ವಿಷಯಕ್ಕೆ ಹೋಗು

ಗಂಡಮಕ್ ಕೌಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೨೬ ಮೇ ೧೮೭೯ರಂದು ಭಾರತದ ಬ್ರಿಟಿಷ್ ಸರ್ಕಾರದ ಸೇನಾ ಆಡಳಿತಗಾರನಾದ ಸರ್ ಲೂಯಿ ಕ್ಯಾವಗ್ನಾರಿಯೊಂದಿಗೆ (ಎಡದಿಂದ ಎರಡನೆಯವನು) ಅಫ಼್ಘಾನಿಸ್ತಾನದ ಮೊಹಮ್ಮದ್ ಯಾಕುಬ್ ಖಾನ್ (ಮಧ್ಯದಲ್ಲಿ).

ಗಂಡಮಕ್ ಕೌಲು ಎನ್ನುವುದು ಆಫ್ಘಾನಿಸ್ತಾನದ ಮೇಲೆ ತಮ್ಮ ಪ್ರಭಾವವನ್ನು ಸ್ಥಾಪಿಸುವುದಕ್ಕಾಗಿ ಬ್ರಿಟನ್ ರಷ್ಯಗಳಲ್ಲಿ ಎದ್ದ ಸ್ಪರ್ಧೆಯ ಫಲವಾಗಿ ಬ್ರಿಟಿಷರಿಗೂ ಆಫ್ಘಾನಿಸ್ತಾನಕ್ಕೂ ನಡುವೆ ಸಂಭವಿಸಿದ ಎರಡನೆಯ ಆಫ್ಘನ್ ಯುದ್ಧ ಒಂದು ನಿರ್ಣಾಯಕ ಘಟ್ಟ ಮುಟ್ಟಿದಾಗ ಏರ್ಪಟ್ಟ ಕೌಲು. ರಷ್ಯನರ ಚಿತಾವಣೆಯಿಂದಾಗಿ ಆಫ್ಘಾನಿಸ್ತಾನದ ಅಮೀರ ಬ್ರಿಟಿಷರೊಂದಿಗೆ ಯುದ್ಧ ಮಾಡುವ ಘಟ್ಟಕ್ಕೆ ಬಂದಿದ್ದ ಸಮಯದಲ್ಲಿ ರಷ್ಯನರಿಂದ ಆ ದೊರೆಗೆ ಸಹಾಯ ಬರಲಿಲ್ಲ. ಬ್ರಿಟಿಷರೊಂದಿಗೆ ಶಾಂತಿ ಮಾಡಿಕೊಳ್ಳಬೇಕೆಂದು ರಷ್ಯನರು ಕೊನೆ ಗಳಿಗೆಯಲ್ಲಿ ಸಲಹೆ ನೀಡಿದರು. ಬ್ರಿಟಿಷ್ ಪಡೆಗಳು ಆಫ್ಘಾನಿಸ್ತಾನದ ಮೇಲೆ ಆಕ್ರಮಣ ನಡೆಸಿದುವು (1878ರ ನವೆಂಬರ್ 20). ಕಾಂದಹಾರ್ ಬ್ರಿಟಿಷರ ವಶವಾಯಿತು. ಅಮೀರ್ ಷೇರ್ ಆಲಿ ತುರ್ಕಿಸ್ತಾನಕ್ಕೆ ಓಡಿ ಹೋದ. ಅವನ ಮಗ ಯಾಕೂಬ್ ಆಡಳಿತಸೂತ್ರ ವಹಿಸಿಕೊಂಡ. ಬ್ರಿಟಿಷರೊಂದಿಗೆ ಸಂಧಾನಕ್ಕೆ ಮುಂದಾದ. 1879ರ ಮೇ 26ರಂದು ಗಂಡಮಕ್ ಒಪ್ಪಂದವಾಯಿತು. ಈ ಒಪ್ಪಂದ ಒಬ್ಬ ಅಫ್ಘಾನ್ ಅಮೀರ ಸ್ವೀಕರಿಸಿದ ಅತ್ಯಂತ ಅವಮಾನಕಾರಿ ಒಪ್ಪಂದಗಳಲ್ಲಿ ಒಂದು ಎಂದು ಪರಿಗಣಿತವಾಯಿತು.[] ಇದರಿಂದ ಅಫ್ಘಾನ್ ಅಮೀರ ಮೂಲಭೂತವಾಗಿ ಬ್ರಿಟಿಷ್ ಸಾಮ್ರಾಜ್ಯದ ಸಾಮಂತನಾದನು.[]

ಈ ಕೌಲಿನ ಷರತ್ತುಗಳು ಒಟ್ಟಿನಲ್ಲಿ ಬ್ರಿಟಿಷರಿಗೆ ಅನುಕೂಲಕರವಾಗಿದ್ದವು. ಅವರ ಕೇಳಿಕೆಗಳೆಲ್ಲ ಪ್ರಾಪ್ತವಾಗಿದ್ದುವು. ಬ್ರಿಟಿಷ್ ರಾಜಪ್ರತಿನಿಧಿಯೊಬ್ಬ ಕಾಬೂಲಿನಲ್ಲಿ ಖಾಯಂ ಆಗಿ ಇರಲು ಅಮೀರ್ ಒಪ್ಪಿಕೊಂಡ. ಭಾರತದ ವೈಸ್‌ರಾಯಿಯ ಸಲಹೆಗೆ ಅನುಸಾರವಾಗಿ ತನ್ನ ದೇಶದ ವಿದೇಶಾಂಗ ವ್ಯವಹಾರ ನಡೆಸಲೂ ಅವನು ಒಪ್ಪಿದ. ಅಮೀರ ಆಫ್ಘಾನಿಸ್ತಾನಕ್ಕೆ ಸೇರಿದ್ದ ಕರ‍್ರಂ, ಪಿಶಿನ್ ಮತ್ತು ಸಿಬಿ ಜಿಲ್ಲೆಗಳನ್ನು ಬ್ರಿಟಿಷರಿಗೆ ಒಪ್ಪಿಸಿಕೊಟ್ಟ. ಯಾಕುಬನನ್ನು ಬ್ರಿಟಿಷರು ಆಫ್ಘಾನಿಸ್ತಾನದ ಅಮೀರನೆಂದು ಮಾನ್ಯ ಮಾಡಿದರಲ್ಲದೆ, ಆಫ್ಘಾನಿಸ್ತಾನದ ಮೇಲೆ ಬೇರೆ ಯಾವ ರಾಷ್ಟ್ರವಾದರೂ ಆಕ್ರಮಣ ಮಾಡಿದರೆ ಬ್ರಿಟಿಷರು ಆಫ್ಘಾನಿಸ್ತಾನಕ್ಕೆ ಸೈನ್ಯ ಮತ್ತು ಶಸ್ತ್ರಾಸ್ತ್ರ ಸಹಾಯ ನೀಡಲು ಒಪ್ಪಿದರು.

ಕೌಲಿಗೆ ಅನುಸಾರವಾಗಿ ಜುಲೈ 24ರಂದು ಕಾಬೂಲನ್ನು ತಲಪಿದ ಬ್ರಿಟಿಷ್ ನಿಯೋಗಿ ಕ್ಯಾವಗ್ನಾರಿಯನ್ನು ಅಲ್ಲಿಯ ಬಂಡಾಯಗಾರ ಸೈನಿಕರು ಕೊಲೆ ಮಾಡಿದರು. ಇದರಲ್ಲಿ ಅಮೀರನ ಕೈವಾಡವಿತ್ತೆ? ಇದ್ದರೆ ಎಷ್ಟರಮಟ್ಟಿಗೆ ಇತ್ತು?-ಎಂಬುದು ಸ್ವಷ್ಟವಿಲ್ಲ. ಕ್ಯಾವಗ್ನಾರಿ ಚಾತುರ್ಯದಿಂದ ವರ್ತಿಸಿರಲಿಲ್ಲವೆಂಬುದೂ ಅವನನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಅಮೀರ ಬ್ರಿಟಿಷರಿಗೆ ಸೂಚಿಸಿದ್ದನೆಂಬುದೂ ನಿಜ. ಅಂತೂ ಈ ಕೊಲೆಯಿಂದಾಗಿ ಕೌಲು ಮುರಿದುಬಿತ್ತು. ಮತ್ತೆ ಯುದ್ಧ ಮುಂದುವರಿದು ಆನಂತರ ಹಲವು ಘಟನೆಗಳಾದ ಮೇಲೆ ಅಲ್ಲಿ ಬ್ರಿಟಿಷರ ಸ್ಥಾನ ಭದ್ರವಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. M. H. Kakar, Afghanistan: A Study in International Political Developments, 1880-1896, Kabul, 1971, p. 12
  2. D. P. Singhal, India and Afghanistan: A Study in Diplomatic Relations, 1876-1907, New Delhi, 1982, p. 45

ಮೂಲಗಳು

[ಬದಲಾಯಿಸಿ]
  • Kakar, M. H. (1971). Afghanistan: A Study in International Political Developments, 1880-1896. Kabul.{{cite book}}: CS1 maint: location missing publisher (link)
  • Singhal, D. P. (1982). India and Afghanistan: A Study in Diplomatic Relations, 1876-1907. New Delhi.{{cite book}}: CS1 maint: location missing publisher (link)

ಹೊರಗಿನ ಕೊಂಡಿಗಳು

[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: