ಒಕ್ಕಲಿಗರ ಮದುವೆ
ಒಕ್ಕಲಿಗರ ಮದುವೆ
[ಬದಲಾಯಿಸಿ]ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಮಲೆನಾಡ ಒಕ್ಕಲಿಗರಲ್ಲಿ ಗಂಡು-ಹೆಣ್ಣು ಪರಸ್ಪರ ಒಪ್ಪಿ ಮದುವೆಯಾಗುವ ಸಂದರ್ಭಗಳಲ್ಲಿ ಸಂಗಾತಿಯ ಆಯ್ಕೆಯ ಜವಬ್ದಾರಿ ಕುಟುಂಬದ ಹಿರಿಯರ ಮೇಲಿರುತ್ತದೆ. ಸೋದರ ಮಾವನ ಮಗ ಅಥವಾ ಮಗಳನ್ನು ಮದುವೆಯಾಗುವ ಅವಕಾಶವಿದ್ದರೂ ಇತ್ತೀಚೆಗೆ ಹೊಸ ಸಂಬಂಧವನ್ನು ಹುಡುಕುವುದು ಹೆಚ್ಚಾಗಿದೆ. ಹುಡುಗಿ ಕಡೆಯವರು ಹುಡುಗರನ್ನು ಹುಡುಕಿಕೊಂಡು ಹೋಗುವುದೆ ರೂಢಿ. ಆನಂತರ ಗಂಡಿನ ಕಡೆಯವರು ಎತ್ತು, ಕೋಣ ಗಳನ್ನು ನೋಡುವ ನೆಪ ಮಾಡಿಕೊಂಡು ಹುಡುಗಿಯರ ಊರಿಗೆ ಹೋಗಿ ಹೆಣ್ಣಿನ ಬಗ್ಗೆ ತಿಳಿದುಕೊಳ್ಳುತ್ತಾರೆ. ‘ವರಸಾಮ್ಯ’ ಕಂಡುಬಂದರೆ ನಿಶ್ಚಯ ಮಾಡಿದ ದಿನ ಹೆಣ್ಣನವರ ಆಹ್ವಾನದ ಮೇರೆಗೆ ಗಂಡಿನ ಕಡೆಯಿಂದ ಒಂಭತ್ತು ಮಂಡಿ ವೀಳ್ಯದೆಲೆ, ಅಡಿಕೆ, ಹೂ, ಹಣ್ಣು, ಅರಿಶಿನ ಕುಂಕುಮ ಸಮೇತ ಮಂಗಳದ್ರವ್ಯದೊಂದಿಗೆ ಹೋಗಿ ಹೆಣ್ಣು ನೋಡುವುದು ಪದ್ಧತಿ. ಅದಕ್ಕಾಗಿ ಹೊರಡುವಾಗ ‘ಹಾದಿ ನಿಮಿತ್ತ' ನೋಡುತ್ತಾರೆ. ಅದು ಹೆಚ್ಚು ಕಡಿಮೆಯಾದರೆ ಹೋಗುವುದನ್ನು ರದ್ದು ಮಾಡುವುದು ಇದೆ. ಹಾದಿ ನಿಮಿತ್ತಗಳು ಶುಭವಾಗಿದ್ದರೆ ಹೆಣ್ಣಿನ ಮನೆಗೆ ಹೋಗಿ ಅವಳನ್ನು ನೋಡಿ ಅವಳ ಅಂಗಲಕ್ಷಣಗಳನ್ನು ತಿಳಿಯಲು ಸುಣ್ಣ ತರಲು ಹೇಳುವುದು, ಈರುಳ್ಳಿ ಸಿಪ್ಪೆಯ ಕಸ ಗುಡಿಸಲು ಹೇಳುವುದು-ಮುಂತಾದ ಪರೀಕ್ಷೆಗಳನ್ನು ನಡೆಸುತ್ತಾರೆ. ಹೆಣ್ಣು ಹಿಡಿಸಿತೆಂದರೆ ‘ಒಪ್ಪು ವೀಳ್ಯಕ್ಕೆ' ಬರುವುದಾಗಿ ತಿಳಿಸಿ ಹಿಂದಿರುತ್ತಾರೆ. ನಿಶ್ಶಿತ ದಿನದಂದು ಹೆಣ್ಣಿನ ಕಡೆಯವರು ಮನೆಯಲ್ಲಿ ಕೈ ಹಣತೆ ಹಚ್ಚಿ ನೆಂಟರಿಗಾಗಿ ಕಾಯುತ್ತಾರೆ. ಅದು ವರದಕ್ಷಿಣೆ ಕುರಿತು ಸಮಾಲೋಚನೆ ನಡೆಯುತ್ತದೆ. ಜತೆಗೆ ಗಂಡಿನವರು ಹೆಣ್ಣಿಗೆ ಕೊಡಬೇಕಾದ ಒಡವೆ ವಸ್ತುಗಳ ಮಾತುಕತೆಯೂ ನಡೆದು ಎರಡು ಕಡೆಯವರು ಒಂದು ಒಪ್ಪಂದಕ್ಕೆ ಬರುತ್ತಾರೆ. ಆನಂತರ ತಾರಾನೂಕೂಲ ಅಂದರೆ ಜಾತಕ ತಾಳೆಯಾಗದಿದ್ದರೆ ಎರಡು ಕಡೆಯವರು ನಡೆದುಕೊಳ್ಳುವ ದೇವರ ಸನ್ನಿಧಿಯಲ್ಲಿ ಪ್ರಸಾದ ತೆಗೆಸಿ ನೋಡುತ್ತಾರೆ. ಅಲ್ಲಿ ನಿರೀಕ್ಷಿಸಿದಂತೆ ಫಲ ದೊರೆತರೆ ಮುಂದಿನ ತಯಾರಿ ಮಾಡುತ್ತಾರೆ. ಗಂಡಿನ ತಂದೆ ಸಮ್ಮತಿಯ ಸೂಚಕವಾಗಿ ‘ಒಪ್ಪು ವೀಳ್ಯ’ ಸ್ವೀಕರಿಸುತ್ತಾನೆ. ಹೀಗೆ ಒಪ್ಪು ವೀಳ್ಯ ಸ್ವೀಕರಿಸಿದ ಮೇಲೆ ಆ ಹೆಣ್ಣನ್ನು ಬೇರೆಯವರಿಗೆ ಕೊಡುವಂತಿಲ್ಲ. ನಿಶ್ಚಯಿಸಿದ ಶುಭದಿನದಂದು ‘ನಿಶ್ಚಯದ ಮನೆಶಾಸ್ತ್ರ' ಅಥವಾ ಹೂ ಮುಡಿಸುವ ಶಾಸ್ತ್ರ ಜರಗುತ್ತದೆ. ಗಂಡಿನ ಮನೆಯಿಂದ ಕುಕ್ಕೆ, ವಾದ್ಯಗಳ ಸಮೇತ ಒಂದು ಸಣ್ಣ ದಿಬ್ಬಣದಷ್ಟು ಜನರು ಹೆಣ್ಣಿನ ಮನೆಗೆ ಹೋಗಿ ಹೆಣ್ಣಿಗೆ ಹೂ ಮುಡಿಸುವ ಶಾಸ್ತ್ರ ನೆರವೇರಿಸುತ್ತಾರೆ. ಅದೇ ದಿನ ಸೀಮೆ ಜೋಯಿಸರಿಂದ ಲಗ್ನಪತ್ರಿಕೆಯನ್ನು ಬರೆಸಲಾಗುತ್ತದೆ. ಮದುವೆಗೆ ಎಂಟು ದಿನದ ಮೊದಲು ಗಂಡು-ಹೆಣ್ಣನ್ನು ಅವರವರ ರಕ್ತ ಸಂಬಂಧಿಕರು ಕರೆದುಕೊಂಡು ಹೋಗಿ ‘ಕೋರೂಟ' ನೀಡಿ ಸತ್ಕರಿಸುವುದು ಮಲೆನಾಡ ಒಕ್ಕಲಿಗರಲ್ಲಿರುವ ಒಂದು ವಿಶಿಷ್ಟ್ಯ ಸಂಪ್ರದಾಯವಾಗಿದೆ. [೧] ಮದುವೆಯ ಮೊದಲ ದಿನ ‘ಚಪ್ಪರ ಶಾಸ್ತ್ರ’ ನಡೆಸುತ್ತಾರೆ ಗಂಡು ಮತ್ತು ಹೆಣ್ಣಿನ ಮನೆಗಳಲ್ಲಿ ಆಯಾ ಸೀಮೆಯ ಮಾದಿಗರು ಹನ್ನೆರಡು ಕಂಬಗಳನ್ನು ನೆಟ್ಟು ಹಸಿರು ಚಪ್ಪರ ಹಾಕುತ್ತಾರೆ. ಅದನ್ನು ತುಂಡೆ ತೋರಣದಿಂದ ಅಲಂಕರಿಸುತ್ತಾರೆ.ಆನಂತರ ನೀಮೆ ಮಡಿವಾಳನು ಚಪ್ಪರದ ಕೆಲಛಾವಣಿಯನ್ನು ಬಿಳಿವಸ್ತ್ರದಿಂದ ಮುಚ್ಚುವ ಮೇಲ್ಕಟ್ಟನ್ನು ಕಟ್ಟಿಕೊಡುತ್ತಾನೆ.ಅನಂತರ ಮದುಮಗಳು ಶಾಸ್ತ್ರದ ಭತ್ತಕುಟ್ಟಿ ದೇವತಾಕಾರ್ಯಗಳನ್ನು ನೆರವೇರಿಸುತ್ತಾರೆ.
ದೇವರೂಟಕ್ಕೆ ಹೊಸ ಗಡಿಗಡುಗೆಯಲ್ಲಿ ಹೊಸ ನೀರನ್ನು ತರಬೇಕು.ಇಲ್ಲಿಂದ ಶಾಸ್ತ್ರದ ಆರಂಭವಾಗುತ್ತದೆ.ಮುತ್ತೈದೆಯರು ಉಡಿ ತುಂಬಿಕೊಂಡು ಪ್ರತಿಯೊಂದು ಶಾಸ್ತ್ರಕಾರ್ಯದಲ್ಲಿ ಸೋಬಾನೆ ಹಾಡುತ್ತಾರೆ.ಸೋಬಾನೆಯಿಲ್ಲದ ಮದುವೆ ಅಮಂಗಳಕರ ಎಂಬ ಭಾವನೆ ಜನಜನಿತವಾಗಿದೆ.ಸೋಬಾನೆ ಹಾಡು ಮತ್ತು ಮದುವೆ ಕಳಸ ಎರಡಕ್ಕೂ ತುಂಬ ಮಹತ್ವವಿದೆ.
ದೇವರೂೀಟದ ಕಾರ್ಯಕ್ರಮ ಮುಗಿದ ಮೇಲೆ ಹೆಣ್ಣಿನ ಮನೆಗೆ ಹೋಗುವ ಸಿಧ್ಧತೆ ನಡೆಯುತ್ತದೆ.ಹಿರಿಯ ಮುತ್ತೈದೆಯರು ಸೋಬಾನೆ ಹಾಡುತ್ತ ಹೆಣ್ಣಿನ ಮನೆಗೆ ಕೊಂಡೊಯ್ಯವ ಮಾತಿನಕುಕ್ಕೆ,ಸಾಲಾವಳಿ ಕುಕ್ಕೆ ಮತ್ತು ಕಡೇದ ಬಟ್ಟಲುಗಳಿಗೆ ಧಾರಕಾರ್ಯ ನಿರ್ವಹಿಸಲು ಬೇಕಾಗುವ ನಾನಾ ವಿಧದ ವಸ್ತು ಪದಾರ್ಥಗಳನ್ನು ತುಂಬಿಸಿಡುತ್ತಾರೆ.ಹನ್ನೆರಡು ಬೇರೆ ಬೇರೆ ಗಾತ್ರದ ಕುಂಭಗಳಿಗೆ ಬಗೆ ಬಗೆಯ ಪದಾರ್ಥಗಳನ್ನು ತುಂಬಿ ಕೀಲೂ ಹೂಡುತ್ತಾನೆ ಕುಂಬಾರ .ನವದಂಪತಿಗಳು ತಮ್ಮ ಹೊಸ ದಾಂಪತ್ಯ ಜೀವನದಲ್ಲಿ ಯಾವ ಪದಾರ್ಥಗಳಿಗೂ ಪರದಡದಿರಲಿ ಎಂಬುದೇ ಇದರ ಸಂಕೇತ.ಧಾರೆ ಮಂಡಪದ ಸುತ್ತಲೂ ಬಣ್ಣ ಬಣ್ಣದ ಗಡಿಗೆಗಳನ್ನು ಸಾಲಾಗಿ ಜೋಡಿಸಿಟ್ಟು ಹಸಿನೂಲು ಸುತ್ತುವುದು ನಗೋಲಿ ಶಾಸ್ತ್ರವನ್ನು ನಿರ್ವಹಿಸುವುದಕ್ಕಾಗಿ.
ಮದುವೆಯ ದಿನ ಬೆಳಗಿನ ಜಾವದಲ್ಲಿ ಮದುಮಗ ಮತ್ತು ಮದುಮಗಳ ಕೊರಳಿಗೆ ಪ್ರೀತಿಯ ಬಂಧುಗಳು ತಂತಮ್ಮ ಚಿನ್ನದ ಕಂಠೀಹಾರಗಳನ್ನು ಹಾಕುವುದುವಾಡಿಕೆಯಾಗಿದೆ.ಮದುಮಗಳು ಕೈಕಾಳುಗಳಿಗೆ ಮಿಂಚು ಉಂಗುರ ಧರಿಸಿ ವಾದಗಯಗಳು ಮೊಳಗುತಿದ್ದಾಗ ಸೀಮೆಯ ಮಾದರ ತಂದುಕೊಟ್ಟ ಹಾಲುಗಂಬವನ್ನು ತುಳಸಿಕಟ್ಟೆಯ ಬಲಭಾಗದಲ್ಲಿ ನಡಬೇಕು. ಈ ಶಾಸ್ತ್ರ ಮುಗಿದ ಮೇಲೆ ಮದುಮಗ ‘ಬಿನ್ನಾಣ ಶಾಸ್ತ್ರ' ಮಾಡಿಸಿಕೊಳ್ಳಬೇಕು. ‘ಭಿನ್ನಾಣಿ'( ಕ್ಷೌರಿಕಗೆ ಅಕ್ಕಿ,ವೀಳ್ಯದೆಲೆ,ಚಕ್ರ) ಸಲ್ಲಿಸಿ' ಎಣ್ಣೆ ಅರಿಸಿನ ಶಾಸ್ತ್ರಕ್ಕೆ ಹೋಗಬೇಕು.
ಮದುಮಗನ ವೇಷಭೂಷನ ಸಾಂಪ್ರದಾಯಿಕ ,ಆದರೆ ವಿಶಿಷ್ಟ ಬಗೆಯವು.ಅವನನ್ನು ಒಂದು ಅತ್ತಿ ಮಣೆಯ ಮೇಲೆ ನಿಲ್ಲಿಸಿ ಹೊಸ ಪಂಚೆಯ ಕಾಸೆ ಹಾಕುತ್ತಾರೆ.ಅಂಗಿ,ಕೋಟು ತೊಡಿಸುತ್ತಾರೆ.ತಲೆಗೆ ಜರಿಪೇಟ ಸುತ್ತಿ ಬಾಸಿಂಗ ಸೂಡುತ್ತಾರೆ.ಕೊರಳಿಗೆ ತಾಳ್ಬಂದೀಸರ ಮತ್ತು ಇತರ ಬಗೆಯ ಚಿನ್ನದ ಸರಗಳನ್ನು ಹಾಕುತ್ತಾರೆ .ಹೀಗೆ ಸರ್ವಾಲಂಕೃತನಾದ ಮದುಮಗ ಹಸೆಶಾಸ್ತ್ರ ಮುಗಿಸಿ ‘ಮುಯ್ಯಿ'ಗೆ ಕೂರಬೇಕು.
ಅನಂತರ ಎತ್ತಿನ ಬಂಡಿಯೊ,ದಂಡಿಗೆಯೊ ಅಥವಾ ಯಾವುದಾದರೊಂದು ವಾಹನದ ಮೇಲೆ ಮದುಮಗನನ್ನು ಕೂರಿಸಿ ಕುಕ್ಕೆ,ವಾದ್ಯ ಸಮೇತ ದಿಬ್ಬಣ ಹೆಣ್ಣಿನ ಮನೆಗೆ ಹೊರಡುತ್ತದೆ.ಗಂಡಿನ ಸೋದರಿಯ ಕುಕ್ಕೆಗಳನ್ನು ಹೊತ್ತು ನಡೆಯುತ್ತಾರೆ.ದೂರ ದೂರ ಸಂಬಂಧ ನಡೆಸುವುದು ಸಾಮಾನ್ಯವಾದ್ದರಿಂದ ಸಾಲು ಬಂಡಿಗಳ ದಿಬ್ಬಣವೆ ಹೆಚ್ಚು ಜನಪ್ರಿಯವಾಗಿದೆ.
ಇದೇ ರೀತಿ ಹೆಣ್ನಿನ ಮನೆಯಲ್ಲಿ ಹೆಣ್ಣಿನ ಅಲಂಕಾರದ ತಯಾರಿ'ಹಸೆ ತೂಗುವ ಶಾಸ್ತ್ರ'ದಿಂದ ಆರಂಭವಾಗುತ್ತದೆ.ಒಂದು ತೆಂಗಿನಕಾಯಿ,ಒಂದು ಚಿಪ್ಪು ಬಾಳೆಹಣ್ಣು, ಒಂದು ಮಾವಿನ ತುಂಡೆ ಮತ್ತು ಇತರ ಮಂಗಳ ದ್ರವ್ಯಗಳನ್ನು ಒಂದು ಹೊಸ ಜಮಖಾನೆಯಲ್ಲಿಟ್ಟು ಅದರ ನಾಲ್ಕು ಮೂಲೆಗಳನ್ನು ಹೆಣ್ಣು ಸೇರಿಕೊಂಡಂತೆ ಒಟ್ಟು ಈದು ಜನರು ಸೇರಿ ತೂಗಬೇಕು.ಅಣಂತರ ಹೆಣ್ಣು ಅದಕ್ಕೆ ನಮಸ್ಕರಿಸಿ ಅದರ ಮೇಲೆ ಕೂತು ಅಳಂಕಾರ ಮಾಡಿಸಿಕೊಳ್ಳಬೇಕು.ಧಾರೆ ಸೀರೆ,ರವಕೆಗಳನ್ನು ತೊಡಿಸಿ ಜಡೆಗೆ ಜಡೆ ಬಂಗಾರ,ಕೊರಳಿಗೆ ಮೋಹನ ಮಾಲೆ ,ಕಾಲಿಗೆ ಗೆಜ್ಜೆ,ಬೆರಳುಗಳಿಗೆ ಉಂಗುರ ಮುಂತಾದವುಗಳನ್ನು ತೊಡಿಸಿ,ಅಳಂಕರಿಸಿ ಬಾಸಿಂಗ ಸೂಡುತ್ತಾರೆ.ಅನಂತರ ಮಡಿಲು ತುಂಬಿಸುತ್ತಾರೆ.ಹೀಗೆ ಧಾರೆಗೆ ಒಯ್ಯಲು ಅವಳನ್ನು ಸಿಧ್ಧ ಪಡಿಸಿ ನಿಲ್ಲಿಸುತ್ತಾರೆ.
ಧಾರೆಯ ಮುಹೂರ್ತ ಸನ್ನಿಹಿತವಾದಾಗ ‘ಬಲಗೋಡೆಯ' ಮದುಮಗನನ್ನು ಧಾರೆ ಮಂಟಪಕ್ಕೆ ಕರೆತಂದು ‘ಮೆಟ್ಟಕ್ಕಿ'ಸಿಬ್ಬಲದ ಮೇಲೆ ನಿಲ್ಲಿಸುತ್ತಾರೆ. ಧಾರೆ ಮುಗಿದ ಮೇಲೆ ಗಂಡು-ಹೆಣ್ಣಿನ ಮೇಲೆ ಸಲುಗೆ ಬೆಳೆಯುವುದಕ್ಕಾಗಿ ಪಾದ ತೊಳೆಯುವ ಶಾಸ್ತ್ರ,ಹಸೆ ಕೂರಿಸುವ ಶಾಸ್ತ್ರ ಇತ್ಯಾದಿ ನಡೆಯುತ್ತದೆ.
ಇಷ್ಟೆಲ್ಲ ಆದಮೇಲೆ ದಿಬ್ಬಣ ವರನ ಮನೆಗೆ ಹೊರಡುವ ಮೊದಲು ಬಂಧುಬಳಗದವರಿಗೆ ಎಲೆಯಡಿಕೆ ಹಂಚುವ 'ವೀಳ್ಯ'ದ ಶಾಸ್ತ್ರ ನಡೆಯುತ್ತದೆ.ಅನಂತರ ಹೆಣ್ಣನ್ನು ಗಂಡಿಗೊಪ್ಪಿಸುವ 'ಮಾತು ಮಾಡಿಸುವ"ಕಾರ್ಯಕ್ರಮವಿರುತ್ತದೆ.ಹೆಣ್ಣೊಪ್ಪಿಸುವ ಆ ಗಂಭೀರ ಸನ್ನಿವೇಶ ಬಂಧುಬಳಗದವರ ಮನಸನ್ನು ಕಲಕುತ್ತದೆ.ಅನಂತರ ದಿಬ್ಬಣ ಹಿಂದಿರುಗುತ್ತದೆ
ದಿಬ್ಬಣ ಹಿಂದಿರುಗಿದ ಮೇಲೂ ಕೆಲವುಶಾಸ್ತ್ರಗಳು ನಡೆಯುತ್ತದೆ.ಅಕ್ಕಿಯಲ್ಲಿ ಚಿನ್ನದ ಉಂಗುರ ಹುದುಗಿಟ್ಟು ಹುಡುಕಾಡಿಸುವ ಶಾಸ್ತ್ರವಿರುತ್ತದೆ.ಆನಂತರ ಓಕುಳಿ ಆಟ ಮುಂತಾದವುಗಳನ್ನ ಆಡಿಸುತ್ತಾರೆ. ಈ ಆಟಗಳಲ್ಲಿ ಗೆದ್ದವರು ಸೋತವರ ಮೇಲೆ ಪೂರ್ಣ ಹತೋಟಿ ಸಾಧಿಸುತ್ತಾರೆ ಎಂಬ ನಂಬಿಕೆಯಿದೆ.ಕೊನೆಗೆ'ಹಿಟ್ಟಿಕ್ಕಿಸುವ ಶಾಸ್ತ್ರ ನಡೆಸಲಾಗುತ್ತದೆ.
ಮಾರನೆ ದಿನ ಹೆಣ್ಣು ನಸುಕಿಗೆ ಎದ್ದು ಗಂಡನ ಮನೆಯ ಅಡಿಗೆ ಪಾತ್ರೆಗಳನ್ನು ತೊಳೆದು ಅನಂತರ ಮಜ್ಜಿಗೆ ಕಡೆದು ಬೆಣ್ಣೆ ತೆಗೆಯಬೇಕು.ಬಳಿಕ ಮನೆಯ ಸಸಿಗಳಿಗೆ ನೀರು ಹೊತ್ತು ಹಾಕಬೇಕು.ಕುಡಿಯಲು ಮತ್ತು ಅಡುಗೆ ಮಾಡಲು ಹೊಸ ಕುಂಭಗಳಲ್ಲಿ ಹೊಸ ನೀರು ಹೊತ್ತು ತರಬೇಕು.ಇದಕ್ಕೆ ‘ತುಂಬು ನೀರು ಹೊರಿಸುವ ಶಾಸ್ತ್ರ' ಎನ್ನುತ್ತಾರೆ. ಹೀಗೆ ಒಕ್ಕಲಿಗರ ಮದುವೆಯ ಸಂಭ್ರಮ ಸತ್ಕಾರಗಳು ಒಂದು ವರ್ಷದ ತನಕ ನಡೆಯುತ್ತ ಇರುತ್ತದೆ.
ಉಲ್ಲೇಖ
[ಬದಲಾಯಿಸಿ]
ಭಾರತೀಯ ವಿವಾಹ ಸಂಸ್ಕಾರ-ಮಾ.ಭ.ಪೆರ್ಲ. (ಪುಟ-115)