ವಿಷಯಕ್ಕೆ ಹೋಗು

ಅಮ್ಮಕೊಡವರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೇರಳದಲ್ಲಿ ತಾಯಿಕಾಟ್ ತಂಬಿರಾನ್ ಎಂಬ ಬ್ರಾಹ್ಮಣನ ಮಗಳು ಕಾರಣವಶಾತ್ ಕೊಡಗಿಗೆ ಬಂದು ಒಬ್ಬ ಕೊಡವನನ್ನು ಮದುವೆಯಾಗಿ ಅವರ ಸಂತತಿಯು ಕೇರಳದ ಪದ್ಧತಿಯಂತೆ ಮಾತೃಪ್ರಧಾನ ಸಂಪ್ರದಾಯವನ್ನು ಅನುಸರಿಸುವವರಾಗಿದ್ದರಿಂದ ಅಮ್ಮಕೊಡವರೆಂದೆನ್ನಿಸಿಕೊಂಡರೆಂದು ಪ್ರತೀತಿ. ಇವರ ಸುಮಾರು ೪೪ ಮನೆತನಗಳಿದ್ದು ೨ ಗೋತ್ರಗಳಿಗೆ ಸೇರಿದ್ದಾರೆ. ಕೊಡವರಂತೆ ಉಡುಗೆ-ತೊಡುಗೆ, ಭಾಷೆಗಳನ್ನು ಬಳಸಿದರೂ ಇವರು ಸಸ್ಯಾಹಾರಿಗಳು. ಇವರು ಕೊಡವರೊಡನೆ ವೈವಾಹಿಕ ಸಂಬಂಧಗಳನ್ನು ಮುಂದುವರೆಸಿದಾಗ ಕೊಡವತಿಯನ್ನು ಮದುವೆಯಾದಾಗ ಅವಳನ್ನು ತಮ್ಮ ಜನಾಂಗಕ್ಕೆ ಸೇರಿಸಿಕೊಂಡು ಸಸ್ಯಾಹಾರಿಯನ್ನಾಗಿಸಿದರು. ಕೊಡವನನ್ನು ಮದುವೆಯಾದ ಅಮ್ಮಕೊಡವತಿಯು ಕೊಡವರ ಜೀವನಕ್ರಮವನ್ನು ಅನುಸರಿಸುತ್ತಿದ್ದಳು. ನೂರೊಕ್ಕಲು ಕುಟ್ಟಚಮ್ಮನ ಕುಟ್ಟಮ್ಮ ಸುಭೇದಾರನ ಕಾಲದಲ್ಲಿ ತಾವು ‘ಕಾವೇರಿ ಬ್ರಾಹ್ಮಣರು’ ಎಂದುಕೊಂಡು ಶಿವಮೊಗ್ಗ ಜಿಲ್ಲೆಯ ರಾಮಚಂದ್ರಾಪುರ ಮಠದ ಶಿಷ್ಯರಾಗುವುದಾಗಿ ಒಪ್ಪಿ ಬರೆದುಕೊಟ್ಟು, ೧೮೩೪ರ ನವಂಬರಿನಲ್ಲಿ ಕಾವೇರಿ ನದಿಯ ತೀರದಲ್ಲಿರುವ ಕೊಡಗಿನ ಬಲಮುರಿಯಲ್ಲಿ ಯಜ್ಞೋಪವೀತವನ್ನು ಧರಿಸಿಕೊಂಡರು. ೧೮೪೭ರ ಫೆಬ್ರವರಿಯಲ್ಲಿ ಈ ಅಮ್ಮಕೊಡವರು ಆಚರಿಸಬೇಕಾದ ಪದ್ಧತಿಗಳನ್ನು ಆ ಮಠಾಧಿಪತಿಗಳು ನಿರೂಪಿಸಿದರು. ಆದರೆ ಕಾವೇರಿಯ ದಕ್ಷಿಣಕ್ಕಿರುವ ಕಿಗ್ಗಟ್ಟು ನಾಡಿನ ಅಮ್ಮಕೊಡವರು ಯಜ್ಞೋಪವೀತವನ್ನು ಧರಿಸಲು ಒಪ್ಪದೇ ಇದ್ದರು. ಕಾಲಾಂತರದಲ್ಲಿ ಉಡುಪಿಯ ಕಾನೂರು ಮಠದ ಶಿಷ್ಯರಾಗಿರುವದಾಗಿ ತೀರ್ಮಾನಿಸಿ ಶ್ರೀಮಂಗಲದ ಬಳಿಯ ಇರುಪು ದೇವಸ್ಥಾನದಲ್ಲಿ ಯಜ್ಞೋಪವೀತವನ್ನು ಧರಿಸಿಕೊಂಡರು. ಕೆಲವರು ಸುಬ್ರಹ್ಮಣ್ಯ ಮಠದ ಶಿಷ್ಯರಾಗಿಯೂ ಇದ್ದಾರೆ. (ಪಟ್ಟೋಲೆ ಪಳಮೆ, ೧೯೭೫) ‘ಕಾವೇರಿ ಬ್ರಾಹ್ಮಣ’ರೆಂದು ಕರೆದುಕೊಂಡದ್ದಕ್ಕೆ ಕೊಡವರ ಜನಪದ ಹಾಡು ‘ಕಾವೇರಿ ಪಾಟ್ಟ್’ನಲ್ಲಿ ಈ ಮುಂದಿರುವಂತೆ ಕತೆಯಿದೆ. ಕವೇರ ಮುನಿಯ ಮಗಳಾದ ಕಾವೇರಿಯನ್ನು ಅಗಸ್ತ್ಯ ಋಷಿಯು ವಿವಾಹವಾದಾಗ ಅವಳು ತನ್ನನ್ನು ಬಿಟ್ಟು ದೂರ ಎಲ್ಲಿಯೂ ಅಗಸ್ತ್ಯನು ಹೋಗಬಾರದೆಂದು ಅವನಿಂದ ಭಾಷೆ ಪಡೆದಿದ್ದಳು. ಹಾಗೇನಾದರೂ ಹೋದರೆ ತಾನು ನದಿಯಾಗಿ ಹರಿದುಹೋಗುವೆನೆಂದು ಆಣೆ ಹಾಕಿದ್ದಳು. ಹೀಗಿರಲು ಒಂದು ಬ್ರಾಹ್ಮೀ ಮುಹೂರ್ತದಲ್ಲಿ ಅಗಸ್ತ್ಯನು ಕಾವೇರಿಯನ್ನು ಒಂದು ಹೊಂಗಳಶದಲ್ಲಿ ಮುಚ್ಚಿಟ್ಟು ಹತ್ತಿರವಿದ್ದ ಬ್ರಾಹ್ಮಣ ಶಿಷ್ಯರಿಗೆ, ತಾನು ಹೋಗಿ ಕನಿಕೆ ನದಿಯಲ್ಲಿ ಸ್ನಾನಾದಿ ಕರ್ಮಗಳನ್ನು ಮುಗಿಸಿ ಹಿಂತಿರುಗಿ ಬರುವವರೆಗೆ ಕಾವೇರಿಯನ್ನು ಜೋಪಾನವಾಗಿ ಕಾಪಾಡಿರೆಂದು ಆಜ್ಞಾಪಿಸಿ ಹೋದನು. ಸ್ವಲ್ಪವೇ ಹೊತ್ತಿಗೆ ಕಾವೇರಿಗೆ ಇದರ ಅರಿವಾಗಿ ಕುಪಿತಳಾದಳು. ವಟುಗಳ ಕೈಯಿಂದ ಆ ಹೊಂಗಳಶವು ಜಾರಿ ಬೀಳುವಂತೆ ಮಾಡಿ ತಾನು ಅದರೊಳಗಿನಿಂದ ಹೊರಟು ನದಿಯಾಗಿ ಹರಿಯತೊಡಗಿದಳು. ವಟುಗಳು ಅವಳನ್ನು ತಡೆಯಲೆತ್ನಿಸಿದಾಗ ಅವಳು ಭೂಮಿಯಡಿಯಲ್ಲಿ ಹರಿದು ಕಣ್ಮರೆಯಾದಳು. ಭಯಗೊಂಡ ಶಿಷ್ಯರು ಓಡಿಹೋಗಿ ಅಗಸ್ತ್ಯನಿಗೆ ತಿಳಿಸಿದರು. ವಟುಗಳಿಂದ ದೂರ ಬಂದು ಭೂಮಿಯ ಮೇಲ್ಭಾಗದಲ್ಲಿ ಹರಿಯುತ್ತಿದ್ದ ಕಾವೇರಿಯನ್ನು ಅಗಸ್ತ್ಯನು ತಡೆದು, ಹೋಗದಿರುವಂತೆ ಬೇಡಿಕೊಳ್ಳುತ್ತಿರುವಾಗ, ವಟುಗಳು ಕಾವೇರಿಯನ್ನು ಹೊಂಗಳಶದಲ್ಲಿ ಮುಚ್ಚಿಟ್ಟು ಕನಿಕೆಯ ಬಳಿಗೆ ಹೋದದು ಅಗಸ್ತ್ಯನ ತಪ್ಪೆಂದು ಕಾವೇರಿಯ ಪರ ವಾದಿಸಿದರು. ಕೋಪಗೊಂಡ ಋಷಿಯು, ‘ಮತ್ಸ್ಯ ದೇಶದ (ಕೊಡಗಿನ) ಬ್ರಾಹ್ಮಣರೇ! ನಿಮ್ಮ ಬ್ರಾಹ್ಮಣತ್ವವು ನಾಶವಾಗಲಿ! ಈ ದೇಶದ ಜನರೆಲ್ಲ ನಿಮಗೆ ವಿರೋಧಿಗಳಾಗಿ, ತಿನ್ನಲೂ ಕುಡಿಯಲೂ ನಿಮಗೇನೂ ಸಿಗದಂತಾಗಲಿ...’, ಎಂದು ಶಾಪವಿತ್ತನು. ಆ ಶಿಷ್ಯರು ಕಾವೇರಿಗೆ ಮೊರೆಯಿಡಲು ಅವಳು, ಬ್ರಾಹ್ಮಣತ್ವವು ನಶಿಸಿದರೂ, ತನ್ನನ್ನು ನಂಬಿರುವವರೆಗೆ ತಿಂದುಂಡು, ಬದುಕಿಬಾಳಲು ತೊಂದರೆಯಿರುವದಿಲ್ಲ, ಎಂದು ಆಶೀರ್ವದಿಸಿದಳು. ಇವರೇ ‘ಕಾವೇರಿ ಬ್ರಾಹ್ಮಣ’ರೆಂದು ಕೆಲವು ಅಮ್ಮಕೊಡವರು ಹೇಳಿಕೊಳ್ಳುವರು.