ವಿಷಯಕ್ಕೆ ಹೋಗು

ಕಾಂಗೊ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಲೂಕು ಬಳಿ ಲಾಂಗೊ ನದಿ

ಕಾಂಗೊ ನದಿ ಮಧ್ಯ ಆಫ್ರಿಕಾದ ಪಶ್ಚಿಮ ಪಾರ್ಶ್ವದಲ್ಲಿನ ಅತಿ ಉದ್ದವಾದ ನದಿ[], ಆಫ್ರಿಕದ ಅತ್ಯಂತ ಉದ್ದನೆಯ ನದಿಗಳಲ್ಲಿ ಎರಡನೆಯದು(ಇದಕ್ಕಿಂತ ಉದ್ದವಾದ್ದು ನೈಲ್ ನದಿ ). ಸುಮಾರು ೪,೭೦೦ ಕಿ.ಮೀ.[] ಉದ್ದಕ್ಕೆ ಹರಿಯುವ ಕಾಂಗೊ ನದಿಯು ನೈಲ್ ನದಿಯ ನಂತರ ಆಫ್ರಿಕದ ಎರಡನೆಯ ಅತಿ ದೊಡ್ಡ ನದಿಯಾಗಿದೆ. ಈ ನದಿ ಮತ್ತದರ ಉಪನದಿಗಳು ಜಗತ್ತಿನ ಎರಡನೆಯ ಅತಿ ವಿಸ್ತಾರವಾದ ಮಳೆಕಾಡಿನ ಮೂಲಕ ಹರಿಯುತ್ತವೆ. ಅಲ್ಲದೆ ಪ್ರತಿ ಸೆಕೆಂಡಿಗೆ ೧೪,೭೬,೩೭೬ ಘನ ಅಡಿಗಳಷ್ಟು ನೀರನ್ನು ಸಾಗಿಸುವ ಕಾಂಗೊ ನದಿಯು ಅಮೆಜಾನ್ ನದಿಯ ನಂತರ ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣದ ಜಲರಾಶಿಯನ್ನು ಹೊಂದಿದೆ. ವಿಷುವದ್ರೇಖೆಯ ಆಸುಪಾಸಿನಲ್ಲಿ ಹರಿಯುವ ಕಾರಣದಿಂದಾಗಿ ಈ ಕಾಂಗೊ ನದಿಯಲ್ಲಿ ವರ್ಷದ ಎಲ್ಲಾ ಕಾಲದಲ್ಲಿಯೂ ಸರಿಸುಮಾರು ಸ್ಥಿರ ಮತ್ತು ಏಕಪ್ರಮಾಣದದ ಹರಿವನ್ನು ಹೊಂದಿದೆ. ನದಿಯ ಸಾಗರಮುಖದಲ್ಲಿ ಸ್ಥಾಪಿತವಾಗಿದ್ದ ಪ್ರಾಚೀನ ಕಾಂಗೊ ಅರಸೊತ್ತಿಗೆಯಿಂದ ನದಿಯು ತನ್ನ ಹೆಸರನ್ನು ಪಡೆದಿದೆ. ನದಿಯ ದಂಡೆಯಲ್ಲಿರುವ ಕಾಂಗೊ ಗಣರಾಜ್ಯ ಮತ್ತು ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯಗಳು ನದಿಯ ಹೆಸರನ್ನೇ ಇಟ್ಟುಕೊಂಡಿವೆ.

ಪೂರ್ವ ಆಫ್ರಿಕಾದ ಪರ್ವತಪ್ರಾಂತ್ಯ ಮತ್ತು ಎತ್ತರದ ಪ್ರದೇಶವು ಕಾಂಗೊ ನದಿಯ ಉಗಮಸ್ಥಾನ. ಹೊರತಾಗಿ ನದಿಗೆ ಗಣನೀಯ ಪ್ರಮಾಣದಲ್ಲಿ ನೀರು ಟಾಂಗನ್ಯೀಕಾ ಮತ್ತು ಎಮ್ವೇರು ಸರೋವರಗಳಿಂದ ಸಹ ಹರಿದು ಬರುವುದು. ಈ ಸರೋವರಗಳಿಂದ ಹೊರಹೊರಟ ನೀರಿನ ತೊರೆ ಲುವಾಲಾಬಾ ನದಿಯೆಂದು ಹೆಸರಾಗಿ ಮುಂದೆ ಬೊಯೋಮಾ ಜಲಪಾತದ ತಳದಿಂದ ಮುಂದಕ್ಕೆ ಕಾಂಗೊ ನದಿಯೆಂದು ಕರೆಯಿಸಿಕೊಳ್ಳುವುದು. ಜಾಂಬಿಯಚಾಂಬೇಶಿ ನದಿಯು ಕೂಡ ಕಾಂಗೊ ನದಿಯ ಉಪನದಿಯೆಂದು ಪರಿಗಣಿಸಲ್ಪಡುವುದು.

ನದಿಯ ಮೂಲ ಆಫ್ರಿಕದ ಪೂರ್ವ ಭಾಗದ ನ್ಯಾಸ ಮತ್ತು ಟಾಂಗನ್ಯೀಕ ಸರೋವರಗಳ ನಡುವೆ ಉದ್ಭವಿಸುವ ಝಾಂಬೀಸಿ ನದಿಯೆಂದು ಗುರ್ತಿಸಿದ್ದಾರೆ.

ಝಾಂಬೀಸಿ ತನ್ನ ಪಥದಲ್ಲಿ ಅನೇಕ ಕಿರಿಯ ಮತ್ತು ಹಿರಿಯ ನದಿಗಳನ್ನು ಸೇರಿಸಿಕೊಂಡು ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರವನ್ನು ಸೇರುವ ವರೆಗೆ ನಾನಾ ಹೆಸರುಗಳನ್ನು ತಾಳಿ ಹರಿಯುತ್ತದೆಯಲ್ಲದೆ ಸಮಭಾಜಕವನ್ನು ಎರಡು ಸಾರಿ ದಾಟುತ್ತದೆ. ಮಧ್ಯ ಪಶ್ಚಿಮ ಆಫ್ರಿಕದಲ್ಲಿ ಕಾಮನ ಬಿಲ್ಲಿನಂತೆ ಬಾಗಿ ಹರಿಯುವ ಈ ನದಿಯ ವಿಶಾಲ ಕಣಿವೆ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಬಹುತೇಕ ಎಲ್ಲ ಭಾಗವನ್ನೂ ಕಾಂಗೋ ಗಣರಾಜ್ಯದ ಪ್ರಮುಖ ಪ್ರದೇಶಗಳನ್ನೂಝಾಂಬಿಯದ ಪಶ್ಚಿಮ ಭಾಗವನ್ನೂ ಆಂಗೋಲದ ಉತ್ತರ ಭಾಗವನ್ನೂ ಆವರಿಸಿಕೊಂಡಿದೆ.

ಬೊಯೋಮಾ ತಡಸಲಿನ ತಳದಿಂದ ಕಾಂಗೊ ನದಿಯು ಪಶ್ಚಿಮಾಭಿಮುಖವಾಗಿ ಹರಿಯುವ ಕಾಂಗೊ ನದಿಯು ಆಗ್ನೇಯಕ್ಕೆ ತಿರುಗಿ ಉಬಾಂಗಿ ನದಿಯನ್ನು ಕೂಡುವುದು. ಅಲ್ಲಿಂದ ಮುಂದೆ ಮಲೇಬೋ ಸರಸ್ಸಿನ ಮೂಲಕ ಹಾದು ಗಣನೀಯವಾಗಿ ಕಿರಿದಾಗಿ ತೀವ್ರ ಆಳವಾದ ಕೊಳ್ಳಕ್ಕೆ ಧುಮುಕುವುದು. ಈ ಸ್ಥಾನಗಳೆಲ್ಲವೂ ಒಟ್ಟಾಗಿ ಲಿವಿಂಗ್‍‍ಸ್ಟನ್ ಜಲಪಾತವೆಂದು ಕರೆಯಲ್ಪಡುವುವು. ಕೊನೆಯಲ್ಲಿ ಮುವಾಂಡಾ ಎಂಬ ಸಣ್ಣ ಪಟ್ಟಣದ ಬಳಿ ದಕ್ಷಿಣ ಅಟ್ಲಾಂಟಿಕ್ ಮಹಾಸಾಗರವನ್ನು ಸೇರುವುದು.

ಕಾಂಗೋ ನದಿಯನ್ನು ಸಾಮಾನ್ಯವಾಗಿ ಮೇಗಣ ಕಾಂಗೋ, ನಡುವಣ ಕಾಂಗೋ ಮತ್ತು ತಳಗಣ ಕಾಂಗೋ ಎಂದು ವಿಭಜಿಸಬಹುದು. ನಡುವಣ ಕಾಂಗೋ ಅರ್ಧ ವರ್ತುಲಾಕಾರದಲ್ಲಿ ಹರಿಯುತ್ತದೆ.

ಮೇಗಣ ಕಾಂಗೋ

[ಬದಲಾಯಿಸಿ]

ಕಾಂಗೋ ನದಿಗೆ ಮೂಲವಾದಝಾಂಬೀಸಿ ಕರುಂಗ ನದಿಯನ್ನು ಕೂಡಿಕೊಂಡು ಫಲವತ್ತಾದ ಭೂಮಿಯಲ್ಲಿ ನೈಋತ್ಯಕ್ಕೆ ಹರಿದು ಬಂಗವ್ಯೂಲ ಸರೋವರಕ್ಕೆ ನೆರೆಯಲ್ಲಿರುವ ವಿಶಾಲ ಜೌಗು[] ಪ್ರದೇಶವನ್ನು ಸೇರುತ್ತದೆ. ಇಲ್ಲಿಂದ ಹೊರಡುವ ಲೂವಪೂಲ (ಲೂವೂವ) ನದಿಝಾಂಬೀಸಿ ನದಿಯ ಮುಂದುವರಿದ ಭಾಗ.  ಲೂವಪೂಲ ನದಿಗೆ ದೊಡ್ಡ ನದಿ ಎಂಬ ಹೆಸರೂ ಇದೆ. ಲೂವಪೂಲ ಜೌಗು ಪ್ರದೇಶವನ್ನು ಬಿಟ್ಟಮೇಲೆ ತನ್ನ ಗತಿಯಲ್ಲಿ ಪಶ್ಚಿಮಕ್ಕೆ ಬಾಗಿ ತರುವಾಯ ದಕ್ಷಿಣಾಭಿಮುಖವಾಗಿಝಾಂಬೀಸಿ ನದಿಯ ಜಲಾನಯವ ಭೂಮಿಯತ್ತ ಸಾಗಿ ಉತ್ತರಕ್ಕೆ ತಿರುಗಿ ಮುಂಬಟುಟ (ಮುಂಬರಿಯ) ಜಲಪಾತವಾಗಿ ಪರಿಣಮಿಸುತ್ತದೆ. ಇದರ ಭೋರ್ಗರೆತ ನೀರವ ರಾತ್ರಿಯಲ್ಲಿ ಸುಮಾರು 8-9 ಮೈಲಿಗಳ ದೂರ ಕೇಳಿಸುವುದುಂಟು. ಇಲ್ಲಿಂದ ಮುಂದೆ 100 ಮೈಲಿಗಳಷ್ಟು ದೂರ, ಜಾನ್‍ಸ್ಟನ್ ಜಲಪಾತವನ್ನು ಮುಟ್ಟುವವರೆಗೆ, ನದಿ ಜಲಸಂಚಾರಕ್ಕೆ ಯೋಗ್ಯವಾಗಿಲ್ಲ. ಅಲ್ಲಿಂದ ಮುಂದಕ್ಕೆ, ಮ್ವೇರೂ ಸರೋವರವನ್ನು ಸೇರುವುದಕ್ಕೆ ಮುಂಚೆ, ಲೂವಪೂಲ ಮತ್ತೊಮ್ಮೆ ನದೀಮುಖಜ ಭೂಮಿಯಂಥ ಜೌಗು ಪ್ರದೇಶವನ್ನು ಸೇರುತ್ತದೆ. ತರುವಾಯ ಅದು ಮ್ವೇರೂ ಸರೋವರದ ವಾಯವ್ಯ ಅಂಚಿನಿಂದ ಹೊರಬಂದು ಪಶ್ಚಿಮಾಭಿಮುಖವಾಗಿ ತಿರುಗಿ ಕೆಬಾರ ಮತ್ತು ಮುಗಿಲಾ ಪರ್ವತಶ್ರೇಣಿಗಳಿಗೆ ಅಡ್ಡಲಾಗಿ ಹರಿದು ಲೂವಲಾಬ [](ಕೋಮೊಲೋಂಡೊ) ನದಿಯನ್ನು ಸೇರುತ್ತದೆ. ಕೆಲವರು ಕೋಮೊಲೋಂಡೊ ನದಿಯನ್ನೇ ಕಾಂಗೋ ನದಿಯ ಮೂಲವೆಂದು ತಿಳಿಯುತ್ತಾರೆ. ಲೂವಪೂಲ ಮತ್ತು ಲೂವಲಾಬ ನದಿಗಳ ಸಂಗಮವಾದ ಮೇಲೆ ಉತ್ತರಕ್ಕೆ ಹರಿಯುವ ನದೀಭಾಗಕ್ಕೆ ಲೂವಲಾಬ-ಕಾಂಗೋ ಎಂಬ ಹೆಸರುಂಟು. ಆ ಪ್ರದೇಶದಲ್ಲಿ ನದಿಯ ಅಗಲ 1/2 ಮೈಲಿ. ಅದು ಉತ್ತರ ಮತ್ತು ವಾಯವ್ಯ ದಿಕ್ಕುಗಳನ್ನನುಸರಿಸಿ ಭೂಮಧ್ಯರೇಖೆಯ ಕಡೆ ಹರಿಯುತ್ತದೆ. ನದಿಯ ಈ ಭಾಗದ ಹರಿವಿನಲ್ಲಿ ಡಿಯಾ ರಭಸದ ಇಳಿವುಗಳಿಂದ ಹಡಗಿನ ಸಂಚಾರಕ್ಕೆ ಮೊತ್ತಮೊದಲ ಅಡಚಣೆ ಕಾಣಿಸಿಕೊಳ್ಳುತ್ತದೆ. ಅಲ್ಲಿಂದ ಮುಂದಕ್ಕೆ ಲೂವಲಾಬ ಕಾಂಗೋ ಪೋರ್ಟಿ ದ ಎನ್‍ಫರ್ ಎಂಬ ಕಡಿದಾದ ಕಮರಿಗಳ ಮೂಲಕ ಪ್ರವಹಿಸುತ್ತದೆ. ಈ ಸ್ಥಳದಿಂದ ಮುಂದಕ್ಕೆ ಅನೇಕ ಜಲಪಾತಗಳಿಂದಲೂ ರಭಸಪ್ರವಾಹಗಳಿಂದಲೂ ಕೂಡಿ ಸಮತಲಭೂಮಿಯ ಅತಿರಮ್ಯ ಅರಣ್ಯಗಳ ನಡುವೆ ಬಲು ಠೀವಿಯಿಂದ ಹರಿಯುತ್ತದೆ. ಈ ಭಾಗದಲ್ಲಿ ನದಿಯ ಅಗಲ ಕೆಲವು ಕಡೆ 1 ಮೈಲಿ. ಈ ಭಾಗದಲ್ಲಿ ಸೇರುವ ಕೂಡುನದಿಗಳಲ್ಲಿ ಮುಖ್ಯವಾದ ಲೂಕೂಗ ನದಿ ಟಾಂಗನ್ಯೀಕ ಸರೋವರಕ್ಕೂ ಕಾಂಗೋ ನದಿಗೂ ಸಂಬಂಧ ಕಲ್ಪಿಸುತ್ತದೆ.

ಸಮಭಾಜಕಕ್ಕೆ ಕೆಲವು ಮೈಲಿಗಳ ಕೆಳಕ್ಕೆ ನದಿ ಸ್ಟ್ಯಾನ್ಲಿ ಜಲಪಾತವಾಗಿ, ಅಲ್ಲಿಂದ, ಮುಂದಕ್ಕೆ ತನ್ನ ಉತ್ತರಾಭಿಮುಖ ಪಥವನ್ನು ಬದಲಿಸಿ, ಸಮಭಾಜಕದ ಮಹಾಕಣಿವೆಗಳ ಮೂಲಕ ಪಶ್ಚಿಮ ದಿಕ್ಕಿನತ್ತ ಸಾಗುತ್ತದೆ. ಸ್ಟ್ಯಾನ್ಲಿ ಜಲಪಾತ ಪ್ರದೇಶದಲ್ಲಿ ನದಿ ಸುಮಾರು 60 ಮೈಲಿಗಳಷ್ಟು ದೂರ ರಭಸದ ಹಲವಾರು ಜಾರುಗಳಿಂದ ಕೂಡಿರುವುದರಿಂದ ಅಲ್ಲಿ ಹಡಗಿನ ಸಂಚಾರಕ್ಕೆ ಅನುಕೂಲವಿಲ್ಲ.

ನಡುವಣ ಕಾಂಗೋ

[ಬದಲಾಯಿಸಿ]

ಸ್ಟ್ಯಾನ್ಲಿ ಜಲಪಾತದಿಂದ ಮುಂದಕ್ಕೆ, 980 ಮೈಲಿಗಳ ದೂರ, ನದಿಯಾವ ಅಡಚಣೆಯೂ ಇಲ್ಲದೆ ಹರಿದು, ಇಡೀ ವರ್ಷ ನೌಕಾಸಂಚಾರಕ್ಕೆ ಯೋಗ್ಯವಾಗಿದೆ. ಜಲಪಾತದ ಬಳಿಯಿಂದ ನದಿ ವಾಯವ್ಯಕ್ಕೆ 630 ಮೈಲಿಗಳ ದೂರ ಅರ್ಧಚಂದ್ರಾಕಾರದಲ್ಲಿ ಹರಿದು ಮತ್ತೆ ಸಮಭಾಜಕವನ್ನು ಕತ್ತರಿಸುತ್ತದೆ.  ನದಿ ತನ್ನ ಉತ್ತರದ ಗರಿಷ್ಠ ಬಿಂದುವನ್ನು ಮುಟ್ಟಿಬಾಗುವುದು ಈ ಅರ್ಧವೃತ್ತಾಕಾರದ ಹರಿವಿನಲ್ಲೇ. ಸ್ಟ್ಯಾನ್ಲಿ ಜಲಪಾತಗಳಿಗೂ, ಪಶ್ಚಿಮದಲ್ಲಿ ಸಮಭಾಜಕವನ್ನು ನದಿ ಮುಟ್ಟುವ ಎಡೆಗೂ ಇರುವ ಅಡ್ಡದೂರ 472 ಮೈ.

ಸ್ಟ್ಯಾನ್ಲಿ ಜಲಪಾತದಿಂದ ಮುಂದಕ್ಕೆ ಕಾಂಗೋ ನದಿ 1/2 ಮೈಲಿಯಿಂದ 1 ಮೈಲಿ ಅಗಲ ತಾಳಿ ಬೆಟ್ಟಗುಡ್ಡಗಳ ನಡುವೆ ಪ್ರವಹಿಸುತ್ತದೆ. ಜಲಪಾತಕ್ಕೆ 130 ಮೈಲಿಗಳ ದೂರದಲ್ಲಿ ಆರುವೀಮಿ ನದಿ ಅದರೊಂದಿಗೆ ಸಂಗಮವಾಗುತ್ತದೆ. ಅಲ್ಲಿಂದ ಮುಂದೆ ನದಿಯ ಅಗಲ 4-5 ಮೈ. ಈ ಭಾಗದಲ್ಲಿ ನದಿಯ ನಡುವೆ ನೆರೆಮಣ್ಣಿನಿಂದ ಕೂಡಿದ ಅನೇಕ ದ್ವೀಪಗಳುಂಟು. ಆರುವೀಮಿ ಮತ್ತು ಕಾಂಗೋ ನದಿಗಳ ಸಂಗಮಸ್ಥಳದಿಂದ ಮತ್ತೆ 100 ಮೈಲಿಗಳ ದೂರದಲ್ಲಿ ಲೊಯೀಕ ನದಿ ಉತ್ತರದಿಂದ ಬಂದು ಕಾಂಗೋವನ್ನು ಸೇರುತ್ತದೆ. ಲೊಯೀಕ ನದಿಗೆ ಇಟಿಂಬಿರಿ ಎಂಬುದು ಇನ್ನೊಂದು ಹೆಸರು.

ಕಾಂಗೋ ನದಿಯ ಹಿರಿಯ ದ್ವೀಪಗಳಿರುವುದು ಅದರ ಕುದುರೆಲಾಳಾಕೃತಿಯ ಹರಿವಿನ ದಕ್ಷಿಣ ಬಾಗಿನಲ್ಲಿ. ಅವುಗಳಲ್ಲಿ ಇಸುಂಬ ಮತ್ತು ನಸುಂಬ ದ್ವೀಪಗಳೇ ಅತ್ಯಂತ ದೊಡ್ಡವು. ಇವೆರಡು ದ್ವೀಪಗಳ ಉದ್ದ ಅನುಕ್ರಮವಾಗಿ 30 ಮತ್ತು 50 ಮೈ.; ಪರಮಾಧಿ ಅಗಲ 5 ಮೈ. ನಸುಂಬ ದ್ವೀಪದ ಎದುರಿಗೆ ಉತ್ತರದಿಂದ ಮೊಂಗಾಲ ನದಿ ಬಂದು ಕಾಂಗೋವನ್ನು ಕೂಡುತ್ತದೆ. ಸಮಭಾಜಕಕ್ಕೆ ಸ್ವಲ್ಪ ಉತ್ತರದಲ್ಲಿ ಲುಲಂಬ, ಐಕೆಲೆಂಬ ಮತ್ತು ರುಕಿ-ಈ ಮೂರು ನದಿಗಳು ದಕ್ಷಿಣದಿಂದ ಹರಿದು ಬಂದು ಕಾಂಗೋವನ್ನು ಸೇರುತ್ತವೆ.  ಸಮಭಾಜಕಕ್ಕೆ ಮೂವತ್ತು ಮೈಲಿಗಳ ಕೆಳಗೆ ಕಾಂಗೋದ ಉತ್ತರದ ಕೂಡುನದಿಗಳಲ್ಲಿ ಅತ್ಯಂತ ದೊಡ್ಡದಾದ ಯುಬಾಂಗ್ ಬಂದು ಸಂಗಮಿಸುತ್ತದೆ.  ಈ ಭಾಗದಲ್ಲಿ ಕಾಂಗೋ ನದಿಯ ಅಡ್ಡಳತೆ 8 ಮೈ. ಯುಬಾಂಗ್ ಸಂಗಮದ ಎದುರಿಗೆ ಹತ್ತು ಮೈಲಿ ಉದ್ದವುಳ್ಳ ಕಡಿದಾದ ನಾಲೆಯೊಂದರ ಮುಖವುಂಟು.  ಈ ನಾಲೆ ಕಾಂಗೋ ನದಿಗೂ ನಟೊಂಬಾ ಮಹಾ ಸರೋವರಕ್ಕೂ ಸಂಪರ್ಕ ಕಲ್ಪಿಸುವುದಾಗಿದ್ದು ಪ್ರವಾಹ ಕಾಲದಲ್ಲಿ ಕಾಂಗೋ ನೀರು ಈ ಸರೋವರಕ್ಕೆ ಹರಿದು ಹೋಗುತ್ತದೆ. ನಟೊಂಬಾ ಸರೋವರದ ಉದ್ದ 23 ಮೈ.; ಅದರ ಅಗಲ 8ರಿಂದ 12 ಮೈ. 

ತಳಗಣ ಕಾಂಗೋ

[ಬದಲಾಯಿಸಿ]

ಯುಬಾಂಗ್ ಸಂಗಮದ ತರುವಾಯ ೧೨೫ ಮೈಲಿಗಳಷ್ಟು ದೂರ ನದಿಯ ಅಗಲ ೧-೨ ಮೈ. ನದಿಯ ಈ ಭಾಗಕ್ಕೆ ನಾಲೆ ಎಂದು ಹೆಸರು.  ಈ ಭಾಗದಲ್ಲಿ ಕಾಂಗೋವನ್ನು ಸೇರುವ ನದಿ ಕಾಸೈ.  ಅಲ್ಲಿಂದ ಮುಂದೆ ೨೦ ಮೈ. ಉದ್ದ ೧೪ ಮೈ. ಅಗಲವಿರುವ ಸರೋವರಾಕೃತಿಯ ಸ್ಟ್ಯಾನ್ಲಿ ಮಡುವನ್ನು ಪ್ರವೇಶಿಸುತ್ತದೆ. ಇಲ್ಲಿಗೆ ನದಿಯ ಒಳನಾಡಿನ ಸೌಕಾಸಂಚಾರದ ಹಂತ ಮುಗಿದಂತೆ.

ಸ್ಟ್ಯಾನ್ಲಿ ಮಡುವಿನ ಅಂಚಿನ ಬಳಿ ನದಿಯ ಉತ್ತರ ದಂಡೆಯ ಮೇಲೆ ಇರುವುದೇ ಬ್ರ್ಯಾಜುವಿಲ್ ನಗರ. ಇದು ಕಾಂಗೋ ಗಣರಾಜ್ಯದ ರಾಜಧಾನಿ. ಮಡುವಿನ ದಕ್ಷಿಣದಲ್ಲಿರುವ ಬೆಟ್ಟಸಾಲುಗಳ ಮುಂದೆ ೪ ಮೈಲಿ ದೂರದಲ್ಲಿ ಕಾಂಗೋ ನದಿಯನ್ನು ಪದೇ ಪದೇ ತಡೆಯುವ ಸುಮಾರು ೩೦ ಪ್ರಮುಖ ಜಲಪಾತಗಳುಂಟು. ಇವುಗಳಲ್ಲಿ ಮೊದಲನೆಯದಕ್ಕೆ ಸುಮಾರು ೩೦೦ ಗಜಗಳ ದೂರದಲ್ಲಿರುವುದೇ ಕೀನ್ಷಾಸ: ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ರಾಜಧಾನಿ. ಕೊನೆಯ ಜಲಪಾತ ಇರುವುದು ಮಟಾಡಿಯಲ್ಲಿ.

ಮಟಾಡಿಯ ಬಳಿಯ ಕಾಂಗೋ ಅಳಿವೆಯ ಭಾಗ ೯೦೦ ಅಡಿಗಳಷ್ಟು ಆಳವಾಗಿದ್ದು ಸಮುದ್ರ ಸೇರುವ ವರೆಗೆ ಸುಮಾರು ೧೦೦ ಮೈ. ಗಳಷ್ಟು ಉದ್ದವುಂಟು. ಇದರ ಮೇಲೆ ಸುಮಾರು ೮೫ ಮೈ. ದೂರದ ವರೆಗೆ ಸಾಗರಗಾಮಿ ಹಡಗುಗಳು ಸಂಚಾರ ಮಾಡಬಹುದು. ನದಿ ಸಮುದ್ರವನ್ನು ಕೂಡುವ ಎಡೆಯಲ್ಲಿ ಉತ್ತರದ ಬನಾನಾ ಪಾಯಿಂಟ್[] ಎಂಬ ಸ್ಥಳದಿಂದ ದಕ್ಷಿಣದ ಷಾರ್ಕ್ ಪಾಯಿಂಟ್ ವರೆಗೆ ೭ ಮೈಲಿ ಅಗಲವುಂಟು.  ಸಮುದ್ರದೊಳಕ್ಕೆ ನದಿಯ ಓಟ ಮೂವತ್ತು ಮೈಲಿಗಳಷ್ಟು ದೂರಕ್ಕೆ ಸಾಗಿರುವುದನ್ನು ಕಾಂಗೋ ನದಿಯ ಕಂದು ನೀರಿನ ಹಾಗೂ ಸಾಗರದ ನೀಲಜಲದ ವ್ಯತ್ಯಾಸದಿಂದ ಕಾಣಬಹುದು.

ನಡುವಣ ಕಾಂಗೋ ಭಾಗದಲ್ಲಿ ಪ್ರವಾಹಕಾಲ ಮೇ ಮತ್ತು ನವೆಂಬರ್ ತಿಂಗಳುಗಳು. ನದಿಯ ತಳಗಣ ಪ್ರದೇಶದಲ್ಲಿ ಪ್ರವಾಹ ವಿಳಂಬವಾಗಿ ಬರುತ್ತದೆ.

ನೌಕಾಯಾನ ಮತ್ತು ಜಲವಿದ್ಯುತ್ ಯೋಜನೆಗಳು

[ಬದಲಾಯಿಸಿ]
ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯದ ನದಿಯ ಹಾದಿ

ಕಾಂಗೊ ನದಿಯ ಹೆಚ್ಚಿನ ಭಾಗವು ಒಳನಾಡ ನೌಕಾಯಾನಕ್ಕೆ ಅನುವಾಗಿದೆ. ಲಿವಿಂಗ್‍‍ಸ್ಟನ್ ಜಲಪಾತದ ಕಾರಣದಿಂದಾಗಿ ನದಿಯ ಪೂರ್ಣ ಉದ್ದಕ್ಕೆ ನೌಕಾಯಾನ ಅಸಾಧ್ಯ. ಕಿನ್ಶಾಸಾ ಮತ್ತು ಕಿಸಂಗಾನಿಗಳ ನಡುವೆ ನೌಕಾಯಾನ ಅತಿ ಜನಪ್ರಿಯ ಪ್ರಯಾಣ ವ್ಯವಸ್ಥೆಯಾಗಿದೆ. ಈ ಪ್ರದೇಶದ ಮುಖ್ಯ ವಾಣಿಜ್ಯ ಸರಕಾದ ತಾಮ್ರದ ಅದಿರಿನ ಹೆಚ್ಚಿನ ಪ್ರಮಾಣದ ಸಾಗಾಣಿಕೆ ಕಾಂಗೊ ನದಿಯ ಮೂಲಕವೇ ನಡೆಯುವುದು. ಉಳಿದಂತೆ ಜಲವಿದ್ಯುತ್ತಿನ ಮೂಲವಾಗಿ ಸಹ ಕಾಂಗೊ ನದಿಯು ಪ್ರಾಮುಖ್ಯ ಪಡೆಯುತ್ತಿದೆ. ಜಗತ್ತಿನಲ್ಲಿಯೇ ಅತಿ ದೊಡ್ಡದೆನ್ನಲಾಗಿರುವ ಇಂಗಾ ಜಲವಿದ್ಯುತ್ ಯೋಜನೆಯಿಂದ ಅಂತಿಮವಾಗಿ ೪೦ ಗಿಗಾವ್ಯಾಟ್ ಗಳಷ್ಟು ವಿದ್ಯುತ್ತನ್ನು ಉತ್ಪಾದಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ಪರಿಶೋಧನೆ

[ಬದಲಾಯಿಸಿ]

ಡಿಯಾಗೊ ಕಾವೊ ಎಂಬ ಪೋರ್ಚುಗೀಸ್ ನಾವಿಕ ೧೪೮೨ ಕಾಂಗೋ ನದೀಮುಖವನ್ನು ಕಂಡುಹಿಡಿದ.[] ಅಲ್ಲಿಯ ಪ್ರದೇಶ ಪೋರ್ಚುಗಲ್ ರಾಜ್ಯಕ್ಕೆ ಸೇರಿದುದೆಂಬ ಕುರುಹಾಗಿ ಆತ ಶಿಲಾಸ್ತಂಭವೊಂದನ್ನು ಈಗ ಷಾರ್ಕ್ ಪಾಯಿಂಟ್ ಎಂದು ಕರೆಯುವ ಸ್ಥಳದಲ್ಲಿ ನೆಟ್ಟುಹೋದ. ಈ ಶಿಲಾಸ್ತಂಭದ ಪ್ರಯುಕ್ತ ನಾವಿಕರು ಈ ನದಿಯನ್ನು ಪಿಲ್ಲರ್ ರಿವರ್ ಅಥವಾ ಕಂಬದ ನದಿ ಎಂದು ಕರೆದರು.  ತರುವಾಯದ ದಿನಗಳಲ್ಲಿ ಐರೋಪ್ಯ ಪ್ರವಾಸಿಗರು ದೇಶೀಯ ನುಡಿಯ ಅಪಭ್ರಂಶವಾಗಿ ನದಿಯನ್ನು ಜೈರಿ ಎಂದು ಕರೆದರು.  ಕೊನೆಗೆ ಅದಕ್ಕೆ ಕಾಂಗೋ ಎಂಬ ಹೆಸರು ಬಂದಿತು. ನದೀಮುಖವನ್ನು ಡಿಯಾಗೊ ಕಂಡು ಹಿಡಿದ ಮೇಲೆ 3 ಶತಮಾನಗಳ ವರೆಗೆ ಇದರ ಪಾತ್ರವನ್ನು ಪರಿಶೋಧಿಸಲು ಯಾವ ಪ್ರಯತ್ನಗಳೂ ಆಗಲಿಲ್ಲ. 1816ರಲ್ಲಿ ಬ್ರಿಟಿಷ್ ಸರ್ಕಾರ ಕ್ಯಾಪ್ಟನ್ ಜೆ.ಕೆ.ಟಕ್ಕಿಯನ್ನು ಕಾಂಗೋ ನದಿಯ ಬಗ್ಗೆ ಪರಿಶೋಧನೆ ನಡೆಸಲು ಕಳುಹಿಸಿತ್ತು. ಆದರೆ ಅವನ ಪ್ರಯಾಣವೂ ೬೦ ವರ್ಷಗಳ ತರುವಾಯ ಅದೇ ಸರ್ಕಾರ ಕಳುಹಿಸಿದ ಮತ್ತೆರಡು ಪರಿಶೋಧಕರ ತಂಡಗಳೂ ವಿಫಲಗೊಂಡುವು. ಕಾಂಗೋ ನದಿಯನ್ನು ಪರಿಶೋಧಿಸಲು ಹೊರಟ ಡೇವಿಡ್ ಲಿವಿಂಗ್‍ಸ್ಟನನ ನೆರವಿಗಾಗಿ ೧೮೭೨ ರಲ್ಲಿ ಬಂದ ಲಿಫ್ಟಿನೆಂಟ್ ಡಬ್ಲ್ಯು. ಗ್ರಾಂಡಿ ಕಾಂಗೋ ಅಳಿವೆಯ ದಕ್ಷಿಣದಲ್ಲಿರುವ ಆಂಬ್ರಿಜಿನಿಂದ ಹೊರಟು ೧೮೭೩ ರ ಕೊನೆಯಲ್ಲಿ ಜಲಪಾತಗಳ ವರೆಗೆ ಬಂದು ಅಲ್ಲಿಂದ ಮೇಲೆ ನದಿಯನ್ನು ಪರಿಶೋಧಿಸಲು ಪ್ರಯತ್ನಿಸಿದ. ಅಷ್ಟರಲ್ಲೇ ಲಿವಿಂಗ್‍ಸ್ಟನನ ಮರಣವಾರ್ತೆ ಬಂದಾಗ ಅವನನ್ನು ಇಂಗ್ಲೆಂಡಿಗೆ ವಾಪಸು ಕರೆಸಿಕೊಳ್ಳಲಾಯಿತು.[]

ಕಾಂಗೋ ನದಿಯ ಮೂಲವನ್ನು ಕಂಡುಹಿಡಿಯುವ ಸಮಸ್ಯೆ ಅದರ ಉಗಮಸ್ಥಾನದ ಬಳಿಯ ಹಲವಾರು ನದಿಗಳ ಬಗ್ಗೆ ನಡೆಸಿದ ಪರಿಶೋಧನೆಗಳಿಂದ ಬಗೆಹರಿಯಿತು. ೧೮೬೮ ರಲ್ಲಿ ಡೇವಿಡ್ ಲಿವಿಂಗ್‍ಸ್ಟನ್ಝಾಂಬೀಸಿ[] ನದಿ ಬಂಗವ್ಯೂಲು ಸರೋವರದಿಂದ ಹುಟ್ಟುತ್ತದೆ ಎಂಬುದನ್ನು ಕಂಡುಹಿಡಿದ. ೧೮೭೧ ರಲ್ಲಿ ಆತ ಲೂವಲಾಬ ನದಿಯ ಅಂಚಿನಲ್ಲಿರುವ ನ್ಯಯಂಗ್ವೆ ಗ್ರಾಮವನ್ನು ಸೇರಿ, ಲೂವಲಾಬ ಯಾವ ನದಿಗೆ ಸೇರುತ್ತದೆ ಎಂಬುದನ್ನು ಕಂಡುಹಿಡಿಯುವ ಪ್ರಯತ್ನದಲ್ಲಿ ರೋಗ ಪೀಡಿತನಾಗಿ ೧೮೭೩ ರಲ್ಲಿ ಮೃತನಾದ. ಲೂವಲಾಬ ನದಿ ನೈಲ್ ನದಿಯನ್ನು ಸೇರುವುದೆಂಬುದು ಅವನ ಭಾವನೆಯಾಗಿತ್ತು. ೧೮೭೨ ರ ಹೊತ್ತಿಗೆ ಭೂಗೋಳ ವಿಜ್ಞಾನಿಗಳು ಲಿವಿಂಗ್‍ಸ್ಟನನ ವರದಿಗಳ ಆಧಾರದ ಮೇಲೆಯೇ ಆತ ಕಂಡುಹಿಡಿದ ನದೀವ್ಯೂಹ ಕಾಂಗೋ ನದೀವ್ಯವಸ್ಥೆಗೆ ಸೇರಿದ್ದೇ ಹೊರತು ನೈಲ್ ನದೀ ವ್ಯವಸ್ಥೆಗೆ ಸಂಭಂಧಿಸಿದ್ದಲ್ಲವೆಂಬ ನಿರ್ಣಯಕ್ಕೆ  ಬಂದರು. ಆದರೂ ಮೂಲನದಿಯ ಗತಿಯ ಬಗ್ಗೆ ಆಗ ಯಾವ ತಿಳಿವಳಿಕೆಯೂ ಇರಲಿಲ್ಲ. ಲಿವಿಂಗ್‍ಸ್ಟನನ ಸಹಾಯಕ್ಕಾಗಿ ಅಮೆರಿಕದಿಂದ ಬಂದ ಎಚ್.ಎಂ.ಸ್ಟ್ಯಾನ್ಲಿ ೧೮೭೬ ರ ಅಕ್ಟೋಬರಿನಲ್ಲಿ ಝಾಂಜಿಬಾರಿನಿಂದ ಪ್ರಯಾಣ ಮಾಡಿ ನ್ಯಯಂಗ್ವೆ ಗ್ರಾಮ ಸೇರಿ ಅಲ್ಲಿಂದ ಲೂವಲಾಬ ನದಿಯ ಮೇಲುಭಾಗದಲ್ಲಿ ೧೬೦೦ ಮೈಲಿ ಸಂಚರಿಸಿ ಕ್ಯಾಪ್ಟನ್ ಟಕ್ಕಿ ಬಂದ ಸ್ಥಳಕ್ಕೂ ಮುಂದೆ ಇರುವ ಇಸಂಗಿಲ ಗ್ರಾಮ ತಲಪಿದ. ಈ ಸಂಚಾರದಿಂದ ಆತ ಲೂವಲಾಬ ನದಿಯೂ ಪೋರ್ಚುಗೀಸರು ಜೈರಿ ಎಂದು ಕರೆದ ನದಿಯೂ ಒಂದೇ ಎಂದು ಪುಷ್ಟೀಕರಿಸಿದ. ಸ್ಟ್ಯಾನ್ಲಿಯ ಈ ಮಹತ್ತರ ಪ್ರಯಾಣ ರಾಜಕೀಯ, ಭೌಗೋಳಿಕ ಹಾಗೂ ವಾಣಿಜ್ಯ ದೃಷ್ಟಿಯಿಂದ ಆಫ್ರಿಕದ ಇತಿಹಾಸದಲ್ಲಿ ಬಹು ಮುಖ್ಯ ಘಟನೆಯಾಗಿದೆ. ಸ್ಟ್ಯಾನ್ಲಿ[] ೧೮೮೭ ರಲ್ಲಿ ಕೈಗೊಂಡ ತನ್ನ ಕೊನೆಯ ಪ್ರವಾಸದಲ್ಲಿ ಆರುವೀಮಿ ನದಿಯನ್ನು ಭಾಗಶಃ ಪರಿಶೋಧಿಸಿದ.  ಅವನ ತರುವಾಯ ರೆವರೆಂಡ್ ಜಾರ್ಜ್ ಗ್ರೆನ್‍ಷೆಲ್ ಕಾಂಗೋ ನದಿ ಮತ್ತು ಅದರ ಉಪನದಿಗಳ ಬಗ್ಗೆ ಮಾಡಿದಷ್ಟು ಪರಿಶೋಧನೆಗಳನ್ನು ಮತ್ತಾವ ಪರಿಶೋಧಕನೂ ಮಾಡಿಲ್ಲ. ೧೯೧೩ ರಲ್ಲಿ ಕ್ಯಾಪ್ಟನ್ ಆರ್.ವಾಕರ್ ಲೂವಪೂಲ ನದಿ ಬಂಗವ್ಯೂಲು ಸರೋವರದಿಂದ ಉದ್ಭವಿಸುವುದಿಲ್ಲವೆಂದೂ ಅದು ಝಾಂಬೀಸಿ ನದಿಯ ಮುಂದುವರಿಕೆಯೆಂದೂ ತೋರಿಸಿ ಕೊಟ್ಟ.  ಕಾಂಗೋ ನದಿ ಯಾವ ಭಾಗಗಳಲ್ಲಿ ಹಡಗಿನ ಸಂಚಾರಕ್ಕೆ ಅನುಕೂಲವಾಗಿಲ್ಲವೋ ಅಲ್ಲೆಲ್ಲ ರೈಲುಮಾರ್ಗಗಳನ್ನು ಹಾಕಿದ್ದಾರೆ. 

ಕಾಂಗೋ ಜಲಾನಯನ ಪ್ರದೇಶದಲ್ಲಿನ ಸೇತುವೆಗಳು

[ಬದಲಾಯಿಸಿ]

ಕಾಂಗೋ ನದಿ ಮತ್ತು ಪ್ರಮುಖ ಉಪನದಿಗಳನ್ನು ದಾಟಲು ಹಲವಾರು ದೋಣಿಗಳು ಲಭ್ಯವಿದ್ದರೂ, ಮುಖ್ಯ ನದಿಗಳನ್ನು ದಾಟುವ ಸೇತುವೆಗಳ ಕೊರತೆಯಿಂದಾಗಿ ಕಾಂಗೋ ನದಿ ಜಲಾನಯನ ಪ್ರದೇಶ ಗಮನಾರ್ಹವಾಗಿದೆ. ಮುಖ್ಯ ತಾರ್ಕಿಕತೆಯೆಂದರೆ ಕಾಂಗೋ ನದಿ ಮತ್ತು ಮುಖ್ಯ ನದಿಗಳ ಅಗಲ ಮತ್ತು ಶಾಶ್ವತ ನದಿ ದಾಟುವಿಕೆಯನ್ನು ಸ್ಥಾಪಿಸಲು ಹಣದ ಕೊರತೆ.[೧೦]

ಬಾಹ್ಯ ಸಂಪರ್ಕಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. "5 longest rivers in Africa | Hadithi Africa". Archived from the original on 11 ಜನವರಿ 2020. Retrieved 11 January 2020.
  2. "Congo River | river, Africa". Encyclopedia Britannica (in ಇಂಗ್ಲಿಷ್). Retrieved 11 January 2020.
  3. https://treaties.un.org/doc/Publication/UNTS/Volume%201956/v1956.pdf
  4. https://www.worldwildlife.org/places/congo-basin
  5. https://www.rome2rio.com/s/Coolangatta/Banora-Point
  6. "Congo River - New World Encyclopedia". www.newworldencyclopedia.org (in ಇಂಗ್ಲಿಷ್). Retrieved 11 January 2020.
  7. "The Aftermath of Livingstone's Death | Livingstone Online". www.livingstoneonline.org. Retrieved 11 January 2020.
  8. https://www.history.com/news/when-stanley-met-livingstone
  9. http://www.bbc.co.uk/history/historic_figures/stanley_sir_henry_morton.shtml
  10. https://reliefweb.int/report/democratic-republic-congo/small-bridge-delivers-big-benefits-eastern-drc