ನವ್ಯ
ಗೋಚರ
Sathish
- ನವ್ಯ ಕಾವ್ಯ ಪ್ರಕಾರವು ಕನ್ನಡ ಭಾಷೆಯ ಸಾಮರ್ಥ್ಯವನ್ನೂ ಅಭಿವ್ಯಕ್ತಿಯ ಮಟ್ಟವನ್ನೂ ಹೆಚ್ಚಿಸಿತು. ಅತಿ ಸೂಕ್ಷ್ಮವಾದ, ಅಂತರಂಗ ವೇದ್ಯವಾದ ಅಥವಾ ಗುಹ್ಯವಾದ ಅನುಭವಗಳನ್ನು ಹೊರಹಾಕಲು ಮಾದ್ಯಮವಾಯಿತು. [೧] ೧೯೫೦-೧೯೮೦ರವರೆಗಿನ ಮೂರು ದಶಕಗಳ ಕಾಲ ಕನ್ನಡಸಾಹಿತ್ಯದಲ್ಲಿ ಒಂದು ಪ್ರಮುಖ ಘಟ್ಟವಾಗಿ ನವ್ಯಸಾಹಿತ್ಯ ವೆಂದು ನಿರ್ದೇಶಿಸಲ್ಪಟ್ಟು ಸಾಂಸ್ಕೃತಿಕವಾಗಿ ಮಹತ್ವದ ಕೊಡುಗೆಯನ್ನು ನೀಡಿದ ನವ್ಯಮಾರ್ಗದ ಒಂದು ಬಗೆ ಈಗ ನಿರ್ದಿಷ್ಟ ದೂರದಲ್ಲಿ ನಿಂತು ಬೆಲೆ ಕಟ್ಟುವ ಕೆಲಸ ಆರಂಭವಾಗಿದೆಯೆನ್ನಬಹುದು.
ವಿ. ಕೃ. ಗೋಕಾಕರು
[ಬದಲಾಯಿಸಿ]- ನವ್ಯಸಾಹಿತ್ಯದ ಲೇಖಕರಲ್ಲಿ ಪ್ರಮುಖರಾದವರು ವಿನಾಯಕ ಕೃಷ್ಣ ಗೋಕಾಕರು. ತಮ್ಮ ಸಮುದ್ರ ಗೀತಗಳು, (೧೯೪೦) ಸಂಕಲನದಲ್ಲಿಯೇ ಹೊಸ ರೀತಿಯ ಪ್ರಯೋಗ ಮಾಡಿದ್ದಾರೆ. ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನ್ನು ಎನ್ನುವ ಮೂಲಕ ಮುಕ್ತ ಛಂದಸ್ಸನ್ನು ಬಳಸಿ ಹೊಸತನವನ್ನು ತರಲು ಪ್ರಯತ್ನಿಸಿದರು. ಅಭ್ಯುದಯ (೧೯೪೬)ದ ವೇಳೆಗೆ ಹೋಗಿಬರುವೆನು ನನ್ನ ಎಳೆಗನಸುಗಳೆ! ನಿಮ್ಮ ತಳಿರ್ಗೆಂಪು ಹೂಗಂಪು ತಂಗಾಳಿ ಮುಗಿದು! ಸಮರವನು ಸಾರಿಹುದು ಅಮರಶಕ್ತಿಯದೊಂದು ಎಂದು ಹೇಳಿ ನವೋದಯ ಕಾವ್ಯ ಪರಂಪರೆಗೆ ಒಂದು ರೀತಿಯ ಬೀಳ್ಕೊಡುಗೆ ಹೇಳಿದರು. ನವ್ಯ ಕವಿತೆಗಳು (೧೯೫೦) ಸಂಕಲನದ ಕವಿತೆಗಳು ಗೋಕಾಕರ ಹೊಸರೀತಿಯ ಕಾವ್ಯ ಪ್ರಯತ್ನಗಳಾಗಿವೆ.
- ಗಂಗಾಧರ ಚಿತ್ತಾಲ, ಸು.ರಂ.ಎಕ್ಕುಂಡಿ, ವಿ.ಜಿ.ಭಟ್ಟ, ಎಂ.ಅಕಬರ ಅಲಿ, ಶಂಕರ ಮೊಕಾಶಿ ಪುಣೇಕರ, ಅರವಿಂದ ನಾಡಕರ್ಣಿ ಮೊದಲಾದವರು ತಮ್ಮ ಕಾವ್ಯ ಜೀವನದ ಆರಂಭ ಘಟ್ಟದಲ್ಲಿ ಗೋಕಾಕರ ಚಿಂತನೆ, ಕಾವ್ಯಗಳಿಂದ ಪ್ರಭಾವಿತರಾದರು. ನಂತರದಲ್ಲಿ ತಮ್ಮದೇ ಆದ ದನಿಯನ್ನು ಗುರ್ತಿಸಿಕೊಂಡವರು.
- ತಮ್ಮ ಮೊದಲ ಸಂಕಲನ ಭಾವತರಂಗ (೧೯೪೬)ದಲ್ಲಿಯೇ ಸ್ವಂತಿಕೆಯ ಹಂಬಲವನ್ನು ದಟ್ಟವಾಗಿ ಪ್ರಕಟಿಸಿದ ಗೋಪಾಲಕೃಷ್ಣ ಆಡಿಗರು, ನಡೆದು ಬಂದ ದಾರಿ (೧೯೫೨) ಸಂಕಲನದ ವೇಳೆಗೆ ತಮ್ಮ ನಿಲುವಿನಲ್ಲಿ ಹೆಚ್ಚು ಸ್ಪಷ್ಟರಾಗಿದ್ದು, ಹೊಸ ಕಾವ್ಯ ಮಾರ್ಗದ ಅಗತ್ಯವನ್ನು ಪ್ರತಿಪಾದಿಸಿ ಭಿನ್ನರೀತಿಯ ಕಾವ್ಯರಚನೆ ಆರಂಭಿಸಿದರು. ಆಡಿಗರ ಕಾವ್ಯದುದ್ದಕ್ಕೂ ಕಂಡುಬರುವ ಬಹುಮುಖ್ಯ ಅಂಶ ಆಧುನಿಕ ಮಾನವನ ಸಂಘರ್ಷಸ್ಥಿತಿ, ದೇಹ ಮನಸ್ಸುಗಳ ಘರ್ಷಣೆಗೆ ಸಿಕ್ಕ ಮಾನವನ ಸ್ಥಿತಿಯೂ ಆಗಿದೆ. ಸಾಮಾನ್ಯ ಮನುಷ್ಯನಾಗಿ ಹುಟ್ಟಿ ಪುರುಷೋತ್ತಮನಾಗಿ ಬೆಳೆದ ರಾಮನ ಬದುಕಿನಲ್ಲಿ, ಆತನ ವ್ಯಕ್ತಿತ್ವ ವಿಕಾಸದಲ್ಲಿ ಆಸಕ್ತಿ ಹೊಂದಿದ ಅಡಿಗರಿಗೆ ಪ್ರತಿಯೊಬ್ಬ ವ್ಯಕ್ತಿಯು ತನಗೆತಾನೇ ವಿಕಾಸವಾಗಬೇಕು, ಈ ನೆಲದ ಪ್ರಜ್ಞೆ ಹೀರಿಯೇ ಬೆಳೆದು ದೊಡ್ಡವನಾಗಬೇಕು, ಉನ್ನತ ಚೇತನವಾಗಿ ರೂಪುಗೊಳ್ಳಬೇಕು ಎಂಬ ಹಂಬಲ. ಇದೇ ಅವರ ಕಾವ್ಯದ ಕೇಂದ್ರ. ಇವರ ಸಮಗ್ರಕಾವ್ಯ (೧೯೭೬)ವನ್ನು ಅವಲೋಕಿಸಿದಾಗ ಒಂದು ನಿರ್ದಿಷ್ಟ ಬೆಳವಣಿಗೆಯನ್ನು ನಾವು ಗುರುತಿಸಬಹುದಾಗಿದೆ.
- ನವ್ಯಕಾವ್ಯ ಅಡಿಗರ ದಟ್ಟ ಪ್ರಭಾವದಲ್ಲಿದ್ದಾಗ ಅದಕ್ಕೊಂದು ವಿಶಿಷ್ಟನಡೆ ಕೊಟ್ಟವರು ಎ.ಕೆ.ರಾಮಾನುಜನ್. ಆವೇಶದ ಧಾಟಿಯಿಲ್ಲದೆ, ಗಂಟಲೆತ್ತಿ ಕೂಗದೆ ಲವಲವಿಕೆಯ ಆಧುನಿಕ ಬದುಕಿನ ವಿಷಾದವನ್ನು ಅಭಿವ್ಯಕ್ತಿಸುವ ಇವರ ಕಾವ್ಯವಿನ್ಯಾಸ ವಿಶಿಷ್ಟವಾದುದು. ಪ್ರಖರ ಬುದ್ಧಿ ಶಕ್ತಿಯ ರಾಮಾನುಜನ್ನರ ಪ್ರತಿಭೆ ಮಧ್ಯಮವರ್ಗದ ಸಾಮಾನ್ಯರ ಅನುಭವಗಳ ಮೂಲಕವೇ ಉಂಟುಮಾಡುವ ದಟ್ಟ ಕಾವ್ಯಾನುಭವ ಅಭ್ಯಾಸ ಯೋಗ್ಯವಾದುದು.
- ಗಂಗಾಧರ ಚಿತ್ತಾಲ, ಶಂಕರ ಮೊಕಾಶಿ, ಕೆ.ಎಸ್.ನ., ರಾಮಚಂದ್ರ ಶರ್ಮ, ಎ.ಕೆ.ರಾಮಾನುಜನ್, ಜಿ.ಎಸ್.ಸಿದ್ಧಲಿಂಗಯ್ಯ, ಅರವಿಂದನಾಡಕರ್ಣಿ, ಪಿ.ಲಂಕೇಶ್, ಎಚ್.ಎಂ.ಚನ್ನಯ್ಯ, ಸುಮತೀಂದ್ರ ನಾಡಿಗ, ಕೆ.ಎಸ್.ನಿಸಾರ್ ಅಹಮದ್, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಶ್ರೀಕೃಷ್ಣ ಅಲನಹಳ್ಳಿ ಮೊದಲಾದವರು ನವ್ಯಕಾವ್ಯ ಜಗತ್ತಿನಲ್ಲಿ ಗಣ್ಯರಾದವರು. ನವ್ಯರೆಂದು ಮುದ್ರೆಯೊತ್ತದ ಕವಿ ಕುವೆಂಪು, ಬೇಂದ್ರೆ, ಪುತಿನ ಇವರಲ್ಲಿಯೂ ಈಚಿನ ಕೆಲವು ಕೃತಿಗಳಲ್ಲಿ ನವ್ಯತೆಯ ಸೊಗಡನ್ನು ಕಾಣಬಹುದು.[೨]
ನವ್ಯದಲ್ಲಿ ಹೊಸ ಮಾರ್ಗ
[ಬದಲಾಯಿಸಿ]- ಗೋಪಾಲಕೃಷ್ಣ ಅಡಿಗರ ನವ್ಯಮಾರ್ಗದಿಂದ ಪ್ರಭಾವಿತರಾಗಿ ತಮ್ಮ ಕಾವ್ಯಜೀವನವನ್ನು ರೂಪಿಸಿಕೊಂಡ ಕವಿಗಳ ಸಂಖ್ಯೆ ಹೇರಳವಾಗಿದೆ. ಯುವತಲೆಮಾರಿನ ಪ್ರತಿಭಾಶಾಲಿ ಕವಿಗಳಲ್ಲಿ ಹಲವರು ಈ ಮಾರ್ಗಕ್ಕೆ ಸೇರುತ್ತಾರೆ. ಬಿ.ಸಿ.ರಾಮಚಂದ್ರಶರ್ಮರದು ನವ್ಯಕಾವ್ಯದ ಆರಂಭದ ಕಾಲದಲ್ಲಿ ಅಡಿಗರ ಜೊತೆ ಜೊತೆಯಲ್ಲೇ ಕೇಳಿಬರುತ್ತಿದ್ದ ಹೆಸರಾಗಿತ್ತು. ಏಳುಸುತ್ತಿನ ಕೋಟೆ (1953), ಬುವಿ ನೀಡಿದ ಸ್ಫೂರ್ತಿ, ಹೇಸರಗತ್ತೆ ಇವು ಅವರ ನವ್ಯಕಾವ್ಯ ಸಂಕಲನಗಳು. ಲೈಂಗಿಕ ವಸ್ತುವಿನಲ್ಲಿಯೇ ಹೆಚ್ಚಾದ ಲೋಲುಪತೆ ತೋರಿಸಿದ ಶರ್ಮರು ಅಭಿವ್ಯಕ್ತಿ ವಿಧಾನದ ಹೊಸತನ ಮತ್ತು ಕಸುವಿನಿಂದಾಗಿ ತುಂಬ ಭರವಸೆ ಹುಟ್ಟಿಸಿದ್ದರು. ಮುಂದೆ ಅವರ ಕಾವ್ಯಜೀವನ ಪ್ರವರ್ಧಮಾನವಾಗದೆ ಇಳಿಮುಖ ವಾಗಿರುವುದಕ್ಕೆ ಅವರ ಹೇಸರಗತ್ತೆ ಕವನ ಸಂಕಲನ ನಿದರ್ಶನವಾಗಿದೆ. ಮುಂದೆ ಶರ್ಮರಂತೆ ಕಾಮವೇ ಪ್ರಧಾನವಸ್ತುವಾಗಿ ಉಳ್ಳ ಕವನಗಳನ್ನು ಹೆಚ್ಚಾಗಿ ಬರೆದು ಶರ್ಮರನ್ನು ನೆನಪಿಗೆ ತಂದವರು ಕಾಮಿ, ಆಮೆ ಸಂಕಲನಗಳ ಎಚ್.ಎಂ.ಚನ್ನಯ್ಯನವರು. ಭಾಷೆಯ ಉಪಯೋಗ ಮತ್ತು ಲಯಗತಿಯಲ್ಲಿ ತಮ್ಮದೇ ಆದ ವಿಶಿಷ್ಟತೆಯನ್ನು ಅವರು ರೂಢಿಸಿದರು. ಯು.ಆರ್.ಅನಂತಮೂರ್ತಿಯವರ ‘ಬಾವಲಿ’ ಸಂಕಲನವೇ ಇನ್ನೂ ಕೆಲವು ಕವನಗಳನ್ನೊಳಗೊಂಡು 15 ಪದ್ಯಗಳು ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಭಿಕ್ಷುಕರು, ಕಿಳ್ಳೇಕ್ಯಾತರ ಹುಡುಗಿ, ರಾಜನ ಹೊಸ ವರ್ಷದ ಬೇಡಿಕೆಗಳಂಥ ಉತ್ತಮ ಕವನಗಳು ಅದರಲ್ಲಿವೆ. ಪಿ.ಲಂಕೇಶರು ಬಿಚ್ಚು, ತಲೆಮಾರು ಎಂಬ ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರ ಪ್ರಥಮ ಸಂಕಲನವಾದ ಬಿಚ್ಚುವಿನಲ್ಲಿ ಹಲವು ಉತ್ತಮ ಕವನಗಳಿವೆ. ಅಡಿಗರಿಗೆ ಭಿನ್ನವಾದ ಲಯಸಾಧ್ಯತೆಗಳ ಹುಡುಕಾಟವಿದೆ. ಕವಿಯ ವಿಶಿಷ್ಟವÆ ಸತ್ವಪುರ್ಣವೂ ಆದ ದನಿಯ ಮುದ್ರೆ ಇದೆ. ಅವರ ಅವ್ವ ಕನ್ನಡದ ಅತ್ಯುತ್ತಮ ಕವನಗಳಲ್ಲೊಂದೆಂದು ಸುಪ್ರಸಿದ್ಧವಾಗಿದೆ. ಬೃಹನ್ನಳೆ ಸೋಮುವಿನ ಸ್ವಗತ ಲಹರಿ ಸಂಕಲನದ ಅನಂತರ ಪುರ್ಣಚಂದ್ರ ತೇಜಸ್ವಿಯವರು ಕವನಗಳನ್ನು ಹೆಚ್ಚು ಬರೆಯಲಿಲ್ಲ.
- ಚಂದ್ರಶೇಖರ ಪಾಟೀಲರು ಬಾನುಲಿ, ಮಧ್ಯಬಿಂದು, ಹತ್ತೊಂಬತ್ತು ಕವನಗಳು ಮುಂತಾದ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಸಮಕಾಲೀನ ಪ್ರಜ್ಞೆ, ಜೀವನದ ಬಗ್ಗೆ ಲವಲವಿಕೆ, ವಿಡಂಬನೆಯ ಮಾತುಗಾರಿಕೆ, ಅರ್ಥಭಾರವನ್ನು ಹಗುರಾಗಿ ತೇಲಿಸುವ ಜಾಣ್ಮೆ, ಅಭಿವ್ಯಕ್ತಿಯ ವ್ಯಂಗ್ಯಪುರ್ಣತೆ ಇವು ಎಲ್ಲ ಕವಿತೆಗಳ ಸಾಮಾನ್ಯ ಲಕ್ಷಣಗಳು ಎಂದು ಹತ್ತೊಂಬತ್ತು ಕವನಗಳು ಸಂಗ್ರಹದ ಹಿನ್ನುಡಿಯಲ್ಲಿ ಕೀರ್ತಿನಾಥ ಕುರ್ತಕೋಟಿಯವರು ಹೇಳಿದ ಮಾತು ಪಾಟೀಲರ ಒಟ್ಟು ಕಾವ್ಯಕ್ಕೇ ಅನ್ವಯವಾಗ ಬಹುದಾದ ಮಾತಾಗಿದೆ.
- ಚಂದ್ರಶೇಖರ ಕಂಬಾರರ ಹೇಳತೇನ ಕೇಳ, ತಕರಾರಿನವರು ನವ್ಯಕಾವ್ಯ ಸಂಕಲನಗಳಾಗಿವೆ. ಜನಪದ ಭಾಷೆಯ ಬಳಕೆ ಮತ್ತು ಕಲ್ಪಕತೆಯ ಸಮೃದ್ಧಿ ಪ್ರಥಮ ದರ್ಜೆಯದಾಗಿದೆ. ನವ್ಯಧೋರಣೆ ಮತ್ತು ಅಭಿವ್ಯಕ್ತಿ ತಂತ್ರಕ್ಕೆ ಜನಪದದ ಜೀವಂತ ಆಡುಭಾಷೆಯನ್ನು ಕಸಿಗೊಳಿಸುವುದರಲ್ಲಿ ಅವರ ಸಾಧನೆ ಅಪುರ್ವವಾದದ್ದಾಗಿದೆ. ಜನ್ಮಜಾತ ಕವಿಪ್ರತಿಭೆಯ ಪುಟಿತ ಇವರಷ್ಟು ಸಹಜ ಸಮೃದ್ಧಿಯಲ್ಲಿ ಅಡಿಗರ ಅನಂತರದ ಇನ್ನಾವ ನವ್ಯಕವಿಯಲ್ಲಿಯೂ ಕಾಣುವುದಿಲ್ಲ. ಕಂಬಾರರು ಅಡಿಗರ ಪ್ರಭಾವದಿಂದ ಬಿಡಿಸಿಕೊಳ್ಳಬೇಕೆಂಬ ತಮ್ಮ ಅನಿಸಿಕೆಯನ್ನು ಇತರರೊಂದಿಗೆ ತಾವು ಸಂಪಾದಿಸಿದ ‘ಅಕಾವ್ಯ’ ಎಂಬ ಪತ್ರಿಕೆಯಲ್ಲಿ ‘ಏನೇನೋ ಮಾಡಿ ಸುದ್ದಿಯಲ್ಲಿರುವ ಗತ್ತಲ್ಲ ‘ಅಕಾವ್ಯ’. ಅಥವಾ ಜಾತೀಯತೆಯ ಕಿಡಿಗೇಡಿ ರಾಜಕೀಯವೂ ಅಲ್ಲ. ನಮಗೂ ಗಂಭೀರ ಕಾಳಜಿಗಳಿವೆ. ಘೂೕಷಣೆಗಳಿಂದ ಹೊಸ ಕಾವ್ಯ ಹುಟ್ಟಬಾರದೆಂದೇನು ನಿಯಮವಿದೆಯೇ? ಅಕಾವ್ಯ ನಮಗೆ ನಾವೇ ಹಾಕಿಕೊಂಡ ಸವಾಲು, ಅದಕ್ಕೆ ಜವಾಬು ಹುಡುಕುವುದು ನಮ್ಮ ಜವಾಬ್ದಾರಿ. ಸತ್ವವಿದ್ದರೆ ಅದನ್ನು ಗುರುತಿಸುವುದು ಗುಣಪಕ್ಷಪಾತಿಗಳಾದ ಸಹೃದಯರ ಜವಾಬ್ದಾರಿ’ ಎಂದು ದಿಟ್ಟತನದಿಂದ ಪ್ರತಿಪಾದಿಸಿದ್ದುಂಟು.
- ನವ್ಯಕ್ಕೆ ಕೆಲವು ಉದಾಹರಣೆಯ ಕವನಗಳನ್ನು ಕೆಳಗೆ ಕೊಟ್ಟಿದೆ '; ಇದು ನವ್ಯದ ಶೈಲಿಯನ್ನು ನೋಡಲು ಮಾತ್ರಾ ಆಗಿದೆ [೩]
ನವ್ಯ ಕವನದ ಉದಾಹರಣೆಗಳು
[ಬದಲಾಯಿಸಿ]- ಮೊದಲ ಕವನ ಶ್ರೀ ಶಂಕರರ ಜೀವನ- ಅವರು ಮಂಡನ ಮಿಶ್ರರ ಜೊತೆ ಮಾಡಿದ ವಾದ , ಕರ್ಮಠ ಮಿಶ್ರ ರನ್ನು ಸೋಲಿಸಿ ಅದ್ವೈತ ತತ್ವ ವನ್ನು ಎತ್ತಿಹಿಡಿದುದು; ಕಾಲಾನುಕ್ರಮದಲ್ಲಿ ಕರ್ಮಠ ಪದ್ಧತಿ ಪುನಃ ವಿಜ್ರಂಭಿಸಿದುದು -ಇದರ ನೋವಿನ ದುರಂತದ ಪರಿಚಯವಿದೆ. [೪]
-
- ಎರಡನೆಯ ಕವನದಲ್ಲಿ ವೇದಕಾಲದಿಂದ ಬೆಳೆದು ಬಂದ ಧಾರ್ಮಿಕ ನಂಬುಗೆ ಹೋಮ ಹವನಗಳ ಕಾಲ; ನಂತರ ಧಾರ್ಮಿಕ ಚಿಂತನೆಯಿಂದ ಏಕ - ಬ್ರಹ್ಮ ವಾದ ; ನಿರಾಕಾರದ ಏಕ ದೇವೋಪಾಸನೆ, ಆತ್ಮ ವಿಚಾರ ಚಿಂತನೆ ಹೀಗೆ ಸುಧಾರಣೆ ಹೊಂದುತ್ತಾ ಬೆಳೆದು ಬಂದ ವೈದಿಕ ಧರ್ಮ - ಪುನಃ ಈ ಸಾವಿರ ವರ್ಷದಿಂಧ ಈಚೆಗೆ ಕೆಳಮುಖವಾಗಿ ಸಾಗುತ್ತಿರುವುದು ದುರಂತ. ಭಗವದ್ಗೀತೆಯಲ್ಲಿ ಸಾರಿ ಸಾರಿ ಕರ್ಮಯೋಗ ಜ್ಞಾನಯೋಗವನ್ನು ಹೇಳಿದ್ದರೂ, ಮೂರ್ತಿಪೂಜೆ; ಆಡಂಬರದ ಧರ್ಮಾಚರಣೆಗೆ ಜನಮನ ತಿರುಗಿದುದು. ವಿಚಿತ್ರ, ಹಾಗೂ ದುರಂತವಾಗಿದೆ ಎಂಬ ನೋವನ್ನು ಹೇಳುತ್ತದೆ.[೫]
-
- ಮೂರನೆಯ ಕವನದಲ್ಲಿ ಕಟ್ಟೆ ಎಂಬಲ್ಲಿ ೨೦೦೦ ನೇ ಇಸವಿಯಲ್ಲಿ ನೆಡೆದ ಸೋಮಯಾಗದ ಬಗ್ಗೆ ವಿಷಾದ ನೋವು . ಅದರಲ್ಲಿ ಮೇಕೆ ಗಳನ್ನು ಗುದ್ದಿ ಕೊಂದು ಅದರ ಮಾಂಸವನ್ನು ಹೋಮದಲ್ಲಿ ಅರ್ಪಿಸಿ ನಂತರ ಹೋಮಕುಂಡದಲ್ಲಿ ಉಳಿದ ಮಾಂಸವನ್ನು ತೆಗೆದು ಋತ್ವಿಜರು ಆದಿಯಾಗಿ ಎಲ್ಲರೂ ಪ್ರಸಾದವೆಂದು ಸೇವಿಸಿದುದನ್ನು ಕೇಳಿ ಆಕ್ರೋಶ ಗೊಂಡ ಮನಸ್ಸಿನ ಭಾವನೆ ಇದೆ ಈ ಮೂರರಲ್ಲೂ ಧಾರ್ಮಿಕ ಆಚರಣೆ ವಿರುದ್ಧ ಬಂಡಾಯದ ದ್ವನಿ ಇದೆ. ಹೀಗೆ ಬಂಡಾಯ ಮತ್ತು ನವ್ಯ ಒಟ್ಟಿಗೆ ಸಾಗುತ್ತದೆ. [೬]
-
ಒಂದು ಹಳೆಯ ಕಥೆ
[ಬದಲಾಯಿಸಿ]- ಶ್ರಾದ್ಧದ ಮನೆಯೂಟಕ್ಕೆ ಸಂನ್ಯಾಸಿ ಬರಬಹುದೆ?
- ಹಿಂಬಾಗಿಲಿನಿಂದ ಬಂದದ್ದು - ಶಂಕರರು !
- ಮಂಡನಮಿಶ್ರ ಕೆಂಡಾಮಂಡಲ, ಪಾಪ ! ಸಂಪ್ರದಾಯಸ್ಥ:
- ವೈದಿಕರೂಟವಾಗದೆ ಭಿಕ್ಷವಿಲ್ಲ.ಶಂಕರರು ಕೇಳಿದ್ದು ವಾದ ಭಿಕ್ಷೆ !
- ಯತಿ ಭಂಗ ಬೇಡ, ಪಿತೃ ಯಜ್ಞ ವಾಗಲಿ. ಅತಿಥಿಗಳು. ||೧||
-
- ಕರ್ಮಠ, ಮೀಮಾಂಸಕ, ಯಜ್ಞ ,ಕರ್ಮವೇ, ಜೀವನಧರ್ಮ,
- ವೇದ ಪಂಡಿತ - ಸಂಸಾರಿ ಮಿಶ್ರನ ವಾದ; ಆದರೆ-
- ಜ್ಞಾನ- ವೈ ರಾಗ್ಯ, ಮೋಕ್ಷಧರ್ಮವೇ ಜೀವನದರ್ಥ,
- ಶಂಕರರ ವಾದ, ಅದೂ ವೇದಾಧಾರ, ಅದ್ವೈತ ಸಿದ್ಧಾಂತ.
- ಹದಿನಾರರ ಶಂಕರರು><ಅರವತ್ತರ ಮಿಶ್ರ. ||೨||
-
- ಇಪ್ಪತ್ತೊಂದು ದಿನ; ಕರ್ಮವೋ -ತ್ಯಾಗವೋ(ಓ)?
- ತರ್ಕ-ಯುದ್ಧ , ಕರ್ಮಕಾಂಡಕ್ಕೆ - ಜ್ಞಾನಕಾಂಡಕ್ಕೆ;
- ದಕ್ಷಿಣೋತ್ತರದ ವೇದ-ಪಂಡಿತ ದಿಗ್ಗಜಗಳು; ಶಾರದೆ-
- ಮಂಡನನ ಪತ್ನಿಯೇ ನಿರ್ಣಾಯಕಿ !
- ಸೋತರೆ - ಶಂಕರ ಸಂಸಾರಿ; ಇಲ್ಲ; ಮಿಶ್ರ ಸಂನ್ಯಾಸಿ. ||೩||
-
- ಸಂಸಾರಿ ಮಂಡನ ಮಿಶ್ರ ನಿಗೆ ಕಾವಿಯುಡುಗೆ!
- ಕರ್ಮವನು ಬಿಟ್ಟು ಜ್ಞಾನ ಮಾರ್ಗವ ಹಿಡಿದು,
- ಸುರೇಶ್ವರಾಚಾರ್ಯ ರಾದದ್ದು, - ಶಾರದೆ
- ಶೃಂಗೇರಿಯಲಿ, ಶಂಕರರಿಗೆ ತಾಯಿಯಾಗಿ
- ಮಾತೃ ಪೂಜೆ ಪಡೆದದ್ದು, ಹಳೆಯ ಕಥೆ. ||೪||
-
- ಆದರೆ, ಇಂದು ಕಾಲಚಕ್ರದಡಿ ಸಿಲುಕಿದ ಅದ್ವೈತ,
- ವೈರಾಗ್ಯ-ಜಪ-ತಪ-ಧ್ಯಾನಗಳೆಲ್ಲ ಮತ್ತೆ ವಿಜೃಂಭಿಸಿದ-
- ಹೋಮ ಹವನಕ್ಕೆ ಅಹುತಿಯಾಗಿ, ಶಂಕರರ ಶಿಷ್ಯ
- ಜ್ಞಾನಿ-ಸಂನ್ಯಾಸಿ ಸುರೇಶ್ವರಾಚಾರ್ಯರು ಸೋತು, ಒಳಗಿದ್ದ
- ಕರ್ಮಠ ಮಂಡನಮಿಶ್ರನೇ ಗೆದ್ದದ್ದು , ವಿಪರ್ಯಾಸ! ||೫||
-
- ಶೃಂಗೇರಿಯಲಿ ನೆಲಸಿರುವ ನಿರ್ಣಾಯಕಿ-
- ಶಾರದಾಂಬೆಯ ಮೃದು ಮಧುರ ಮಂದಹಾಸಕ್ಕೆ ,
- ಭಗವತ್ಪಾದ-ಶಂಕರರು, ಶಿಷ್ಯ-ಸುರೇಶ್ವರರು
- ಒಟ್ಟಿಗೆ ನಮಿಸಿದಾ ಪಾದಂಗಳಿಗೆ ನಮೋ ನಮೋ.
- ಒಳಗೊಳಗೆ ನಗುತಿರುವ ವಿಧಾತನರಸಿಗೆ, ನಮೋ ನಮೋ! ||೬||
ಕರ್ಮ ಮತ್ತು ಜ್ಞಾನ
[ಬದಲಾಯಿಸಿ]- ಭೋಗ ಭಾಗ್ಯವ ಬೇಡಿ - ಶತ್ರು ನಾಶವ ಕೊರಿ,
- ದಾರ್ಶನಿಕ ಮಂತ್ರಗಳು ಸಾವಿರಾರು;
- ದಿಕ್ಪಾಲಕರು ಸೂರ್ಯಚಂದ್ರರು ಉಷೆ ಸಂದ್ಯೆಯರು
- ದೇವಗಣ ಮೂವತ್ಮೂರು ಕೋಟಿ. ||೧||
-
- ಬಯಕೆ ಮುಗಿಲುಗಳು - ಅಲ್ಲಲ್ಲಿ ಸತ್ಯದರಿವಿನ ಮಿಂಚು!
- ಕಲಸುಮೆಲೋಗರ - ಅವನೆಲ್ಲ ಸಂಕಲಿಸಿ ವಿಂಗಡಿಸಿ,
- ಋಕ್ ಯಜುಸ್ಸಾಮ ಅಥರ್ವಗಳು ನಾಲ್ಕು ;
- ಬಾದರಾಯಣ ಆದರು ವೇದವ್ಯಾಸ. ||೨||
-
- ಮತ್ತೆ ಹುಟ್ಟಿದುದು ವಿಧಿ ವಿಧಾನ ಕರ್ಮಮಾರ್ಗ,
- ಬ್ರಾಹ್ಮಣಗಳ ಸೂತ್ರಗಳು - ಋಷಿ ನಿಯಮ;
- ಕರ್ಮಕ್ರಿಯೆ ನಿತ್ಯವಿಧಿ -ಕರ್ತವ್ಯ ಕಡ್ಡಾಯ,
- ಭೋಗ ಬಯಕೆಗೆ ಯಜ್ಞ - ಯಾಗ ಮತ್ತೆ ವಿಶೇಷ ಕರ್ಮ. ||೩||
-
- ಈ ಲೋಕದಲಿ ಸುಖ ಭೋಗ-ಪರದಲಿ ಸ್ವರ್ಗ, ತಪ್ಪಲ್ಲ;
- ಜೀವನ-ಮರಣ ಚಕ್ರದಲಿ, ಪರಿಶ್ರಮ; ಆಸೆ ಬತ್ತದ ತೊರೆ,
- ನೂರು ಯಾಗವ ಮಾಡು, ಪಡೆ ಇಂದ್ರ ಪದವಿಯ ಭೋಗ,
- ಹೋರಾಟ-ದುಃಖ ದುಮ್ಮಾನ-ಕೊನೆಯಿಲ್ಲ. ||೪||
-
- ಸರ್ವಕಾಲಿಕ ಸತ್ಯ-ಜೀವನದ ಅರ್ಥಕ್ಕೆ ಋಷಿ ಚಿಂತನೆ,
- ಮತ್ತೆ ದರ್ಶನ - ಉಪನಿಷತ್ ಮಂತ್ರಗಳು. ಕಾಲಚಕ್ರದಲಿ ,
- ಭೋಗದಮಲಿನಲಿ ಮರೆತದ್ದು -ಮತ್ತೆ ಒರೆದದ್ದು-
- ಭಗವಂತ ಅರ್ಜುನಗೆ-ಅದೇ ಗೀತೆ -ಕರ್ತವ್ಯ ಮಂತ್ರ. ||೫||
-
- ಭೋಗವೋ-ಜೀವನದರ್ಥಕ್ಕೆ ಹುಡುಕಾಟವೋ ?
- ನಿರ್ಣಯವಿಲ್ಲ-ಹಲವರಿಗೆ ಬೇಕಿಲ್ಲ;
- ಜಗದರ್ಥವದೇನು? ಜೀವನದ ಆದಿ ಅಂತ್ಯವದೆಲ್ಲಿ?
- ಪ್ರಶ್ನೆಗಳು: ಸತ್ಯವದೊಂದೇ-ಪ್ರಶ್ನೆಗಳು ಹಲವಾರು! ||೬||
-
- ಕೇಳದಿದ್ದವಗೆ ಕರ್ಮಕಾಂಡ-ಭೋಗ, ಸುಖ ದುಃಖ;
- ಕೇಳಿದವಗೆ ಜ್ಞಾನಕಾಂಡ -ತ್ಯಾಗ ಹುಡುಕಾಟ:
- ಸಂಹಿತೆಗಳಲಿ ಕವಲೆರಡು-ಶಂಕರರ ನಿರ್ಣಯ:
- ಅವರ ಬೋಧೆ ಭಾಷ್ಯಗಳೆಲ್ಲ ಜ್ಞಾನಕಾಂಡಕ್ಕೇ ಮೀಸಲು. ||೭||
-
- ಗೀತೆಯದು ಸಮನ್ವಯ ಪ್ರಯತ್ನ- ಹೊಸ ಅರ್ಥ;
- ಕರ್ತವ್ಯ-ಯಜ್ಞ ,ದಯೆ, ಭಗವತ್ಪ್ರೇಮ-ನಿಷ್ಕಾಮ ಕರ್ಮ,
- ಸಚ್ಚರಿತೆಯೇ ತಪ; ಜ್ಞಾನ-ವಿಚಾರ,ಕರ್ಮಕೌಶಲ ಯೋಗ,
- ಭಗವದರ್ಪಣದಹುತಿಯಲ್ಲಿ ಕಾಯಕವೆಲ್ಲ ಯಜ್ಞ ; ||೮||
-
- ಶತಶತಮಾನಗಳ ಪರಂಪರೆಯಲ್ಲಿ ಸುತ್ತಿ ಸುತ್ತಿ,
- ಹೊಸ ಭಾವ ಭಂಗಿಗಳಲಿ ಮೊದಲಿದ್ದಲ್ಲಿಗೇ ಪಯಣ;
- ಭೋಗ ಪ್ರಪಂಚದಲಿ ಆಡಂಬರದ ಕರ್ಮಕ್ಕೇ ಗೆಲುವು;
- ಚಿಂತನೆ ಹುಡುಕಾಟ- ಕೇವಲ ಸಂಶೋಧನೆ-ಹವ್ಯಾಸ. ||೯||
ಸೋಮಯಾಗ
[ಬದಲಾಯಿಸಿ]- ಕಾಲ ಮುಂದೆ ಸರಿವುದ ಕಂಡಿದ್ದೇವೆ,
- ಹಿಂದೆ ಸರಿಯಿತು ಕಟ್ಟೆ ಯಲಿ -ಐದು ಸಾವಿರ ವರ್ಷ,
- ಕಾಲಚಕ್ರವ ತಿರುಗಿದರು ಹಿಮ್ಮುಖವಾಗಿ,
- ಧರ್ಮಾಂಧರು, ಕರ್ಮಠರು, ಎಂಥ ಧೈರ್ಯ-ಅವಿವೇಕ! ||೧||
-(ಕಟ್ಟೆ - ಯಾಗ ನಡೆದ ಊರ ಹೆಸರು)
- ಅಂದು ಅಜಾತಶತ್ರು ತಂದ ಐನೂರು ಕುರಿಗಳ ದಂಡು,
- ನೂರು ಅಗ್ನಿ ಕುಂಡ - ಸ್ವರ್ಗಕ್ಕೆ ಮಜ್ಜೆ ಮಾಂಸದ ಏಣಿ,
- ರಂಭೆ ಊರ್ವಶಿಯರ ಅಂಗ ಸುಖದಾಸೆ ! (ವಿಷಯ ಲಂಪಟರು)
- ಬಂದ ಗೌತಮ ಬುದ್ಧ ಕಾರುಣ್ಯ ಮೂರ್ತಿ. ||೨||
-
- ನಾಸ್ತಿಕನೆನಿಸಿಕೊಂಡರೂ ಅವತಾರ ಪುರುಷ !
- ಶತ್ರು ವಿನ ಮಿತ್ರ ಬಿತ್ತಿದನು ಕರುಣೆ-ವೈಚಾರಿಕತೆಯ ಬೀಜ,
- ಉಳಿದದ್ದು - ಐದು ನೂರು ಕುರಿ? ಅಲ್ಲ ; ಮಾನವತೆ-ಧರ್ಮ.
- ಕಟ್ಟೆಯಲಿ ಐದು ಕುರಿಗಾಗಿ ಬರಬೇಕಿತ್ತೆ ಮತ್ತೆ ಬುದ್ಧ? ||೪||
-
- ದಕ್ಷಿಣದಿ ಕರ್ಮಠರ -ಮೀಮಾಂಸಕರ ಯಜ್ಞ ವೈಭವ,
- ಚಕ್ರದಲಿ ಹಿಂದೆ ಸಾವರದಿನ್ನೂರು ವರ್ಷ,
- ಬರಬೇಕಾಯಿತು ಶಂಕರ,-ಜ್ಞಾ ನ ವೈರಾಗ್ಯ ಜೀವನದರ್ಥ,
- ವಿಚಾರದಡಿಗಟ್ಟಿನಲಿ ಅದ್ವೈ ತ ಸರ್ವಾತ್ಮ ಬೋಧೆ. ||೫||
-
- ಇಲ್ಲಿ, ಅದ್ವೈತ ಭಾಷ್ಯಗಳ ಬರೆದಾ ಬೆರಳುಗಳ ಕತ್ತರಿಸಿ,
- ಕರ್ಮಠರು ಸಮಿತ್ತನು ಮಾಡಿ - ಯಜ್ಞಕಾಹುತಿಯ್ತು,
- ವಿವೇಕಾನಂದ ಜಗದಿ ಮೆರೆದ ಭಾರತ ಸಂಸ್ಕೃತಿಯೆ ಆಜ್ಯವಾಯ್ತು,
- ಗೀತೋಪನಿಷತ್ತುಗಳನು ಮುಟ್ಟಿಗೆ ಮಾಡಿ ಅಗ್ನಿ-ಪ್ರಜ್ವಲನ. ||೬||
-
- ಚಿತ್ರ ಹಿಂಸೆಯಲಿ ಸತ್ತದ್ದು ಕುರಿಯಲ್ಲ -ಮುಗ್ಧ ವೈದಿಕರು
- ಕುಡಿದು ಮೆರೆದಿದ್ದು ಸೋಮವನಲ್ಲ -ವೈಚಾರಿಕರ ಮಾನ,
- ಹುರಿದ ಮಾಂಸದ ಆಹುತಿಯಲಿ ಬೆಂದದ್ದು -ಮಾನವಧರ್ಮ,
- ಆ ಶಂಕರರ ನಿಟ್ಟುಸಿರು ಹೊಗೆಯಾಗಿ - ಜಿಗುಪ್ಸೆ-ಕರಟು ವಾಸನೆ! ||೭||
-
ನೋಡಿ
[ಬದಲಾಯಿಸಿ]ಹೆಚ್ಚಿನ ಓದಿಗೆ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ ಕಾವ್ಯಗರ್ಭ-ವಿಮರ್ಶಾಗ್ರಂಥಉಪನ್ಯಾಸಕರು, ಲೇಖಕರು- ಶ್ರೀ ಬಿ.ಎನ್.ನಾಗರಾಜ ಭಟ್ಟರು
- ↑ https://kn.wikisource.org/s/1gy ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡ ಸಾಹಿತ್ಯ
- ↑ https://kn.wikisource.org/s/92v :ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ನವ್ಯಕಾವ್ಯ
- ↑ ಶಂಕರ ವಿಜಯ ಲೇ: ರಂಗನಾಥ ಶರ್ಮಾ ಬೆಂಗಳೂರು
- ↑ ಬ್ರಹ್ಮಸೂತ್ರ ಭಾಷ್ಯ ನತ್ತು ಭಗವದ್ಗೀತಾ ಭಾಷ್ಯ (ಕನ್ನಡ ಅನುವಾದದಲ್ಲಿ)ಲೇಖಕರು: ಶ್ರೀ ಸಚ್ಚದಾನಂದ ಸರಸ್ವಿತೀ ಸ್ವಾಮಿಯವರು ಮತ್ತು ಪೂರ್ವಾಶ್ರಮ ನಾಮ -ಯಲ್ಲಂಬಳಸೆ ಸುಬ್ರಾಯ ಶರ್ಮಾ;ಪ್ರಕಾಶಕರು:ಅಧ್ಯಾತ್ಮ ಪ್ರಕಾಶ ಕರ್ಯಾಲಯ ಹೊಳೆನರಸೀಪುರ, ಹಾಸನ ಜಿಲ್ಲೆ.
- ↑ ಸೋಮಯಾಗ - f ಮಲೆನಾಡು ಮಲ್ಲಿ ಪತ್ರಿಕೆ ಸಾಗರಗೆ;ದಿ;೨೪-೭-೨೦೦೦