ಪಂಜೆ ಮಂಗೇಶರಾಯರು
| ಪಂಜೆ ಮಂಗೇಶರಾವ್ ಪುಟವನ್ನು ಈ ಪುಟ ಅಥವ ವಿಭಾಗದೊಂದಿಗೆ ವಿಲೀನಗೊಳಿಸುವ ಪ್ರಸ್ತಾವವಿದೆ. (ಚರ್ಚೆ) |
ಪಂಜೆ ಮಂಗೇಶರಾಯರು (ಜನನ:೧೮೭೪ ಫೆಬ್ರುವರಿ ೨೨, ನಿಧನ:೧೯೩೭ ಅಕ್ಟೋಬರ ೨೪ ) ಕವಿಶಿಷ್ಯ ಕಾವ್ಯನಾಮದಿಂದ ಖ್ಯಾತರಾಗಿದ್ದು, ಕನ್ನಡದ ಅಧ್ಯಾಪಕರಾಗಿ, ಶಾಲಾ ಇನ್ಸ್ಪೆಕ್ಟರಾಗಿ, ಟ್ರೈನಿಂಗ್ ಶಾಲೆಯ ಅಧ್ಯಾಪಕರಾಗಿ, ಪರೀಕ್ಷಾಧಿಕಾರಿಗಳಾಗಿ, ದುಡಿದ ಪ್ರಾತಃಸ್ಮರಣೀಯ ಸಾಹಿತಿಗಳು. ಶಿಶು ಸಾಹಿತ್ಯದಲ್ಲಿ ಅಪಾರ ಮುತುವರ್ಜಿಯ ಸೇವೆ ಸಲ್ಲಿಸಿದವರು.
ಪರಿವಿಡಿ |
[ಬದಲಾಯಿಸಿ] ಪೂರ್ವಜರು
ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಹತ್ತಿರವಿರುವ ಪಂಜ ಎಂಬಲ್ಲಿ ಮಂಗೇಶರಾಯರ ಪೂರ್ವಜರು ವಾಸಿಸುತ್ತಿದ್ದರು. ರಾಯರ ಮುತ್ತಜ್ಜ ದಾಸಪ್ಪಯ್ಯನವರ ಅಕಾಲ ಮರಣದ ನಂತರ ಅವರ ಪತ್ನಿ ತನ್ನ ಕುಟುಂಬದೊಡನೆ ನೇತ್ರಾವತಿ ನದಿಯ ದಡದಲ್ಲಿರುವ ಬಂಟವಾಳದಲ್ಲಿ ಬಂದು ನೆಲೆಸಿದರು. ಬಳಿಕ ಈ ಕುಟುಂಬದವರನ್ನು ಪಂಜೆ ಎಂದು ಕರೆಯುವದು ರೂಢಿಯಾಯಿತು.
ದಾಸಪ್ಪಯ್ಯವರ ಒಬ್ಬನೇ ಮಗ ವಿಟ್ಠಲನವರಿಗೆ ಮೂವರು ಪುತ್ರರು. ಅವರಲ್ಲೊಬ್ಬರು ರಾಮಪ್ಪಯ್ಯನವರು. ಅವರ ಏಳು ಮಂದಿ ಮಕ್ಕಳಲ್ಲಿ ಎರಡನೆಯವರು ಮಂಗೇಶರಾಯರು. ಬಂಟವಾಳದಲ್ಲಿ ಒಂದು ಮನೆಯಿತ್ತು ಮತ್ತು ವ್ಯವಸಾಯಕ್ಕೆ ಸ್ವಲ್ಪ ಭೂಮಿಯಿತ್ತು.
[ಬದಲಾಯಿಸಿ] ಜನ್ಮ, ವಿದ್ಯಾಭ್ಯಾಸ ಮತ್ತು ಉದ್ಯೋಗ
ಮಂಗೇಶರಾಯರು ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳದಲ್ಲಿ ೧೮೭೪ ಫೆಬ್ರುವರಿ ೨೨ ರಂದು ಜನಿಸಿದರು. ಇವರ ತಾಯಿಯ ಹೆಸರು ಶಾಂತಾದುರ್ಗಾ. ಬಂಟವಾಳದಲ್ಲಿಯೇ ಅವರ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಿತು. ಬಡತನದ ಕಾರಣ ಮಕ್ಕಳ ವಿದ್ಯೆಗಾಗಿ ಅವರ ತಂದೆ ಸಾಲ ಮಾಡಿದ್ದರು. ೧೮೯೦ರಲ್ಲಿ ರಾಮಪ್ಪಯ್ಯ ತೀರಿಕೊಂಡಾಗ ಮಂಗೇಶರಾಯರಿಗೆ ಹದಿನಾರು ವರ್ಷದ ಪ್ರಾಯವಾಗಿದ್ದು, ಮಂಗಳೂರಿನಲ್ಲಿ ಓದುತ್ತಿದ್ದರು. ಅಣ್ಣ ಮದ್ರಾಸ್ (ಈಗಿನ ಚೆನ್ನೈ) ನಲ್ಲಿ ಓದುತ್ತಿದ್ದುದರಿಂದ ಸಂಸಾರದ ಜವಾಬ್ದಾರಿ ಇವರ ಮೇಲೇ ಬಿತ್ತು.
೧೮೯೪ ರಲ್ಲಿ ಇವರ ಮದುವೆ ಖ್ಯಾತನಾಮರಾದ ಬೆನಗಲ್ ರಾಮರಾವ್ ಇವರ ತಂಗಿ ಭವಾನಿಬಾಯಿಯವರೊಂದಿಗೆ ಜರುಗಿತು. ಈಗಿನ ಪಿಯುಸಿ ಎರಡನೆಯ ವರ್ಷಕ್ಕೆ ತತ್ಸಮವಾದ, ಕಾಲೇಜಿನ ಮೊದಲ ವರ್ಷದ ಎಫ್.ಏ.(ಆರ್ಟ್ಸ್) ತರಗತಿಯಲ್ಲಿ ಉತ್ತೀರ್ಣರಾದ ಬಳಿಕ ಇವರು ೧೮೯೬ ರಲ್ಲಿ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಕನ್ನಡ ಪಂಡಿತ ಹುದ್ದೆ ಪಡೆದರು. ಇದಕ್ಕಾಗಿ ಅವರು ಕನ್ನಡ ವಿಶಿಷ್ಟ ಪರೀಕ್ಷೆಯಲ್ಲಿ ಪಾಸಾಗಿದ್ದರು. ಇಲ್ಲಿ ನಂದಳಿಕೆ ಲಕ್ಷ್ಮೀನಾರಾಯಣರು (ಮುದ್ದಣ ಕವಿ) ಸಹೋದ್ಯೋಗಿಯಾಗಿದ್ದರು. ಮಂಜೇಶ್ವರದ ಗೋವಿಂದ ಪೈಯವರು ಶಿಷ್ಯರಾಗಿದ್ದರು.
ಬಿಎ ಪದವಿಯನ್ನು ಪಡೆದ ಬಳಿಕ ಮದ್ರಾಸಿನಲ್ಲಿ ಎಲ್ ಡಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಮರಳಿ ಬಂದು ಮಂಗಳೂರು ಕಾಲೆಜಿನ ಉಪಾಧ್ಯಾಯ ವೃತ್ತಿಯನ್ನು ಮುಂದುವರೆಸಿದರು. ಅನತಿ ಕಾಲದಲ್ಲೇ ಮಂಗಳೂರಿನ ವಿದ್ಯಾ ಇಲಾಖೆಯಲ್ಲಿ ಸಬ್ ಅಸಿಸ್ಟಂಟ್ ಶಾಲಾ ಇನ್ಸ್‌ಪೆಕ್ಟರಾಗಿ ನೇಮಕಗೊಂಡರು. ಆಮೇಲೆ ಟ್ರೈನಿಂಗ್ ಶಾಲೆಯ ಅಧ್ಯಾಪಕರೂ ಆದರು.
ಶಾಲಾ ಇನ್ಸ್‌ಪೆಕ್ಟರಾಗಿದ್ದಾಗ ಉಪಾಧ್ಯಾಯರನ್ನು ಗೌರವದಿಂದ ಬಹುವಚನದಲ್ಲಿ ಮಾತಾಡಿಸಿ, ಮಕ್ಕಳ ಮನಸ್ಸನ್ನು ಆಕರ್ಷಿಸುವ ರೀತಿಯಲ್ಲಿ ಪಾಠ ಹೇಳುವ ಕ್ರಮವನ್ನು ನಯವಾಗಿ ತಿಳಿಹೇಳುವ ಅವರ ಕ್ರಮವೇ ಹೊಸ ತರಹದ್ದಾಗಿದ್ದು, ಇನ್ಸ್‌ಪೆಕ್ಟರ್ ಅಂದರೆ ಕಳವನ್ನು ಪತ್ತೆಹಚ್ಚಲು ಬರುವ ಪೊಲೀಸರಲ್ಲ ಎಂದು ಉಪಾಧ್ಯಾರ ಮನೋಭಾವನೆ ಬದಲಾಯಿತು. ಅವರ ಆಗಮನವನ್ನು ಎದುರು ನೊಡುವ, ತಮ್ಮಲ್ಲಿನ ಸಂದರ್ಶನದ ಬಳಿಕ ಮುಂದಿನ ಊರಿಗೆ ಅವರನ್ನು ಮುಟ್ಟಿಸುವ ಉತ್ಸಾಹ ಉಪಾಧ್ಯಾಯರಲ್ಲಿ ಕಾಣಿಸತೊಡಗಿತು.
೧೯೨೧ರಲ್ಲಿ ಅವರನ್ನು ಕೊಡಗಿನ ಶಾಲಾ ಇನ್ಸ್‌ಪೆಕ್ಟರಾಗಿ ವರ್ಗಾಯಿಸಿದಾಗ, ತಮ್ಮವರಂತೆ ಹಾಗೂ ಆಗಿದ್ದ ಆಂಗ್ಲರಂತೆ, ಸೂಟು-ಬೂಟು ಧರಿಸದ, ಕಟ್ಟುನಿಟ್ಟಿನ ಶಿಸ್ತಿಲ್ಲದ ವಿದ್ಯಾಧಿಕಾರಿಯೆಂದು ತುಸು ಅಸಡ್ಡೆಯಿಂದ ಕೊಡಗಿನ ಜನತೆ ಕಂಡರು. ಇನ್ಸ್‌ಪೆಕ್ಟರ್ ಜೆ ಎ ಯೇಟ್ಸನ ಹೊಸ ರೀತಿಯ ಪಾಠಕ್ರಮವನ್ನು ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯಗತ ಮಾಡುವದರಲ್ಲಿ ಹೆಚ್ಚಿನ ಶ್ರಮವಹಿಸಿದರು, ಎಂದು ಅವರು ತಿಳಿದರು. ಎರಡು ವರ್ಷಗಳ ನಂತರ ಮಡಿಕೇರಿಯ ಸೆಂಟ್ರಲ್ ಹೈಸ್ಕೂಲಿನ ಮುಖ್ಯೋಪಾಧ್ಯಾರನ್ನಾಗಿ ಪಂಜೆಯವರನ್ನು ನೇಮಿಸಲಾಯಿತು. ಅದುವರೆಗೆ ಆ ಶಾಲೆಯ ಮುಖ್ಯೋಪಾಧ್ಯಾರಾಗಿ ಆಂಗ್ಲರೇ ಇದ್ದು, ಈಗ ಬಂದ ದೇಶೀಯನನ್ನು ಸ್ಥಳೀಯ ಸಹೋದ್ಯೋಗಿಗಳು ತಾತ್ಸಾರದಿಂದ ಕಂಡರು. ೧೯೨೯ ರವರೆಗೆ ಅವರು ಈ ಹುದ್ದೆಯಲ್ಲಿದ್ದು ನಿವೃತ್ತರಾದಾಗ ೨೨ ವರ್ಷಗಳ ಕಾಲ ಜನಸೇವೆ ಸಂದಿತ್ತು.
[ಬದಲಾಯಿಸಿ] ಪಂಜೆಯವರ ಸಾಹಿತ್ಯ ಕೃಷಿ
ಪಂಜೆಯವರು ಕನ್ನಡಕ್ಕೆ ಕೊಟ್ಟ ಸೇವೆ ಅನನ್ಯ. ಮನೆಮಾತು ಕೊಂಕಣಿ, ಊರ ಜನಬಳಕೆಯ ನುಡಿ ತುಳು, ಶಾಲೆಯಲ್ಲಿ ಕಲಿತದ್ದು ಕನ್ನಡ, ಉನ್ನತ ವ್ಯಾಸಂಗಗಳಲ್ಲಿ ಇಂಗ್ಲಿಶ್. ಹೀಗೆ ಹಲವಾರು ಭಾಷೆಗಳ ಪ್ರಭಾವ-ಪರಿಣಿತಿಗಳು ಅವರ ಸಾಹಿತ್ಯ ಸೃಷ್ಟಿಯಲ್ಲಿ ಪರಿಣಾಮವನ್ನು ಬೀರಿದವು.
[ಬದಲಾಯಿಸಿ] ಶಿಶು ಸಾಹಿತ್ಯ
ಕನ್ನಡ ಪಾಠಗಳಿಗೆ ಪದ್ಯಗಳು ಬೇಕಾದ ಆ ಕಾಲದಲ್ಲಿ ಪ್ರಥಮವಾಗಿ ಪದ್ಯಪುಸ್ತಕಗಳನ್ನು ಸಂಪಾದಿಸಿದರು. ೧೯೧೨ರಲ್ಲಿ ಮೊದಲನೆಯ, ೧೯೧೯ರಲ್ಲಿ ಎರಡನೆಯ ಹಾಗು ೧೯೨೭ರಲ್ಲಿ ಮೂರನೆಯ ಪದ್ಯಪುಸ್ತಕಗಳು ಹೊರಬಂದು ಪಾಠ್ಯಕ್ರಮದಲ್ಲಿ ಅಳವಡಿಕೆಯಾದವು. ಸ್ವತಃ ಪಂಜೆಯವರೆ ಈ ಪುಸ್ತಕಗಳಿಗಾಗಿ ಕೆಲವು ಪದ್ಯಗಳನ್ನು ರಚಿಸಿದರು. ಮ್ಯಾಕ್ ಮಿಲನ್ ಪ್ರಕಟಣ ಸಂಸ್ಥೆಯ ಕೋರಿಕೆಯಂತೆ ಕನ್ನಡದ ಪಠ್ಯ ಪುಸ್ತಕಗಳನ್ನು ಬರೆದರು. ಶಿಕ್ಷಣದ ದೃಷ್ಟಿಯಿಂದ ಹೊಸ ಮಾರ್ಗವನ್ನು ತುಳಿದ ಪಾಠಪುಸ್ತಕಗಳಿವು.
ಪಂಜೆಯವರು ಬರೆದ ಮಕ್ಕಳ ಸಾಹಿತ್ಯವು ೨೨ ಶಿಶುಸಾಹಿತ್ಯವರ್ಗದ ಕಥೆಗಳನ್ನು, ೧೮ ಶಿಶುಗೀತೆಗಳನ್ನು, ೧೨ ಬಾಲಸಾಹಿತ್ಯ ಕಥೆಗಳನ್ನು, ೧೧ ಬಾಲಗೀತೆಗಳನ್ನು ಒಳಗೊಂಡಿದೆ. ಈ ಹೆಚ್ಚಿನವನ್ನು ಅವರು ’ಕವಿಶಿಷ್ಯ’ ಎಂಬ ಹೆಸರಲ್ಲಿ ಬರೆದರು. ತಾವೇ ಸಮರ್ಥ ಕವಿಗಳೆಂದು ಪ್ರಸಿದ್ಧರಾಗಿದ್ದರೂ, ತಾನು ಕವಿಯ ಶಿಷ್ಯನಷ್ಟೇ, ಎನ್ನುವ ವಿನಯ ಅವರದಾಗಿತ್ತು.
- ‘ ನಾಗರಹಾವೆ ಹಾವೊಳು ಹೂವೆ ‘-ಇವರ ಪ್ರಸಿದ್ಧ ಬಾಲಗೀತೆ, ಕವಿತೆಯು ಆಂಗ್ಲರನ್ನು ಪ್ರತಿಮಾರೂಪದಿಂದ ಉದ್ದೇಶಿಸಿ ಬರೆದ ಕವಿತೆಯಾಗಿದೆ.
- ‘ತೆಂಕಣ ಗಾಳಿಯಾಟ’ ಎಂಬ ಪದ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಲ ಕರಾವಳಿಯ ಮುಂಗಾರು ಮಳೆಯನ್ನು ತರುವ ಬಿರುಗಾಳಿಯ ಬಿರುಸನ್ನು ಕವನದ ಶಬ್ದಜಾಲ, ಅದರ ಗತಿ, ಧ್ವನಿ, ಎಲ್ಲವೂ ಮೇಳೈಸಿ ಸಾಕ್ಷಾತ್ಕರಿಸುವಂತೆ ಪ್ರತಿಧ್ವನಿಸುತ್ತವೆ.
- ‘ ಅಣ್ಣನ ವಿಲಾಪ’ ಹೊಸಗನ್ನಡದ ಮೊಟ್ಟಮೊದಲ ಶೋಕಗೀತೆಯಾಗಿದೆ. ಮಂಗೇಶರಾಯರ ಎರಡನೇ ಜೀವದಂತಿದ್ದ ತಮ್ಮನೊಬ್ಬನ ಅನಿರೀಕ್ಷಿತ ಸಾವಿನ ದುಃಖವನ್ನು ಬಹುಕಾಲ ಯಾರಲ್ಲೂ ತೋಡಿಕೊಳ್ಳದೆ ಎದೆಯಲ್ಲಿಟ್ಟುಕೊಂಡಿದ್ದು ನಂತರ ’ಎಲ್ಲಿ ಹೋದನು ಅಮ್ಮ’ ಎಂಬ ಸೊಲ್ಲಿನಿಂದ ಆರಂಭವಾಗುವ ಕವನವಿದು.
ಕನ್ನಡದಲ್ಲಿ ಮೊದಲ ಬಾರಿಗೆ ಕಥನಕವನಗಳನ್ನು ಬರೆದವರೂ ಪಂಜೆಯವರೆ.
- ಡೊಂಬರ ಚೆನ್ನ, ಕಡೆಕಂಜ, ರಂಗಸೆಟ್ಟಿ ಇವರ ಪ್ರಸಿದ್ಧ ಕವನಗಳು.
- ‘ ಹೊಲೆಯನ ಹಾಡು’ ದಲಿತರ ಬಗೆಗೆ ಕನ್ನಡದಲ್ಲಿ ಬಂದ ಮೊದಲ ಪದ್ಯ.
- ೧೯೦೦ ರಲ್ಲಿ ಪಂಜೆಯವರು ಬರೆದ ‘ ನನ್ನ ಚಿಕ್ಕ ತಾಯಿ’ ಎಂಬ ಕತೆ ಕನ್ನಡದ ಮೊದಲ ಕಿರುಗತೆಯೆಂದು ಗುರುತಿಸಲ್ಪಟ್ಟಿದೆ.
[ಬದಲಾಯಿಸಿ] ಕತೆ, ಕವನ, ಹರಟೆ, ಇತ್ಯಾದಿ
ಕಳೆದ ೨೦ನೇ ಶತಮಾನದ ಆದಿಯಲ್ಲಿ ಅವರ ಭಾವಂದಿರಾದ ಬೆನೆಗಲ್ ರಾಮರಾಯರ ಸಂಪಾದಕತ್ವದಲ್ಲಿ ಮಂಗಳೂರಿನಿಂದ ಪ್ರಕಟಗೊಳ್ಳುತ್ತಿದ್ದ ’ಸುವಾಸಿನಿ’ ಎಂಬೊಂದು ಮಾಸಿಕ ಮತ್ತು ಅಲ್ಲಿನ ಮಿಶನೆರಿಗಳು ಪ್ರಕಾಶಿಸುತ್ತಿದ್ದ ’ಸತ್ಯ ದೀಪಿಕೆ’ ಎಂಬ ವಾರಪತ್ರಿಕೆಯಲ್ಲಿ ಪಂಜೆಯವರು ಅನೇಕ ಹರಟೆ, ಕತೆ, ಕವನ, ಇತ್ಯಾದಿಗಳನ್ನು ಬರೆದು ಪ್ರಕಟಿಸಿದ್ದರು. ಇವುಗಳಲ್ಲಿ ಅವರು ’ರಾ.ಮ.ಪಂ.’ ಮತ್ತು ’ಹರಟೆಮಲ್ಲ’ ಎಂಬ ಗುಪ್ತನಾಮವನ್ನು ಬಳಸುತ್ತಿದ್ದರು. ನನ್ನ ಚಿಕ್ಕ ತಾಯಿ, ನನ್ನ ಚಿಕ್ಕ ತಂದೆ, ನನ್ನ ಹೆಂಡತಿ, ಭರತ ಶ್ರಮಣ, ಮೊದಲಾದ ಹಾಸ್ಯ, ವಿಡಂಬನೆಗಳನ್ನು ಎಷ್ಟು ನೈಪುಣ್ಯದಿಂದ ರಚಿಸುತ್ತಿದ್ದರೋ, ಅಷ್ಟೇ ಪ್ರಬುದ್ಧತೆಯಿಂದ ವೀರಮತಿ, ಪೃಥುಲಾ, ಶೈಲಿನಿ, ಮುಂತಾದ ಐತಿಹಾಸಿಕ ಕತೆಗಳನ್ನು ಬರೆದರು. ತುಳುನಾಡಿನ ಜಾನಪದ ಕತೆ ’ಕೋಟಿ ಚನ್ನಯ’ ಕತೆಯನ್ನೂ ಬರೆದರು.
ಕೊಡಗಿನವರು ಅವರನ್ನು ಉದಾರತೆಯಿಂದ ನಡೆಸಿಕೊಳ್ಳದಿದ್ದರೂ, ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ, ಕೊಡವರ ಕೆಚ್ಚೆದೆಯ ಶೌರ್ಯಕ್ಕೆ ಮನಸೋತ ಪಂಜೆಯವರು ರಚಿಸಿದ ’ಹುತ್ತರಿ ಹಾಡು’ ಎಂಬ ಪದ್ಯ, "ಗುಣಕೆ ಮತ್ಸರವುಂಟೇ?" ಎಂಬವರ ಧೋರಣೆಯನ್ನೆತ್ತಿ ಸಾರುತ್ತದೆ. "ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ..." ಎಂದು ಆರಂಭವಾಗಿ, "ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು?" ಎಂದು ಸಾಗಿ, "ಅವರೇ ಸೋಲ್ ಸಾವರಿಯರು! ...ಅವರೇ ಕೊಡಗಿನ ಹಿರಿಯರು!" ಎಂದು ಬಣ್ಣಿಸಿ, ’ಕವಿಶಿಷ್ಯ’ರು ತಮ್ಮ ದೊಡ್ಡತನವನ್ನು ಮೆರೆದರು!
ಇವಲ್ಲದೆ ಕಿರು ಕಾದಂಬರಿ, ಪತ್ತೇದಾರಿ ಕಾದಂಬರಿ, ಐತಿಹಾಸಿಕ ಕಥೆ, ಸಂಶೋದನೆ, ಹರಟೆ, ವೈಚಾರಿಕ ಲೇಖನಗಳನ್ನೂ ಸಹ ಪಂಜೆಯವರು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ.
[ಬದಲಾಯಿಸಿ] ಕನ್ನಡದ ಆಚಾರ್ಯ ಪುರುಷರು
ಸಾರಿಗೆ-ಸಂಪರ್ಕಗಳು ತೀರಾ ಕಡಿಮೆ ಸ್ತರಗಳಲ್ಲಿದ್ದ ಆ ಕಾಲದಲ್ಲಿ ಪಂಜೆಯವರು ದಕ್ಷಿಣ ಕನ್ನಡದವರಿಗೆ ಮಾತ್ರ ಪರಿಚಿತರಾಗಿದ್ದರು. ಉತ್ತರ ಕರ್ನಾಟಕದ ನಗರಗಳಲ್ಲಿ ನಾಡಹಬ್ಬದ ಕಾರ್ಯಕ್ರಮಗಳಿಗೆ ಹೊರಜಿಲ್ಲೆಯ ವಿದ್ವಾಂಸರನ್ನು ಕರೆಯಿಸಿಕೊಳ್ಳುವ ಪದ್ಧತಿ ಆರಂಭವಾಯಿತು. ಅದೇ ವೇಳೆಗೆ ಕನ್ನಡ ಸಾಹಿತ್ಯ ಪರಿಷತ್ತು ಕೂಡಾ ಹುಟ್ಟಿಕೊಂಡಿತು. ಸಾಹಿತಿಗಳ ಪರಸ್ಪರ ಪರಿಚಯ ಊರಿಂದೂರಿಗೆ ಹಬ್ಬಿತು. ಕಳೆದ ನಾಲ್ಕನೆಯ ದಶಕದಲ್ಲಿ ಕನ್ನಡದ ಆಚಾರ್ಯ ಪುರುಷರಲ್ಲಿ ಪಂಜೆಯವರೂ ಅಗ್ರಗಣ್ಯರಾದರು.
೧೯೩೪ರಲ್ಲಿ ರಾಯಚೂರಿನಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ಒಬ್ಬ ಸೂಕ್ಷ್ಮ ಸಂವೇದನೆಯ, ರಸಿಕ, ಕವಿ, ವಿಮರ್ಶಕ, ಸಾಹಿತಿಯ ಮನವೊಲಿಸಿ ಕನ್ನಡಿಗರು ಕೃತಕೃತ್ಯರಾದರು.
ಪಂಜೆ ಮಂಗೇಶರಾಯರು ೧೯೩೭ ಅಕ್ಟೋಬರ ೨೪ ರಂದು ತಮ್ಮ ೬೩ರ ಪ್ರಾಯದಲ್ಲಿ ನಿಧನರಾದರು.
[ಬದಲಾಯಿಸಿ] ಆಧಾರ
೧. ಪಂಜೆ ಮಂಗೇಶರಾಯರು - ಡಾ ಕೆ ಶಿವರಾಮ ಕಾರಂತರು
೨. ಜಗತ್ತಿಗೊಂದೇ ಕೊಡಗು - ಕೆ ಪಿ ಮುತ್ತಣ್ಣ