ಕೋಶ ವಿಜ್ಞಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೋಶ ವಿಜ್ಞಾನ ಕೋಶವೆಂದರೆ ನಿಘಂಟು. ಶಬ್ದಗಳನ್ನು ಆಕಾರಾದಿಯಾಗಿ ವಿಂಗಡಿಸಿ ಅವುಗಳ ಅರ್ಥವನ್ನು ಹೇಳಿದಲ್ಲಿ ಅದು ಕೋಶವೆನಿಸುತ್ತದೆ. ಇಂಥ ಕೋಶಗಳನ್ನು ಸಿದ್ಧಪಡಿಸುವ ಶಾಸ್ತ್ರವನ್ನು ಕೋಶವಿಜ್ಞಾನವೆನ್ನುತ್ತೇವೆ. (ಲೆಕ್ಸಿಕಾಗ್ರಫಿ). ಈ ಲೇಖನದಲ್ಲಿ ಕೋಶವಿಜ್ಞಾನದ ಉಗಮ, ವಿಕಾಸ, ಕೋಶಗಳಲ್ಲಿನ ವೈವಿಧ್ಯ, ಪ್ರಸಿದ್ಧ ಕೋಶಗಳು-ಈ ಬಗ್ಗೆ ವಿಷಯ ಸಂಗ್ರಹಣೆ ಮಾಡಲಾಗಿದೆ. ಭಾಷೆ ಮೊದಲು, ಅನಂತರ ವ್ಯಾಕರಣ. ಹಾಗೆಯೇ ಭಾಷೆ ಮೊದಲು, ಅನಂತರ ಕೋಶ. ಭಾಷೆ ಇನ್ನೂ ಶೈಶವಾವಸ್ಥೆಯಲ್ಲಿದ್ದು ಲಿಪಿ ಬಳಕೆಗೆ ಬಾರದಿದ್ದಾಗ ವ್ಯಾಕರಣ ಹಾಗೂ ಕೋಶಗಳ ಅಗತ್ಯ ಅಷ್ಟಾಗಿ ಇರಲಿಲ್ಲವೆಂದು ತೋರುತ್ತದೆ. ಭಾಷೆ ಬೆಳೆದಂತೆಲ್ಲ ಕಾಲ ಮತ್ತು ದೇಶಗಳ ವ್ಯತ್ಯಾಸದಿಂದಾಗಿ ಉಚ್ಚಾರಣೆ ಮತ್ತು ಪ್ರಯೋಗಗಳಲ್ಲಿ ಹಾಗೂ ಶಬ್ದಾರ್ಥ ವಿಚಾರದಲ್ಲಿ ಏಕರೂಪತೆ ಕಡಿಮೆಯಾಯಿತಾಗಿ ಭಾಷೆಗೊಂದು ವ್ಯಾಕರಣ, ಒಂದು ಕೋಶ ಅಗತ್ಯವೆನಿಸುತ್ತ ಬಂದಿರಬೇಕು. ಆಡಿದ ಮಾತು, ಬರೆದ ವಿಷಯ ಸ್ಪಷ್ಟವಾಗಬೇಕಾದರೆ ನಮ್ಮ ಭಾಷೆ ಶುದ್ಧವಾಗಿ, ವ್ಯಾಕರಣಬದ್ಧವಾಗಿರಬೇಕಲ್ಲದೆ ಮಾತಿನಲ್ಲಿನ ಪ್ರತಿಯೊಂದು ಶಬ್ದಕ್ಕೂ ಖಚಿತವಾದ ಅರ್ಥವಿರಬೇಕು. ಒಂದೇ ಶಬ್ದವನ್ನು ನಾಲ್ಕು ಜನ ನಾಲ್ಕು ಅರ್ಥದಲ್ಲಿ ಬಳಸಿದಾಗ, ಒಂದೇ ಪದವನ್ನು ಒಬ್ಬನೇ ಒಂದು ಬರೆಹದಲ್ಲಿ ನಾಲ್ಕು ಅರ್ಥಗಳಲ್ಲಿ ಬಳಸಿದಾಗ ಅಭಿಪ್ರಾಯ ಸಂಧಿಗ್ಧವಾಗುತ್ತದೆ. ಜೊತೆಗೆ ಶಬ್ದದ ಕಾಗುಣಿತ ಕೂಡ. [೧]

ಕೋಶನಿರ್ಮಾಣ[ಬದಲಾಯಿಸಿ]

ಭಾಷಾವಿಜ್ಞಾನ ಕ್ಷೇತ್ರದಲ್ಲಿ ಕೋಶನಿರ್ಮಾಣ ಕಾರ್ಯ ಬಹು ಹಿಂದಿನ ಕಾಲದಿಂದಲೂ ನಡೆದು ಬಂದಿದೆ. ಪ್ರಪ್ರಥಮ ಕೋಶ ಕಾಣಿಸಿಕೊಂಡಿದ್ದು ಭರತಖಂಡದಲ್ಲಿ. ಸುಮಾರು ಕ್ರಿ.ಪೂ.1000ಕ್ಕಿಂತ ಹಿಂದೆಯೇ ಭಾರತದಲ್ಲಿ ನಿಘಂಟುಗಳು ರಚನೆಯಾಗಿರಬಹುದೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ಪಾಣಿನಿಗಿಂತಲ್ಲೂ ಬಹು ಹಿಂದೆ ಯಾಸ್ಕಮಹಾಮುನಿ ಮುಂತಾದ ಭಾರತೀಯ ಪಂಡಿತರು ಅನೇಕ ನಿಘಂಟುಗಳನ್ನು ತಯಾರಿಸಿದ್ದರೆಂದು ತಿಳಿಯಬಂದಿದೆ. ಅವುಗಳಲ್ಲಿ ಉಪಲಬ್ಧವಿರುವ ನಿಘಂಟುಗಳು ಕಡಿಮೆ. ಪಾಣಿನಿಯ ವ್ಯಾಕರಣಗ್ರಂಥ ಹೊರಬರುವ ಹೊತ್ತಿಗಾಗಲೇ ಹಲವಾರು ನಿಘಂಟುಗಳು ಇದ್ದುವೆಂದು ಊಹಿಸಲಾಗಿದೆ. ಆಮೇಲೆ ಗ್ರೀಕ್, ಲ್ಯಾಟಿನ್ ಮುಂತಾದ ಭಾಷೆಗಳಲ್ಲಿ ಅಂದರೆ ಕ್ರಿ.ಶ. 8, 9, 10ನೆಯ ಶತಮಾನಗಳಲ್ಲಿ ವ್ಯಾಕರಣ ಮತ್ತು ನಿಘಂಟುಗಳ ರಚನಾಕಾರ್ಯ ಪಾಣಿನಿ ಮತ್ತು ಯಾಸ್ಕ ಮಹಾಮುನಿಗಳ ವ್ಯಾಕರಣ ಮತ್ತು ನಿಘಂಟುಗಳ ಮಾದರಿಯಲ್ಲಿಯೇ ನಡೆದಿರುವುದು ಕಂಡುಬರುತ್ತದೆ. ಅಂತು ಯೂರೋಪಿನಲ್ಲಿ ಯಾವ ಭಾಷೆಯಲ್ಲಿಯೂ ಸುಮಾರು ಕ್ರಿ.ಪೂ.1000ಕ್ಕಿಂತ ಹಿಂದೆ ಯಾವ ವ್ಯಾಕರಣ ಹಾಗೂ ನಿಘಂಟು ರಚಿತವಾಗಿಲ್ಲವೆನ್ನುವುದು ಖಚಿತ. ಇಂಗ್ಲಿಷ್ ಭಾಷೆಯಲ್ಲಿ ಕೋಶ ನಿರ್ಮಾಣಕಾರ್ಯ ಸುಮಾರು 15 ಮತ್ತು 16ನೆಯ ಶತಮಾನಗಳಿಂದೀಚೆಗೆ ಪ್ರಾರಂಭವಾಯಿತು. ಆದರೆ ಇಪ್ಪತ್ತನೆಯ ಶತಮಾನದ ಮೊದಲು ಐವತ್ತು ಆರುವತ್ತು ವರ್ಷಗಳಲ್ಲಿ ಪಾಶ್ಚಾತ್ಯರು ಕೋಶ ನಿರ್ಮಾಣಕಾರ್ಯದಲ್ಲಿ ಅಗ್ರಗಣ್ಯರೆನಿಸಿಕೊಂಡಿದ್ದಾರೆ. ಯಾವ ಖಚಿತ ಆಧಾರಗಳೂ ಇಲ್ಲದಾಗ, ವ್ಯಕ್ತಿಯಿಂದ ವ್ಯಕ್ತಿಗೆ, ಸನ್ನಿವೇಶದಿಂದ ಸನ್ನಿವೇಶಕ್ಕೆ ಬದಲಾಗುವ ಸಾಧ್ಯತೆ ಉಂಟು. ಹೀಗಾಗಿ ಒಂದು ಭಾಷೆಯಲ್ಲಿ ಕ್ರಮೇಣ ಶಿಷ್ಯರೂಪಗಳು, ವ್ಯಾವಹಾರಿಕ ರೂಪಗಳು ಮತ್ತು ಗ್ರಾಮ್ಯರೂಪಗಳು-ಎಂದು ಶಬ್ದಗಳಿಗೆ ಮೂರು ರೂಪಗಳು ಏರ್ಪಡುತ್ತವೆ. ಇಂಥ ಕಷ್ಟಗಳನ್ನು ನಿವಾರಿಸಲು ಪ್ರತಿಯೊಂದು ಭಾಷೆಗೂ ಸರಿಯಾದ ಒಂದು ವ್ಯಾಕರಣ ಮತ್ತು ಒಂದು ಕೋಶ ಅಗತ್ಯವೆನಿಸುತ್ತದೆ. ಈ ಎರಡೂ ಭಾಷಾಶಾಸ್ತ್ರದ ಪ್ರಮುಖ ಅಂಗಗಳಾಗಿವೆ.[೨]

ಕೋಶಗಳ ವಿಂಗಡಣೆ[ಬದಲಾಯಿಸಿ]

ಕೋಶಗಳನ್ನು ಪುಸ್ತಕಕೋಶ, ವ್ಯಕ್ತಿಕೋಶ ಮತ್ತು ಭಾಷಾಕೋಶ ಎಂದು ಮೂರು ವರ್ಗಗಳಲ್ಲಿ ವಿಂಗಡಿಸಬಹದು. ವೇದ, ಪುರಾಣ, ಮಹಾಭಾರತ, ರಾಮಾಯಣ ಮುಂತಾದ ಬೇರೆ ಬೇರೆ ಪೌರಾಣಿಕ ಗ್ರಂಥಗಳನ್ನು ಆಧಾರವಾಗಿರಿಸಿಕೊಂಡು ಅವುಗಳಲ್ಲಿನ ಕ್ಲಿಷ್ಟ ಪದಗಳನ್ನು ಸಂಗ್ರಹಿಸಿ ಅರ್ಥೈಸಿದಲ್ಲಿ ಪುಸ್ತಕಕೋಶ ಅಥವಾ ಗ್ರಂಥಸ್ಥ ಕೋಶವಾಗುತ್ತದೆ. ಒಬ್ಬ ವ್ಯಕ್ತಿಯಿಂದಲೇ ನಿರ್ಮಿತವಾದ ಎಲ್ಲಾ ಸಾಹಿತ್ಯಿಕ ಗ್ರಂಥಗಳನ್ನು ಆಧಾರವಾಗಿರಿಸಿಕೊಂಡು ಅವುಗಳಲ್ಲಿನ ಕ್ಲಿಷ್ಟಪದಗಳನ್ನು ಸಂಗ್ರಹಿಸಿ ಅರ್ಥೈಸಿದಲ್ಲಿ ವ್ಯಕ್ತಿಕೋಶವಾಗುತ್ತದೆ. ಪಂಪ, ರನ್ನ, ಶೆಲ್ಲಿ, ವಿಲಿಯಂ ಷೇಕ್ಸ್‌ಪಿಯರ್, ಮಿಲ್ಟನ್, ಕಾಳಿದಾಸ ಮುಂತಾದ ವ್ಯಕ್ತಿಗಳ ಸಾಹಿತ್ಯಸಂಬಂಧಿ ಕೋಶ ಈ ವರ್ಗಕ್ಕೆ ಸೇರುತ್ತದೆ. ಭಾಷಾಕೋಶಗಳಲ್ಲಿ ವಿವಿಧ ರೀತಿಯ ಕೋಶಗಳು ಉಂಟು. ಒಂದೇ ಭಾಷೆಗೆ ಸಂಬಂಧಿಸಿದ ಪದಗಳನ್ನು ಸಂಗ್ರಹಿಸಿ ಅವುಗಳಿಗೆ ಅದೇ ಭಾಷೆಯ ಸರಳ ಅರ್ಥ ನೀಡಿ ಕೋಶವನ್ನು ತಯಾರಿಸಬಹುದು. ಉದಾಹರಣೆ-ಕನ್ನಡ-ಕನ್ನಡ ಕೋಶ. ಒಂದು ಭಾಷೆಯ ಶಬ್ದಗಳಿಗೆ ಬೇರೆ ಭಾಷೆಯಲ್ಲಿ ಅರ್ಥನೀಡಿದಲ್ಲಿ ಅದೊಂದು ಬಗೆಯ ಕೋಶವಾಗುತ್ತದೆ. ಕನ್ನಡ-ಇಂಗ್ಲಿಷ್, ಕನ್ನಡ-ಹಿಂದೀ, ಕನ್ನಡ-ಮರಾಠಿ, ಇಂಗ್ಲಿಷ್-ತೆಲುಗು ಕೋಶಗಳು ಇದಕ್ಕೆ ನಿರ್ದಶನಗಳು. ಕೆಲವು ಭಾಷಾಕೋಶಗಳು ಇದೇ ರೀತಿ ಎರಡು ಮತ್ತು ಎರಡಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಅರ್ಥನೀಡುತ್ತವೆ. ಇವನ್ನೇ ಕ್ರಮವಾಗಿ ಏಕಭಾಷಿಕಕೋಶ, ದ್ವಿಭಾಷಿಕ ಕೋಶ ಮತ್ತು ಬಹುಭಾಷಿಕ ಕೋಶ ಎಂತಲೂ ಕರೆಯುವುದಿದೆ.[೩]

ಕೋಶಗಳ ವರ್ಗ[ಬದಲಾಯಿಸಿ]

ಕೋಶವನ್ನು ಶಾಸ್ತ್ರೀಯವಾಗಿ ಇನ್ನೂ ಮೂರು ವರ್ಗಗಳಲ್ಲಿ ವಿಂಗಡಿಸಬಹುದು. ಅವೇ ವಿವರಣಾತ್ಮಕ ಕೋಶ, ಐತಿಹಾಸಿಕಕೋಶ ಮತ್ತು ತೌಲನಾತ್ಮಕ ಕೋಶಗಳು. ಇಲ್ಲಿ ಕೆಲವು ರೀತಿಯ ಕೋಶಗಳು ಏಕಭಾಷಿಕವಾಗಿಯೂ ದ್ವಿಭಾಷಿಕ ಮತ್ತು ಬಹುಭಾಷಿಕವಾಗಿಯೂ ದೊರೆಯುತ್ತವೆ. ಯಾವ ಒಂದು ಭಾಷೆಯಲ್ಲಿ ದೊರೆಯಬಹುದಾದ ಸಾಹಿತ್ಯಿಕ ಗ್ರಂಥಗಳನ್ನು ಆಧಾರವಾಗಿರಿಸಿಕೊಂಡು ಅಲ್ಲಿ ಸಿಗುವ ಎಲ್ಲ ಶಬ್ದಗಳನ್ನೂ ಅವುಗಳ ಪರಿಸರದೊಂದಿಗೇ ಎತ್ತಿಕೊಂಡು ಸಂಗ್ರಹಿಸಿ ಅವುಗಳ ಅರ್ಥ ಮತ್ತು ವ್ಯಾಕರಣ ವಿಶೇಷಗಳನ್ನು ಗಮನಿಸಿ, ವಿವರಿಸಿ ತಯಾರಿಸಿದ ಕೋಶವೇ ವಿವರಣಾತ್ಮಕ ಕೋಶ. ಕನ್ನಡ-ಕನ್ನಡ ಕೋಶ ಮತ್ತು ಬೃಹದ್ ಹಿಂದೀಕೋಶ ಈ ವರ್ಗಕ್ಕೆ ಸೇರುತ್ತವೆ. ಕೇವಲ ಆಡುಮಾತಿಗೂ ಇಂಥ ಒಂದು ಕೋಶವನ್ನು ಸಿದ್ಧಪಡಿಸಬಹುದು.[೪]

ಉಲ್ಲೇಖಗಳು[ಬದಲಾಯಿಸಿ]

  1. "ಕೋಶ ವಿಜ್ಞಾನ". Retrieved 11 January 2020.
  2. writer, Richard Nordquist Richard Nordquist is a freelance; English, former professor of; Grammar, Rhetoric who wrote college-level; textbooks, Composition. "What Is Lexicography?". ThoughtCo. Retrieved 11 January 2020. {{cite news}}: Cite has empty unknown parameter: |1= (help)
  3. "ಕೋಶ ವಿಜ್ಞಾನ". Retrieved 11 January 2020.
  4. "Definition of lexicography | Dictionary.com". www.dictionary.com. Retrieved 11 January 2020. {{cite news}}: Cite has empty unknown parameter: |1= (help)