ ಮೇಲೆ ಯೋಗ್ಯ ನಿರ್ಬಂಧಗಳನ್ನಿಡುವುದು, ದೇಶದ ಖ್ಯಾತ ಕ್ರೀಡಾಪಟುಗಳಿಗೆ ಪದ್ಮಶ್ರೀ, ಪದ್ಮಭೂಷಣ, ಅರ್ಜುನ, ಏಕಲವ್ಯ ಪ್ರಶಸ್ತಿ ಮುಂತಾದುವುಗಳನ್ನು ನೀಡುವಾಗ ಯೋಗ್ಯ ಆಟಗಾರರ ಹೆಸರುಗಳನ್ನು ಸೂಚಿಸುವುದು - ಇವು ಮಂಡಲಿಯ ಕಾರ್ಯಗಳಲ್ಲಿ ಪ್ರಮುಖವಾದವು ಎನ್ನಬಹುದು. ಇದು ಕೇವಲ ಸಲಹಾಮಂಡಲಿಯಾಗಿದ್ದು ಇದಕ್ಕೆ ತನ್ನದೇ ಆದ ಯಾವ ನಿಧಿಯೂ ಇರುವುದಿಲ್ಲ. ರಾಷ್ಟ್ರೀಯ ಕ್ರೀಡಾಸಂಘಗಳಾಗಲೀ ರಾಜ್ಯ ಕ್ರೀಡಾಮಂಡಲಿಗಳಾಗಲೀ ಇಲ್ಲವೆ ಇತರ ಕ್ರೀಡಾಸಂಸ್ಥೆಗಳಾಗಲೀ ಆರ್ಥಿಕ ನೆರವಿಗಾಗಿ ಭಾರತ ಸರ್ಕಾರಕ್ಕೆ ವಿನಂತಿ ಪತ್ರ ಕಳುಹಿಸಿದಾಗ ಅವನ್ನು ಮಂಡಲಿ ವಿಮರ್ಶಿಸಿ ಸಲಹೆ ನೀಡುತ್ತದೆ. ಅದರ ಸಲಹೆಯ ಮೇರೆಗೆ ಸರ್ಕಾರ ಶಿಕ್ಷಣಖಾತೆಯ ಮೂಲಕ ಧನಸಹಾಯವನ್ನೊದಗಿಸುತ್ತದೆ. ದೇಶವು ಉತ್ತಮ ಕ್ರೀಡಾಪಟುಗಳನ್ನು ಹೊಂದಬೇಕಾದರೆ ತರುಣ ಆಟಗಾರರಿಗೆ ವೈಜ್ಞಾನಿಕ ತಳಹದಿಯ ಮೇಲೆ ಮಾನವ ಸಂಪನ್ಮೂಪ ಅಥವಾ ಕ್ರೀಡಾ ಮತ್ತು ಯುವಜನ ಕೀಡೆಯ ಬಗೆಗೆ ತರಬೇತಿ ನೀಡುವುದು ಅತ್ಯಾವಶ್ಯಕವೆಂಬುದನ್ನು ಮನಗಂಡು ಈ ಮಂಡಲಿಯ ಸಲಹೆಯಂತೆ ಪಟಿಯಾಲದಲ್ಲಿ ರಾಷ್ಟ್ರೀಯ ಕ್ರೀಡಾ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಅಲ್ಲಿ ತರಬೇತಿ ಹೊಂದಿದ ಅನುಭವಿ, ಶಿಕ್ಷಕರು ದೇಶದಾದ್ಯಂತ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶದಲ್ಲಿ, ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳÀಲ್ಲಿ, ಆಟ ಮತ್ತು ಮನರಂಜನೆಯ ಚಟುವಟಿಕೆಗಳು ಪ್ರಗತಿಪರವಾಗಿ ಸಾಗಬೇಕಾದರೆ ಆಟದ ಬಂiÀÄಲುಗಳು ಅತ್ಯಾವಶ್ಯಕ. ಅಖಿಲ ಭಾರತ ಕ್ರೀಡಾಮಂಡಲಿಯ ನೇತೃತ್ವದಲ್ಲಿ ರಚಿಸಲ್ಪಟ್ಟ ಉಪಸಮಿತಿಗಳು ಆಟದ ಅಭಿವೃದ್ಧಿಗಾಗಿ ಕೆಲವು ಯೋಜನೆಗಳನ್ನು ಸಿದ್ಧಪಡಿಸಿವೆ. ವಿದ್ಯಾಸಂಸ್ಥೆಗಳಿಗೂ ಇತರ ಸಂಘಗಳಿಗೂ ಕ್ರೀಡಾಂಗಣಗಳನ್ನು ಒದಗಿಸುವುದು ಈ ಯೋಜನೆಗಳಲ್ಲೊಂದಾಗಿದೆ. ಅಂತಿಮವಾಗಿ ರಾಷ್ಟ್ರೀಯ ಕ್ರೀಡಾಂಗಣ ಸಂಘವನ್ನು ರಚಿಸುವುದೇ ಇದರ ಮುಖ್ಯ ಗುರಿಯಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಚಾರದಲ್ಲಿರುವ ದೇಶೀಯ ಕ್ರೀಡಾಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸಲು, ಗ್ರಾಮಸ್ಥರಿಗೆ ಮನೋರಂಜನೆ ಒದಗಿಸಿ ಜನಜೀವನದಲ್ಲಿ ಸಂತಸದ ಕಳೆ ತುಂಬಲು ಗ್ರಾಮೀಣ ಕ್ರೀಡಾಕೇಂದ್ರಗಳನ್ನು ದೇಶದೆಲ್ಲೆಡೆ ತೆರೆಯುವಂತೆ ಒಂದು ಯೋಜನೆಯನ್ನು ಇತ್ತೀಚೆಗೆ ಅನುಷ್ಠಾನಕ್ಕೆ ತರಲಾಗಿದೆ. ಈ ಮಂಡಲಿಯ ಸಲಹೆಯ ಮೇರೆಗೆ, ರಾಜ್ಯ ಕ್ರೀಡಾಮಂಡಲಿಗಳನ್ನೂ ತಾಲ್ಲೂಕು ಕ್ರೀಡಾಮಂಡಲಿಗಳನ್ನೂ ತಾಲ್ಲೂಕು ಕ್ರೀಡಾಮಂಡಲಿಗಳನ್ನೂ ದೇಶಾದ್ಯಂತ ಸ್ಥಾಪಿಸಲಾಗಿದ್ದು ಈ ಸಂಸ್ಥೆಗಳು ಕ್ರೀಡಾಭಿವೃದ್ಧಿಯಲ್ಲಿ ಗಣನೀಯ ಪ್ರಮಾಣದಲ್ಲಿ ಕಾರ್ಯೋನ್ಮುಖವಾಗಿವೆ. ಉತ್ತಮ ಶ್ರೇಣಿಯ ಉಪಕರಣಗಳು ಕ್ರೀಡಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದನ್ನು ಮನಗಂಡು ಭಾರತ ಸರ್ಕಾರದ ಯೋಗ್ಯತಾ ನಿಷ್ಕರ್ಷಕ ಇಲಾಖೆಯ ಹಾಗೂ ದೇಶದ ಕ್ರೀಡೋಪಕರಣಗಳ ಉದ್ದಿಮೆಗಾರರ ಸಹಕಾರದಿಂದ, ವಿದ್ಯಾಸಂಸ್ಥೆ ಮತ್ತು ಇತರ ಕ್ರೀಡಾಸಂಘಗಳಿಗೆ ಶ್ರೇಷ್ಠ ದರ್ಜೆಯ ಉಪಕರಣಗಳು ಯೋಗ್ಯ ಬೆಲೆಗೆ ಸಿಗುವಂತೆ ಮಾಡಲು ಪ್ರಯತ್ನಿಸಲಾಗಿದೆ. ಅಖಿಲ ಭಾರತ ಕ್ರೀಡಾಮಂಡಲಿ ನೇಮಿಸಿದ ವಿಶೇಷ ಯೋಜನಾ ಸಮಿತಿಯು 1966ರಲ್ಲಿ ದೇಶದ ಪ್ರಮುಖ ಕೇಂದ್ರಗಳನ್ನು ಸಂದರ್ಶಿಸಿ, ತಜ್ಞರು ಹಾಗೂ ಅಧಿಕಾರಿಗಳೊಡನೆ ಸಮಾಲೋಚಿಸಿ ಒಂದು ಬೃಹದ್ಯೋಜನೆಯನ್ನು ನಿರ್ಮಿಸಿದೆ. ಅದರಲ್ಲಿಯ ಮಹತ್ವದ ಸೂಚನೆಗಳನ್ನು ಮಂಡಲಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದು ಅವು ಸರ್ಕಾರದ ಪರಿಶೀಲನೆಯಲ್ಲಿವೆ. ಅವು ಕಾರ್ಯಗತವಾದಲ್ಲಿ ದೇಶದ ಕ್ರೀಡಾಮಟ್ಟ ಉತ್ತಮಗೊಳ್ಳುವುದರಲ್ಲಿ ಸಂದೇಹವಿಲ್ಲ.