ವಿಷಯಕ್ಕೆ ಹೋಗು

ರವಿ ಶಂಕರ್‌ ಪ್ರಸಾದ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Ravi Shankar Prasad

ಹಾಲಿ
ಅಧಿಕಾರ ಸ್ವೀಕಾರ 
26 May 2014
ಪ್ರಧಾನ ಮಂತ್ರಿ Narendra Modi
ಪೂರ್ವಾಧಿಕಾರಿ Kapil Sibal

ಅಧಿಕಾರ ಅವಧಿ
26 May 2014 – 9 November 2014
ಪ್ರಧಾನ ಮಂತ್ರಿ Narendra Modi
ಪೂರ್ವಾಧಿಕಾರಿ Kapil Sibal
ಉತ್ತರಾಧಿಕಾರಿ D. V. Sadananda Gowda
ವೈಯಕ್ತಿಕ ಮಾಹಿತಿ
ಜನನ (1954-08-30) ೩೦ ಆಗಸ್ಟ್ ೧೯೫೪ (ವಯಸ್ಸು ೭೦)
Patna, India
ರಾಜಕೀಯ ಪಕ್ಷ Bharatiya Janata Party
ಸಂಗಾತಿ(ಗಳು) Maya Shankar
ಅಭ್ಯಸಿಸಿದ ವಿದ್ಯಾಪೀಠ Patna University
ಧರ್ಮ ಹಿಂದೂ ಧರ್ಮ
ಜಾಲತಾಣ Official website

ಶ್ರೀ ರವಿ ಶಂಕರ್‌ ಪ್ರಸಾದ್‌ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಒಬ್ಬ ರಾಜಕಾರಣಿ. ಸದ್ಯಕ್ಕೆ ಅವರು ಭಾರತದ ಸಂಸತ್‌ ಸದಸ್ಯರಾಗಿದ್ದು, ಭಾರತೀಯ ಸಂಸತ್‌ನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ಬಿಹಾರ್‌ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಇದಕ್ಕೆ ಮುಂಚೆ, ರಾಷ್ಟ್ರೀಯ ಪ್ರಜಾಪ್ರಭುತ್ವ ಮೈತ್ರಿಕೂಟ (ಎನ್‌ಡಿಎ) ಸರ್ಕಾರದಲ್ಲಿ ಅವರು ಕಲ್ಲಿದ್ದಲು ಮತ್ತು ಗಣಿ ಮಂತ್ರಾಲಯ, ಕಾನೂನು ಮತ್ತು ನ್ಯಾಯ ಮಂತ್ರಾಲಯ ಹಾಗೂ ಸೂಚನಾ ಮತ್ತು ಪ್ರಸಾರ ಮಂತ್ರಾಲಯಗಳಲ್ಲಿ ರಾಜ್ಯ ಮಂತ್ರಿಯಾಗಿದ್ದರು. ಪ್ರಸಾದ್‌ ಬಿಜೆಪಿಯ ಚಿರಪರಿಚಿತ ಸದಸ್ಯರಾಗಿದ್ದಾರೆ.

ಆರಂಭಿಕ ಜೀವನ

[ಬದಲಾಯಿಸಿ]

ರವಿ ಶಂಕರ್‌ ಪ್ರಸಾದ್ 1954ರ ಆಗಸ್ಟ್‌ 30ರಂದು ಬಿಹಾರ್‌ ರಾಜ್ಯದ ರಾಜಧಾನಿ ಪಟ್ನಾದಲ್ಲಿ ಕುಲೀನ ಕಾಯಸ್ಥ ಕುಟುಂಬದಲ್ಲಿ ಜನಿಸಿದರು.‌ ಅವರು ಪಟ್ನಾ ವಿಶ್ವವಿದ್ಯಾನಿಲಯದಲ್ಲಿ ಬಿ.ಎ. ಆನರ್ಸ್‌., ಎಂ.ಎ. (ರಾಜಕೀಯ ಶಾಸ್ತ್ರ) ಹಾಗೂ ಎಲ್‌.ಎಲ್‌.ಬಿ. ಕಾನೂನು ಪದವಿ ಗಳಿಸಿದರು. ರವಿಯವರ ತಂದೆ ಸ್ವರ್ಗೀಯ ಶ್ರೀ ಠಾಕುರ್‌ ಪ್ರಸಾದ್‌ ಪಟ್ನಾ ಉಚ್ಚ ನ್ಯಾಯಾಲಯದಲ್ಲಿ ಪ್ರಮುಖ ಹಿರಿಯ ವಕೀಲರು ಹಾಗೂ ಇಂದು ಬಿಜೆಪಿ ಎನ್ನಲಾಗಿರುವ ಜನ ಸಂಘ ಪಕ್ಷದ ಪ್ರಮುಖ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. ಪಟ್ನಾ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ. ಶ್ರೀಮತಿ ಮಾಯಾ ಶಂಕರ್‌ ಅವರನ್ನು ರವಿ ಶಂಕರ್‌ ಪ್ರಸಾದ್‌ 1982ರ ಫೆಬ್ರವರಿ 3ರಂದು ವಿವಾಹವಾದರು.

1970ರ ದಶಕದ ಕಾಲಾವಧಿಯಲ್ಲಿ ಅವರು ತಮ್ಮ ರಾಜಕೀಯ ವೃತ್ತಿಯನ್ನು ಆರಂಭಿಸಿದರು. ವಿದ್ಯಾರ್ಥಿ ಸಂಘದ ಮುಖಂಡರಾಗಿ ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದರು. ಶ್ರೀ ಜಯಪ್ರಕಾಶ್‌ ನಾರಾಯಣ್‌ರ ನೇತೃತ್ವದಲ್ಲಿ, ಬಿಹಾರದಲ್ಲಿ ವಿದ್ಯಾರ್ಥಿ ಚಳವಳಿಯ ಮುಂದಾಳತ್ವ ವಹಿಸಿದರು. 1975ರಲ್ಲಿ ಇಂದಿರಾ ಗಾಂಧಿ ದೇಶಾದ್ಯಂತ ವಿಧಿಸಿದ ತುರ್ತು ಪರಿಸ್ಥಿತಿಯಲ್ಲಿ ರವಿ ಶಂಕರ್‌ ಪ್ರಸಾದ್ ಸೇರಿದಂತೆ ಹಲವು ಮುಖಂಡರು ಬಂಧನಕ್ಕೊಳಗಾದರು. ಹಲವು ವರ್ಷಗಳ ಕಾಲ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಈ ಸಂಘಟನೆಯಲ್ಲಿ ಅವರು ವಿವಿಧ ಹುದ್ದೆಗಳನ್ನು ಅಲಂಕರಿಸಿದರು. ತಮ್ಮ ಕಾಲೇಜ್‌ ವ್ಯಾಸಂಗದ ದಿನಗಳಲ್ಲಿ ಅವರು ಪಟ್ನಾ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಸಹ-ಪ್ರಧಾನಕಾರ್ಯದರ್ಶಿ ಹಾಗೂ ನಂತರ ಈ ವಿಶ್ವವಿದ್ಯಾನಿಲಯದಲ್ಲಿ ಸೆನೇಟ್‌, ಹಣಕಾಸು ಸಮಿತಿ, ಕಲೆ ಮತ್ತು ಕಾನೂನು ಬೋಧಕವೃಂದದ ಸದಸ್ಯರಾಗಿ ಸೇವೆ ಸಲ್ಲಿಸಿದರು.

ವಕೀಲರಾಗಿ

[ಬದಲಾಯಿಸಿ]

ರವಿ ಶಂಕರ್‌ ಪ್ರಸಾದ್‌ ಭಾರತೀಯ ಸರ್ವೋಚ್ಚ ನ್ಯಾಯಾಲಯದಲ್ಲಿ ಹಿರಿಯ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಪಖ್ಯಾತಿ ಪಡೆದ ಮೇವು ಹಗರಣ ಹಾಗೂ ಗಟ್ಟಿ ಡಾಂಬರು ಹಗರಣಗಳಲ್ಲಿ ಬಿಹಾರ್‌ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ರೇಲ್ವೆ ಮಂತ್ರಿ ಲಾಲೂ ಪ್ರಸಾದ್‌ ಯಾದವ್‌ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ವಾದಿಸಿದ ಪ್ರಮುಖ ನ್ಯಾಯವಾದಿಗಳಾಗಿದ್ದರು. ಅಂತಿಮವಾಗಿ ಲಾಲೂಗೆ ಶಿಕ್ಷೆಯಾಯಿತು. ಪಟ್ನಾ ಉಚ್ಚ ನ್ಯಾಯಾಲಯದಲ್ಲಿ ಹಲವು ವಿಚಾರಣೆಗಳಲ್ಲಿ ಮಾಜಿ ಉಪಪ್ರಧಾನಿ ಶ್ರೀ ಲಾಲ್‌ ಕೃಷ್ಣ ಆಡ್ವಾಣಿಯವರ ಪರ ವಕೀಲರಾಗಿ ವಾದಿಸಿದರು. ಅವರು ಕಾನೂನು ಮತ್ತು ಔಷಧೀಯ ಕ್ಷೇತ್ರ ಹಾಗೂ ಹಕ್ಕುಸ್ವಾಮ್ಯ ಕಾನೂನು ಬಗೆಗಿನ ಅಂತರಾಷ್ಟ್ರೀಯ ಮಹಾಸಮ್ಮೇಳನದಲ್ಲಿ ಭಾಗವಹಿಸಿದರು. ಸಾರ್ವಜನಿಕ, ಖಾಸಗಿ ಹಾಗೂ ಸಾಂಸ್ಥಿಕ ಮಂಡಲಿಗಳ ಹಲವು ಮೊಕದ್ದಮೆಗಳಲ್ಲಿ ರವಿ ಶಂಕರ್‌ ಪ್ರಸಾದ್‌ ವಾದಿಸಿದ್ದಾರೆ. ರೇಲ್ವೇಸ್‌, ಬೆನೆಟ್‌ & ಕೊಲ್ಮನ್‌, ಡಾಬರ್‌ ಕಂಪೆನಿ ಇತ್ಯಾದಿ ಸೇರಿದಂತೆ ಹಲವು ಪ್ರಮುಖ ಉದ್ದಿಮೆಗಳ ಪರ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ಬಿಹಾರ್‌ ಬ್ಯಾಂಕಿಂಗ್‌ ಸೇವಾ ನೇಮಕಾತಿ ಮಂಡಲಿಯಲ್ಲಿ ಹಿರಿಯ ಕಾನೂನು ಸಲಹೆಗಾರರಾಗಿದ್ದರು. ಬಹಳಷ್ಟು ಪ್ರಚಾರ ಗಿಟ್ಟಿಸಿದ ನರ್ಮದಾ ಬಚಾವೊ ಅಂದೊಲನ್‌ ಮೊಕದ್ದಮೆ, ಟಿ. ಎನ್‌. ತಿರುಂಪಾಲಾಡ್‌ ವಿರುದ್ಧ ಭಾರತ ಸರ್ಕಾರ, ರಾಮೇಶ್ವರ್‌ ಪ್ರಸಾದ್‌ ವಿರುದ್ಧ ಭಾರತ ಸರ್ಕಾರ (ಬಿಹಾರ್‌ ವಿಧಾನ ಸಭೆ ವಿಭಜನಾ ಮೊಕದ್ದಮೆ) ಹಾಗೂ ಭಾರತದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಪ್ರೊ. ಯಶ್‌ಪಾಲ್‌ರ ಮೊಕದ್ದಮೆಗಳು ರವಿ ಶಂಕರ್‌ ಪ್ರಸಾದ್‌ರ ಪ್ರಮುಖ ಮೊಕದ್ದಮೆಗಳಾಗಿದ್ದವು. 1980ರಿಂದ ಇವರು ಗೌರವಾನ್ವಿತ ಪಟ್ನಾ ಉಚ್ಚನ್ಯಾಯಾಲಯದಲ್ಲಿ ಸೇವೆ ಸಲ್ಲಿಸತೊಡಗಿದರು. 1999ರಲ್ಲಿ ಪಟ್ನಾ ಉಚ್ಚನ್ಯಾಯಾಲಯದ ಕಾಯಂ ನ್ಯಾಯಾಲಯದಲ್ಲಿ ರವಿ ಶಂಕರ್‌ ಪ್ರಸಾದ್‌ ಹಿರಿಯ ನ್ಯಾಯವಾದಿಯಾಗಿ ನೇಮಕಗೊಂಡರು. 2000ದಲ್ಲಿ ಅವರು ಭಾರತದ ಸರ್ವೋಚ್ಚ ನ್ಯಾಯಾಲಯದ ಸದಸ್ಯರಾದರು. 2010ರಲ್ಲಿ, ಬಹಳಷ್ಟು ವರ್ಷಗಳ ಕಾಲದಿಂದಲೂ ನಡೆಯುತ್ತಿದ್ದ ಅಯೋಧ್ಯೆ ರಾಮಮಂದಿರ-ಬಾಬ್ರಿ ಮಸೀದಿ ಮೊಕದ್ದಮೆಯಲ್ಲಿ ವಾದಿಸಿದ್ದ ಮೂರು ನ್ಯಾಯವಾದಿಗಳಲ್ಲಿ ರವಿ ಶಂಕರ್‌ ಪ್ರಸಾದ್‌ ಸಹ ಒಬ್ಬರಾಗಿದ್ದರು. ಇಂದಿಗೂ ಸಹ, ಸರ್ವೋಚ್ಚ ನ್ಯಾಯಾಲಯ ಹಾಗೂ ದೇಶದ ವಿವಿಧೆಡೆ ಉಚ್ಚನ್ಯಾಯಾಲಯಗಳಲ್ಲಿ ಎಲ್ಲಾ ತರಹದ ಕಾನೂನುಗಳನ್ನು ಒಳಗೊಂಡ ವಿವಿಧ ವಿಚಾರಗಳಲ್ಲಿ ವಿವಿಧ ಕಕ್ಷಿಗಾರರ ಪರ ವಾದಿಸುತ್ತಿರುವರು.

ಒಬ್ಬ ರಾಜಕಾರಣಿಯಾಗಿ

[ಬದಲಾಯಿಸಿ]

ಅವರು ಬಿಜೆಪಿಯ ಯುವ ವಿಭಾಗ ಹಾಗೂ ಪಕ್ಷದ ಮುಖ್ಯ ಸಂಘಟನೆಯಲ್ಲಿ ರಾಷ್ಟ್ರೀಯ ಮಟ್ಟದ ಹಲವು ಹುದ್ದೆಗಳಲ್ಲಿ ಜವಾಬ್ದಾರಿ ನಿಭಾಯಿಸಿದ್ದಾರೆ. 2000ದಲ್ಲಿ ಅವರು ಸಂಸತ್‌ ಸದಸ್ಯರಾದರು. 2001ರಲ್ಲಿ ಭಾರತದ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕಲ್ಲಿದ್ದಲು ಮತ್ತು ಗಣಿ ಮಂತ್ರಾಲಯದಲ್ಲಿ ಅವರು ರಾಜ್ಯ ಮಂತ್ರಿಯಾಗಿದ್ದರು. ಗಣಿ ಮತ್ತು ಕಲ್ಲಿದ್ದಲು ಕ್ಷೇತ್ರಗಳಲ್ಲಿ ಸುಧಾರಣಾ ಕ್ರಮಗಳನ್ನು ಚುರುಕುಗೊಳಿಸಿದ್ದರು. ಕಲ್ಲಿದ್ದಲು ಕ್ಷೇತ್ರದಲ್ಲಿ ದಕ್ಷತೆ ಮತ್ತು ವೃತ್ತಿಪರ ರೀತಿ-ರಿವಾಜು ತರುವಲ್ಲಿ ಮೊದಲಿಗರಾಗಿದ್ದರು. ಇಂದು ಅವರು ಬಿಜೆಪಿಯ ಪ್ರಮುಖ ವಕ್ತಾರರಾಗಿದ್ದಾರೆ.

ಮಂತ್ರಿಯಾಗಿ

[ಬದಲಾಯಿಸಿ]

ಅವರು ಸಚಿವ ಸಂಪುಟಕ್ಕೆ ಸೇರಿದ ಹದಿನೈದು ದಿನಗಳೊಳಗೆ, 2002ರ ಜುಲೈ 1ರಂದು ರವಿ ಶಂಕರ್‌ ಪ್ರಸಾದ್‌ರಿಗೆ ಕಾನೂನು ಮತ್ತು ನ್ಯಾಯ ಸಚಿವಾಲಯದಲ್ಲಿ ರಾಜ್ಯ ಮಂತ್ರಿಯಾಗಿ ಹೆಚ್ಚುವರಿ ಹುದ್ದೆ ನೀಡಲಾಯಿತು. ಅವರು ಜನ ಪ್ರತಿನಿಧಿ ಕಾಯಿದೆಯಲ್ಲಿ ತಿದ್ದುಪಡಿ ತರಲು ಮಸೂದೆ ಸಿದ್ಧಪಡಿಸಿದರು. ತ್ವರಿತ ನ್ಯಾಯಾಲಯಗಳ ಕಾರ್ಯಕಲಾಪಗಳನ್ನು ಇನ್ನಷ್ಟು ವೇಗಗೊಳಿಸಲು ಅಗತ್ಯ ಕ್ರಮ ಕೈಗೊಂಡರು.

ಸೂಚನೆ ಮತ್ತು ಪ್ರಸಾರ ಮಂತ್ರಿಯಾಗಿ ಅವರು ರೇಡಿಯೊ, ದೂರದರ್ಶನ ಮತ್ತು ಅನಿಮೇಷನ್‌ ಕ್ಷೇತ್ರಗಳಲ್ಲಿ ಸುಧಾರಣೆ ತಂದರು. ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ) ಕೇಂದ್ರವನ್ನು ಗೋವಾದಲ್ಲೇ ಕಾಯಂ ಆಗಿ ನಡೆಯುವಂತೆ ಸಕಲ ಮೂಲಭೂತ ಹಾಗೂ ಆಧುನಿಕ ಸಿದ್ಧತೆ ಮಾಡಿಸಿಕೊಟ್ಟರು.

2002ರ ಏಪ್ರಿಲ್‌ ತಿಂಗಳಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ ನಗರದಲ್ಲಿ ಅಲಿಪ್ತ ರಾಷ್ಟ್ರಗಳ ಮಂತ್ರಿಗಳ ಮಹಾಸಮ್ಮೇಳನದಲ್ಲಿ ಭಾಗವಹಿಸಿದ ಭಾರತೀಯ ತಂಡದ ಮುಖ್ಯರಸ್ಥರಾಗಿದ್ದರು. ಆನಂತರ, ಪೆಲೆಸ್ಟಿನ್‌ ಮುಖಂಡ ಸ್ವರ್ಗೀಯ ಯಾಸಿರ್‌ ಆರಫತ್‌ರನ್ನು ಭೇಟಿಯಾಗಿ, ಅವರ ದೇಶದೊಂದಿಗೆ ಐಕಮತ್ಯ ಸೂಚಿಸಲೆಂದು, ಅಲಿಪ್ತ ರಾಷ್ಟ್ರ ಚಳವಳಿ ಮಂತ್ರಿ ನಿಯೋಗದ ಸದಸ್ಯರಾಗಿದ್ದ ರವಿ ಶಂಕರ್‌ ಪ್ರಸಾದ್‌ರನ್ನು ರಮಲ್ಲಾ ನಗರಕ್ಕೆ ಕಳುಹಿಸಲಾಗಿತ್ತು. ಇದಲ್ಲದೆ, ವೆಸ್ಟ್‌ ಇಂಡೀಸ್‌ನ ಸೇಂಟ್ ವಿನ್ಸೆಂಟ್‌ ನಗರದಲ್ಲಿ ಕಾಮನ್ವೆಲ್ತ್‌ ಕಾನೂನು ಮಂತ್ರಿಗಳ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತೀಯ ನಿಜೋಜನೆಯ ಮುಖ್ಯಸ್ಥರಾಗಿದ್ದರು. ಕಾನ್‌, ವೆನಿಸ್‌ ಮತ್ತು ಲಂಡನ್‌ ನಗರಗಳಲ್ಲಿ ನಡೆದ ಚಲನಚಿತ್ರೋತ್ಸವಗಳಲ್ಲಿ ರವಿ ಶಂಕರ್‌ ಪ್ರಸಾದ್‌ ಭಾರತೀಯ ನಿಯೋಗದ ಮುಖ್ಯಸ್ಥರಾಗಿದ್ದರು.

2006ರ ಅಕ್ಟೋಬರ್‌ ತಿಂಗಳಲ್ಲಿ, ವಿಶ್ವಸಂಸ್ಥೆ (ಯುಎನ್‌) ಮಹಾ ಸಭೆ (ಜನರಲ್‌ ಅಸೆಂಬ್ಲಿ)ಯಲ್ಲಿ ರವಿ ಶಂಕರ್‌ ಪ್ರಸಾದ್‌ ಭಾರತವನ್ನು ಪ್ರತಿನಿಧಿಸಿದರು.

ಬಿಜೆಪಿಯ ವಕ್ತಾರರಾಗಿ

[ಬದಲಾಯಿಸಿ]

2006ರಲ್ಲಿ ರವಿ ಶಂಕರ್‌ ಪ್ರಸಾದ್‌ ಬಿಜೆಪಿಯ ರಾಷ್ಟ್ರೀಯ ವಕ್ತಾರರಾದರು. 2006ರ ಏಪ್ರಿಲ್‌ ತಿಂಗಳಲ್ಲಿ ಅವರು ಬಿಹಾರ್‌ನಿಂದ ಸಂಸತ್‌ನ ರಾಜ್ಯಸಭೆಗೆ ಪುನರಾಯ್ಕೆಯಾಗಿದ್ದಾರೆ. 2007ರಲ್ಲಿ ಅವರು ಬಿಜೆಪಿಯ ಪ್ರಮುಖ ರಾಷ್ಟ್ರೀಯ ವಕ್ತಾರರಾಗಿ ಪುನಃ ನೇಮಕಗೊಂಡರು. ವಿವಿಧ ವಿಚಾರಗಳಲ್ಲಿ ಪಕ್ಷದ ನೀತಿ-ನಿಲುವು ಸಿದ್ಧಪಡಿಸುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಮಂಡಲಿಯ ಸದಸ್ಯರಾಗಿ, ರವಿ ಶಂಕರ್‌ ಪ್ರಸಾದ್‌ ಸುಮಾರು ಹತ್ತು ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಹಲವು ವಿವಿಧ ಸಂಸದೀಯ ಸಮಿತಿಗಳ ಸದಸ್ಯರಾಗಿದ್ದಾರೆ. ಇತ್ತೀಚೆಗೆ, ಉತ್ತರಾಂಚಲ್‌ (ಉತ್ತರಾಖಂಡ್‌) ವಿಧಾನಸಭಾ ಚುನಾವಣೆಗಳಲ್ಲಿ ರವಿ ಶಂಕರ್‌ ಪ್ರಸಾದ್‌ ಪಕ್ಷದ ಮೇಲ್ವಿಚಾರಕರಾಗಿದ್ದರು. 2009ರಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರಗಳಲ್ಲಿ ರವಿ ಶಂಕರ್‌ ಪ್ರಸಾದ್‌ ಬಿಜೆಪಿಯ ಪರ ಮಾತನಾಡಿದರು. ಅವರು 'Let me tell you, my good friend' ಎಂದು ಆಗಾಗ್ಗೆ ಹೇಳುವುದು ವ್ಯಾಪಕ ಗಮನ ಸೆಳೆದಿದೆ.

ಅಲಂಕರಿಸಿದ ಹುದ್ದೆಗಳು

[ಬದಲಾಯಿಸಿ]
  • 1991ರಿಂದ 1995ರವರೆಗೆ ಬಿಜೆಪಿಯ ಯುವ ವಿಭಾಗ ಭಾರತೀಯ ಜನತಾ ಯುವ ಮೊರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರು, ಎರಡು ಅವಧಿಗಳ ಕಾಲ ಅಧ್ಯಕ್ಷರಾಗಿದ್ದರು.
  • 1995ರಿಂದ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರು.
  • 2000ರ ಏಪ್ರಿಲ್ ತಿಂಗಳಲ್ಲಿ ರಾಜ್ಯಸಭೆಗೆ ಚುನಾಯಿತರಾದರು.
  • ಮೇ 2000ದಿಂದ ಮೇ 2001ರ ವರೆಗೆ, ಪೆಟ್ರೊಲಿಯಮ್ ಮತ್ತು ರಾಸಾಯನಿಕಗಳ ಸಮಿತಿ, ಹಾಗೂ, ಹಣಕಾಸು ಮಂತ್ರಾಲಯದ ಸಲಹಾ ಸಮಿತಿಗಳ ಸದಸ್ಯರು.
  • 1 ಸೆಪ್ಟೆಂಬರ್‌ 2001ರಿಂದ 29 ಜನವರಿ 2003ರ ವರೆಗೆ, ಕಲ್ಲಿದ್ದಲು ಮತ್ತು ಗಣಿ ಮಂತ್ರಾಲಯದಲ್ಲಿ ರಾಜ್ಯ ಮಂತ್ರಿ.
  • 1 ಜುಲೈ 2002ರಿಂದ 29 ಜನವರಿ 2003ರ ವರೆಗೆ ಕಾನೂನು ಮತ್ತು ನ್ಯಾಯ ಮಂತ್ರಾಲಯದಲ್ಲಿ ರಾಜ್ಯ ಮಂತ್ರಿ (ಹೆಚ್ಚುವರಿ ಹುದ್ದೆ)
  • 29 ಜನವರಿ 2003ರಿಂದ ಮೇ 2004ರ ತನಕ, ಸೂಚನೆ ಮತ್ತು ಪ್ರಸಾರ ಮಂತ್ರಾಲಯದಲ್ಲಿ ರಾಜ್ಯ ಮಂತ್ರಿ (ಸ್ವತಂತ್ರ ಅಧಿಕಾರ)
  • ಮೇ 2000ದಿಂದ ಆಗಸ್ಟ್‌ 2001ರವರೆಗೆ ನಿಯಮಾವಳಿ ಸಮಿತಿಯ ಸದಸ್ಯರು
  • ಜುಲೈ 2004ರಿಂದ ಆಗಸ್ಟ್‌ 2006ರ ವರೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿಯ ಸದಸ್ಯರು.
  • ಸೆಪ್ಟೆಂಬರ್‌ 2004ರಿಂದ ಏಪ್ರಿಲ್‌ 2006ರ ವರೆಗೆ ಸಂಸದ್‌ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನಾ ಸಮಿತಿ ಸದಸ್ಯರು (ರಾಜ್ಯ ಸಭೆ)
  • ಅಕ್ಟೋಬರ್‌ 2004ರಿಂದ 2006ರ ವರೆಗೆ, ಹಣಕಾಸು ಮಂತ್ರಾಲಯದ ಸಲಹಾ ಸಮಿತಿಯ ಸದಸ್ಯರು.
  • ನವೆಂಬರ್‌ 2004ರಿಂದ, ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿಯಲ್ಲಿ ವಿಶ್ವವಿದ್ಯಾನಿಲಯ ಮತ್ತು ಉನ್ನತ ಶಿಕ್ಷಣಾ ಉಪಸಮಿತಿ ಸದಸ್ಯರು.
  • ಮಾರ್ಚ್ 2006ರಿಂದ ಬಿಜೆಪಿಯ ರಾಷ್ಟ್ರೀಯ ವಕ್ತಾರ
  • ಏಪ್ರಿಲ್‌ 2006ರಲ್ಲಿ ರಾಜ್ಯಸಭೆಗೆ ಪುನಃ ಚುನಾಯಿತರಾದರು.
  • ಆಗಸ್ಟ್‌ 2006ರಿಂದ ಮಾಹಿತಿ ತಂತ್ರಜ್ಞಾನ ಸಮಿತಿಯ ಸದಸ್ಯರು.
  • ಸೆಪ್ಟೆಂಬರ್‌ 2006ರಿಂದ ಸೌಲಭ್ಯ ಸಮಿತಿಯ ಸದಸ್ಯರು

ಉಲ್ಲೇಖಗಳು

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]