ಮಿಹಿರಗುಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಿಹಿರಗುಲ - ಕ್ರಿ. ಶ. 6ನೆಯ ಶತಮಾನದಲ್ಲಿ ಆಳಿದ ಒಬ್ಬ ಹೂಣ ದೊರೆ. ತೋರಮಾನನ ಮಗ ಹಾಗೂ ಉತ್ತರಾಧಿಕಾರಿ. ಸುಮಾರು 502ರಲ್ಲಿ ಪಟ್ಟಕ್ಕೆ ಬಂದ. ಚೀನೀ ಪ್ರವಾಸಿ ಹ್ಯೂಯೆನ್‍ತ್ಸಾಂಗನ ವೃತ್ತಾಂತ ಹಾಗೂ ಕಲ್ಹಣರಾಜತರಂಗಿಣಿಯಿಂದ ಈತ ಕ್ರೂರಿಯೂ ಪರಾಕ್ರಮಿಯೂ ಪ್ರಜಾಪೀಡಕನೂ ಆಗಿದ್ದನೆಂದು ತಿಳಿದುಬರುತ್ತದೆ. ಈತನ ಒಂದೆರಡು ಶಾಸನಗಳೂ ಕೆಲವು ನಾಣ್ಯಗಳೂ ಲಭ್ಯವಾಗಿವೆ. ಅಲೆಕ್ಸಾಂಡ್ರಿಯದ ಭಿಕ್ಷು ಕಾಸ್ಮಸ್ ಉಲ್ಲೇಖಿಸುವ ಗೊಲ್ಲಾಸ್ ಹಾಗೂ ಚೀನೀ ರಾಯಭಾರಿ ಸಾಂಗ್-ಯುನ್ ಉಲ್ಲೇಖಿಸುವ ಗಾಂಧಾರದ ಅರಸ ಯೇಥ ಮಿಹಿರಗುಲನೆಂದೇ ಗುರುತಿಸಲಾಗಿದೆ. ಸಾಕಲ ಅಥವಾ ಪಂಜಾಬಿನಲ್ಲಿರುವ ಸಿಯಾಲ್‍ಕೋಟ್ ಈತನ ರಾಜಧಾನಿಯಾಗಿತ್ತು.

ಬೌದ್ಧಧರ್ಮದ ವಿರೋಧಿಯಾದ ಮಿಹಿರಗುಲ ಅನೇಕ ಸ್ತೂಪ, ವಿಹಾರಗಳನ್ನೂ ನಾಶಪಡಿಸಿದನೆನ್ನಲಾಗಿದೆ. ಈತನ ಕ್ರೌರ್ಯ ಕುರಿತ ಹಲವು ಕಥೆಗಳು ರಾಜತರಂಗಿಣಿಯಲ್ಲಿವೆಯಾದರೂ ಅವುಗಳಲ್ಲಿ ಐತಿಹಾಸಿಕಾಂಶಗಳು ಕಡಿಮೆ. ಕಾಶ್ಮೀರ, ಗಾಂಧಾರಗಳನ್ನಾಳಿದ ಈ ದೊರೆ ದಕ್ಷಿಣಭಾರತ ಮತ್ತು ಶ್ರೀಲಂಕಾಗಳನ್ನು ಜಯಿಸಿದ್ದನೆಂದು ಕಲ್ಹಣ ತಿಳಿಸುತ್ತಾನೆ. ಶಾಸನವೊಂದರಿಂದ ಈತನ ರಾಜ್ಯ ಗ್ವಾಲಿಯರ್‍ವರೆಗೆ ವಿಸ್ತøತವಾಗಿದ್ದುದು ಸ್ಪಷ್ಟಪಡುತ್ತದೆ.

ಮಾಳವದ ಅರಸ ಯಶೋವರ್ಮನಿಂದ ಮಿಹಿರಗುಲ ಪರಾಜಿತನಾದ ವಿಷಯ ಮ್ಯಾಂಡಸಾರ್ ಶಾಸನದಲ್ಲಿ ನಿರೂಪಿತವಾಗಿದೆ. ಗುಪ್ತದೊರೆ ನರಸಿಂಹಗುಪ್ತ (ಬಾಲಾದಿತ್ಯ) ಮೊದಲು ಹೂಣ ದೊರೆಯ ಸಾರ್ವಭೌಮತ್ವವನ್ನೊಪ್ಪಿ ಕಪ್ಪಕಾಣಿಕೆಗಳನ್ನು ನೀಡಿದರೂ ತರುವಾಯ ಈತನ ಅಕೃತ್ಯಗಳನ್ನು ವಿರೋಧಿಸಿ ಸೆರೆಹಿಡಿದನೆಂದು ಹ್ಯೂಯೆನ್‍ತ್ಸಾಂಗ್ ತಿಳಿಸುತ್ತಾನೆ. ಆದರೂ ಗುಪ್ತ ದೊರೆ ತನ್ನ ತಾಯಿಯ ಕೋರಿಕೆಯಂತೆ ಹೂಣದೊರೆಯನ್ನು ಕೊಲ್ಲದೆ ಜೀವಸಹಿತ ಬಿಟ್ಟ. ಕಾಶ್ಮೀರದ ಅರಸರ ಆಶ್ರಯ ಪಡೆದ ಮಿಹಿರಗುಲ, ಅಲ್ಲಿಯ ಅರಸನನ್ನೇ ವಂಚಿಸಿ ಸಿಂಹಾಸನವನ್ನು ಕಬಳಿಸಿದ. ಆದರೆ ಹೆಚ್ಚು ಕಾಲ ಆಳಲಿಲ್ಲ. ಸುಮಾರು 547ರ ಹೊತ್ತಿಗೆ ಮೃತನಾದ. ತರುವಾಯ ಹೂಣರ ರಾಜಕೀಯ ಪ್ರಭಾವ ಕ್ಷೀಣಿಸಿತು.