ಗೋವಿಂದ ಪೈ
| ಮಂಜೇಶ್ವರ ಗೋವಿಂದ ಪೈ | |
|---|---|
ಎಂ. ಗೋವಿಂದ ಪೈ |
|
| ಜನನ | ಮಾರ್ಚ್ ೨೩, ೧೮೮೩ ಮಂಜೇಶ್ವರ |
| ಮರಣ | ಸಪ್ಟೆಂಬರ್ ೬, ೧೯೬೩ |
| ವೃತ್ತಿ | ಸಾಹಿತಿ |
| ರಾಷ್ಟ್ರೀಯತೆ | ಭಾರತೀಯ |
| ವಿಷಯ | ಕನ್ನಡ ಸಾಹಿತ್ಯ |
ಎಂ. ಗೋವಿಂದ ಪೈ ( ಮಾರ್ಚ್ ೨೩, ೧೮೮೩ – ಸೆಪ್ಟೆಂಬರ್ ೬, ೧೯೬೩) ಕನ್ನಡದ ಪ್ರಪ್ರಥಮ ರಾಷ್ಟ್ರ ಕವಿಗಳಾಗಿ ಪ್ರಸಿದ್ಧರಾಗಿದ್ದಾರೆ
ಪರಿವಿಡಿ |
ಬಾಲ್ಯ ಮತ್ತು ವ್ಯಾಸಂಗ [ಬದಲಾಯಿಸಿ]
ರಾಷ್ಟ್ರಕವಿ ಗೋವಿಂದ ಪೈಯವರು ಮಂಗಳೂರಿನಲ್ಲಿ ೧೮೮೩ ಮಾರ್ಚ್ ೨೩ರಂದು ಜನಿಸಿದರು. ಇವರ ತಾಯಿಯ ಮನೆ ಮಂಜೇಶ್ವರ. ಇವರ ಆರಂಭದ ವ್ಯಾಸಂಗ ಮಂಗಳೂರಿನಲ್ಲಿ (ಗವರ್ನ್ ಮೆಂಟ್ ಕಾಲೇಜು) ನಡೆಯಿತು. ಹೆಚ್ಚಿನ ವ್ಯಾಸಂಗಕ್ಕಾಗಿ ಮದರಾಸಿಗೆ ( ಈಗಿನ ಚೆನ್ನೈಗೆ) ತೆರಳಿದರು. ಅದರೆ ತಂದೆಯ ಮರಣದಿಂದಾಗಿ ಪದವಿ ಪಡೆಯದೆ ಮರಳಬೇಕಾಯಿತು. ಆದರೂ ಕೂತಿದ್ದ ಪ್ರಥಮ ಭಾಗ ಇಂಗ್ಲಿಷಿನಲ್ಲಿ ವಿಶ್ವವಿದ್ಯಾನಿಲಯದ ಸುವರ್ಣ ಪದಕ ಅವರಿಗೆ ದೊರೆಯಿತು. ಆದರೆ ಅವರ ಸಾಹಿತ್ಯದ ಅಧ್ಯಯನ ಜೀವನ ಪರ್ಯಂತ ನಿರಂತರವಾಗಿ ಮುಂದುವರೆಯಿತು.
ಸಾಹಿತ್ಯ ಕೃಷಿ [ಬದಲಾಯಿಸಿ]
ಗೋವಿಂದ ಪೈಯವರು ನಂತರ ಕೇರಳ ರಾಜ್ಯದಲ್ಲಿ ಸೇರ್ಪಡೆಯಾದ ಮಂಜೇಶ್ವರದಲ್ಲಿ ನೆಲಸಿದ್ದರಿಂದ ಮಂಜೇಶ್ವರ ಗೋವಿಂದ ಪೈ ಎಂದೇ ಹೆಸರಾದರು. ಗೋವಿಂದ ಪೈಗಳು 'ಗಿಳಿವಿಂಡು', 'ನಂದಾದೀಪ' ಎಂಬ ಕಾವ್ಯ ಸಂಕಲನಗಳನ್ನು ಹೊರ ತಂದಿದ್ದಾರೆ. ‘ವೈಶಾಖಿ’ ಹಾಗು ‘ಗೊಲ್ಗೊಥಾ’ ಎನ್ನುವ ಎರಡು ಖಂಡಕಾವ್ಯಗಳನ್ನು ಬರೆದಿದ್ದಾರೆ ‘ಹೆಬ್ಬೆರೆಳು’ ಎನ್ನುವ ಪದ್ಯಗಳನ್ನು ಒಳಗೊಂಡ ಏಕಾಂಕ ನಾಟಕವನ್ನೂ, ‘ಚಿತ್ರಭಾನು’ ಎನ್ನುವ ಗದ್ಯನಾಟಕವನ್ನೂ ಬರೆದಿದ್ದಾರೆ. 'ತಾಯಿ‘, 'ಕಾಯಾಯ್ ಕೊಮಾಜಿ' ಎಂಬ ಸಾಮಾಜಿಕ ನಾಟಕಗಳನ್ನು ಬರೆದದ್ದಲ್ಲದೆ, ಜಪಾನಿನ ನೋ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಅವರ ‘ಕನ್ನಡದ ಮೊರೆ’ ಎಂಬ ಸಂಕಲನದಲ್ಲಿ ಅವರು ಬರೆದ ಹಲವು ವ್ಯಕ್ತಿ ಚಿತ್ರಗಳು, ಆತ್ಮ ಕಥನಗಳು ಮತ್ತು ಭಾಷಣಗಳು ಅಡಕವಾಗಿವೆ. ಪ್ರಬಂಧರೂಪದಲ್ಲಿ ಅವರ 'ಆತ್ಮಕಥನ' ಮೂಡಿಬಂದಿದೆ. ಲೇಖಕನ ಕಷ್ಟನಿಷ್ಟುರಗಳನ್ನು ವರ್ಣಿಸುವ ‘ಬರಹಗಾರನ ಹಣೆಬರಹ’, ತಮ್ಮ ಗುರುಗಳಾದ ಪಂಜೆಯವರಲ್ಲಿದ್ದ ಪೂಜ್ಯಭಾವದ ಪ್ರತೀಕದಂತಿರುವ 'ಕನಸಾದ ನನಸು', ಒಡನಾಡಿಗಳಾದ ಎಂ.ಎನ್. ಕಾಮತ್, ಕಿಲ್ಲೆ ಅವರ ಸ್ನೇಹದ ಬಗ್ಗೆ ಬರೆದಿರುವ ಅವರ ಬರಹಗಳು, ಎಂ.ಆರ. ಶ್ರೀನಿವಾಸ ಮೂರ್ತಿಗಳಿಗೆ ನೆನಪು, ಬೇಂದ್ರೆಯವರಿಗೆ ಐವತ್ತು ದಾಟಿದ್ದಕ್ಕೆ ಸಲ್ಲಿಸಿದ ಹರಕೆ ಇವೆಲ್ಲಾ ಅವರ ಇನ್ನಿತರ ಪ್ರಬಂಧಗಳಾಗಿವೆ.
ಸಂಶೋಧನೆ [ಬದಲಾಯಿಸಿ]
ಆದರೆ ಸಂಶೋಧನೆ ಗೋವಿಂದ ಪೈಗಳ ಬರೆವಣಿಗೆಯ ಅತಿ ಮುಖ್ಯ ಭಾಗ. ತುಳುನಾಡಿನ ಇತಿಹಾಸ, ಗೌಡ ಸಾರಸ್ವತರ ಮೂಲ, ಬಸವೇಶ್ವರ ವಂಶಾವಳಿ, ಹಾಗು ಕರ್ನಾಟಕದ ಪ್ರಾಚೀನ ರಾಜಮನೆತನಗಳು, ಭಾರತೀಯ ಇತಿಹಾಸ, ಜೈನ, ಬೌದ್ಧ ಹಾಗು ವೀರಶೈವ ಧರ್ಮಗಳ ಬಗೆಗೆ ಮೌಲಿಕ ಸಂಶೋಧನೆ ಮಾಡಿ, ಅನೇಕ ಲೇಖನಗಳನ್ನು ಬರೆದಿದ್ದಾರೆ. ಪಾರ್ಶ್ವನಾಥ ತೀರ್ಥಂಕರ ಚರಿತೆ, ಬಾಹುಬಲಿ ಗೊಮ್ಮಟೇಶ್ವರ ಚರಿತೆ, ಭಗವಾನ್ ಬುದ್ಧ ಮುಂತಾದ ಕೆಲವು ಲೇಖನಗಳನ್ನು ಇಲ್ಲಿ ಹೆಸರಿಸಬಹುದು.
ಯೇಸುವಿನ ಕಡೆಯ ದಿನವನ್ನು ಕುರಿತು ‘ಗೊಲ್ಗೊಥಾ’ ಮತ್ತು ಬುದ್ಧನ ಕಡೆಯ ದಿನವನ್ನು ಕುರಿತ ‘ವೈಶಾಖಿ’ ಎಂಬ ನೀಳ್ಗವಿತೆಗಳಲ್ಲಿ ಅವರ ಸಂಶೋಧನೆಯ ಅಗಾಧತೆಯನ್ನು ಕಾಣಬಹುದಾಗಿದೆ. ‘ಗೊಲ್ಗೊಥಾ’ದ ವಸ್ತುವನ್ನು ಸಂಗ್ರಹಿಸುವಲ್ಲಿ ಮೂಲ ಆಕರಗಳನ್ನು ಎಷ್ಟು ನಿಷ್ಠೆಯಿಂದ ವ್ಯಾಸಂಗ ಮಾಡಿರುವರೆನ್ನುವುದನ್ನು, ‘’ವೈಶಾಖಿ’ಗೆ ಸಂಬಂಧಿಸಿದ ಪಾಳಿಭಾಷೆಯ ಗ್ರಂಥಗಳನ್ನೇ ಅವಲಂಬಿಸಿರುವರೆಂಬುದನ್ನೂ ಅವರು ಕೊಟ್ಟಿರುವ ಟಿಪ್ಪಣಿಗಳಿಂದ ತಿಳಿಯಬಹುದು.
ಗೋವಿಂದ ಪೈ ಸಂಶೋಧನ ಸಂಪುಟ 1995ರ ವರ್ಷದಲ್ಲಿ ಪ್ರಕಟವಾಗಿದೆ.
ಗೋವಿಂದ ಪೈಗಳ ಪತ್ರಗಳನ್ನು ಜಿ.ಪಿ.ರಾಜರತ್ನಂರವರು ‘ ಮಂಜೇಶ್ವರ ಗೋವಿಂದ ಪೈಗಳ ಪತ್ರಗಳು’ ಎನ್ನುವ ಪುಸ್ತಕರೂಪದಲ್ಲಿ ಹೊರತಂದಿದ್ದಾರೆ.
ನಾಡ ಭಕ್ತಿಗೀತೆಗಳು [ಬದಲಾಯಿಸಿ]
ಗೋವಿಂದ ಪೈ ಅವರ ದೇಶಭಕ್ತಿ ತಮ್ಮ ತವರುನಾಡಾದ ತುಳುನಾಡಿನಿಂದ ಮೊದಲ್ಗೊಂಡು, ಕನ್ನಡನಾಡಿನ ಸುತ್ತಲೂ ಬಳ್ಳಿಯಂತೆ ಹಬ್ಬಿ, ಕಡೆಗೆ ಭಾರತಾಂಬೆಯ ಅಡಿದಾವರೆಗಳಲ್ಲಿ ಪುಷ್ಪವಾಗಿ ಸಮರ್ಪಣೆಗೊಂಡಿದೆ. “ಜಯ ಜಯ ತುಳುವ ತಾಯೆ ಮಣಿವೆ, ತಂದೆ ತಾಯಂದಿರ ತಾಯೆ, ಭುವನದಿ ತ್ರಿದಿವಚ್ಛಾಯೆ” ಎಂಬುದು ಅವರ ತುಳುನಾಡಿನ ಕುರಿತ ಮೊದಲಸಾಲುಗಳು. “ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ, ಹರಸು ತಾಯೆ, ಸುತರ ಕಾಯೆ. ನಮ್ಮ ಜನ್ಮದಾತೆಯೆ” ಎಂಬ ಅವರ ಹಾಡು ನಿರಂತರವಾಗಿ ಕನ್ನಡಿಗರ ತನುಮನಗಳಲ್ಲಿ ಮಾರ್ದನಿಸುತ್ತಿದೆ. "ಭಾರತವನಳಿಯುತ್ತ ನನಗೆ ಜೀವನವೆತ್ತ? ಭಾರತವೇ ನನ್ನುಸಿರು, ನನ್ನೊಗೆದ ‘ಬಸಿರು’ ಎಂದು ಭಕ್ತಿಯಿಂದ ನಮಿಸುತ್ತಾ ‘ಭಾರತ ಯಶೋಗಾನವೆನ್ನೆದೆಯ ತಾನ’ “ಭಾರತಾಂಬೆಯ ಭಕ್ತಿ ನನಗಾತ್ಮಶಕ್ತಿ” ಎಂದು ತಾಯಿ ಭಾರತಾಂಬೆಗೆ ಧನ್ಯತೆಯನ್ನು ವ್ಯಕ್ತಪಡಿಸುತ್ತಾರೆ.
ಹಲವುಭಾಷೆಗಳ ಪಾಂಡಿತ್ಯ [ಬದಲಾಯಿಸಿ]
ಗೋವಿಂದ ಪೈಗಳು ಕೊಂಕಣಿ, ತುಳು, ಕನ್ನಡ, ಸಂಸ್ಕೃತ, ಮಲಯಾಳಂ, ತೆಲುಗು, ತಮಿಳು, ಮರಾಠಿ, ಒರಿಯಾ, ಬಂಗಾಳಿ, ಪಾಲಿ, ಅರ್ಧಮಾಗಧಿ, ಉರ್ದು, ಪರ್ಷಿಯನ್, ಗ್ರೀಕ್, ಲ್ಯಾಟಿನ್, ಜಪಾನಿ, ಇತಾಲಿಯನ್ , ಸ್ಪಾ ನಿಷ್ ,ಪ್ರಾಕೃತ, ಹಿಂದೀ ಹಾಗೂ ಗುಜರಾತಿ, ಪಾಂಡಿತ್ಯವನ್ನು ಪಡೆದಿದ್ದರು.
ಪುಸ್ತಕಗಳು [ಬದಲಾಯಿಸಿ]
- ಗೊಲ್ಗೋಥಾ ಅಥವಾ ಯೇಸುವಿನ ಕಡೆಯ ದಿನ
- ವೈಶಾಖಿ ಅಥವಾ ಬುದ್ಧನ ಕೊನೆಯ ದಿನ (ಖಂಡ ಕಾವ್ಯ)
- ಹೆಬ್ಬೆರಳು
- Indiana
- ವಿಟಂಕ
- ಇಂಗಡಲು (ಆಯ್ದ ಕವನಗಳು)
- ಶ್ರೀಕೃಷ್ಣ ಚರಿತ್ರೆ
- ಕನ್ನಡದ ಮೊರೆ (ಭಾಷಣಗಳು ಮತ್ತು ಲೇಖನಗಳು)
- ತಾಯಿ ಮತ್ತು ನೋ ನಾಟಕಗಳು
- ಕುಮಸಾಕಾ
- ಕಾಯೊಮ್ ಕೋಮಾಚಿ
- ಸೊತೋಬಾ ಕೊಮಾಚಿ
- ಹಾಗೊರೋವೊ
- ತ್ಸುನೆಮಾಸ
- ಸೊಮಾಗೆಮಂಜಿ
- ಚೊರಿಯೊ
- ಶೋಜೊ
- ಗಿಳಿವಿಂಡು (ಕವನ ಸಂಕಲನ)
- ಗೀತಾಂಜಲಿ (ರವೀಂದ್ರನಾಥ ಠಾಗೋರರ ಗೀತಾಂಜಲಿಯ ಕನ್ನಡ ಅನುವಾದ)
- ಗೋವಿಂದ ಪೈ ಅವರ ಲೇಖನಗಳು ಮತ್ತು ಪ್ರಬಂಧಗಳು
- ಗೋವಿಂದ ಪೈ ಅವರ ಕೆಲವು ಪತ್ರಗಳು
- ಚಿತ್ರಭಾನು ಅಥವಾ ೧೯೪೨
- ಗೋವಿಂದ ಪೈ ಸಂಶೋಧನಾ ಸಂಪುಟ
- ನಂದಾದೀಪ (ಕವನ ಸಂಕಲನ)
- ಹೃದಯರಂಗ (ಕವನ ಸಂಕಲನ)
ಕನ್ನಡದ ಪ್ರಥಮ ರಾಷ್ಟ್ರಕವಿ [ಬದಲಾಯಿಸಿ]
೧೯೪೯ರಲ್ಲಿ ಮದರಾಸು ಸರಕಾರವು (೧೯೫೬ರಲ್ಲಿ ಕರ್ನಾಟಕ ಏಕೀಕರಣಕ್ಕಿಂತ ಮೊದಲು ದಕ್ಷಿಣ ಕನ್ನಡ ಜಿಲ್ಲೆಯು ಆಗಿನ ಮದರಾಸು ರಾಜ್ಯದಲ್ಲಿ ಅಂದರೆ ಈಗಿನ ತಮಿಳುನಾಡಿನಲ್ಲಿ ಇತ್ತು) ಗೋವಿಂದ ಪೈಗಳಿಗೆ ರಾಷ್ಟ್ರಕವಿ ಎಂದು ಸನ್ಮಾನ ನೀಡಿ ಗೌರವಿಸಿತು.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. [ಬದಲಾಯಿಸಿ]
೧೯೫೦ರಲ್ಲಿ ಮುಂಬಯಿಯಲ್ಲಿ ಜರುಗಿದ ೩೪ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗೋವಿಂದ ಪೈಗಳು ಅಧ್ಯಕ್ಷರಾಗಿದ್ದರು.
ವಿದಾಯ [ಬದಲಾಯಿಸಿ]
೧೯೬೩ರ ಸೆಪ್ಟೆಂಬರ್ ೦೬ ರಂದು ಗೋವಿಂದ ಪೈಯವರು ನಿಧನ ಹೊಂದಿದರು.
ಇದನ್ನೂ ನೋಡಿ - ಗೋವಿಂದ ಪೈ ಸಂಶೋಧನ ಕೇಂದ್ರ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಯಕ್ಷಗಾನ ಕೇಂದ್ರ, ಕನಕ ಅಧ್ಯಯನ ಸಂಶೋಧನ ಪೀಠ