ವಿಷಯಕ್ಕೆ ಹೋಗು

ಪಲ್ಸ್ ಆಕ್ಸಿಮೀಟರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಲ್ಸ್ ಆಕ್ಸಿಮೀಟರ್ ಬೆಂಕಿ ಪೊಟ್ಟಣ ಗಾತ್ರದ, ಕ್ಲಿಪ್ಪಿನ ಆಕಾರದಲ್ಲಿರುವ, ಬ್ಯಾಟರಿ ಚಾಲಿತ ಯಂತ್ರ. ಇದು ಮಾನವನ ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣ ಮತ್ತು ಹೃದಯ ಬಡಿತದ ವೇಗವನ್ನು ಅಳತೆ ಮಾಡಿ, ಯಂತ್ರದ ಮೇಲಿರುವ ಪುಟ್ಟ ಪರದೆಯ ಮೇಲೆ ಪ್ರದರ್ಶಿಸುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಉಪಕರಣವನ್ನು ಅಳವಡಿಸುವ ಜಾಗದಲ್ಲಿ ಯಾವುದೇ ತರಹದ ಗಾಯ ಮಾಡುವುದಾಗಲಿ, ಉಪಕರಣವನ್ನು ದೇಹದೊಳಗೆ ತೂರಿಸುವ ಸಂದರ್ಭ ಬರುವುದಿಲ್ಲ[].

ಬೆರಳಿಗೆ ಅಳವಡಿಸುವ ಪಲ್ಸ್ ಆಕ್ಸಿಮೀಟರ್

ಬಳಕೆಯ ಉದ್ದೇಶ

[ಬದಲಾಯಿಸಿ]

ಈ ಯಂತ್ರದ ಬಳಕೆಯ ಬಗ್ಗೆ ತಿಳಿಯುವ ಮುನ್ನ, ನಮ್ಮ ದೇಹದಲ್ಲಿ ನಡೆಯುವ ರಕ್ತಪರಿಚಲನೆಯ ಸ್ಥೂಲ ಪರಿಚಯವನ್ನು ಮಾಡಿಕೊಳ್ಳೋಣ.

ಸಾಮಾನ್ಯ ದೇಹವನ್ನು ಹೊಂದಿರುವ ಒಬ್ಬ ವ್ಯಕ್ತಿಯ ಹೃದಯ, ದೇಹದ ಮೂಲೆಮೂಲೆಗೆಳಿಗೆ ೫೦೦೦ ಮಿಲಿಲೀಟರ್(೫ ಲೀಟರ್) ರಕ್ತವನ್ನು ಪ್ರತೀ ನಿಮಿಷಕ್ಕೆ ಪಂಪ್ ಮಾಡುತ್ತದೆ. ಅದರಲ್ಲೂ ೨ ಲೀ ರಕ್ತವು ನೇರವಾಗಿ ಮೆದುಳಿಗೆ ಸರಬರಾಜಾಗುತ್ತದೆ. ಇದೊಂದು ನಿರಂತರ ಪ್ರಕ್ರಿಯೆ[]. ರಕ್ತದಲ್ಲಿ ಎರಡು ಬಗೆಯ ರಕ್ತಕಣಗಳಿವೆ. ಬಿಳಿ ರಕ್ತಕಣವು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸಹಾಯ ಮಾಡಿದರೆ, ಕೆಂಪುರಕ್ತಕಣಗಳು ನಮ್ಮ ದೇಹದ ಜೀವಕೋಶಗಳಿಗೆ ಆಮ್ಲಜನಕವನ್ನು ಸರಬರಾಜು ಮಾಡುತ್ತವೆ. ಈ ಆಮ್ಲಜನಕವು ನಾವು ಉಸಿರಾಡುವ ಗಾಳಿಯ ಮೂಲಕ ದೊರೆಯುತ್ತದೆ. ಶ್ವಾಸಕೋಶವು ಗಾಳಿಯಲ್ಲಿರುವ ಆಮ್ಲಜನಕವನ್ನು ಒಳಗೆ ತೆಗೆದುಕೊಂಡು, ಇಂಗಾಲದ ಡೈಆಕ್ಸೈಡನ್ನು ಹೊರಗೆ ಬಿಡುತ್ತದೆ. ಮೂಗಿನ ಮೂಲಕ ಶ್ವಾಸಕೋಶವನ್ನು ಪ್ರವೇಶಿಸಿದ ಗಾಳಿಯಲ್ಲಿರುವ ಆಮ್ಲಜನಕವು, ಕೆಂಪುರಕ್ತಕಣಗಳು ಜೀವಕೋಶಗಳಿಗೆ ಪೂರೈಸುತ್ತವೆ. ಹೀಗೆ ಪೂರೈಸಲಾಗುವ ಆಮ್ಲಜನಕದ ಪ್ರಮಾಣದಲ್ಲಿ ವ್ಯತ್ಯಯವಾದಾಗ, ಜೀವಕೋಶಗಳು ಕೆಲಸ ಮಾಡುವಲ್ಲಿ ವ್ಯತ್ಯಾಸ ಉಂಟಾಗಬಹುದು. ಕೆಲವೊಮ್ಮೆ ಶ್ವಾಸಸಂಬಂಧಿ ಖಾಯಿಲೆಗಳು ಬಂದಾಗ, ಜೀವಕೋಶಗಳಿಗೆ ಅಗತ್ಯ ಪ್ರಮಾಣದ ಅಮ್ಲಜನಕ ಸಿಗದೇ ಹೋಗಬಹುದು. ಮತ್ತೆ ಕೆಲವು ಸಲ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾದಾಗ ಅಗತ್ಯ ಪ್ರಮಾಣದ ರಕ್ತವನ್ನು ದೇಹದ ಅಂಗಗಳಿಗೆ ಸರಬರಾಜು ಮಾಡಲು ಹೃದಯವು ವಿಫಲವಾಗಬಹುದು. ಈ ರೀತಿ ಜೀವಕೋಶಗಳಿಗೆ ಅಗತ್ಯ ಪ್ರಮಾಣದ ಆಮ್ಲಜನಕವು ಸಿಗದೇ ಇರುವ ಪರಿಸ್ಥಿತಿಗೆ ಹೈಪಾಕ್ಸಿಯಾ ಎಂದು ಹೆಸರಿದೆ[]. ಇಂಥ ಸಂದರ್ಭಗಳಲ್ಲಿ, ಪಲ್ಸ್ ಆಕ್ಸಿಮೀಟರ್ ಉಪಕರಣವನ್ನು ಬಳಸಿಕೊಂಡು, ಪ್ರಾಥಮಿಕ ಹಂತದಲ್ಲಿ ಸಮಸ್ಯೆಯನ್ನು ಪತ್ತೆಹಚ್ಚಬಹುದಾಗಿದೆ. ಅಗತ್ಯ ಬಿದ್ದರೆ ವೈದ್ಯರನ್ನು ಸಂಪರ್ಕಿಸಿ ಸಮಸ್ಯೆಯ ಪರಿಹಾರವನ್ನು ಪಡೆಯಬಹುದು.

ಈ ಹೆಸರೇಕೆ?

[ಬದಲಾಯಿಸಿ]

ಈ ಉಪಕರಣವು ಕೆಂಪುರಕ್ತಕಣದಲ್ಲಿನ ಆಮ್ಲಜನಕದ ಪ್ರಮಾಣದ ಜೊತೆಗೆ, ಹೃದಯ ಮಿಡಿತದ ಪ್ರಮಾಣವನ್ನೂ ಲೆಕ್ಕ ಹಾಕುವುದರಿಂದಾಗಿ ಇದಕ್ಕೆ ಪಲ್ಸ್(ಮಿಡಿತ) ಆಕ್ಸಿಮೀಟರ್ ಎಂದು ಹೆಸರು ಬಂದಿದೆ.

ಕೆಲಸ ಮಾಡುವ ಬಗೆ

[ಬದಲಾಯಿಸಿ]

ಸಾಮಾನ್ಯವಾಗಿ, ಬೆಳಕು ಯಾವುದಾದರೂ ಮಾಧ್ಯಮದ ಮೂಲಕ ಹರಿದಾಗ ಆ ಮಾಧ್ಯಮವು ಬೆಳಕಿನಲ್ಲಿನ ಸ್ವಲ್ಪ ಪ್ರಮಾಣವನ್ನು ಹೀರಿಕೊಂಡು ಬೆಳಕನ್ನು ಹೊರಬಿಡುತ್ತದೆ. ಬೆಳಕನ್ನು ಹೀರಿಕೊಳ್ಳುವ ಪ್ರಮಾಣವು, ಬೆಳಕು ಹರಿಯುವ ದೂರ ಮತ್ತು ಬೆಳಕು ಹೀರುವ ಮಾಧ್ಯಮದ ಗುಣದ ಮೇಲೆ ನಿರ್ಧಾರಿತವಾಗುತ್ತದೆ. ಪಲ್ಸ್ ಆಕ್ಸಿಮೀಟರ್ ಇದೇ ತತ್ವವನ್ನು ಆಧರಿಸಿ ಕೆಲಸ ಮಾಡುತ್ತದೆ[][].

ಬಳಸುವ ಕ್ರಮ

[ಬದಲಾಯಿಸಿ]

ಪಲ್ಸ್ ಆಕ್ಸಿಮೀಟರಿನ ಕ್ಲಿಪ್ಪಿನಂತಹ ರಚನೆಯನ್ನು ಸಾಮಾನ್ಯವಾಗಿ ಬೆರಳಿಗೆ, ಅಪರೂಪಕ್ಕೆ ಕಿವಿಯ ತುದಿಗೆ ಸಿಕ್ಕಿಸಲಾಗುತ್ತದೆ. ಆಕ್ಸಿಮೀಟರಿನ ಒಳಗಿನ ಒಂದು ಬದಿಯಲ್ಲಿ ಕೆಂಪು ಮತ್ತು ಅವಗೆಂಪು ಬೆಳಕು ಸೂಸುವ ಎಲ್‍ಇಡಿಗಳು ಇರುತ್ತವೆ. ಎದುರು ಬದಿಯಲ್ಲಿ ಬೆಳಕಿನ ಪ್ರಮಾಣವನ್ನು ಅಳೆಯುವ ಸಂವೇದಕಗಳು ಮತ್ತು ಮಾಪಕ ಇರುತ್ತವೆ. ಈ ಸಾಧನವನ್ನು ಬೆರಳಿಗೆ ತೂರಿಸಿ ಬೆರಳಿನ ಮೂಲಕ ಕೆಂಪು ಬೆಳಕನ್ನು ಹಾಯಿಸಲಾಗುತ್ತದೆ. ಆಮ್ಲಜನಕವನ್ನು ಹೊತ್ತೊಯ್ಯುವ ಕೆಂಪುರಕ್ತಕಣಗಳ ಮೂಲಕ ಹಾದುಬಂದ ಬೆಳಕಿನ ಪ್ರಮಾಣವನ್ನು ಇನ್ನೊಂದು ಬದಿಯಲ್ಲಿರುವ ಮಾಪಕವು ಸಂವೇದಕದ ಸಹಾಯದಿಂದ ಅಳೆಯುತ್ತದೆ. ಆದರೆ ಕೇವಲ ಬೆಳಕಿನ ಪ್ರಮಾಣವನ್ನು ಅಳೆದ ಮಾತ್ರಕ್ಕೆ ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣವನ್ನು ಅಳೆಯುವುದು ಅಸಾಧ್ಯ. ಯಾಕೆಂದರೆ ವ್ಯಕ್ತಿಯಿಂದ ವ್ಯಕ್ತಿಗೆ ಬೆರಳಿನ ಗಾತ್ರ ಮತ್ತು ದಪ್ಪದಲ್ಲಿ ವ್ಯತ್ಯಾಸವಿರುವುದರಿಂದ, ಕೆಂಪು ಬೆಳಕನ್ನು ರಕ್ತಕಣಗಳು ಹೀರಿಕೊಳ್ಳುವ ಪ್ರಮಾಣದಲ್ಲಿಯೂ ವ್ಯತ್ಯಾಸಗಳು ಇರಬಹುದು. ಅದಕ್ಕಾಗಿ ಕೆಂಪು ಬೆಳಕಿನ ಜೊತೆಗೆ ಅವಗೆಂಪು(Infrared) ಬೆಳಕನ್ನು ಸಹಾ ಬಳಸಲಾಗುತ್ತದೆ. ಆಮ್ಲಜನಕ ಸಹಿತ ಕೆಂಪು ರಕ್ತಕಣ ಮತ್ತು ಆಮ್ಲಜನಕರಹಿತ ಕೆಂಪು ರಕ್ತಕಣಗ, ಕೆಂಪು ಬೆಳಕು ಮತ್ತು ಅವಗೆಂಪು(Infrared) ಬೆಳಕನ್ನು ಹೀರಿಕೊಳ್ಳುವ ಪ್ರಮಾಣದಲ್ಲಿ ವ್ಯತ್ಯಾಸಗಳಿವೆ. ರಕ್ತಕಣಗಳ ಮೂಲಕ ಹಾದು ಬಂದ ಕೆಂಪು ಬೆಳಕು ಮತ್ತು ಅವಗೆಂಪು(Infrared) ಬೆಳಕನ್ನು ಪಡೆದುಕೊಂಡ ಸಂವೇದಕವು, ಬೆಳಕಿನ ಪ್ರಮಾಣದ ಅನುಪಾತವನ್ನು ಮಾಪಕಕ್ಕೆ ವರ್ಗಾಯಿಸುತ್ತದೆ. ಅಂತಿಮವಾಗಿ ಮಾಪಕವು ಅದನ್ನು ಲೆಕ್ಕಾಚಾರ ಮಾಡಿ ಶೇಕಡಾವಾರು ಪ್ರಮಾಣವನ್ನು ಪರದೆಯಲ್ಲಿ ತೋರಿಸುತ್ತದೆ[][].

ಬಳಸುವ ಮುನ್ನ

[ಬದಲಾಯಿಸಿ]

ಮೇಲೆ ತಿಳಿಸಿದ ಹಾಗೆ ಬೆಳಕನ್ನು ತನ್ನ ಮೂಲಕ ಹರಿಯಬಿಡುವ ಮಾಧ್ಯಮವು ಬೆಳಕಿನಲ್ಲಿನ ಸ್ವಲ್ಪ ಪ್ರಮಾಣವನ್ನು ಹೀರಿಕೊಂಡು ಬೆಳಕನ್ನು ಹೊರಬಿಡುತ್ತದೆ. ಇದರಿಂದಾಗಿ ಹೊರಬರುವ ಬೆಳಕಿನ ಪ್ರಮಾಣದಲ್ಲಿ ವ್ಯತ್ಯಾಸಗಳು ಇರುತ್ತದೆ. ಅದೇ ರೀತಿ, ವ್ಯಕ್ತಿಗಳ ನಡುವೆ ಇರುವ ದೈಹಿಕ ಗಾತ್ರದಲ್ಲಿನ ವ್ಯತ್ಯಾಸಗಳು, ಗೋಚರವಾಗುವ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತವೆ.

  • ಪರೀಕ್ಷೆ ಮಾಡುವ ಬೆರಳು ಸಾಮಾನ್ಯಕ್ಕಿಂತ ದಪ್ಪವಿದ್ದಲ್ಲಿ, ಸಿಗುವ ಫಲಿತಾಂಶಗಳಲ್ಲಿ ವ್ಯತ್ಯಾಸವಿರಬಹುದು.
  • ಪರೀಕ್ಷೆ ಮಾಡುವ ಬೆರಳಿನ ಉಗುರಿಗೆ ಬಣ್ಣ(Nail polish) ಬಳಿದಿರಬಾರದು.
  • ಆಕ್ಸಿಮೀಟರಿನ ಒಳಗೆ ಬಾಹ್ಯ ಮೂಲದ ಬೆಳಕು ಪ್ರವೇಶಿಸಬಾರದು.
  • ರಕ್ತದಲ್ಲಿನ ಅಮ್ಲಜನಕವನ್ನು ಪರೀಕ್ಷಿಸಲು ಉಪಕರಣವು ಅಂದಾಜು ೧ ನಿಮಿಷಗಳಷ್ಟು ಸಮಯ ತೆಗೆದುಕೊಳ್ಳುವುದರಿಂದ ಅಷ್ಟು ಹೊತ್ತು ಬೆರಳನ್ನು ಅಲ್ಲಾಡದಂತೆ ನೋಡಿಕೊಳ್ಳಬೇಕು[][].

ಪಲ್ಸ್ ಆಕ್ಸಿಮೀಟರ್ ಖರೀದಿಸುವ ಮುನ್ನ

[ಬದಲಾಯಿಸಿ]
  • ನಮ್ಮ ದೇಶದಲ್ಲಿ, ಯಾವುದೇ ರೀತಿಯ ವೈದ್ಯಕೀಯ ಉಪಕರಣಗಳನ್ನು ಮಾರಾಟ ಮಾಡುವ ಮುನ್ನ, ಉಪಕರಣವು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿರಬೇಕು[]. ನೀವು ಖರೀದಿಸುವ ಪಲ್ಸ್ ಆಕ್ಸಿಮೀಟರ್ ಆ ಮಾನದಂಡಗಳಿಗೆ ಅನುಗುಣವಾಗಿದೆಯೇ ಗಮನಿಸಿ. ಕಡಿಮೆ ಬೆಲೆಯ, ಕಳಪೆ ಗುಣಮಟ್ಟದ ಉಪಕರಣಗಳನ್ನು ಬಳಸಿದಾಗ ಬರುವ ಫಲಿತಾಂಶಕ್ಕೂ ಮತ್ತು ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಸಿಗುವ ಫಲಿತಾಂಶಕ್ಕೂ ವ್ಯತ್ಯಾಸಗಳು ಕಂಡುಬಂದು ಚಿಕಿತ್ಸೆ ಪಡೆಯುವುದರಲ್ಲಿ ತೊಂದರೆಯಾಗಬಹುದು[].
  • ಮನೆಯಲ್ಲಿ ಪಲ್ಸ್ ಆಕ್ಸಿಮೀಟರ್ ಬಳಸಿ ಸಿಗುವ ಫಲಿತಾಂಶ ಮತ್ತು ಆಸ್ಪತ್ರೆಯ ಉಪಕರಣ ಬಳಸಿದಾಗ ಸಿಗುವ ಫಲಿತಾಂಶದ ನಡುವೆ ೨ ಅಥವಾ ೩% ದಷ್ಟು ವ್ಯತ್ಯಾಸಗಳು ಕಾಣಬಹುದು. ಫಲಿತಾಂಶದ ಬಗ್ಗೆ ಅನುಮಾನಗಳಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಒಳಿತು[೧೦].
  • ಆಕ್ಸಿಮೀಟರಿನ ಒಳಗೆ ಬೆರಳು ತೂರಿಸಲು ಸಾಕಷ್ಟು ಜಾಗ ಇದೆಯೇ ಪರೀಕ್ಷಿಸಿ[೧೧].
  • ಅಕ್ಷರ/ಸಂಖ್ಯೆಗಳು ಸ್ಪಷ್ಟವಾಗಿ ಕಾಣುವಂಥ ಪರದೆ ಇದೆಯೇ ಗಮನಿಸಬೇಕು.
  • ಅಂತರ್ಗತ ಸ್ಮರಣಸಂಗ್ರಹ ಜಾಸ್ತಿ ಇದ್ದರೆ ಉತ್ತಮ[೧೨].
  • ಗಣಕಯಂತ್ರಕ್ಕೆ ಜೋಡಿಸಲು ಅವಕಾಶ ಇದೆಯೇ ಗಮನಿಸಬೇಕಾಗುತ್ತದೆ[೧೩].

ಉಲ್ಲೇಖಗಳು

[ಬದಲಾಯಿಸಿ]
  1. "Pulse Oximetry". www.healthline.com. Healthline Media a Red Ventures Company. Retrieved 2 December 2020.
  2. ೨.೦ ೨.೧ ೨.೨ "ಪಲ್ಸ್ ಆಕ್ಸಿಮೀಟರ್- ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳುವುದು ಸೂಕ್ತ". vydyaloka.in. ಮೀಡಿಯಾ ಐಕಾನ್. Retrieved 2 December 2020.
  3. "ರಕ್ತದಲ್ಲಿರುವ ಆಮ್ಲಜನಕವನ್ನು ಅಳೆಯುವ ಆಕ್ಸಿಮೀಟರ್- ಯು ಬಿ ಪವನಜ". ತುಷಾರ. ನವೆಂಬರ್ ೨೦೨೦ (೭೨). {{cite journal}}: |access-date= requires |url= (help)
  4. "How pulse oximeters work explained simply". howequipmentworks.com. Prasanna Tilakaratna. Retrieved 2 December 2020.
  5. "ರಕ್ತದಲ್ಲಿರುವ ಆಮ್ಲಜನಕವನ್ನು ಅಳೆಯುವ ಆಕ್ಸಿಮೀಟರ್- ಯು ಬಿ ಪವನಜ". ತುಷಾರ. ನವೆಂಬರ್ ೨೦೨೦ (೭೨). {{cite journal}}: |access-date= requires |url= (help)
  6. "Using Pulse Oximeters" (PDF). WHO.net. WHO. Retrieved 2 December 2020.
  7. "ರಕ್ತದಲ್ಲಿರುವ ಆಮ್ಲಜನಕವನ್ನು ಅಳೆಯುವ ಆಕ್ಸಿಮೀಟರ್- ಯು ಬಿ ಪವನಜ". ತುಷಾರ. ನವೆಂಬರ್ ೨೦೨೦ (೭೨). {{cite journal}}: |access-date= requires |url= (help)
  8. "Medical Device Registration in India". Pacific Bridge Medical. Pacific Bridge Medical. Retrieved 2 December 2020.
  9. "Why many of the oximeters you're buying in India may not be reliable". The News Minute. Dhanya Rajendran, Chitra Subramaniam and Vignesh Vellore And Independent and Public Spirited Media Foundation. Retrieved 2 December 2020.
  10. "How to Buy Home Pulse Oximeter". www.amperordirect.com. www.amperordirect.com. Retrieved 2 December 2020.
  11. "How to Buy Home Pulse Oximeter". www.amperordirect.com. www.amperordirect.com. Retrieved 2 December 2020.
  12. "How to Buy Home Pulse Oximeter". www.amperordirect.com. www.amperordirect.com. Retrieved 2 December 2020.
  13. "How to Buy Home Pulse Oximeter". www.amperordirect.com. www.amperordirect.com. Retrieved 2 December 2020.