ವಿಷಯಕ್ಕೆ ಹೋಗು

ಬೋಡೆನ್ ಸಂಸ್ಕೃತ ಪ್ರಾಧ್ಯಾಪಕ ಹುದ್ದೆ ಚುನಾವಣೆ, 1860

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೊನಿಯರ್ ವಿಲಿಯಮ್ಸ್, 1860 ರಲ್ಲಿ ಸಂಸ್ಕೃತದ ಎರಡನೇ ಬೋಡೆನ್ ಪ್ರೊಫೆಸರ್ ಆಗಿ ಆಯ್ಕೆಯಾದರು; ಈ ಛಾಯಾಚಿತ್ರವನ್ನು ಲೆವಿಸ್ ಕ್ಯಾರೊಲ್ ತೆಗೆದಿದ್ದಾರೆ.

1860 ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಬೋಡೆನ್ ಪ್ರಾಧ್ಯಾಪಕ ಹುದ್ದೆಗೆ ನಡೆದ ಚುನಾವಣೆಯು ಸಂಸ್ಕೃತ ವಿದ್ಯಾರ್ಜನೆಗೆ ಬೇರೆಬೇರೆ ದಾರಿ ಕಂಡುಕೊಂಡ ಇಬ್ಬರು ಅಭ್ಯರ್ಥಿಗಳ ನಡುವಿನ ಸ್ಪರ್ಧೆಯಾಗಿತ್ತು. ಆಕ್ಸ್‌ಫರ್ಡ್-ನಲ್ಲಿ ಓದಿದ್ದ ಆಂಗ್ಲ ಮೊನಿಯರ್ ವಿಲಿಯಮ್ಸ್ , 14 ವರ್ಷ ಈಸ್ಟ್ ಇಂಡಿಯಾ ಕಂಪನಿಗಾಗಿ ಭಾರತದಲ್ಲಿ ಕೆಲಸ ಮಾಡಲು ತಯಾರಿ ನಡೆಸುತ್ತಿರುವ ಬ್ರಿಟಿಷರಿಗೆ ಸಂಸ್ಕೃತ ಕಲಿಸುತ್ತ ಕಳೆದಿದ್ದರು. ಜರ್ಮನ್ ಮೂಲದ ಮ್ಯಾಕ್ಸ್ ಮುಲ್ಲರ್, ಆಕ್ಸ್‌ಫರ್ಡ್‌ನಲ್ಲಿ ಭಾಷಾ ವಿಜ್ಞಾನದಲ್ಲಿ ಪರಿಣತಿ ಹೊಂದಿದ್ದ ಉಪನ್ಯಾಸಕರಾಗಿದ್ದರು . ಋಗ್ವೇದದ ಆವೃತ್ತಿಯ ಮೇಲೆ ಅವರ ಹಲವು ವರ್ಷಗಳ ಕೆಲಸ ಹಾಗೂ ಪಾಂಡಿತ್ಯಕ್ಕಾಗಿ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದ್ದರು. ವಿಲಿಯಮ್ಸ್ ನಂತರದ ಪಠ್ಯಗಳ ಮೇಲೆ ಕೆಲಸ ಮಾಡಿದ್ದವರು; ಮುಲ್ಲರರ "ಕಾಂಟಿನೆಂಟಲ್" [lower-alpha ೧] ಸಂಸ್ಕೃತ ಶಾಲೆಗೆ ಅಷ್ಟು ಗಮನ ಕೊಟ್ಟಿರಲಿಲ್ಲ . ವಿಲಿಯಮ್ಸ್ ಸಂಸ್ಕೃತದ ಅಧ್ಯಯನವನ್ನು, ಭಾರತವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸುವುದಕ್ಕೆ ಒಂದು ಮಾರ್ಗ ಎಂದು ಪರಿಗಣಿಸಿದ್ದರಷ್ಟೆ. ಮುಲ್ಲರ್, ತಮ್ಮ ಕೆಲಸ ಮಿಷನರಿಗಳಿಗೆ ಸಹಾಯ ಮಾಡಿದ್ದಾಗ್ಯೂ, ಅದು ಸ್ವತಃ ಒಂದು ಅಂತ್ಯವಾಗಿ ಮೌಲ್ಯಯುತವಾಗಿದೆಯೆಂದು ನಂಬಿದ್ದರು.

1857 ರ ಭಾರತೀಯ ದಂಗೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಬ್ರಿಟನ್‌ನ ಪಾತ್ರದ ಬಗ್ಗೆ ಸಾರ್ವಜನಿಕ ಚರ್ಚೆ ಆಗುತ್ತಿದ್ದ ಸಮಯದಲ್ಲಿ ಈ ಚುನಾವಣೆ ಬಂದಿತ್ತು. ಭಾರತವನ್ನು ಪರಿವರ್ತಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕೆ ಅಥವಾ ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಸಂವೇದನಾಶೀಲವಾಗಿರಬೇಕೇ ಎಂಬ ಬಗ್ಗೆ ವಾದವಿವಾದ ನಡೆದಿತ್ತು. ಪ್ರಣಾಳಿಕೆಗಳು ಮತ್ತು ವೃತ್ತಪತ್ರಿಕೆ ಪತ್ರಗಳ ಮೂಲಕ ಇಬ್ಬರೂ 3,700 ಕ್ಕೂ ಹೆಚ್ಚು ಪದವೀಧರರ ಮತಗಳಿಗಾಗಿ ಹೋರಾಡಿದರು. ಕ್ರಿಶ್ಚಿಯನ್ ಧರ್ಮಗ್ರಂಥಗಳ ಪ್ರಸಾರದ ಮೂಲಕ ಭಾರತವನ್ನು ಪರಿವರ್ತಿಸಲು ಪ್ರಾಧ್ಯಾಪಕ ಸಹಾಯ ಮಾಡಬೇಕೆಂಬ ಪ್ರಾಧ್ಯಾಪಕ ಪೀಠದ ಮೂಲ ಸಂಸ್ಥಾಪಕರ ಉದ್ದೇಶದ ಮೇಲೆ ವಿಲಿಯಮ್ಸ್ ತನ್ನ ಅಭಿಯಾನದಲ್ಲಿ ಬಹಳ ಒತ್ತು ನೀಡಿದರು. ಋಗ್ವೇದದ ಕುರಿತಾದ ಕೆಲಸವು ಮಿಷನರಿಗಳಿಗೆ ಬಹೂಪಯುಕ್ತ ಎಂದು ಮುಲ್ಲರ್ ವಾದಿಸಿ ಪತ್ರಗಳನ್ನು ಪ್ರಕಟಿಸಿದರು. ಮಿಷನರಿಗಳು, ವಿದ್ವಾಂಸರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಅನುಕೂಲವಾಗುವಂತೆ ಭಾರತೀಯ ಇತಿಹಾಸ ಮತ್ತು ಸಾಹಿತ್ಯದಂತಹ ವ್ಯಾಪಕ ವಿಷಯಗಳನ್ನು ಕಲಿಸುವ ಅವರ ಪ್ರಸ್ತಾಪವನ್ನು ವಿಲಿಯಮ್ಸ್ , ಪೀಠದ ಮೂಲ ಸಂಸ್ಥಾಪಕರ ಇಚ್ಛೆಗೆ ಅನುಗುಣವಾಗಿಲ್ಲ ಎಂದು ಟೀಕಿಸಿದರು. ಪ್ರತಿಸ್ಪರ್ಧಿಗಳು ಪ್ರಚಾರದ ಅಂಗವಾಗಿ ವೃತ್ತಪತ್ರಿಕೆ ಜಾಹೀರಾತುಗಳನ್ನು ಮತ್ತು ಪ್ರಣಾಳಿಕೆಗಳನ್ನು ಪ್ರಕಟಿಸಿದರು ಮತ್ತು ಇಬ್ಬರನ್ನೂ ವಿವಿಧ ಪತ್ರಿಕೆಗಳು ಬೆಂಬಲಿಸಿದವು. ಪಾಂಡಿತ್ಯದಲ್ಲಿ ವಿಲಿಯಮ್ಸ್‌ಗಿಂತ ಶ್ರೇಷ್ಠರೆಂದು ಪರಿಗಣಿಸಲಾಗಿದ್ದರೂ, ಮುಲ್ಲರರ ಜರ್ಮನ್ ಮೂಲ ಮತ್ತು ಉದಾರವಾದಿ ಕ್ರಿಶ್ಚಿಯನ್ ಧೋರಣೆಗಳೆರಡೂ (ಕೆಲವರ ದೃಷ್ಟಿಯಲ್ಲಿ) ಅನನುಕೂಲತೆಗಳಾಗಿದ್ದವು. ಭಾರತವನ್ನು ಆಳುವ ಮತ್ತು ಪರಿವರ್ತಿಸುವ ಕೆಲಸಕ್ಕೆ ಸಹಾಯ ಮಾಡಲು ಇಂಗ್ಲಿಷರನ್ನೇ ಬೋಡೆನ್ ಪ್ರಾಧ್ಯಾಪಕರನ್ನಾಗಿ ನೇಮಿಸುವುದು ರಾಷ್ಟ್ರೀಯ ಹಿತಾಸಕ್ತಿಗೆ ಒಳ್ಳೆಯದೆಂಬ ವಾದದ ಮೇಲೆ ಕೆಲವು ವೃತ್ತಪತ್ರಿಕೆಗಳು ವಿಲಿಯಮ್ಸ್ ಪರ ಬರೆದವು.

ದೂರದ ಸದಸ್ಯರಿಗೆ ಮತ ಚಲಾಯಿಸಲನುಕೂಲವಾಗುವಂತೆ ಆಕ್ಸ್‌ಫರ್ಡ್‌ಗೆ ವಿಶೇಷ ರೈಲುಗಳನ್ನು ಚುನಾವಣೆಯ ದಿನ, 7 ಡಿಸೆಂಬರ್ 1860 ರಂದು, ಒದಗಿಸಲಾಯಿತು. ಕಠಿಣ ಹೋರಾಟದ ಕೊನೆಯಲ್ಲಿ, ವಿಲಿಯಮ್ಸ್ 220 ಮತಗಳ ಬಹುಮತದಿಂದ ಗೆದ್ದರು. ನಂತರ, ಅವರು ಆಕ್ಸ್‌ಫರ್ಡ್‌ನಲ್ಲಿ ಭಾರತೀಯ ಸಂಸ್ಥೆಯನ್ನು ಸ್ಥಾಪಿಸಲು ಸಹಾಯ ಮಾಡಿದರು, ನೈಟ್‌ಹುಡ್ ಪಡೆದರು ಮತ್ತು 1899 ರಲ್ಲಿ ಅವರ ಮರಣದ ತನಕ ಹುದ್ದೆ ಹೊಂದಿದ್ದರು. ಮುಲ್ಲರ್, ತನ್ನ ಸೋಲಿನಿಂದ ತೀವ್ರವಾಗಿ ನಿರಾಶೆಗೊಂಡಿದ್ದರೂ, ತನ್ನ ವೃತ್ತಿಜೀವನದ ಉಳಿದ ಅವಧಿಗೆ ಆಕ್ಸ್‌ಫರ್ಡ್‌ನಲ್ಲಿಯೇ ಇದ್ದರು, ಆದರೆ ಅಲ್ಲಿ ಸಂಸ್ಕೃತವನ್ನು ಕಲಿಸಲೇ ಇಲ್ಲ. 1860 ರದ್ದು ಕೊನೆಯ ಬೋಡೆನ್ ಪ್ರಾಧ್ಯಾಪಕ ಚುನಾವಣೆ; ಸಂಸತ್ ಸುಧಾರಣೆಗಳ ಪರಿಣಾಮವಾಗಿ 1882 ರಲ್ಲಿ ಚುನಾಯಿಸುವ ಅಧಿಕಾರ ತೆಗೆದುಹಾಕಲಾಯಿತು. ಈ ಪ್ರಾಧ್ಯಾಪಕತ್ವ ಇನ್ನೂ ಅಸ್ತಿತ್ವದಲ್ಲಿದೆ ಮತ್ತು ಈಗ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಉಳಿದಿರುವ ಕೊನೆಯ ಸಂಸ್ಕೃತ ಪ್ರಾಧ್ಯಾಪಕತ್ವವಾಗಿದೆ.

ಹಿನ್ನೆಲೆ

[ಬದಲಾಯಿಸಿ]

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಬೋಡೆನ್ ಪ್ರಾಧ್ಯಾಪಕ ಹುದ್ದೆಯನ್ನು 1811 ರಲ್ಲಿ ನಿಧನರಾದ ಬಾಂಬೆ ಸ್ಥಳೀಯ ಪದಾತಿ ದಳದ ಲೆಫ್ಟಿನೆಂಟ್ ಕರ್ನಲ್ ಜೋಸೆಫ್ ಬೋಡೆನ್ ಅವರ ಉಯಿಲಿನ ಮೂಲಕ ಸ್ಥಾಪಿಸಲಾಯಿತು. ಅವರ ಮಗಳ ಮರಣಾ ನಂತರ (1827ರಲ್ಲಿ ಮಗಳು ತೀರಿಕೊಂಡಳು), ಅವರ ಆಸ್ತಿ ಸಂಸ್ಕೃತ ಪ್ರಾಧ್ಯಾಪಕ ಹುದ್ದೆ ನಡೆಸಲು ವಿಶ್ವವಿದ್ಯಾನಿಲಯಕ್ಕೆ ಹೋಗಬೇಕು ಎಂದು ಅವರು ಇಚ್ಛಿಸಿದ್ದರು. "ಪವಿತ್ರ ಗ್ರಂಥಗಳ ಜ್ಞಾನವನ್ನು ಹರಡುವ ಮೂಲಕ" [n 1] ಭಾರತದ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸುವುದು ಅವರ ಉದ್ದೇಶವಾಗಿತ್ತು. ವಿಶ್ವವಿದ್ಯಾನಿಲಯದ ಶಾಸನಗಳ ಪ್ರಕಾರ, ಪೀಠದ ಪ್ರಾಧ್ಯಾಪಕರನ್ನು, ಪ್ರಾಧ್ಯಾಪಕರು ಮತ್ತು ಕಾಲೇಜು ಸಹೋದ್ಯೋಗಿಗಳ ಬದಲಾಗಿ, ಘಟಿಕೋತ್ಸವದ ಸದಸ್ಯರು - ಆಕ್ಸ್‌ಫರ್ಡ್ ಮಾಸ್ಟರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದ ಎಲ್ಲರೂ, ವಿಶ್ವವಿದ್ಯಾಲಯದಲ್ಲಿ ಕಲಿಸಲಿ ಅಥವಾ ಇಲ್ಲದಿರಲಿ - ಆಯ್ಕೆ ಮಾಡಬೇಕಾಗಿತ್ತು; . [] 1860 ರ ಚುನಾವಣೆಯ ಸಮಯದಲ್ಲಿ ಘಟಿಕೋತ್ಸವದ ಸದಸ್ಯರ ಸಂಖ್ಯೆ 3786 ಇತ್ತು. [] ಧಾರ್ಮಿಕ ಇತಿಹಾಸಕಾರ ಗ್ವಿಲಿಮ್ ಬೆಕರ್‌ಲೆಗ್ ಪ್ರಕಾರ, ಆ ಸಮಯದಲ್ಲಿ ಪ್ರಾಧ್ಯಾಪಕ ಹುದ್ದೆಯನ್ನು "ಪ್ರತಿಷ್ಠಿತ ಮತ್ತು ಒಳ್ಳೆಯ ಸಂಬಳ ಇರುವ" ಹುದ್ದೆ ಎಂದು ಪರಿಗಣಿಸಲಾಗಿತ್ತು. 1860 ರಲ್ಲಿ ಬ್ರಿಟಿಷ್ ರಾಷ್ಟ್ರೀಯ ಪತ್ರಿಕೆ ದಿ ಟೈಮ್ಸ್‌ನ ಸಂಪಾದಕೀಯದಲ್ಲಿ ಈ ಪ್ರಾಧ್ಯಾಪಕತ್ವ "ಆಕ್ಸ್‌ಫರ್ಡ್‌ನಲ್ಲಷ್ಟೇ ಅಲ್ಲದೆ ಇಡೀ ನಾಗರಿಕ ಜಗತ್ತಿನಲ್ಲಿ ಅತ್ಯಂತ ಪ್ರಮುಖ, ಅತ್ಯಂತ ಪ್ರಭಾವಶಾಲಿ ಮತ್ತು ವ್ಯಾಪಕವಾಗಿ ತಿಳಿದಿರುವ ಸಂಸ್ಥೆಗಳಲ್ಲಿ ಒಂದಾಗಿದೆ" ಎನ್ನಲಾಗಿತ್ತು. [] ವರ್ಷಕ್ಕೆ £ 900 - £ 1,000ರಂತೆ ಜೀವನಪೂರ್ತಿ ಇದರ ಸಂಬಳವಾಗಿತ್ತು. []

1832 ರಲ್ಲಿ ಆಯ್ಕೆಯಾದ ಮೊದಲ ಬೋಡನ್ ಪ್ರಾಧ್ಯಾಪಕ, ಹೊರಾಸ್ ಹೇಮನ್ ವಿಲ್ಸನ್, ಮೇ 1860 8 ರಂದು ತೀರಿಕೊಂಡರು. ಭಾರತದಲ್ಲಿ ಬ್ರಿಟಿಷ್ ಮಿಷನರಿ ಕಾರ್ಯಗಳ ಬಗ್ಗೆ ಸಾರ್ವಜನಿಕ ಚರ್ಚೆ, 1857 ರ ಭಾರತೀಯ ದಂಗೆಯ ನಂತರ ಇನ್ನಷ್ಟು ತೀವ್ರವಾದ ಸಮಯದಲ್ಲಿ ಅವರ ಉತ್ತರಾಧಿಕಾರಿಯ ಚುನಾವಣೆ ಬಂದಿತು. 1858 ರವರೆಗೂ ಬ್ರಿಟಿಷ್ ಪ್ರಾಂತ್ಯಗಳನ್ನು ನಿಯಂತ್ರಿಸುತ್ತಿದ್ದ ಈಸ್ಟ್ ಇಂಡಿಯಾ ಕಂಪನಿ 1813 ರವರೆಗೆ ಧರ್ಮ ಸೇರಿದಂತೆ ಭಾರತೀಯ ವಿಷಯಗಳಲ್ಲಿ ಸಾಮಾನ್ಯವಾಗಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಕ್ರೈಸ್ತ ಮಿಷನರಿಗಳಿಗೆ ಮತಾಂತರಕ್ಕೆ ಪರವಾನಿಗೆ ಅಗತ್ಯವಿತ್ತಾದರೂ, ಬೇರೆ ಹಿನ್ನೆಲೆಯ ಕ್ರಿಶ್ಚಿಯನ್ನರು ಇತರ ನಂಬಿಕೆಗಳನ್ನು ಸಹಿಸಿಕೊಳ್ಳಲು ಸಿದ್ಧರಾಗಿರುವ ಯುಗದಲ್ಲಿ ಅಸಹಿಷ್ಣುಗಳೆಂದು ಪರಿಗಣಿಸಲಾಗುತ್ತಿದ್ದ ಇವಾಂಜೆಲಿಕಲ್‌ಗಳನ್ನು ಹೊರತುಪಡಿಸಿ ಹೆಚ್ಚಿನವರು ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸಬಹುದಾಗಿತ್ತು. ಇವಾಂಜೆಲಿಕಲ್ ಪಂಥ ಬಲದಲ್ಲಿ ವೃದ್ಧಿಸಿ ಒತ್ತಡ ತಂದಂತೆ ಕಂಪನಿ 1813ರಲ್ಲಿ ಮಿಷನರಿಗಳ ಮೇಲಿನ ಹತೋಟಿ ಸಡಿಲಿಸಿತು. [] 1858 ರ ನಂತರ, ಸ್ಥಳೀಯ ಸಂಪ್ರದಾಯಗಳಲ್ಲಿ ಹಸ್ತಕ್ಷೇಪ ಮಾಡಿ ಮತ್ತಷ್ಟು ಕಲಹ ಸಾಧಿಸುವುದು ಬ್ರಿಟಿಷ್ ಸರ್ಕಾರಕ್ಕೆ ಬೇಡವಾಗಿದ್ದರೂ ಭಾರತದ ಅಧಿಕಾರಿಗಳಲ್ಲಿ ಅನೇಕರು ಪರಿವರ್ತನಾ ಪ್ರಯತ್ನಗಳಿಗೆ ಸಹಾನುಭೂತಿ ಹೊಂದಿರುವವರೇ ಆಗಿದ್ದರು. ಬೆಕರ್‌ಲೆಗ್ ಹೇಳಿದಂತೆ, "ಭಾರತದಲ್ಲಿ ಬ್ರಿಟನ್‌ನ ಪಾತ್ರವೇನೆಂಬುದನ್ನು ನಿಶ್ಚಯಿಸುವ ಮತ್ತು ಭಾರತದಲ್ಲಿ ಬ್ರಿಟನ್‌ನ ಉಪಸ್ಥಿತಿಯನ್ನು ಸಮರ್ಥಿಸುವ ಪ್ರಯತ್ನಗಳೊಂದಿಗೆ ಕ್ರಿಶ್ಚಿಯನ್ ಮಿಷನ್‌ನ ಮುಂದುವರಿಕೆ ಬೇರ್ಪಡಿಸಲಾಗದಂತೆ ಸಿಕ್ಕಿಹಾಕಿಕೊಂಡಿತ್ತು." [] ಬ್ರಿಟನ್ ಭಾರತವನ್ನು ಬರೀ ಆಳಲೇ ಅಥವಾ ಅದನ್ನು "ನಾಗರಿಕಗೊಳಿಸಲೇ", "ನಾಗರಿಕ"ಗೊಳಿಸಲೆಂದಾದರೆ ಭಾರತದ ಸಂಸ್ಕೃತಿ ಮತ್ತು ಧರ್ಮಗಳ ಆಧಾರದ ಮೇಲೆಯೇ ಅಥವಾ ಅವನ್ನು ಕಿತ್ತೊಗೆದೇ ಎಂಬುದು ಪ್ರಶ್ನೆಯಾಗಿತ್ತು. [] ಭಾರತದಲ್ಲಿ ಇನ್ನಷ್ಟು ಮಿಷನರಿ ಕೆಲಸವನ್ನು ಬೆಂಬಲಿಸಿದವರಲ್ಲಿ ಅನೇಕರು, ದೇಶಕ್ಕೆ ಕ್ರಿಶ್ಚಿಯನ್ ಧರ್ಮವನ್ನು ತರಲು ಬ್ರಿಟನ್ ವಿಫಲವಾದುದಕ್ಕೆ 1857 ರ ಘಟನೆಗಳು "ದೈವೀ ತೀರ್ಪಿಗಿಂತ ಕಡಿಮೆಯಲ್ಲ" ಎಂದೇ ಪರಿಗಣಿಸಿದ್ದರೆಂದು ಬೆಕರ್‌ಲೆಗ್ ಹೇಳುತ್ತಾರೆ. []

ಭಾರತದ ಆಡಳಿತ ಮತ್ತು ಪರಿವರ್ತನೆಗೆ ನೆರವಾಗುವ ಉದ್ದೇಶಕ್ಕಾಗಿ ಸಂಸ್ಕೃತ ಕಲಿಕೆ ಅಥವಾ ಅದರ ಸ್ವಯಂಸಿದ್ಧ ಮೌಲ್ಯಕ್ಕಾಗಿ ಎಂಬ ಎರಡು ದೃಷ್ಟಿಕೋನಗಳು ಬ್ರಿಟನ್ನಿನಲ್ಲಿದ್ದವು. ಈಸ್ಟ್ ಇಂಡಿಯಾ ಕಂಪನಿಯು ತನ್ನ ಉದ್ಯೋಗಿಗಳಿಗೆ ಸ್ಥಳೀಯ ಸಂಸ್ಕೃತಿ ತಿಳಿಸಿಕೊಡಲು ಹರ್ಟ್‌ಫೋರ್ಡ್‌ಶೈರ್‌ನ ಹೈಲಿಬರಿಯಲ್ಲಿರುವ ಕಾಲೇಜು ಮತ್ತು ಕಲ್ಕತ್ತಾದ ಫೋರ್ಟ್ ವಿಲಿಯಂ ಕಾಲೇಜಿನಲ್ಲಿ ಸಂಸ್ಕೃತ ಕಲಿಕೆಯ ವ್ಯವಸ್ಥೆ ಮಾಡಿತ್ತು. ಇದರಿಂದ ಸಂಸ್ಕೃತ ಪಠ್ಯದರ್ಶಿತ ಭಾರತೀಯ ಧರ್ಮ ಮತ್ತು ಸಂಸ್ಕೃತಿಯಲ್ಲಿ ಕೆಲವರಲ್ಲಿ ಆಸಕ್ತಿ ಮೂಡಿತು. ಕಾಂಟಿನೆಂಟಲ್ ಯುರೋಪ್‌ನ ವಿದ್ವಾಂಸರು, ಸಾಮ್ರಾಜ್ಯಪಾಲನೆಯ ದೃಷ್ಟಿಯ ಬದಲು, ಸಂಸ್ಕೃತವನ್ನು "ಭಾಷೆಯ ವಿಜ್ಞಾನ", ತುಲನಾತ್ಮಕ ಭಾಷಾಶಾಸ್ತ್ರದ ಭಾಗವಾಗಿ ಪರಿಗಣಿಸಿ ಆಧ್ಯಯನ ಮಾಡಿದ್ದರು. ಆದರೆ ಭಾರತಕ್ಕೆ ಭೇಟಿ ನೀಡಿ, ವಾಸ ಮಾಡಿ ಕೆಲಸ ಮಾಡಿದವರಲ್ಲಿ ಬ್ರಿಟಿಷ್ ಸಂಸ್ಕೃತ ವಿದ್ವಾಂಸರೇ ಹೆಚ್ಚು . [] ಆದಾಗ್ಯೂ ಇತರ ಕ್ಷೇತ್ರಗಳಲ್ಲಿನ ಕೆಲವು ಬ್ರಿಟಿಷ್ ವಿದ್ವಾಂಸರು ಸಂಸ್ಕೃತದ ಬಗ್ಗೆ ತಾತ್ಸಾರದ ಧೋರಣೆ ಹೊಂದಿದ್ದರು. "ಲ್ಯಾಟಿನ್ ಮತ್ತು ಗ್ರೀಕ್‌ನಿಂದ ಅಷ್ಟಿಷ್ಚು ತೆಗೆದು ಮಾಡಿದ ಕಚ್ಚಾ ನಕಲು" ಅಥವಾ "ಬ್ರಿಟನ್ ಮತ್ತು ಬ್ರಾಹ್ಮಣರ ನಡುವೆ ಬೇಡವಾದ ಸಂಬಂಧದ ಪುರಾವೆಯಲ್ಲದೆ ಇನ್ನೇನಕ್ಕೂ ಪ್ರಯೋಜನಕ್ಕೆ ಬಾರದ್ದು" ಎಂದಾಗಿ ಅಮೇರಿಕನ್ ಅಕಾಡೆಮಿಕ್ ಲಿಂಡಾ ಡೌಲಿಂಗ್ ಈ ಧೋರಣೆಯನ್ನು ನಿರೂಪಿಸಿದ್ದಾರೆ. [೧೦]

ಅಭ್ಯರ್ಥಿಗಳು

[ಬದಲಾಯಿಸಿ]
ಮ್ಯಾಕ್ಸ್ ಮುಲ್ಲರ್, 1857 ರಲ್ಲಿ ಲೆವಿಸ್ ಕ್ಯಾರೊಲ್ ಅವರಿಂದ ಛಾಯಾಚಿತ್ರ

1860 ರಲ್ಲಿ ಹುದ್ದೆಗೆ ಐವರ ಹೆಸರು ಪ್ರಸ್ತಾಪವಾಗಿದ್ದರೂ, ಅಂತಿಮವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದವರು ಇಬ್ಬರು - ಮೋನಿಯರ್ ವಿಲಿಯಮ್ಸ್ ಮತ್ತು ಮ್ಯಾಕ್ಸ್ ಮುಲ್ಲರ್. ವಿಲಿಯಮ್ಸ್ ಒಬ್ಬ ಸೇನಾ ಅಧಿಕಾರಿಯ ಮಗನಾಗಿ ಭಾರತದಲ್ಲಿ ಜನಿಸಿದ್ದರು. ಭಾರತದಲ್ಲಿ ಆಡಳಿತಾತ್ಮಕ ಸೇವೆಗಾಗಿ ಹೈಲಿಬರಿಯಲ್ಲಿ ತರಬೇತಿ ಪಡೆಯುವ ಮೊದಲು ಅವರು ಆಕ್ಸ್‌ಫರ್ಡ್‌ನ ಬಲ್ಲಿಯೋಲ್ ಕಾಲೇಜಿನಲ್ಲಿ ಸ್ವಲ್ಪ ದಿನ ಅಧ್ಯಯನ ಮಾಡಿದ್ದರು. ಭಾರತದಲ್ಲಿನ ಯುದ್ಧವೊಂದರಲ್ಲಿ ಅವರ ಸಹೋದರನ ಮರಣದ ನಂತರ ಪದವಿ ಪೂರ್ಣಗೊಳಿಸಲು ಆಕ್ಸ್‌ಫರ್ಡ್‌ಗೆ ಮರಳಿದ್ದರು. ಅವರು ಹೈಲಿಬರಿಯಲ್ಲಿ ವಿಲ್ಸನ್ ಜೊತೆಗೆ ಸಂಸ್ಕೃತ ಅಧ್ಯಯನ ಮಾಡಿದ ನಂತರ, ಅಲ್ಲಿ 1844 ರಿಂದ 1858ರಲ್ಲಿ ಭಾರತೀಯ ದಂಗೆಯ ನಂತರ ಅದು ಮುಚ್ಚುವವರೆಗೆ ಭಾಷಾಶಿಕ್ಷಕರಾಗಿದ್ದರು. ವಿಲ್ಸನ್ ಅವರ ಮಾತಿನ ಮೇರೆಗೆ ಅವರು ಸಿದ್ಧಪಡಿಸಿದ ಇಂಗ್ಲಿಷ್-ಸಂಸ್ಕೃತ ನಿಘಂಟನ್ನು ಈಸ್ಟ್ ಇಂಡಿಯಾ ಕಂಪನಿ 1851 ರಲ್ಲಿ ಪ್ರಕಟಿಸಿತು. ಅವರ ಸಂಸ್ಕೃತ-ಇಂಗ್ಲಿಷ್ ನಿಘಂಟನ್ನು ಭಾರತದ ರಾಜ್ಯ ಕಾರ್ಯದರ್ಶಿ ಬೆಂಬಲಿಸಿದ್ದರು. [೧೧] ಡಚ್ ಮಾನವಶಾಸ್ತ್ರಜ್ಞ ಪೀಟರ್ ವ್ಯಾನ್ ಡೆರ್ ವೀರ್ ಬರೆದಂತೆ, ಬೋಡೆನ್ ಪೀಠ ಸ್ಥಾಪಿಸಲು ಯಾವ ದೃಷ್ಟಿಕೋನಗಳಿಂದ ಪ್ರೇರೇಪಿತರಾಗಿದ್ದರೊ ಅ ದೃಷ್ಟಿಕೋನಗಳಿಗೆ ವಿಲಿಯಮ್ಸ್ ಹೊಂದಿಕೊಂಡಿದ್ದು ಅವುಗಳಲ್ಲಿ ತೀವ್ರ ಉತ್ಸಾಹ ಹೊಂದಿದ್ದರು". [೧೨]

ಮುಲ್ಲರ್ ಅನ್ಹಾಲ್ಟ್-ಡೆಸ್ಸೌ ಜರ್ಮನ್ ರಾಜಮನೆತನದವರು. ಗ್ರೀಕ್ ಮತ್ತು ಲ್ಯಾಟಿನ್ ಪರಿಣತಿ ಗಳಿಸಿದ ನಂತರ ಹೊಸ ಬೌದ್ಧಿಕ ಸವಾಲೆಂದು ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತವನ್ನು ಕಲಿಯಲಾರಂಭಿಸಿದರು. [೧೩] ಆಗಿನ್ನೂ ಯುರೋಪ್‌ನಲ್ಲಿ ಸಂಸ್ಕೃತ ಹೊಸ ಅಧ್ಯಯನದ ವಿಷಯವಾಗಿದ್ದು, ಯೂರೋಪಿನ ಸಾಂಪ್ರದಾಯಿಕ ಶಾಸ್ತ್ರೀಯ ಭಾಷೆಗಳೊಂದಿಗೆ ಸಂಸ್ಕೃತದ ಸಂಪರ್ಕಗಳು ಅಲ್ಲಿನ ಭಾಷೆಗಳ ಸ್ವರೂಪ ಮತ್ತು ಇತಿಹಾಸದ ಸಂಶೋಧಕರ ಗಮನ ಸೆಳೆದಿದ್ದವು. [೧೪] ಮುಲ್ಲರರು 1843 ರಲ್ಲಿ 19 ನೇ ವಯಸ್ಸಿನಲ್ಲಿ ಲೀಪ್ಜಿಗ್ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದರು. ಬರ್ಲಿನ್ ನಲ್ಲಿ ಒಂದು ವರ್ಷದ ಅಧ್ಯಯನದ ನಂತರ ಅವರು ಪ್ಯಾರಿಸ್ ನಲ್ಲಿ ಋಗ್ವೇದದ ಮೊದಲ ಮುದ್ರಿತ ಆವೃತ್ತಿಯ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದರು. ಸಂಶೋಧನೆಗಾಗಿ ಸಂಕ್ಷಿಪ್ತ ಭೇಟಿಯೆಂದು ಇಂಗ್ಲೆಂಡ್‌ಗೆ 1846 ರಲ್ಲಿ ಹೋದ ಅವರು, ಜೀವಮಾನವಿಡೀ ಅಲ್ಲೇ ಕಳೆದರು. ಪ್ರಶ್ಯನ್ ರಾಜತಾಂತ್ರಿಕ ಬ್ಯಾರನ್ ವಾನ್ ಬುನ್ಸೆನ್ ಮತ್ತು ವಿಲ್ಸನ್ ಅವರು ಋಗ್ವೇದವನ್ನು ಪ್ರಕಟಿಸಲು ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ಗೆ ಹಣಕಾಸಿನ ನೆರವು ನೀಡುವಂತೆ ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕರನ್ನು ಮನವೊಲಿಸಿದರು. ಮುಲ್ಲರ್ 1848 ರಲ್ಲಿ ಆಕ್ಸ್‌ಫರ್ಡ್‌ನಲ್ಲಿ ನೆಲೆಸಿ ತಮ್ಮ ಸಂಸ್ಕೃತ ಸಂಶೋಧನೆಯನ್ನು ಮುಂದುವರೆಸಿದರು, ಮೂರು ವರ್ಷಗಳ ಉಪ ಪ್ರಾಧ್ಯಾಪಕತ್ವದ ನಂತರ 1854 ರಲ್ಲಿ ಅವರು ಆಧುನಿಕ ಯುರೋಪಿಯನ್ ಭಾಷೆಗಳ ಟೇಲೋರಿಯನ್ ಪ್ರಾಧ್ಯಾಪಕರಾದರು; [೧೩] ಈ ಹುದ್ದೆಯಲ್ಲಿ ಅವರಿಗೆ ವರ್ಷಕ್ಕೆ £500, ಅಂದರೆ ಬೋಡೆನ್ ಪೀಠದ ಅರ್ಧದಷ್ಟು, ಸಂಬಳ ಬರುತ್ತಿತ್ತು, [೧೫] 1855 ರಿಂದ ಬ್ರಿಟಿಷ್ ನಾಗರಿಕರಾದ ಅವರು 1858 ರಲ್ಲಿ ಆಲ್ ಸೋಲ್ಸ್ ಕಾಲೇಜಿನ ಗೌರವ ಸದಸ್ಯರಾದರು. ಅವರ ಜೀವನಚರಿತ್ರೆಕಾರ, ಭಾರತೀಯ ಬರಹಗಾರ ನಿರಾದ್ ಸಿ. ಚೌಧುರಿ ಅವರ ಪ್ರಕಾರ ಅದು "ಆ ಸಮಯದಲ್ಲಿ ವಿದೇಶಿಗರಿಗೆ ಅಭೂತಪೂರ್ವ ಗೌರವ",[೧೬]

ಹೆಸರು ಪ್ರಸ್ತಾಪವಾಗಿದ್ದ ಇನ್ನೂ ಮೂವರು ವಿದ್ವಾಂಸರು ಮತದಾನಕ್ಕಿಂತ ಮುಂಚೆ ಹಿಂದೆಸರಿದರು. ಕಲ್ಕತ್ತಾದ ಸರ್ಕಾರಿ ಕಾಲೇಜಿನಲ್ಲಿ ಸಂಸ್ಕೃತದ ಪ್ರಾಧ್ಯಾಪಕರಾಗಿದ್ದ ಎಡ್ವರ್ಡ್ ಕೋವೆಲ್ ಅವರ ಉಮೇದುವಾರಿಕೆಯನ್ನು 28 ಮೇ 1860 ರಂದು ಟೈಮ್ಸ್‌ ನಲ್ಲಿ ಪ್ರಕಟಿಸುತ್ತ, ತಮ್ಮ ಉತ್ತರಾಧಿಕಾರಿಯಾಗಲು "ಅತ್ಯರ್ಹ" ಎಂದು ವಿಲ್ಸನ್ ಅವರ ಬಗ್ಗೆ ಹೇಳಿದ್ದರು ಎಂದು ಹೇಳಲಾಗಿತ್ತು . [೧೭] ನಂತರ ಅವರು ಮುಲ್ಲರ್ ವಿರುದ್ಧ ನಿಲ್ಲಲು ನಿರಾಕರಿಸಿ ಭಾರತದಿಂದ ಬರೆದರು. [೧೮] ಬನಾರಸ್‌ನ ಸರ್ಕಾರಿ ಸಂಸ್ಕೃತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಮಾಜಿ ಬೋಡೆನ್ ವಿದ್ವಾಂಸ ರಾಲ್ಫ್ ಗ್ರಿಫಿತ್ ಅವರು ಆಗಸ್ಟ್ 1860 ರಲ್ಲಿ ತಮ್ಮ ಉಮೇದುವಾರಿಕೆಯನ್ನು ಘೋಷಿಸಿ ನವೆಂಬರ್‌ನಲ್ಲಿ ಹಿಂತೆಗೆದುಕೊಂಡರು. [೧೯] [೨೦] ಬನಾರಸ್‌ನ ಕಾಲೇಜಿನ ಪ್ರಾಂಶುಪಾಲರಾದ ಜೇಮ್ಸ್ ಆರ್. ಬ್ಯಾಲಂಟೈನ್ ಅವರ ಹೆಸರನ್ನು "ಬ್ರಿಟಿಷ್ ಸಂಸ್ಕೃತ ವಿದ್ವಾಂಸರಲ್ಲಿ ಮುಖ್ಯ" ಎನ್ನುತ್ತ ಇಂಗ್ಲೆಂಡ್ ಮೂಲದ ಸ್ನೇಹಿತರು ಜೂನ್ 1860 ರಲ್ಲಿ ಮುಂದಿಟ್ಟರು. [೨೧]

ಮುಲ್ಲರ್ ರ ಪ್ರಣಾಳಿಕೆ

[ಬದಲಾಯಿಸಿ]

ವಿಲ್ಸನ್‌ನ ಮರಣದ ಆರು ದಿನಗಳ ನಂತರ 1860 ರ ಮೇ 14 ರಂದು ಮುಲ್ಲರ್ ತಮ್ಮ ಉಮೇದುವಾರಿಕೆ ಘೋಷಿಸಿದರು. [೨೨] ಘಟಿಕೋತ್ಸವಕ್ಕೆ ಅವರ ಸಲ್ಲಿಕೆಯು ಋಗ್ವೇದವನ್ನು ಸಂಪಾದಿಸುವಲ್ಲಿ ಅವರ ಕೆಲಸವನ್ನು ಉಲ್ಲೇಖಿಸುತ್ತದೆ, ಅದು ಇಲ್ಲದೆ ಮಿಷನರಿಗಳು ಹಿಂದೂ ಧರ್ಮದ ಬೋಧನೆಗಳ ಬಗ್ಗೆ ಸಂಪೂರ್ಣವಾಗಿ ಕಲಿಯಲು ಸಾಧ್ಯವಿಲ್ಲ, ಅದು ಅವರ ಕೆಲಸಕ್ಕೆ ಅಡ್ಡಿಯಾಯಿತು. ಆದ್ದರಿಂದ ಅವರು "ನನ್ನ ಜೀವನದ ಪ್ರಮುಖ ಭಾಗವನ್ನು ಸಂಸ್ಕೃತದ ಪೀಠದ ಸ್ಥಾಪಕನ ವಸ್ತುವನ್ನು ಪ್ರಚಾರ ಮಾಡುವುದರಲ್ಲಿ ಕಳೆದಿದ್ದಾರೆ" ಎಂದು ಪರಿಗಣಿಸಿದ್ದಾರೆ. [೨೩] ಅವರು ಸಂಸ್ಕೃತದ ಮೇಲೆ ಪ್ರತ್ಯೇಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು ಮತ್ತು ಅವರು "ಯುರೋಪ್ ಮತ್ತು ಭಾರತದಲ್ಲಿನ ಅತ್ಯಂತ ಪ್ರಖ್ಯಾತ ಸಂಸ್ಕೃತ ವಿದ್ವಾಂಸರಿಂದ" ಮತ್ತು ಭಾರತದಲ್ಲಿ "ಪ್ರಾಚೀನ ವಿಗ್ರಹಾರಾಧನೆಯ ವ್ಯವಸ್ಥೆಯನ್ನು ಉರುಳಿಸಲು" ಸಹಾಯ ಮಾಡಲು ತಮ್ಮ ಪ್ರಕಟಣೆಗಳನ್ನು ಬಳಸಿದ ಮಿಷನರಿಗಳಿಂದ ಪ್ರಶಂಸಾಪತ್ರಗಳನ್ನು ಒದಗಿಸುವುದಾಗಿ ಹೇಳಿದರು. [೨೩] ಕಾಲಾನಂತರದಲ್ಲಿ , ಚರ್ಚ್ ಮಿಷನರಿ ಸೊಸೈಟಿ ಮತ್ತು ಸೊಸೈಟಿ ಫಾರ್ ದಿ ಪ್ರಾಪಗೇಶನ್ ಆಫ್ ದಿ ಗಾಸ್ಪೆಲ್ ಸೇರಿದಂತೆ ಈಸ್ಟ್ ಇಂಡಿಯಾ ಕಂಪನಿಯಿಂದ ಋಗ್ವೇದದ ಪ್ರತಿಗಳನ್ನು ವಿನಂತಿಸಿದ ಮಿಷನರಿ ಸಮಾಜಗಳ ಪಟ್ಟಿಯನ್ನು ಒದಗಿಸಲು ಅವರು ಸಮರ್ಥರಾದರು. [೨೪]

ಉಲ್ಲೇಖಗಳು

[ಬದಲಾಯಿಸಿ]
  1. Beckerlegge, p. 193.
  2. Evison, p. 2.
  3. "Editorial". The Times. 29 October 1860. p. 6. Archived from the original on 6 December 2021. Retrieved 21 May 2012.(subscription required)
  4. Chaudhuri, p. 221.
  5. Beckerlegge, p. 186.
  6. Beckerlegge, p. 187.
  7. Beckerlegge, p. 201.
  8. Beckerlegge, p. 202.
  9. Beckerlegge, p. 188.
  10. Dowling, p. 165.
  11. Kochhar, Rajesh (March–April 2008). "Seductive Orientalism: English Education and Modern Science in Colonial India". Social Scientist. 36 (3/4): 54. JSTOR 27644269.
  12. Van der Veer, p. 109.
  13. ೧೩.೦ ೧೩.೧ ಉಲ್ಲೇಖ ದೋಷ: Invalid <ref> tag; no text was provided for refs named MullerODNB
  14. Beckerlegge, p. 180.
  15. Van der Veer, p. 108.
  16. Chaudhuri, p. 220.
  17. "University Intelligence". The Times. 28 May 1860. p. 6. Archived from the original on 6 December 2021. Retrieved 21 May 2012.(subscription required)
  18. "University Intelligence". The Times. 31 October 1860. p. 4. Archived from the original on 6 December 2021. Retrieved 21 May 2012.(subscription required)
  19. "University Intelligence". The Times. 17 August 1860. p. 7. Archived from the original on 6 December 2021. Retrieved 21 May 2012.(subscription required)
  20. "University Intelligence". The Times. 22 November 1860. p. 10. (subscription required)
  21. "Boden Sanscrit Professorship". The Observer. 3 June 1860. p. 3. ಟೆಂಪ್ಲೇಟು:ProQuest. (subscription required)
  22. "University Intelligence". The Times. 15 May 1860. p. 9. Archived from the original on 6 December 2021. Retrieved 21 May 2012.(subscription required)
  23. ೨೩.೦ ೨೩.೧ Beckerlegge, pp. 334–335.
  24. Beckerlegge, p. 203.


ಉಲ್ಲೇಖ ದೋಷ: <ref> tags exist for a group named "lower-alpha", but no corresponding <references group="lower-alpha"/> tag was found