ಪಲೇಡಿಯಮ್
ಪಲೇಡಿಯಮ್ ಒಂದು ಲೋಹ ಮೂಲಧಾತು. ಇದು ಪ್ಲಾಟಿನಮ್ ಲೋಹಗಳ ಗುಂಪಿಗೆ ಸೇರಿದೆ. ಇದು ಮೃದು, ಹೊಳಪುಳ್ಳ ಬಿಳಿಬಣ್ಣದ ಲೋಹ. ಇದನ್ನು ಪ್ಲಾಟಿನಮ್‍ನ ಬದಲಿಗೆ ಹಲವಾರು ವಸ್ತುಗಳಲ್ಲಿ ಉಪಯೋಗಿಸುತ್ತಾರೆ. ಇದು ಹಲವಾರು ವೈದ್ಯಕೀಯ ಉಪಕರಣಗಳ ತಯಾರಿಯಲ್ಲಿ ಬಳಕೆಯಲ್ಲಿದೆ. ಇದನ್ನು ೧೮೦೩ರಲ್ಲಿ ಇಂಗ್ಲೆಂಡ್‍ನ ವಿಜ್ಞಾನಿ ವಿಲಿಯಮ್ ವೊಲ್ಲಾಸ್ಟನ್ ಎಂಬವರು ಕಂಡುಹಿಡಿದರು.
ಇದರ ಸಂಕೇತ Pd. ಆವರ್ತಕೋಷ್ಟಕದ ಎಂಟನೆಯ ಗುಂಪಿನಲ್ಲಿರುವ ಒಂಬತ್ತು ಧಾತುಗಳ ಪೈಕಿ ಒಂದು. ಈ ಧಾತುಗಳು ಅತ್ಯಲ್ಪ ಪ್ರಮಾಣದಲ್ಲಿ ದೊರೆಯುತ್ತವೆ. ಪೆಲೇಡಿಯಮ್ ಭೂಮಿಯಲ್ಲಿ ಶೇಕಡಾ 10-7 ರ ಪ್ರಮಾಣದಲ್ಲಿ ಸಿಕ್ಕುತ್ತದೆ. ಪರಮಾಣು ಸಂಖ್ಯೆ 46 ಮತ್ತು ಪರಮಾಣು ತೂಕ 106.7. ಎಲೆಕ್ಟ್ರಾನಿಕ್ ವಿನ್ಯಾಸ 1s2 2s2 2p6 3s2 3p6 3d10 4s2 4p6 4d8 5s2. ಈ ಲೋಹದ ಸಮಸ್ಥಾನಿಗಳು ಇಂತಿವೆ:
102Pd, 104Pd, 105Pd, 106Pd, 108Pd, 110Pd.
ದೊರಕುವಿಕೆ
[ಬದಲಾಯಿಸಿ]ಬ್ರಜಿಲ್ ಮತ್ತು ಉರಳ್ ಪರ್ವತ ಶ್ರೇಣಿಗಳಲ್ಲಿ ಅಷ್ಟಾಕೃತಿಯ ಹರಳುಗಳ ರೂಪದಲ್ಲಿ ದೊರೆಯುತ್ತದೆ. ಇದರ ಸಾಮಾನ್ಯ ಅದುರುಗಳಿವು: ಬ್ರಾಗೈಟ್ [Pt, Pd, Ni,]S, ಪೊಲಾರೈಟ್ [Pd, Hg],[೧] ಸ್ಟಿಬಿಯೊಪೆಲಡೈನೈಟ್ [Pd3 Sb], ಪೆಲೇಡಿಯಮ್ ಗೋಲ್ಡ್ ಅಥವಾ ಪೋರ್ಪೆಜೈಟ್.
ಇತಿಹಾಸ
[ಬದಲಾಯಿಸಿ]ಸಹಜ ಸ್ಥಿತಿಯಲ್ಲಿರುವ ಪ್ಲಾಟಿನಮ್ಮಿನಿಂದ ಎರಡು ಲೋಹಗಳನ್ನು ವಾಲ್ಟ್‌ಸನ್ ಎಂಬ ವಿಜ್ಞಾನಿ ಬೇರ್ಪಡಿಸಿದ (1803). ಒಂದಕ್ಕೆ ರೋಡಿಯಮ್ ಎಂದೂ ಇನ್ನೊಂದಕ್ಕೆ ಪೆಲೇಡಿಯಮ್ ಎಂದೂ ಹೆಸರಿಟ್ಟ. ವಿಜ್ಞಾನಿಗಳು ಪಲ್ಲಾಸ್ ಎಂಬ ಕ್ಷುದ್ರಗ್ರಹವನ್ನು ಆಗತಾನೇ ಆವಿಷ್ಕರಿಸಿದ್ದರಿಂದ ಅದರ ನೆನಪಿಗಾಗಿ ಈ ಹೊಸ ಲಾಹಕ್ಕೆ ಪೆಲೇಡಿಯಮ್ ಎಂದು ನಾಮಕರಿಸಿದರು.
ಸಂಸ್ಕರಣೆ
[ಬದಲಾಯಿಸಿ]ಇದನ್ನು ಎರಡು ವಿಧಾನಗಳಿಂದ ಸಂಸ್ಕರಿಸುತ್ತಾರೆ: ವಾಲ್ಟ್‌ಸನ್ ವಿಧಾನ; ಜಾನ್ಸನ್, ಲ್ಯಾಂಪಡಿಯಸ್ ಮತ್ತು ಕಾಕ್ಸ್ ವಿಧಾನ.
ವಾಲ್ಟ್‌ಸನ್ ವಿಧಾನ: ಸಹಜ ಸ್ಥಿತಿಯಲ್ಲಿರುವ ಪ್ಲಾಟಿನಮ್ಮನ್ನು ದ್ರವರಾಜದಲ್ಲಿ ವಿಲೀನವಾಗಿಸಿ ತರುವಾಯ ಅದನ್ನು ಆವಿಯಾಗಿಸುತ್ತಾರೆ. ಅದಕ್ಕೆ ಅಮೋನಿಯಮ್ ಕ್ಲೋರೈಡ್ ದ್ರಾವಣವನ್ನು ಸೇರಿಸಿದಾಗ ಅಮೋನಿಯಮ್ ಕ್ಲೋರೋಪ್ಲಾಟಿನೇಟ್ (NH4)2PtCl6 ಒತ್ತರ ಬರುತ್ತದೆ. ಅದನ್ನು ಶೋಧಿಸಿ ಬಂದ ದ್ರವವನ್ನು ಕಬ್ಬಿಣ ಅಥವಾ ಸತುವಿನಿಂದ ಆಕರ್ಷಣೆ ಮಾಡಿದಾಗ ಪುನಃ ಒತ್ತರ ಬರುತ್ತದೆ. ಆ ಒತ್ತರವನ್ನು ಸಾರರಿಕ್ತ ನೈಟ್ರಕ್ ಆಮ್ಲದಲ್ಲಿ ತೊಳೆದು ಬಳಿಕ ಹೈಡ್ರೊಕ್ಲೋರಿಕ್ ಆಮ್ಲ ಮತ್ತು ಪೊಟ್ಯಾಸಿಯಮ್ ನೈಟ್ರೇಟುಗಳ ಜೊತೆ ಜೀರ್ಣಗೊಳಿಸುತ್ತಾರೆ. ಬರುವ ದ್ರಾವಣದಲ್ಲಿ ರೋಡಿಯಮ್ ಮತ್ತು ಪೆಲೇಡಿಯಮ್ಮುಗಳು ಮಾತ್ರ ಉಳಿದಿರುತ್ತವೆ. ಈ ದ್ರಾವಣವನ್ನು ಆವಿಯಾಗಿಸಿದಾಗ ಪೊಟಾಸಿಯಮ್ ಕ್ಲೋರೈಡ್ (K2PdCl4) ಹರಳುಗಳು ಉಳಿಯುತ್ತವೆ. ಇವನ್ನು ಕಾಸ್ಟಿಕ್ ಪೊಟ್ಯಾಷ್ ಜೊತೆ ಸೇರಿಸಿದಾಗ ಪೆಲೇಡಿಯಮ್ ಆಕ್ಸೈಡ್ ಬರುತ್ತದೆ. ಇದನ್ನು ಹೈಡ್ರೋಜನ್ ಪ್ರವಾಹದಲ್ಲಿ ಅತಿ ಹೆಚ್ಚಿನ ಉಷ್ಣತೆಗೆ ಜ್ವಲಿಸಿದಾಗ ಪೆಲೇಡಿಯಮ್ ಉತ್ಪತ್ತಿಯಾಗುತ್ತದೆ.
ಜಾನ್ಸನ್, ಲ್ಯಾಂಪಡಿಯಸ್ ಮತ್ತು ಕಾಕ್ಸ್ ವಿಧಾನ: ಈ ವಿಜ್ಞಾನಿಗಳು ಪೆಲೇಡಿಯಮ್ಮನ್ನು ಪೆಲೇಡಿಯಮ್ ಗೋಲ್ಡ್ ಅದುರಿನಿಂದ ಸಂಸ್ಕರಿಸಿದರು. ಅದನ್ನು ಪೊಟ್ಯಾಸಿಯಮ್ ನೈಟ್ರೇಟ್ ಮತ್ತು ಬೆಳ್ಳಿಯ ಜೊತೆ ಒಂದುಗೂಡಿಸಿ ನೈಟ್ರಿಕ್ ಆಮ್ಲದ ಜೊತೆ ಜೀರ್ಣಗೊಳಿಸಿ ಶೋಧಿಸಿದಾಗ ಬೆಳ್ಳಿ, ಪೆಲೇಡಿಯಮ್ ಮತ್ತು ತಾಮ್ರದ ಲೋಹಗಳು ದ್ರಾವಣದಲ್ಲಿ ಉಳಿಯುತ್ತವೆ. ಇದಕ್ಕೆ ಹೈಡ್ರೊಕ್ಲೋರಿಕ್ ಆಮ್ಲವನ್ನು ಬೆರೆಸಿ ಬೆಳ್ಳಿಯನ್ನು ಬೇರ್ಪಡಿಸುತ್ತಾರೆ. ಉಳಿದ ದ್ರಾವಣವನ್ನು ಸತುವು ಮತ್ತು ಹೈಡ್ರೊಕ್ಲೋರಿಕ್ ಆಮ್ಲಗಳ ಜೊತೆ ಆಕರ್ಷಿಸುತ್ತಾರೆ. ಈ ಆಕರ್ಷಣದಿಂದ ಪೆಲೇಡಿಯಮ್ ಮತ್ತು ತಾಮ್ರ ಕಪ್ಪು ಪುಡಿಯಾಗಿ ಉಳಿಯುತ್ತವೆ. ಇವನ್ನು ನೈಟ್ರಿಕ್ ಆಮ್ಲದಲ್ಲಿ ವಿಲೀನಿಸಿ ಬಂದ ದ್ರಾವಣಕ್ಕೆ ಅಮೋನಿಯ ದ್ರಾವಣವನ್ನು ಸೇರುಸುತ್ತಾರೆ. ಇದನ್ನು ಅಧಿಕ ಗಾತ್ರ ಹೈಡ್ರೊಕ್ಲೋರಿಕ್ ಆಮ್ಲದ ಜೊತೆ ಸೇರಿಸಿದಾಗ ಪೆಲಡಸ್ ಡೈ ಅಮೈನೊ ಕ್ಲೋರೈಡ್ [Pd(NH3)2Cl2] ಬರುತ್ತದೆ. ಇದನ್ನು ಹೈಡ್ರೋಜನ್ ಪ್ರವಾಹದಲ್ಲಿ ರಾಸಾಯನಿಕ ಕ್ರಿಯೆ ಉತ್ಪತ್ತಿಯಾಗುವವರೆಗೂ ಕಾಸಿದಾಗ ಪೆಲೇಡಿಯಮ್ ಲೋಹ ಬರುತ್ತದೆ.
ರೂಪಗಳು
[ಬದಲಾಯಿಸಿ]ಪೆಲೇಡಿಯಮ್ಮಿನ ರೂಪಗಳು ಹಲವಾರು-ಲೋಹ ಪೆಲೇಡಿಯಮ್, ಸ್ಫಟಿಕಾಕೃತಿಯ ಪೆಲೇಡಿಯಮ್, ಸ್ಪಂಜಿನಂಥ ಪೆಲೇಡಿಯಮ್, ಪೆಲೇಡಿಯಮ್ ಬ್ಲ್ಯಾಕ್, ಪೆಲಡೈಜ್ಡ್‌ಕಲ್ನಾರು, ಸತುವು ಪೆಲೇಡಿಯಮ್, ಯುಗ್ಮ ಮತ್ತು ಕಲಿಲ (ಅಂಟು ವಜ್ರ) ಪೆಲೇಡಿಯಮ್. ಈ ಹಲವಾರು ರೂಪಗಳನ್ನು ಬೇರೆ ಬೇರೆ ವಿಧಾನಗಳಿಂದ ತಯಾರಿಸುತ್ತಾರೆ.
ಪೆಲೇಡಿಯಮ್ ಬೇರೆ ಬೇರೆ ಲೋಹಗಳ ಜೊತೆ ಸೇರಿ ಮಿಶ್ರ ಲೋಹಗಳನ್ನು ಕೊಡುತ್ತದೆ: ಅವು ಸೋಡಿಯಮ್-ಪೆಲೇಡಿಯಮ್ ಮಿಶ್ರಲೋಹ, ಲಿಥಿಯಮ್ ಪೆಲೇಡಿಯಮ್ ಮಿಶ್ರ ಲೋಹ, ತಾಮ್ರ-ಪೆಲೇಡಿಯಮ್ ಮಿಶ್ರ ಲೋಹ, ಬೆಳ್ಳಿ ಪೆಲೇಡಿಯಮ್ ಮಿಶ್ರ ಲೋಹ, ಚಿನ್ನ-ಪೆಲೇಡಿಯಮ್ ಮಿಶ್ರ ಲೋಹ, ಕ್ಯಾಡ್ಮಿಯಮ್-ಪೆಲೇಡಿಯಮ್ ಮಿಶ್ರ ಲೋಹ.
ಉಪಯೋಗಗಳು
[ಬದಲಾಯಿಸಿ]ಪೆಲೇಡಿಯಮ್ ಲೋಹಕ್ಕೆ ದಂತ ವೈದ್ಯದಲ್ಲಿ ಉಪಯೋಗವಿದೆ.[೨][೩] ಗಡಿಯಾರಗಳ ಸ್ಪ್ರಿಂಗುಗಳ ಮತ್ತು ಶಾಶ್ವತ ದರ್ಪಣಗಳ ತಯಾರಿಕೆಯಲ್ಲಿ ಇದು ಬೇಕಾಗುತ್ತದೆ. ಪಲೇಡಿಯಮ್-ಚಿನ್ನ ಮಿಶ್ರ ಲೋಹದ ಒಡವೆಗಳುಂಟು. ರೋಧ ತಂತಿಗಳ ತಯಾರಿಕೆಯಲ್ಲಿ, ವಿದ್ಯುತ್ ಲೇಪನ ಮಾಡುವುದರಲ್ಲಿ, ಕಿಡಿ ಬಿರುಡೆಗಳ ತಯಾರಿಕೆಯಲ್ಲಿ ಮತ್ತು ಹೈಡ್ರೋಜನ್ನನ್ನು ಅನಿಲ ಮಿಶ್ರಣಗಳಿಂದ ಬೇರ್ಪಡಿಸಿ ಶುಷ್ಕಗೊಳಿಸುವುದರಲ್ಲಿ ಕೂಡ ಪೆಲೇಡಿಯಮ್ಮಿನ ಉಪಯೋಗವಿದೆ.[೪]
ಉಲ್ಲೇಖಗಳು
[ಬದಲಾಯಿಸಿ]- ↑ Genkin, A. D.; Evstigneeva, T. L. (1986). "Associations of platinum- group minerals of the Norilsk copper-nickel sulfide ores". Economic Geology. 81 (5): 1203–1212. doi:10.2113/gsecongeo.81.5.1203.
- ↑ "Palladium". United Nations Conference on Trade and Development. Archived from the original on 6 December 2006. Retrieved 5 February 2007.
- ↑ Rushforth, Roy (2004). "Palladium in Restorative Dentistry: Superior Physical Properties make Palladium an Ideal Dental Metal". Platinum Metals Review. 48 (1). Archived from the original on 2015-09-24. Retrieved 2022-09-19.
- ↑ Fleischmann, M; Pons S; Hawkins M (1989). "Electrochemically induced nuclear fusion of deuterium". J. Electroanal. Chem. 261 (2): 301. doi:10.1016/0022-0728(89)80006-3.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Palladium at The Periodic Table of Videos (University of Nottingham)
- Current and Historical Palladium Price
- Special Market Report on Palladium and Precious Metals
- . Encyclopædia Britannica. Vol. 20 (11th ed.). 1911. pp. 636–637.
{{cite encyclopedia}}
: Cite has empty unknown parameters:|separator=
and|HIDE_PARAMETER=
(help)