ಉಗಾಭೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಗಾಭೋಗಗಳು ಸಂಗೀತ ಶಾಸ್ತ್ರದಲ್ಲಿನ ಒಂದು ಪ್ರಕಾರ. ಭಾರತ ಸಂಗೀತಕ್ಕೆ ಕರ್ನಾಟಕದ ಹರಿದಾಸರು ನೀಡಿರುವ ವಿಶಿಷ್ಠ ಕೊಡುಗೆ. ಸಾಮಾನ್ಯವಾಗಿ ಉಗಾಭೋಗ ಕೃತಿಗಳು ೪ ಸಾಲುಗಳಿಂದ ೧೨ ಸಾಲುಗಳವರೆಗೆ ಇರುತ್ತವೆ. ಪುರಂದರದಾಸರು, ಕನಕದಾಸರು, ವಿಜಯದಾಸರು ಹೀಗೆ ಹಲವು ದಾಸವರೇಣ್ಯರು ಉಗಾಭೊಗಗಳನ್ನು ರಚಿಸಿದ್ದಾರೆ. ಉಗಾಭೊಗಳಲ್ಲಿ ಭಕ್ತಿ, ನೈತಿಕತೆ, ಧರ್ಮ, ನೀತಿ, ಹರಿನಾಮ ಸ್ಮರಣೆ ಹೀಗೆ ಹಲವು ವಿಷಯಗಳ ಬಗ್ಗೆ ಚರ್ಚಿಸಿರುವುದನ್ನು ನಾವು ಕಾಣಬಹುದಾಗಿದೆ.

ಶಬ್ದ ನಿಷ್ಪತ್ತಿ[ಬದಲಾಯಿಸಿ]

ಭಾರತೀಯ ಹಾಗೂ ಜನಪದ ಸಂಗೀತಗಳು ತಮ್ಮ ನಡುವೆ ರಚಿಸಿಕೊಂಡಿರುವ ಹಲವು ಸೇತುವೆಗಳಲ್ಲಿ ಇದೂ ಒಂದು. ಉಗಾಭೋಗವೆಂಬ ಶಬ್ದವೂ ಪ್ರಬಂಧ ಪ್ರಕಾರವೂ ಹೇಗೆ ಮತ್ತು ಯಾವಾಗ ಹುಟ್ಟಿದುವು ಎಂದು ನಿಷ್ಕೃಷ್ಟವಾಗಿ ನಿರ್ಧರಿಸಲು ಆಧಾರ ಸಾಲದು. ಈ ಪದದ ರೂಪನಿಷ್ಪತ್ತಿಯನ್ನು ಹಲವರು ಹಲವು ವಿಧವಾಗಿ ಕೊಡುತ್ತಾರೆ: ಉಕ್ + ಆಭೋಗ, ಎಂದರೆ ಮಾನವನ ಅನುಭವ ಸಮಷ್ಟಿಯ ವಾಗಭಿವ್ಯಕ್ತಿ, ಎನ್ನುವುದು ಒಂದು ಪಂಥ; ಯುಗಾಭೋಗ, ಎಂದರೆ ಪರಮಾತ್ಮನಲ್ಲಿ ಲೀನವಾಗಿಬಿಡುವುದರ ಆನಂದಾನುಭವ, ಎನ್ನುವುದು ಎರಡನೆಯದು. ಉದ್ಗ್ರಾಹ + ಆಭೋಗ ಎಂಬ ಸಂಧಿಯಲ್ಲಿ ಕಠಿಣೋಚ್ಚರಿತಗಳಾದ ದ್, ರ್, ಹ್ ಗಳ ಲೋಪದಿಂದ ಈ ಪದ ಹುಟ್ಟಿದೆ-ಎನ್ನುವುದು ಹೆಚ್ಚು ಪ್ರಚಾರದಲ್ಲಿರುವ ಮತ. ಸಂಗೀತ ಪ್ರಬಂಧವೊಂದನ್ನು ಮೊದಲು ಮಾಡುವ ಧಾತುಭಾಗಕ್ಕೆ ಉದ್ಗ್ರಾಹವೆಂದೂ ಮುಗಿಸುವ ಧಾತುಭಾಗಕ್ಕೆ ಆಭೋಗವೆಂದೂ ಸಂಗೀತಶಾಸ್ತ್ರದ ಪರಿಭಾಷೆ. ಈ ಮೂರು ಮತಗಳೂ ಕೇವಲ ಕಲ್ಪನೆಯಿಂದ ಹುಟ್ಟಿವೆ. ಭಾಷಾತ್ಮಕ, ಚಾರಿತ್ರಿಕ ಅಥವಾ ಇತರ ಯಾವ ಆಧಾರಗಳೂ ಇವಕ್ಕೆ ಇಲ್ಲ. ಕಡೆಯದು ಸಂಗೀತಶಾಸ್ತ್ರ ಪ್ರಕ್ರಿಯೆಗೆ ವಿರುದ್ಧವಾದುದು. ಏಕೆಂದರೆ ಸಂಗೀತ ಪ್ರಬಂಧಧ್ರುವ ವೆಂಬ ಅನಿವಾರ್ಯ ಧಾತುಭಾಗದಿಂದ ಆಗತಕ್ಕದ್ದು. ಉದ್ಗ್ರಾಹ, ಆಭೋಗಗಳಿಂದಲೇ ಯಾವ ಹಾಡೂ ಆಗಲಾರದೆಂಬುದನ್ನು ಸಂಗೀತಶಾಸ್ತ್ರ ಹೇಳುತ್ತದೆ. ಇವುಗಳಲ್ಲಿ ಯಾವುದೂ ಸಮರ್ಪಕವಾಗಿ ಕಾಣುವುದಿಲ್ಲ. ಸೂಡಾದಿ ಎಂಬುದು ದೇಶೀ ಶಬ್ದವೆಂದೂ ಆದುದರಿಂದ ಸಂಸ್ಕೃತ ನಿಷ್ಪತ್ತಿಸಿದ್ಧಿ ಅದಕ್ಕಿಲ್ಲವೆಂದೂ ಸಂಗೀತರತ್ನಾಕರದಿಂದ ಕಂಡುಬರುತ್ತದೆ. ಉಗಾಭೋಗವೂ ಅಂಥದೇ ಒಂದು ಗೀತಪ್ರಕಾರಸಂಜ್ಞಕವಾಗಿರುವ ರೂಢನಾಮವಾಗಿರ ಬಹುದೆಂಬುದು ಹೆಚ್ಚು ಸಂಭಾವ್ಯವಾಗಿದೆ. ಪುರಂದರದಾಸರೂ ಅವರಿಗೆ ಪ್ರಾಚೀನರಾದ ಹರಿದಾಸರೂ ಉಗಾಭೋಗಗಳನ್ನು ರಚಿಸಿದ್ದರು. ಆದರೂ ಅವರು ಉಗಾಭೋಗವೆಂಬ ಹೆಸರನ್ನು ಹೇಳಿರುವುದು ಎಲ್ಲೂ ಕಂಡುಬಂದಿಲ್ಲ. ಪುರಂದರದಾಸರೇ ಕೃತಿ, ಕೀರ್ತನೆ, ಸುಳಾದಿ, ಗೀತ, ಪ್ರಬಂಧ, ನಾಮಾವಳಿ ಮುಂತಾದ ಹಾಡಿನ ರೀತಿಗಳನ್ನು ಹೆಸರಿಸಿದ್ದಾರೆ. ಆದರೆ ಪುರಂದರದಾಸ ವಿರಚಿತ ಕೃತಿಗಳ ಮೊತ್ತವನ್ನು ವರ್ಣಿಸುವ ತಮ್ಮ ಒಂದು ಸುಳಾದಿಯಲ್ಲಿ ವಿಜಯದಾಸರು ಇದನ್ನೂ ಹೆಸರಿಸಿದ್ದಾರೆ. ಹೀಗಾದರೂ ಈ ಹೆಸರು ಇನ್ನೂ ಪ್ರಾಚೀನವಾಗಿದ್ದಿರಬೇಕೆಂಬುದು ನಿಸ್ಸಂದೇಹ.

ಪ್ರಾಚೀನತೆ[ಬದಲಾಯಿಸಿ]

ಉಗಾಭೋಗದ ಹುಟ್ಟನ್ನು ಪ್ರಾಚೀನ, ಗೌರವಾನ್ವಿತ ಸಾಲಗಸೂಡ ಪ್ರಬಂಧಗಳಲ್ಲಿ ನಿಸ್ಸಂದಿಗ್ಧವಾಗಿ ಕಾಣಬಹುದು. ಈ ಪ್ರಬಂಧಗಳೇ ಸುಳಾದಿಗಳಿಗೆ ಮಾತೃಸ್ಥಾನದಲ್ಲಿದ್ದವು. ಇವುಗಳಲ್ಲಿ ರಾಸಕ ಪ್ರಬಂಧದಲ್ಲಿ ಮಾತುಧಾತುಗಳ ಸ್ವಕಪೋಲ ಕಲ್ಪಿತ, ಕಲ್ಪನಾಜನಿತ ನಿರ್ಮಾಣವನ್ನು ಶಾಸ್ತ್ರ ವಿಧಿಸುತ್ತದೆ. ಇದರಲ್ಲಿ ಉದ್ಗ್ರಾಹದಲ್ಲಿ ಎರಡು ಖಂಡಗಳು: ಮೊದಲ ಖಂಡದಲ್ಲಿ ಮೇಲಿನ ರೀತಿಯಲ್ಲಿ ಮಾತುಸಹಿತವಾದ ಆಲಾಪನೆಯಿದ್ದರೆ ಅಂಥ ಪ್ರಬಂಧವನ್ನು ನಂದರಾಸಕವೆಂದು ಕರೆಯಲಾಗುತ್ತಿತ್ತು. ಧ್ರುವದ ಯಾವ ಭಾಗದಲ್ಲಿ ಇಂಥ ಆಲಾಪನೆಯಿರುತ್ತಿದ್ದರೆ ಅದನ್ನು ಅನುಸರಿಸಿ ಬೇರೆ ಬೇರೆ ಅವಾಂತರ ಪ್ರಭೇದಗಳನ್ನು ರಾಸಕದಲ್ಲಿ ರಚಿಸಲಾಗುತ್ತಿತ್ತು. ಈ ಸಾಕ್ಷರ ಆಲಾಪನೆಯೇ ಅಲ್ಲದೆ ಕೆಲವು ವೇಳೆ ಅಕ್ಷರವರ್ಜ್ಯವಾದ ಕೇವಲ ರಾಗಾಲಾಪ್ತಿಯೂ ಏಕತಾಲೀಯಂಥ ಸಾಲಗಸೂಡಪ್ರಬಂಧಗಳಲ್ಲಿ ಇರುತ್ತಿತ್ತು. ಇದಕ್ಕೆ ಪ್ರಯೋಗವೆಂದು ಹೆಸರು. ಸುಳಾದಿಗಳು ನಿರ್ದಿಷ್ಟರೂಪನ್ನು ಪಡೆದು ಸಾಲಗಸೂಡಗಳಿಂದ ಹೊರಬಂದಾಗ ಈ ಬಗೆಯ ಸಾಕ್ಷರಾಲಪ್ತಿ ಪ್ರತ್ಯೇಕ ಸ್ಥಾನವನ್ನು ಪಡೆದು ಬೇರೆಯ ಹಾಡಿನ ರೀತಿಯೇ ಆಯಿತು. ಇದೇ ಉಗಾಭೋಗ. ಈ ಸ್ವಾಭಾವಿಕ ಪೃಥಕ್ಕರಣವನ್ನು ತಾರ್ಕಿಕವಾಗಿ ಸಾಧಿಸಿ ಲಕ್ಷ್ಯದಲ್ಲಿ ಅಚಲವಾಗಿ, ಸ್ವತಂತ್ರವಾಗಿ ನಿಲ್ಲಿಸಿದವರು ಕರ್ಣಾಟಕದ ಹರಿದಾಸರು.

ಬೆಳವಣಿಗೆ[ಬದಲಾಯಿಸಿ]

ವಿವಿಧ ಲಲಿತಕಲೆಗಳಲ್ಲೂ ಒಂದು ಕೃತಿಪ್ರಕಾರ ಒಡೆದು ಎರಡು ಸ್ವತಂತ್ರಕೃತಿಪ್ರಕಾರಗಳಾಗಿ ನಿಲ್ಲುವುದು ಬೇರೆ ಬೇರೆ ಕಾಲಗಳಲ್ಲಿ ಕಂಡುಬರುತ್ತದೆ. ಭರತನಾಟ್ಯದಲ್ಲಿ ಪುಷ್ಪಾಂಜಲಿ ಅಲರಿಪು ಮತ್ತು ಜತಿಸ್ವರ ಗಳಾಗಿ ರೂಢಿಸಿದುದನ್ನು ಇಲ್ಲಿ ನಿದರ್ಶನವಾಗಿ ಕೊಡಬಹುದು. ನಿಸರ್ಗದಲ್ಲೂ ಈ ಬಗೆಯ ವಿದಳನಸೃಷ್ಟಿ ಸಿದ್ಧವಾಗಿಯೇ ಇದೆಯಷ್ಟೆ. ಉಗಾಭೋಗ ರಾಗಸಹಿತವಾದ ಮತ್ತು ತಾಳರಹಿತವಾದ, ಎಂದರೆ ಅನಿಬದ್ಧವಾದ, ರಚನೆ. ತಾಳದಿಂದ ಬದ್ಧವಲ್ಲದಿದ್ದರೂ ಅದು ಛಂದೋಪ್ರಾಸಾದಿ ಕಾವ್ಯ ಲಕ್ಷಣಗಳಿಂದ ಕೂಡಿದೆ. ಇದು ಮಾತು ಪ್ರಧಾನವಾದುದು, ಎಂದರೆ ಸಾಹಿತ್ಯಾರ್ಥದ ರಂಜನಾಸ್ಪದ, ಭಾವಾತ್ಮಕ ಅಭಿವ್ಯಕ್ತಿಗಾಗಿ ರಾಗದಲ್ಲಿ ಅಳವಡಿಸಿ ಹಾಡುವಂಥದು. ಗದ್ಯ ದಂಡಕ, ಚೂರ್ಣಿಕೆ ಮೊದಲಾದ ಗದ್ಯಪ್ರಧಾನ ಗೇಯಪ್ರಕಾರಗಳಿಗೂ ಗಮಕದಂಥ (ಭಾರತವಾಚನ ಇತ್ಯಾದಿ) ಪದ್ಯಪ್ರಧಾನ ಗೇಯ ಪ್ರಕಾರಗಳಿಗೂ ಇದು ಮಧ್ಯದಲ್ಲಿದೆ. ಎಂದೇ ಇದರ ರಚನೆಯಲ್ಲಿ ಸ್ವಲ್ಪ ಶೈಥಿಲ್ಯವೂ ಕಾಮಚಾರವೂ ಕಂಡುಬರುತ್ತವೆ. ಉಗಾಭೋಗಕ್ಕೆ ನಿರ್ದಿಷ್ಟವಾದ ರಾಗಗಳನ್ನು ವಿಧಿಸಿರುವುದಾಗಲೀ ಇಂತಿಂಥ ಉಗಾಭೋಗವನ್ನು ಇಂತಿಂಥದೇ ರಾಗದಲ್ಲಿ ಹಾಡಬೇಕೆಂದು ವಿಧಿಸಿರುವುದಾಗಲೀ ಶಾಸ್ತ್ರದಲ್ಲೂ ಸಂಪ್ರದಾಯದಲ್ಲೂ ಕಂಠಪರಂಪರೆಯಲ್ಲೂ ಹಸ್ತಪ್ರತಿ ಆಕರಗಳಲ್ಲೂ ಕಂಡುಬರುವುದಿಲ್ಲ. ಇದರಿಂದಾಗಿ ಉಗಾಭೋಗವನ್ನು ಹಾಡಬಯಸುವವರಿಗೆ ತಮ್ಮ ಮನೋಧರ್ಮ, ಸಾಹಿತ್ಯಾನುಗುಣ್ಯತೆ, ರಸೌಚಿತ್ಯ ಮುಂತಾದವನ್ನು ದೃಷ್ಟಿಯಲ್ಲಿಟ್ಟು ಕೊಂಡು ತಮಗೆ ಬೇಕೆನಿಸುವ ಯಾವುದೇ ರಾಗದಲ್ಲಿ ಅದನ್ನು ಹಾಡುವ ಸ್ವಾತಂತ್ರ್ಯವಿದೆ. ಕಠಿಣನಿಯಮಗಳಿಂದ ಛಂದೋಪ್ರಾಸಾದಿ ಲಕ್ಷಣಗಳು ನಿರ್ಬಂಧಿತವಲ್ಲವಾದರೂ ಅವು ಸ್ಪಷ್ಟವಾಗಿ ರಚನೆಯ ಅವಿಭಾಜ್ಯ ಅಂಗಗಳೇ ಆಗಿವೆ. ಆದ್ದರಿಂದಲೇ ಈ ಲಕ್ಷಣಗಳಿಲ್ಲದ ವಚನಗಳು ಉತ್ಸಾಹೀ ಆಸಕ್ತರ ಬೃಹತ್ಪ್ರಯತ್ನವನ್ನು ಮೀರಿಯೂ ಯಶಸ್ವಿಯಾಗಿಯೇ ಉಳಿದವು. ಉಗಾಭೋಗವೋ ಯಶಸ್ವಿಯಾಗಿ ಶಾಸ್ತ್ರೀಯಸಂಗೀತದ ಒಳಾಂಗಣವನ್ನು ಪ್ರವೇಶಿಸಿ ಪ್ರಯೋಗ ಪ್ರಾಚುರ್ಯವನ್ನು ಪಡೆಯಿತು. ಉಗಾಭೋಗವನ್ನು ಹಾಡುವವರು ಸಾಮಾನ್ಯವಾಗಿ ದೇವರನಾಮವೊಂದರ ಪೀಠಿಕಾರೂಪದಲ್ಲಿ ಹಾಡುತ್ತಾರೆ. ಉಗಾಭೋಗಗಳಲ್ಲಿ ಹೆಚ್ಚಿನ ಪಾಲು ಪುರಂದರದಾಸರೂ ವಿಜಯದಾಸರೂ ರಚಿಸಿದವೇ ಆಗಿವೆ. ಇವುಗಳಲ್ಲಿ ನಾಲ್ಕು ಸಾಲುಗಳಿಗಿಂತ ಕಡಿಮೆಯಾಗಿಯೂ ಹನ್ನೆರಡು ಸಾಲುಗಳಿಗಿಂತ ಹೆಚ್ಚಾಗಿಯೂ ಇರುವುದು ಎಲ್ಲೂ ಕಾಣಬರುವುದಿಲ್ಲ. ಸಾಮಾನ್ಯವಾಗಿ ಸಾಲುಗಳ ಉದ್ದ ಸ್ಥೂಲವಾಗಿ ಒಂದೇ ಆಗಿದ್ದರೂ ಅಪವಾದಗಳು ಬಹುವಾಗಿ ದೊರೆಯುತ್ತವೆ. ಇವುಗಳಲ್ಲೆಲ್ಲ ದ್ವಿತೀಯಪ್ರಾಸದ ರಚನೆಗಳೇ ಅತ್ಯಧಿಕ. ಉಳಿದ ಅಕ್ಷರಗಳ ಪ್ರಾಸಸಂಯೋಜನೆ ಬಹುಶಃ ಇಲ್ಲವೆಂದರೂ ಸಲ್ಲುತ್ತದೆ. ಕೆಲವು ವೇಳೆ ಪ್ರಾಸಸೌಕರ್ಯಕ್ಕಾಗಿ ಸಾಲುಗಳ ಉದ್ದವನ್ನು ಹೆಚ್ಚುಕಡಿಮೆ ಮಾಡುವ ಆವಶ್ಯಕತೆಯೂ ಬರುತ್ತದೆ. ಇದರಿಂದ ಗೇಯ ಸ್ವರೂಪಕ್ಕೆ, ತಾಳವಿಲ್ಲದುದರಿಂದ, ಬಾಧೆಯೇನೂ ಇಲ್ಲ. ಇಷ್ಟಾದರೂ ಕೆಲವು ವೇಳೆ-ವಿಶೇಷವಾಗಿ ಕಡೆಯ ಸಾಲಿನಲ್ಲಿ-ಪ್ರಾಸ ಸಂಪೂರ್ಣವಾಗಿ ಮಾಯವೇ ಆಗಿಬಿಡುವುದೂ ಉಂಟು. ಕೃತಿಕಾರನ ಅಂಕಿತ ಅತ್ಯಧಿಕವಾಗಿ ಕಡೆಯ ಸಾಲಿನಲ್ಲೂ ವಿರಳವಾಗಿ ಅದರ ಹಿಂದಿನ ಸಾಲಿನಲ್ಲೂ ಬರುತ್ತದೆ. ತಾಳವಿಲ್ಲದಿದ್ದರೂ ಖಚಿತವಾಗಿ ಹೇಳಬಹುದಾದ ಮಾತ್ರಾಗಣ ಅಕ್ಷರಗಣಾದಿ ಛಂದೋವಿನ್ಯಾಸಗಳು ಇಲ್ಲದಿದ್ದರೂ ಪ್ರಾಸವೂ ಅನಿರ್ಬಂಧಿತ ಪುರೋಗಾಮಿ ಛಂದೋ ಪ್ರವೃತ್ತಿಯೂ ಇರುವುದರಿಂದ ಒಂದು ಬಗೆಯ ಸ್ಥೂಲ ಲಯಪ್ರಕಾರ ಇದಕ್ಕೆ ಅನ್ವಯವಾಗುತ್ತದೆ. ಸಾಹಿತ್ಯ ಮತ್ತು ರಾಗಭಾಗಗಳಲ್ಲಿನ ರಸಪ್ರತೀತಿ ಈ ಲಯವನ್ನು ಸಾಕಷ್ಟು ನಿರ್ಧರಿಸುತ್ತದೆ. ಆದ್ದರಿಂದ ಉಗಾಭೋಗವನ್ನು ಸ್ವೇಚ್ಛೆಯಾಗಿ ಕಾಮಚಾರದಿಂದ ಹಾಡಿಕೊಳ್ಳಬಹುದು. ಇದನ್ನು ನಿರ್ದಿಷ್ಟಸ್ವರೂಪವಿಲ್ಲದ ಹಾಡೆಂದು ತಿಳಿಯಲಾಗದು. ಇದರಲ್ಲಿ ಸಮಸಂಖ್ಯೆಯ-4,6,8,10,12 ಸಾಲುಗಳ ಪ್ರಯೋಗವೇ ಸಾಮಾನ್ಯವಾಗಿ ಕಂಡುಬರುತ್ತದೆ. ಐದು ಸಾಲುಗಳಿರುವ ಅತ್ಯಲ್ಪ ಸಂಖ್ಯೆಯ ಉಗಾಭೋಗಗಳಲ್ಲಿ ಪ್ರಾಸದೃಷ್ಟಿ ಯಿಂದ ಸಾಲುಗಳ ಉದ್ದವನ್ನು ವ್ಯತ್ಯಾಸಮಾಡಿಕೊಂಡು ನಾಲ್ಕು ಅಥವಾ ಆರು ಸಾಲುಗಳಾಗಿ ಮಾಡಿಕೊಳ್ಳಬಹುದು. ಬಹುಶಃ ಇದೇ ಸರಿಯೆಂದೂ ಕಾಣುತ್ತದೆ. ಇಡೀ ರಚನೆಯನ್ನು ಒಂದಾಗಿ, ಎಂದರೆ ಅಖಂಡವಾಗಿ ಹಾಡಲಾಗುತ್ತದೆ. ಎಂದರೆ ಪಲ್ಲವಿ, ಅನುಪಲ್ಲವಿ, ಚರಣಗಳಂಥ ವಿಭಜನೆ ಇದರಲ್ಲಿಲ್ಲ. ಸಾಹಿತ್ಯಭಾವದ ವಿಸ್ತಾರಕ್ಕೆ ಬೇಕಾದರೆ ವಿವಿಧ ಭಾಗಗಳ ಪುನರುಕ್ತಿ, ಭಿನ್ನರೀತಿಯ ಜೋಡಣೆ ಮುಂತಾದವನ್ನು ಮಾಡಿಕೊಳ್ಳಬಹುದು. ಇದನ್ನು ಸಾಮಾನ್ಯವಾಗಿ ಒಂದೇ ರಾಗದಲ್ಲಿ ಹಾಡಲಾಗುತ್ತದೆ. ಉಗಾಭೋಗದ ಸಾಹಿತ್ಯ ಮುಖ್ಯವಾಗಿ ಧಾರ್ಮಿಕವಾದದ್ದು. ವಚನಗಳು ವೀರಶೈವ ಮತದ ಪ್ರಮೇಯ ಸಾಮಗ್ರಿಯನ್ನು ಒಳಗೊಂಡರೂ ಸಾರ್ವಕಾಲಿಕ ಮೌಲ್ಯಗಳನ್ನು ಹೊಂದಿರುವಂತೆ ಉಗಾಭೋಗಗಳೂ ಪ್ರಧಾನವಾಗಿ ಮಧ್ವಮತದ ದ್ವೈತತತ್ತ್ವ ಪ್ರಕ್ರಿಯೆಗಳನ್ನೇ ವಿಶೇಷವಾಗಿ ಆಶ್ರಯಿಸಿದರೂ ಇತರ ಚಿರಂತನ ಮೌಲ್ಯ ಸಾಮಗ್ರಿಯನ್ನೂ ಒಳಗೊಂಡಿವೆ. ಆಚಾರ, ಲೋಕನೀತಿ, ಧ್ಯಾನ, ಧರ್ಮ, ಅಧ್ಯಾತ್ಮಚಿಂತನೆ, ನೀತಿ, ಕರ್ತವ್ಯಪರಾಯಣತೆ, ಹರಿಮಾಹಾತ್ಮ್ಯ, ಭಕ್ತನ ಲಕ್ಷಣ ಹಾಗೂ ಮಹಿಮೆ, ಪ್ರಾರ್ಥನೆ, ನಾಮಮಹಿಮೆ, ಪುಜಾವಿಧಾನ -ಇಂಥ ಎಷ್ಟೋ ವಿಷಯಗಳ ಗಣಿಯೇ ಉಗಾಭೋಗಗಳಲ್ಲಿ ದೊರೆಯುತ್ತದೆ. ಸಾಹಿತ್ಯಶೈಲಿ, ವಿನ್ಯಾಸ, ಪದಶಯ್ಯೆ ಮುಂತಾದವು ಆಯಾ ವಾಗ್ಗೇಯಕಾರನ ಪ್ರತಿಭೆಯನ್ನು ಅವಲಂಬಿಸಿದರೂ ನಿರೂಪಣೆ ತಿಳಿಯಾಗಿಯೂ ಸ್ವಾರಸ್ಯವಾಗಿಯೂ ನೇರವಾಗಿಯೂ ಇದೆ. ಇವುಗಳಲ್ಲದೆ ಹಲವು ಕಾವ್ಯ ಸಂದರ್ಭಗಳೂ ರಮಣೀಯ ಸನ್ನಿವೇಶಗಳೂ ವೇದ, ಉಪನಿಷತ್ತು, ಇತಿಹಾಸ, ಪುರಾಣ ಸ್ಮೃತಿಗಳ ಸಾರಗ್ರಹಣವೂ ಉತ್ಕಟವಾದ ಆತ್ಮೀಯತೆ, ಪ್ರಾಮಾಣಿಕತೆ, ಜೀವನದರ್ಶನ ಇವುಗಳೂ ಉಗಾಭೋಗಗಳನ್ನು ರಸಿಕ ರಂಜನಕ್ಕೂ ಸಂಸ್ಕೃತಿ ಪ್ರಸಾರಕ್ಕೂ ಆತ್ಮಬೋಧೆಗೂ ಉತ್ಕೃಷ್ಟಸಾಧನಗಳನ್ನಾಗಿ ಮಾಡಿವೆ. ಆದ್ದರಿಂದ ನಮ್ಮ ಸಂಸ್ಕೃತಿ, ಸಮಾಜ, ಸಾಹಿತ್ಯ ಮತ್ತು ಸಂಗೀತಗಳಲ್ಲಿ ಉಗಾಭೋಗ ಒಂದು ವಿಶಿಷ್ಟಸ್ಥಾನವನ್ನು ಗಳಿಸಿಕೊಂಡಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಉಗಾಭೋಗ&oldid=888663" ಇಂದ ಪಡೆಯಲ್ಪಟ್ಟಿದೆ