ವಿಷಯಕ್ಕೆ ಹೋಗು

ಗುಲ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುದುರೆಯ ಗುಲ್ಮ

ಮಾನವನ ಉದರದೊಳಗೆ ಎಡಭಾಗದ ಮೇಲಿನ ಮೂಲೆಯಲ್ಲಿರುವ ಒಂದು ಅಂಗ (ಸ್ಪ್ಲೀನ್).

ಗುಲ್ಮದ ಮಹತ್ವ

[ಬದಲಾಯಿಸಿ]

ಗುಲ್ಮದ ರಚನೆ ವಿಶಿಷ್ಟವಾಗಿದೆ. ಅದು ನಾನಾ ಕ್ರಿಯೆಗಳನ್ನು ನಿರ್ವಹಿಸಬಲ್ಲುದು. ಆದರೆ ದೇಹದ ಬೇರೆ ಅಂಗಗಳೂ ಈ ಕ್ರಿಯೆಗಳನ್ನು ಮಾಡುವಂತಿರುವುದರಿಂದ ಮತ್ತು ಗುಲ್ಮವೇ ಪ್ರತ್ಯೇಕವಾಗಿ ಯಾವ ಅಗತ್ಯವಾದ ಕಾರ್ಯವನ್ನೂ ಎಸಗದೇ ಇರುವುದರಿಂದ ಇದನ್ನು ಒಂದು ಮುಖ್ಯ ಅಂಗವೆಂದು ಪರಿಗಣಿಸುವಂತಿಲ್ಲ. ಕಾರಣಾಂತರದಿಂದ ಶಸ್ತ್ರಕ್ರಿಯೆಯ ಮೂಲಕ ಗುಲ್ಮವನ್ನು ತೆಗೆದುಹಾಕಿಬಿಡಬೇಕಾದ ಸಂಭಾವ್ಯತೆಗಳಲ್ಲಿ ವ್ಯಕ್ತಿಗೆ ಯಾವ ವಿಶೇಷ ತೊಂದರೆಯೂ ಮುಂದಕ್ಕೆ ಕಂಡುಬಂದಿಲ್ಲ.

ಗುಲ್ಮದ ವಿಶಿಷ್ಟ ರಚನೆಯಿಂದ ದೇಹದ ನಾನಾ ಕಾರ್ಯಗಳು ಜರುಗಿಸಲ್ಪಡುತ್ತಿದ್ದರೂ ಅವು ಗುಲ್ಮದಿಂದಲೇ ನಿರ್ವಹಿಸಲ್ಪಡಬೇಕಾದ ಕಾರ್ಯಗಳಾಗಿರದೆ ಇರುವುದರಿಂದ ಅಗತ್ಯ ಬಿದ್ದರೆ ಗುಲ್ಮವನ್ನು ಶಸ್ತ್ರಕ್ರಿಯೆಯಿಂದ ತೆಗೆದುಬಿಡಲು ಸಾಧ್ಯ. ಆದರೂ ಕಶೇರುಕಗಳ ವಿಕಾಸದಲ್ಲಿ ಅಂದರೆ ಮತ್ಸ್ಯದ್ವಿಚರಿಗಳು, ಸರೀಸೃಪ ಪಕ್ಷಿಗಳು ಮತ್ತು ಸಸ್ತನಿಗಳಲ್ಲಿ ಗುಲ್ಮ ಕ್ರಮವಾಗಿ ಕ್ರಿಯಾವೈಶಿಷ್ಟ್ಯವನ್ನು ತೋರುವುದು ಗಮನೀಯ. ದವಡೆ ಇಲ್ಲದ ಮತ್ಸ್ಯಾಕಾರಿಗಳು ಮುಂತಾದ ಕೆಳದರ್ಜೆ ಮೀನುಗಳಲ್ಲಿ ಗುಲ್ಮವನ್ನು ಒಂದು ಅಂಗವಾಗಿ ಗುರುತಿಸುವುದು ಕೂಡ ಕಷ್ಟ. ಆದರೆ ಮಿಕ್ಕ ಮೀನುಗಳಲ್ಲಿ, ಬೇರೆ ಅಂಗಗಳ ಜೊತೆಗೆ ಕೆಂಪು, ಶ್ವೇತ ಮುಂತಾದ ಎಲ್ಲ ರಕ್ತಕಣಗಳ ಉತ್ಪತ್ತಿಯಲ್ಲಿ ಭಾಗವಹಿಸುವ ಒಂದು ಅಂಗವಾಗಿ ಗುಲ್ಮವನ್ನು ಗುರುತಿಸಬಹುದು. ಅದರಿಂದ ಮುಂದಕ್ಕೆ ಕೆಲವು ಸರೀಸೃಪಗಳು ಮತ್ತು ಎಲ್ಲ ಪಕ್ಷಿ ಸಸ್ತನಿಗಳಲ್ಲಿ ಕೆಂಪು ರಕ್ತಕಣಗಳ ಉತ್ಪತ್ತಿ ಗುಲ್ಮದಿಂದ ತಪ್ಪಿ ಕೆಂಪು ಮಜ್ಜೆಗೆ ಸೀಮಿತವಾಗುತ್ತದೆ. ಹಾಗೆಯೇ ಸರೀಸೃಪಗಳು ಮತ್ತು ಪಕ್ಷಿಗಳಲ್ಲಿ ದುಗ್ಧರಸನಾಳ ಗಿಣ್ಣುಗಳಲ್ಲಿಯೂ ಗುಲ್ಮದಲ್ಲಿಯಂತೆಯೇ ಉತ್ಪತ್ತಿಯಾಗುತ್ತವೆ. ಭ್ರೂಣದ ಬೆಳೆವಣಿಗೆ ಕಾಲದಲ್ಲಿ ಮಾನವರಲ್ಲಿ ಗುಲ್ಮ ವಿಕಾಸದ ಈ ಘಟ್ಟಗಳನ್ನು ಕಾಣಬಹುದು. ಅಂತೆಯೇ ಮಾನವರಲ್ಲಿ ಕೆಲವು ರೋಗಗಳಲ್ಲಿ ಗುಲ್ಮ ತನ್ನ ವಿಕಾಸದ ಕೆಳಮಟ್ಟದ ಚಟುವಟಿಕೆಯನ್ನು ಅನುಸರಿಸಬಹುದು.

ಗುಲ್ಮದ ರಚನೆ ಮತ್ತು ಕಾರ್ಯ

[ಬದಲಾಯಿಸಿ]

ನಮ್ಮ ಎಡ ಅಂಗೈಯನ್ನು ಬೆನ್ನಿನ ಎಡ ಭಾಗದಲ್ಲಿ ಆದಷ್ಟು ಮೇಲೆ ಇಟ್ಟರೆ ಅದು ಉದರದೊಳಗೆ ಗುಲ್ಮ ಇರುವ ಸ್ಥಳವನ್ನು ಸೂಚಿಸುತ್ತದೆ. ಮುಷ್ಟಿಯ ಗಾತ್ರಕ್ಕಿಂತ ಸ್ವಲ್ಪ ದೊಡ್ಡದಾಗಿಯೂ ಉದ್ದವಾಗಿಯೂ ಗುಲ್ಮ ಉಂಟು. ಇದರ ತೂಕ ಸುಮಾರು 200 ಗ್ರಾಮ್.

ಜಠರಕ್ಕೆ ರಕ್ತ ಪೂರಣೆ ಮತ್ತು ಜಠರದ ಬಲದಲ್ಲಿ ಗುಲ್ಮ ಕಡುಕೆಂಪು ಬಣ್ಣದ್ದು (ಚಿತ್ರದಲ್ಲಿ ನಮ್ಮ ಬಲ) (Stomach blood supply)
ಗುಲ್ಮವನ್ನು ಗೀಟಿನ ಮೂಲಕ ತೋರಿಸಿದೆ

ಗುಲ್ಮವನ್ನು ಬಿಗಿಯಾಗಿ ಆವರಿಸಿಕೊಂಡು ಗಟ್ಟಿಯಾಗಿ ತಂತು ಮತ್ತು ಸ್ನಾಯುಯುಕ್ತವಾದ ಕವಚ ಇವೆ. ಇಲ್ಲಿಂದ ಎಲ್ಲ ದಿಕ್ಕುಗಳಲ್ಲಿಯೂ ತಡಿಕೆಗಳು ಹೊರಟು ಕವಲೊಡದು ಸಂಧಿಸಿ ಗುಲ್ಮವನ್ನು ಸಣ್ಣದೊಡ್ಡ ಭಾಗಗಳಾಗಿ ವಿಭಜಿಸುತ್ತವೆ. ಇವು ಸಹ ತಂತು ಮತ್ತು ಸ್ನಾಯುಯುಕ್ತವಾಗಿವೆ. ಈ ಜಾಲತಂತುಗಳು (ರೆಟಿಕ್ಯುಲರ್ ಫೈಬರ್ಸ್) ಆಯಾ ವಿಭಾಗದ ಒಳಗನ್ನೆಲ್ಲ ಆಕ್ರಮಿಸಿ ಅಲ್ಲಿ ಒಂದು ಬಲೆಯನ್ನು ನಿರ್ಮಿಸುತ್ತವೆ. ಇದರ ನೆರವಿನಲ್ಲಿ ಗುಲ್ಮದ ಮಿಕ್ಕ ಅಂಶಗಳು ವಿಭಾಗದ ತುಂಬ ಹೂರಣದಂತೆ ಭರ್ತಿಯಾಗಿ ನೆಲೆಗೊಂಡಿವೆ. ಹೂರಣ ಕೆಂಪಾಗಿದ್ದು ಅದರಲ್ಲಿ ಅಲ್ಲಲ್ಲಿ ಅಡಗಿರುವ ಸಣ್ಣ ಮತ್ತು ದೊಡ್ಡ ಬಿಳಿಭಾಗಗಳನ್ನು ಗಮನಿಸಬಹುದು. ಗುಲ್ಮವನ್ನು ಕೊಯ್ದು ನೋಡಿದರೆ ಈ ರವಾನೆ ಚೆನ್ನಾಗಿ ಕಂಡುಬರುತ್ತದೆ. ಕೆಂಪು ಭಾಗದಲ್ಲಿ ಕೆಂಪು ರಕ್ತಕಣಗಳು ವಿಶೇಷವಾಗಿವೆ. ಮಿಕ್ಕ ರಕ್ತಕಣಗಳು ರಕ್ತದಲ್ಲಿರುವಂತೆಯೇ ಇಲ್ಲೂ ಉಂಟು. ಬಿಳಿ ಭಾಗದಲ್ಲಿ ಶ್ವೇತಕಣಗಳು ಮಾತ್ರ ಅದರಲ್ಲೂ ದುಗ್ಧರಸಕಣಗಳು, ಇವೆಯಷ್ಟೆ. ವಾಸ್ತವವಾಗಿ ಈ ಬಿಳಿ ಹೂರಣದ ಭಾಗಗಳು ಗುಲ್ಮದೊಳಗೆ ಅಪಧಮನಿಗಳನ್ನು ಅಲ್ಲಲ್ಲಿ ಸುತ್ತುವರಿದಿರುವ ದುಗ್ಧ ರಸನಾಳ ಗಿಣ್ಣುಗಳೇ. ದುಗ್ಧರಸಾಣುಗಳನ್ನು ಉತ್ಪತ್ತಿಮಾಡುವುದು ಮಾತ್ರ ಅವುಗಳ ಕ್ರಿಯೆ. ಕೆಂಪು ಭಾಗದಲ್ಲಿ ಸೈನುಸಾಯ್ಡುಗಳೆಂಬ ಅತ್ಯಂತ ತೆಳುಭಿತ್ತಿಯ ಹಿಗ್ಗಿಸಲ್ಪಡಬಹುದಾದ ಅನೇಕ ರಕ್ತನಾಳಗಳಿವೆ. ಇವುಗಳ ಭಿತ್ತಿಯಲ್ಲಿ ಅಲ್ಲಲ್ಲಿ, ಸಾಧಾರಣ ಸೂಕ್ಷ್ಮದರ್ಶಿಯಲ್ಲಿ ಸುಲಭವಾಗಿ ಕಾಣದ, ರಂಧ್ರಗಳಿವೆ. ನಾಳಗಳ ಭಿತ್ತಿಯಲ್ಲೂ ಹೊರಗೂ ಬೇಕಾದಷ್ಟು ಜಾಲ, ಕಣಗಳೂ ಕಣಭುಂಜಕ ಜೀವಕಣಗಳೂ (ಮ್ಯಾಕ್ರೋಫೇಜಸ್) ಉಂಟು. ನಾಳಗಳು ಕೂಡ ಅವುಗಳ ಕೊನೆಯಲ್ಲಿ ತೆರೆದುಕೊಂಡು ಅವುಗಳಲ್ಲಿ ಪ್ರವಹಿಸುವ ರಕ್ತಕೆಂಪು ಹೂರಣದೊಡನೆ ಮಿಶ್ರವಾಗುತ್ತವೆ ಎಂಬ ಒಂದು ಅಭಿಪ್ರಾಯವಿದೆ. ಹೂರಣದ ಜೀವಕಣಗಳೊಡನೆ ರಕ್ತ ಹೀಗೆ ನೇರವಾಗಿ ಮಿಶ್ರಿತವಾಗಿದ್ದರೂ ಈ ರಕ್ತನಾಳಗಳ ಭಿತ್ತಿಯಲ್ಲಿನ ರಂಧ್ರಗಳಿಂದ ಅದು ಜಿನುಗಿ ಹೊರಬಿದ್ದು ಹೂರಣದೊಡನೆ ಮಿಲನವಾಗ ಬಹುದು. ಅಂತೂ ರಕ್ತ ಕಣಭುಂಜಕ ಜೀವಕಣಗಳ ಸನಿಹದಲ್ಲೆ ಇದೆ ಎನ್ನುವ ಅಂಶ ನಿರ್ವಿವಾದ. ಕಣಗಳ ಜಾಲದೊಳಗೆ ರಕ್ತ ಪ್ರವಹಿಸುವುದರಿಂದ ಮತ್ತು / ಅಥವಾ ಕಣಭುಂಜಕ ಕಣಗಳ ಕ್ರಿಯೆಗೆ ಒಳಪಡುವುದರಿಂದ ಅದರೊಳಗಿರುವ ಅನ್ಯಜೈವಿಕ ಮತ್ತು ಅಜೈವಿಕ ಕಣಗಳು ತಡೆಹಿಡಿಯಲ್ಪಡುತ್ತವೆ. ಆಗ ಇವು ಸಾಮಾನ್ಯವಾಗಿ ರಕ್ತಗತವಾದ ವಿಷಾಣುಗಳಾಗಿರುತ್ತವೆ. ಇಲ್ಲವೆ ಕೆಂಪು ರಕ್ತಕಣಗಳ ಅವಸಾನ ಛಿದ್ರಗಳಾಗಿರುತ್ತವೆ. ಕೆಂಪು ರಕ್ತಕಣಗಳ ಛಿದ್ರಗಳು ಕಣಭುಂಜಕ ಜೀವಕಣಗಳಿಂದ ಭುಂಜಿಸಲ್ಪಟ್ಟು ಅವುಗಳೊಳಗೆ ಛಿದ್ರಗಳ ಕೆಂಪು ವಸ್ತು ಹೀಮೋಗ್ಲೋಬಿನ್ ವಿಶೇಷ ರಾಸಾಯನಿಕ ಮಾರ್ಪಾಡಿಗೊಳಪಡುತ್ತದೆ. ಹೀಮೋಗ್ಲೋಬಿನ್ ಕಬ್ಬಿಣದ ಅಂಶ ಪ್ರತ್ಯೇಕಿಸಲ್ಪಟ್ಟು ಆ ರಾಸಾಯನಿಕ ರಕ್ತಗತವಾಗಿಯೋ ರಕ್ತಪರಿಚಲನೆಯ ಮೂಲಕ ಕಣಸಂಚಾರದಿಂದಲೋ ಎಲುಬಿನ ಕೆಂಪು ಮಜ್ಜೆಗೆ ತಲಪಿ ಅಲ್ಲಿ ಹೊಸ ಹೀಮೋಗ್ಲೋಬಿನ್ನಿನ ಸಂಯೋಜನೆಯಲ್ಲಿ ಪಾಲುಗೊಳ್ಳುತ್ತದೆ. ಕಬ್ಬಿಣ ಸಂಯುಕ್ತಗಳು ಹೆಚ್ಚು ಪರಿಮಾಣದಲ್ಲಿದ್ದರೆ ಕಣಭುಂಜಕ ಜೀವಕಣಗಳಲ್ಲಿ ಅವುಗಳ ಶೇಖರಣೆಯಾಗುತ್ತದೆ. ಹೀಮೋಗ್ಲೋಬಿನ್ನಿನ ವರ್ಣದ ಅಂಶ ಬಿಲಿರೂಬಿನ್ ಎಂಬ ವರ್ಣ ವಸ್ತುವಾಗಿ ಮಾರ್ಪಟ್ಟು ರಕ್ತಗತವಾಗಿ ರಕ್ತಪರಿಚಲನೆಯಿಂದ ಯಕೃತ್ತನ್ನು ಸೇರಿ ಅಲ್ಲಿ ವಿಸರ್ಜಿತ ವಸ್ತುವಾಗಿ ರಕ್ತದಿಂದ ಬೇರ್ಪಡಿಸಲ್ಪಟ್ಟು ಪಿತ್ತರಸದ ಅಂಶವಾಗಿ ಅದರೊಡನೆ ಕರುಳನ್ನು ಸೇರಿ ದೇಹದಿಂದ ಹೊರದೂಡಲ್ಪಡುತ್ತದೆ. ಇಷ್ಟಲ್ಲದೆ ಈ ಸ್ಥಳದಲ್ಲಿ ವಿಷಾಣುಗಳು ಮತ್ತು ಅನ್ಯವಸ್ತುಕಣಗಳು ಪ್ರತಿರೋಧಕ ವಸ್ತುಗಳ ಉತ್ಪತ್ತಿಗೆ ಕಾರಣವಾಗುತ್ತವೆ. ಗುಲ್ಮದ ಕಣಭುಂಜಕ ಜೀವಕಣಗಳು ಕೆಂಪು ಕಣಗಳ ಛಿದ್ರಗಳನ್ನು ಭುಂಜಿಸುವ ಬದಲು ಇಡೀ ಮತ್ತು ಉಪಯುಕ್ತವಾದ ಕೆಂಪು ರಕ್ತಕಣಗಳನ್ನೇ ಕಬಳಿಸಬಹುದು. ಇದರಿಂದ ರಕ್ತ ಕಣಹೀನತೆಯುಂಟಾಗಬಹುದು. ಹಾಗೆ ತಟ್ಟೆಕಣಗಳ (ಪ್ಲೇಟ್ಲೆಟ್ಸ್‌) ಬಹುವಾದ ಕಬಳಿಕೆಯಿಂದ ರಕ್ತಸ್ರಾವ ಸಂಭಾವ್ಯತೆಗಳು ಉಂಟಾಗಬಹುದು. ವಿಷಾಣುಗಳು ಪ್ರಬಲವಾಗಿದ್ದರೆ ಕಣಭುಂಜಕ ಕಣಗಳೇ ನಾಶವಾಗಿ ಗುಲ್ಮದ ಗಾತ್ರ ಕಡಿಮೆಯಾಗಬಹುದು. ವಿಷಾಣು ಸೋಂಕು ಹಿಡಿತಕ್ಕೆ ಬಂದು ರೋಗ ಗುಣಮುಖವಾದಾಗ ಗುಲ್ಮ ಮೊದಲಿನ ಗಾತ್ರಕ್ಕೆ ಬೆಳೆಯುತ್ತದೆ. ಹೀಗೆ ಗುಲ್ಮದ ಅಂಶಗಳ ಪುನರುತ್ಪತ್ತಿಯಾಗುವಾಗ ಅದರಲ್ಲಿನ ಶ್ವೇತ ಕಣಗಳು-ದುಗ್ಧರಸಕಣ ಮತ್ತು ಮಾನೋಸೈಟುಗಳು-ಪ್ರಧಾನ ಪಾತ್ರ ವಹಿಸಿ, ಅವೇ ಬೇರೆ ಕಣಗಳಾಗಿ ಮಾರ್ಪಡುವುದು ಕಂಡುಬಂದಿದೆ. ಹೀಗೆ ಆದ ಕಣಗಳಲ್ಲಿ ಕಣಭುಂಜಕ ಕಣಗಳು ಬಹುವಾಗಿರುತ್ತವೆ. ಇವುಗಳ ಆಧಿಕ್ಯದಿಂದ ಗುಲ್ಮದ ಗಾತ್ರ ಹೆಚ್ಚಾಗಬಹುದು. ಮೇಲೆ ಹೇಳಿರುವಂತೆ ಕಬ್ಬಿಣ ಸಂಯುಕ್ತಗಳು ಕಾರಣಾಂತರದಿಂದ ಅತ್ಯಧಿಕವಾಗಿದ್ದರೂ ಅವುಗಳ ಶೇಖರಣೆಗೆ ಕಣಭುಂಜಕ ಕಣಗಳ ಅಗತ್ಯ ಉಂಟಾಗಿ ಅವು ವಿಶೇಷವಾಗಿ ಉತ್ಪತ್ತಿಯಾಗುತ್ತವೆ. ಆಗಲೂ ಗುಲ್ಮದ ಗಾತ್ರ ವೃದ್ಧಿ ಕಂಡುಬರುತ್ತದೆ. ಗುಲ್ಮದ ಗಾತ್ರ ಅಗಾಧವಾಗಿದ್ದರೆ ಗೆಡ್ಡೆಹೊಟ್ಟೆ (ಸ್ಟ್ಲೀನೊಮೆಗಾಲಿ) ಕಂಡುಬರುತ್ತದೆ. ಗುಲ್ಮವೃದ್ಧಿ ಮತ್ತು ಕಣಭುಂಜಕ ಕಣಗಳ ಹೆಚ್ಚಿನ ಉತ್ಪತ್ತಿ ವಿಷಾಣು ಸೋಂಕುಂಟಾದಾಗ ಕಂಡುಬಂದರೂ ಕಣಭುಂಜಕಗಳು ಗುಲ್ಮದಲ್ಲಿ ಮಾತ್ರ ಇರುವುದಿಲ್ಲವೆನ್ನುವುದನ್ನು ನೆನಪಿಡಬೇಕು. ಬೇರೆಡೆಗಳಲ್ಲಿ ಎಂದರೆ ಪ್ರಧಾನವಾಗಿ ಯಕೃತ್ತು ಮತ್ತು ದುಗ್ಧರಸನಾಳ ಗಂಟುಗಳಲ್ಲಿ ಕಣಭುಂಜಕ ಕಣಗಳ ಚಟುವಟಿಕೆ ಗಣನೀಯವಾಗಿ ಕಂಡುಬರುತ್ತದೆ. ಹಾಗೆಯೇ ಪ್ರತಿರೋಧಕ ವಸ್ತುಗಳ ಉತ್ಪತ್ತಿಯೂ ಗುಲ್ಮದಲ್ಲಿ ಅಗಾಧವಾಗಿ ಕಂಡುಬಂದರೂ ಅದು ಅಲ್ಲಿ ಮಾತ್ರ ಜರಗುವ ಕ್ರಿಯೆಯಾಗಿರದೆ ಮಜ್ಜೆ ಮುಂತಾದ ಭಾಗಗಳಲ್ಲಿಯೂ ಕಂಡುಬರುತ್ತದೆ. ಗುಲ್ಮದ ಬಿಳೀ ಹೂರಣದ ಭಾಗದಲ್ಲಿ ದುಗ್ಧರಸಕಣಗಳು ಮತ್ತು ಮಾನೊಸೈಟುಗಳು ಉತ್ಪತ್ತಿಯಾಗುತ್ತಿದ್ದರೂ ಈ ಉತ್ಪತ್ತಿ ದೇಹದ ಇತರ ಕಡೆಗಳಲ್ಲಿಯೂ ಗಣನೀಯ ಪರಿಮಾಣದಲ್ಲಿ-ಪ್ರಧಾನವಾಗಿ ಎಂದೇ ಹೇಳಬಹುದು-ಜರಗುತ್ತಿರುತ್ತದೆ. ಗುಲ್ಮದ ಸೈನುಸಾಯ್ಡ್‌ಗಳು ರಕ್ತವನ್ನು ತಡೆಹಿಡಿದು ಹಿಗ್ಗಿದ ಸ್ಥಿತಿಯಲ್ಲಿರಬಹುದಾದ್ದರಿಂದ ಪರಿಚಲನೆಯಲ್ಲಿರುವ ರಕ್ತ ಕೆಲವು ವೇಳೆ ಹೆಚ್ಚಾದಾಗ ಇಲ್ಲಿ ಶೇಖರಿಸಲ್ಪಟ್ಟು ಕಡಿಮೆಯಾದಾಗ ಇಲ್ಲಿಂದ ಭರ್ತಿಯಾಗಬಹುದು. ಆದರೆ ಈ ಕ್ರಿಯೆಯೂ ಗುಲ್ಮದಲ್ಲಿ ಮಾತ್ರ ಕಾಣಬರದೆ ಚರ್ಮ, ಯಕೃತ್ತು, ಪುಪ್ಪುಸಗಳಲ್ಲಿಯೂ ಕಾಣಬರುತ್ತದೆ.

ಗುಲ್ಮ ರೋಗಗಳು

[ಬದಲಾಯಿಸಿ]

ಗುಲ್ಮ ರೋಗಗಳು ಸೋಂಕಿನಿಂದ ಅಥವಾ ಬೇರೆ ಕಾರಣಗಳಿಂದ ಉದ್ಭವಿಸಿ ತಾತ್ಕಾಲಿಕವಾಗಿ ಅಥವಾ ಬಹುಕಾಲಿಕವಾಗಿ ಇರುತ್ತವೆ. ರೋಗ ತಗಲಿದಾಗ ಗುಲ್ಮ ದೊಡ್ಡದಾಗುವುದು ಸರ್ವೇಸಾಮಾನ್ಯ. ಗುಲ್ಮದ ಆಜನ್ಮ ಅವ್ಯವಸ್ಥೆಗಳಾಗಿ ಗುಲ್ಮ ಪೂರ್ಣವಾಗಿ ಲೋಪವಾಗಿರುವುದೂ ಬೆನ್ನು ಭಿತ್ತಿಗೆ ಅಂಟಿಕೊಂಡಿರುವುದೂ ಇಲ್ಲವೇ ಉದ್ದವಾದ ದಂಟಿನಿಂದ ನೇತುಹಾಕಿದಂತಿದ್ದು ಚಿಕ್ಕ ಕರುಳಿನಂತೆ ಸ್ಥಳಾಂತರಗೊಳ್ಳುವ ಹಾಗೆ ಇರುವುದೂ ಕಂಡುಬರುತ್ತದೆ. ಸಾಧಾರಣವಾಗಿ ಇವುಗಳಿಂದ ಏನು ತೊಂದರೆಯೂ ಇರುವುದಿಲ್ಲ. ಸ್ಥಳಪಲ್ಲಟವಾದ ಗುಲ್ಮ ಕೆಲವು ವೇಳೆ ಮತ್ತು ಸಾಮಾನ್ಯವಾಗಿ ದೊಡ್ಡದಾದಾಗ ದೇಹಕ್ರಿಯಾ ವ್ಯೆಪರೀತ್ಯವನ್ನು ಉಂಟುಮಾಡಬಹುದು. ವಿಷಾಣು ಸೋಂಕಿನಿಂದ, ಮುಖ್ಯವಾಗಿ ವಿಷಮಶೀತಜ್ವರಾಣು ಸೋಂಕಿನಿಂದ ಮತ್ತು ವೈರಸುಗಳ ಸೋಂಕಿನಿಂದ, ಗುಲ್ಮ ತಾತ್ಕಾಲಿಕವಾಗಿ ಊದಿಕೊಂಡು ಗೆಡ್ಡೆಯಂತೆ ಸಿಕ್ಕುತ್ತದೆ. ಬಹುಕಾಲಿಕವಾದ ಗೆಡ್ಡೆ ಬಹುಕಾಲಿಕ ವಿಷಾಣು ಸೋಂಕುಗಳಾದ ಕ್ಷಯ, ಫರಂಗಿರೋಗ ಇವುಗಳಲ್ಲಿಯೂ ಅಣುಜೀವಿಕೃತ (ಪ್ರೋಟೋಸೋವ ರೋಗಗಳಾದ ಮಲೇರಿಯ) ಕಾಳಜ್ವರಗಳಲ್ಲಿಯೂ ಶಿಸ್ಟೋಸೋಮ ಕೃತರೋಗದಲ್ಲಿಯೂ ಕಾಣಬರುತ್ತದೆ. ಗುಲ್ಮದಲ್ಲಿ ಅಗಾಧವಾಗಿ ರಕ್ತ ಶೇಖರಣೆ ಆದಾಗಲೂ ಸಹಜವಾಗಿಯೇ ಅದು ದಪ್ಪವಾಗುತ್ತದೆ. ಪೋರ್ಟಲ್ ಅಭಿಧಮನಿಯಲ್ಲಿ ರಕ್ತಕರಣೆ ಕಟ್ಟಿಕೊಂಡು ಇಲ್ಲವೇ ಬೇರೆ ರೀತಿಯಲ್ಲಿ ರಕ್ತಪ್ರವಾಹಕ್ಕೆ ಅಡಚಣೆಯುಂಟಾದಾಗ ಅಥವಾ ಯಕೃತ್ತಿನ ಸಿರ್ಹೋಸಿಸ್ ಎಂಬ ವ್ಯಾಧಿಯಿಂದ ರಕ್ತಚಲನೆಗೆ ಅಡ್ಡಿಯುಂಟಾದಾಗ ರಕ್ತ ಗುಲ್ಮದಲ್ಲಿ ಶೇಖರಣೆಯಾಗುತ್ತದೆ. ಏಡಿಗಂತಿಗಳಂಥ ಸ್ವಭಾವವುಳ್ಳ ಲ್ಯುಕೀಮಿಯ, ಲಿಂಫೋಮ ಮುಂತಾದ ರೋಗಗಳಲ್ಲಿಯೂ ಗುಲ್ಮದ ಗೆಡ್ಡೆ ಕಂಡುಬರುತ್ತದೆ. ಸ್ನಿಗ್ಧ ಪದಾರ್ಥಗಳು ಗುಲ್ಮದಲ್ಲಿ ಶೇಖರಣೆಯಾಗುವ ಗಾಶರನ ವ್ಯಾಧಿ, ನೀಮನ್ಪಿಕ್ಕನ ವ್ಯಾಧಿ ಮುಂತಾದವುಗಳಲ್ಲಿಯೂ ಗುಲ್ಮ ಊದಿಕೊಂಡಿರುತ್ತದೆ. ಗುಲ್ಮದ ಗೆಡ್ಡೆಯಿಂದ ಕೆಲವು ವೇಳೆ ರಕ್ತಕಣಹೀನತೆಯೂ ಕೆಲವು ವೇಳೆ ರಕ್ತಕಣತೆಯೂ (ವಾಲಿಸೈಟೀಮಿಯಾ) ಉಂಟಾಗಬಹುದು. ದೇಹಪರೀಕ್ಷೆ ಮತ್ತು ರಕ್ತಪರೀಕ್ಷೆಯಿಂದ ಈ ಅನೇಕ ಸ್ಥಿತಿಗಳನ್ನು ಅರಿತುಕೊಳ್ಳಬಹುದು. ಕೆಲವು ಸಮಯ ವಿಶೇಷ ಪರೀಕ್ಷೆಗಳು ಅಗತ್ಯವಾಗುತ್ತವೆ. ರಕ್ತದ ವಿಷಾಣುಗಳನ್ನು ಪ್ರಯೋಗಶಾಲೆಯಲ್ಲಿ ನೆಟ್ಟು ಬೆಳೆಸುವುದು, ಎದೆಮೂಳೆಯೊಳಗೆ ಸೂಜಿ ಚುಚ್ಚಿ ಅದರೊಳಗಿನ ಮಜ್ಜೆಯನ್ನು ಪರೀಕ್ಷಿಸುವುದು, ಎದೆಯನ್ನು ಕ್ಷಕಿರಣ ಪರೀಕ್ಷೆಗೆ ಒಳಪಡಿಸುವುದು, ಗುಲ್ಮದ ಚೂರೊಂದನ್ನು ವಿಶೇಷ ಶಸ್ತ್ರಕ್ರಿಯೆಯಿಂದ (ಬಯಪ್ಸಿ) ತೆಗೆದುಕೊಂಡು ಪರೀಕ್ಷಿಸುವುದು, ಕ್ಷಯಾಣುಸೋಂಕಿಗೆ, ಫರಂಗಿ ರೋಗಾಣು ಸೋಂಕಿಗೆ ವಿಶಿಷ್ಟವಾದ ಪರೀಕ್ಷೆ ನಡೆಸುವುದು ಇತ್ಯಾದಿ ಕ್ರಮಗಳು ಬೇಕಾಗುತ್ತವೆ. ಇವುಗಳಿಂದ ರೋಗ ಮೂಲತಃ ಗುಲ್ಮದ್ದೋ ಅಥವಾ ಬೇರೆಡೆ ರೋಗದಿಂದ ಗುಲ್ಮ ಗೆಡ್ಡೆ ಕಟ್ಟಿಕೊಂಡಿದೆಯೋ ಎನ್ನುವುದನ್ನು ತಿಳಿಯಬಹುದು. ಗುಲ್ಮವೇ ರೋಗಕಾರಕವಾಗಿದ್ದರೆ ಅಥವಾ ಇತರ ರೋಗಗಳಿಂದ ಗುಲ್ಮ ಅತಿ ದೊಡ್ಡದಾಗಿ ತನ್ನ ಗಾತ್ರದಿಂದಲೇ ದೇಹ ಕಾರ್ಯಗಳಿಗೆ ಅನಾನುಕೂಲವಾಗುವಂತಿದ್ದರೆ ಗುಲ್ಮವನ್ನು ಶಸ್ತ್ರಕ್ರಿಯೆಯಿಂದ ತೆಗೆದು ಹಾಕಬೇಕಾಗುತ್ತದೆ.[][]

ಉಲ್ಲೇಖ

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. Jaroch MT, Broughan TA, Hermann RE (October 1986). "The natural history of splenic infarction". Surgery. 100 (4):
  2. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುಲ್ಮ
"https://kn.wikipedia.org/w/index.php?title=ಗುಲ್ಮ&oldid=1250401" ಇಂದ ಪಡೆಯಲ್ಪಟ್ಟಿದೆ