ಪಿ.ಗುರುರಾಜ ಭಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಪಿ.ಗುರುರಾಜ ಭಟ್'(1924-1978.) ಪಾದೂರು ಗುರುರಾಜ ಭಟ್ ಇವರು ಹೆಸರಾಂತ ಸಂಶೋಧಕರು,ಇತಿಹಾಸ ತಜ್ಞರು ಹಾಗೂ ಪ್ರಾಚ್ಯಶಾಸ್ತ್ರಜ್ಞರು. ಅಧ್ಯಾಪಕ, ಪ್ರಸಿದ್ಧ ಸಂಶೋಧಕ ಮತ್ತು ಸಾಹಿತಿ. ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲ್ಲೂಕಿನ ಪಾದೂರಿನಲ್ಲಿ 1924 ಜೂನ್ 15ರಂದು ಜನನ.

ಶಿಕ್ಷಣ[ಬದಲಾಯಿಸಿ]

ಕಾರ್ಕಳದ ಅತ್ತೂರು ಪ್ರಾಥಮಿಕ ಶಾಲೆ ಮತ್ತು ಮೂಡಬಿದರೆಯ ಜೈನ ಪ್ರೌಢಶಾಲೆಯಲ್ಲಿ ಅಧ್ಯಾಪಕವೃತ್ತಿ ಆರಂಭಿಸಿದ ಭಟ್ಟರು ವಿಧ್ಯಾಭ್ಯಾಸದ ಹಂತಗಳನ್ನೆಲ್ಲ ದಾಟಿದ್ದು ವೃತ್ತಿಯ ಜೊತೆಯಲ್ಲಿಯೇ 1952ರಲ್ಲಿ ಮದರಾಸು ವಿಶ್ವವಿದ್ಯಾಲಯದ ಬಿ.ಎ. ಪದವಿ, ಹಾಗೂ 1953ರಲ್ಲಿ ಶೈಕ್ಷಣಿಕ ತರಬೇತಿ ಪದವಿ, 1956ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಎಂ.ಎ. (ಇತಿಹಾಸ) ಪದವಿಗಳಿಸಿ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ನೇಮಕಗೊಂಡು ಅಲ್ಲಿ 11 ವರ್ಷಗಳ ಕಾಲ ತಮ್ಮ ಸೇವೆಸಲ್ಲಿಸಿದರು. 1967ರಲ್ಲಿ ಕಲ್ಯಾಣಪುರದಲ್ಲಿ ಮಿಲಾಗ್ರೆಸ್ ಕಾಲೇಜು ಆರಂಭವಾದಾಗ ಅಲ್ಲಿಯ ಆಹ್ವಾನ ಸ್ವೀಕರಿಸಿ ಆ ಕಾಲೇಜಿನ ಪ್ರಥಮ ಪ್ರಾಂಶುಪಾಲ ಹುದ್ದೆ ವಹಿಸಿಕೊಂಡರು. 1976ರಲ್ಲಿ ಹುದ್ದೆಯಿಂದ ಐಚ್ಛಿಕವಾಗಿ ನಿವೃತ್ತಿ ಹೊಂದಿದರು.

ಸಾಧನೆ[ಬದಲಾಯಿಸಿ]

ಇತಿಹಾಸ-ಸಂಸ್ಕøತಿಗಳ ಸಂಶೋಧನೆಗಳ ಕಡೆಗೆ 1960ರಿಂದಲೇ ಗುರುರಾಜ ಭಟ್ಟರ ಆಸಕ್ತಿ ಹರಿಯಲಾರಂಭಿಸಿತು. ತುಳುನಾಡಿನ ರಾಜಕೀಯ ಮತ್ತು ಸಂಸ್ಕøತಿ ಚರಿತ್ರೆ ಕ್ರಿ. ಶ. 600ರ ತನಕ (1968). ಈ ಗ್ರಂಥಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಪಿ.ಹೆಚ್.ಡಿ. ಪದವಿ ಇತ್ತಿದೆ. ಶಿಲ್ಪಗಳ ಶೈಲಿ, ಕಾಲಮಾನಗಳನ್ನು ಗುರುತಿಸುವಲ್ಲಿ ಇವರದು ವಿಶೇಷ ಪ್ರೌಢಿಮೆ. ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಸುಮಾರು 2000ಕ್ಕೂ ಮಿಕ್ಕಿ ದೇಗುಲಗಳನ್ನು ಸಂಶೋಧಿಸಿದ್ದಾರೆ. ಜಿಲ್ಲೆಯಲ್ಲಿ ಪ್ರಥಮವಾಗಿ ಬೃಹತ್ ಶಿಲಾ ಗೋರಿಗಳ ಅನ್ವೇಷಣೆ, ಕನ್ನಡದ ಪ್ರಾಚೀನತಮ ಬೆಳ್ಮಣ್ಣು ತಾಮ್ರ ಶಾಸನದ ಸಂಶೋಧನೆ ಹಾಗೂ 25ಕ್ಕೂ ಮಿಕ್ಕಿ ಅಪೂರ್ವ ಶಾಸನಗಳ ಸಂಶೋಧನೆ ನಡೆಸಿದ್ದಾರೆ. ನಾಡಿನ ಪತ್ರಿಕೆಗಳಲ್ಲಿ ಹಾಗೂ ನಿಯತ ಕಾಲಿಕೆಗಳಲ್ಲಿ 700ಕ್ಕೂ ಮಿಕ್ಕಿ ಇವರ ಲೇಖನಗಳು ಪ್ರಕಟಗೊಂಡಿವೆ. 1963ರಲ್ಲಿ ಪ್ರಕಟವಾದ ಇವರ ಪ್ರಥಮ 'ತುಳುನಾಡು ಗ್ರಂಥಕ್ಕೆ ದೇವರಾಜ ಬಹದ್ದೂರ್ ದತ್ತಿ ಬಹುಮಾನ ನೀಡಲಾಗಿದೆ. ದ್ವಿತೀಯ ಪ್ರಕಟಣೆಯಾದ 'ತುಳುನಾಡಿನ ಸ್ಥಾನಿಕರು ಉತ್ತಮ ಸಂಶೋಧನ ಕೃತಿ ಎಂಬ ಪ್ರಶಂಸೆಗೆ ಪಾತ್ರ. ಅನಂತರ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಅವಶೇಷಗಳ ಕ್ರಮಬದ್ಧ ವಿಂಗಡನೆ ಹಾಗೂ ಅವುಗಳ ಕುರಿತ ಆ್ಯನ್ಟಿಕ್ವಿಟೀಸ್ ಆಫ್ ಸೌತ್‍ಕೆನರ (ದಕ್ಷಿಣ ಕನ್ನಡದ ಪುರಾತತ್ವ) ಕೃತಿ 1968-69ರಲ್ಲಿ ಪ್ರಕಟವಾಯಿತು. ಗುರುರಾಜ ಭಟ್ಟರ ಅವಿರತ ಸಂಶೋಧನೆಗಳ ಮೇರುಕೃತಿ ತುಳುವ ಇತಿಹಾಸ ಮತ್ತು ಸಾಂಸ್ಕøತಿಕ ಅಧ್ಯಯನ ಪ್ರಾದೇಶಿಕ ಇತಿಹಾಸಕ್ಕೊಂದು ಅಪೂರ್ವ ಕೊಡುಗೆ. 1975ರಲ್ಲಿ ಪ್ರಕಟವಾದ ಈ ಗ್ರಂಥ 500ಕ್ಕೂ ಮಿಕ್ಕಿ ಪುಟಗಳ ಬರಹ ಹಾಗೂ 1000ಕ್ಕೂ ಮಿಕ್ಕಿ ಅಪೂರ್ವ ಛಾಯಾಚಿತ್ರಗಳನ್ನೊಳಗೊಂಡಿದೆ. ಇದು ಅವರ ಸ್ವಂತ ಪ್ರಕಟಣೆ.

ಪ್ರಶಸ್ತಿ[ಬದಲಾಯಿಸಿ]

ಭಟ್ಟರು ಮಣಿಪಾಲ ಶಿಕ್ಷಣ ಅಕಾಡೆಮಿಯ ಗೌರವ ಸದಸ್ಯತ್ವ, ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣಮಹೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರದ ಪುರಾತತ್ವ ಮತ್ತು ವಸ್ತುಸಂಗ್ರಾಹಾಲಯ ಇಲಾಖೆಯ ಸಲಹಾ ಸಮಿತಿಯ ಸದಸ್ಯರಾಗಿ ಸೇವೆಸಲ್ಲಿಸಿದ್ದರು ಭಾರತೀಯ ಜ್ಞಾನಪೀಠ ನಿಯೋಜಿತ ಸಂಶೋಧಕರಾಗಿ ದಕ್ಷಿಣ ಭಾರತದ ಜೈನ ಸ್ಮಾರಕಗಳ ಅನ್ವೇಷಣೆ ಮತ್ತು ಸಂಶೋಧಕರಾಗಿ ತೊಡಗಿದ್ದರು. ಭಟ್ಟರು 1978 ಆಗಸ್ಟ್ 27 ರಂದು ಆಕಸ್ಮಿಕವಾಗಿ ನಿಧನರಾದರು.

ಗ್ರಂಥಗಳು[ಬದಲಾಯಿಸಿ]

  • ತುಳುನಾಡಿನ ನಾಗಮಂಡಲ
  • ಸ್ಟಡೀಸ್ ಇನ್ ತುಳುವ ಹಿಸ್ಟರಿ ಅಂಡ್ ಕಲ್ವರ್
  • ಅಂಟಿಕ್ಯುಟಿ ಆಫ್ ಸೌತ್ ಕೆನರಾ ಮುಂತಾದವುಗಳು.