ವಿಷಯಕ್ಕೆ ಹೋಗು

ಬೆಣ್ಣೆ ದೋಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಾವಣಗೆರೆ ಬೆಣ್ಣೆ ದೋಸೆ
ಮೂಲ
ಪರ್ಯಾಯ ಹೆಸರು(ಗಳು)ಬೆಣ್ಣೆ ದೋಸೆ
ಮೂಲ ಸ್ಥಳಭಾರತ
ಪ್ರಾಂತ್ಯ ಅಥವಾ ರಾಜ್ಯಕರ್ನಾಟಕ
ವಿವರಗಳು
ಮುಖ್ಯ ಘಟಕಾಂಶ(ಗಳು)ಅಕ್ಕಿಯ ಹಿಟ್ಟು, ಬೆಣ್ಣೆ


ಕಾವಲಿಯಲ್ಲಿ ಬೆಣ್ಣೆ ದೋಸೆ ತಯಾರಿಸುವಿಕೆ

ಬೆಣ್ಣೆ ದೋಸೆಯು ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿ ಪ್ರಸಿಧ್ಧಿ ಹೊಂದಿದೆ. ದಾವಣಗೆರೆ ಬೆಣ್ಣೆ ದೋಸೆ ಅಥವಾ ಬೆಣ್ಣೆ ದೋಸೆ ಒಂದು ರೀತಿಯ ದೋಸೆಯಾಗಿದ್ದು ಅದರ ಮೂಲವು ಕರ್ನಾಟಕದ ದಾವಣಗೆರೆ ಜಿಲ್ಲೆಯಾಗಿದೆ. ದಾವಣಗೆರೆಯಲ್ಲಿರುವ ಮಂಡಕ್ಕಿ ಭಟ್ಟಿ, ಹಾಗು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಿಗುವ ಬೆಣ್ಣೆ ದಾವಣಗೆರೆಯಲ್ಲಿ ಈ ಉದ್ಯಮ ಬೆಳೆಯುವುದಕ್ಕೆ ಮುಖ್ಯ ಕಾರಣ. ಸಾಮಾನ್ಯ ದೋಸೆಯನ್ನು ತಯಾರಿಸುವಾಗ ಹೆಚ್ಚಿನ ಪ್ರಮಾಣದ ಬೆಣ್ಣೆಯನ್ನು ಸೇರಿಸುವ ಮೂಲಕ ಮತ್ತು ತೆಂಗಿನಕಾಯಿಯ ಚಟ್ನಿಯೊಂದಿಗೆ ಈ ಬೆಣ್ಣೆ ದೋಸೆಯನ್ನು ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಅದರ ಹಿಟ್ಟನ್ನು ಅಕ್ಕಿ, ಉದ್ದಿನ ಬೇಳೆ, ಮಂಡಕ್ಕಿ ಇತ್ಯಾದಿಗಳಿಂದ ತಯಾರಿಸಿ ಆ ಮಿಶ್ರಣದಿಂದ ಕಾವಲಿಯಲ್ಲಿ ಬೆಣ್ಣೆ ದೋಸೆ ಮಾಡಲಾಗುತ್ತದೆ. ಇದು ಮಸಾಲೆ ದೋಸೆ ಅಥವಾ ಸೆಟ್ ದೋಸೆಗೆ ಹೋಲುತ್ತದೆ ಆದರೆ ಗಾತ್ರದಲ್ಲಿ ಚಿಕ್ಕದಾಗಿದೆ, ಅತಿ ಹೆಚ್ಚಿನ ಬೆಣ್ಣೆ ಮತ್ತು ಅಕ್ಕಿಯ ಹಿಟ್ಟಿನಿಂದ ತಯಾರಿಸಲಾಗುತ್ತದೆ. ದೋಸೆಯು ತಯಾರಾದ ನಂತರದಲ್ಲಿ ಆ ದೋಸೆಯ ಮೇಲೆ ಬೆಣ್ಣೆಯನ್ನು ಹಾಕಿ ಜನರಿಗೆ ನೀಡಲಾಗುತ್ತದೆ. ಇದು ಖಾದ್ಯವನ್ನು ಸುವಾಸನೆ ಹಾಗೂ ಪರಿಮಳ ಎರಡರಲ್ಲೂ ಆಕರ್ಷಿಸುತ್ತದೆ.[]

[][][]

ಬೆಣ್ಣೆ ದೋಸೆಯ ಕೆಲವು ರೂಪಗಳು

[ಬದಲಾಯಿಸಿ]
  • ಬೆಣ್ಣೆ ಮಸಾಲೆ ದೋಸೆ
  • ಬೆಣ್ಣೆ ಓಪನ್ ದೋಸೆ

ಇತಿಹಾಸ

[ಬದಲಾಯಿಸಿ]
ಬೆಣ್ಣೆ ಮಸಾಲೆ ದೋಸೆ

ದಾವಣಗೆರೆ ಬೆಣ್ಣೆ ದೋಸೆಗೆ ೧೯೨೮ ರಿಂದ ಸ್ವಾರಸ್ಯಕರವಾದ ಇತಿಹಾಸವಿದೆ. ಚೆನ್ನಮ್ಮ ಎಂಬ ಮಹಿಳೆ ತನ್ನ ಮಕ್ಕಳೊಂದಿಗೆ ದಾವಣಗೆರೆಗೆ ವಲಸೆ ಬಂದು ತನ್ನದೇ ಆದ ವಿಶಿಷ್ಟ ಪಾಕವಿಧಾನದೊಂದಿಗೆ ದೋಸೆ, ಚಟ್ನಿ ಮತ್ತು ಆಲೂಗಡ್ಡೆ ಪಲ್ಯವನ್ನು ತಯಾರಿಸಲು ಪ್ರಾರಂಭಿಸಿದರು. ಅವರು ವಸಂತ ಟಾಕೀಸ್ ಬಳಿಯ ಸವಲಗಿ ನಾಟಕ ಥಿಯೇಟರ್ ಮುಂದೆ ತನ್ನ ಪುಟ್ಟ ಉಪಹಾರ ಗೃಹವನ್ನು ಪ್ರಾರಂಭಿಸಿದರು. ದಾವಣಗೆರೆಯಲ್ಲಿ ಇದು ತನ್ನ ರುಚಿಗೆ ಜನಪ್ರಿಯವಾಯಿತು. ಆರಂಭದಲ್ಲಿ ಚೆನ್ನಮ್ಮ ರಾಗಿ ಹಿಟ್ಟಿನೊಂದಿಗೆ ದೋಸೆಯನ್ನು ತಯಾರಿಸುತ್ತಿದ್ದರು. ನಂತರ ೧೯೩೮ ರ ವೇಳೆಗೆ ಅವರ ಮಕ್ಕಳು ಅಕ್ಕಿ ಹಿಟ್ಟು, ಮಂಡಕ್ಕಿ, ಉದ್ದಿನ ಬೇಳೆ, ಬೆಣ್ಣೆಯೊಂದಿಗೆ ದೋಸೆಯನ್ನು ತಯಾರಿಸಲು ಪ್ರಾರಂಭಿಸಿದರು. ಇದು ಸ್ಥಳೀಯರಲ್ಲಿ ಬಹಳ ಬೇಗ ಜನಪ್ರಿಯವಾಯಿತು.ಇದನ್ನು ಚೆನ್ನಮ್ಮನವರ ಇಬ್ಬರು ಪುತ್ರರಾದ ಶಾಂತಪ್ಪ ಮತ್ತು ಮಹದೇವಪ್ಪ ನಡೆಸುತ್ತಿದ್ದರು. ಇಬ್ಬರೂ ತಮ್ಮದೇ ಆದ ಅಂಗಡಿಗಳನ್ನು ತೆರೆದರು. ಶಾಂತಪ್ಪ ಅವರು ೧೯೯೪ ರಲ್ಲಿ "ಶಾಂತಪ್ಪ ಬೆಣ್ಣೆ ದೋಸೆ ಹೋಟೆಲ್" ಎಂಬ ಹೆಸರಿನಲ್ಲಿ ತಮ್ಮದೇ ಆದ ಉಪಹಾರ ಗೃಹವನ್ನು ತೆರೆದರು ಮತ್ತು ಅದು ದಾವಣಗೆರೆಯ ಅತ್ಯಂತ ಹಳೆಯ ಬೆಣ್ಣೆ ದೋಸೆ ತಿನಿಸು ಅಂಗಡಿ ಆಗಿತ್ತು. ಇದು ದಾವಣಗೆರೆಯ ಗಡಿಯಾರ ಗೋಪುರದ ಹತ್ತಿರವಿದೆ. ಇದನ್ನು ಪ್ರಸ್ತುತ ಅವರ ಮಗ ಗಣೇಶ್ ನಡೆಸುತ್ತಿದ್ದಾರೆ. ಮಹದೇವಪ್ಪ ಅವರು ವಸಂತ ಥಿಯೇಟರ್ (ವಿ.ಸೂ:ಇವತ್ತಿಗೆ ಇಲ್ಲ) ಬಳಿ ತಮ್ಮ ಉಪಹಾರ ಗೃಹವನ್ನು ತೆರೆದರು. ಅವರ ಹಿರಿಯ ಮಗ ರವಿ ಚರ್ಚ್ ರಸ್ತೆಯಲ್ಲಿ "ರವಿ ಬೆಣ್ಣೆ ದೋಸೆ ಹೋಟೆಲ್" ಎಂಬ ಹೋಟೆಲ್ ಅನ್ನು ಹೊಂದಿದ್ದಾರೆ.[] ಅವರ ಕಿರಿಯ ಮಗ ವಿಜಿಯು "ದಂತ ಕಾಲೇಜು" ರಸ್ತೆಯಲ್ಲಿ ತನ್ನದೇ ಆದ "ವಿಜ್ಜಿ ಬೆಣ್ಣೆ ದೋಸೆ" ಹೋಟೆಲ್ ಅನ್ನು ಹೊಂದಿದ್ದಾರೆ. ಇವುಗಳ ಹೊರತಾಗಿ,ದಾವಣಗೆರೆಯಲ್ಲಿ ಬೆಣ್ಣೆ ದೋಸೆಯನ್ನು ನೀಡುವ ಅನೇಕ ಹೋಟೆಲ್‍ಗಳಿವೆ. ಅವುಗಳಲ್ಲಿ ಜನಪ್ರಿಯವಾದವುಗಳು:

  • ಶ್ರೀ.ಗುರು ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್
  • ಗಾಯತ್ರಿ ಬೆಣ್ಣೆ ದೋಸೆ ಹೋಟೆಲ್
  • ವಸಂತ ಬೆಣ್ಣೆ ದೋಸೆ ಹೋಟೆಲ್ ಇತ್ಯಾದಿ.

ಫೋಟೋಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Davanagere Benne Dosa-Aayis recipes
  2. The Hindu
  3. Preparation
  4. Butter Dosa
  5. "Ravi Benne Dosa Hotel · 619/2, PJ Extension, Church Rd, Prince Jayachamaraja Wodeyar, Davanagere, Karnataka 577002, India"