ವಿಷಯಕ್ಕೆ ಹೋಗು

ಕೆ. ಎಸ್. ನಾಗಭೂಷಣಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆ. ಎಸ್. ನಾಗಭೂಷಣಂ
ಜನನ೨ ಮಾರ್ಚ್ ೧೯೩೩
ಮರಣ೧೫ ಫೆಬ್ರವರಿ ೨೦೧೬
ವೃತ್ತಿ(ಗಳು)ಪತ್ರಕರ್ತ, ವಿಮರ್ಶಕ, ಸಂಪಾದಕ ಮತ್ತು ಪದಬಂಧಕಾರರು

ಕೆ. ಎಸ್. ನಾಗಭೂಷಣಂ (೨ ಮಾರ್ಚ್ ೧೯೩೩ - ೧೫ ಫೆಬ್ರವರಿ ೨೦೧೬) ಒಬ್ಬ ಪತ್ರಕರ್ತ, ವಿಮರ್ಶಕ, ಸಂಪಾದಕ ಮತ್ತು ಪದಬಂಧಕಾರರು.[] ಕನ್ನಡ ಪತ್ರಿಕೋದ್ಯಮದಲ್ಲಿ ೩೦ ಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಇವರು ನಾಭೂ ಎಂದೇ ಚಿರಪರಿಚಿತರಾದರು.[] ಪ್ರಜಾವಾಣಿಯ ಪದಬಂಧದ ಕರ್ತೃವಾದ ಇವರು ಪ್ರಜಾವಾಣಿಯಲ್ಲಿ ಸುದ್ದಿ ಸಂಪಾದಕರಾಗಿದ್ದರು. ೧೯೯೧ ರಲ್ಲಿ ನಿವೃತ್ತಿ ಪಡೆದರೂ ತಮ್ಮ ಭಾಷಾ ಕೆಲಸವನ್ನು ೨೦೧೬ ರವರೆಗೆ ಮುಂದುವರೆಸಿದರು.

ಬಾಲ್ಯ ಜೀವನ

[ಬದಲಾಯಿಸಿ]

ಇವರು ೧೦೩೩ ರ ಮಾರ್ಚ್ ೨ ರಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಜನಿಸಿದರು. ತಂದೆ ಸೋಮಸುಂದರಯ್ಯ ಮತ್ತು ತಾಯಿ ಪಾರ್ವತಮ್ಮ. ಈ ದಂಪತಿಗಳ ಒಂಭತ್ತು ಮಕ್ಕಳಲ್ಲಿ ಇವರು ಎರಡನೆಯವರು. ಇವರು ತಮ್ಮ ವ್ಯಾಸಂಗವನ್ನು ಕೋಲಾರ ಜಿಲ್ಲೆಯಲ್ಲಿ ನಡೆಸಿದರು. ಕಾಲೇಜಿನಲ್ಲಿದ್ದಾಗಲೇ ಕನ್ನಡ ಲೇಖನಗಳನ್ನೂ, ನಾಟಕಗಳನ್ನೂ ರಚಿಸಿದ್ದರು. ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೇ ಕನ್ನಡ ಸಂಘದ ಕಾರ್ಯದರ್ಶಿಯಾಗಿದ್ದರು. ಜಿ.ಪಿ.ರಾಜರತ್ನಂ, ಅನಾಕೃ, ವಿಸೀ, ಡಿ.ವಿ.ಜಿ ಅವರ ಆಪ್ತ ಶಿಷ್ಯರಾಗಿ ತಮ್ಮ ಕನ್ನಡ ಜ್ಞಾನವನ್ನು ಬೆಳಸಿಕೊಂಡರು.

ವೃತ್ತಿ ಜೀವನ

[ಬದಲಾಯಿಸಿ]

ಪತ್ರಿಕಾ ಜೀವನಕ್ಕೆ ಕಾಲಿಡುವ ಮುನ್ನ ನಾಭೂರವರು ಮುಂಬೈನಲ್ಲಿ ಆಲ್ ಇಂಡಿಯಾ ಲೋಕಲ್ ಸೆಲ್ಫ್‌ನಲ್ಲಿ ಗವರ್ನಮೆಂಟ್ ಪ್ರಕಟಿತ ಕನ್ನಡ ಸಂಪಾದಕರಾಗಿ ಕೆಲಸ ನಿರ್ವಹಿಸಿದರು. ಅದರ ಜೊತೆಗೆ ಲಿಂಟಾಸ್ ಕಂಪನಿಯಲ್ಲಿ ಕನ್ನಡದ ಜಾಹೀರಾತುಗಳನ್ನು ಬರೆಯುವ ಕೆಲಸ ನಿರ್ವಹಿಸಿದರು. ೧೯೬೦ - ೬೨ ರಲ್ಲಿ ಹೊರಬಂದಿದ್ದ ಕನ್ನಡ ಜಾಹೀರಾತುಗಳಿಗೆ ತಮ್ಮ ವಿಭಿನ್ನ ಶೈಲಿಯ ಶೀರ್ಷಿಕೆಗಳನ್ನು ನೀಡಿದರು.

ತಾಯಿಯ ಅನಾರೋಗ್ಯದ ಕಾರಣ ಬೆಂಗಳೂರಿಗೆ ಬಂದ ನಾಭೂ ಅವರು ಕಾರ್ಯನಿರತ ಪತ್ರಕರ್ತರಾಗಿ ಬಿ.ಎನ್.ಗುಪ್ತರ ಜನಪ್ರಗತಿಯಲ್ಲಿ ವೃತ್ತಿ ಆರಂಭಿಸಿದರು. ಅಲ್ಲಿಂದ ತಾಯಿನಾಡು ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ಸೇರಿದರು. ನಂತರ ೧೯೬೩ ರಿಂದ ಮೂರು ವರ್ಷಗಳ ಕಾಲ ನಾಭೂ ಅವರು ಸಂಯುಕ್ತ ಕರ್ನಾಟಕದಲ್ಲಿ ಉಪಸಂಪಾದಕರಾಗಿ ಪತ್ರಿಕೆಯ ಪ್ರತಿಷ್ಠಿತ ಅಂಕಣಗಳನ್ನು ನಿರ್ವಹಿಸಿದರು. ಸಿನಿಮಾ, ನಾಟಕ, ನಾಟ್ಯ ಹಾಗೂ ಸಂಗೀತ ಕಾರ್ಯಕ್ರಮಗಳಲ್ಲಿ ವಿಮರ್ಶಕರಾಗಿ ಕೆಲಸ ನಿರ್ವಹಿಸಿದರು. ೧೯೬೭ ರಲ್ಲಿ ಪ್ರಜಾವಾಣಿಗೆ ಪಾದರ್ಪಣೆ ಮಾಡಿದರು. ಅಲ್ಲಿಂದ ೨ ೬ವರ್ಷಗಳ ಕಾಲ ಪ್ರಜಾವಾಣಿಯಲ್ಲಿ ಉಪಸಂಪಾದಕ, ಮುಖ್ಯ ಉಪಸಂಪಾದಕ ಹಾಗು ಸುದ್ದಿ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ನಿವೃತ್ತಿಯ ನಂತರ ೧೯೬೭ ರಲ್ಲಿ, ಇವರು ಪ್ರಜಾವಾಣಿಯಲ್ಲಿ ಪದರಂಗ (ಪದಬಂಧ)ವನ್ನು ಆರಂಭಿಸಿದರು. ಇವರು ಒಟ್ಟು ೨೪೯೦ ಪದಬಂಧಗಳನ್ನು ಪ್ರಜಾವಾಣಿಗೆ ಕೊಡುಗೆಯಾಗಿ ನೀಡಿದರು.[] ಪ್ರಜಾವಾಣಿಯ ಪದರಂಗದ ಜೊತೆಗೆ ಉದಯವಾಣಿಯಲ್ಲಿ ದಿನಪದ, ವನಿತಾ ಮಾಸಪತ್ರಿಕೆಗೆ ವನಿತಾಪದ, ವಿಜಯಚಿತ್ರ ಚಲನಚಿತ್ರ ಪತ್ರಿಕೆಗೆ ೨೦೦ ಕ್ಕೂ ಹೆಚ್ಚು ವಿಜಯಪದ, ವನಿತಾ ವಾರಪತ್ರಿಕೆಗೆ ವನಿತಾಪದ ಹೀಗೆ ಹಲವಾರು ಪತ್ರಿಕೆಗಳಿಗೆ ಪದಬಂಧಗಳ ಕೊಡುಗೆ ನೀಡಿದ್ದಾರೆ.

ಬಹುಮುಖಿ ಪ್ರತಿಭಾನ್ವಿತರಾದ ನಾಗಭೂಷಣರವರು ಆಕಾಶವಾಣಿ, ದೂರದರ್ಶನ, ಸಿನಿಮಾ ಹಾಗೂ ನಾಟಕರಂಗಳಲ್ಲೂ ತಮ್ಮನ್ನು ತೊಡಗಿಸಿಕೊಂಡರು. ಇವರ ಕೃತಿಗಳು ನಾಗಲೋಚನ-ನುಡಿವಚನ,ಹನಿ-ದನಿ, ಪದಾಂತರಂಗ ಹಾಗೂ ಮಾಧ್ಯಮ ಪಾರಿಭಾಷಿಕ. ಗೃಹಿಣಿ, ಅಮರಭಾರತಿ, ಸೇಡಿನ ಕಿಡಿ, ಅಂತರ, ಅಪರಂಜಿ ಮಕ್ಕಳು ಚಲನಚಿತ್ರಗಳಿಗೆ ಸಂಭಾಷಣೆ ಬರೆದು ಸಹನಿರ್ದೇಶನವನ್ನು ಮಾಡಿದ್ದಾರೆ. ಹಾಗೆಯೇ ಕೆಲವು ಚಿತ್ರಗಳಲ್ಲಿ ನಟನೆಯನ್ನು ಕೂಡ ಮಾಡಿದ್ದಾರೆ.

ಪ್ರಶಸ್ತಿಗಳು

[ಬದಲಾಯಿಸಿ]
  • ಪಿ.ರಾಮಯ್ಯ ಪ್ರಶಸ್ತಿ
  • ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ
  • ಡಿವಿಜಿ ಪ್ರಶಸ್ತಿ

ನಾಭೂ ಅವರು ೨೦೧೬ ರ ಫೆಬ್ರವರಿ ೧೫ ರಂದು ಮರಣ ಹೊಂದಿದರು.

ಉಲ್ಲೇಖಗಳು

[ಬದಲಾಯಿಸಿ]