ವಿಷಯಕ್ಕೆ ಹೋಗು

ಭಾಮಿನೀ ಷಟ್ಪದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾಮಿನೀ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು.ಕುಮಾರವ್ಯಾಸನ ಗದುಗಿನ ಭಾರತವಿರುವುದು ಈ ಛಂದಸ್ಸಿನಲ್ಲಿಯೆ. ಭಾಮಿನೀ ಷಟ್ಪದಿಯ ಪದ್ಯವೊಂದರಲ್ಲಿ ಆರು ಸಾಲುಗಳಿರುತ್ತವೆ. ಮೂರನೆಯ, ಆರನೆಯ ಸಾಲುಗಳಲ್ಲಿ ೭ ಮಾತ್ರೆಗಳ ಮೂರುಗಣಗಳೂ ಹಾಗು ಒಂದು ಗುರು ಇರುತ್ತವೆ. ಮಿಕ್ಕ ಸಾಲುಗಳಲ್ಲಿ ೭ ಮಾತ್ರೆಗಳ ಎರಡು ಗಣಗಳಿರುತ್ತವೆ. ಮತ್ತೊಂದು ಪ್ರಮುಖ ನಿಯಮವೆಂದರೆ, ೭ ಮಾತ್ರೆಗಳ ಗಣಗಳು ಕಡ್ಡಾಯವಾಗಿ ೩+೪ ಮಾದರಿಯಲ್ಲಿರಬೇಕು. ಅಂದರೆ ೩ ಮಾತ್ರೆಯ ಗಣದ ನಂತರ ೪ ಮಾತ್ರೆಯ ಗಣವು ಬಂದು, ಒಟ್ಟು ೭ ಮಾತ್ರೆಗಳ ಗಣವಾಗಬೇಕು. ಪದ್ಯವು ಆದಿಪ್ರಾಸದಿಂದ ಕೂಡಿರುತ್ತದೆ. ಉದಾಹರಣೆಯಾಗಿ ಗದುಗಿನ ಭಾರತದ ಈ ಪ್ರಸಿದ್ಧ ಪದ್ಯವನ್ನು ನೋಡಿ:

ವೇದಪುರುಷನ ಸುತನ ಸುತನ ಸ
ಹೋದರನ ಹೆಮ್ಮಗನ ಮಗನ ತ
ಳೋದರಿಯ ಮಾತುಳನ ಮಾವನನತುಳಭುಜಬಲದಿ
ಕಾದು ಗೆಲಿದನನಣ್ಣನವ್ವೆಯ 
ನಾದಿನಿಯ ಜಠರದಲಿ ಜನಿಸಿದ
ನಾದಿಮೂರುತಿ ಸಲಹೊ ಗದುಗಿನ ವೀರನಾರಯಣ

ಈ ಪದ್ಯವನ್ನು ಗಣಗಳಾಗಿ ವಿಂಗಡಿಸಿದಾಗ ಹೀಗೆ ಕಾಣುವುದು:

ವೇದ| ಪುರುಷನ | ಸುತನ| ಸುತನ ಸ
ಹೋದ|ರನ ಹೆ|ಮ್ಮಗನ| ಮಗನ ತ
ಳೋದ|ರಿಯ ಮಾ|ತುಳನ| ಮಾವನ|ನತುಳ|ಭುಜಬಲ|ದಿ
ಕಾದು| ಗೆಲಿದನ|ನಣ್ಣ|ನವ್ವೆಯ 
ನಾದಿ|ನಿಯ ಜಠ|ರದಲಿ| ಜನಿಸಿದ
ನಾದಿ|ಮೂರುತಿ | ಸಲಹೊ| ಗದುಗಿನ | ವೀರ|ನಾರಯ|ಣ

'|' ಸಂಜ್ಞೆ ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವುದನ್ನು ಗಮನಿಸಿ:

೩|೪|೩|೪
೩|೪|೩|೪
೩|೪|೩|೪|೩|೪|-
೩|೪|೩|೪
೩|೪|೩|೪
೩|೪|೩|೪|೩|೪|-

ಮತ್ತೊಂದು ಉದಾಹರಣೆ:

ಅಂಬು | ಜಾನನೆ | ಕೇಳು | ತಾಂಡವ
ನೆಂಬ | ಮುನಿಪಿತೃ | ಮಾತೃ | ಸೇವಾ
ಲಂಬ | ಕನುತೊಳ | ಲಿದನು | ನಾನಾ | ತೀರ್ಥ | ಯಾತ್ರೆಯ | ಲಿ
ಅಂಬು | ವನುತರ | ಲೆಂದು | ಪಿತೃಗಳ
ಕಂಬಿ | ಯನುನೇ | ರಿರಿಸಿ | ಚರ್ಮದ
ತಂಬು | ಗೆಯಕೊಂ |ಡರಸು | ತಿರುಳೈ | ದಿದನು | ಜೀವನ | ವ

ಉಲ್ಲೇಖ

[ಬದಲಾಯಿಸಿ]