ಶ್ರೀ ಕ್ಷೇತ್ರ ಹೊಂಬುಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹುಮ್ಚ-ಹೊಂಬುಜ
ಹುಮ್‍ಚ
ಮಹಾಮಾತೆ ಪದ್ಮಾವತಿ ದೇವಿ
ಮಹಾಮಾತೆ ಪದ್ಮಾವತಿ ದೇವಿ
Stateಕರ್ನಾಟಕ
Government
 • Bodyಗ್ರಾಮ ಪಂಚಾಯತಿ
Elevation
೬೪೪ m (೨,೧೧೩ ft)
Time zoneUTC+5.30 (ಭಾರತೀಯ ಕಾಲಮಾನ)
PIN
577436
Websitehttp://hombujapadmavati.org/

ಜೈನ ಧರ್ಮವು ತನ್ನ ಉತ್ತುಂಗದ ಸ್ಥಿತಿಯಲ್ಲಿ ಇದ್ದಾಗ ನಾಡಿನಲ್ಲಿ ಹಲವು ಪುಣ್ಯ ಕ್ಷೇತ್ರಗಳು ಮೆರೆದಾಡಿದವು. ಆದರೆ ಜೈನ ಮತಾವಲಂಬಿ ರಾಜರ ಅವನತಿಯೊಂದಿಗೆ ಆ ಕ್ಷೇತ್ರಗಳೂ ಸಹ ಪಾಳುಬಿದ್ದವು. ಆದರೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹೊಂಬುಜ(ಅಧೀಕೃತ ಹೆಸರು ಹುಮ್ಚ) ಇಂದಿನ ದಿನದಲ್ಲೂ ಜೈನರ ಪವಿತ್ರ ಯಾತ್ರಾ ಕ್ಷೇತ್ರವಾಗಿ ಶ್ರೀಪದ್ಮಾವತಿ ದೇವಿಯ ಆವಾಸದಿಂದ ಅತಿಶಯ ಕ್ಷೇತ್ರವಾಗಿ, ನಿತ್ಯ ಹಿಂದೂ ಹಾಗೂ ಜೈನಧರ್ಮೀಯ ಭಕ್ತರನ್ನು ಆಕರ್ಷಿಸುತ್ತಿದೆ.

ಪರಿಚಯ[ಬದಲಾಯಿಸಿ]

ಹುಮಚವು, ಶಿವಮೊಗ್ಗ ಜಿಲ್ಲೆಯ, ಹೊಸನಗರ ತಾಲ್ಲೂಕಿನಲ್ಲಿ ಇರುವ ಒಂದು ಹಳ್ಳಿ. ಹೊಸನಗರದಿಂದ ಹತ್ತೊಂಬತ್ತು ಕಿಲೋಮೀಟರುಗಳ ದೂರದಲ್ಲಿರುವ ಹುಮ್ಚವು ಐತಿಹಾಸಿಕವಾಗಿ ಮಾತ್ರವಲ್ಲ, ಧಾರ್ಮಿಕ ಕಾರಣಗಳಿಗಾಗಿ ಜೈನಧರ್ಮೀಯರಿಗೆ ಇದೊಂದು ಪ್ರಮುಖ ಅತಿಶಯ ಕ್ಷೇತ್ರ(ಪುಣ್ಯಕ್ಷೇತ್ರ)ವಾಗಿದೆ.

ಈ ಊರನ್ನು, ಚರಿತ್ರೆಯಲ್ಲಿ ಹೊಂಬುಜ, ಪೊಂಬುಚ್ಚ, ಪೊಟ್ಟಿಪೊಂಬುರ್ಚಪುರ ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಈ ಹೆಸರುಗಳ ಮೂಲವು ಪೊನ್(ಬಂಗಾರ) ಎನ್ನುವುದು. (ಹೊನ್ನು ಊರ್ಜಿಸಿದ ಊರು ಎಂಬ ಅರ್ಥದಲ್ಲಿ) ನಿಸರ್ಗಸುಂದರವಾಗಿರುವ ಈ ಊರು ೮ರಿಂದ ೧೨ನೆಯ ಶತಮಾನಗಳ ಅವಧಿಯಲ್ಲಿ ಸಾಂತರ ರಾಜವಂಶದ ರಾಜಧಾನಿಯಾಗಿತ್ತು. ಅವರು ೧೬ನೆಯ ಶತಮಾನದವರೆಗೆ ಆಳಿದರೂ ಕೂಡ, ಕೊನೆಯ ನಾಲ್ಕು ಶತಮಾನಗಳಲ್ಲಿ ರಾಜಧಾನಿಯು ಬದಲಾಗಿತ್ತು. ಸಾಂತರರು ಸಾಂತಳಿಗೆ ಸಾವಿರ ಎಂಬ ಪ್ರದೇಶವನ್ನು ಆಳುತ್ತಿದ್ದರು. ಉತ್ತರ ಭಾರತದಿಂದ, ಪದ್ಮಾವತೀದೇವಿಯ ವಿಗ್ರಹದೊಂದಿಗೆ ಕರ್ನಾಟಕಕ್ಕೆ ವಲಸೆ ಬಂದ ಜಿನದತ್ತನು ಈ ರಾಜ್ಯವನ್ನು ಸ್ಥಾಪಿಸಿದನು[೧].

ಸ್ಥಳಪುರಾಣ ಮತ್ತು ಇತಿಹಾಸ[ಬದಲಾಯಿಸಿ]

ಸ್ಥಳಪುರಾಣ[ಬದಲಾಯಿಸಿ]

ತನ್ನ ಸಾಮಂತ ಅರಸರು ನೀಡಬೇಕಾದ ಕಪ್ಪವನ್ನು ನೀಡದೇ ಇದ್ದುದರಿಂದ, ಸಾಕಾರರಾಯ ಕಪ್ಪವಸೂಲಿಗಾಗಿ ಹೊರಡುತ್ತಾನೆ. ಹಿಂತಿರುಗಿ ಬರುವಾಗ, ಬೇಡ ಜಾತಿಯ ಹೆಣ್ಣಿನ ಆಕರ್ಷಣೆಗೊಳಗಾಗುತ್ತಾನೆ. ಅವಳಲ್ಲಿ ಹುಟ್ಟುವ ಮಗನಿಗೆ ಪಟ್ಟಕಟ್ಟುವ ವಾಗ್ದಾನವನ್ನು ಅವಳ ತಂದೆಗೆ ಕೊಟ್ಟು ಮದುವೆ ಆಗುತ್ತಾನೆ. ಮಡದಿ ಶ್ರೀಯಲಾದೇವಿ ಮತ್ತು ಮಗ ಜಿನದತ್ತರಾಯನಿಗೆ ಬೇರೆ ಅರಮನೆಯನ್ನು ಕಟ್ಟಿಸಿಕೊಟ್ಟು, ತಾನು ಬೇಡಜಾತಿಯ ಹೆಣ್ಣಿನೊಂದಿಗೆ ಹಿಂದಿನ ಅರಮನೆಯಲ್ಲಿಯೇ ಇರತೊಡಗುತ್ತಾನೆ. ಧರ್ಮಭ್ರಷ್ಟ, ರಾಜ್ಯಪರಿಪಾಲನಾ ಕಾರ್ಯದಿಂದ ವಿಮುಖನಾದ ತಂದೆಯ ವರ್ತನೆಯಿಂದ ಬೇಸತ್ತ ಜಿನದತ್ತರಾಯ, ರಾಜಗುರು ಶ್ರೀ ಸಿದ್ಧಾಂತಕೀರ್ತಿಗಳ ನಿರ್ದೇಶನದ ಮೇರೆಗೆ ಕುಲದೇವತೆ ಪದ್ಮಾವತಿ ದೇವಿಯ ಚಿನ್ನದ ಬಿಂಬವನ್ನು ಹಿಡಿದುಕೊಡು ಪಟ್ಟದ ಕುದುರೆಯೇರಿ, ತಾಯಿ ಶ್ರೀಯಲಾದೇವಿಯೊಂದಿಗೆ ಹಚ್ಚಹಸುರಾದ ಕಾಡುಪ್ರದೇಶಕ್ಕೆ ಬಂದು ತಲುಪುತ್ತಾನೆ. ಅಲ್ಲಿಯೇ ಒಂದು ಲಕ್ಕಿ(ನೆಕ್ಕಿ)ಯ ಮರದ ರೆಂಬೆಯ ಮೇಲೆ ಬಿಂಬವನ್ನಿಟ್ಟು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲು ಮಲಗುತ್ತಾನೆ. ಮಲಗಿರುವ ಜಿನದತ್ತನಿಗೆ ಕನಸಲ್ಲಿ ಬಂದು ದೇವಿ 'ನಾನಿಲ್ಲಿಂದ ಮುಂದೆ ಬರಲಾರೆ, ನಾನಿಲ್ಲೇ ನೆಲೆಸುವೆ' ಎನ್ನುತ್ತಾಳೆ. 'ಈ ಕಾಡೇ ಮುಂದೆ ಸುಂದರ ನಾಡಾಗಿ ಕಂಗೊಳಿಸುವುದು, ಪುಣ್ಯಕ್ಷೇತ್ರವಾಗಿ ಹೆಸರಾಗುವುದು. ನನ್ನ ಪರುಷಮೂರ್ತಿ(ಚಿನ್ನದ ಬಿಂಬ) ಗೆ ಕಬ್ಬಿಣವನ್ನು ಸೋಕಿಸಲು ಚಿನ್ನವಾಗುವುದು. ನಿನ್ನ ಕೀರ್ತಿಯೂ ದಶದಿಕ್ಕುಗಳಲ್ಲಿಯೂ ಹರಡುವುದು' ಎಂದು ಹೇಳಿ ಅಭಯವನ್ನು ನೀಡುತ್ತಾಳೆ. ಆ ಕಾಡಿನಲ್ಲಿ ವಾಸವಿದ್ದ ಕಾಡುಜನರೂ ಸಹ ಜಿನದತ್ತನೊಂದಿಗೆ ಕೈಜೋಡಿಸಿ, ದೇವಿಗೆ ಅಲ್ಲಿಯೇ ಮಂದಿರವನ್ನು ನಿರ್ಮಿಸುತ್ತಾರೆ. ಕಾಡು ನಾಡಾಗುತ್ತದೆ, ಕಾಲಕ್ರಮೇಣ ದೇವಿಯ ಮಂದಿರವು ಅತಿಶಯ ಕ್ಷೇತ್ರವಾಗಿ ಕಂಗೊಳಿಸುತ್ತದೆ, ಜಿನದತ್ತರಾಯ-ಶ್ರೀಯಲಾದೇವಿಯರ ಹೆಸರು ಅಜರಾಮರವಾಗುತ್ತದೆ.[೨]

ಇತಿಹಾಸ[ಬದಲಾಯಿಸಿ]

ಸಾಂತರರು ಸು. ೭ರಿಂದ, ೧೭ನೆಯ ಶತಮಾನದವರೆಗೆ ಕರ್ನಾಟಕದಲ್ಲಿ ಆಳಿದ ಒಂದು ಸಾಮಂತ ಮನೆತನ. ಬಾದಾಮಿಯ ಚಾಲುಕ್ಯರ ಕಾಲದಲ್ಲಿ ಬನವಾಸಿಯ ಕದಂಬರ ಬಲ ಕುಂದಿದಾಗ, ಕದಂಬರ ರಾಜ್ಯದ ಕೆಲವು ಭಾಗಗಳಲ್ಲಿ ಇವರು ಅಧಿಕಾರಕ್ಕೆ ಬಂದರೆಂದು ಬಿ ಎಲ್ ರೈಸ್ ಅವರು ಅಭಿಪ್ರಾಯ ಪಡುತ್ತಾರೆ. ಶಾಸನವೊಂದರಲ್ಲಿ ಈ ವಂಶದ ಮೂಲದ ವಿವರಗಳನ್ನು ಹೀಗೆ ಹೇಳಿದೆ : ಇವರು ಉಗ್ರವಂಶಕ್ಕೆ ಸೇರಿದವರು ಹಾಗೂ ಉತ್ತರ ಮಧುರೆಯವರು (ಮಧುರಾ). ರಾಹ ಈ ವಂಶದ ಮೂಲ ಪುರುಷ. ಅವನ ಅನಂತರ ಸಾಕಾರರಾಯ ಅಧಿಕಾರಕ್ಕೆ ಬರುತ್ತಾನೆ. ಈತನ ಮಗ ಜಿನದತ್ತ. ಈತ ತಂದೆಯ ಅನೈತಿಕ ವರ್ತನೆಗೆ ಬೇಸತ್ತು ಪದ್ಮಾವತಿ ದೇವಿಯ ವಿಗ್ರಹದೊಂದಿಗೆ ದಕ್ಷಿಣಕ್ಕೆ ಬಂದ. ಈತ ಹೊಂಬುಚವನ್ನು (ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿರುವ ಹುಮಚ) ರಾಜಧಾನಿಯಾಗಿ ಮಾಡಿಕೊಂಡು ಸಾಂತರ ರಾಜ್ಯವನ್ನು ಕಟ್ಟಿದ. ಮುಂದೆ ಇದು ಸಾಂತಳಿಗೆ ಸಾವಿರ (ತೀರ್ಥಹಳ್ಳಿ ತಾಲ್ಲೂಕು ಹಾಗೂ ಸುತ್ತಲ ಪ್ರದೇಶ) ಎಂದು ಹೆಸರಾಯಿತು. ಇವನು ತನ್ನ ರಾಜ್ಯವನ್ನು ದಕ್ಷಿಣಕ್ಕೆ ಕಳಸದವರೆಗೂ (ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು) ಉತ್ತರಕ್ಕೆ ಗೋವರ್ಧನಗಿರಿಯವರೆಗೂ (ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು) ವಿಸ್ತರಿಸಿದನೆಂದು ಹೇಳಿದೆ.

ಇವನ ಅನಂತರ ಶ್ರೀಕೇಶಿ, ಜಯಕೇಶಿ, ರಣಕೇಶಿ, ವಿಕ್ರಮಸಾಂತರ, ವೀರಸಾಂತರ, ಭುಜಬಲ, ನನ್ನಿಸಾಂತರ, ರಾಮ, ಚಾಗಿ, ಕನ್ನರ, ಕಾಮದೇವ, ತ್ಯಾಗಿ, ರಾಯ, ಚಿಕ್ಕವೀರ, ಅಮ್ಮಣದೇವ, ತೈಲಪದೇವ, ಬೀರದೇವ, ಶ್ರೀವಲ್ಲಭ, ತೈಲ, ಜಗದೇವ, ಜಯಕೇಶಿ, ಸಾಂತಿಯದೇವ (ಶಾಂತೆಯ)- ಮುಂತಾದ ಅರಸರು ರಾಜ್ಯವಾಳಿದರು. ಹನ್ನೆರಡನೆಯ ಶತಮಾನದಲ್ಲಿ ಈ ಮನೆತನ ಒಡೆದು ಎರಡು ಶಾಖೆಗಳಾಗಿ ಒಂದು ಶಾಖೆ ಕಳಸದಿಂದಲೂ ಇನ್ನೊಂದು ಶಾಖೆ ಹೊಸಗುಂದದಿಂದಲೂ ಆಳಿದುದಾಗಿ ತಿಳಿದುಬರುತ್ತದೆ.

ಸಾಂತರರು ವಾನರಧ್ವಜರೆಂದೂ ಸಿಂಹಲಾಂಛನರೆಂದೂ ಶಾಸನಗಳಲ್ಲಿ ಹೇಳಿದೆ. ಈ ವಂಶದ ದೊರೆಗಳು ಜೈನರು. ಹೊಸಗುಂದದ ಶಾಖೆಯ ಲ್ಲಿದ್ದ ದೊರೆಗಳು ಶೈವರು. ಹುಮಚದ ಪದ್ಮಾವತಿಯ ಆರಾಧಕರಾದ ಈ ಜೈನ ದೊರೆಗಳಿಗೆ ಕಳಸದ ಕಳಸನಾಥ ಕುಲದೈವ. ಧರ್ಮ, ವಾಸ್ತುಶಿಲ್ಪ, ಸಾಹಿತ್ಯ, ಕಲೆಗಳಿಗೆ ಇವರು ಉದಾರ ಆಶ್ರಯ ನೀಡಿದ್ದ ರೆಂದೂ ಇವರ ರಾಜ್ಯ ಅತ್ಯಂತ ವೈಭವದಿಂದ ಕೂಡಿತ್ತೆಂದೂ ತಿಳಿದು ಬರುತ್ತದೆ. ರಾಜಧಾನಿ ನಗರದ ಅವಶೇಷಗಳು, ಬಿಲೇಶ್ವರ ಬೆಟ್ಟದ ತಪ್ಪಲಿನಲ್ಲಿ ಇಂದಿಗೂ ಕಾಣಸಿಗುತ್ತವೆ. ಹುಮಚದಲ್ಲಿ ಅನೇಕ ಜೈನ ಬಸದಿಗಳೂ ಒಂದು ಜೈನ ಮಠವೂ ಇವೆ. ಇಷ್ಟು ಚಿಕ್ಕ ಹಳ್ಳಿಯಲ್ಲಿ ಐವತ್ತಕ್ಕಿಂತಲೂ ಹೆಚ್ಚು ಶಾಸನಗಳು ದೊರೆತಿರುವುದು ಇನ್ನೊಂದು ವಿಶೇಷ.

ಹುಮಚದ ಬಸದಿಗಳು[ಬದಲಾಯಿಸಿ]

ಪದ್ಮಾವತಿ ದೇವಿ ಮಂದಿರ[ಬದಲಾಯಿಸಿ]

ಚಿತ್ರದ ಎಡಭಾಗದಲ್ಲಿ ದೇವಿಯ ಮಂದಿರ, ಅದರ ಬಲಭಾಗದಲ್ಲಿ ಪಾರ್ಶ್ವನಾಥ ಬಸದಿ

ಕ್ಷೇತ್ರದ ಪ್ರಮುಖ ಆಕರ್ಷಣೆಯಾಗಿರುವ ಈ ಮಂದಿರವನ್ನು ತ್ರೈಲೋಕ್ಯಮಲ್ಲ ವೀರಸಾಂತರ ಕ್ರಿ.ಶ. ೧೦೬೮ರ ಸುಮಾರಿಗೆ ಕಟ್ಟಿಸಿದನು. ಗರ್ಭಗೃಹದಲ್ಲಿ ದೇವಿ ಪದ್ಮಾವತಿಯ ೨ ಅಡಿ ಎತ್ತರದ ಬಿಂಬವಿದೆ. ಆ ಬಿಂಬದ ಮೇಲ್ಗಡೆ ಅಮೃತಶಿಲೆಯಿಂದ ನಿರ್ಮಿತವಾದ ಪಾರ್ಶ್ವನಾಥ ತೀರ್ಥಂಕರನ ಮೂರ್ತಿ ಕಂಡುಬರುತ್ತದೆ. ಮಂದಿರದ ಹಿಂದುಗಡೆ ಪವಿತ್ರವಾದ ಲಕ್ಕಿಯ ಮರವಿದೆ. ಈ ಮರದ ಕೆಳಗೆ ದೇವಿಯ ಪರುಷಮೂರ್ತಿಯು ಪಾತಾಳಕ್ಕೆ ಇಳಿದುಹೋಗಿದೆಯೆಂದು ನಂಬಲಾದ ರಸಬಾವಿ ಇದೆ. ಮರ ಮತ್ತು ಬಾವಿಯನ್ನು ಸಿಮೆಂಟಿನಿಂದ ಮಾಡಲಾದ ಎತ್ತರದ ಕಟ್ಟೆ ಆವರಿಸಿಕೊಂಡಿದೆ. ಈ ಮಂದಿರವನ್ನು ೧೯೫೦ರಲ್ಲಿ ಜೀರ್ಣೋದ್ಧಾರ ಮಾಡಲಾಯಿತು[೩].

ಪಾರ್ಶ್ವನಾಥ ತೀರ್ಥಂಕರ ಬಸದಿ[ಬದಲಾಯಿಸಿ]

ಪದ್ಮಾವತಿ ದೇವಿ ಮಂದಿರದ ಬಲಭಾಗದಲ್ಲಿ ಇರುವುದು, ವರ್ತಮಾನ ಕಾಲದ ೨೩ನೆಯ ತೀರ್ಥಂಕರನಾದ ಪಾರ್ಶ್ವನಾಥನ ಬಸದಿ. ಕಲ್ಲಿನಿಂದ ಕಟ್ಟಿರುವ ಈ ಮಂದಿರದಲ್ಲಿ ನವರಂಗ, ಸುಕನಾಸಿ ಮತ್ತು ಗರ್ಭಗೃಹವನ್ನು ಕಾಣಬಹುದು. ನವರಂಗದಲ್ಲಿ ಪುರಾತನವಾದ ಅಂಬಿಕಾ ದೇವಿಯ ವಿಗ್ರಹ ಮತ್ತು ಪಕ್ಕದಲ್ಲಿ ಕಲ್ಲಿನಿಂದ ನಿರ್ಮಿತವಾದ ಪೀಠ, ಅದರಲ್ಲಿ ಭಟ್ಟಾರಕರ ಪಾದುಕೆಗಳಿವೆ. ಬಲಭಾಗದಲ್ಲಿ ಕಪ್ಪು ಶಿಲೆಯಿಂದ ನಿರ್ಮಿಸಲಾಗಿರುವ, ಪಾರ್ಶ್ವ ತೀರ್ಥಂಕರನ ಎರಡು ಮೂರ್ತಿಗಳಿವೆ. ಇವುಗಳಲ್ಲಿ ಒಂದು ಕಾಯೋತ್ಸರ್ಗ ಭಂಗಿಯಲ್ಲಿಯೂ ಇನ್ನೊಂದು ಪದ್ಮಾಸನ ಭಂಗಿಯಲ್ಲಿ ಇವೆ. ನವರಂಗದ ಎಡಭಾಗದಲ್ಲಿಯೂ ಸಹ ಕಪ್ಪು ಶಿಲೆಯಿಂದ ನಿರ್ಮಿಸಲಾದ, ಕಾಯೋತ್ಸರ್ಗ ಭಂಗಿಯಲ್ಲಿರುವ ಪಾರ್ಶ್ವ ತೀರ್ಥಂಕರನ ವಿಗ್ರಹವನ್ನು ಕಾಣಬಹುದಾಗಿದೆ.

ಬಸದಿಯಲ್ಲಿ ಎರಡು ಮಹಡಿಗಳಿವೆ.

  • ಮೊದಲ ಮಹಡಿಯಲ್ಲಿ ವರ್ತಮಾನ ಕಾಲದ ೨೪ನೆಯ ತೀರ್ಥಂಕರ ಮಹಾವೀರನ ಅಮೃತಶಿಲೆಯ ವಿಗ್ರಹ, ಜೊತೆಗೆ ಇತರ ತೀರ್ಥಂಕರರ ಬಿಂಬಗಳಿವೆ.
  • ಎರಡನೇ ಮಹಡಿಯಲ್ಲಿ ಅಮೃತಶಿಲೆಯಿಂದ ನಿರ್ಮಿಸಲಾದ ಪಾರ್ಶ್ವನಾಥನ ಮೂರ್ತಿಯನ್ನು ಇರಿಸಲಾಗಿದೆ.

ಈ ಬಸದಿಯಲ್ಲಿ ಪಾರ್ಶ್ವನಾಥ ತೀರ್ಥಂಕರ ಮೂಲನಾಯಕನಾಗಿ ಆರಾಧನೆಗೊಳ್ಳುತ್ತಿದ್ದಾನೆ[೪].

ಕ್ಷೇತ್ರಪಾಲ ಮಂದಿರ[ಬದಲಾಯಿಸಿ]

ಪಾರ್ಶ್ವನಾಥ ಮಂದಿರದ ಬಲಕ್ಕೆ, ಸ್ವಲ್ಪ ಹಿಂಭಾಗದಲ್ಲಿ ಕ್ಷೇತ್ರಪಾಲ ಮಂದಿರವಿದೆ[೫].

ಬೋಗಾರ ಬಸದಿ(ಅಶೋಕ ಬಸದಿ)[ಬದಲಾಯಿಸಿ]

ಸಾಂತರ ಅರಸರು ಕಟ್ಟಿಸಿದ ಈ ಬಸದಿಯು ಸುಮಾರು ೭-೮ನೆಯ ಶತಮಾನಕ್ಕೆ ಸೇರಿದ್ದಾಗಿದೆ. ಈ ಬಸದಿಗೆ ಮೇಲೊಂದು ಮಹಡಿ ಇದೆ. ಈ ಬಸದಿಯ ವಿಶೇಷವೆಂದರೆ ಎರಡು ಗರ್ಭಗೃಹಗಳು. ಒಂದು ಕೆಳಗಿನ ಆವರಣದಲ್ಲಿ ಇದ್ದರೆ, ಇನ್ನೊಂದು ಮೇಲಿನ ಮಹಡಿಯಲ್ಲಿದೆ. ಈ ಮಂದಿರ ದ್ರಾವಿಡ ಶೈಲಿಯಲ್ಲಿ ಕಟ್ಟಲ್ಪಟ್ಟಿದೆ.

ಈ ಮಂದಿರವನ್ನು ಕಾಲಾನುಕ್ರಮದಲ್ಲಿ ನವೀಕರಣ ಮಾಡಲಾಗಿದೆ[೬].

ಪಂಚಕೂಟ ಬಸದಿ[ಬದಲಾಯಿಸಿ]

ಹುಮಚದಲ್ಲಿರುವ ಇನ್ನೊಂದು ಆಕರ್ಷಣೀಯ ಮಂದಿರ ಪಂಚಕೂಟ ಬಸದಿ. ಇಲ್ಲಿರುವ ಬಸದಿಗಳಲ್ಲಿ, ಪಂಚಕೂಟ ಬಸದಿಯೇ ಎಲ್ಲಕ್ಕಿಂತ ದೊಡ್ಡದು ಮತ್ತು ಪ್ರಸಿದ್ಧವಾದುದು. ಈ ಮಂದಿರದ ಪ್ರಮುಖ ಆಕರ್ಷಣೆಯೆಂದರೆ ಐದು ಗರ್ಭಗೃಹಗಳು ! ಹಾಗಾಗಿಯೇ ಇದಕ್ಕೆ ಪಂಚಕೂಟ ಬಸದಿ ಎಂದು ಹೆಸರು ಬಂದಿದೆ. ಬಸದಿಗೆ ಊರ್ವಿಕುಲತಿಲಕ ಎಂದೂ ಹೆಸರಿದೆ. ಚಾಳುಕ್ಯ ಶೈಲಿಯಲ್ಲಿ ಈ ಬಸದಿಯನ್ನು ನಿರ್ಮಿಸಲಾಗಿದೆ. ಪಲ್ಲವರಾಜನ ಪತ್ನಿ ಚಟ್ಟಲಾದೇವಿಯು ೧೦೭೭ರಲ್ಲಿ ಈ ಬಸದಿಯನ್ನು ಕಟ್ಟಿಸಿದಳು ಎಂದು ಶಾಸನಗಳಿಂದ ತಿಳಿದುಬರುತ್ತದೆ.

ಒಂದು ಅಂತರಾಳ, ನವರಂಗ ಮತ್ತು ಒಂದು ಬಯಲು ಮುಖಮಂಟಪಗಳಿವೆ. ದೇವಾಲಯದ ಸುತ್ತಲೂ ಪ್ರದಕ್ಷಿಣ ಪಥವಿದೆ. ಐದು ಗರ್ಭಗೃಹಗಳಲ್ಲಿ ವೃಷಭನಾಥ, ಅಜಿತನಾಥ, ಶಾಂತಿನಾಥ, ಪಾರ್ಶ್ವನಾಥ ಮತ್ತು ಮಹಾವೀರ ತೀರ್ಥಂಕರರ ವಿಗ್ರಹಗಳಿವೆ. ಅಂತರಾಳ, ಮುಖಮಂಟಪದಲ್ಲಿ ಸುಂದರವಾದ ಕುಸುರಿ ಕೆತ್ತನೆಗಳನ್ನು ಕಾಣಬಹುದು. ಬಸದಿಯ ಮುಂಭಾಗದಲ್ಲಿ ಭವ್ಯವಾದ ಮಾನಸ್ತಂಭವಿದೆ. ಇದು ಒಂದೇ ಒಂದು ದೊಡ್ಡ ಕಲ್ಲಿನಿಂದ ನಿರ್ಮಿತವಾಗಿದ್ದು, ಸುಂದರವಾದ ಕೆತ್ತನೆಗಳನ್ನು ಹೊಂದಿದೆ. ಈ ಮಾನಸ್ತಂಭವು ಮೂರು ಹಂತಗಳನ್ನು ಹೊಂದಿರುವ ವೇದಿಕೆಯ ಮೇಲೆ ನಿಂತಿದೆ. ಎಲ್ಲಕ್ಕಿಂತ ಕೆಳಗಿನ ಹಂತದಲ್ಲಿ ನಾಲ್ಕು ಮೂಲೆಗಳಲ್ಲಿ ಮತ್ತು ಮಧ್ಯಬಿಂದುಗಳಲ್ಲಿ ಆನೆಗಳನ್ನು ಕೆತ್ತಲಾಗಿದೆ. ಈ ಆನೆಗಳ ನಡುವೆ ವಿವಿಧ ಭಂಗಿಗಳಲ್ಲಿ ಕುಳಿತಿರುವ ಸಿಂಹಗಳ ಕೆತ್ತನೆಯಿದೆ. ಎರಡನೆಯ ಹಂತದಲ್ಲಿ ಅಷ್ಟ ದಿಕ್ಪಾಲಕರು ಮತ್ತು ಸಂಗೀತಗಾರರೂ ಸೇರಿದಂತೆ ಅವರ ಪರಿವಾರದವರನ್ನು ಕೆತ್ತಲಾಗಿದೆ. ಬಲಭಾಗದಲ್ಲಿ ಜಿನದತ್ತರಾಯನ ಅರಮನೆಯ ಅವಶೇಶಗಳನ್ನು ಕಾಣಬಹುದು[೭][೮]

ಗುಡ್ಡದ ಬಸದಿ[ಬದಲಾಯಿಸಿ]

ಹೆಸರೇ ಹೇಳುವ ಹಾಗೆ ಈ ಬಸದಿಯು ಪದ್ಮಾವತಿ ದೇವಿ ಮಂದಿರದ ಹಿಂದೆ ಇರುವ ಸಣ್ಣ ಗುಡ್ಡದ ಮೇಲೆ ಇದೆ. ಭಗವಾನ್ ಬಾಹುಬಲಿ ಇಲ್ಲಿನ ಆರಾಧ್ಯ ಮೂರ್ತಿ.

ಈ ಬಸದಿಯನ್ನು, ತನ್ನ ಗುರುಗಳಾದ ಸಿದ್ಧಾಂತ ಭಟ್ಟಾರಕರ ಆಜ್ಞೆಯ ಮೇರೆಗೆ ವಿಕ್ರಮ ಸಾಂತರನು ಕ್ರಿ.ಶ. ೮೯೮ರ ಸುಮಾರಿಗೆ ನಿರ್ಮಿಸಿದ ಸಂಗತಿಯು ಇಲ್ಲಿಯೇ ಸಿಕ್ಕಿರುವ ಶಾಸನದಿಂದ ಗೊತ್ತಾಗುತ್ತದೆ.. ಈ ಬಸದಿಯನ್ನು ದ್ರಾವಿಡ ವಾಸ್ತುಶಿಲ್ಪದ ಪ್ರಕಾರವಾಗಿ ನಿರ್ಮಿಸಲಾಗಿದ್ದು, ೫ ಅಡಿ ಎತ್ತರದ ಭಗವಾನ್ ಬಾಹುಬಲಿಯ ವಿಗ್ರಹವನ್ನು ಇಲ್ಲಿ ಕಾಣಬಹುದು.

ಈ ಬಸದಿಯನ್ನು ನವೀಕರಿಸುವ ಉದ್ದೇಶದಿಂದ ೧೯೫೦ರಲ್ಲಿ ಸಂಪೂರ್ಣವಾಗಿ ಬಿಚ್ಚಲಾಯಿತು. ಆದರೆ ಕೆಲವೊಂದು ಅನಿವಾರ್ಯ ಕಾರಣಗಳಿಂದಾಗಿ ನವೀಕರಣ ಕಾರ್ಯವನ್ನು ಅರ್ಧದಲ್ಲೇ ನಿಲ್ಲಿಸಲಾಯಿತು.

೧೯೭೦ರಲ್ಲಿ ೨೧ ಅಡಿ ಎತ್ತರದ, ಕಾಯೋತ್ಸರ್ಗ ಭಂಗಿಯ ಪಾರ್ಶ್ವನಾಥ ತೀರ್ಥಂಕರನ ವಿಗ್ರಹವೊಂದನ್ನು ಗುಡ್ಡದ ಬಯಲಿನಲ್ಲಿ ಸ್ಥಾಪಿಸಲಾಯಿತು ಆದರೆ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಪ್ರತಿಷ್ಟಾಪಿಸಲಾಗಲಿಲ್ಲ.

ಸುಮಾರು ವರ್ಷಗಳ ನಂತರ, ಆ ಪಾರ್ಶ್ವನಾಥ ತೀರ್ಥಂಕರನ ವಿಗ್ರಹವನ್ನು ಮೂರುದಿಕ್ಕಿನಿಂದ ಸುತ್ತುವರಿಯುವಂತೆ ಕಟ್ಟಡವನ್ನು ನಿರ್ಮಿಸಲಾಯಿತು. ಪಾರ್ಶ್ವನಾಥ ವಿಗ್ರಹದ ಬಲಭಾಗದಲ್ಲಿ, ಈ ಹಿಂದೆ ಇದ್ದ ಪುರಾತನ ಬಾಹುಬಲಿ ವಿಗ್ರಹವನ್ನೂ, ಎಡಭಾಗದಲ್ಲಿ ಶಾಂತಿನಾಥ ತೀರ್ಥಂಕರನ ವಿಗ್ರಹವನ್ನೂ ಸ್ಥಾಪಿಸಲಾಯಿತು.

ಕಟ್ಟಡದ ಎದುರಿಗೆ, ಭೈರವ ಪದ್ಮಾವತಿ ದೇವಿ ಮತ್ತು ಧರಣೇಂದ್ರ ಯಕ್ಷನಿಗೆ ಪ್ರತ್ಯೇಕವಾಗಿ ಎರಡು ಬಸದಿಗಳನ್ನು ನಿರ್ಮಿಸಲಾಯಿತು. ಈ ಬಸದಿಗಳ ಸಮುಚ್ಚಯಕ್ಕೆ ತ್ರಿಕೂಟ ಬಸದಿ ಎಂದು ಹೆಸರಿಟ್ಟು ಮೇ ೨೦೧೩, ೧೦-೧೬ರವರೆಗ ಪಂಚಕಲ್ಯಾಣ ಸಹಿತ ಪ್ರತಿಷ್ಠೆ, ಮಹಾಮಸ್ತಕಾಭಿಷೇಕಮಹೋತ್ಸವ, ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು[೯].

ಮಕ್ಕಳ ಬಸದಿ[ಬದಲಾಯಿಸಿ]

ಈ ಬಸದಿಯು ಸಂಪೂರ್ಣವಾಗಿ ಶಿಲಾಮಯವಾಗಿದ್ದು, ನವರಂಗ, ಅಂತರಾಳ ಮತ್ತು ಗರ್ಭಗೃಹವನ್ನು ಹೊಂದಿದೆ. ಗರ್ಭಗೃಹದಲ್ಲಿ ಕಾಯೋತ್ಸರ್ಗ ಭಂಗಿಯಲ್ಲಿರುವ ಭಗವಾನ್ ಪಾರ್ಶ್ವನಾಥ ತೀರ್ಥಂಕರನ ವಿಗ್ರಹವನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಬಸದಿಯ ಮೊದಲ ಮಹಡಿಯನ್ನು ನಿರ್ಮಿಸಿರುವುದರಿಂದ ಈ ಬಸದಿಯನ್ನು ಮಕ್ಕಳ ಬಸದಿ ಎಂದು ಕರೆಯುತ್ತಾರೆ[೧೦].

ಮಠದ ಬಸದಿ[ಬದಲಾಯಿಸಿ]

ಈ ಬಸದಿ, ಮಠದ ಒಳಗೆ ಇದೆ. ಬಸದಿಯ ಗರ್ಭಗೃಹದಲ್ಲಿ ಪದ್ಮಾಸನದಲ್ಲಿ ಕುಳಿತ ನೇಮಿನಾಥ ತೀರ್ಥಂಕರ ವಿರಹ ಮತ್ತು ಮಾತೆ ಸರಸ್ವತಿಯ ವಿಗ್ರಹವನ್ನು ಕಾಣಬಹುದು[೧೧].

ಪಾಲಿಯಕ್ಕನ ಬಸದಿ[ಬದಲಾಯಿಸಿ]

ವಿಕ್ರಮ ಸಾಂತರನ ಅರಮನೆಯ ಅಡಿಗೆಮನೆಯಲ್ಲಿ ಕೆಲಸ ಮಾಡುತ್ತಿದ್ದವಳು ಸಾಸಿಮೆಯಬ್ಬೆ. ಈಕೆಯ ಮಗಳೇ ಪಾಲಿಯಕ್ಕ. ವಿಕ್ರಮ ಸಾಂತರನು ಈಕೆಯನ್ನು ಮೆಚ್ಚಿ ಮದುವೆಯಾಗಿ ತನ್ನ ಉಪಪತ್ನಿಯಾಗಿ ಸ್ವೀಕರಿಸುತ್ತಾನೆ. ಈಕೆ ತನ್ನ ತಾಯಿಯ ನೆನಪಿಗೆ ಈ ಬಸದಿಯನ್ನು ಕಟ್ಟಿಸಿದ್ದುದರಿಂದ ಇದನ್ನು ಪಾಲಿಯಕ್ಕನ ಬಸದಿ ಎಂದು ಹೆಸರು ಬಂದಿದೆ.

ಈ ಬಸದಿ ಕುಮುದ್ವತಿ ತೀರ್ಥ(ಕುಮುದ್ವತಿ ನದಿಯ ಜನ್ಮಸ್ಥಾನ)ದ ಎದುರು ಭಾಗದಲ್ಲಿದೆ. ಸದ್ಯ ಈ ಬಸದಿ ಸುಸ್ಠಿತಿಯಲ್ಲಿಲ್ಲ. ಬಸದಿಯ ಒಳಗೆ ೩ ಅಡಿ ಎತ್ತರದ, ಪದ್ಮಾಸನ ಭಂಗಿಯಲ್ಲಿರುವ ತೀರ್ಥಂಕರನ ವಿಗ್ರಹವಿದೆ[೧೨].

ಜೈನ ಮಠ[ಬದಲಾಯಿಸಿ]

ಪಾರ್ಶ್ವನಾಥ ಬಸದಿಯ ಬಲಭಾಗದಲ್ಲಿ ಜೈನಮಠವಿದೆ. ಶ್ರೀಕ್ಷೇತ್ರದ ಎಲ್ಲಾ ಜೈನ ಮಂದಿರಗಳ ದೈನಂದಿನ ಆಡಳಿತವನ್ನು ಮಠವು ನೋಡಿಕೊಳ್ಳುತ್ತದೆ. ಈ ಮಠವು ಶ್ರೀ ಕುಂದಕುಂದಾಚಾರ್ಯರ ನಂದಿಸಂಘಕ್ಕೆ ಸೇರಿದ ಸನ್ಯಾಸಿಗಳಿಂದ ನಿರ್ಮಿತವಾಗಿದೆ[೧೩].

ಮುತ್ತಿನ ಕೆರೆ[ಬದಲಾಯಿಸಿ]

ಪದ್ಮಾವತಿ ಮಂದಿರದ ನೇರ ಎದುರಿಗೆ ಸುಮಾರು ೨೦೦ಮೀ ದೂರದಲ್ಲಿ ವಿಶಾಲವಾದ ಕೆರೆಯನ್ನು ಕಾಣಬಹುದು. ಇದುವೇ ಮುತ್ತಿನ ಕೆರೆ. ಇದಕ್ಕೆ ಈ ಹೆಸರು ಬರಲು ಕಾರಣವಾದ ಪೌರಾಣಿಕ ಕಥೆ ಹೀಗಿದೆ:

ಹೊಂಬುಜವನ್ನು ರಾಜಧಾನಿಯಾಗಿಟ್ಟುಕೊಂಡು ಜಿನದತ್ತರಾಯ, ದೇವಿಯ ಕೃಪೆ ಮತ್ತು ಗುರುಗಳ ಆಶೀರ್ವಾದದಿಂದ ಆಡಳಿತದಲ್ಲಿ ದಿನದಿಂದ ದಿನಕ್ಕೆ ಏಳಿಗೆಯನ್ನು ಕಾಣುತ್ತಾನೆ. ಕೆಲಕಾಲದ ನಂತರ ಜಿನದತ್ತರಾಯನಿಗೆ ಮಧುರೆಯ ಪಾಂಡ್ಯರಾಜ ಮತ್ತು ಅವನ ತಮ್ಮ ವೀರಪಾಂಡ್ಯರಾಜನ ಪುತ್ರಿಯರ ಜೊತೆಗೆ ವಿವಾಹವಾಗುತ್ತದೆ. ಜಿನದತ್ತರಾಯನ ಗೃಹಸ್ಥ ಜೀವನವು ಸುಖಸಂತೋಷದಿಂದ ಕಳೆಯುತ್ತಿರುತ್ತದೆ. ಹೀಗಿರಲು ಒಂದು ದಿನ, ಅರಮನೆಯ ಹತ್ತಿರದ ತಾವರೆಕೆರೆಯಲ್ಲಿ, ಎರಡು ಮುತ್ತಿನ ಮಣಿಗಳು ಸೃಷ್ಟಿಯಾಗಿರುತ್ತದೆ. ಇದನ್ನು ನೋಡಿದ ಅರಮನೆಯ ಸೇವಕನೊಬ್ಬ ಅವುಗಳನ್ನು ತಂದು ಜಿನದತ್ತರಾಯನಿಗೆ ತಂದುಕೊಡುತ್ತಾನೆ. ಅವುಗಳಲ್ಲಿ ಒಂದು ಶುಭ್ರವಾಗಿ ಮಿನುಗುತ್ತಿದ್ದರೆ, ಇನ್ನೊಂದು ಮಸುಕು ಮಸುಕಾಗಿತ್ತು. ಜಿನದತ್ತರಾಯ ಅವುಗಳಿಂದ ಎರಡು ಮೂಗುತಿಗಳನ್ನು ಮಾಡಿ, ಮಿನುಗುತ್ತಿದ್ದ ಮುತ್ತಿನ ಮೂಗುತಿಯನ್ನು ತನ್ನ ಪತ್ನಿಗೆ ತೊಡಿಸಿ ಸಂತೋಷಿಸುತ್ತಾನೆ. ಮುಸುಕಾದ ಮುತ್ತಿನಿಂದ ಮಾಡಿದ ಮೂಗುತಿಯನ್ನು ಮಂದಿರದಲ್ಲಿದ್ದ ದೇವಿಯ ಪರುಷಮೂರ್ತಿಗೆ ಇಡುತ್ತಾನೆ. ಮರುದಿನ ಪೂಜೆಗೆಂದು ಮಂದಿರಕ್ಕೆ ಹೋದಾಗ, ಹಿಂದಿನ ದಿನ ಮಡದಿಗೆ ನೀಡಿದ್ದ ಮೂಗುತಿ, ದೇವಿಯ ಬಿಂಬದಲ್ಲಿ ಪ್ರಕಾಶಿಸುತ್ತಿರುತ್ತದೆ. ಮಹಾಮಾತೆ ತನ್ನನ್ನು ಪರೀಕ್ಷಿಸಲೆಂದೇ ಎರಡು ಮುತ್ತುಗಳನ್ನು ಸೃಷ್ಟಿಸಿದ್ದಾಳೆ ಎಂದು ಜಿನದತ್ತರಾಯನಿಗೆ ಆಗ ಅರಿವಾಯಿತು. ಪಶ್ಚಾತ್ತಾಪದಿಂದ ಮನಸು ಮಡುಗಟ್ಟಿತು, ಹೃದಯ ಭಾರವಾಯಿತು. ಮನೋವೇದನೆಯಿಂದ ಜಿನದತ್ತರಾಯನಿಗೆ ಮೂರ್ಛಾವಸ್ಥೆ ಉಂಟಾಯಿತು.

ಕನಸಲ್ಲಿ ಬಂದ ದೇವಿ ನುಡಿದಳು: "ಕಲಿಗಾಲದಲ್ಲಿ ಪರುಷಮೂರುತಿಗೆ ಇನ್ನು ಬೆಲೆಯಿಲ್ಲ. ಭಯ ವಿನಯ ಉಪಕಾರ ಸ್ಮರಣೆ ಕೃತಜ್ಞತೆಗೆಳಿಗೆ ಇನ್ನು ಅಭಾವ. ಇದಕ್ಕೆ ನೀನೇ ಸಾಕ್ಷಿ ಜಿನದತ್ತ, ನಾನಿನ್ನು ಪಾತಾಳಕ್ಕಿಳಿಯುವೆ" ಎಂದಳು. ಮುಂದುವರಿದು, "ಇಲ್ಲಿಂದ ಸ್ವಲ್ಪ ದೂರದ ಗುಡ್ಡದ ಹಿಂದಿನ ಪೊದೆಯಲ್ಲಿ ನನ್ನ ಪುರಾತನ ವಿಗ್ರಹವಿದೆ. ಅದನ್ನು ಇಲ್ಲಿ ತಂದು ಪ್ರತಿಷ್ಠೆ ಮಾಡು. ಅದರಲ್ಲಿ ನನ್ನ ಶಕ್ತಿಯೆಲ್ಲಾ ತುಂಬಿರುತ್ತದೆ. ಎಲ್ಲಿಯವರೆಗೆ ಲಕ್ಕಿಯ ಗಿಡ ಒಣಗದೋ, ಎಲ್ಲಿಯವರೆಗೆ ಮುತ್ತಿನಕೆರೆ ಬತ್ತದೋ, ಎಲ್ಲಿಯವರೆಗೆ ಬಲಮುಡಿ ಪ್ರಸಾದವು ಇಲ್ಲಿ ಆಗುತ್ತಿರುವುದೋ ಅಲ್ಲಿಯವರೆಗೆ ನಾನು ನಿನ್ನನ್ನು ಕಾಪಾಡುತ್ತಿರುತ್ತೇನೆ" ಎಂದು ಅಭಯ ನುಡಿಯುತ್ತಾಳೆ, ಪರುಷಮೂರ್ತಿಯು ಪಾತಾಳಕ್ಕೆ ಇಳಿದು ಮಾಯವಾಗುತ್ತದೆ[೧೪]..

ಮಠದ ಅಧೀನದಲ್ಲಿ ನಡೆಸಲ್ಪಡುವ ಸಂಸ್ಥೆಗಳು[ಬದಲಾಯಿಸಿ]

ವಿದ್ಯಾಸಂಸ್ಥೆಗಳು[ಬದಲಾಯಿಸಿ]

  • ಶ್ರೀ ಕುಂದಕುಂದ ವಿದ್ಯಾಪೀಠ[೧೫]
  • ಶ್ರೀ ಪದ್ಮಾಂಬಾ ಪ್ರೌಢಶಾಲೆ[೧೬]
  • ಶ್ರೀ ವರ್ಧಮಾನ ಹುಡುಗರ ವಸತಿನಿಲಯ[೧೭]
  • ಶ್ರೀ ಸನ್ಮತಿ ಹುಡುಗರ ವಸತಿನಿಲಯ[೧೮]

ಪ್ರಕಾಶನ[ಬದಲಾಯಿಸಿ]

  • ಶ್ರೀ ಸಿದ್ಧಾಂತ ಕೀರ್ತಿ ಗ್ರಂಥಾಮಾಲೆ[೧೯]
  • ಗುರುದೇವ ಮಾಸಪತ್ರಿಕೆ[೨೦]

ಮಠದ ಅಧೀನದಲ್ಲಿ ಬರುವ ಜೈನ ತೀರ್ಥಕ್ಷೇತ್ರಗಳು[ಬದಲಾಯಿಸಿ]

  • ಕುಂದಾದ್ರಿ ಅತಿಶಯ ಕ್ಷೇತ್ರ ತೀರ್ಥಹಳ್ಳಿ ತಾಲೂಕು[೨೧].
  • ವರಂಗ ಅತಿಶಯ ಕ್ಷೇತ್ರ ಕಾರ್ಕಳ ತಾಲೂಕು[೨೨].
  • ಶ್ರವಣ ಬಸದಿ ಅತಿಶಯ ಕ್ಷೇತ್ರ ಕಾರ್ಕಳ ತಾಲೂಕು[೨೩].
  • ಹಟ್ಟಿಯಂಗಡಿ ಶ್ರೀ ಕ್ಷೇತ್ರ ಕುಂದಾಪುರ ತಾಲೂಕು[೨೪].

ಉಲ್ಲೇಖಗಳು[ಬದಲಾಯಿಸಿ]