ಗೋಲ್ಡ್‌ಸ್ಟೀನ್, ಕೆನ್ನೆತ್
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಕೆನ್ನೆತ್ ಗೋಲ್ಡ್‌ಸ್ಟೀನ್ ( 1927-95) - ಅಮೆರಿಕದ ಜಾನಪದ ತಜ್ಞ, ಸಂಗ್ರಹಕಾರ ಮತ್ತು ಲೇಖಕ.
ಬದುಕು
[ಬದಲಾಯಿಸಿ]ತಂದೆ ಇರ್ವಿಂಗ್ ಮಾರ್ಟಿನ್ ಗೋಲ್ಡ್‌ಸ್ಟೀನ್ ಕೆನ್ನೆತ್ ಇಂಗ್ಲೆಂಡ್ ದೇಶದವನು. ತಾಯಿ ಲಾತ್ವಿಯ ದೇಶದವಳು. ಈತ 1927ರಲ್ಲಿ ಅಮೆರಿಕದ ನ್ಯೂಯಾರ್ಕ್ ನಗರದ ಬ್ರೂಕ್ಲೈನ್ನಲ್ಲಿ ಜನಿಸಿದ. ಅಲ್ಲಿನ ಸಿಟಿ ಕಾಲೇಜಿನಿಂದ ಬಿ.ಎ. ಮತ್ತು ಎಂ.ಎ. ಪದವಿಗಳನ್ನು ಬಿಝಿನೆಸ್ ಅಡ್ಮಿನಿಸ್ಟ್ರೇಶನ್ನಲ್ಲಿ (ವ್ಯವಹಾರ ಕಾರ್ಯನಿರ್ವಹಣೆ) ಪಡೆದ. 1940ರ ದಶಕದಲ್ಲಿ ಸೈನ್ಯದಲ್ಲಿ ಸೇವೆ ಸಲ್ಲಿಸಿದ. 1949ರಲ್ಲಿ ರೊಚಲ್ಲೆ ಜೂಡಿತ್ ಕೊರ್ನ್ಳನ್ನು ವಿವಾಹವಾದ.
ಈತ 1950ರ ದಶಕದ ಪ್ರಾರಂಭಿಕ ವರ್ಷಗಳಲ್ಲಿ ಅಲ್ಪಾವಧಿಯ ಕ್ಷೇತ್ರಾಧ್ಯಯನವನ್ನು ಕುರಿತು ಅನೇಕ ಶಿಬಿರಗಳನ್ನು ನಡೆಸಿ ಯಶಸ್ವಿಯಾದ. ಇದರಿಂದ ಈತನಿಗೆ ಅಪಾರ ಮನ್ನಣೆ ಮತ್ತು ಅನುಭವ ಲಭಿಸಿತು. 1951ರಲ್ಲಿ ನ್ಯೂಯಾರ್ಕ್ನಲ್ಲಿ, 1952 ರಿಂದ 1957ರ ವರೆಗೆ ಉತ್ತರ ಕರೋಲಿನದಲ್ಲಿ, 1953ರಲ್ಲಿ ಮೆಸಾಚುಸೆಟ್ಸ್‌ನಲ್ಲಿ, 1959-60ರಲ್ಲಿ ಉತ್ತರ, ಈಶ್ಯಾನ ಸ್ಕಾಟ್ಲೆಂಡಿನಲ್ಲಿ ಪ್ರಸಿದ್ಧ ಧ್ವನಿಮುದ್ರಣ ಸಂಸ್ಥೆಗಳಿಗಾಗಿ ಜನಪದ ಸಂಗೀತವನ್ನು ನಿರ್ದೇಶಿಸಿದ. ಈತನ ಲಕ್ಷ್ಯ ಸ್ಕಾಟ್ಲೆಂಡ್, ಐರ್ಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯ ಪ್ರದೇಶದ ಜಾನಪದದ ಕಡೆಗೆ ಇತ್ತು. ಈತನಿಗೆ ಕೆನಡಕ್ಕೆ ಸೇರಿದ ಪ್ರದೇಶಗಳಾದ ಲ್ಯಾಬ್ರಡಾರ್ ಮತ್ತು ನ್ಯೂಫೌಂಡ್ಲೆಂಡ್ ಮೇಲೆ ಅಧಿಕವಾದ ಆಸಕ್ತಿ.
1958ರಲ್ಲಿ ಈತ ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದ ಪದವಿ ಕಾಲೇಜಿಗೆ ಸೇರಿದ. ಅಲ್ಲಿ ಮಾನವ ವಿಜ್ಞಾನದಲ್ಲಿ ಆಸಕ್ತಿಯಿಂದ ಭಾಗವಹಿಸಿ ಜಾನಪದ ವಿದ್ವಾಂಸನಾದ. ಜಾನಪದವು ಮಾನವವಿಜ್ಞಾನ ವಿಭಾಗದಿಂದ ಬೇರ್ಪಟ್ಟು ಪ್ರತ್ಯೇಕ ವಿಭಾಗವಾಯಿತು. ಅಲ್ಲಿ ಪ್ರಪ್ರಥಮ ಸಂಶೋಧಕನಾಗಿ ಪಿಎಚ್.ಡಿ. ಪದವಿಯನ್ನು ಪಡೆದ. ಎ ಗೈಡ್ ಫಾರ್ ಫೀಲ್ಡ್ ವರ್ಕರ್ಸ್ ಇನ್ ಫೋಕ್ಲೋರ್ ಈತನ ಪಿಎಚ್.ಡಿ. ಮಹಾಪ್ರಬಂಧ. ಅನಂತರ ಅಲ್ಲಿಯೇ ಗುತ್ತಿಗೆ ಆಧಾರದ ಮೇಲೆ ಪ್ರಾಧ್ಯಾಪಕನಾಗಿ ನೇಮಕವಾದ; ಅಮೆರಿಕದ ಜಾನಪದ ವಿದ್ವಾಂಸರಲ್ಲಿ ಪ್ರಥಮಸ್ಥಾನ ಪಡೆದ. ಅಲ್ಲಿ ಬ್ರಿಟನ್, ಐರ್ಲೆಂಡ್ ಮತ್ತು ಅಮೆರಿಕದ ಜನಪದ ಗೀತೆ, ಲಾವಣಿ ಮತ್ತು ಜನಪದ ಕಥನಗಳನ್ನು ಬೋಧಿಸುತ್ತಿದ್ದ.
ಈತ ತನ್ನ 68ನೆಯ ವಯಸ್ಸಿನಲ್ಲಿ 1995ರ ನವೆಂಬರ್ 11 ರಂದು ನಿಧನನಾದ.
ಜಾನಪದ ಕ್ಷೇತ್ರಕ್ಕೆ ಕೊಡುಗೆ
[ಬದಲಾಯಿಸಿ]ಈತ ಅನೇಕ ಸಂಘ ಸಂಸ್ಥೆಗಳಲ್ಲಿ ಗೌರವಾನ್ವಿತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ. ನ್ಯೂಫೌಂಡ್ಲೆಂಡ್ನ ಮೆಮೋರಿಯಲ್ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ. 1960ರಲ್ಲಿ ಪ್ರಕಾಶನ ಸಂಸ್ಥೆಯೊಂದನ್ನು ಪ್ರಾರಂಭಿಸಿ ಜಾನಪದ ವಿಷಯದ ಕೃತಿಗಳನ್ನು ಪ್ರಕಟಿಸಿದ್ದಾನೆ. ಈತ ಜಾನಪದ ಕುರಿತು ಕೃತಿಗಳನ್ನೂ 30 ಪಾಂಡಿತ್ಯಪೂರ್ಣ ಲೇಖನಗಳನ್ನೂ ಪ್ರಕಟಿಸಿದ್ದಾನೆ.