ಕೋಟೇಶ್ವರ
Koteshwar | |
---|---|
Town | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಉಡುಪಿ |
Elevation | ೩೬.೪೪೭ m (೧೧೯.೫೭೭ ft) |
Population (2011) | |
• Total | ೧೪,೬೯೭ |
Languages | |
• Official | ಕನ್ನಡ |
Time zone | UTC+5:30 (IST) |
ಪಿನ್ | 576222 |
Telephone code | 08254 |
Vehicle registration | KA-20 |
ಕೋಟೇಶ್ವರ ಗ್ರಾಮವು ಕರ್ನಾಟಕದ ಕರಾವಳಿಯ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಇದೆ. ಈ ಗ್ರಾಮದ ವಿಸ್ತಾರವು ಸುಮಾರು ೩೬.೪೪೭ ಮೀಟರ್‌ನಷ್ಟು ಇದೆ. ಕೇವಲ ಒಂದೂವರೆ ಕಿ. ಮೀ. ದೂರದಲ್ಲಿ ಅರಬ್ಬೀ ಸಮುದ್ರ, ಪೂರ್ವಕ್ಕೆ ಪಶ್ಚಿಮ ಘಟ್ಟಗಳ ಸಾಲು, ಉತ್ತರಕ್ಕೆ ತಾಲೂಕು ಕೇಂದ್ರ, ಕೋಟೇಶ್ವರದ ಸುತ್ತಮುತ್ತ ಹತ್ತಾರು ಗ್ರಾಮಗಳ ಸಮೂಹ ಮತ್ತು ಸಪ್ತಕ್ಷೇತ್ರಗಳಲ್ಲಿ ಒಂದೆಂಬ ಕೀರ್ತಿಯಿದೆ. ಉಡುಪಿ ಜಿಲ್ಲೆಯಲ್ಲಿ ತುಳು ಭಾಷೆಯ ಪ್ರಭುತ್ವವಿದ್ದರೂ ಈ ಕ್ಷೇತ್ರದ ಜನರು ವಿಶಿಷ್ಟ ಕನ್ನಡವಾದ 'ಕುಂದಗನ್ನಡ'ದಲ್ಲಿ ವ್ಯವಹರಿಸುತ್ತಾರೆ. ೨೦೦೭ರ ಜನ ಗಣತಿಯ ಪ್ರಕಾರ ಈ ಗ್ರಾಮದಲ್ಲಿ ಒಟ್ಟು ೨೧೧೦೦ ಜನಸಂಖ್ಯೆ ಇದೆ.[೧]
ಉಡುಪಿ ಜಿಲ್ಲೆಯ ಉತ್ತರ ತುದಿಯ ತಾಲ್ಲೂಕಿನ ಕೇಂದ್ರವಾದ ಕುಂದಾಪುರದಿಂದ ೪ ಕಿ.ಮೀ. ದೂರಕ್ಕಿರುವ ಪಟ್ಟಣವೇ ಇಂದು ಕೋಟೇಶ್ವರವೆಂಬ ಗ್ರಾಮ. ಕೋಟೇಶ್ವರ ಹದಿನಾಲ್ಕು ಗ್ರಾಮದ ಸಮುದಾಯದಿಂದ ರಚಿತವಾಗಿದೆ. ಅಂದಿನ ಕಾಲದಲ್ಲಿ ತೆಕ್ಕಟ್ಟೆ, ಕೊಮೆ, ಕೊರೋಡಿ, ಕುಂಭಾಶಿ, ಗೋಪಾಡಿ, ಮೂಡಗೋಪಾಡಿ, ಬೀಜಾಡಿ, ಹೊದ್ರಾಳಿ, ಕುಂಬ್ರಿ, ಬಡಾಕೆರೆ, ಮೂಡಹಂಗಳೂರು, ಹಂಗಳೂರು, ಕೋಣಿ, ಕಟ್ಗೆರೆಗಳೆಂಬ ಹದಿನಾಲ್ಕು ಗ್ರಾಮಗಳ ಒಕ್ಕೂಟವನ್ನು ಕೋಟೇಶ್ವರವೆಂದು ಕರೆಯಲಾಗುತ್ತದೆ. ಕೋಟೇಶ್ವರವನ್ನು ಧ್ವಜಪುರ ಎಂಬ ಹೆಸರಿನಲ್ಲೂ ಕರೆಯುತ್ತಾರೆ.
ಏಳು ಪ್ರದಕ್ಷಿಣವಿರುವ ಪ್ರಾಚೀನ ದೇವಾಲಯ, ಅತ್ಯಂತ ಸುಂದರವಾದ ಪಾವಟಿಗೆಯನ್ನು ಹೊಂದಿರುವ ನಾಲ್ಕುವರೆ ಎಕರೆ ಸ್ಥಳವನ್ನು ಕ್ರಮಿಸಿರುವ ಕೋಟಿತೀರ್ಥ (ಇದು ಕರಾವಳಿಯಲ್ಲಿಯೇ ಅತ್ಯಂತ ದೊಡ್ಡದಾದ ಪುಷ್ಖರಣಿಯೆಂಬ ಅಭಿದಾನ ಪಡೆದಿದೆ), ಐದು ಅಂತಸ್ತುಗಳಿಂದ ನಿರ್ಮಿತವಾಗಿರುವ ಬೃಹತ್ ಬ್ರಹ್ಮರಥ, ನೇರವಾದ ಅಗಲವಾದ ರಥಬೀದಿಯಿಂದ ಈ ಕ್ಷೇತ್ರ ಕಂಗೊಳಿಸುತ್ತದೆ. ಯತಿಗಳಾದ ಸೋದೆ ಮಠದ ಶ್ರೀ ವಾದಿರಾಜರ ಜನ್ಮಸ್ಥಳವಾದ ಹೂವಿನಕೆರೆ ಕೋಟೇಶ್ವರದಿಂದ ಕೇವಲ ಐದು ಕಿ. ಮೀ. ದೂರದಲ್ಲಿದೆ. ಇನ್ನೊಂದು ಪ್ರಸಿದ್ಧವಾದ ಆನೆಗುಡ್ಡೆ ಮಹಾಗಣಪತಿಯ ಸುಂದರ ದೇವಾಲಯವೂ ಇರುವುದು ಕೋಟೇಶ್ವರ ಕ್ಷೇತ್ರಕ್ಕೆ ಹೆಚ್ಚಿನ ಮೆರಗು ನೀಡಿದೆ.
ಇತಿಹಾಸ
[ಬದಲಾಯಿಸಿ]ಸಪ್ತಕ್ಷೇತ್ರಗಳಲ್ಲಿ ವಿಶಿಷ್ಟ ಸ್ಥಾನ ಹೊಂದಿದ ಕೋಟೇಶ್ವರ (ಧ್ವಜಪುರ) ಪ್ರಸಿದ್ಧ ಪುಣ್ಯಕ್ಷೇತ್ರವಾಗಿದೆ. ಪರಶುರಾಮ ಸೃಷ್ಠಿಯ ಪುರಾಣ ಪುಣ್ಯಕ್ಷೇತ್ರಗಳಲ್ಲಿ ಮಧ್ಯಮ ಕ್ಷೇತ್ರವೆಂದು ಕರೆಯುತ್ತಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲೇ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿದೆ. ಪುರಾಣ ಕಾಲದಲ್ಲಿ ಧ್ವಜಪುರವೆಂದೂ ವರ್ತಮಾನದಲ್ಲಿ ಕೋಟೇಶ್ವರವೆಂದು ಪ್ರಸಿದ್ಧವಾಗಿದೆ. ಒಂದು ಕಾಲದಲ್ಲಿ ಕೋಟೇಶ್ವರದ ಪರಿಸರವು ಬಹಳ ಬರಗಾಲದಿಂದ ನಡುಗಿಹೋಗಿತ್ತು. ಆಗ ವಿಭಾಂಡ ಋಷಿಯ ಮುಖಂಡತ್ವದಲ್ಲಿ ಒಂದು ಕೋಟಿ ಮುನಿಗಳು ತಪಸ್ಸನ್ನು ಮಾಡಿ ಶಿವನನ್ನು ಒಲಿಸಿಕೊಳ್ಳುತ್ತಾರೆ. ಆಗ ಪರಮೇಶ್ವರ ಇಲ್ಲಿ ಕೋಟಿ ಲಿಂಗಗಳ ರೂಪದಲ್ಲಿ ನೆಲೆ ನಿಂತು ಬರಗಾಲ ದೂರ ಮಾಡಿ ಜನರನ್ನು ರಕ್ಷಿಸುತ್ತಾನೆ. ಶಿವನು ಕೋಟಿಲಿಂಗಳಲ್ಲಿ ಐಕ್ಯನಾಗಿದ್ದರಿಂದ ಇಲ್ಲಿನ ಶಿವನನ್ನು ಶ್ರೀ ಕೋಟಿಲಿಂಗೇಶ್ವರನೆಂದು ಕರೆಯುತ್ತೇವೆ. ಆದ್ದರಿಂದ ಈ ಕ್ಷೇತ್ರವನ್ನು ಕೋಟೇಶ್ವರವೆಂದು ಕರೆಯುತ್ತಾರೆ.
ಬಸ್ರೂರಿನ ಮಹಾರಾಜ ವಸು ಚಕ್ರವರ್ತಿಗೆ ಮಕ್ಕಳಿಲ್ಲವೆಂಬ ಕೊರಗು ಕಾಡುತ್ತಿತ್ತು. ಶ್ರೀ ಕೋಟೇಶ್ವರನಲ್ಲಿ ತನಗೆ ಮಕ್ಕಳಾದರೆ ದೇವಾಲಯ ನಿರ್ಮಿಸುತ್ತೇನೆ ಎಂಬ ಹರಕೆ ಹೊರುತ್ತಾನೆ. ಅವನ ಹರಕೆ ಫಲಿಸಿ ಮಕ್ಕಳಾಗುತ್ತವೆ. ತನ್ನ ಮಾತಿನಂತೆ ದೇವಸ್ಥಾನ, ಬೃಹತ್ ಕೆರೆ ನಿರ್ಮಿಸಿದನಂತೆ. ಆತನಿಗೆ ಮನಸ್ಸಿನಲ್ಲಿ ಕೋಟೇಶ್ವರನಿಗೆ ರಥೋತ್ಸವ ಮಾಡಬೇಕೆಂಬ ಮನಸ್ಸುಂಟಾಗಿ ಅದರ ಸಿದ್ಧತೆಗೆ ಆರಂಭಿಸುತ್ತಾನೆ. ಅವನ ನಿರೀಕ್ಷೆಯಂತೆ ಸಮಯಕ್ಕೆ ಸರಿಯಾಗಿ ಬ್ರಹ್ಮರಥ ತಯಾರಾಗುವುದಿಲ್ಲ. ಆದರೆ ಸಂಕಲ್ಪದಂತೆ ರಥೋತ್ಸವ ಮಾಡಲೇಬೇಕೆಂಬ ಬಲವಾದ ಇಚ್ಛೆಯಿತ್ತು. ಆಗ ಬಿದಿರು(ಕೊಡಿ) ಕಬ್ಬಿನ ಜಲ್ಲೆಗಳಿಂದ ರಥ ತಯಾರಿಸಿ ಪ್ರಥಮವಾಗಿ ಕೊಡಿ ಕಬ್ಬಿನ ಜಲ್ಲೆಗಳಿಂದ ನಿರ್ಮಿತವಾದ ರಥವಾದ್ದರಿಂದ ಆ ರಥೋತ್ಸವಕ್ಕೆ 'ಕೊಡಿ ಹಬ್ಬ' ಹೆಸರು ಬಂತೆಂದು ತಿಳಿದು ಬರುತ್ತದೆ. ಕ್ರಮೇಣ ಬೃಹತ್ ಬ್ರಹ್ಮರಥೋತ್ಸವವಾಗಿ ಜನಾಕರ್ಷಣೆಯ ಕೊಡಿ ಹಬ್ಬವಾಗಿ ಇಂದು ಬಹಳ ವೈಭವದಿಂದ ನಡೆಯುತ್ತದೆ.
ಪ್ರವಾಸಿ ತಾಣಗಳು
[ಬದಲಾಯಿಸಿ]ಕೋಟಿಲಿಂಗೇಶ್ವರ ದೇವಸ್ಥಾನ
[ಬದಲಾಯಿಸಿ]ಏಳು ಪ್ರದಕ್ಷಿಣವಿರುವ ಪ್ರಾಚೀನ ಇತಿಹಾಸದ ಕೋಟೆಲಿಂಗೇಶ್ವರ ದೇವಸ್ಥಾನ ಆರಂಭದಲ್ಲಿ ಬೃಹತ್ ಹೆಬ್ಬಾಗಿಲು ಪ್ರವೇಶಕ್ಕೆ ಮುನ್ನ ರಥಬೀದಿಯಿಂದ ಬರುವ ಹೊರಸುತ್ತಿನಲ್ಲಿ (ಚಿಕ್ಕರಥ ತಿರುಗುವ ದಾರಿ) ಪ್ರದಕ್ಷಿಣವೊಂದಿದ್ದು ಅಲ್ಲಿಂದ ಹೆಬ್ಬಾಗಿಲ ಮೂಲಕ ಬೃಹತ್ ಧ್ವಜಸ್ತಂಭದ ದರ್ಶನ ಮಾಡಬಹುದು. ಏಕಮರದಲ್ಲಿ ತಯಾರಿಸಲ್ಪಟ್ಟ ಧ್ವಜಸ್ತಂಭದ ತುದಿಗೆ ಉತ್ಸವದ ಗರ್ನಪಟ ಕಟ್ಟುವುದಾಗಿದೆ. ಅದರ ಪಕ್ಕದಲ್ಲಿ ಅತಿದೊಡ್ಡ ಬಲಿಕಲ್ಲು (ತಂತ್ರಪಾರಾಗಮ)ದಂತೆ ಪೂಜಿಸಲ್ಪಡುತ್ತದೆ. ಇಲ್ಲಿ ಬಲಮೂಲೆಯಲ್ಲಿ ಆದಿಗಣಪನ ಗುಡಿ ಅದರ ಎದುರು ಭಾಗದಲ್ಲಿ ಗೋಪಾಲಕೃಷ್ಣ ದೇವರ ಗುಡಿ - ಆ ಸುತ್ತಿನ ಮೂಲೆಯಲ್ಲಿ ಆಂಜನೇಯನ ಗುಡಿ ಈ ಪ್ರದಕ್ಷಿಣದ ವೈಶಿಷ್ಟ್ಯ. ಅಲ್ಲಿಂದ ಮತ್ತೊಂದು ಪ್ರಾಚೀನ ದ್ವಾರದ ಮೂಲಕ ನಾಲ್ಕನೇ ಪ್ರದಕ್ಷಿಣದಲ್ಲಿ ಕರಿಕಲ್ಲಿನ ಮುಖಮಂಟಪ ಅದ್ಭುತ ತಂತ್ರಜ್ಞಾನದ ನಿರ್ಮಾಣವಾಗಿದೆ. ಅಲ್ಲಿ ಬಸವನ ಶಿಲಾಮೂರ್ತಿ ಸ್ಥಾಪಿಸಲ್ಪಟ್ಟಿದೆ. ಆ ಪ್ರದಕ್ಷಿಣದಲ್ಲಿ ಮುಂದುವರಿದರೆ ಮೂಲೆ ಗಣಪತಿಯ ದರ್ಶನ ಮಾಡಬಹುದಾಗಿದೆ. ಪ್ರಧಾನ ಗರ್ಭಗುಡಿಯ ಮೇಲ್ಛಾವಣಿ ತಾಮ್ರದ ಹೊದಿಕೆಯಿಂದ ಕೂಡಿದ್ದು ಪ್ರಾಚೀನ ದೇವಾಲಯದ ದರ್ಶನ ನೀಡುತ್ತದೆ. ಪ್ರಸ್ತುತ ಉಪಯೋಗಿಸಲ್ಪಡುವ ನಾಲ್ಕನೆಯ ಪ್ರದಕ್ಷಿಣದಲ್ಲಿ ಸಪ್ತಮಾತೃಕೆಯರ ಇಪ್ಪತ್ತು ಇಂಚು ಎತ್ತರದ ಏಳು ಶಿಲಾ ಬಿಂಬಗಳಿವೆ. ಅವುಗಳೊಂದಿಗೆ ಗಣೇಶ, ವೀರಭದ್ರ ವಿಗ್ರಹಗಳೂ ಸ್ಥಾಪಿಸಲ್ಪಟ್ಟಿವೆ. ಈ ಪ್ರದಕ್ಷಿಣದಲ್ಲಿ ದಿನಂಪ್ರತಿ ಪೂಜೆಗೊಳ್ಳುವ ಬಲಿಕಲ್ಲುಗಳಿದ್ದು ಪೂಜಿಸಲ್ಪಡುತ್ತದೆ.
ನಾಲ್ಕನೇ ಪ್ರದಕ್ಷಿಣದಿಂದ ಒಳಗೆ ಹೋಗುವ ದ್ವಾರದಲ್ಲಿ ಐದಡಿ ಎತ್ತರದ ಎರಡು ಶೂಲಪಾಣಿ ಪರರು ಪಾಣಿ-ದ್ವಾರಪಾಲಕರ ಮೂರ್ತಿ ಕಂಚಿನದ್ದು ಸ್ಥಾಪಿಸಲ್ಪಟ್ಟಿವೆ. ಅಲ್ಲಿಂದ ಮುಂದೆ ಮೂರು ಪ್ರದಕ್ಷಿಣಗಳಿದ್ದು ಸಂಪೂರ್ಣ ಕರಿಶಿಲೆಯ ನಿರ್ಮಾಣವಾಗಿದೆ. ಪ್ರಧಾನ ಗರ್ಭಗುಡಿಯಲ್ಲಿ ಶಿಲಾನಿರ್ಮಿತ ಚಿಕ್ಕಬಾವಿಯಾಕಾರದ ಶಿಲಾ ನಿರ್ಮಾಣವಿದ್ದು ಅದರೊಳಗೆ ರುದ್ರಾಕ್ಷಿಯಂತಿರುವ ಅಸಂಖ್ಯಾತ ಶಿವಲಿಂಗಗಳಿವೆ. ಇದು ಕೋಟಿಲಿಂಗೇಶ್ವರನ ಮೂಲಸ್ಥಾನ. ಅಲ್ಲಿ ನಿರಂತರವಾಗಿ ಗಂಗೆ ತೊಟ್ಟಿಕ್ಕುವ ಹಾಗೂ ಬಾವಿಯ ಮೇಲ್ಭಾಗವನ್ನು ಮುಚ್ಚುವಂತೆ ನಿರ್ಮಿಸಿಡಲಾದ ಅಪ್ಪಟ ಬೆಳ್ಳಿಯ ಮೂವತ್ತು ಕೆಜಿಯಷ್ಟು ತೂಕವಿರುವ ಗೋಳೇ ದೇವರು ಪೂಜಿಸಲ್ಪಡುತ್ತಾನೆ.[೨]
ಆರನೇ ಸುತ್ತಿನ ಉತ್ತರ ದಿಕ್ಕಿನಲ್ಲಿ ಬೃಹತ್ ಕೋಟೆತೀರ್ಥವೆಂಬ ಪುಷ್ಕರಣಿಯಿದ್ದು ಎಂತಹ ಬರಗಾಲದಲ್ಲೂ ನೀರಿನ ಮಟ್ಟ ಕಡಿಮೆಯಾಗದಂತೆ ನಿರ್ಮಿಸಲಾದ ಪುಷ್ಕರಣಿಯಾಗಿದೆ. ಈ ಪುಷ್ಕರಣಿ ನಾಲ್ಕೂವರೆ ಎಕರೆ ವಿಸ್ತೀರ್ಣ ಹೊಂದಿದೆ. ಈ ಕೆರೆಯಲ್ಲಿ ಹದಿನೆಂಟು ಪುಣ್ಯ ನದಿಗಳ ಸಂಗಮವಿದೆ ಎಂದು ಪುರಾಣಗಳಿಂದ ತಿಳಿದುಬರುತ್ತದೆ. ಪುರಾಣ ಕಾಲದಲ್ಲಿ ಈ ಕೆರೆಯನ್ನು 'ಬ್ರಹ್ಮತೀರ್ಥ'ವೆಂದು ಕರೆಯುತ್ತಿದ್ದರಂತೆ. ಈ ಕೋಟಿತೀರ್ಥದಲ್ಲಿ ಸ್ನಾನ ಮಾಡಿದರೆ ಸರ್ವ ರೋಗಗಳು ನಾಶವಾಗಿ ಆರೋಗ್ಯವಂತರಾಗುತ್ತಾರೆ. ಈ ದೇವಾಲಯವು ಬೃಹತ್ತಾದ ದೇವಸ್ಥಾನವಾದ್ದರಿಂದ ಇದನ್ನು 'ಮಹತೋಬಾರ್ ಕೋಟಿಲಿಂಗೇಶ್ವರ ದೇವಸ್ಥಾನ' ಎಂದು ಕರೆಯುತ್ತಾರೆ.
ವಿಶೇಷತೆ
[ಬದಲಾಯಿಸಿ]- ಕೊಡಿಹಬ್ಬ - ಪ್ರತಿ ವರ್ಷವೂ ಕಾರ್ತಿಕ ಶುದ್ಧ ಹುಣ್ಣಿಮೆಯಂದು ಅದ್ಭುತವೆನಿಸುವಂತೆ ನಡೆಸಲ್ಪಡುವ ಬ್ರಹ್ಮರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಎಂಟು ದಿವಸ ಪೂರ್ವದಲ್ಲಿ ಅರವತ್ತು ಅಡಿ ಎತ್ತರದ ಏಕಮರ ಧ್ವಜಸ್ಥಂಭಕ್ಕೆ ಗರ್ವಪಟಾರೋಹಣ ಮಾಡುವುದರ ಮೂಲಕ ಆರಂಭಗೊಳ್ಳುತ್ತದೆ. ಬ್ರಹ್ಮರಥೋತ್ಸವದ ಮುನ್ನಾದಿನದ ಉತ್ಸವ ಹೆರ್ರಂಗ್ ಪೂಜೆಯೆನಿಸಿಕೊಳ್ಳುತ್ತದೆ. ಸಾಯಂಕಾಲದ ಉತ್ಸವವು ಮೂಡುಕಟ್ಟೆ ಉತ್ಸವ ಎನಿಸಿಕೊಳ್ಳುತ್ತದೆ. ಅಂದು ರಾತ್ರಿ ಭಗವಾನ್ ಈಶ್ವರನಿಗೆ ಅನ್ನದ ನೈವೇದ್ಯವನ್ನು ವಿಶೇಷವಾಗಿ ಅರ್ಪಿಸುವ ವಾಡಿಕೆಯಿದೆ. ದೇವರ ರಂಗಪೂಜೆಯಲ್ಲಿ ಹಲಗೆಯ ಮೇಲೆ ಬಾಳೆಲೆ ಹಾಸಿ ಪಂಚಕಜ್ಜಾಯವನ್ನು ಅಲಂಕರಿಸಿ ಪೂಜಿಸಿದಂತೆ ಅನ್ನದ ನೈವೇದ್ಯವನ್ನು ಸಮರ್ಪಿಸಲಾಗುತ್ತದೆ. ಇಲ್ಲಿನ ಬ್ರಹ್ಮರಥ ಒಂದು ಪುರಾತನ ಕಾಷ್ಠ ಶಿಲ್ಪ ವೈಭವ. ಜಿಲ್ಲೆಯಲ್ಲೇ ಪುರಾತನ ಹಾಗೂ ಬೃಹತ್ ಬ್ರಹ್ಮರಥ ಇದೆನ್ನಲಾಗಿದೆ. ಈ ರಥದ ಆರು ಗಾಲಿಗಳೇ ಆರು ಋತುಗಳು. ಮೇಲಿನ ಹನ್ನೆರಡು ತೊಲೆಗಳೇ ಹನ್ನೆರಡು ಮಾಸಗಳು. ಇದಿರಿನ ಬಾಗಿಲೇ ಹಗಲು, ಹಿಂದಿನ ಬಾಗಿಲೇ ರಾತ್ರಿ. ಪಾರ್ಶ್ವದ ಬಾಗಿಲುಗಳೇ ಎರಡು ಸಂಧ್ಯಾಕಾಲಗಳು, ಪತಾಕೆಗಳೇ ಯಮಗಳು, ಮುಹೂರ್ತಗಳು, ಗಳಿಗೆಗಳೂ ಹಾಗೂ ಲಿಪ್ತಿಗಳು, ಶಿಖರ ಅಂದಿನ ಪೂರ್ಣ ಚಂದ್ರ, ಹೀಗೆ ಸೂರ್ಯಾತ್ಮಕನಾದ ಶ್ರೀ ಕೋಟಿಲಿಂಗೇಶ್ವರ ವರ್ಷಕೊಮ್ಮೆ ವರ್ಷರೂಪವಾದ ರಥವನ್ನೇರಿ , ಲೋಕ ಕಲ್ಯಾಣಾರ್ಥವಾಗಿ ಸಂಚರಿಸುವುದೇ ಬ್ರಹ್ಮರಥೋತ್ಸವ.
ಈ ದಿನದಂದು ಭಗವಾನ್ ಈಶ್ವರನು ಉತ್ಸವ ಮೂರ್ತಿಯನ್ನು ಗರ್ಭಗುಡಿಯಿಂದ ತರುವಾಗ ಅದಕ್ಕೆ ಸೂಕ್ತ ವಾದ್ಯಗಳ ಸಮೂಹ, ಬ್ಯಾಂಡ್ ವಾದ್ಯ ಇತ್ಯಾದಿಯೊಡನೆ ವಿಜಯಂಗೈದ ಉತ್ಸವ ಮೂರ್ತಿಯು ನಾಲ್ಕನೇ ಹಾಗೂ ಐದನೇ ಸುತ್ತಿನಲ್ಲಿ ವೈವಿದ್ಯಮಯ ನಡಿಗೆ ಹಾಗೂ ನರ್ತನದೊಡನೆ ಸಾಗುವುದನ್ನು ಕಿಕ್ಕಿರಿದ ಭಕ್ತಸಮೂಹ ನೋಡಿ ಆನಂದಿಸುತ್ತಾರೆ. ಅಂದು ಸಂಪ್ರದಾಯದಂತೆ ನೂತನ ವಧು-ವರರು ಕೋಟಿತೀರ್ಥದಲ್ಲಿ ಸ್ನಾನ ಮಾಡಿ ದೇವದರ್ಶನ ಮಾಡಬೇಕಾದ ಸಂಪ್ರದಾಯವಿದೆ. ಇದರಿಂದಾಗಿ ಅವರ ಭವಿಷ್ಯ ಜೀವನ ಸುಖಮಯವಾಗಿ ಉತ್ತಮ ಸಂತಾನ ಪಡೆದು ನೆಮ್ಮದಿಯ ಬದುಕನ್ನು ಸಾಗಿಸುವರೆಂಬ ಅಚಲ ನಂಬಿಕೆಯಿದೆ.
ಐದನೇ ಸುತ್ತಿನಲ್ಲಿ ತನ್ನ ಸಂಪ್ರದಾಯದ ನಡಿಗೆಯಲ್ಲಿ ಸಾಗಿದ ಉತ್ಸವ ಮೂರ್ತಿ ಮುಂದೆ ಪ್ರಾಚೀನ ಅಂದಾಜು ಮೂವತ್ತು ಕೆಜಿ ತೂಕವಿರುವ ಬೆಳ್ಳಿಯ ಗೋಳೇ ದೇವರೊಡನೆ ರಥಾರೋಹಿಯಾಗಲು ಬರುವ ಸಂಪ್ರದಾಯದ ಸಂದರ್ಭ ಸಂಪೂರ್ಣ ರಥಬೀದಿ ಭಕ್ತಾದಿಗಳಿಂದ ತುಂಬಿ ತುಳುಕುತ್ತಿರುತ್ತದೆ. ರಥದ ಸುತ್ತ ಬಲಿಹರಣ ಮಾಡುವ ಹಾಗೂ ರಥಕ್ಕೆ ನಿಗಧಿತ ಸುತ್ತು ಬರುವ ಉತ್ಸವ ಮೂರ್ತಿ ಕೊನೆಯಲ್ಲಿ 'ಹರಹರ ಮಹಾದೇವ' ಉದ್ಘೋಷದೊಡನೆ ರಥವೇರುವ ಸಂದರ್ಭ ಭಾವುಕ ಭಕ್ತರು ಉದ್ಘೋಷ ಮಾಡುತ್ತಾ ರಥವನ್ನೆಳೆಯಲು ಸಿದ್ಧರಾಗುತ್ತಾರೆ. ರಥವೇರಿದ ದೇವಮೂರ್ತಿಗಳಿಗೆ ಅಲ್ಲಿ ಪೂಜೆ ಸಲ್ಲಿಸಿದ ನಂತರ ಬ್ರಹ್ಮರಥದ ಏಣಿಯನ್ನು ತೆಗೆಯಲಾಗುತ್ತದೆ. ಆಗ ಭಕ್ತರ ಉತ್ಸಾಹಕ್ಕೆ ಮೇರೆಯೇ ಇಲ್ಲವೆಂಬಂತೆ "ಹೌದ್ರಯ್ಯೊ" ಎಂಬ ಉತ್ಸಾಹಪೂರಿತ ಶಬ್ದದೊಡನೆ ಬೃಹತ್ ರಥವನ್ನು ಎಳೆಯಲಾರಂಭಿಸಿದಾಗ ನೋಡುಗರು ಕುತೂಹಲ, ಭಯ, ಭಕ್ತಿಯಿಂದ ರಥವು ಓಲಾಡುತ್ತಾ ಮುಂದುವರಿಯುತ್ತಿರುವುದನ್ನು ವೀಕ್ಷಿಸುತ್ತಾ ಜಯಘೋಷ ಮಾಡುತ್ತಾರೆ. ಅತ್ಯಂತ ದಪ್ಪದ ಎರಡು ಹಗ್ಗವನ್ನು ಭಕ್ತರು ಎಳೆದರೆ ರಥದ ದಿಕ್ಕನ್ನು ಸೂಕ್ತವಾಗಿ ತಿರುಗಿಸುವವರು ರಥದ ಹಿಂದೆ ತೂರಿಸಲಾದ ಮರದ ಮೀಟುಗಂಭವನ್ನು ಸೂಕ್ತವಾಗಿ ಹಿಡಿತದಲ್ಲಿಡುತ್ತಾರೆ.
ತನ್ನ ಮೂಲ ಸ್ಥಾನದಿಂದ ಕದಲಿದ ಬ್ರಹ್ಮರಥ ಐದು ಅಂತಸ್ತಿನೊಂದಿಗೆ ನಿರ್ಮಿಸಲಾಗಿದ್ದು, ಅದಕ್ಕೆ ಭೂಮಿಯಾಕಾರದ ಗೂಡನ್ನು ನಿರ್ಮಿಸಿ ಅದನ್ನು ಪತಾಕೆಗಳಿಂದ ಸಜ್ಜುಗೊಳಿಸಿರುವುದೂ, ತುದಿಯಲ್ಲಿ ಮತ್ತೊಂದರಲ್ಲಿ ಸಣ್ಣ ಗೂಡನ್ನು ಪ್ರತ್ಯೇಕವಾಗಿರಿಸಿ ಅದರ ಮೇಲೆ ಕಳಶವನ್ನಿಟ್ಟಾಗ ಸರ್ವ ವಿಧದಲ್ಲೂ ಬ್ರಹ್ಮರಥ ಸಜ್ಜುಗೊಂಡಿರುತ್ತದೆ.
ಓಲಾಡುತ್ತಾ ತೊರೆದಾಡುತ್ತಾ ಮಂದಗತಿಯಿಂದ ಸಾಗುವ ಬ್ರಹ್ಮರಥ ಪೇಟೆ ಬೀದಿಯ ರಸ್ತೆಯವರೆಗೆ ತಂದು ನಿಲ್ಲಿಸಲಾಗುತ್ತದೆ. ಮುಂದೆ ಸಾಯಂಕಾಲ ಐದು ಗಂಟೆಯವರೆಗೆ ಭಕ್ತಾದಿಗಳಿಂದ ಹಣ್ಣು-ಕಾಯಿ ಆರತಿಯನ್ನು ಮಾಡಿಸಲಾಗುತ್ತದೆ.
ಸಾಯಂಕಾಲ ವಾದ್ಯಗಳ ಮೂಲಕ ಪಟ್ಟಾಭಿರಾಮಚಂದ್ರ ದೇವಸ್ಥಾನದ ಭಕ್ತರನ್ನು ಆಹ್ವಾನಿಸುವುದರೊಂದಿಗೆ ಕೋಟೇಶ್ವರದ ಸಮಸ್ತ ಗಣ್ಯರ ಸಮ್ಮುಖದಲ್ಲಿ ರಥಯಾನ ಆರು ಗಂಟೆಗೆ ಸರಿಯಾಗಿ ಆರಂಭಿಸಲ್ಪಟ್ಟು ಸ್ವಾಸ್ಥಾನ ಸೇರುತ್ತದೆ. ಅಲ್ಲಿಗೆ ಕೋಟೇಶ್ವರದ ವೈಭವೋಪೇತ ಬ್ರಹ್ಮರಥೋತ್ಸವದ ಕಾರ್ಯಕ್ರಮವು ಸ್ಥಗಿತಗೊಳ್ಳುತ್ತದೆ. ಅಂದು ದೇವರು ಶಯನೋತ್ಸವ ಮಾಡುತ್ತಾರೆಂಬ ನಂಬಿಕೆಯಿದೆ. ಬ್ರಹ್ಮರು ರಥೋತ್ಸವದ ಮೊದಲೇ ಓಕುಳಿ ಸ್ನಾನ ಅಂದು ರಾತ್ರಿ ಹತ್ತು ಗಂಟೆಗೆ ದೇವಳದ ಉತ್ಸವ ಮೂರ್ತಿ ಪಲ್ಲಕ್ಕಿಯಲ್ಲಿ ವಿಜಯಂಗೈದು ದೇವಾಲಯದ ಎದುರಿನ ರಥಬೀದಿಯ ಆರಂಭದಲ್ಲಿರುವ ವಾಲಮಂಟಪದಲ್ಲಿ ಆಸೀನರಾದ ನಂತರ ಬಿರುದಾವಳಿ ಹಾಗು ಬ್ಯಾಂಡ್ ವಾದ್ಯಗಳನ್ನು ಬಸವನಗುಡಿಯೆಡೆಗೆ ಕಳಿಸಲಾಗುತ್ತದೆ. ಅಲ್ಲಿ ನಿರ್ದಿಷ್ಟ ಗ್ರಾಮವೊಂದರ ಭಕ್ತರು ಓಕುಳಿಯಾಟ ಆಡಳಿಕ್ಕೆ ಬಾಜಾ ಭಜತ್ರಿಯಲ್ಲಿ ಮೆರವಣಿಗೆಯಲ್ಲಿ ಬರುವ ಸಂಪ್ರದಾಯವಿದೆ. ಅತಿಶಯವಾದ ರೀತಿಯಲ್ಲಿ ಅವರು ಪರಸ್ಪರ ಕೈ ಹಿಡಿದುಕೊಂಡು 'ಹೌದ್ರಯ್ಯ' ಎಂದು ಘೋಷ ಮಾಡುತ್ತಾ ವಾಲಮಂಟಪದ ಎದುರಿಗಿರುವ ಓಕುಳಿ ಹೊಂಡದೆಡೆಗೆ ಬರುತ್ತಾರೆ. ಅಲ್ಲಿ ಹೊಂಡದ ಮೇಲೆ ಬಾಲೆ ದೊಣೆಯೊಂದನ್ನು ರಾಟೆ ಮೂಲಕ ಕಟ್ಟಿಡಲಾಗಿದ್ದು, ಅನುಭವಿಯೋರ್ವ ಅದನ್ನು ಮೇಲೆ ಕೆಳಗೆ ಮಾಡುತ್ತಾ ಓಕುಳಿ ಹಾಕುವವರನ್ನು ಆಟ ಆಡಿಸುತ್ತಾನೆ. ದೂರದಿಂದ 'ಹೌದ್ರಯ್ಯ' ಎಂದೆನ್ನುತ ನೀರು ತುಂಬಿದ ಓಕುಳಿ ಹೊಂಡದ ಮೇಲಿನ ಬಾಲೆ ಗೊಣೆ ಪಡೆಯಲು ಪೈಪೋಟಿಯಲ್ಲಿ ಹಾರುತಿರುತ್ತಾರೆ. ಸಾಧಾರಣ ಒಂದು ಗಂಟೆಯ ಕಾಲ ನಡೆಯುವ ಈ ಓಕುಳಿಯಾಟಕ್ಕೆ ವೀರನೋರ್ವ ಎತ್ತರಕ್ಕೆ ಜಿಗಿದು ಅದನ್ನು ಹಿಡಿದು ಹೊಂಡಕ್ಕೆ ಬೀಳುತ್ತಾನೆ. ಅಲ್ಲಿ ಓಕುಳಿಯಾಟ ಮುಕ್ತಾಯ. ಅಲ್ಲಿಂದ ಹೊರಟ ಪಾಲಕ್ಕಿ ದೇವರು ದೂರದ ಅಂಕದ ಕಟ್ಟೆಯವರೆಗೆ ಉತ್ಸವದಲ್ಲಿ ಹೋಗಿ ಅಲ್ಲಿ ಪೂಜಿಸಲ್ಪಟ್ಟ ನಂತರ ವಾಪಸ್ಸು ದೇವಳಕ್ಕೆ ಬರುವಾಗ ರಥಬೀದಿಯಲ್ಲಿ ಶಿವನಿಗೆ ದೇಗುಲಕ್ಕೆ ವಾಪಸ್ಸು ಬರದಿರುವಂತೆ ಪಾರ್ವತಿಯು ತಡೆಯುವ ಸಂವಾದವಿರುತ್ತದೆ. ಕೊನೆಯಲ್ಲಿ ಶಿವನು ತನ್ನ ನೆಚ್ಚಿನ ಮಡದಿ ಪಾರ್ವತಿಯೊಂದಿಗೆ ರಾಜಿಯಾಗಿ ದೇವಳ ಪ್ರವೇಶದೊಡನೆ ಬ್ರಹ್ಮರಥೋತ್ಸವ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ.
ಹೊರಗಿನ ಕೊಂಡಿಗಳು
[ಬದಲಾಯಿಸಿ]ಇಲ್ಲಿ ಕ್ಲಿಕ್ ಮಾಡಿದರೆ ಬೇರೆ ಕೂಂಡಿಗೆ ಮರುನಿರ್ದೇಶಿಸಲಾಗುತ್ತಿದೆ . ದಯವಿಟ್ಟು ಸಹಕರಿಸಿ .
ಉಲ್ಲೇಖಗಳು
[ಬದಲಾಯಿಸಿ]- ↑ http://www.karnatakaholidays.com/koteshwara.php Archived 2015-12-16 ವೇಬ್ಯಾಕ್ ಮೆಷಿನ್ ನಲ್ಲಿ. www.karnatakaholidays.com/koteshwara.php
- ↑ http://mythrisamuha.com/combined_login.php
- Pages with non-numeric formatnum arguments
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Short description is different from Wikidata
- Pages using infobox settlement with unknown parameters
- Pages using infobox settlement with no coordinates
- ದೇವಾಲಯಗಳು
- ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ-೨೦೧೫-೧೬
- ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳು
- ವಿಕಿಕ್ಲಬ್ ಕ್ರೈಸ್ಟ್ ಯೂನಿವರ್ಸಿಟಿ ರಚಿಸಿದ ಲೇಖನಗಳು