ಆದಿ ಶಂಕರರು ಮತ್ತು ಅದ್ವೈತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
   ಆದಿ ಶಂಕರರ ಜೀವನ ಮತ್ತು ಅದ್ವೈತ

ಪೀಠಿಕೆ


ಆದಿ ಶಂಕರರ ಜೀವನದ ಇತಿಹಾಸವನ್ನು ನಿಖರವಾಗಿ ತಿಳಿಯುವುದು ಕಷ್ಟ. ಮಾಧವೀಯ ಶಂಕರ ವಿಜಯವೇ ಪ್ರಾಚೀನವಾದುದು. [ಮಾಧವ ಕವಿ ವಿರಚಿತ-೧೪ನೇ ಶ.:

ಚಿದ್ವಿಲಾಸೀಯ ಶಂಕರ ವಿಜಯಮ್-ಕವಿ ಚಿದ್ವಿಲಾಸ೧೫-೧೭ನೇಶ.;

ಕೇರಳೀಯ ಶಂಕರಶಂಕರ ವಿಜಯಮ್-೧೭ನೇಶ.]

ಬಾಲ್ಯ :-

ಶ್ರೀ ಶಂಕರರ ತಂದೆ ಕಾಯ್‌ಪಿಳ್ಳೆ ಶಿವಗುರು ನಂಬೂದರಿ; ತಾಯಿ ಆರ್ಯಾಂಬಾ. ಅವರು ಬಹಳ ವರ್ಷ ಮಕ್ಕಳಾಗದಿದ್ದುದರಿಂದ ತ್ರಿಶೂರಿನ ವಡಕ್ಕನಾಥನ ಪ್ರಾರ್ಥನೆ ಮಾಡಿಕೊಂಡರು. ಅದರ ಫಲವಾಗಿ ಶ್ರೀ ಶಂಕರರು ಕೇರಳದ ಕಾಲಡಿ ಎಂಬ ಊರಿನಲ್ಲಿ ಅಥವಾ ಅದರ ಹತ್ತಿರ ಕ್ರಿ. ಶ. ೭೮೮ ರಲ್ಲಿ ಶುಭ ನಕ್ಷತ್ರದಲ್ಲಿ ಜನಿಸಿದರು. (ಇತ್ತೀಚೆಗೆ ಕಾಂಬೋಡಿಯಾದಲ್ಲಿ ಶ್ರೀ ಶಂಕರರ ಶಿಷ್ಯ ಶಿವಸೋಮ ಇವರ ಕ್ರಿ.ಶ.820 ರ ಶಾಸನವೊಂದು ಪ್ರಾಪ್ತವಾಗಿದೆ. ಅದರ ಪ್ರಕಾರ ಶ್ರೀ ಶಂಕರರು ಕ್ರಿ.ಶ.820 ರಲ್ಲಿ ಕಾಲವಾದರೆಂಬ ಅಂಶ ತಿಳಿಯುತ್ತದೆ. ಅವರು ಬದುಕಿದ್ದು ಕೇವಲ 32 ವರ್ಷ ಅದ್ದರಿಂದ ಜನನ ಕ್ರಿ.ಶ. 788 ರಲ್ಲಿ ಎನ್ನುವುದು ಖಚಿತ.-ಭಾರತದ ಇತಿಹಾಸ ಫಾಲಾಕ್ಷ ಭಾಗ-1-೧೯೮೪/ಪುಟ ೨೬೬ ;ಕಾಲಡಿಯ ಜನ್ಮ ಸ್ಥಳ,- ಶ್ರೀ ಶಂಕರರ ಕೀರ್ತಿ ಸ್ಥಂಭ, ಕಾಲಡಿ)

  • ತಂದೆ ಶಿವಗುರು, ಶಂಕರರು ಚಿಕ್ಕವರಿದ್ದಾಗಲೇ ತೀರಿಕೊಂಡರು. ಶಂಕರರು ಐದು ವರ್ಷದವರಿದ್ದಾಗಲೇ ಅವರ ಉಪನಯನವನ್ನು ತಾಯಿ ಆರ‍್ಯಾಂಬಾ ನೆರವೇರಿಸಿದರು. ಅಸಾಧಾರಣ ಮೇಧಾವಿಯಾದ ಶಂಕರರು ಎಂಟು ವರ್ಷಕ್ಕೇ ನಾಲ್ಕು ವೇದಗಳನ್ನೂ ಕಲಿತು ಕರಗತ ಮಾಡಿಕೊಂಡರು. ಬೇರೆ ಬೇರೆ ಗುರುಗಳಿಂದ ಷಡ್ದರ್ಶನಗಳನ್ನೂ ಪುರಾಣಗಳನ್ನೂ , ಸಕಲ ಶಾಸ್ತ್ರಗಳನ್ನೂ ಹನ್ನೆರಡನೇ ವರ್ಷಕ್ಕೆಲ್ಲಾ ಕಲಿತು ಸರ್ವ ಶಾಸ್ತ್ರ ವಿಶಾರದರಾದರು.

ಸಂನ್ಯಾಸ :-


ಅವರಿಗೆ ಚಿಕ್ಕಂದಿನಲ್ಲೇ ಸಂನ್ಯಾಸದ ಕಡೆ ಒಲವಿದ್ದರೂ ತಾಯಿ ಒಪ್ಪಿರಲಿಲ್ಲ. ಈಬಗ್ಗೆ ಒಂದು ಕಥೆ ಇದೆ. ಅವರು ಹೊಳೆಯಲ್ಲಿ ಸ್ನಾನಕ್ಕೆ ಇಳಿದಾಗ ಮೊಸಳೆ ಅವರ ಕಾಲನ್ನು ಹಿಡಿಯಿತೆಂದೂ, ಆಗ ಕೊನೆಯ ಹೊತ್ತಿಗೆ ಸಂನ್ಯಾಸ ಸ್ವೀಕರಿಸಲು ಅಲ್ಲಿಯೇ ಇದ್ದ ತಾಯಿ ಒಪ್ಪಲು ಅವರು ಅಲ್ಲಿಯೇ ಸ್ವಯಂ ಸಂನ್ಯಾಸ ಸ್ವೀಕರಿಸಲು ಮೊಸಳೆ ಅವರ ಕಾಲು ಬಿಟ್ಟಿತು. ನಂತರ ಅವರು ಗುರುವನ್ನು ಅರಸತ್ತಾ ಉತ್ತರದ ಕಡೆ ಹೊರಟರು.

ಗುರು ದರ್ಶನ :-


ಸಂನ್ಯಾಸ ಸ್ವೀಕರಿಸಿದ ಶಂಕರರು ತಮಗೆ ತಕ್ಕ ಗುರುಗಳನ್ನು ಅರಸುತ್ತಾ ಉತ್ತರದ ನರ್ಮದಾ ನದಿಯ ತಟದಲ್ಲಿದ್ದ ಗೋವಿಂದ ಭಗವತ್ಪಾದರನ್ನು ಕಂಡರು. ಅವರು ಇವರ ಪರಿಚಯ ಕೇಳಲು, ಅದ್ವೈತ ತತ್ವಾರ್ಥವಿರುವ ಶ್ಲೋಕದಲ್ಲಿ ಶಂಕರರು ಉತ್ತರಿಸಿ ನಮಸ್ಕರಿಸಿದರು. ಗೋವಿಂದ ಭಗವತ್ಪಾದರು ಮೆಚ್ಚಿ ಒಪ್ಪಲು, ಅವರಲ್ಲಿ ಶಿಷ್ಯತ್ವವನ್ನು ಸ್ವೀಕರಿಸಿದರು. ಗೋವಿಂದ ಭಗವತ್ಪಾದರು ಗೌಡಪಾದ ಮುನಿಗಳ ಶಿಷ್ಯರು. ಗೌಡ ಪಾದ ಮುನಿಗಳು ಮಾಂಡೂಕ್ಯ ಉಪನಿತ್ತಿಗೆ ಭಾಷ್ಯ ಬರೆದು, ಅದಕ್ಕೆ ಅದ್ವೈತ ಸಿದ್ಧಾಂತದ ಕಾರಿಕೆಯನ್ನು ೫೨ ಶ್ಲೋಕಗಳಲ್ಲಿ ಬರೆದಿದ್ದಾರೆ. ಅದನ್ನೇ ವಿಸ್ತರಿಸಿ ಬ್ರಹ್ಮ ಸೂತ್ರಕ್ಕೆ ಭಾಷ್ಯವನ್ನು ಬರೆಯಲು ಗೋವಿಂದ ಭಗವತ್ಪಾದರು ತಮ್ಮಲ್ಲಿ ಅಭ್ಯಾಸ ಮಾಡಿ ಮುಗಿದ ನಂತರ ಶಂಕರರಿಗೆ ಹೇಳಿದರು. ಶಂಕರರು ಒಪ್ಪಿ ಕಾಶಿಗೆ ಹೊರಟರು.ಅದ್ವೈತ ಸಿದ್ದಾಂತದ ಪ್ರತಿಪಾದನೆ ಇವರ ಮುಖ್ಯ ಉದ್ದೇಶವಾಗಿತ್ತು.

ಶಂಕರರ ಸಂಚಾರ ಮತ್ತು ದಿಗ್ವಿಜಯ :


ಶಂಕರರು ಗುರುಗಳ ಆಶೀರ್ವಾದ ಪಡೆದು ಕಾಶಿಗೆ ಹೊರಟರು. ಅಲ್ಲಿ ಸನಂದನನೆಂಬ ಚೋಳ ದೇಶದ [ತಮಿಳು] ಯುವಕ ಸಂನ್ಯಾಸಿ ಇವರ ಶ್ಯಿಷ್ಯನಾದನು; ಪದ್ಮಪಾದ. ಅವರು ಕಾಶಿಯಲ್ಲಿ ವಿಶ್ವೇಶ್ವರ ದೇವಾಲಯಕ್ಕೆ ಹೋಗುವಾಗ ನಡೆದ ಒಂದು ಕಥೆ ಇದೆ. ಒಬ್ಬ ಅಸ್ಪೃಶ್ಯ [ಚಾಂಡಾಲ] ವ್ಯಕ್ತಿಯು ದಾರಿಯಲ್ಲಿ ಎದುರಿಗೆ ಬರಲು ಅವನಿಗೆ ಪಕ್ಕಕ್ಕೆ ಸರಿಯಲು ಹೇಳಿದಾಗ ಅವನು ನೀನು ಹೇಳಿದ್ದು ಯಾರಿಗೆ ? ದೇಹಕ್ಕೋ? ಆತ್ಮಕ್ಕೋ? ಎಂದು ಕೇಳಲು. ಅವನೇ ತನ್ನನ್ನು ಪರೀಕ್ಷಿಸಲು ಬಂದ ಪರಶಿವನೆಂದು ಅರಿತು ಅವನಿಗೆ ಕೈ ಮುಗಿದು ಐದು ಶ್ಲೋಕಗಳಿಂದ ಸ್ತುತಿಸಿದರು. ಅದು ಮನೀಷಿ ಪಂಚಕವೆಂದು ಪ್ರಸಿದ್ಧಿಯಾಗಿದೆ. ಅಲ್ಲಿಂದ ಬದರಿಗೆ ಹೋಗಿ ಅಲ್ಲಿ ತಮ್ಮ ಪ್ರಸಿದ್ಧವಾದ ಭಾಷ್ಯಗಳನ್ನು ಬರೆದರು. ಅವು ಪ್ರಕರಣ ಗ್ರಂಥ ಗಳೆಂದು [ತತ್ವಾರ್ಥ] ಪ್ರಸಿದ್ಧವಾಗಿವೆ. ಬ್ರಹ್ಮ ಸೂತ್ರ, ಭಗವದ್ಗೀತಾ, ಮತ್ತು ದಶ ಉಪನಿಷತ್‌ಗಳ ಭಾಷ್ಯ ಗಳೇ ಪ್ರಸ್ಥಾನತ್ರಯ ಭಾಷ್ಯಗಳು; ಪ್ರಕರಣ ಗ್ರಂಥಗಳು.. ಈಶ, ಕೇನ ಕಠ; ಪ್ರಶ್ನ, ಮುಂಡಕ, ಮಾಂಡೂಕ್ಯ; ಐತರೇಯ, ತೈತ್ತರೀಯ; ಬೃಹದಾರಣ್ಯಕ, ಛಾಂದೋಗ್ಯ, ಇವು ಆ ದಶ ಉಪನಿಷತ್ತುಗಳು. ನಂತರ ಅವರು ಪ್ರಯಾಗದಲ್ಲಿ ಉಮಿಹೊಟ್ಟಿನ ಬೆಂಕಿಯಲ್ಲಿ ಕುಳಿತಿದ್ದ ಪ್ರಸಿದ್ಧ ಮೀಮಾಂಸಕ ಪಂಡಿತರಾದ ಕುಮಾರಿಲ ಭಟ್ಟರನ್ನು ಬೆಟ್ಟಿಯಾದರು. ಅವರು ಬೌದ್ಧ ಗರುಗಳಿಗೆ ಸುಳ್ಳು ಹೇಳಿ ಶಿಷ್ಯರಾಗಿ ಬೌದ್ಧಧರ್ಮದ ರಹಸ್ಯವನ್ನು ಕಲಿತಿದ್ದರು. ಅದರ ಪ್ರಾಯಶ್ಚಿತ್ತವಾಗಿ ಅಗ್ನಿ ಪ್ರವೇಶ ಮಾಡಿದ್ದರು. ಅವರು ತಮ್ಮ ಶಿಷ್ಯ ಮಂಡನ ಮಿಶ್ರರನ್ನು ಕಂಡು ವಾದ ಮಾಡಲು ಹೇಳಿದರು.

ಮೀಮಾಂಸಕ ಮಂಡನ ಮಿಶ್ರರ ಭೇಟಿ :-


ವೇದಗಳ ಅಂತಿಮ ತಾತ್ಪರ್ಯ ಅದ್ವೈತ ಸಿದ್ಧಾಂತವೆಂದು ಸಾಧಿಸಲು ಅಂದಿನಕಾಲದ ಅತ್ಯಂತ ಪ್ರಸಿದ್ಧ ಮೀಮಾಂಸ ಪಂಡಿತರಾದ, ಕರ್ಮವೇ ವೇದ ತಾತ್ಪರ್ಯವೆಂದು ಹೇಳುವ ಮಂಡನಮಿಶ್ರರನ್ನು ಕಾಣಲು ಮಾಹಿಷ್ಮತಿ ನಗರಕ್ಕೆ [ಇಂದಿನ ಬಿಹಾರದಲ್ಲಿರುವ ಮಹಿಷಿ ಬಂಗಾವನ್ ಸಹರ‍್ಸ] ಹೋದರು. ಅವರೊಡನೆ ಹದಿನೈದು ದಿನಗಳ ಕಾಲ ಸತತ ವಾದ ಮಾಡಿದರು. ಮಿಶ್ರರ ಪತ್ನಿ ಉಭಯ ಭಾರತಿಯೇ ನಿರ್ಣಾಯಕಿ. ಅವಳು ತನ್ನ ಪತಿ ಮಿಶ್ರರು ವಾದದಲ್ಲಿ ಸೋತಿರವುದಾಗಿ ತೀರ್ಪು ಕೊಟ್ಟಳು. ಆದರೆ ತನ್ನನ್ನೂ ಗೆಲ್ಲಬೇಕೆಂದು ಪಂಥವನ್ನು ಮಾಡಿದಳು. ಅವಳು ಕಾಮಸೂತ್ರದ ಮೇಲಿನ ಸಂಸಾರಿಕ ವಿಚಾರದಲ್ಲಿ ಪ್ರಶ್ನೆ ಗಳನ್ನು ಕೇಳಿದಳು. ಬಾಲ ಸಂನ್ಯಾಸಿಗಳಾದ ಶಂಕರರಿಗೆ ಉತ್ತರ ಗೊತ್ತಿರಲಿಲ್ಲ. ಆವರು ಆರು ತಿಂಗಳ ಸಮಯ ಕೇಳಿದರು. ಅದರಂತೆ ಅವರು ಅಕಾಲ-ಮರಣ ಹೊಂದಿದ ವಿಕ್ರಮ ರಾಜನ ಶರೀರದಲ್ಲಿ ಪರಕಾಯ ಪ್ರವೇಶ ಮಾಡಿ, ಅವನ ಪತ್ನಿಯಿಂದ ಭಾರತಿ ಕೇಳಿದ ಪ್ರಶ್ನೆ ಗಳಿಗೆ ಉತ್ತರ ತಿಳಿದು, ತಮ್ಮ ವಾದ ಬರೆದರು. ಪುನಹ ತಮ್ಮ ದೇಹ ಸೇರಿ ಆ ಗ್ರಂಥವನ್ನು ಭಾರತಿ ದೇವಿಗೆ ಕೊಟ್ಟು ಉತ್ತರವನ್ನು ಕಂಡುಕೊಳ್ಳಲು ಹೇಳಿದರು . ಅವಳು ಆ ಉತ್ತರವನ್ನು ಒಪ್ಪಲು, ಮೊದಲೇ ಮಾಡಿಕೊಂಡ ನಿಯಮದಂತೆ ಮಂಡನ ಮಿಶ್ರರು ಸುರೇಶ್ವರಾಚಾರ್ಯರೆಂಬ ಹೆಸರಿನಲ್ಲಿ ಸಂನ್ಯಾಸಿಗಳಾಗಿ ಶಂಕರರ ಶಿಷ್ಯರಾದರು. ಉಭಯಭಾರತಿಯೂ ಅವರನ್ನು ಹಿಂಬಾಲಿಸಿದಳು. ಕೊನೆಗೆ ಶೃಂಗೇರಿಯ ಶಾರದಾ ಪೀಠದಲ್ಲಿ ನೆಲಸಿದಳೆಂದು ಪ್ರತೀತಿ ಇದೆ. ಮಂಡನಮಿಶ್ರರೇ ಮುಂದೆ ದಕ್ಷಿಣಾಮ್ನಾಯ ಶಂಕರ ಮಠದ ಶೃಂಗೇರಿಯ ಪೀಠಾಧಿಪತಿಗಳಾಗಿ ಶಂಕರರ ಗ್ರಂಥಗಳಿಗೆ ವಾರ್ತಿಕಗಳನ್ನು [ಟೀಕೆ] ಬರೆದು ವಾರ್ತಿಕಕಾರರೆನಿಸಿದರು.

  • ಅವರು(ಶಂಕರರು) ಕಾಶಿ ಯಿಂದ ಮಹಾರಾಷ್ಟ್ರ ಕ್ಕೆ ಶಿಷ್ಯರೊಡನೆ ಪ್ರಯಾಣ ಮಾಡಿ, ಅಲ್ಲಿಂದ ಶ್ರೀಶೈಲಕ್ಕೆ ಹೋದರು.ಅಲ್ಲಿ ಅವರು ಶಿವಾನಂದಲಹರಿಯನ್ನು ರಚಿಸಿದರು. ಶ್ರೀಶೈಲದಲ್ಲಿ ಅಥವಾ ಶಂಕರರು ಶ್ರೀಶೈಲದಿಂದ ಗೋಕರ್ಣಕ್ಕೆ ಬರುವಾಗ ಒಬ್ಬ ಕಾಪಾಲಿಕನು ಅವರ ಒಪ್ಪಿಗೆಯನ್ನು ಹೇಗೋ ಪಡೆದು ಅವರನ್ನೇ ಬಲಿಕೊಡಬೇಕೆಂದು ಪ್ರಯತ್ನಿಸಿದನು. ಇದನ್ನು ತಿಳಿದ ಶಂಕರರ ಶಿಷ್ಯ ಪದ್ಮಪಾದರು ನರಸಿಂಹನನ್ನು ಪ್ರಾರ್ಥಿಸಲು, ಉಗ್ರ ನರಸಿಂಹನು ಪ್ರತ್ಯಕ್ಷನಾಗಿ ಶಂಕರರನ್ನು ಕಾಪಾಡಿದನು. ಆಗ ಶ್ರೀ ಶಂಕರರು ಲಕ್ಷ್ಮೀ ಮರಸಿಂಹ ಸ್ತೋತ್ರವನ್ನು ರಚಿಸಿ ನರಸಿಂಹನನ್ನು ಹಾಡಿ ಶಾಂತಗೊಳಿಸಿದರು.
  • ಗೋಕರ್ಣದಲ್ಲಿ ಹರಿ-ಶಂಕರ ದೇವಾಲಯವನ್ನು ಸಂದರ್ಶಸಿ, ಕೊಲ್ಲೂರಿಗೆ ಬಂದು ಮೂಕಾಂಬಿಕೆಯನ್ನು ಸಂದರ್ಶಿಸಿದರು. ಕೊಲ್ಲೂರಿನಲ್ಲಿ ಒಬ್ಬ ಮೂಕನೆಂದು ತಿಳಿದಿದ್ದ ಬಾಲಕನನ್ನು ಶಿಷ್ಯನಾಗಿ ಸ್ವೀಕರಿಸಿದರು. ಅವನು ಜನ್ಮಜಾತ ಪಂಡಿತನೂ ಜ್ಞಾನಿಯೂ ಆಗಿದ್ದ. ಅವನಿಗೆ ಹಸ್ತಾಮುಲಕಾಚಾರ್ಯನೆಂದು ನಾಮಕರಣ ಮಾಡಿದರು.
  • ಮುಂದೆ ಅವರು ತಮ್ಮ ಪರಿವಾರದೊಡನೆ [ಶಿಷ್ಯರು ಮತ್ತು ಉಭಯ ಭಾರತಿ] ಶೃಂಗೇರಿ ಸೇರಿದರು. ಅಲ್ಲಿ ತೋಟಕಾಚಾರ್ಯನೆಂದು ಪ್ರಸಿದ್ಧನಾದ ತೋಟಕಾಚಾರ್ಯನನ್ನು ಶಿಷ್ಯನಾಗಿ ಸ್ವೀಕರಿಸಿದರು. ಶೃಂಗೇರಿಯಲ್ಲಿ ಶಾರದಾ ಪೀಠವನ್ನು ಸ್ಥಾಪಿಸಿ ಸುರೇಶ್ವರಾಚಾರ್ಯ ರನ್ನು ಅಲ್ಲಿ ನೆಲೆಗೊಳಿಸಿ. ಕೇರಳಕ್ಕೆ ಹೋದರು. [ಕೇರಳದಲ್ಲಿ ಅವರ ತಾಯಿ ಅನಾರೋಗ್ಯದಿಂದ ತೀರಿಕೊಳ್ಳಲು ಆ ಊರಿನ ನಂಬೂದರಿ ಬ್ರಾಹ್ಮಣರು ಅಸಹಕಾರ ತೋರಿದ್ದರಿಂದ ಶಂಕರರೊಬ್ಬರೇ ಅಂತ್ಯಕ್ರಿಯೆ ನಡೆಸಿದರು ಎಂದು ಐತಿಹ್ಯವಿದೆ]. ಅಲ್ಲಿಂದ ಪುನಃ ತಮಿಳನಾಡು, ಕರ್ನಾಟಕ, ಕಾಶ್ಮೀರ, ನೇಪಾಲಗಳಿಗೆ ದಿಗ್ವಿಜಯ ಹೋಗಿ ಅಲ್ಲಿದ್ದ ಪಂಡಿತರನ್ನೆಲ್ಲಾ ಜಯಿಸಿ ಅದ್ವೈತ ತತ್ವದ ಪ್ರಚಾರ ಮಾಡಿದರು.

ದಿಗ್ವಿಜಯದ ವಿವರ ;-


ಶೃಂಗೇರಿಯಿಂದ ಕೇರಳಕ್ಕೆ ಬಂದು ಉತ್ತರಕ್ಕೆ ಹೊರಡುವಾಗ ಕೇರಳದ ರಾಜ ಸುಧನ್ವನು ಅವರಿಗೆ ಬೆಂಗಾವಲಾಗಿ ಬಂದನು. ಅವರು ತಮಿಳುನಾಡು ಕಂಚಿ ಯನ್ನು ದಾಟಿ ಆಂದ್ರಪ್ರದೇಶದ ಮೂಲಕ ವಿದರ್ಭಕ್ಕೆ ಬಂದರು; ಅಲ್ಲಿ ಪ್ರಯಾಣ ಮಾಡುವಾಗ ಸಶಸ್ತ್ರ ಕಾಪಾಲಿಕರು ಇವರನ್ನು ಎದುರಿಸಿದರು. ಸುಧನ್ವ ರಾಜನು ಅವರನ್ನು ನಿವಾರಿಸಿ, ಪುನಃ ಕರ್ನಾಟಕಕ್ಕೆ ಬಂದು, ಗೋಕರ್ಣಕ್ಕೆ ಸುರಕ್ಷಿತವಾಗಿ ತಲುಪಿಸಿದನು. ಅಲ್ಲಿ ಅವರು ಶೈವ ಪಂಥದವರೊಡನೆ ವಾದ ಮಾಡಿ ಜಯಿಸಿ ಶಿಷ್ಯರನ್ನಾಗಿ ಮಾಡಿಕೊಂಡರು. ಅಲ್ಲಿಂದ ಸೌರಾಷ್ಟ್ರ [ಹಳೆಯ ಕಾಂಬೋಜ] ಕ್ಕೆ ಬಂದು ಪುಣ್ಯ ಕ್ಷೇತ್ರಗಳಾದ ಗಿರಿನಾರ, ಸೋಮನಾಥ, ಪ್ರಭಾಸ ಕ್ಷೇತ್ರಗಳನ್ನು ಸಂದರ್ಶಿಸಿ ಅಲ್ಲಿಯ ಪಂಡಿತರನ್ನು ವಾದದಲ್ಲಿ ಸೋಲಿಸಿ ಅದ್ವೈತ ತತ್ವವನ್ನು ಎತ್ತಿ ಹಿಡಿದರು. ಅಲ್ಲಿಂದ ದ್ವಾರಕೆಗೆ ಬಂದು ಅಲ್ಲಿ ಪ್ರಸಿದ್ಧರಾದ ಬೇಧಾಬೇಧ ಪಂಡಿತರಾದ ಭಟ್ಟ ಭಾಸ್ಕರರನ್ನು ವಾದದಲ್ಲಿ ಸೋಲಿಸಿದರು.. ದ್ವಾರಕೆಯ ಪಂಡಿತರೆಲ್ಲಾ ಅದ್ವೈತ ತತ್ವವನ್ನು ಒಪ್ಪಿಕೊಂಡರು. ಬಾಹ್ಲೀಕದಲ್ಲಿ ಜೈನಪಂಡಿತರನ್ನು ವಾದದಲ್ಲಿ ಹಿಮ್ಮಟ್ಟಿಸಿದರು. ಅಲ್ಲಿಂದ ಕಾಂಬೋಜಕ್ಕೆ [ಉತ್ತರಕಾಶ್ಮೀರ] ದಾರದ [ದಬೀಸ್ಥಾನ್] ಕ್ಕೆ ಬಂದು ಅಲ್ಲಿಯ ಸಂನ್ಯಾಸಿಗಳನ್ನೂ ಪಂಡಿತರನ್ನೂ ವಾದದಲ್ಲಿ ಸೋಲಿಸಿದರು ಎತ್ತರದ ಶಿಖರ ,ಕಣಿವೆಗಳನ್ನು ದಾಟಿ ಕಾಶ್ಮಿರ, ನಂತರ ಕಾಮರೂಪಕ್ಕೆ ಬಂದು ಅಲ್ಲಿ ನವಗುಪ್ತನೆಂಬ ತಾಂತ್ರಿಕನನ್ನು ಎದುರಿಸಿದರು.

  • ಕಾಶ್ಮೀರದಲ್ಲಿ ಸರ್ವಜ್ಞ ಪೀಠದ ಪ್ರವೇಶ ಮಾಡಿ ಅಲ್ಲಿಯ ಎಲ್ಲಾ ದರ್ಶನಗಳ ಪಂಡಿತರನ್ನೂ ವಾದದಲ್ಲಿ ಮಣಿಸಿ ಸರ್ವಜ್ಞ ಪೀಠವನ್ನು [ ಶಾರದಾ ಪೀಠ] ವನ್ನು ಏರಿದರು (ಕ್ರಿ.ಶ. ೯೨೦ -ತತ್ಪ ಪ್ರಕಾಶ. ಪು೨೨ ?- ೮೨೦) . ಆ ಸರ್ವಜ್ಞ ಪೀಠಕ್ಕೆ ನಾಲ್ಕು ದಿಕ್ಕಿಗೆ ನಾಲ್ಕು ಬಾಗಿಲಿದ್ದು ದಕ್ಷಿಣ ಭಾರತದಿಂದ ಯಾರೂ ಶ್ರೇಷ್ಠ ಪಂಡಿತರು ಬಾರದೇ ಇದ್ದುದರಿಂದ ದಕ್ಷಿಣದ ಬಾಗಿಲು ತರೆದೇ ಇರಲಿಲ್ಲವಂತೆ. ಇವರು ಅದನ್ನು ತೆರೆಸಿ ಪ್ರವೇಶಮಾಡಿ, ಎಲ್ಲರನ್ನೂ ವಾದದಲ್ಲಿ ಜಯಿಸಿದರು.
  • ಅವರ ಜೀವನದ ಕೊನೆಯ ಭಾಗದಲ್ಲಿ ಹಿಮಾಲಯಕ್ಕೆ ಪ್ರಯಾಣ ಮಾಡಿ ಅಲ್ಲಿ ಕೇದಾರ ದೇವಾಲಯದ ಹತ್ತಿರ ವಿದೇಹ ಮುಕ್ತಿಯನ್ನು ಪಡೆದರೆಂದು ಹೇಳುತ್ತಾರೆ. ಕೇದಾರದ ಕೇದಾರನಾಥ ದೇವಾಲಯದ ಹಿಂಭಾಗದಲ್ಲಿ ಶ್ರೀ ಶಂಕರರ ಸಮಾಧಿ ಇದೆ ; ಶಿಲಾಪ್ರತಿಮೆಯೂ ಇದೆ. ಕೇರಳದವರು ಕೇರಳದ ತ್ರಿಶೂರಿನಲ್ಲಿ ಅವರು ಸಮಾಧಿಸ್ಥ ರಾದರೆನ್ನುತ್ತಾರೆ, ತಮಿಳನಾಡಿನವರು ಆ ನಾಡಿನ ಕಂಚಿ ಯಲ್ಲಿ ಶಂಕರರು ವಿದೇಹ ಮುಕ್ತಿ ಪಡೆದರೆನ್ನುತ್ತಾರೆ. ಕೇರಳ, ಕಂಚಿಗಳಲ್ಲಿಯೂ ಅವರ ಸಮಾಧಿಗಳಿವೆ. ಆದರೆ ಎಲ್ಲಕ್ಕೂ ಪ್ರಾಚೀನ ವಾದ ಮಾಧವ ಶಂಕರ ವಿಜಯದಲ್ಲಿ ಕೇದಾರದಲ್ಲಿ ಅವರು ವಿದೇಹ ಮುಕ್ತಿಪಡೆದರೆಂದು ಹೇಳಿದೆ.
ಇತ್ತೀಚಗೆ ಕಾಂಬೋಡಿಯಾದಲ್ಲಿ ಶಂಕರರ ಶಿಷ್ಯ ಶಿವಸೋಮ ರ ಕ್ರಿ. ಶ. ೮೮೦ರ ಶಾಸನ ಸಿಕ್ಕಿರುವುದಾಗಿ ತಿಳಿದು ಬಂದಿದೆ. ಆಶಾಸನದ ಪ್ರಕಾರ ಶಂಕರರು ಕ್ರಿ.ಶ. ೮೨೦ ರಲ್ಲಿ ಕಾಲವಶರಾದರೆಂದು ಹೇಳಿದೆ (ಭಾರತದ ಇತಿಹಾಸ-೧೯೮೪ -ಫಾಲಾಕ್ಷ ಪು. ೨೬೬)

ನಾಲ್ಕು ಮಠಗಳು


ಅವರು ವೈದಿಕ ಧರ್ಮದ ಮತ್ತು ಅದ್ವೈತದ ಪ್ರಚಾರಕ್ಕಾಗಿ ಭಾರತ ದೇಶದ ನಾಲ್ಕು ದಿಕ್ಕಿಗೆ ನಾಲ್ಕು ಮಠಗಳನ್ನು ಸ್ಥಾಪಿಸಿದ್ದಾರೆ. ಆವು ನಾಲ್ಕು ಬಗೆಯ ಪ್ರಚಾರ ಸಿದ್ಧಾಂತ ಹೊಂದಿದೆ.

  • ೧.ದಕ್ಷಿಣದಲ್ಲಿ ಕರ್ನಾಟಕದಲ್ಲಿರುವ ಶೃಂಗೇರಿಯ ಶಾರದಾ ಪೀಠ ;
  • ೨. ಪಶ್ಚಿಮದಲ್ಲಿ ಗುಜರಾತಿನಲ್ಲಿರುವ ದ್ವಾರಕೆಯ ದ್ವಾರಕಾ ಪೀಠ ;
  • ೩. ಪೂರ್ವದಲ್ಲಿ ಒರಿಸ್ಸಾದಲ್ಲಿರುವ ಪುರಿಯಲ್ಲಿರುವ ಶ್ರೀಶಂಕರ ಪೀಠ [ಗೋವರ್ಧನ ಮಠ] ;
  • ೪. ಉತ್ತರದಲ್ಲಿ ಈಗಿನ ಉತ್ತರಖಂಡ ರಾಜ್ಯದಲ್ಲಿರುವ ಜ್ಯೋತಿರ್ ಮಠ [ಜ್ಯೋಶಿಮಠ] .
  • ಈ ನಾಲ್ಕು ಮಠ ಗಳಿಗೆ ಕ್ರಮವಾಗಿ, ಶ್ರೀಶಂಕರರ ಹತ್ತಿರದ ಶಿಷ್ಯರಾದ
  • ೧. ಸುರೇಶ್ವರಾಚಾರ್ಯರು ;
  • ೨. ಪದ್ಮಪಾಧಾಚಾರ್ಯರು.;
  • ೩. ಹಸ್ತಾಮಲಕಾಚಾರ್ಯರು;
  • ೪. ತೋಟಕಾಚಾರ್ಯರು , ಪ್ರಥಮ ಮಠಾಧೀಶರಾದರು.
  • ಇವಕ್ಕೆ ಆಮ್ನಾಯ ಪೀಠವೆಂದು ಹೇಳುತ್ತಾರೆ [ *ಉದಾ: ದಕ್ಷಿಣಾಮ್ನಾಯ ಪೀಠ -ಶೃಂಗೇರಿ ಶಂಕರ ಮಠ] .

ಈ ಮಠಗಳ ನಂತರದ ಪೀಠಾಧಿಪತಿಗಳು ತಮ್ಮ ಹೆಸರಿನ ಮುಂದೆ ಶಂಕರಾಚಾರ್ಯ ಎಂದು ಸೇರಿಸಿಕೊಳ್ಳುತ್ತಾರೆ.

ಆಮ್ನಾಯ ಮಠಗಳ ವಿವರ :-

ಶಿಷ್ಯರು ಮಠ ಮಹಾವಾಕ್ಯ ವೇದ ಉಪನಿತ್ ಸಂಪ್ರದಾಯ
ಹಸ್ತಾಮಲಕಾಚಾರ್ಯ ಗೋವರ್ಧನ ಮಠ [ಪೂರ್ವ] ಪ್ರಜ್ಞಾನಂ ಬ್ರಹ್ಮ ಋಗ್ವೇದ ಐತರೇಯ ಭೋಗವಾಲ
ಸುರೇಶ್ವರಾಚಾರ್ಯ ಶಾರದಾಪೀಠ [ದಕ್ಷಿಣ] ಅಹಂ ಬ್ರಹ್ಮಾಸ್ಮಿ ಯಜುರ್ವೇದ ಬೃಹದಾರಣ್ಯಕ ಭೂರಿವಾಲ
ಪದ್ಮಪಾದಾಚಾರ್ಯ ದ್ವಾರಕಾಪೀಠ [ಪಶ್ಚಿಮ] ತತ್ವಮಸಿ ಸಾಮವೇದ ಛಾಂದೋಗ್ಯ ಕೀಟವಾಲ
ತೋಟಕಾಚಾರ್ಯ ಜ್ಯೋತಿರ್ ಮಠ [ಉತ್ತರದ ಮಠ] ಅಯಮಾತ್ಮಾ ಬ್ರಹ್ಮ ಅಥರ್ವ ವೇದ ಮಾಂಡೂಕ್ಯ ನಂದವಾಲ
  • ಶ್ರೀಶಂಕರರು ಷಣ್ಮತ ಸ್ಥಾಪಕರೆಂದೂ , ದಶನಾಮೀ ಮತ್ತು ಸ್ಮಾರ್ತ ಸಂಪ್ರದಾಯವನ್ನು ಪ್ರಾರಂಭಿಸಿದವರೆಂದೂ, ಪಂಚಾಯತನ ಪೂಜಾಪದ್ದತಿಯನ್ನು ಪ್ರಾರಂಭಿಸಿದವರೆಂದೂ ಹೇಳುತ್ತಾರೆ.

ಆರು ಬಗೆಯ ಆರಾಧಕರು ;


ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು, ಮತ್ತು ಸ್ಕಂದ ಇವರ ಆರಾಧಕರು ಪರಸ್ಪರ ತಾವು ಮೇಲು, ತಾವು ಮೇಲೆಂದು ಜಗಳಾಡುತ್ತಿದ್ದದನ್ನು ನಿಲ್ಲಿಸಿ, ಅವೆಲ್ಲವೂ ಒಬ್ಬನೇ ಈಶ್ವರನ ಬೇರೆ ಬೇರೆ ರೂಪಗಳೆಂದು ಆರಾಧಕರನ್ನು ಒಪ್ಪಿಸಿ ಈ ಆರೂ ದೇವತೆಗಳನ್ನು ಪರಸ್ಪರ ವಿರೋಧವಿಲ್ಲದೆ ಪೂಜಿಸಬೇಕೆಂದು ನಿಯಮ ಮಾಡಿದರು. ತಾವು ಉಪಾಸನೆ ಮಾಡುವ ದೇವತೆಯನ್ನು ಮಧ್ಯೆ ಇಟ್ಟು, ಉಳಿದ ದೇವತೆಗಳನ್ನು ಅದರ ಸುತ್ತ ಇಟ್ಟು ಅವನ್ನು ಮುಖ್ಯ ದೇವತೆಯ ಪರಿವಾರವೆಂದು ಪೂಜಿಸುವುದು . ಅದರಿಂದ ಅವರಿಗೆ ಷಣ್ಮತ ಸ್ಥಾಪಕರೆಂದು ಹೇಳುತ್ತಾರೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಪಂಚಾಯತ ವ್ಯಾಪ್ತಿಯಲ್ಲಿ ಬರುವ ಕಲ್ಲಬ್ಬೆ ಗ್ರಾಮದ ನಂದಿಕೇಶ್ವರ ದೇಸ್ಥಾನದಲ್ಲಿ ಈ ಎಲ್ಲ ಮೂರ್ತಿಗಳನ್ನು ನೋಡಬಹುದು. ಪ್ರಾಯಃ ಇಡೀ ದಕ್ಷಿಣ ಭ಻ರತದಲ್ಲಿ ಇದೊಂದೇ ದೇವಸ್ಥ಻ನದಲ್ಲಿ ಮಾತ್ರ ಷಣ್ಮತ ಸ್ಥಾಪನಾಚಾರ್ಯ ೆನ್ನುವದಕ್ಕೆ ಪುರಾವೆ ಸಿಕ್ಕುತ್ತಿದೆ.(ಪುಟ್ಟು ಕುಲಕರ್ಣಿ , ಹೆಗಡೆ-ಕುಮಟಾ-581339)

ದಶನಾಮೀ ಪದ್ದತಿ :-


ಸಂನ್ಯಾಸದಲ್ಲಿ ಏಕದಂಡೀ [ಒಂದು ದಂಡ-ದೊಣ್ಣೆ] ಸಂಪ್ರದಾಯ ವನ್ನು ಪ್ರಾರಂಭಿಸಿದರು. ಈ ಸಂಪ್ರದಾಯದ ಸಂನ್ಯಾಸಿಗಳು ತಮ್ಮ ಹೆಸರಿನ ಮುಂದೆ ದಶನಾಮ ಗಳಲ್ಲಿ ಒಂದನ್ನು ಇಟ್ಟುಕೊಳ್ಳುತ್ತಾರೆ. ಅವು : ೧.ಸರಸ್ವತಿ ; ೨.ತೀರ್ಥ; ೩.ಅರಣ್ಯ, ; ೪. ಭಾರತಿ ; ೫.ಆಶ್ರಮ ; ೬. ಗಿರಿ [ಕ್ರಿಯಾಯೋಗ ಅಭ್ಯಾಸ ಮಾಡುವವರು - ಜಾತಿಮತ ಬೇಧವಿಲ್ಲ.] ; ೭.ಪರ್ವತ ; ೮. ಸಾಗರ ; ೯.ವನ ; ೧೦. ಪುರಿ .

  • ಸರಸ್ವತಿ, ಪುರಿ, ಭಾರತಿ, ಉಪನಾಮಗಳು ಶೃಂಗೇರಿ ಪೀಠಕ್ಕೆ ಸೇರಿವೆ ; ತೀರ್ಥ , ಆಶ್ರಮ ನಾಮಗಳು ದ್ವಾರಕಾ ಪೀಠಕ್ಕೆ ಸೇರಿವೆ ; ಗಿರಿ, ಪರ್ವತ, ಸಾಗರ ಇವು ಜ್ಯೋತಿರ್ ಮಠಕ್ಕೆ ಸೇರಿವೆ ; ವನ , ಅರಣ್ಯ, ನಾಮಗಳು ಪುರಿಯ ಗೋವರ್ಧನ ಮಠಕ್ಕೆ ಸೇರಿವೆ. ಉಳಿದವು ಸ್ವತಂತ್ರ ಸಂಪ್ರದಾಯ ಹೊಂದಿವೆ. ಆದರೂ ಇದು ಅಷ್ಟೇನೂ ಬಿಗಿಯಾದ ನಿಯಮವಿದ್ದಂತೆ ಕಾಣುವುದಿಲ್ಲ. ಕಾರಣ ಅರಣ್ಯ ನಾಮದ ವಿದ್ಯಾರಣ್ಯರು ಶೃಂಗೇರಿಯ ಮಠದ ಗುರುಗಳಾಗಿದ್ದರು.

ಪಂಚಾಯತನ ಪೂಜೆ :-


ಆರಾಧಕರಲ್ಲಿ ಪರಸ್ಪರ ಕಾದಾಟ ಹೋಗಲಾಡಿಸಲು ಇಡೀ ಭಾರತಕ್ಕೆ ಅನ್ವಯವಾಗುವ ಸ್ಮಾರ್ತ ಸಂಪ್ರದಾಯವನ್ನು ಹುಟ್ಟುಹಾಕಿದರು. ವೇದ ಪದ್ದತಿಯಲ್ಲಿ [ಶ್ರುತಿ -ವೇದ ಮತು ಸ್ಮೃತಿಗಳು-ಮನು ಸ್ಮೃತಿ ಮೊದಲಾದವು ಮತ್ತು ಪೌರಾಣಿಕ ಪದ್ದತಿಗಳ ಸಮನ್ವಯ] ಪೂಜಾದಿ ವಿಧಿಗಳನ್ನೂ , ಹೋಮ ಹವನಗಳನ್ನೂ, ಸಂಸ್ಕಾರಗಳನ್ನೂ ಮಾಡುವ ಒಂದು ಕ್ರಮ, ಸ್ಮಾರ್ತ ಸಂಪ್ರದಾಯ. ಸ್ಮಾರ್ತರು ಪಂಚಾಯತನ ಪೂಜೆಯಲ್ಲಿ ಸೂರ್ಯ, ಗಣಪತಿ, ಅಂಬಿಕಾ, ಶಿವ ಮತ್ತು ವಿಷ್ಣು ಈ ಐದು ದೇವತೆಗಳನ್ನು ಒಟ್ಟಿಗೆ, ಪ್ರಮುಖ ದೇವತೆಯನ್ನು ಮಧ್ಯದಲ್ಲಿಟ್ಟು ಪೂಜಿಸುತ್ತಾರೆ. ಯಾವುದಾದರೂ ಒಂದು ದೇವತೆಯ ಬದಲಿಗೆ ಸ್ಕಂದನನ್ನು ಸ್ಕಂದೇವತೆಯ ಉಪಾಸಕರು ಸೇರಿಸಿಕೊಳ್ಳ ಬಹುದು.

ಲೋಕ ಶಂಕರ


ಸಾವಿರದ ಇನ್ನೂರು ವರ್ಷಗಳ ಹಿಂದೆ, ಕೇವಲ ಮೂವತ್ತೆರಡು ವರ್ಷ ಬದುಕಿದ್ದರೂ ಇಡೀ ಭಾರತಕ್ಕೆ ಅನ್ವಯವಾಗುವ ಸಂಪ್ರದಾಯವನ್ನು ಹುಟ್ಟು ಹಾಕಿ ಜನರು ಅದನ್ನು ಅನುಸರಿಸುವಂತೆ ಪ್ರಭಾವ ಮಾಡಿದ್ದು, ಅವರ ಅತಿದೊಡ್ಡ ಸಾಧನೆ. ಅಲ್ಲದೆ, ಅವರ ಅದ್ವೈತ ತತ್ವ ಸಿದ್ದಾಂತ, ಅದರ ಸಮರ್ಥನೆಗಾಗಿ ಅವರು ಮಾಡಿದ ವಾದ ಮಂಡನೆ, ತರ್ಕ, ಇಡೀ ಜಗತ್ತನ್ನೇ ಬೆರಗುಗೊಳಿಸಿದೆ.

ಶೃತಿ ಸ್ಮೃತಿ ಪುರಾಣಾನಾಮಾಲಯಮ್ ಕರುಣಾಲಯಮ್ | ನಮಾಮಿ ಭಗವತ್ಪಾದ ಶಂಕರಮ್ ಲೋಕ ಶಂಕರಮ್ ||

  • ಶ್ರುತಿ ಸ್ಮ ತಿ ಪುರಾಣಗಳ ಆಶ್ರಯರಾಗಿರುವ, ಲೋಕಕ್ಕೆ ಕಲ್ಯಾಣ ಉಂಟುಮಾಡುವ ಕರುಣೆಯಿಂದ ತುಂಬಿದ ಶ್ರೀ ಶಂಕರ ಭಗವತ್ಪಾದರನ್ನು ಭಕ್ತಿ ಪೂರ್ವಕ ನಮಿಸುತ್ತೇನೆ .

=

ದರ್ಶನ-ಶಾಂಕರತ ===


  • ಸುಮಾರು ಕ್ರಿ ಶ ೭೦೦ ರಲ್ಲಿ ಬದುಕಿದ ಗೌಡಪಾದಮುನಿಗಳು ಮಾಡೂಕ್ಯ ಕಾರಿಕೆಯ ಮೂಲಕ ಮೊಟ್ಟಮೊದಲಿಗೆ ಅದ್ವೈತ ಸಿದ್ಧಾಂತವನ್ನು ವ್ಯವಸ್ಥಿತವಾಗಿ ಧೃಡವಾಗಿ ಪ್ರತಿಪಾದಿಸಿದರು. ಅವರ ಶಿಷ್ಯರು ಗೋವಿಂದ ಭಗವತ್ಪಾದರು. ಆವರ ಶಿಷ್ಯರು ಶ್ರೀ ಶಂಕರಾಚಾರ್ಯರು. ಅವರು ಅದ್ವೈತ ತತ್ವ ಸಿದ್ಧಾಂತಕ್ಕೆ ಸ್ಪಷ್ಟ ರೂಪಕೊಟ್ಟು ಜಗತ್ತಿನ ಮನ್ನಣೆ ಸಿಗುವಂತೆ ಮಾಡಿದರು.
  • ಶ್ರೀಶಂಕರಾಚಾರ್ಯರು [ಕ್ರಿಶ.೭೮೮-೮೨೦ ವಿಕಿಪೀಡಿಯ] ಒಬ್ಬ ಅಸಾಧಾರಣ ಕ್ರಿಯಾಶೀಲ ಅದ್ಭುತ ವ್ಯಕ್ತಿ. ಕೇರಳದ ಕಾಲಟಿಯಲ್ಲಿ ಜನಿಸಿ, ಕನ್ಯಾಕುಮಾರಿಯಿಂದ ಬದರಿ ಕಾಶ್ಮೀರ,; ಕಾಶ್ಮೀರದಿಂದ ಕಾಶಿ, ಪುನಃ ಶೃಂಗೇರಿ, ಕಂಚಿ, ಪುರಿ, ದ್ವಾರಕಾ, ಬದರಿ, ಹೀಗೆ ಭಾರತವನ್ನು ಎರಡು ಬಾರಿ ಕಾಲ್ನೆಡಿಗೆಯಲ್ಲಿ ಸುತ್ತಿ, ತಮ್ಮ ತರ್ಕಶಕ್ತಿ ಯಿಂದ ಪ್ರತಿವಾದಿಗಳನ್ನು ಸೋಲಿಸಿ ಅದ್ವೈತದ ಧ್ವಜವನ್ನು ಎತ್ತಿ ಹಿಡಿದರು. ಅವರು ಬದುಕಿದ್ದು ಕೇವಲ ೩೨ವರ್ಷಗಳ ಕಾಲ ಮಾತ್ರವಾದರೂ, ಪ್ರತಿಯೊಂದು ಕ್ಷಣವನ್ನೂ ಸಾರ್ಥಕ ಪಡಿಸಿಕೊಂಡವರು. ಅವರ ಬಗೆಗೆ ಜನ ಶ್ರುತಿ ಹೀಗಿದೆ :

ಅಷ್ಟವರ್ಷೇ ಚತುರ್ವೇದೀ ದ್ವಾದಶೇ ಸರ್ವಶಾಸ್ತ್ರ ವಿತ್ | ಷೋಡಶೇ ಕೃತವಾನ್ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್ ||

  • [ಎಂಟು ವರ್ಷಕ್ಕೆ ನಾಲ್ಕು ವೇದಗಳನ್ನು ಕಲಿತವರು, ಹನ್ನೆರಡನೇ ವರ್ಷಕ್ಕೆ ಸರ್ವಶಾಸ್ತ್ರಗಳನ್ನು ತಿಳಿದವರು, ಹದಿನಾರನೇ ವರ್ಷದಲ್ಲಿ ಭಾಷ್ಯಗಳನ್ನು ಬರೆದವರು ಮೂವತ್ತೆರಡನೇ ವರ್ಷದಲ್ಲಿ ಅಭ್ಯಗತರು- ಎಂದರೆ ಹೊರಟು ಹೋದರು ]
  • ಶ್ರೀ ಶಂಕರರು ಬೌದ್ಧ ಮತ್ತು ಇತರ ವೈದಿಕ ದರ್ಶನಗಳಲ್ಲಿರುವ ದೋಷಗಳನ್ನು ಎತ್ತಿ ತೋರಿಸಿ ಅದ್ವೈತ ವೇದಾಂತವೇ ಪರಿಪೂರ್ಣ ದರ್ಶನವೆಂದು ಸಾಧಿಸಿದರು. ಸ್ವಮತ ಸ್ಸ್ಥಾಪನೆ ಪರಮತ ಖಂಡನೆಗಳಲ್ಲಿ ಅವರಂಥ ನಿಪುಣರನ್ನು ಕಾಣುವುದು ಕಷ್ಟ. ಯಾರೇ ಆಗಲಿ ಅವರ ಧೀಮಂತ ವ್ಯಕ್ತಿತ್ವ ಪ್ರತಿಭೆಗಳಿಗೆ ತಲೆಬಾಗುವುದು ಸಹಜ. ಅವರು ಭಗವದ್ಗೀತೆ, ಹತ್ತು ಉಪನಿಷತ್ತುಗಳು ಮತ್ತು ಬ್ರಹ್ಮಸೂತ್ರಗಳನ್ನು ಸೂಕ್ಷ್ಮ ವಾಗಿ ಪರಿಶೀಲಿಸಿ ಅವುಗಳಿಗೆ ಭಾಷ್ಯಗಳನ್ನು ಬರೆದು ಅವಗಳಿಗೆ ಸಮ್ಮತವಾದುದು ಅದ್ವೈತ ಸಿದ್ಧಾಂತವೆಂದು ನಿರೂಪಿಸಿದ್ದಾರೆ. ಈ ಮೂರೂ ಗ್ರಂಥಗಳಿಗೆ ಪ್ರಸ್ಥಾನತ್ರಯ ವೆಂದು ಹೆಸರು. ಇವಲ್ಲದೆ ಕೆಲವು ವೇದಾಂತ ಗ್ರಂಥಗಳನ್ನೂ , ಸ್ತೋತ್ರಗಳನ್ನೂ ಬರೆದಿದ್ದಾರೆ.
  • ಶಂಕರ ವೇದಾಂತವನ್ನೆಲ್ಲಾ ಒಂದು ವಾಕ್ಯದಲ್ಲಿ ಅಥವಾ ಅರ್ಧ ಶ್ಲೋಕದಲ್ಲಿ ಸಂಗ್ರಹಿಸಬಹುದು : ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವನಾಪರಃ || ಬ್ರಹ್ಮವು ಸತ್ಯ ; ಜಗತ್ತು ಮಿಥ್ಯ ; ಜೀವನು ಬ್ರಹ್ಮವಲ್ಲದೆ ಬೇರೆಯಲ್ಲ.ಎಂಬುದೇ ಆ ಪ್ರಸಿದ್ಧ ಉಕ್ತಿ. ಆದರೆ ಈ ವಾಕ್ಯವನ್ನು ಅವರು ಎಲ್ಲಿಯೂ ಹೇಳಿಲ್ಲ.

ಬ್ರಹ್ಮ ಒಂದೇ ಸತ್ಯ


ಸತ್, ಚಿತ್, ಆನಂದ ಸ್ವರೂಪಿಯಾದುದು ಬ್ರಹ್ಮ ; ನಮ್ಮ ಕಣ್ಣಿಗೆ ಕಾಣುವ, ಜಗತ್ತು, ಅನುಭವಕ್ಕೆ ಎಟುಕುವ ಈ ಪ್ರಪಂಚವೆಲ್ಲಾ ಮಿಥ್ಯೆ - ಎಂದರೆ ಅದು ಬ್ರಹ್ಮದ ತೋರಿಕೆ ಮಾತ್ರ. ನೀರ ಮೇಲಣ ಗುಳ್ಳೆಗೆ ನೀರನ್ನು ಬಿಟ್ಟು ಸ್ವತಂತ್ರ ಅಸ್ತಿತ್ವ ವಿಲ್ಲದಂತೆ ಈ ಪ್ರಪಂಚಕ್ಕೆ ಸ್ವತಂತ್ರವಾದ ಅಸ್ತಿತ್ವ ವಿಲ್ಲ. ಅರಿವಿನ ಕಣ್ಣಿನಿಂದ ನೋಡಿದರೆ ಇರುವುದೆಲ್ಲ ಬ್ರಹ್ಮವೆಂದು ತಿಳಿಯುತ್ತದೆ. ಜಗತ್ತು, ಜೀವಿಗಳು ಮಾಯಾ ಕಲ್ಪಿತ ; ಅನಾದಿಯಾದ ಅಜ್ಞಾನವೆಂಬ ಮಾಯಾ ಪ್ರಭಾವದಿಂದ ಎಲ್ಲವೂ ಬೇರೆ ಬೇರೆಯಾಗಿ ಕಾಣುತ್ತದೆ. ಈಅಜ್ಞಾನದ ಆವರಣವನ್ನು ಕಿತ್ತೆಸೆದರೆ ಸಾಕು ಬೇಧವೆಲ್ಲ ಅಳಿದುಹೊಗಿ ಬ್ರಹ್ಮ ಸ್ವರೂಪ ಪ್ರಾಪ್ತಿಯಾಗುತ್ತದೆ. ಅದೇ ಮೋಕ್ಷ ; ಅದೇ ಪರಮ ಪುರುಷಾರ್ಥ. ಇದು ಶಾಂಕರ ಸಿದ್ಧಾಂತದ ಸಾರಾಂಶ.

ಶಾಂಕರ ಅದ್ವೈತ ಸಿದ್ಧಾಂತದ ಎಂಟು ತತ್ವಗಳು :

  • ೧] ಮೂಲ ತತ್ವ : ಬ್ರಹ್ಮ ಒಂದೇ ಸತ್ಯ ; ಈಜಗತ್ತು ಮಿಥ್ಯ ; ಜೀವನು ಬ್ರಹ್ಮನಿಂದ ಬೇರೆಯಲ್ಲ.
  • ೨]ಆತ್ಮವು ಇದೆ ಎಂದು ಹೇಳಲು ಪ್ರಮಾಣ : ಆತ್ಮವು ಸ್ವತಃ ಸಿದ್ಧವಾಗಿದೆ. ಅದು ಇದೆ ಎಂದು ಸಾಧಿಸಲು ಬೇರೆ ಪ್ರಮಾಣಗಳು ಬೇಕಾಗಿಲ್ಲ ; ಕಾರಣ ನಿರಾಕರಿಸುವವನೇ ಆತ್ಮ ಸ್ವರೂಪನಾಗಿದ್ದಾನೆ. ನಾನು ಇಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. .
  • ೩] ಬ್ರಹ್ಮದ ಗುಣ : ಬ್ರಹ್ಮವು ಜ್ಞಾನಕ್ಕೆ ವಿಷಯವಾಗಲಾರದು [ಬೇರೆ ಜ್ಞಾನದಿಂದ ಅದನ್ನು ನೋಡಲು ಬಾರದು ; ಕಾರಣ ಅದೇ ಜ್ಞಾನ ಸ್ವರೂಪವಾಗಿದೆ -

ಅದೇ ನೋಡುವ ಶಕ್ತಿ -ಸಾಕ್ಷಿ ; ಅದೃಶ್ಯವಾಗಿದೆ ; ಇಂದ್ರಿಯಗಳ ಜ್ಞಾನ ಶಕ್ತಿಯಿಂದ ಆಚೆ ಇದೆ ; ಅದು ಪರಿಪೂರ್ಣ; ಬದಲಾವಣೆ ಇಲ್ಲದ್ದು ; ಸ್ವಯಂ ಪ್ರಕಾಶ ; ಸ್ವಯಂ ಸಿದ್ಧ ; ಜ್ಞಾನ ಸ್ವರೂಪ ; ಆನಂದ ಸ್ವರೂಪ ; ಎಲ್ಲಾ ಜ್ಞಾನದ ಮೂಲ ರೂಪ - ಸಾಕ್ಷಿ; ನೋಡುವವ ; ಅದು ನೋಡಲ್ಪಡುವ ವಸ್ತು ಆಗಲಾರದು; ಅದು ಅದ್ವಿತೀಯ - ಅದನ್ನು ಬಿಟ್ಟು ಮತ್ತೊಂದಿಲ್ಲ. ನಾಶವಿಲ್ಲದ್ದು ; [ಆನಂದ ಅಚಿಂತ್ಯ, ಅರೂಪ ಅವ್ಯಯ ಅದ್ವಯ - ಆನಂದಮದ್ವಯಮರೂಮಚಿಂತ್ಯಮವ್ಯಯಂ ]

  • ೪] ಬ್ರಹ್ಮದ ಸ್ವರೂಪ : ಅದು ಸತ್ ಚಿತ್ ಆನಂದ ಸ್ವರೂಪ ವಾಗಿದೆ ..
  • ೫] ಇಂದ್ರಿಯಾತೀತ : ಅದು ನಿರಾಕಾರ ನಿರ್ಗುಣ ; ಅದು ಇಂದ್ರಿಯ ಮನಸ್ಸುಗಳ ಆಚೆ ಇರುವಂತಹದು. ಇಂದ್ರಿಯ ಗೋಚರವಾದವು ಅನಿತ್ಯವಾಗಿದೆ.
  • ೬] ಸತ್ಯ - ಮಿಥ್ಯ ವಿಚಾರ ;
    • ತ್ರಿವಿಧ ಸತ್ತೆಗಳು :
    • ೧.ಪ್ರಾಪಂಚಿಕ ಸತ್ತೆ : ಅನುಭವಕ್ಕೆ ಬರುವುದು ಸತ್ಯವೇ ಆಗಿರುತ್ತದೆ. ಸ್ವಲ್ಪ ಕಾಲ ಇದ್ದು , ಆನಂತರ ಇಲ್ಲವಾಗುವುದು ಅನಿತ್ಯವಾದವುಗಳು ; ಅದು ಈ ನಮ್ಮ ಅನುಭವಕ್ಕೆ ಬರುವ ಪ್ರಪಂಚಕ್ಕೆ ಅನ್ವಯಿಸುತ್ತದೆ. ಇದು ಪ್ರಾಪಂಚಿಕ ಸತ್ಯ ಅಥವಾ ವ್ಯವಹಾರಿಕ ಸತ್ಯ. ಆದ್ದರಿಂದ ನಾವು ಕಾಣವ ಈ ಜಗತ್ತು ಮತ್ತು ಅದರ ಅನುಭವ ಪೂರ್ಣ ಬ್ರಮೆಯಲ್ಲ. ಪೂರ್ಣ ಸತ್ಯವೂ ಅಲ್ಲ. ಅವು ಅನಿತ್ಯವಾದುದರಿಂದ ಮಿಥ್ಯೆ. ಭೂ, ಭವಿಷ್ಯತ್, ವರ್ತಮಾನ ಈ ತ್ರಿಕಾಲದಲ್ಲೂ ಇರುವುದಲ್ಲ. ಮಿಥ್ಯೆ ಎಂದರೆ ಬಂಜೆಯ ಮಗನಂತೆ ಪೂರ್ಣ ಸುಳ್ಳಲ್ಲ
    • ೨.ಪ್ರಾತಿಭಾಸಿಕ ಸತ್ತೆ : ಇದು ತಿರಾ ಕೆಳಗಿನ ಹಂತದ ಸತ್ಯ.ನಂಬಿಕೆ ಇರುವ ವರೆಗೆ ಮಾತ್ರ ಇರುತ್ತದೆ. ಉದಾಹರಣೆಗೆ ಹಗ್ಗವನ್ನು ಹಾವೆಂದು ತಿಳಿಯುವುದು.ಹಾವು ಅನುಭವಕ್ಕೆ ಬರುವುದರಿಂದದ ಇಲ್ಲವೆನ್ನುವಂತಿಲ್ಲ; ಅನುಭವ ಇರುವವರೆಗೂೂ ಸತ್ಯವಾಗೇ ಇರುತ್ತದೆ. ಇದು ಪ್ರಾತಿಭಾಸಿಕಕ ಸತ್ಯ
    • ೩.ಪಾರಮಾರ್ಥಿಕ ಸತ್ತೆ : ಇದು ತ್ರಿಕಾಲಾಬಾಧಿತ ಸತ್ಯ. ಭೂತ ಭವಿಷ್ಯತ್ ವರ್ತಮಾನಗಳಲ್ಲೂ ಬಾಧಿತವಾಗದೆ ಇರುವುದು. ಎಚ್ಚರ ಕನಸು ನಿದ್ದೆ ಈಮೂರೂ ಅವಸ್ಥೆಗಳಲ್ಲೂ ಸಾಕ್ಷಿರೂಪದಲ್ಲಿ ಒಂದೇ ರೀತಿಯಾಗಿರುವುದು. ಮೂರೂ ಕಾಲಗಳಲ್ಲಿ ಮೂರೂ ಅವಸ್ಥೆಗಳಲ್ಲಿ ಬದಲಾವಣೆ ಆಗುವುದಿಲ್ಲ ; ಒಂದೇರೀತಿ ಇರುತ್ತದೆ. ಇದು ಪಾರಮಾರ್ಥಿಕ ಸತ್ಯ. ಈ ಗುಣವನ್ನು ಹೊಂದಿರುವುದು, ಈತತ್ವಕ್ಕೆ ಅರ್ಹವಾದುದು ಬ್ರಹ್ಮವೊಂದೇ. ಆದ್ದರಿಂದ ಬ್ರಹ್ಮ ವೊಂದೇ ಪಾರಮಾರ್ಥಿಕ ಸತ್ಯವಾಗಿದೆ.
  • ೭] ಜೀವ - ಬ್ರಹ್ಮ ತತ್ವ : ಮನ, ಬುದ್ಧಿ, ಅಹಂಕಾರ, ಚಿತ್ತ, ಈ ಅಂತಃಕರಣ ದಿಂದ ಆವರಿಸಲ್ಪಟ್ಟ ಮೂಲ ಚೈತನ್ಯವೇ ಜೀವ. ಮಾಯೆಯಿಂದ ಆವರಿಸಲ್ಪಟ್ಟ ಬ್ರಹ್ಮ ಮಾಯೆಯ ಉಪಾದಿಯಿಂದ ಈಶ್ವರನೆನಿಸಿ ಕೊಳ್ಳುತ್ತಾನೆ. ಅದೇ ಅವಿದ್ಯೆಯ (ಅಜ್ಜ್ಞಾನ) ದ ಉಪಾದಿಯಿಂದ ಜೀವನೆನಿಸುತ್ತಾನೆ. ಜೀವನಿಗೆ ಈ ಉಪಾದಿಗಳಿಂದ ಸ್ಥೂಲ, ಸೂಕ್ಷ್ಮ, ಕಾರಣಗಳೆಂಬ ಮೂರು ಶರೀರಗಳು. ಜಗ್ರತ್, ಸ್ವಪ್ನ, ಸುಷುಪ್ತಿ ಗಳೆಂಬ ಮೂರು ಅವಸ್ಥೆಗಳು. ಅವಿದ್ಯೆಯಿಂದ ಅಥವಾ ಅಜ್ಞಾನದಿಂದ [ಮಾಯಾ ಪ್ರಭಾವದಿಂದ ; ಮಾಯೆ ಸಮಷ್ಟಿಯನ್ನು ಎಂದರೆ ಇಡೀ ಜಗತ್ತನ್ನು ಕುರಿತು ಹೇಳುವಾಗ ಉಪಯೋಗಿಸುವ ಪದ; ಅವಿದ್ಯೆ ವ್ಯಷ್ಟಿಯನ್ನು ಎಂದರೆ ಒಂದು ಜೀವಿಯನ್ನು ಕುರಿತು ಉಪಯೋಗಿಸುವ ಪದ; ಎರಡಕ್ಕೂ ಒಂದೇ ಅರ್ಥ.] ಬಿಡುಗಡೆಯಾದರೆ ಜೀವವು ಬ್ರಹ್ಮದಲ್ಲಿ ಲೀನವಾಗುವುದು- ಅಪರೋಕ್ಷಾನುಭೂತಿಯಾದಾಗ ತಾನೇ ಬ್ರಹ್ಮ ವೆಂಬ ಅನುಭವವಾಗುವುದು ; ತಾನು ಸಚ್ಚಿದಾನಂದ ರೂಪವೆಂಬ ಅನುಭವವಾಗುವುದು. ಇದು ಪಾರಮಾರ್ಥಿಕ ಸತ್ಯ.
  • ೮] ಸಂಸಾರವು ಅಥವಾ ಈ ದ್ವೈತ ಜಗತ್ತು : ಈ ಸಂಸಾರವು ಅಥವಾ ಬೇರೆ ಬೇರೆ, ಅನೇಕ, ಎಂಬ ಭಾವವು ಅವಿದ್ಯೆ [ಅಜ್ಞಾನ]ಯಿಂದ ಉಂಟಾದುದು. ಜ್ಞಾನದಿಂದ ಮಾತ್ರಾ ತನ್ನನ್ನು [ಬ್ರಹ್ಮವನ್ನು] ನಿಜವಾದ ರೂಪವನ್ನು ಅರಿಯಬಹುದು. ಕರ್ಮಯೋಗ, ರಾಜಯೋಗ, ಭಕ್ತಿಯೊಗ ಇವು ಸಾಧಕನ ಮನಸ್ಸನ್ನು ಶುದ್ಧಿಗೋಳಿಸಲು ಪ್ರಯೋಜನ. ಅವಿದ್ಯೆ ಅಥವ ಅಜ್ಞಾನ ದೂರವಾದರೆ ತಾನೇ ಜ್ಞಾನವಾಗುವುದು.

ಜ್ಞಾನ ಮತ್ತು ಮುಕ್ತಿ :


  • ಬ್ರಹ್ಮ ಜ್ಞಾನವು ಹೊರಗಡೆಯಿಂದ ಏನನ್ನೋ ತನ್ನಲ್ಲಿ ಇರದೆ ಇರುವುದನ್ನು ಪಡೆಯುವುದಲ್ಲ. ಕಾಣದ್ದನ್ನು ಕಾಣುವುದಲ್ಲ. ಏಕೆಂದರೆ ಬ್ರಹ್ಮ ವು ನೋಡಲ್ಪಡುವ ವಸ್ತುವಲ್ಲ. ಅದು ನೋಡುವ ಚೈತನ್ಯ - ಸಾಕ್ಷಿ. ಅವಿದ್ಯೆ- ಅಜ್ಞಾನವನ್ನು ದೂರಮಾಡುವುದೇ ಬ್ರಹ್ಮ ಜ್ಞಾನ ಮತ್ತು ಮುಕ್ತಿ.

ವೇದಗಳ ಆಧಾರ :-

  • ಮಹಾವಾಕ್ಯಗಳು : ಶ್ರೀ ಶಂಕರರು ತಮ್ಮ ಅದ್ವೈತ ಸಿದ್ಧಾಂತಕ್ಕೆ ನಾಲ್ಕು ವೇದಗಳಿಂದ ಪ್ರತಿಯೊಂದರಿಂದಲೂ ಒಂದೊಂದು ವಾಕ್ಯವನ್ನು ಆಯ್ದು ಕೊಂಡಿದ್ದಾರೆ.
  • ಋಗ್ವೇದ -ಐತರೇಯ ಉಪನಿಷತ್-ಪ್ರಜ್ಞಾನಂ ಬ್ರಹ್ಮ -ಸಾಕ್ಷಿಯೇ ಬ್ರಹ್ಮ. ;
  • ಯಜುರ್ವೇದ - ಬೃಹದಾರಣ್ಯಕ - ಅಹಂ ಬ್ರಹ್ಮಾಸ್ಮಿ - ನಾನು ಬ್ರಹ್ಮನೇ ಆಗಿದ್ದೇನೆ ;
  • ಸಾಮವೇದ - ಛಾಂದೋಗ್ಯ - ತತ್ವಮಸಿ - ನೀನು ಅದೇ ಆಗಿದ್ದೀಯೆ ;
  • ಅಥರ್ವ ವೇದ - ಮಾಂಡೂಕ್ಯ ಉಪನಿಷತ್ - ಅಯಮಾತ್ಮಾ ಬ್ರಹ್ಮ - ಈ ಆತ್ಮವು ಬ್ರಹ್ಮ ವಾಗಿದೆ.

ಮಾಯಾವಾದ :-


  • ಈಶ್ವರ - ಸಗುಣ ಬ್ರಹ್ಮ : ಪರಬ್ರಹ್ಮ ವು ನಿರ್ಗುಣ ಸ್ವರೂಪದ್ದಾಗಿದೆ. ಮಾಯೆಯು ಬ್ರಹ್ಮನ ಶಕ್ತಿ . ಅದು ಪರಬ್ರಹ್ಮನೊಡನೆ ಸೇರಿ ಅಪರಬ್ರಹ್ಮ ಎನಿಸಿಕೊಳ್ಳುತ್ತದೆ ಮತ್ತು ಸಗುಣ ಬ್ರಹ್ಮವೆನಿಸಿಕೊಳ್ಳುತ್ತದೆ. ಅದೇ ಈಶ್ವರ, ಸೃಷ್ಟಿಕರ್ತ. ಆದರೆ ಬ್ರಹ್ಮ ನಿಗೆ ಮಾಯೆಯ ಸೋಂಕು ಇಲ್ಲ. ಅದು [ಮಾಯೆ] ಬ್ರಹ್ಮನನ್ನು ಆಶ್ರಯಿಸಿ ಪ್ರಪಂಚವನ್ನು ಅಲ್ಲಿ ತೋರಿಸುತ್ತದೆ. ಅದು ಪಾರಮಾರ್ಥಿಕ ಸತ್ಯವಲ್ಲ. ವ್ಯವಹಾರಿಕ ಸತ್ಯ. ಅದನ್ನು ಸರಿಯಾಗಿ ವಿವರಿಸುವುದು ಅಸಾಧ್ಯ. ಆದ್ದರಿಂದ ಅದು ಅನಿರ್ವಚನೀಯ. ಅದು ಅನಾದಿ. ಅದು ತನ್ನ ವಿಕ್ಷೇಪ ಶಕ್ತಿಯಿಂದ ಬ್ರಹ್ಮವು ಜೀವವಾಗಿ ಕಾಣುವಂತೆ ಮಾಡುತ್ತದೆ. ಪ್ರಪಂಚವು ಸತ್ಯವಾಗಿ ತೋರುವಂತೆ ಮಾಡುತ್ತದೆ. ಆವರಣ ಶಕ್ತಿಯಿಂದ ಬ್ರಹ್ಮವನ್ನು ಮರೆ ಮಾಡುತ್ತದೆ. ಈ ಮಾಯೆಯು ಇಲ್ಲದ್ದನ್ನು ಇರುವಂತೆ ತೋರಿಸುವುದು. ಉದಾಹರಣೆಗೆ ಹಗ್ಗ ಹಾವಾಗಿ ತೋರುವುದು. ಕಾರ್ಯವೇ ಕಾರಣವಾಗಿ ಇರುವುದಿಲ್ಲ. ಮಡಕೆ ಮಣ್ಣಾಗಿರುವಂತೆ. ಆದ್ದರಿಂದ ಇದನ್ನು ವಿವರ್ತವಾದವೆಂದೂ ಹೇಳುವರು.
  • (ಟಿಪ್ಪಣಿ : ಬ್ರಹ್ಮ ವು (ದೇವರು) ಈ ಜಗತ್ತನ್ನು ಏಕೆ ಸೃಷ್ತಿಸಿತು? ಈ ಮಾಯೆ ಎಂದರೆ ಏನು -ಅದು ಏಕೆ ಇದೆ? ಇವಕ್ಕೆ ಉತ್ತರವಿಲ್ಲ , ಅಥವಾ ಮಾನವನ ಬುದ್ಧಿಗೆ ನಿಲುಕದು ಆದ್ದರಿಂದ ಅನಿರ್ವಚನೀಯ.! ಮಂಕುತಿಮ್ಮನ ಕಗ್ಗದಲ್ಲಿ ಡಿವಿಜಿ ಇದೇ ಪ್ರಶ್ನೆ ಕೇಳುತ್ತಾರೆ - ಉತ್ತರ ಸಿಗದು)
ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ|
ಮಹಿಮೆಯಿಂ ಜಗವಾಗಿ ಜೀವವೇಷದಲಿ||
ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ|
ಗಹನ ತತ್ವಕೆ ಶರಣೊ - ಮಂಕುತಿಮ್ಮ||
  • ( ವಿಹರಿಪುದು ಅದು (ಮಾಯೆ?) ಒಳ್ಳಿತೆಂಬುದು ನಿಸದವಾದೊಡೆ-ನಿಜವಾದೊಡೆ)

ಸಾಧನಾ ಚತುಷ್ಟಯ :


  • ಬ್ರಹ್ಮ ಜ್ಞಾನವು ಅಥವಾ ಅದ್ವೈತ ಸಿದ್ಧಿಯು ಅನುಭವದಲ್ಲಿ ಪರ್ಯವಸಾನ ಗೊಳ್ಳವುದು. ಅದಕ್ಕೆ ಅಧಿಕಾರಿಯಾಗಿ ಜ್ಞಾನವನ್ನು ಪಡೆಯಲು ನಾಲ್ಕು ಸಾಧನೆಗಳು ಅವಶ್ಯ. :
  • ೧] ನಿತ್ಯಾನಿತ್ಯ ವಿವೇಕ :-ಬ್ರಹ್ಮವು ಒಂದೇ ಸತ್ಯ, ಉಳಿದವು ಅನಿತ್ಯವೆಂಬ ವಿವೇಕ.
  • ೨] ಇಹಾಮುತ್ರ ಫಲಭೋಗವಿರಾಗ :- ಈ ಲೋಕದ, ಪರಲೋಕದ ಭೋಗದ ಬಗೆಗೆ ವಿರಕ್ತಿ.
  • ೩] ಶಮದಮಾದಿ ಶಟ್ಕ ಸಂಪತ್ತಿ :- ಸಾಧನ ಸಂಪತ್ತಿ - ಆರು ಗುಣಗಳು : ಶಮ - ಶಾಂತಿ [ಅಂತರಂಗದಲ್ಲಿ ಇಂದ್ರಿಯಗಳ ಹತೋಟಿ], ದಮ- ಇಂದ್ರಿಯ ನಿಗ್ರಹ [ಬಹಿರಂಗದಲ್ಲಿ ಇಂದ್ರಿಯಗಳ ಹತೋಟಿ] ; ಉಪರತಿ - ಕರ್ಮ ಫಲತ್ಯಾಗ ; ತಿತಿಕ್ಷೆ - ಸಹನೆ [ತಾಪತ್ರಯಗಳ ಸಹನೆ], ಚಿತ್ತದ ಏಕಾಗ್ರತೆ ; ಶ್ರದ್ಧೆ - ಗುರುಹಾಗೂ ವೇದಾಂತದಲ್ಲಿ ನಿಷ್ಟೆ .
  • ಇದನ್ನು ಶ್ರವಣ ಮನನ, ನಿಧಿಧ್ಯಾಸನ ಎಂಬ ಮೂರು ವಿಧದ ಸಾಧನೆಯಿಂದ ಪಡೆದುಕೊಳ್ಳಬೇಕು.
  • ೪ ] ಮುಮುಕ್ಷತ್ವ :- ಮೋಕ್ಷ ಬೇಕೆಂಬ ತೀವ್ರ ಅಪೇಕ್ಷೆ. ಇದನ್ನು ಶ್ರವಣ ಮನನ, ನಿಧಿಧ್ಯಾಸನ ಎಂಬ ಮೂರು ವಿಧದ ಸಾಧನೆಯಿಂದ ಪಡೆದುಕೊಳ್ಳಬೇಕು.[೧]

[೨][೩]

** ಓಂ ತತ್ ಸತ್ **

ನೋಡಿ


ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ
ಚಾರ್ವಾಕ ದರ್ಶನ ಜೈನ ದರ್ಶನ ಬೌದ್ಧ ದರ್ಶನ ಸಾಂಖ್ಯ ದರ್ಶನ
ರಾಜಯೋಗ ನ್ಯಾಯ ವೈಶೇಷಿಕ ದರ್ಶನ ಮೀಮಾಂಸ ದರ್ಶನ
ಆದಿ ಶಂಕರರು ಮತ್ತು ಅದ್ವೈತ ಅದ್ವೈತ- ಜ್ಞಾನ-ಕರ್ಮ ವಿವಾದ ವಿಶಿಷ್ಟಾದ್ವೈತ ದರ್ಶನ ದ್ವೈತ ದರ್ಶನ
ಮಾಧ್ವ ಸಿದ್ಧಾಂತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಭಗವದ್ಗೀತಾ ತಾತ್ಪರ್ಯ
ಕರ್ಮ ಸಿದ್ಧಾಂತ ವೀರಶೈವ ತತ್ತ್ವ ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ ಮೋಕ್ಷ ಗೀತೆ ಬ್ರಹ್ಮಸೂತ್ರ

ಚಾರ್ವಾಕ ದರ್ಶನ ;ಜೈನ ಧರ್ಮ- ಜೈನ ದರ್ಶನ ;ಬೌದ್ಧ ಧರ್ಮ ;ಸಾಂಖ್ಯ-ಸಾಂಖ್ಯ ದರ್ಶನ ;(ಯೋಗ)->ರಾಜಯೋಗ ;ನ್ಯಾಯ ದರ್ಶನ ;ವೈಶೇಷಿಕ ದರ್ಶನ;;ಮೀಮಾಂಸ ದರ್ಶನ - ;ವೇದಾಂತ ದರ್ಶನ / ಉತ್ತರ ಮೀಮಾಂಸಾ ;ಅದ್ವೈತ ;ಆದಿ ಶಂಕರರು ಮತ್ತು ಅದ್ವೈತ ;ವಿಶಿಷ್ಟಾದ್ವೈತ ದರ್ಶನ ;ದ್ವೈತ ದರ್ಶನ - ಮಾಧ್ವ ಸಿದ್ಧಾಂತ ;ಪಂಚ ಕೋಶ--ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ;ವೀರಶೈವ;ಬಸವಣ್ಣ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆ;ಭಗವದ್ಗೀತಾ ತಾತ್ಪರ್ಯ ;ಕರ್ಮ ಸಿದ್ಧಾಂತ ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆವೇದಗಳು--ಕರ್ಮ ಸಿದ್ಧಾಂತ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಮೋಕ್ಷ-ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ

  • ಆದಿ ಶಂಕರ
  • ದರ್ಶನಶಾಸ್ತ್ರ
  • ಪ್ರತಿಕ್ರಿಯೆ, -ತಿದ್ದುಪಡಿ - ಸಲಹೆ ಕೊಡಲು ಈ ಮೇಲಿನ ಎಡಗಡೆ ಇರುವ- 'ಚರ್ಚೆ' ಪುಟಕ್ಕೆ ಹೋಗಿ. ಅಲ್ಲಿ ಬದಲಾಯಿಸಿಗೆ ಕ್ಲಿಕ್ ಮಾಡಿ ಕೆಳಗಡೆ ಸಲಹೆ ಟೈಪು ಮಾಡಿ ;

ಆಧಾರ

  • ೧.ಭಾರತೀಯ ತತ್ವ ಶಾಸ್ತ್ರ ಪರಿಚಯ ಲೇ. ಎಂ. ಪ್ರಭಾಕರ ಜೋಶಿ ಮತ್ತು ಎಂ.ಎಂ. ಹೆಗಡೆ ; ಎಂಜಿಸಿ ಕಾಲೇಜು ಸಿದ್ದಾಪುರ
  • ೨ ತತ್ವ ಪ್ರಕಾಶ :(ಪೀಠಿಕೆ ) ಸಂಪಾದಕರು ಶ್ರೀಎಂಜಿ ನಂಜುಂಡಾರಾಧ್ಯ ಆಸ್ಥಾನ ವಿದ್ವಾನ್ ಪ್ರಕಟಣೆ ೧೯೭೩
  • ೩. ವಿಕಿ ಪೀಡಿಯಾ ಫೈಲುಗಳು ; ಇತರೆ ಲೇಖನಗಳು
  • ೪. ಮಾಧವೀಯ ಶಂಕರ ವಿಜಯ

ಉಲ್ಲೇಖ

  1. ಭಾರತೀಯ ತತ್ವ ಶಾಸ್ತ್ರ ಪರಿಚಯ ಲೇ. ಎಂ. ಪ್ರಭಾಕರ ಜೋಶಿ ಮತ್ತು ಎಂ.ಎಂ. ಹೆಗಡೆ ; ಎಂಜಿಸಿ ಕಾಲೇಜು ಸಿದ್ದಾಪುರ
  2. ತತ್ವ ಪ್ರಕಾಶ :(ಪೀಠಿಕೆ ) ಸಂಪಾದಕರು ಶ್ರೀಎಂಜಿ ನಂಜುಂಡಾರಾಧ್ಯ ಆಸ್ಥಾನ ವಿದ್ವಾನ್ ಪ್ರಕಟಣೆ ೧೯೭೩
  3. ಮಾಧವೀಯ ಶಂಕರ ವಿಜಯ|