ಅಕ್ಲೇದಿತ ವಸ್ತ್ರ

ವಿಕಿಪೀಡಿಯ ಇಂದ
Jump to navigation Jump to search
Effect of water repellent on a shell layer Gore-Tex jacket (Haglöfs Heli II).

ಅಕ್ಲೇದಿತ ವಸ್ತ್ರ ಮಳೆಯಲ್ಲಿ ತಿರುಗಾಡುವಾಗ ಉಪಯೋಗಿಸಲೂ ವಸ್ತ್ರಗಳು ನೀರಿನಲ್ಲಿ ನೆನೆಯದಂತೆ ಮೇಲೆ ಹೊದಿಸುವುದಕ್ಕೂ ಗುಡಾರ ಮತ್ತು ರಂಧ್ರವಸ್ತ್ರಗಳಲ್ಲಿ (ಶ್ಯಾಮಿಯಾನಾ) ಮಳೆಯ ನೀರು ಒಳನುಗ್ಗದಂತೆ ಮಾಡಲೂ ವಿಶೇಷಗುಣವುಳ್ಳ ಬಟ್ಟೆ ಬೇಕಾಗುತ್ತದೆ. ಇಂಥ ಬಟ್ಟೆಗೆ ಅಕ್ಲೇದಿತ (ಜಲಾಭೇದ್ಯ, ವಾಟರ್ಪ್ರುಫ್) ವಸ್ತ್ರವೆನ್ನುತ್ತಾರೆ. ಇದಕ್ಕಾಗಿ ತಯಾರಾದ ಬಟ್ಟೆ ಒತ್ತಾಗಿ ನೇಯಲ್ಪಟ್ಟಿರಬೇಕು. ಅಲ್ಲದೆ ಕೆಲವು ರಾಸಾಯನಿಕ ವಸ್ತುಗಳ ಪ್ರಯೋಗದಿಂದ ಬಟ್ಟೆಗಳಿಗೆ ಅಕ್ಲೇದನಗುಣ ಬಂದಿರಬೇಕು. ಈ ಗುಣವನ್ನು ಎರಡು ಬಗೆಯಾಗಿ ವಿಂಗಡಿಸಬಹುದು. 1. ಜಲಾಭೇದ್ಯ ಮತ್ತು 2. ಜಲಾಕ್ಲೇದ (ಜಲಾಪಕರ್ಷಕ), ಜಲಾಭೇದ್ಯ ವಸ್ತ್ರದಲ್ಲಿ ನೀರು ಮತ್ತು ಗಾಳಿ ಬಟ್ಟೆಯೊಳಗೆ ಹಾಯ್ದು ಹೋಗಲಾರದು. ಬಟ್ಟೆ ಒಂದು ವೇಳೆ ಸ್ವಲ್ಪ ಒದ್ದೆಯಾಗಬಹುದು, ಅಷ್ಟೆ. ಜಲಾಕ್ಲೇದ ವಸ್ತ್ರದಲ್ಲಿ ನೀರು ಹರಿಯದೇ ಗಾಳಿ ಹೋಗಬಹುದು. ಆದರೆ ಬಟ್ಟೆ ಎಂದಿಗೂ ಒದ್ದೆಯಾಗುವುದಿಲ್ಲ. ಜಲಾಭೇದ್ಯಕಾರಕವಾಗಿ ರಬ್ಬರ್, ಮೇಣ, ಕೃತಕರಾಳ, ಘೋಷಣತೈಲ ಮುಂತಾದ ಪದಾರ್ಥಗಳನ್ನು ಬಟ್ಟೆಯ ಮೇಲೆ ತೆಳುವಾಗಿ ಬಳಿಯುವರು. ಬಳಿಯಲು ಕುಂಚ ಅಥವಾ ದಿಂಡು ಯಂತ್ರಗಳನ್ನು ಉಪಯೋಗಿಸುವರು. ರಬ್ಬರ್, ಮೇಣ ಮುಂತಾದುವುಗಳನ್ನು ಸೇಂದ್ರಿಯ ದ್ರಾವಕಗಳಲ್ಲಿ ಕರಗಿಸಿ ಬಟ್ಟೆಯ ಮೇಲೆ ಹರಡಿಸುವರು. ಲಿನ್ಸೀಡ್ ಎಣ್ಣೆ ಮೊದಲಾದುವನ್ನು ಹಾಗೆಯೇ ಬಳಿದು ಒಣಗಿಸಬಹುದು. ಈ ರೀತಿಯಾಗಿ ದುರ್ಗಮಕ್ರಮದಲ್ಲಿ ಬಟ್ಟೆಯಲ್ಲಿರುವ ರಂಧ್ರಗಳು ಮುಚ್ಚಲ್ಪಟ್ಟು ನೀರು ಮತ್ತು ಗಾಳಿ ತೂರದಂತಾಗುವುದು. ಜಲಾಪಕರ್ಷಣಕ್ಕೆ ಜಲವಿರೋಧಿ ವಸ್ತುಗಳನ್ನು ಪ್ರಯೋಗಿಸುತ್ತಾರೆ. ಇದರಿಂದ ಬಟ್ಟೆ ನೆನೆಯದಂತೆ ಮೇಲೆ ಬಿದ್ದ ನೀರು ಹರಿದು ಹೋಗುವುದು. ಇದಕ್ಕೆ ಉಪಯೋಗಿಸುವ ವಸ್ತುಗಳೆಂದರೆ: 1. ಅಲ್ಯೂಮಿನಿಯಂ ಲವಣ ಮತ್ತು ಅಲ್ಯೂಮಿನಿಯಂ ಸಾಬೂನು 2. ಎಣ್ಣೆ, ಮೇಣ, ಕೊಬ್ಬುಗಳಿಂದ ತಯಾರಾದ ವಸ್ತುಗಳು 3. ಕೃತಕ ರಾಸಾಯನಿಕ ವಸ್ತುಗಳು ಇತ್ಯಾದಿ. ಮೇಲ್ಕಂಡವುಗಳನ್ನು ಬಟ್ಟೆಯ ಮೇಲೆ ಸಮನಾಗಿ ಹರಡಿ, ಅನುಗುಣವಾಗಿ ದೃಢೀಕರಿಸಿ ದರೆ ಅದು ಜಲಾಪಕರ್ಷಕವಾಗುವುದು

ಬಾಹ್ಯ ಸಂಪರ್ಕಗಳು[ಬದಲಾಯಿಸಿ]