ಕನ್ಯಾದಾನ (ಹಿಂದೂ ಪದ್ಧತಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ಯಾದಾನ : ಹಿಂದೂ ವಿವಾಹ ಸಂಸ್ಕಾರಗಳಲ್ಲಿ ಅತಿಮುಖ್ಯವಾದ ಸಂಸ್ಕಾರ.

ಕನ್ಯೆಯನ್ನು ದಾನ ಮಾಡುವುದು ಕೇವಲ ಒಂದು ಹೊಣೆಗಾರಿಕೆಯನ್ನು ಕಳೆದುಕೊಳ್ಳುವ ಉದ್ದೇಶದಿಂದಲ್ಲ. ಕನ್ಯೆಯ ಪೋಷಕ ಅವಳನ್ನು ದಾನ ಮಾಡುವಾಗ ಅರ್ಥಗರ್ಭಿತವಾದ ಮಂತ್ರೋಚ್ಚಾರಣೆಯ ಮೂಲಕ ಧರ್ಮ, ಅರ್ಥ, ಕಾಮಗಳ ಪುರೈಕೆಗಾಗಿ ಈ ದಾನವನ್ನು ಮಾಡುತ್ತಿರುವುದಾಗಿ ತಿಳಿಸಿ ಅವಳನ್ನು ಧರ್ಮ ಅರ್ಥ ಕಾಮಗಳ ಸಾಧನೆಯಲ್ಲಿ ತನ್ನ ಸಹಧರ್ಮಿಣಿಯಾಗಿರಲು ನಾನು ಸ್ವೀಕರಿಸುತ್ತಿದ್ದೇನೆಂದು ವರನಿಂದ ಮೂರು ಬಾರಿ ವಚನ ತೆಗೆದುಕೊಳ್ಳುತ್ತಾನೆ.

ಶಾಸ್ತ್ರಗಳಲ್ಲಿ[ಬದಲಾಯಿಸಿ]

ಕನ್ಯೆ ಎಂದರೆ ಎಂಟು ಹತ್ತು ವರ್ಷಗಳ ಬಾಲಕಿ. ಮನುಧರ್ಮಶಾಸ್ತ್ರ ಹಿಂದೂ ಸಮಾಜದಲ್ಲಿ ಪ್ರಚಲಿತವಾಗುವ ಹೊತ್ತಿಗೆ ಬಾಲ್ಯವಿವಾಹ ಪದ್ದತಿ ರೂಢಿಯಲ್ಲಿತ್ತು. ಮನುವಿನ ಪ್ರಕಾರ ಸ್ತ್ರೀ ಬಾಲ್ಯದಲ್ಲಿ ತಂದೆಯ ವಶದಲ್ಲಿಯೂ ವಿವಾಹಾನಂತರ ಪತಿಯ ಅಧೀನದಲ್ಲಿಯೂ ವೃದ್ಧಾಪ್ಯದಲ್ಲಿ ಪುತ್ರನ ವಶದಲ್ಲಿಯೂ ಪೋಷಿಸಲ್ಪಡತಕ್ಕವಳು. ಬಾಲ್ಯದಲ್ಲಿ ಅವಳು ಮಾತಾಪಿತೃಗಳಿಗೆ ಸೇರಿದವಳಾದ್ದರಿಂದ ಪ್ರಾಪ್ತ ವಯಸ್ಕಳಾದಾಗ ಸಕಾಲದಲ್ಲಿ ಅವಳನ್ನು ಯೋಗ್ಯ ವರನಿಗೆ ದಾನ ಮಾಡಬೇಕಾದದ್ದು ಅವರ ಕರ್ತವ್ಯವೆಂದು ಧರ್ಮಶಾಸ್ತ್ರಕಾರರು ವಿಧಿಸಿದರು. ವಿವಾಹಕಾಲದಲ್ಲಿ ಕನ್ಯಾದಾನವನ್ನು ಮಾಡಲಾಗುತ್ತದೆ.

ಪಿತನೇ ಕನ್ಯಾದಾನ ಮಾಡಲು ಅಧಿಕಾರವುಳ್ಳವನೆಂದು ಗೃಹ್ಯಸೂತ್ರ ಹೇಳುತ್ತದೆ. ಸ್ಮೃತಿಗಳು ಈ ಅಧಿಕಾರವನ್ನು ತಂದೆಯ ಅನಂತರ ಪಿತಾಮಹನಿಗೆ, ಅಣ್ಣನಿಗೆ, ಮಾತೆಗೆ ಕ್ರಮವಾಗಿ ಕೊಟ್ಟಿವೆ. ನಾರದನಾದರೋ ಪಿತಾಮಹನಿಗೆ ಅಧಿಕಾರವನ್ನು ಕೊಡದೆ ಮಾತಾಮಹನಿಗೂ ರಾಜ್ಯಕ್ಕೂ ಕೊಟ್ಟಿದ್ದಾನೆ.

ಸಂಪ್ರದಾಯ[ಬದಲಾಯಿಸಿ]

ಕನ್ಯೆಯನ್ನು ಸಾಲಂಕೃತಳಾಗಿ ದಾನ ಮಾಡಬೇಕೆಂಬ ಸಂಪ್ರದಾಯ, ಹಿಂದೂ ಸಮಾಜದಲ್ಲಿ ರೂಢಿಗೆ ಬಂತು. ವಿವಾಹಸಂಸ್ಕಾರವನ್ನು ಇತರ ಸಂಸ್ಕಾರಗಳಂತೆ ಒಂದು ಯಜ್ಞವೆಂದು ಭಾವಿಸಲಾಗಿತ್ತು. ಯಜ್ಞಕಾಲದಲ್ಲಿ ಮಾಡುವ ದಕ್ಷಿಣಾಸಹಿತವಾದ ದಾನವನ್ನು ಮಾತ್ರ ಶ್ರೇಷ್ಠವೆಂದು ಪರಿಗಣಿಸಲಾಗಿದ್ದುದರಿಂದ, ಕನ್ಯಾದಾನದಲ್ಲಿ ದಕ್ಷಿಣೆಗೆ ಬದಲಾಗಿ ಆಭರಣಾದಿಗಳನ್ನು ಕನ್ಯೆಯೊಂದಿಗೆ ನೀಡುವ ಪದ್ಧತಿಯನ್ನು ಸ್ಥಾಪಿಸಲಾಯಿತು. ಅಲ್ಲದೆ ಸ್ತ್ರೀಯ ಸ್ಥಾನಮಾನಗಳು ಭದ್ರಪಡಿಸುವ ಉದ್ದೇಶದಿಂದಲೂ ಅವಳಿಗೆ ಆಭರಣಗಳನ್ನು ಆಸ್ತಿಯಂತೆ ಪಡೆಯುವ ಹಕ್ಕನ್ನು ಕೊಡಲಾಯಿತು. ಅದನ್ನು ಸ್ತ್ರೀಧನವೆಂದು ಕರೆಯಲಾಯಿತು.

ದಾನಗಳೆಲ್ಲೆಲ್ಲ ಕನ್ಯಾದಾನ ಅತಿಶ್ರೇಷ್ಠವಾದುದೆಂಬ ದೃಢವಾದ ನಂಬಿಕೆ ಹಿಂದೂ ಸಮಾಜದಲ್ಲಿ ಬೆಳೆದು ಬಂತು. ಸತ್ಕುಲಪ್ರಸೂತಳಾದ ಕನ್ಯೆಯನ್ನು ಸತ್ಕುಲ ಪ್ರಸೂತನಾದ ವರನಿಗೆ ದಾನ ಮಾಡಿದರೆ ಅವಳು ಸತ್ಪುತ್ರನನ್ನು ಪಡೆದು, ಹುಟ್ಟಿದ ಕುಲವನ್ನೂ ಸೇರಿದ ಕುಲವನ್ನೂ ಉದ್ಧಾರ ಮಾಡುವಳೆಂಬ ನಂಬಿಕೆ ಇದೆ. ಆದ್ದರಿಂದ ಅವಳನ್ನು ದಾನ ಮಾಡುವಾಗ ವಧೂವರರ ಪ್ರವರ ಮತ್ತು ಗೋತ್ರಗಳನ್ನು ಪಠಿಸಿದ ಅನಂತರ ದಾನ ಮಾಡಲಾಗುತ್ತದೆ. ಹೆಣ್ಣು ಶಿಶುವನ್ನು ಪಡೆಯುವುದು ಒಂದು ಭಾಗ್ಯವೆಂದು ಎಣಿಸಿ, ಅದಕ್ಕಾಗಿ ಯಜ್ಞವನ್ನು ಸಹ ಮಾಡುತ್ತಿದ್ದರೆಂದು ಧರ್ಮಶಾಸ್ತ್ರಗಳಿಂದ ತಿಳಿದುಬಂದಿದೆ. ಆ ಶಿಶುವಿನಿಂದ ಎರಡು ಕುಲಗಳು ಉದ್ಧಾರವಾಗುವುದೆಂಬುದೇ ಇದರ ಮಹತ್ತ್ವಕ್ಕೆ ಕಾರಣವೆನ್ನಬಹುದು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: