ಅಕಿಮಿನೀಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಕಿಮಿನೀಸ್[ಬದಲಾಯಿಸಿ]

ಜೆಸ್ನೇರಿಯೇಸೀ ಕುಟುಂಬಕ್ಕೆ ಸೇರಿದ ಆಲಂಕಾರಿಕ ಸಸ್ಯ ಜಾತಿ. ಇದರ ವಿವಿಧ ಪ್ರಭೇದಗಳ ಹೂಗಳು ಕೆಂಪು, ನಸುಗೆಂಪು, ಹಳದಿ, ಬಿಳುಪು, ನಸುಬಿಳುಪು, ಕೇಸರಿ ಇತ್ಯಾದಿ ಬಣ್ಣಗಳಲ್ಲಿದ್ದು ಬಹಳ ಸುಂದರವಾಗಿ ಕಾಣುತ್ತವೆಯಲ್ಲದೆ ದೀರ್ಘ ಕಾಲವಿರುವುದರಿಂದ ತೋಟಗಾರಿಕೆಯಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿವೆ. ಅಕಿಮಿನೀಸ್ ಜಾತಿಯ ಪ್ರಭೇದಗಳನ್ನು ಅಂಚುಸಸ್ಯಗಳಾಗಿಯೂ ಮಡಿಸಸ್ಯಗಳಾಗಿಯೂ ಕುಂಡಸಸ್ಯಗಳಾ ಗಿಯೂ ಬೆಳೆಸುತ್ತಾರೆ. ಈ ಜಾತಿಯಲ್ಲಿ 40ಕ್ಕೂ ಹೆಚ್ಚು ಪ್ರಭೇದಗಳಿವೆ. ಇವುಗಳಲ್ಲಿ ಅನೇಕವು ಗ್ವಾಟೆಮಾಲ ಮತ್ತು ಮೆಕ್ಸಿಕೊ ದೇಶದ ಮೂಲವಾಸಿಗಳು. ಇವುಗಳ ಪೈಕಿ ಕೆಲವು ಮಾತ್ರ ಉದ್ಯಾನವನದಲ್ಲಿ ಪ್ರಾಮುಖ್ಯ ಪಡೆದಿವೆ. ಅಕಿಮಿನೀಸ್ ಸಸ್ಯಗಳಲ್ಲಿ ಗುಪ್ತಕಾಂಡವೂ ಅದರಿಂದ ಹೊರಡುವ ಎಲೆಗಳೂ ಇವೆ. ಎಲೆಗಳನ್ನು ಕೊಡುತ್ತವೆ. ಎಲೆಗಳು ಅಭಿಮುಖ ಸಂಯೋಜನೆಯನ್ನೂ ಕೆಲವು ಸಸ್ಯಗಳಲ್ಲಿ ವರ್ತುಲಜೋಡಣೆಯನ್ನೂ ಪ್ರದರ್ಶಿಸುತ್ತವೆ. ಅವುಗಳ ಅಂಚು ಗರಗಸದ ಹಲ್ಲಿನಂತಿದೆ. ಹೂಗಳು ಒಂಟಿಯಾಗಿಯೊ ಗುಂಪಾಗಿಯೊ ಇರಬಹುದು. ಕೊಳವೆ ಯಾಕಾರದ ಪುಷ್ಪಪತ್ರಗಳು ಅಂಡಾಶಯಕ್ಕೆ ಅಂಟಿದಂತಿದ್ದು ಐದು ಅಸಮ ಭಾಗಗಳಿಂದ ಕೂಡಿವೆ. ಐದು ದಳಗಳಿವೆ. ಇವು ಕೂಡಿಕೊಂಡಿದ್ದು ಬುಡದಲ್ಲಿ ಕೊಳವೆಯಾಕಾರವಾಗಿಯೂ ತುದಿ ಹರಡಿಕೊಂಡಂತೆಯೂ ಇರುತ್ತದೆ. ಕೇಸರಗಳ ಸಂಖ್ಯೆ ೫ರಷ್ಟಿರುತ್ತದೆ. ಅವುಗಳ ಬುಡ ದಳಗಳಿಗೆ ಅಂಟಿಕೊಂಡಿರುತ್ತದೆ. ಕೇಸರಗಳಲ್ಲಿ ಒಂದು ಬಂಜೆಕೇಸರ. ಎರಡು ಕೋಶ ಅಂಡಾಶಯಗಳುಳ್ಳ ನೀಚ ಸ್ಥಿತಿಯದಾಗಿರುತ್ತದೆ. ಅಕಿಮಿನೀಸ್ ಸಸ್ಯಗಳನ್ನು ಗುಪ್ತಕಾಂಡಗಳಿಂದ ಸುಲಭವಾಗಿ ವೃದ್ಧಿಮಾಡಬಹುದು. ಮೆದುಕಾಂಡಗಳನ್ನು ಮಳೆಗಾಲದಲ್ಲಿ ಕತ್ತರಿಸಿ ಮರಳಿನಲ್ಲಿ ನೆಟ್ಟಾಗ ಅವು ಬೇರು ಬಿಡುತ್ತವೆ. ಆದರೆ ಗುಪ್ತಕಾಂಡಗಳಿಂದ ವೃದ್ಧಿಕಾರ್ಯ ಸುಲಭವಾಗಿರುವುದರಿಂದ ಈ ವಿಧಾನದಲ್ಲಿ ವೃದ್ಧಿಮಾಡುವುದು ಹೆಚ್ಚಾಗಿ ಬಳಕೆಯಲ್ಲಿದೆ. ಅಕಿಮಿನೀಸ್ ಜಾತಿಯ ಸಸ್ಯಗಳ ಬೇರುಗಳು ತೀರ ಮೇಲುಭಾಗದಲ್ಲೇ ಹರಡುವುದ ರಿಂದ ಕುಂಡಗಳಲ್ಲಿ ತೆಂಗಿನನಾರು, ಒಣ ಪಾಚಿ ಹಾಕಿ ಸುಲಭವಾಗಿ ಬೆಳೆಯಬಹುದು ಅಥವಾ ನೇರವಾಗಿ ನೆಲದಲ್ಲಿಯೆ, ಬೆಳೆಸಬಹುದು. ಲಶುನಗಳನ್ನು ಮಾರ್ಚಿತಿಂಗಳಿನಲ್ಲಿ ನೆಟ್ಟರೆ ಜೂನ್ ತಿಂಗಳಿನಲ್ಲಿ ಗಿಡಗಳು ಬೆಳೆದು ಹೂ ಬಿಟ್ಟು ನವೆಂಬರ್ ತಿಂಗಳವರೆಗೆ ಉಳಿಯುತ್ತವೆ. ಈ ಸಸ್ಯಗಳನ್ನು ಸರಾಗವಾಗಿ ಗಾಳಿ ಬೆಳಕು ಬರುವಂತೆ ನೆರಳಿನಲ್ಲಿಡಬೇಕು. ಹೂ ಮುಗಿದ ಅನಂತರ ಸಸ್ಯವಿರುವ ಕುಂಡವನ್ನು ಫೆಬ್ರವರಿ ತಿಂಗಳವರೆಗೆ ಎಚ್ಚರಿಕೆಯಿಂದ ನೆರಳಿನಲ್ಲಿ ಇಟ್ಟಿರಬೇಕು. ಮತ್ತೆ ಮಾರ್ಚಿ ತಿಂಗಳಲ್ಲಿ ಕುಂಡದಲ್ಲಿರುವ ಗುಪ್ತಕಾಂಡವನ್ನು ಬೇರೆ ಕುಂಡಗಳಲ್ಲಿ ಹಾಕಿ ಮೊದಲಿನಂತೆ ಬೆಳೆಸಬಹುದು.

ಅಕಿಮಿನೀಸ್ ಅಸಲೆಟ[ಬದಲಾಯಿಸಿ]

ಅಕಿಮಿನೀಸ್ ಅಸಲೆಟ ಎಂಬ ಪ್ರಭೇದ 1ಮೀ ಎತ್ತರ ಬೆಳೆಯುವ ಇದು ಸುಂದರವಾದ ಹೂ ಮತ್ತು ಎಲೆಗಳನ್ನು ಬಿಡುತ್ತದೆ. ಇದರ ಗುಪ್ತಕಾಂಡ (ರೈಸೋಮ್) ಸಣ್ಣಗಡ್ಡೆಯ ರೂಪದಲ್ಲಿರುತ್ತದೆ. ತೊಟ್ಟಿನಿಂದ ಕೂಡಿರುವ ಕಂದು ಬಣ್ಣದ ಇದರ ಎಲೆ ಕರಣೆಯಾಕಾರವಾಗಿದ್ದು ಗರಗಸದ ಅಂಚಂತಿದೆ. ಅದರ ಮೇಲುಭಾಗ ಅತಿ ಹಸುರಾಗಿಯೂ ತಳಭಾಗ ಕಂದುಬಣ್ಣದ್ದಾಗಿಯೂ ಇವೆ. ಹೂ ತೊಟ್ಟಿನಿಂದ ಕೂಡಿದ್ದು ಕೆಂಪುಬಣ್ಣವಾಗಿರು ತ್ತದೆ. 2.5ಸೆಂಮಿ ಉದ್ದವಾಗಿರುವ ಅದರ ತಳ ಕೊಳವೆಯಾಕಾರದಲ್ಲಿದೆ. ದಳಗಳ ಮೇಲೆ ಕಪ್ಪು ಮತ್ತು ಹಳದಿ ಚುಕ್ಕೆಗಳು ಇರುತ್ತವೆ.

ಅಕಿಮಿನೀಸ್ ಕಾಕ್ಸೀನಿಯ[ಬದಲಾಯಿಸಿ]

ಅಕಿಮಿನೀಸ್ ಕಾಕ್ಸೀನಿಯ ಎಂಬ ಇನ್ನೊಂದು ಪ್ರಭೇದ ಸುಮಾರು 0.75ಮೀ ಎತ್ತರಕ್ಕೆ ಬೆಳೆಯುವ ಕೆಂಪುಕಾಂಡದ ಸಸ್ಯ. ಎಲೆ ಅಭಿಮುಖ ಅಥವಾ ವೃತ್ತಾಕಾರದ ಜೋಡಣೆಯನ್ನು ಪ್ರದರ್ಶಿಸುತ್ತದೆ. ಆಕಾರ ಕರಣೆಯಂತೆ. ಅಂಚು ಗರಗಸದ ಹಲ್ಲಿನಂತೆ ಒಡೆದಿದ್ದು ಲಂಬಾಗ್ರ ತುದಿಯನ್ನು ಹೊಂದಿರುತ್ತದೆ. ಹೂಗಳು ಒಂಟಿಯಾಗಿರುತ್ತವೆ. ಅವುಗಳ ತೊಟ್ಟು ಚಿಕ್ಕವು. ದಳಗಳು ಕೂಡಿಕೊಂಡಿರುತ್ತವೆ. ಪುಷ್ಪಪಾತ್ರೆಗಳಿಗಿಂತ ದಳಗಳು ಎರಡರಷ್ಟು ಉದ್ದವಾಗಿರುತ್ತವೆ. ಇದು ಇತರ ಅಕಿಮಿನೀಸ್ ಪ್ರಭೇದಗಳಿಗಿಂತ ನಿಧಾನವಾಗಿ ಹೂಬಿಡುತ್ತದೆ.

ಅಕಿಮಿನೀಸ್ ಹೆಟಿರೊಫಿಲ[ಬದಲಾಯಿಸಿ]

ಅಕಿಮಿನೀಸ್ ಹೆಟಿರೊಫಿಲ ಎಂಬ ಮತ್ತೊಂದು ಪ್ರಭೇದ ಸುಮಾರು 30ಸೆಂಮಿ ಎತ್ತರ ಬೆಳೆಯುವ ಕುಳ್ಳು ಸಸ್ಯ. ಇದಕ್ಕೆ ಅತಿ ಕಂದುಬಣ್ಣದ ಕುಚ್ಚು ಬೇರು ಇರುತ್ತದೆ. ಕರಣೆಯಾಕಾರದ ಇದರ ಎಲೆಗಳು ಗರಗಸದ ಅಂಚಿನಂತೆ ಒಡೆದಿದ್ದು ಲಂಬಾಗ್ರ ತುದಿಯನ್ನು ಹೊಂದಿರುತ್ತದೆ. ಪ್ರತಿ ಪತ್ರದ್ವಯದಲ್ಲೂ ಒಂದೊಂದು ಅಸಮ ಎಲೆ ಇರುತ್ತದೆ. ಉದ್ದವಾದ ತೊಟ್ಟಿನ ಮೇಲೆ ಹೂಗಳು ಒಂಟೊಂಟಿಯಾಗಿರುತ್ತವೆ. ಅವುಗಳು ಹಳದಿ ಅಥವಾ ಕೇಸರಿ ಬಣ್ಣದಲ್ಲಿರುತ್ತವೆ. ಇದು ಮೆಕ್ಸಿಕೊ ದೇಶದ ಮೂಲದ್ದು. ಅಕಿಮಿನೀಸ್ ಪೀಡಂಕ್ಯುಲೇಟ ಎಂಬುದು ಮತ್ತೊಂದು ಪ್ರಭೇದ. ಇದು ಸು. 0.75ಮೀ ಎತ್ತರಕ್ಕೆ ಬೆಳೆಯುತ್ತದೆ. ಇದರಲ್ಲಿ ಕೆಂಪು ಗುಪ್ತಕಾಂಡ ರೋಮಗಳಿಂದ ಕೂಡಿರುತ್ತದೆ. ಕೆಂಪುವರ್ಣದ ಎಲೆಗಳು ಚಿಕ್ಕವಾಗಿದ್ದು ತೊಟ್ಟಿನಮೇಲೆ ಹಲ್ಲಿನಂತಿರುತ್ತದೆ. ಒಂಟಿಯಾಗಿರುವ ಹೂಗಳು ಜೋಲುಬಿದ್ದಿರುತ್ತವೆ. ಅವುಗಳ ಬಣ್ಣ ಹಳದಿ ಮಿಶ್ರಿತ ಕೆಂಪು; ಮೇಲುಭಾಗದಲ್ಲಿ ಕಪ್ಪುಚುಕ್ಕೆಗಳು ಇರುತ್ತವೆ; ಗಂಟಲು ಹಳದಿಬಣ್ಣ. ಈ ಸಸ್ಯ ಗ್ವಾಟೆಮಾಲ ಮೂಲದ್ದು.

ಅಕಿಮಿನೀಸ್ ಟ್ಯೂಬಿಫ್ಲೋರ[ಬದಲಾಯಿಸಿ]

ಅಕಿಮಿನೀಸ್ ಟ್ಯೂಬಿಫ್ಲೋರ ಎಂಬುದು ಇನ್ನೊಂದು ಪ್ರಭೇದ. ಇದರ ಹೂವಿನ ಕೊಳವೆ ಉದ್ದವಾಗಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ತೊಟ್ಟನ್ನುಳ್ಳ ಚಿಕ್ಕ ಚಿಕ್ಕ ಎಲೆಗಳು ಆಯತಾಕಾರವಾಗಿದ್ದು ಅಭಿಮುಖ ಪತ್ರಸಂಯೋಗವನ್ನು ಪ್ರದರ್ಶಿಸುತ್ತವೆ. ಅವುಗಳ ಅಂಚು ಗುಂಡಾದ ಹಲ್ಲುಗಳಾಗಿ ಒಡೆದಿದೆ. ಹೂ 10ಸೆಂಮೀ ಉದ್ದವಾಗಿರುತ್ತದೆ. ಹೂಕೊಳವೆ ಉದ್ದವಾಗಿದ್ದು ಆಲೂಗಡ್ಡೆಯ ಆಕಾರವಾಗಿರುತ್ತದೆ. ಇದರ ಮೂಲ ಆರ್ಜಂಟೀನ.[೧]

ಉಲ್ಲೇಖ[ಬದಲಾಯಿಸಿ]

  1. https://kn.wikisource.org/wiki/%E0%B2%AA%E0%B3%81%E0%B2%9F:Mysore-University-Encyclopaedia-Vol-1-Part-1.pdf/%E0%B3%A7%E0%B3%A9%E0%B3%AA