ವಿಷಯಕ್ಕೆ ಹೋಗು

ಮಂಡಕ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆಂಗಳೂರಿನ ಅಲಸೂರು ಮಾರ್ಕೆಟ್‌ನಲ್ಲಿ ಮಾರಾಟಕ್ಕಿಡಲಾದ ಮಂಡಕ್ಕಿ.

ಮಂಡಕ್ಕಿ ಬಟ್ಟಿ

[ಬದಲಾಯಿಸಿ]

ಮಂಡಕ್ಕಿಯು ಅಥವಾ 'ಪುರಿ'ಯು ಬೇಯಿಸಿದ ಭತ್ತದಿಂದ ತಯಾರಾದ ಅಕ್ಕಿಯಿಂದ ತಯಾರಿಸಲಾದ ಒಂದು ಬಗೆಯ 'ಉಬ್ಬಿಸಲಾದ ಖಾದ್ಯ ಧಾನ್ಯ; ಸಾಮಾನ್ಯವಾಗಿ ಅಧಿಕ ಒತ್ತಡದಿಂದ ಉಬ್ಬುತ್ತದೆ.ಉರಿಯುವ ಒಲೆಯಮೇಲೆ ಇಟ್ಟ ದೊಡ್ಡ ಬಾಣಲಿಯಲ್ಲಿ ಎರಡು ಬೊಗಸೆಯಷ್ಟು ಬೇಯಿಸಿದ ಭತ್ತದಿಂದ ತಯಾರಿಸಿದ ಅಕ್ಕಿಯನ್ನು ಹಾಕಿ, ಅದರ (ಬಾಣಲೆಯ) ತಳದಲ್ಲಿ ಸೀದುಹೋಗದಂತೆ ಸಾಕಷ್ಟು ಮರಳನ್ನು ಹಾಕಿಕೊಂಡು ಅಧಿಕ ಶಾಖದಲ್ಲಿ ಹುರಿಯುತ್ತಾರೆ. ಆಗ ಬೇಯಿಸಿದ (ಬತ್ತವು ಒಡೆದು) ಅಕ್ಕಿಯು ಉಬ್ಬಿದ ಹಗರವಾದ ಬಿಸಿ ಬಿಸಿ- ಗರಿ ಗರಿಯಾದ ಮಂಡಕ್ಕಿ ಹೊರಬರುತ್ತದೆ.(ಸಿಪ್ಪೆ ಅಥವಾ ಭತ್ತದ ಹೊಟ್ಟನ್ನು ಬೇರೆ ಮಾಡುತ್ತಾರೆ).ಆ ಮಂಡಕ್ಕಿಯನ್ನು ತೇವಾಂಶ ಸೋಕದಂತೆ ಚೀಲ ತುಂಬಿ ಮಾರುತ್ತಾರೆ. ಹೀಗೆ ಮಂಡಕ್ಕಿ ತಯಾರಿಸುವ ಕೈಗಾರಿಕೆಗೆ "ಮಂಡಕ್ಕಿ ಬಟ್ಟಿ" "ಕೈ ಬಟ್ಟಿ" ಎನ್ನುತ್ತಾರೆ. (ಹೀಗೆ ತಯಾರಿಸಲಾಗುತ್ತದಾದರೂ ತಯಾರಿಕೆಯ ವಿಧಾನ ವ್ಯಾಪಕವಾಗಿ ಬದಲಾಗುತ್ತದೆ.) ಎಲ್ಲೆಡೆ ಮಂಡಕ್ಕಿಯನ್ನು ಲಘು ಆಹಾರವಾಗಿ ಮತ್ತು ಉಪಾಹಾರ/ ತಿಂಡಿಗಳಲ್ಲಿ ಬಳಸಲಾಗುತ್ತದೆ, ಮತ್ತು ವಿಶ್ವದ ಕೆಲವು ಭಾಗಗಳಲ್ಲಿ ಒಂದು ಜನಪ್ರಿಯ ರಸ್ತೆಬದಿಯ ಆಹಾರವಾಗಿದೆ. ಅದು ಭಾರತದ ಒಂದು ಜನಪ್ರಿಯ ಚಾಟ್ ತಿನಿಸಾದ ಭೇಲ್ ಪುರಿಯ ಒಂದು ಭಾಗವಾಗಿದೆ.[]

ಮಂಡಕ್ಕಿ ಉತ್ಪಾದಿಸುವ ಆಧುನಿಕ ಕೈಗಾರಿಕೆ ಘಟಕ

[ಬದಲಾಯಿಸಿ]
  • ನಾಲ್ಕು ದಶಕಗಳ ಹಿಂದೆ ಕೊಪ್ಪಳದಲ್ಲಿ ಟೈರ್‌ ಸುಟ್ಟು ಹೊಗೆ ಕಕ್ಕುತ್ತಾ ಮಂಡಕ್ಕಿ ಸಿದ್ಧಪಡಿಸುತ್ತಿದ್ದ ಸುಮಾರು 250ರಷ್ಟು ಕೈಬಟ್ಟಿಗಳಿದ್ದವು. ಈಗಲೂ ಕೊಪ್ಪಳದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮಂಡಕ್ಕಿ ತಯಾರಿಸುವವರಿದ್ದಾರೆ. ಹೀಗೆ ತಯಾರಾಗುತ್ತಿದ್ದ ಮಂಡಕ್ಕಿಯನ್ನು ತಲೆಮೇಲೆ ಹೊತ್ತು ಊರೂರು ಸುತ್ತಾಡಿ ಮಾರಾಟ ಮಾಡಲಾಗುತ್ತಿತ್ತು. ವಾರ್ಷಿಕ ವಹಿವಾಟು ರೂ ೫೦ ಕೋಟಿಗೂ ಹೆಚ್ಚು ಇತ್ತು. ನೂರಾರು ಕುಟುಂಬಗಳು ಈ ಮಂಡಕ್ಕಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದವು.
  • ದಕ್ಷಿಣ ಭಾರತದ ಎಲ್ಲೆಡೆ ಇದೇಬಗೆಯ ಕೈ ಬಟ್ಟಿಗಳಿದ್ದವು. ಆಧುನಿಕ ಜೀವನ ಕ್ರಮ, ಅತಿಯಾದ ಭತ್ತದ ಧಾರಣೆ, ಖುಲಿಯಾಳುಗಳ ಅಭಾವ ಮತ್ತು ಕೆಲಸದವರ ಸಂಬಳ ಏರಿಕೆ ಇವುಗಳಿಂದ ಅದರ ಲಾಭಾಂಶ ಕಡಿಮೆಯಾಗಿ, ಈ ಸಣ್ಣ ಕೈಗಾರಿಕೆ ಮೂಲೆಗುಂಪಾಗಿದೆ.
  • ಈಗ ಕಾಲ ಬದಲಾಗಿದೆ. ಭತ್ತದ ಬೆಲೆ ಗಗನಕ್ಕೇರಿದೆ. ಕಾರ್ಮಿಕರ ಕೊರತೆ ಎದುರಾಗಿದೆ. ಪರಿಣಾಮ ಮಂಡಕ್ಕಿ ತಯಾರಿಕೆ ಮತ್ತು ಮಾರಾಟ ವಹಿವಾಟು ಸಂಕಷ್ಟದಲ್ಲಿದೆ. ಹೀಗಾಗಿ ನೂರಕ್ಕೂ ಹೆಚ್ಚು ಕೈಬಟ್ಟಿಗಳು ಬಾಗಿಲು ಮುಚ್ಚಿದವು.
  • ಗಿರ್‌ಮಿಟ್‌, ಚುರುಮುರಿ, ಒಗ್ಗರಣೆ-ಮಂಡಕ್ಕಿ, ಮಸಾಲೆ ಮಂಡಕ್ಕಿ-.. ಇವು ಪ್ರಸಿದ್ಧ ; ಅದರಲ್ಲೂ ನೆನಪಾಗುವುದು ಉತ್ತರ ಕರ್ನಾಟಕ ಭಾಗದಲ್ಲಿ ಸರ್ವೇಸಾಮಾನ್ಯವಾದ ಸಂಜೆಯ (ಕೆಲವೊಮ್ಮೆ ಬೆಳಗಿನ) ಉಪಾಹಾರ.
  • ಮಂಡಕ್ಕಿ ತಯಾರಿಕೆಗೆ ದಾವಣಗೆರೆ ಬಿಟ್ಟರೆ ಕೊಪ್ಪಳ ಹೆಸರುವಾಸಿ. ಅದರಲ್ಲೂ ಕೊಪ್ಪಳದ ಮಂಡಕ್ಕಿಗೆ (ಮಂಡಾಳು) ವಿಶೇಷ ಬೇಡಿಕೆ. ಬಟ್ಟಿಯಲ್ಲಿ ಹುರಿದು ತಯಾರಿಸುತ್ತಿದ್ದ ಮಂಡಕ್ಕಿಗೆ ಈಗ ಆಧುನಿಕ ಸ್ಪರ್ಶ ಬಂದಿದೆ.
  • ಇದೇ ಕೈಬಟ್ಟಿಯಲ್ಲಿ ತಯಾರಾಗುತ್ತಿದ್ದ ಮಂಡಕ್ಕಿಯನ್ನು ಹೊತ್ತು ವ್ಯಾಪಾರ ಮಾಡುತ್ತಿದ್ದ ಕೊಪ್ಪಳ ಜಿಲ್ಲೆ ಕುಕನೂರಿನ ಶಹಾಬುದ್ದೀನ್‌ ಸಾಬ್‌ ನೂರ್‌ಪಾಷಾ ಮತ್ತು ಸಹೋದರರು ಧೈರ್ಯ ಮಾಡಿ ತಾವೇ ದೊಡ್ಡಮಟ್ಟದಲ್ಲಿ ಮಂಡಕ್ಕಿ ತಯಾರಿಸಲು ಮುಂದಾದರು. ಕೇವಲ ಪಿಯುಸಿ ಕಲಿತಿದ್ದ ಶಹಾಬುದ್ದೀನ್‌ ಸಾಬ್‌, ಸಹೋದರರ ಪೈಕಿ ಹಿರಿಯರು. ಅವರ ನೇತೃತ್ವದಲ್ಲಿ ಕೊಪ್ಪಳ ನಗರದಿಂದ ಸುಮಾರು ಏಳು ಕಿ.ಮೀ ದೂರದ ಚಿಲವಾಡಗಿ ಗ್ರಾಮದಲ್ಲಿ ಹುಟ್ಟಿಕೊಂಡ ‘ಜನತಾ ಇಂಡಸ್ಟ್ರೀಸ್‌’ ಈಗ ಮಂಡಕ್ಕಿ ಉತ್ಪಾದಿಸುವ ಕೈಗಾರಿಕೆಯಾಗಿ ಬೆಳೆದಿದೆ. ಶಹಾಬುದ್ದೀನ್‌ ಮತ್ತು ಸಹೋದರರು ಈಗ ಮಂಡಕ್ಕಿ ಉದ್ಯಮಿಗಳು ಎನಿಸಿಕೊಂಡಿದ್ದಾರೆ. ಅಂದಾಜು ರೂ ೧.೫೦ ಕೋಟಿ ಬಂಡವಾಳದಲ್ಲಿ ಮಂಡಕ್ಕಿ ತಯಾರಿಸುವ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿರುವ ಘಟಕ ಅವರದು. ಈಗ ವಾರ್ಷಿಕ ಕೋಟಿ ರೂಪಾಯಿಗೂ ಅಧಿಕ ವಹಿವಾಟೂ ನಡೆಯುತ್ತಿದೆ.
ಮಂಡಕ್ಕಿ ವ್ಯಾಪಾರಿ ಶಹಾಬುದ್ದೀನ್‌ ಹೇಳಿಕೆ
‘ನಾವು ತಲೆಮೇಲೆ ಹೊತ್ತು ಮಂಡಕ್ಕಿ ವ್ಯಾಪಾರ ಮಾಡುತ್ತಿದ್ದಾಗ (೧೯೭೭ ರಲ್ಲಿ) ಕೊಪ್ಪಳದ ಸರ್ದಾರ್‌ ಗಲ್ಲಿ, ತೆಗ್ಗಿನಕೇರಿ ಪ್ರದೇಶದಲ್ಲಿ ಮಂಡಕ್ಕಿ ತಯಾರಿಸುತ್ತಿದ್ದ ಸುಮಾರು ೨೫೦ ಕೈಬಟ್ಟಿಗಳಿದ್ದವು. ಅವರಿಂದ ನಾವು ಪ್ರತಿದಿನ ಮಂಡಕ್ಕಿ ಪಡೆದುಕೊಂಡು ಯಲಬುರ್ಗಾ, ಕುಷ್ಟಗಿ, ಗಂಗಾವತಿ ಮತ್ತಿತರ ಕಡೆಗಳಿಗೆ ಹೋಗಿ ಮಾರುತ್ತಿದ್ದೆವು. ಈಗ ಕೈಬಟ್ಟಿಗಳ ಸಂಖ್ಯೆ 50–60ಕ್ಕೆ ಇಳಿದಿದೆ. ಮಂಡಕ್ಕಿ ವ್ಯಾಪಾರವನ್ನೇ ನಂಬಿದ್ದ ನಾವು, ಕೈಬಟ್ಟಿಗಳು ಮುಚ್ಚುತ್ತಿರುವುದನ್ನು ಕಂಡು ರೋಸ್ಟರ್‌ (ಹುರಿಯುವ ಯಾಂತ್ರಿಕ ವ್ಯವಸ್ಥೆ) ವಿಧಾನದಲ್ಲಿ ಮಂಡಕ್ಕಿ ತಯಾರಿಸುವ ಘಟಕ ಆರಂಭಿಸಿದೆವು’ ಹೀಗೆ ಮಂಡಕ್ಕಿಯ ಕೈ ಬಟ್ಟಿ ಸಣ್ಣ ಕೈಗಾರಿಕೆ ಎಲ್ಲೆದರ ಕ್ಷೀಣಿಸಿದೆ. ತಲೆಯ ಮೇಲೆ ಮಂಡಕ್ಕಿ ಹೊತ್ತು ಮನೆ ಮನೆಗೆ ಮಾರುತ್ತಿದ್ದವರು ಕಾಣೆಯಾಗಿದ್ದಾರೆ.

ಯಂತ್ರ–ಉತ್ಪಾದನೆ ಪ್ರಮಾಣ

[ಬದಲಾಯಿಸಿ]

೨೦೦೪ ರಲ್ಲಿ ೩೦ ಮಂದಿ ಕಾರ್ಮಿಕರ ನೆರವಿನಿಂದ ರೋಸ್ಟರ್‌ ವಿಧಾನದಲ್ಲಿ ದಿನವೊಂದಕ್ಕೆ ೩೦೦ ಚೀಲ (ಒಂದು ಚೀಲದಲ್ಲಿ ೫ ಕಿಲೋ) ಮಂಡಕ್ಕಿ ತಯಾರಿಸಿದರೆ, ೨೦೧೦ ರಲ್ಲಿ ಹೊಸ ತಂತ್ರಜ್ಞಾನ ವ್ಯವಸ್ಥೆಯಿಂದ ೧೫ ಮಂದಿ ಕಾರ್ಮಿಕರ ನೆರವಿನಿಂದ ಅತ್ಯಾಧುನಿಕ ಯಂತ್ರದ ಮೂಲಕ ಪ್ರತಿದಿನ ೮೦೦ ಚೀಲ ತಯಾರಿಸಲಾಗುತ್ತದೆ. ಆರಂಭದಲ್ಲಿ ಕೇವಲ ೨೦ ಕಿ.ಮೀ ವ್ಯಾಪ್ತಿಯಲ್ಲಿ ಮಂಡಕ್ಕಿ ವ್ಯಾಪಾರ ಇದ್ದರೆ, ಈಗ ಉತ್ಪಾದನೆ ಹೆಚ್ಚಿದ ಬಳಿಕ ಈ ವ್ಯಾಪ್ತಿ ೧೦೦ ಕಿ.ಮೀ ದೂರದವರೆಗೂ ವಿಸ್ತರಿಸಿದೆ. ಹುಬ್ಬಳ್ಳಿ, ಗದಗ, ಬಾಗಲಕೋಟೆ, ಹುನಗುಂದ, ಹೊಸಪೇಟೆ, ತುರವೀಹಾಳ ಮತ್ತಿತರ ಊರುಗಳಿಗೆ ಪೂರೈಕೆಯಾಗುತ್ತದೆ.[]

ಮಂಡಕ್ಕಿಯಾಗುವ ವಿಧಾನ

[ಬದಲಾಯಿಸಿ]

ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯ ವಿವಿಧ ಹಂತಗಳಲ್ಲಿ ಭತ್ತ ಹೊರಾವರಣ (ಜಳ್ಳು) ಕಳಚಿಕೊಂಡು ಮಂಡಕ್ಕಿಯಾಗಿ ರೂಪು ಪಡೆಯುವ ಪರಿ ಕೈ ಬಟ್ಟಿ ಕ್ರಮಕ್ಕಿಂತ ಬೇರೆ ಮತ್ತು ವಿಶೇಷ.

ಭತ್ತವನ್ನು ಪ್ಯಾಡಿ ಕ್ಲೀನರ್‌ ಮೂಲಕ ಸ್ವಚ್ಛಗೊಳಿಸಲಾಗುತ್ತದೆ. ಹೀಗೆ ಸ್ವಚ್ಛಗೊಳಿಸಿದ ತಲಾ ೪೫ ಚೀಲ (ಒಂದು ಚೀಲದಲ್ಲಿ ೭೦ ಕಿಲೋ) ತುಂಬಿಸಿಡಬಲ್ಲ ನಾಲ್ಕು ಸ್ಟೋರೇಜ್‌ಗಳು-ಈ ಪೈಕಿ ಎರಡನ್ನು ಮೀಸಲಿಟ್ಟು, ಉಳಿದ ಎರಡನ್ನು ಅಗತ್ಯಕ್ಕೆ ತಕ್ಕಂತೆ ಬಳಸಲಾಗುತ್ತದೆ. ಒಂದು ದಿನಕ್ಕೆ ಬೇಕಿರುವಷ್ಟು ಭತ್ತವನ್ನು ಸ್ಟೋರೇಜ್‌ಗೆ ಹಾಕಿ ೯೫ ಡಿಗ್ರಿ ಸೆಲ್ಸಿಯಸ್‌ನಲ್ಲಿ ಕುದಿಸಿದ ನೀರನ್ನು ಅದರೊಳಗೆ ಬಿಡಲಾಗುತ್ತದೆ. ಆರು ಗಂಟೆಯ ಬಳಿಕ ಆ ನೀರನ್ನು ಹೊರಗೆ ಬಿಟ್ಟು ರೋಸ್ಟರ್‌ (ಬೆಂಕಿಯಿಂದ) ಮೂಲಕ ಭತ್ತವನ್ನು ಹುರಿಯಲಾಗುತ್ತದೆ. ಹುರಿದ ಭತ್ತವನ್ನು ತಂಪುಗೊಳಿಸಲು ಕೂಲಿಂಗ್‌ ಜಾಲಿಯಲ್ಲಿ ಹಾಕಲಾಗುತ್ತದೆ. ತಣ್ಣಗಾದ ಭತ್ತವನ್ನು ಪಾಲಿಶ್‌ ಮಾಡುವ ವೇಳೆ ಅಕ್ಕಿಯಿಂದ ಸಿಪ್ಪೆ (ತೌಡು) ಬೇರೆಯಾಗಿ ಹೊರಗೆ ಬರುತ್ತದೆ. ಬಿಸಿ ಅಕ್ಕಿಯನ್ನು ತಂಪಾಗಿಸಲು ಮತ್ತೆ ಜಾಲಿಯಲ್ಲಿ (ಜಾಲರಿಯಲ್ಲಿ) ಹಾಕಲಾಗುತ್ತದೆ. ಬಳಿಕ ಫ್ಯಾನ್ ಬಳಸಿ ಸಿಪ್ಪೆಯನ್ನು ಅಕ್ಕಿಯಿಂದ ಪ್ರತ್ಯೇಕಿಸಲಾಗುತ್ತದೆ. ಆ ಅಕ್ಕಿಯನ್ನು ಡ್ರೈಯರ್‌ಗೆ ಹಾಕಲಾಗುತ್ತದೆ. ಡ್ರೈಯರ್‌ನಲ್ಲಿ ಅಕ್ಕಿ ಮೇಲೆ, ಕೆಳಗೆ ಚಲಿಸುತ್ತದೆ. ೪೫ ಚೀಲ ಅಕ್ಕಿ ಒಣಗಲು ಎರಡೂವರೆ ಗಂಟೆ ತಗಲುತ್ತದೆ. ಆ ಅಕ್ಕಿಯನ್ನು ಜಾಲಿಯಲ್ಲಿ ಹಾಕಿದಾಗ ನುಚ್ಚು ಬೇರೆಯಾಗುತ್ತದೆ. ಈ ಅಕ್ಕಿಯನ್ನು ಇನ್ನೊಂದು ರೋಸ್ಟರ್‌ ಮೂಲಕ ಹಾಯಿಸಿ ಹೊರಬಂದಾಗ ಮಂಡಕ್ಕಿ ತಯಾರಾಗುತ್ತದೆ.

ಹೀಗೆ ಆದ ಮಂಡಕ್ಕಿಯನ್ನು ಕನ್ವೇಯರ್‌ ಸಹಾಯದಿಂದ ಸಂಗ್ರಹ ಟ್ಯಾಂಕಿನಲ್ಲಿ ತುಂಬಲಾಗುತ್ತದೆ. ಒಂದೊಂದು ಟ್ಯಾಂಕ್‌ನಲ್ಲಿ ೧,೫೦೦ ಚೀಲ ಮಂಡಕ್ಕಿ ಹಿಡಿಯಬಲ್ಲದು. ಅಂತಹ ನಾಲ್ಕು ಟ್ಯಾಂಕ್‌ಗಳು ಇವೆ. ನಂತರ ಮಂಡಕ್ಕಿಯನ್ನು ಪ್ಯಾಕ್‌ ಮಾಡಲಾಗುತ್ತದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ೩ ಕಿಲೋದಿಂದ ೬ ಕಿಲೋವರೆಗೆ ವಿಧವಿಧ ಚೀಲದಲ್ಲಿ ಪ್ಯಾಕ್‌ ಮಾಡಲಾಗುವುದು. ಸಾಮಾನ್ಯವಾಗಿ ೫ ಕಿಲೋ ತೂಕದ ಚೀಲಗಳನ್ನು ಸಿದ್ಧಪಡಿಸಿ ಸಾಗಿಸಲಾಗುತ್ತದೆ.

೧.*ಪ್ರಜಾವಾಣಿ -(ರಾಜೇಶ್‌ ರೈ ಚಟ್ಲ):10/12/2014 [[೧]]

ಉಲ್ಲೇಖಗಳು

[ಬದಲಾಯಿಸಿ]


"https://kn.wikipedia.org/w/index.php?title=ಮಂಡಕ್ಕಿ&oldid=1230322" ಇಂದ ಪಡೆಯಲ್ಪಟ್ಟಿದೆ