ಸದಸ್ಯ:Divya131097/ನನ್ನ ಪ್ರಯೋಗಪುಟ
ಗೋಚರ
ಹಿಮಾಲಯ ಪರ್ವತ ಶ್ರೇಣಿಗಳು ಹಿಮಾದ್ರಿ ಪರ್ವತಗಳು, ಮಹಾಭಾರತ ಪರ್ವತಗಳು ಹಾಗೂ ಶಿವಾಲಿಕ ಪರ್ವತಗಳೆಂಬ ಮೂರು ವರ್ಗಗಳಾಗಿ ವಿಭಾಗಗೊಂಡಿವೆ. ಶಿವಾಲಿಕ ಪರ್ವತಗಳು ಹಿಮಾಲಯ ಪರ್ವತ ಶ್ರೇಣಿಗಳ ದಕ್ಷಿಣದಂಚಿನ ಬೆಟ್ಟಸಾಲುಗಳಾಗಿವೆ. ಶಿವಾಲಿಕ ಪರ್ವತಗಳು ಮಹಾಭಾರತ ಹಾಗೂ ಚುರಿಯ ಪರ್ವತಗಳ ನಡುವೆ ನೆಲೆಯಾಗಿದೆ. ಪೂರ್ವ-ಪಶ್ಚಿಮಾಭಿಮುಖವಾಗಿ ಹಬ್ಬಿರುವ ಶಿವಾಲಿಕ ಪರ್ವತಗಳು ಭೂಗರ್ಭಶಾಸ್ತ್ರದ ಪ್ರಕಾರ ಇಡಿ ಹಿಮಾಲಯದಲ್ಲಿ ಅತಿ ಕಿರಿಯ ವಯಸ್ಸಿನವು. 'ಶಿವಾಲಿಕ' ಎಂಬ ಪದ ಸಂಸ್ಕೃತ ಪದವಾಗಿದ್ದು, ಅದಕ್ಕೆ 'ಶಿವನ ಜಡೆಗಳು' ಎಂಬ ಅರ್ಥವಿದೆ. ಪ್ರಾಚೀನ ಕಾಲಗಳಲ್ಲಿ ಈ ಪರ್ವತಗಳನ್ನು ಮಾನಕ ಪರ್ವತವೆಂದು ಕರೆಯಲಾಗುತ್ತಿತ್ತು. ಕೆಲವೊಮ್ಮೆ ಈ ಶ್ರೇಣಿಗಳನ್ನು ಹೊರಗಣ ಹಿಮಾಲಯ ಎಂದು ಸಹ ಕರೆಯಲಾಗುತ್ತದೆ. ನೇಪಾಳದಲ್ಲಿರುವ ಶಿವಾಲಿಕ ಪರ್ವತಗಳ ಭಾಗವನ್ನು ಚುರಿಯ ಪರ್ವತಗಳೆಂದು ಕರೆಯಲಾಗುತ್ತದೆ. ಈ ಪ್ರದೆಶದ ಎತ್ತರ ಪ್ರತಿವರ್ಷ ೩ ಮಿ.ಮಿ ರಿಂದ ೪ ಮಿ.ಮಿ ವರೆಗೆ ಹೆಚ್ಚಾಗುತ್ತಿದ್ದು, ಇಡಿ ಹಿಮಾಲಯದ ಅತ್ಯಂತ ಕ್ರಿಯಾತ್ಮಕ ವಲಯವಾಗಿದೆ. ಪೂರ್ವದ ಸಿಕ್ಕಿಂನ ಟೀಸ್ಟಾ ನದಿಯಿಂದ ಆರಂಭವಾಗಿ ನೇಪಾಳ, ಉತ್ತರಾಖಂಡ, ಹಿಮಾಚಲ ಪ್ರದೇಶ ಹಾಗೂ ಕಾಶ್ಮೀರಗಳನ್ನು ಹಾದು ಪಾಕಿಸ್ತಾನದ ಉತ್ತರಭಾಗದಲ್ಲಿ ಕೊನೆಗೊಳ್ಳುವ ಶಿವಾಲಿಕ ಪರ್ವತ ಶ್ರೇಣಿಗಳ ಒಟ್ಟು ಉದ್ದ ಸುಮಾರು ೧೬೦೦ ಕಿ.ಮಿ. ಈ ಪರ್ವತಗಳ ಸರಾಸರಿ ಎತ್ತರ ೯೦೦ರಿಂದ ೧೨೦೦ ಮೀಟರ್‍ಗಳಷ್ಟು. ಉತ್ತರ ಭಾರತದಲ್ಲಿ ಗಂಗಾ ನದಿಯಿಂದ ವ್ಯಾಸ ನದಿಯವರೆಗೆ ೨೦೦ ಮೈಲಿಗಳ ದೂರದವರೆಗೆ ಹರಡಿದೆ.
ಕೃಷಿ ಹಾಗೂ ಬೌಗೋಳಿಕ ಶಿವಾಲಿಕ ಪರ್ವತಗಳು ಬಹುಪಾಲಗಿ ಮರಳುಗಲ್ಲು, ಸಂಘಟಿತ ಬೆಟ್ಟಗಳು ಹಾಗೂ ಹಿಮಾಲಯದ ಉಳಿದ ರಾಶಿಗಳಿಂದ ಕೂಡಿವೆ. ಈ ಪರ್ವತ ಸುಮಾರು ೬೦೦೦ ಮೀಟರ್‍ಗಳಷ್ಟು ಪದರಗೊಂಡ ಬಂಡೆಗಳನ್ನು ಒಳಗೊಂಡಿದೆ. ಇವು ಹಿಮಾಲಯ ಪರ್ವತಗಳು ಸೃಷ್ಟಿಗೊಂಡಾಗ ಸಂಭವಿಸಿದ ಸವೆತದಿಂದ ಉಂಟಾದವು. ಶಿವಾಲಿಕ ಪ್ರದೇಶದಲ್ಲಿ ಸುಲಭವಾಗಿ ಸವೆದು ಹೋಗುವ ಮಣ್ಣಿರುವುದರಿಂದ, ಈ ಪ್ರದೇಶ ಕೃಷಿಗೆ ಅಷ್ಟು ಉತ್ತಮವಿಲ್ಲ. ಮೆಕ್ಕೆ ಜೋಳ, ಗೋಧಿ, ರಾಗಿ ಹಾಗೂ ಸಾಸಿವೆ ಈ ಪ್ರದೇಶದಲ್ಲಿ ಉತ್ಪಾದಿಸಲಾಗುವ ಬೆಳೆಗಳು. ಕೃಷಿಗೆ ನೀರಾವರಿ ಸುಲಭವಾಗಿ ಲಭ್ಯವಿರುವುದರಿಂದ ಭತ್ತ ಉತ್ಪಾದಿಸಲು ಈ ಪ್ರದೇಶ ಸೂಕ್ತವಾಗಿದೆ.
ಪ್ರಾಣಿಗಳು ಹಾಗೂ ಸಸ್ಯವರ್ಗ
ಶಿವಾಲಿಕ ಪರ್ವತಗಳು ವಿವಿಧ ರೀತಿಯ ಸಸ್ಯ-ಪ್ರಾಣಿಗಳು ಜೀವಿಸುವ ಸುಂದರ ಪರ್ವತ ಶ್ರೇಣಿ. ಈ ಪ್ರದೇಶದಲ್ಲಿ ವೈಶಿಷ್ಟವಾಗಿ ನದಿಯ ದಂಡೆಗಳ ಪಕ್ಕದಲ್ಲಿ ಬೆಳೆಯುವ ಎತ್ತರದ ಹುಲ್ಲುಗಾವಲುಗಳು ಹಾಗೂ 'ಖೈರ್' ಮತ್ತು 'ಸಿಸೂ' ಎಂಬ ಬಗೆಗಳ ಮಳೆಕಾಡುಗಳು ಇರುತ್ತವೆ. ಇಲ್ಲಿ ಅನೇಕ ದೊಡ್ಡಗಾತ್ರದ ಸಸ್ತನಿಗಳನ್ನು ಕಾಣಬಹುದು. ಈ ಅರಣ್ಯಗಳು ಆನೆಗಳು, ಜೌಗು ಜಿಂಕೆ, ಬಾರ್ಕಿಂಗ್ ಡೀರ್, ಚೀತಲ್, ಕಸ್ತೂರಿ ಜಿಂಕೆ, ಕಾಡು ಹಂದಿ, ಚೆರತೆ, ಕಾಡು ನಾಯಿ, ಕತ್ತೆಕಿರುಬಗಳು, ನರಿ, ಹುಲಿ, ಸಿಂಹ ಮುಂತಾದ ಪ್ರಾಣಿಗಳಿಂದ ವಿಪುಲವಾಗಿದೆ. ಅಪರೂಪದ ಪ್ರಾಣಿಗಳೆಂದು ಪರಿಗಣಿಸಲಾಗುವ ಒಂದು-ಕೊಂಬಿನ ಖಡ್ಗಮೃಗ ಹಾಗೂ ಪಿಗ್ಮಿ ಹಂದಿಗಳೂ ಇಲ್ಲಿ ಕಂಡುಬರುತ್ತವೆ. ಕಾರ್ಬೆಟ್ ರಾಷ್ಟ್ರಿಯ ಉದ್ಯಾನವನದ ಒಂದು ಭಾಗವಾದ 'ಪತ್ಲಿ ದೂನ್' ಎಂಬ ಕಣಿವೆ, ಶಿವಾಲಿಕ ಪರ್ವತಗಲಲ್ಲಿ ತನ್ನ ಸಸ್ಯ ಹಾಗೂ ಪ್ರಾಣಿಗಳನ್ನು ಸಂರಕ್ಷಿಸುವ ಮಾತ್ರ ಪ್ರದೇಶವಾಗಿದೆ. ಈ ಕಣಿವೆ ಹಚ್ಚಹಸಿರಾದ ಹುಲ್ಲುಗಾವಲುಗಳು ಹಾಗೂ ಸೋಂಪಾದ 'ಸಾಲ್' ಅರಣ್ಯಗಳಿಂದ ಕೂಡಿವೆ.
ಪ್ರವಾಸೋದ್ಯಮ
ಈ ಪ್ರದೇಶದಲ್ಲಿ ಅನೇಕ ಪ್ರಸಿದ್ದ ಪ್ರವಾಸ ಸ್ಥಳಗಳಿವೆ. ಅವುಗಳಲ್ಲಿ ಕೆಲವು-ರೇಣುಕ ಸರೋವರ, ಶಿವಾಲಿಕ ಫ಼ಾಸಿಲ್ ಪಾರ್ಕ, ಪತ್ಲಿ ದೂನ್, ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ, ದೆಹರಾದೂನ್ ಹಾಗೂ ಶಿಮ್ಲಾ. ಹಿಮಾಚಲ ಪ್ರದೇಶದ ರಾಜಧಾನಿಯಾದ ಶಿಮ್ಲಾ, ಶಿವಾಲಿಕ ಪರ್ವತಗಳಲ್ಲಿರುವ ಒಂದು ಆಕರ್ಷಿಕ ಗಿರಿಧಾಮ. ಭಾರತದ 'ಗಿರಿಧಾಮಗಳ ರಾಣಿ'ಯೆಂದು ಶಿಮ್ಲಾ ಹೆಸರಾಗಿದೆ. ಇದು ಹಿಮಾಚಲ ಪ್ರದೇಶದ ಪ್ರಧಾನ ವಾನಿಜ್ಯ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿದೆ. ಇದರಂತೆಯೆ ಇಲ್ಲಿ ಅನೇಕ ಸುಂದರ ಗಿರಿದಾಮಗಳು ಹಾಗೂ ಅನೇಕ ಧಾರ್ಮಿಕ ಕೇಂದ್ರಗಳಿವೆ. ಶಿವಾಲಿಕ ಪರ್ವತಗಳಲ್ಲಿ ತುಂಬ ಪ್ರಸಿದ್ದವಾದ ಸ್ಥಳವೆಂದರೆ ದೆಹರಾದೂನ್. ಉತ್ತರಖಂಡ ರಾಜ್ಯದ ರಾಜಧಾನಿಯಾದ ದೆಹರಾದೂನ್, ಶಿವಾಲಿಕ ಪ್ರದೇಶದ ದೂನ್ ಕಣಿವೆಯಲ್ಲಿದೆ. ಈ ನಗರ ತನ್ನ ಚಿತ್ರಸದೃಶ್ಯ, ಭೂದೃಶ್ಯಕ್ಕೆ ಹಾಗೂ ಸೌಮ್ಯ ಹವಾಮಾನಕ್ಕೆ ಎಲ್ಲೆಡೆಯೂ ಪ್ರಸಿದ್ದವಾಗಿದೆ. ಇಂತಹ ಸ್ಥಳಗಳಿರುವುದರಿಂದ ಶಿವಾಲಿಕ ಪರ್ವತಗಳು ಶಾಂತಿ ಮತ್ತು ಸೌಂಧರ್ಯ ಕೂಡಿದ ಸ್ವರ್ಗವಾಗಿದೆ. ಈ ಕಾರಣದಿಂದ ಪ್ರತಿವರ್ಷ ಜನರು ಭಾರಿ ಸಂಖ್ಯೆಯಲ್ಲಿ ಒಂದು ಅದ್ಭುತ ಅನುಭವಕ್ಕಾಗಿ ಇಲ್ಲಿ ಬರುತ್ತಾರೆ.
ಇತ್ತೀಚೆಗೆ, ಶಿವಾಲಿಕ ಪರ್ವತಗಳಲ್ಲಿ ಅಂತರ್ಜಲ ಸವಕಳಿ, ನೀರಿನ ಸಂಗ್ರಹಣಾ ಸ್ಥಳಗಳ ಅಭಾವ, ಅರಣ್ಯನಾಶ ಮುಂತಾದ ಗಂಭೀರ ಸಮಸ್ಯೆಗಳು ಎದುರುಗೊಂಡಿವೆ. ಈ ಕಾರಣದಿಂದ ಕೃಷಿ-ಉತ್ಪಾದಕತೆಯು ಕಡಿಮೆಯಾಗುತ್ತಿದೆ. ಎಲ್ಲೆಡೆಯೂ ಪೊದೆಗಳನ್ನು ತೆಗೆದುಹಾಕಲಾಗುತ್ತಿದೆ, ಮರಗಳನ್ನು ಕತ್ತರಿಸಲಾಗುತ್ತಿದೆ. ಈ ಪ್ರದೇಶ ತೀವ್ರ ಸವೆತಕ್ಕೆ ಒಳಪಟ್ಟಿದೆ. ಈ ಕಾರಣದಿಂದಾಗಿ ಪ್ರವಾಹ ಹಾಗೂ ಭೂಕುಸಿತ ಆಗಾಗ ಸಂಭವಿಸುತ್ತಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾದ ಕಾರಣ ಪರಿಸರ ಮಾಲಿನ್ಯ ದೊಡ್ಡ ಮಟ್ಟಿಗೆ ಏರಿದೆ. ಅರಣ್ಯ ಪ್ರದೇಶವನ್ನು ತೆರೆವುಗೊಳಿಸಿ, ಆ ಜಾಗದಲ್ಲಿ ಪ್ರವಾಸಿಗರಿಗಾಗಿ ವಸತಿ ಗೃಹಗಳನ್ನು ನಿರ್ಮಾಣಿಸಲಾಗುತ್ತಿದೆ. ಈ ಕಾರಣಗಳಿಂದ ಅಲ್ಲಿನ ವನಜೀವಿಗಳ ಹಾಗೂ ಕಾಡುಗಳ ಅಸ್ತಿತ್ವಕ್ಕೆ ಅಪಾಯವಾಗಿದೆ.
ಉಲ್ಲೇಖಗಳು