ಕನ್ನಡ ರಂಗಭೂಮಿ
ಕನ್ನಡ ರಂಗಭೂಮಿಯ ಪರಂಪರೆ ಅತಿ ಪ್ರಾಚೀನವಾದದ್ದೆಂಬುದರಲ್ಲಿ ಸಂದೇಹವಿಲ್ಲ. ಕನ್ನಡ ರಂಗಭೂಮಿಯ ಪ್ರಕಾರಗಳಲ್ಲಿ ಗೊಂಬೆಯಾಟ, ತೊಗಲು ಗೊಂಬೆಯಾಟ, ಬಯಲಾಟ ದಶಾವತಾರ ಎಂದು ಕರೆಯುವ ಯಕ್ಷಗಾನದ ಆಟಗಳು (ಅದರ ತೆಂಕು ಬಡಗು ಎಂಬ ಪ್ರಭೇದ), ದೊಡ್ಡಾಟ(ಮೂಡಲಪಾಯ ಎನ್ನುವುದು ಅಧ್ಯಯನಕ್ಕೆ ಇಟ್ಟ ಹೆಸರು), ಘಟ್ಟದಕೋರೆ, ಶನಿಕಥೆ ಆಟ, ಕೃಷ್ಣಪಾರಿಜಾತ ಎನ್ನುವ ದೊಡ್ಡಾಟದ ಪ್ರಕಾರಗಳು ಮತ್ತು ನಾಟಕಗಳು ಪ್ರಮುಖವಾಗಿವೆ. ಪಾರ್ತಿಸುಬ್ಬನ ರಾಮಾಯಣದ ಯಕ್ಷಗಾನದ ಪ್ರಸಂಗಗಳು (ಸೀತಾಪಹಾರ, ವಾಲೀ ವಧಾ, ರಾವಣಾ ವಧಾ) ಸುಮಾರು ೧೬ನೇ ಶತಮಾನದವು. ಪ್ರಾಯಶ: ಇವು ಕನ್ನಡ ರಂಗಭೂಮಿಯ ಪ್ರಾಚೀನ ಕೃತಿಗಳು. ಪುರಂದರದಾಸರು ಬರೆದ ಅನಸೂಯಾ ಚರಿತ್ರೆ ಯಕ್ಷಗಾನವು ಸುಮಾರು ಅದೇ ಕಾಲದ್ದು ಎನ್ನಲಾಗಿದೆ. ಕನ್ನಡ ನಾಟಕಗಳಲ್ಲಿ ತುಂಬ ಹಳೆಯದು ಚಿಕ್ಕದೇವರಾಜರ ಆಸ್ಥಾನದಲ್ಲಿದ್ದ ಸಿಂಗರಾರ್ಯ ರಚಿಸಿದ ‘ಮಿತ್ರವಿಂದಾ ಗೋವಿಂದ’. ಇದು 17ನೆಯ ಶತಮಾನದ ಅಂತ್ಯಭಾಗದಲ್ಲಿ ರಚಿತವಾದ ಕೃತಿ; ಶ್ರೀಹರ್ಷನ ರತ್ನಾವಳೀ ನಾಟಕದ ಕನ್ನಡ ರೂಪ. ಒಂದು ದೃಷ್ಟಿಯಿಂದ, ಇದು ಮೂಲಕೃತಿಯಷ್ಟೂ ತೃಪ್ತಿಕೊಡಲಾರದ ಕನ್ನಡರೂಪವೆಂದು ಹೇಳಬಹುದು. ಇದಕ್ಕಿಂತ ಪ್ರಾಚೀನವಾದ ಕನ್ನಡ ನಾಟಕ ದೊರೆತಿಲ್ಲ ಎನ್ನುವುದರಿಂದಲೇ ಇದಕ್ಕೆ ಹಿರಿಮೆ ಪ್ರಾಪ್ತವಾಗಿದೆ. ದೊರೆತಿಲ್ಲ ಎಂದರೆ ಇರಲಿಲ್ಲ ಎಂದು ಹೇಳಿದಂತಲ್ಲ. ಪ್ರಾಚೀನ ಕನ್ನಡ ಸಾಹಿತ್ಯದ ಶಾಸನಗಳಲ್ಲಿ ನಾಟಕದ ಪ್ರಸ್ತಾಪ ಮತ್ತೆ ಮತ್ತೆ ಕಾಣಸಿಗುತ್ತದೆ.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
ಸುಮಾರು ಮೂರು ಸಾವಿರಕ್ಕು ಹೆಚ್ಚು ಯಕ್ಷಗಾನ ಪ್ರಸಂಗಗಳಿದ್ದು, ಸುಮಾರು ೧೨ನೇ ಶತಮಾನದಿಂದಲೇ ಯಕ್ಷಗಾನ ಕನ್ನಡ ರಂಗಭೂಮಿ ಬೆರೆದು ಬಂದಿದೆ ಎಂದು ಊಹಿಸಲಾಗಿದೆ.
ಪ್ರಾಚೀನ ನಾಟಕಶಾಲೆಗಳು
[ಬದಲಾಯಿಸಿ]ಕನ್ನಡ ನಾಡಿನಲ್ಲಿ ಹಿಂದೆ ಅನೇಕ ನಾಟಕ ಶಾಲೆಗಳಿದ್ದುವೆಂದು ತಿಳಿಯಲು ಆಧಾರಗಳಿವೆ. ಮೈಸೂರಿನ ಕಂಠೀರವ ನರಸರಾಜರ (1638-59) ಅರಮನೆಯಲ್ಲಿ ಮನೋಹರವಾದ ನಾಟಕಶಾಲೆ ಇತ್ತೆಂದು ಆ ರಾಜರ ಚರಿತ್ರೆಯನ್ನು ರಚಿಸಿದ ಗೋವಿಂದವ್ಯೆದ್ಯ ತನ್ನ ಕಾವ್ಯದಲ್ಲಿ ಹೇಳಿದ್ದಾನೆ. ಕೆಳದಿಯ ವೆಂಕಟಪ್ಪ ನಾಯಕ (1582-1620) ತನ್ನ ಇಕ್ಕೇರಿಯರಮನೆಯೊಳ್ ಚಿತ್ರಕರ ರಚನಾಕೌಶಲ್ಯದಿಂ ನಾಟಕಶಾಲೆಯಂ ನಿರ್ಮಿಸಿದನ್’ ಎಂದು ಲಿಂಗಣ್ಣ ಕವಿಯ ಕೆಳದಿನೃಪವಿಜಯದಲ್ಲಿ ಖಚಿತವಾದ ಮಾತಿದೆ. ಅದಕ್ಕಿಂತ ನೂರು ವರ್ಷಗಳ ಹಿಂದೆ, ಕವಿ ರತ್ನಾಕರವರ್ಣಿ ತನ್ನ ಭರತೇಶವೈಭವ ಕಾವ್ಯದ ಪುರ್ವನಾಟಕ ಸಂಧಿ, ಉತ್ತರನಾಟಕ ಸಂಧಿಗಳಲ್ಲಿ ಶೃಂಗಾರಮಯವಾದ ನಾಟಕಶಾಲೆಯ ವರ್ಣನೆಯನ್ನು ಕೊಡುತ್ತಾನೆ. ವಿಜಯನಗರ ಸಾಮ್ರಾಜ್ಯದ ಸಂಪತ್ಸಮೃದ್ಧಿಯ ಕಾಲದಲ್ಲಿಯಂತೂ ಕೃಷ್ಣದೇವರಾಯನ ರಾಜಧಾನಿಯಲ್ಲಿದ್ದ ಪಟ್ಟದ ನಾಟಕಶಾಲೆಯಲ್ಲದೆ ಇಕ್ಕೇರಿ, ತಂಜಾವೂರು ಮೊದಲಾದ ಪ್ರಾದೇಶಿಕ ಕೇಂದ್ರಗಳಲ್ಲೂ ರತ್ನಖಚಿತವಾದ ಅಲಂಕಾರಗಳನ್ನು ಹೊಂದಿದ್ದ ನಾಟಕಶಾಲೆಗಳಿದ್ದುವೆಂದು ಬಿ.ಎ. ಸಾಲೆತೊರೆಯವರು ಹೇಳಿದ್ದಾರೆ. ಇದೆಲ್ಲಕ್ಕಿಂತ ಹಿಂದೆ 1045ರಲ್ಲಿ ಧಾರವಾಡದ ಸಮೀಪದ ಮುಳಗುಂದದಲ್ಲಿ (ಇಂದು ಮುಗದ ಎಂಬ ಹಳ್ಳಿ) ನಿಲ್ಲಿಸಿ ಇಂದಿಗೂ ಬಿಸಿಲು ಮಳೆಗಾಳಿಗಳಿಗೆ ಮೈಯೊಡ್ಡಿ ನಿಂತಿರುವ ದೊಡ್ಡದೊಂದು ಶಿಲಾಫಲಕ - ಶ್ರೀಮನ್ಮಹಾಸಾಮನ್ತಂ ಮಾರ್ತಾನ್ಡಯ್ಯಂ ತಮ್ಮ ಮುತ್ತಯ್ಯಂ ಮಾಡಿಸಿದ ಬಸದಿಯಂ ಪಡಿಸಲಿಸಿ ನಾಟಕಶಾಲೆಯಂ ಮಾಡಿಸಿ, ತನ್ನ ಕೀರ್ತಿಶಿಲಾಸ್ತಂಭಮಂ ಆಚಂದ್ರಾರ್ಕತಾರಂಬರಂ ನಿಲಿಸಿದಂ ಎಂದು 11ನೆಯ ಶತಮಾನದ ಕನ್ನಡ ನಾಟಕಶಾಲೆಯ ಕತೆಯನ್ನು ಹೇಳುತ್ತಿದೆ.
ನಾಟಕದ ಪ್ರಾಚೀನತೆ
[ಬದಲಾಯಿಸಿ]ನಾಟಕ ಎಂಬ ಮಾತೂ ಕನ್ನಡನಾಡಿನಲ್ಲಿ ತುಂಬ ಹಳೆಯದು. ಗೋವಿಂದವೈದ್ಯ, ರತ್ನಾಕರವರ್ಣಿಗಳ ಕೃತಿಗಳಲ್ಲಿ ನಾಟಕ ಎಂಬ ಪದವೂ ನಾಟಕದ ವರ್ಣನೆಯೂ ಕಂಡುಬರುತ್ತವೆ. 17ನೆಯ ಶತಮಾನದ ಆದಿಭಾಗದಲ್ಲಿದ್ದ ಭಟ್ಟಾಕಳಂಕ. ಕಾವ್ಯನಾಟಕಾಲಂಕಾರಕಲಾಶಾಸ್ತ್ರ ವಿಷಯಾಣಾಂಚ ಬಹೂನಾಂ ಗ್ರಂಥಾನಾಮಪಿ ಭಾಷಾಕೃತಾನಮುಷಲಭ್ಯಮಾನತ್ವಾತ್’-ಎಂದು ಬರೆದಿದ್ದಾನೆ. ಕುಮಾರವ್ಯಾಸ ಕವಿ ನಾಟಕ ಎಂಬ ಮಾತನ್ನು ಅನೇಕ ಕಡೆಗಳಲ್ಲಿ ಉಪಯೋಗಿಸಿದ್ದಾನೆ. ಬಸವಪುರಾಣವನ್ನು ರಚಿಸಿದ ಭೀಮಕವಿ, ‘ಶೃಂಗಾರಗೊಂಡು ಒಡವೆಗಳಿಂದ ಅಲಂಕೃತವಾಗಿ ನಾಟಕಕ್ಕಳವಟ್ಟು ರೀತಿಯೊಳೊಪ್ಪಿ ನಡೆತಂದ ಚದುರೆ’ ಸೋಮಲದೇವಿಯನ್ನು ವರ್ಣಿಸಿದ್ದಾನೆ. ಶೃಂಗಾರ ರತ್ನಾಕರವನ್ನು ರಚಿಸಿದ ಕವಿ ಕಾಮದೇವನೂ ಪೇಳ್ದಭಿನಯಿಸಿ ನಾಟಕಂಗಳನಂತುಂ ಪಡೆದಲ್ಲದೆ ಬರ್ಕುಮೆ ಎಂದು ನಾಟಕದ ಬಗ್ಗೆ ನುಡಿದಿದ್ದಾನೆ. ಮಹಾದೇವಿ, ರೂಪಾದೇವಿ ಎಂಬ ರಾಣಿಯರು ಸೀತೆ-ರಾಮರಾಗಿ ಕೃತಕ ನಾಟಕವನ್ನಾಡಿದ ರೀತಿಯನ್ನು ಪಂಚತಂತ್ರ ಕೃತಿಕಾರ ದುರ್ಗಸಿಂಹ ತಿಳಿಸಿದ್ದಾನೆ. ಹೆಸರಾಂತ ಹೊಯ್ಸಳ ದೊರೆ ವೀರಬಲ್ಲಾಳ ಕಲಾವಂತನಾದ ನಟನಾಗಿದ್ದನೆಂದು ಸೊರಬದ ಶಿಲಾಶಾಸನದಲ್ಲಿ (1208) ಹೇಳಿದೆ. ನೀಲಾಂಜನೆ ನಾಟಕ ಮಾಡಿದುದರ ಬಣ್ಣನೆ ಪಂಪನ ಆದಿಪುರಾಣದಲ್ಲಿದೆ. ಪೊನ್ನಕವಿ ತನ್ನ ಶಾಂತಿಪುರಾಣದಲ್ಲಿ ಚಂದ್ರೋದಯವನ್ನು ನಾಟಕಾರಂಭಕ್ಕೆ ಹೋಲಿಸುತ್ತ, ನಕ್ಷತ್ರಗಳು ಸೂತ್ರಧಾರ ಪುಸಿದ ಪುಷ್ಪಗಳೆಂದೂ ಸರಿದು ಹೋಗುತ್ತಿರುವ ಕತ್ತಲೆಯ ಮೇಲೇರುತಿರುವ ತೆರೆಯೆಂದೂ ರಾತ್ರಿಯ ನಾಲ್ಕು ಪ್ರಹರಗಳು ನಾಟಕದ ನಾಲ್ಕು ಅಂಕಗಳು ಎಂದೂ ವರ್ಣಿಸಿದ್ದಾನೆ. ಅಜಿತಪುರಾಣದ ಕರ್ತೃ ರನ್ನ ಕವಿಯ ಕಾವ್ಯದಲ್ಲಿ ನಾಟಕವಿಧಿಯ ವಿವರಣೆಯನ್ನು ನೋಡಬಹುದು. ನಾಟಕವೆಂಬ ಹೆಸರಿನ ಮನೋರಂಜನೆಯು ಕನ್ನಡ ನಾಡಿನಲ್ಲಿ 10ನೆಯ ಶತಮಾನದಿಂದಲಾದರೂ ಇದ್ದಿತೆಂದು ನಂಬಲು ಇವೆಲ್ಲ ಆಧಾರಗಳುಂಟು. ಭಾರತದ ಉಳಿದ ಭಾಷೆಗಳಲ್ಲಿ ನಾಟಕದ ಹಳಮೆಯ ಬಗೆಗೆ ಇಷ್ಟೊಂದು ಖಚಿತವಾದ ಆಧಾರ ಸಿಕ್ಕಿಲ್ಲ.
ಪ್ರಾಚೀನ ನಾಟಕಗಳ ಸ್ವರೂಪ
[ಬದಲಾಯಿಸಿ]ಅಂದಿನ ಆ ನಾಟಕಗಳ ರೂಪುರೇಷೆಗಳೇನು ಎಂಬ ಪ್ರಶ್ನೆಗೆ ನಿಶ್ಚಿತವಾದ ಉತ್ತರವಿನ್ನೂ ದೊರೆತಿಲ್ಲ. ಗೋವಿಂದವೈದ್ಯನ ಅಥವಾ ರತ್ನಾಕರವರ್ಣಿ ಬಣ್ಣಿಸಿದ ನಾಟಕದ ವರ್ಣನೆಯನ್ನು ಗಮನಿಸಿದರೆ, ಅದು ನಾಟ್ಯ ಅಥವಾ ಭಾವಪ್ರಧಾನವಾದ ನೃತ್ಯದ ವರ್ಣನೆಯೇನೋ ಎನಿಸುತ್ತದೆ. ರತ್ನಾಕರ ಚಿತ್ರಿಸಿದ ತಾಳ ಹಿಡಿದ ಸೂತ್ರಧಾರನೂ ಬಸವಪುರಾಣದ ನಾಟಕ ಪಂಡಿತನಂತೆ ಇಂದಿನ ಯಕ್ಷಗಾನದ ಭಾಗವತನನ್ನೇ ಹೋಲುತ್ತಾನೆ. ಇಟ್ಟು ಜಡೆಬೊಲ್ಲ ಹವಮರ್ದಿರೆ, ತೊಟ್ಟು ಕಂಚುಕಮಂ ದುಕೂಲವನುಟ್ಟು, ಚಲ್ಲಣಮಂ ರಚಿಸಿ, ಮಣಿಖಚಿತ ಸಿಂಜಿನಿಯ ಕಟ್ಟಿಕೊಂಡು-ಬಸವಪುರಾಣದಲ್ಲಿ ನಾಟಕವಾಡಿದ ಸೋಮಲದೇವಿಯ ವರ್ಣಿಕೆಯ ಅಲಂಕಾರವೂ ಆಕೆ ನರ್ತಕಿ ಎಂದೇ ಸೂಚಿಸುತ್ತವೆ. ಕವಿ ಕಾಮದೇವನೂ ನಾಟಕವೆಂದರೆ ಅಭಿನಯ ಪ್ರಧಾನವಾದ ನೃತ್ಯಕಲೆಯೆಂದು ಸೂಚಿಸುವಂತಿದೆ. ಆದಿಪಂಪ ನೀಲಾಂಜನೆಯ ನೃತ್ಯವನ್ನು ಬಣ್ಣಿಸುವಾಗ ನಾಟಕ ಎಂಬ ಪದವನ್ನು ಪ್ರಯೋಗಿಸುತ್ತಾನೆ. ‘ಕೃತಾನುಕರಣಮೆ ನಾಟಕಮಪ್ಪುದು’ ಎಂದು ಆತ ಹೇಳಿದರೂ ಆ ಅನುಕರಣದಲ್ಲಿ ಪಾತ್ರಕ್ಕೆ ಆಡುವ ಮಾತಿದೆಯೇ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಎಲ್ಲದರಿಂದಾಗಿ, ಭರತೇಶವೈಭವ ಕಾವ್ಯದ ಜಲಕನ್ನಿಕಾನಾಟ್ಯ, ದಿಕ್ಕನ್ನಿಕಾನಾಟ್ಯಗಳಂತೆ ಅಭಿನಯ ಪ್ರಧಾನವಾದ ನೃತ್ಯಗಳೇ ಕನ್ನಡದ ಪ್ರಾಚೀನ ನಾಟಕಗಳಾಗಿದ್ದಿರಬೇಕು ಎನಿಸುತ್ತದೆ. ಅಭಿನವ ಮಂಗರಾಜನ ಅಭಿನವಾಭಿದಾನ ಎಂಬ ನಿಘಂಟಿನಲ್ಲಿಯೂ (1378) ನಾಟಕಕ್ಕೆ ಇದೇ ಅರ್ಥವನ್ನು ತರುವ ವಿವರಣೆ ಇದೆ: ನೃತ್ಯದೊಳು ಹಸ್ತಾಂಗ ದೃಷ್ಟಿಗತಿ ಪದ್ಧತಿಯೊಳಾಡೆ ನಾಟಕಮೆನಿಕ್ಕು. ಈ ಎಲ್ಲ ಮಾತುಗಳನ್ನೂ ವಿವೇಚಿಸಿದಾಗ, ಕೆ. ಜಿ. ಕುಂದಣಗಾರರು ಬರೆದಂತೆ, ಕನ್ನಡನಾಡಿನ ಪ್ರಾಚೀನ ನಾಟಕ ಇಂದಿನ ಕಥಕ್ಕಳಿಯಂತೆ, ಭಾವ ಮತ್ತು ಗೀತ ಪ್ರಧಾನವಾದ ಆಡುಮಾತಿಲ್ಲದ ಒಂದು ನೃತ್ಯ ಪ್ರಕಾರವಾಗಿರಬೇಕು ಎನಿಸುತ್ತದೆ. ಅಂದಿನ ರಂಗಭೂಮಿಗೆ ಆಶ್ರಯವಿತ್ತ ರಾಜಾಸ್ಥಾನಗಳಲ್ಲಿ ಸಂಕೇತ ಪ್ರಧಾನವಾದ ಇಂಥ ಪ್ರಯೋಗಗಳೇ ಹೆಚ್ಚು ಪ್ರಿಯವಾಗಿ, ಆಡುಮಾತಿನ ನಾಟಕಗಳು ಕಡಿಮೆ ಇದ್ದಿರಬೇಕು. ಇದರ ಜೊತೆಗೆ ಕನ್ನಡ ರಾಯರ ಆಸ್ಥಾನಗಳಲ್ಲಿ ಆಡುಮಾತಿನ ನಾಟಕಗಳನ್ನೂ ಆಡುತ್ತಿದ್ದರು ಎನ್ನುವುದಕ್ಕೆ ಕೆಲವೊಂದು ಆಧಾರಗಳಿವೆ. ಚಿಕ್ಕದೇವರಾಜರ ಆಸ್ಥಾನದಲ್ಲಿ ಮಿತ್ರವಿಂದಾ ಗೋವಿಂದ ಪ್ರದರ್ಶಿತವಾಯಿತು. ಸಂಸ್ಕೃತದಲ್ಲೂ ಆಡುಮಾತಿನ ನಾಟಕಗಳು ಇನ್ನೂ ಹಿಂದಿನ ಕಾಲದಿಂದಲೂ ಆಸ್ಥಾನಗಳಲ್ಲಿ ಪ್ರದರ್ಶಿತವಾಗುತ್ತಿದ್ದುವು. ವಿಜಯನಗರದ ಅರಸ ಕೃಷ್ಣದೇವರಾಯ ಸಂಸ್ಕೃತದಲ್ಲಿ ರಚಿಸಿದ ಜಾಂಬವತೀಕಲ್ಯಾಣಂ ಎಂಬ ನಾಟಕವನ್ನು ಚೈತ್ರೋತ್ಸವದಂದು ನೆರೆದ ಮಹಾಪ್ರಜೆಗಳ ಸಮ್ಮುಖದಲ್ಲಿ ಪ್ರದರ್ಶಿಸಲಾಯಿತು. ಜ್ಯೋತಿರೇಶ್ವರ ಕವಿ ವೇಬರಾಚಾರ್ಯರ ಧೂರ್ತಸಮಾಗಮ ಪ್ರಹಸನವೂ ಆಸ್ಥಾನವನ್ನು ರಂಜಿಸಿದ ಸಂಸ್ಕೃತ ನಾಟಕವೇ. ಆಡುಮಾತಿನ ಕನ್ನಡ ನಾಟಕಗಳು ಅಂದು ಇದ್ದುವೆ ಎಂಬ ವಿಷಯವನ್ನು ಎಂ. ಗೋವಿಂದಪೈಯವರು ಪರಿಶೀಲಿಸುತ್ತಾ ಕೇಶೀರಾಜನ ಶಬ್ದಮಣಿದರ್ಪಣದಲ್ಲಿ ಸೂಚಿತವಾದ ಸುಭದ್ರಾಹರಣ ಮತ್ತು ಪ್ರಭೋದಚಂದ್ರ ಇವು ಕನ್ನಡ ನಾಟಕಗಳಾಗಿದ್ದಿರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಎರಡನೆಯ ನಾಗವರ್ಮನ ಕಾವ್ಯಾವಲೋಕನದಲ್ಲಿ ಕಾಳಿದಾಸನ ವಿಕ್ರಮೋರ್ವಶೀಯದ ಒಂದು ಪದ್ಯದ (ಅಂಕ 1 ಪದ್ಯ 3) ಹಾಗೂ ಶ್ರೀಹರ್ಷನ ನಾಗಾನಂದದ ಮತ್ತು ಭವಭೂತಿಯ ಮಾಲತೀಮಾಧವದ ಕೆಲವು ಪದ್ಯಗಳ ಕನ್ನಡ ರೂಪಗಳಿವೆ. ಛಂದಾನುಶಾಸನದ ಕರ್ತೃ ಜಯಕೀರ್ತಿ ಹೇಳಿದ ಪ್ರತಿಥಂ ಕರ್ಣಾಟಮಾಲತೀಮಾಧವ ಪ್ರಭೃತಿಕಾವ್ಯೇ ಎಂಬ ಮಾತಿನಿಂದ ಭವಭೂತಿಯ ಆ ನಾಟಕ ಕನ್ನಡಕ್ಕೆ ಅನುವಾದವಾಗಿದ್ದಿರಬಹುದೆಂದು ಸಂಶೋಧಕರು ಭಾವಿಸುತ್ತಾರೆ. ಹೀಗೆ 10ನೆಯ ಶತಮಾನದಿಂದ ಬಳಕೆಗೆ ಬಂದ ನಾಟಕ ರಾಜಾಸ್ಥಾನದಲ್ಲಿ ತುಂಬ ಪ್ರಿಯವೆನಿಸಿದ್ದ ನೃತ್ಯಪ್ರಕಾರಗಳನ್ನಲ್ಲದೆ ಸಂಸ್ಕೃತನಾಟಕಗಳ ಕನ್ನಡ ರೂಪಗಳನ್ನು ಒಳಗೊಂಡಿದ್ದಿರಬೇಕು. ದೇಸೀಪರಂಪರೆ : ಹಿಂದೆ ಹೇಳಿದ್ದು ರಾಜಾಶ್ರಯದಲ್ಲಿದ್ದ ರಂಗಭೂಮಿಯ ನಾಟಕಗಳ ಮಾತು; ಆದರೆ ಜನಪದ ರಂಗಭೂಮಿ ಅದಕ್ಕಿಂತ ಹಳೆಯದು. ಮೆಟ್ಟಲು ಮೆಟ್ಟಲಾಗಿ ಕಾಲಮಾನದಲ್ಲಿ ಹಿಂದೆ ಹಿಂದೆ ಹೋಗಿ ಪರೀಕ್ಷಿಸಿದರೆ ಕನ್ನಡ ನಾಡಿನ ಜನಪದ ರಂಗಭೂಮಿ ಸಾವಿರ ವರ್ಷಕ್ಕಿಂತ ಹಿಂದಿನದು ಎಂದು ತಿಳಿಯುತ್ತದೆ. ದಶಾವತಾರದ ಮಾತನ್ನೇ ಎತ್ತಿಕೊಳ್ಳೋಣ. 1812ರಲ್ಲಿ ಧರ್ಮಸ್ಥಳದ ಯಕ್ಷಗಾನಮೇಳವೊಂದು ಮೈಸೂರಿನ ಮುಮ್ಮಡಿ ಕೃಷ್ಣರಾಜರ ಆಸ್ಥಾನದಲ್ಲಿದ್ದ ರಾಜಾಶ್ರಯ ಪಡೆಯಿತು. ಅದಕ್ಕಿಂತ ಹಿಂದೆ, 17ನೆಯ ಶತಮಾನದ ಉತ್ತರಾರ್ಧದಲ್ಲಿ ಬಿದನೂರಿನ ವೀರಭದ್ರನಾಯಕ ದಶಾವತಾರ ನಾಟಕವೊಂದನ್ನು ಬಿಜಾಪುರದ ಬಾದಷಹಾನ ಸಮ್ಮುಖದಲ್ಲಿ ಆಡಿತೋರಿಸಿ, ರಂಜನೆಗೊಂಡ ಆತನಿಂದ ತನ್ನ ಶತ್ರುಗಳನ್ನು ಓಡಿಸಲು; ಸಹಾಯ ಪಡೆದನಂತೆ, 1648ರಲ್ಲಿ ಗೋವಿಂದವೈದ್ಯ ಕವಿ ರಚಿಸಿದ ಕಂಠೀರವ ನರಸರಾಜವಿಜಯದಲ್ಲಿ ‘ದಶಾವತಾರ’ದ ಮಾತಿದೆ. ಯಕ್ಷಗಾನ ಒಂದು ವಿಶಿಷ್ಟ ಸಂಗೀತಪದ್ಧತಿ ಎಂಬುದಾಗಿ ಗೋವಿಂದ ದೀಕ್ಷಿತರು 1628ರಲ್ಲಿ ರಚಿಸಿದ ಸಂಗೀತ ಸುಧೆಯಲ್ಲಿ ಉಲ್ಲೇಖವಿದೆ. 1577ರಲ್ಲಿ ರಚಿತವಾದ ಭರತೇಶವೈಭವದಲ್ಲಿ ಬರುವ ಎಕ್ಕಡಿಗರು ಯಕ್ಷಗಾನಕಲಾವಿದರಿದ್ದಿರಬೇಕೆಂದು ಸಂಶೋಧಕರ ಅಭಿಪ್ರಾಯ. ಕವಿ ಕುಮಾರವ್ಯಾಸ ‘ನಾಡಾಡಿಗಳ ನಾಟಕ’ದ ಮಾತು ಹೇಳಿದ್ದಾನೆ. ನಿಜಗುಣ ಶಿವಯೋಗಿ ಹೇಳಿದ ನಾಟಕದಲ್ಲಿ ‘ದಿನದಿನಕ್ಕಭಿನಯಿಸಲ್ತಕ್ಕ ರಸ ಭಾವ ಸಂವಿಧಾನ ಆಶ್ರಯಗಳೆಂಬ ಚತುರ್ವಿಧ ಪ್ರಬಂಧಾಂಶಂಗಳಂ, ಮುಖ ದೃಷ್ಟಿ ಹಸ್ತ ಪಾದಂಗಳಭಿನಯಿಪ ಲಕ್ಷಣಂ ತಪ್ಪದೆ. ಚತುರ್ವಿಧ ಮೋಹವಂ ಮೆಯ್ವೆತ್ತು ಶುದ್ಧದೇಶೀಯವೆಂಬ ದ್ವಯಮಾ’ ವಿವರಗೊಂಡ ನಾಟಕದ ರೀತಿಯನ್ನು ಓದಿದ್ದರೆ ಅದು ಇಂದಿನ ಯಕ್ಷಗಾನದ ಹಳೆಯ ರೂಪವನ್ನು ಕುರಿತು ಹೇಳಿದ ಮಾತೇನೊ ಎನ್ನಿಸುತ್ತದೆ. ದೇಗುಲಗಳ ಆವಾರಗಳಲ್ಲಿದ್ದ ಜಾನಪದ ರಂಗಮಂಟಪಗಳ ಬಗೆಗೆ 1125ರಿಂದ ಮಾಹಿತಿ ಕಾಣಸಿಕ್ಕುವುದೆಂದು ಬಿ.ಎ. ಸಾಲೆತೊರೆಯವರು ಆಧಾರಸಹಿತವಾಗಿ ಬರೆದಿದ್ದಾರೆ. ನೃಪತುಂಗ ಹೇಳಿದ ನಾಪಿಗರಣವೆಂದರೆ ಕನ್ನಡ ಜಾನಪದರಂಗಭೂಮಿಯ ಒಂದು ಪ್ರಕಾರ. 8ನೆಯ ಶತಮಾನದ ಪಟ್ಟದಕಲ್ ಶಿಲಾಶಾಸನದಲ್ಲಿ ಇನ್ನಾತನೆ ನರ್ತಕಂ, ನಟರೊಳಗ್ಗಳಂ ಈ ಭುವನಾಸ್ತ ರಂಗದೊಳೆ ಎಂದು ಕೀರ್ತಿಗೊಂಡ ನಟಸೇವ್ಯ, ಕನ್ನಡ ಜಾನಪದ ರಂಗ ಭೂಮಿಯ ಹೆಸರಾಂತ ಕಲಾವಿದನಿದ್ದಿರಬೇಕೆಂದು ಸಂಶೋಧಕರ ಮತ. ಇವೆಲ್ಲಕ್ಕಿಂತ ಹಿಂದೆ ಸಿಕ್ಕುವ ಆಧಾರವೆಂದರೆ, ಭಾಗವತದ ಹರಿವಂಶಪುರಾಣದಲ್ಲಿ (200-400?) ವಜ್ರನಾಭಾಸುರನ ಸಂಹಾರಕ್ಕಾಗಿ ಕಟ್ಟಿದ ಆಟದ ಅಂಗವಾಗಿ, ಭದ್ರನಟನ ನಾಯಕತ್ವದಲ್ಲಿ ನಡೆದ ಭಾಗವತ ಮೇಳದ ಮಾತು ಎಂದು ಕೆರೋಡಿ ಸುಬ್ಬರಾಯರು ಸೂಚಿಸಿದ್ದಾರೆ. ಕನ್ನಡ ಜಾನಪದದ ಕಲಾವಂತಿಕೆಯ ಮಾತು ಪ್ರಾಚೀನ ತಮಿಳು ಸಾಹಿತ್ಯದಲ್ಲೂ ಬರುತ್ತದೆ. ಪ್ರಸಕ್ತಶಕದ ಮೊದಲ ವರ್ಷಗಳಲ್ಲಿ ರಚಿತವಾದ ಶಿಲಪ್ಪದಿಗಾರಂ ಕಾವ್ಯದಲ್ಲಿ ಚೇರರಾಜನಾದ ಶೆಂಗುಟ್ಟುವನ್ ನೀಲಗಿರಿಗೆ ಬಂದಾಗ, ಅವನ ಮನೋರಂಜನೆಗಾಗಿ ಕರುನಾಟಕದ ನಟಿ ನರ್ತಕಿಯರು ಆಡಿದ ಗೀತಾನೃತ್ಯದ ವರ್ಣನೆಯಿದೆ. ಇಷ್ಟು ಪ್ರಾಚೀನವೂ ವೈಭವಯುಕ್ತವೂ ಆದ ನಮ್ಮ (ದ್ರಾವಿಡರ) ಜನಪದ ರಂಗಭೂಮಿಯ ಪ್ರಭಾವ ಭರತನ ನಾಟ್ಯಶಾಸ್ತ್ರದ ಮೇಲೆ ಬಿದ್ದಿರಬೇಕೆಂದು ಕೃಷ್ಣಶಾಸ್ತ್ರೀಯವರು, ಶ್ರೀರಂಗರು ಅಭಿಪ್ರಾಯಪಟ್ಟಿದ್ದಾರೆ. ಹಳೆಮೆಯೊಂದೇ ಕನ್ನಡ ರಂಗಭೂಮಿಯ ಹಿರಿಮೆಯಲ್ಲ ಎಂದು, ಕಳೆದ 100-150 ವರ್ಷಗಳ ಕಾಲಾವಧಿಯಲ್ಲಿ ಅದರ ಇತಿಹಾಸವನ್ನು ವಿವೇಚಿಸಿದಾಗ ತಿಳಿದು ಬರುತ್ತದೆ. ಕನ್ನಡ ರಂಗಭೂಮಿ ಮೂರು ಮುಖ ತಳೆದು; ಜನಪದ ರಂಗಭೂಮಿ ಯಲ್ಲಿಯೂ ವೃತ್ತಿನಿರತ (ಪ್ರೊಫೆಷನಲ್) ರಂಗಭೂಮಿಯಲ್ಲಿಯೂ ವಿಲಾಸ (ಅಮೆಚೂರ್) ರಂಗಭೂಮಿಯಲ್ಲಿಯೂ ತನ್ನ ವೈಶಿಷ್ಟ್ಯವನ್ನು ಕಾಯ್ದುಕೊಂಡು ಬೆಳೆದು ಬಂದಿದೆ.
ಜನಪದ ರಂಗಭೂಮಿ
[ಬದಲಾಯಿಸಿ]ಕನ್ನಡ ಜನಪದ ರಂಗಭೂಮಿಯ ಮೂಲ ಅಂಶಗಳೂ ದೈವಾರಾಧನೆಯಲ್ಲಿಯೇ ಕಂಡುಬರುತ್ತದೆ. ದೈವವನ್ನೋ ದೆವ್ವವನ್ನೋ ತೃಪ್ತಿಪಡಿಸಿ, ಅದರಲ್ಲಿ ತಮ್ಮ ಏಳಿಗೆಯನ್ನು ಕಂಡುಕೊಳ್ಳುತ್ತಿದ್ದ ಹಳ್ಳಿಗರ ಆರಾಧನೆಯಲ್ಲಿ ಆ ದೈವ ಅಥವಾ ದೆವ್ವದ ಅನುಕರಣ ಅನಿವಾರ್ಯವಾಯಿತು. ಇಂಥ ಅನುಕರಣ ಇಂದಿಗೂ ಕನ್ನಡನಾಡಿನ ಕರಾವಳಿಯ ಹಳ್ಳಿಗಳಲ್ಲಿರುವ ಭೂತಸ್ಥಾನಗಳಲ್ಲಿ ಕೋಲ ಮೊದಲಾದ ಉತ್ಸವಗಳಲ್ಲಿ ಕಂಡುಬರುತ್ತದೆ. ಈ ಅನುಕರಣ ಜನ ನಂಬುವಷ್ಟು ಪ್ರಭಾವಶಾಲಿಯಾಗುವಂತೆ ಮಾಡುವ ಸಲುವಾಗಿ ಬಳಸಿದ ಮುಖವರ್ಣಿಕೆ, ವೇಷಭೂಷಣ, ಅಲಂಕಾರ, ಆಯುಧಾದಿಗಳಿಂದ ಹಿಡಿದು, ಮಾತು ಗೀತೆ ಕುಣಿತಗಳವರೆಗೆ ಎಲ್ಲವೂ ನಾಟಕದ ಮೂಲ ಅಂಶಗಳೇ. ಕನ್ನಡನಾಡಿನಲ್ಲಿ ನಾಟಕದ ಮೂಲಪ್ರಕಾರವೆನಿಸುವ ವೈದ್ಯರ ಕುಣಿತ, ನಾಗನೃತ್ಯಗಳು ಇಂದಿಗೂ ಕರಾವಳಿಯ ಹಳ್ಳಿಗಳಲ್ಲಿ ಆಗಾಗ ನೋಡಸಿಗುತ್ತವೆ.
ನಾಟಕೀಯವಾದ ಈ ಆರಾಧನೆಗಳು ನೋಡುವವರ ಮನಸ್ಸಿಗೆ ರಂಜನೆ ಕೊಡುತ್ತ, ಸ್ಥೂಲವಾದ ಕಥಾವಸ್ತುವನ್ನು ಕ್ರಮೇಣ ಒಳಗೊಂಡುವು. ಸಾಮೂಹಿಕ ನೃತ್ಯಪ್ರಕಾರಗಳೂ ಬಳಕೆಗೆ ಬಂದುವು. ಮಲೆಕುಡಿಯರ ಕುಣಿತ, ಪುರವಂತರ ಕುಣಿತ, ರಾಣಿಯರ ಕೋಲಾಟ, ಬೀರೇದೇವರ ಕುಣಿತ, ವೀರಭದ್ರನ ಕುಣಿತ ಮೊದಲಾದವು ಈ ಬಗೆಯಲ್ಲಿ ಕೆಲವು. ಇಂಥ ಆಟಗಳು ಬೆಳೆದು ನಾಟಕವಾಗುವ ನಡೆಯಲ್ಲಿ ನೃತ್ಯಗೀತೆಗಳೊಂದಿಗೆ ಅಭಿನಯವೂ, ಅಭಿನಯದೊಂದಿಗೆ ಆಯಾ ಪಾತ್ರಗಳ ಮಾತುಗಳೂ ಸೇರಿಕೊಳ್ಳಬೇಕಾಯಿತು. ನೃತ್ಯ-ಗೀತೆಗಳಿಗಿಂತ ಹೆಚ್ಚಾಗಿ ನಾಟಕೀಯವಾದ ಸಂಭಾಷಣೆಗಳಲ್ಲಿ ಪರಿಣತರಾಗಿದ್ದ ನಟ್ಟುವ, ಬಹುರೂಪಿ, ನಕಲಿ, ಹಾಸ್ಯಗಾರರೂ ಹಿಂದೆಯೇ ವೇಷ ಕಟ್ಟಿ ಆಟವಾಡುತ್ತಿದ್ದರು. ಹಿಂದಿನ ನೃತ್ಯಗೀತೆಗಳೊಂದಿಗೆ ಅವರ ಮಾತಿನ ಚಾತುರ್ಯ ಮಿಲನವಾಗಿ, ಕೋಲೆಬಸವ, ಗಂಗೆ-ಗೌರಿ ಸಂವಾದ, ಹಗಲುವೇಷದ ಆಟ ಮೊದಲಾದ ಸರಸವಾದ ಆಟಗಳು (ಅವುಗಳನ್ನು ಇನ್ನೂ ನಾಟಕ ಎನ್ನುವಂತಿರಲಿಲ್ಲ) ಜನಮನವನ್ನು ರಂಜಿಸಿದುವು.
ದಾಸರ ಆಟ : ರಂಗಕಲೆ ಇನ್ನೂ ಪ್ರಬುದ್ಧವಾದಾಗ, ನಾಟಕದ ಚೌಕಟ್ಟಿನಲ್ಲಿಯೇ ಬರುವಂಥ ಜಾನಪದ ರಂಗ ಪ್ರಕಾರಗಳು ಮೈತಳೆದು ಬಂದುವು. ಇವುಗಳಲ್ಲಿ ಉತ್ತರ ಮೈಸೂರಿನ ದಾಸರಾಟ ಮುಖ್ಯವಾದುದು. ಗಂಡು ಮತ್ತು ಹೆಣ್ಣುದಾಸರ ಮೇಳವನ್ನೊಳಗೊಂಡ ಈ ಮನೋರಂಜನ ಪ್ರಕಾರದಲ್ಲಿ ರಂಗದ ಮೇಲೆ ನಾಯಕ ಗೊಡ್ಡಿಭೀಮಣ್ಣ, ನಾಯಿಕೆ ಚಿಮಣಾ ಮತ್ತು ವಿದೂಷಕ ಜವ್ವಾರಿ ಇವರು ಗಂಡು ಹೆಚ್ಚೋ ಹೆಣ್ಣು ಹೆಚ್ಚೋ ಎಂಬ ವಸ್ತುವಿನ ಮೇಲೆ ಎಲ್ಲೆಲ್ಲಿಂದಲೋ ಎಳೆದು ತಂದ ಆಧಾರಗಳೆನ್ನೆಲ್ಲ ಉಪಯೋಗಿಸಿ ನೋಡುವವರ ಕಣ್ಣು ಮನ ತಣಿಯುವ ರೀತಿಯಲ್ಲಿ ನಾಟಕವಾಡುತ್ತಾರೆ. ನೃತ್ಯ-ಗೀತ ಸಂಭಾಷಣೆಗಳ ಸರಸ ಸಂಗಮವಾದ ಈ ಆಟವೇ ಮಹಾರಾಷ್ಟ್ರದ ‘ತಮಾಷಾ’ ಆಗಿ ಪರಿವರ್ತನೆಗೊಂಡು, ಅಲ್ಲಿ ಮತ್ತಿಷ್ಟು ಪರಿಷ್ಕಾರಗೊಂಡ ಮೇಲೆ ಉತ್ತರ ಕನ್ನಡ ರಂಗಭೂಮಿಗೆ ‘ರಾಧಾನ ಆಟ’ ಎಂಬ ಹೆಸರಿನಿಂದ ಹಿಂದಿರುಗಿ ಬಂದಿತು. ಈ ಆಟದಲ್ಲಿಯೂ ನಿರ್ದಿಷ್ಟವಾದ, ರಂಜಕವಾದ ಕಥಾವಸ್ತು ಇಲ್ಲದಿದ್ದರೂ ಮನಸ್ಸನ್ನು ಆಹ್ಲಾದಗೊಳಿಸುವ ಹಾಡುಗಳಿಂದಾಗಿ, ಕುಣಿತದಿಂದ, ತಡೆಯರಿಯದ ಹಾಸ್ಯದಿಂದಾಗಿ, ಪಾತ್ರಪೋಷಣೆಯಿಂದಾಗಿ ಇಂದೂ ಉತ್ತರ ಕರ್ನಾಟಕದಲ್ಲಿ ಜನರ ಅನುರಾಗ ಗಳಿಸಿದೆ. ಜನಪದ ರಂಗದಲ್ಲಿ ಮಾತುಗಾರಿಕೆಯ ನಾಟಕಗಳನ್ನೇ ಹೋಲುವ ಪ್ರಯೋಗಗಳೆಂದರೆ 40-50 ವರ್ಷಗಳಿಗೆ ಈಚಿನ ಪ್ರಯೋಗಗಳೇ. ರೂಪಸಿಂಗನ ಆಟ, ಮುಕ್ಕುಂದ-ಗೋವಿಂದ, ಸಂಗ್ಯಾ-ಬಾಳ್ಯಾ ಮುಂತಾದ ಜಾನಪದ ನಾಟಕಗಳ ವೈಶಿಷ್ಟ್ಯವೆಂದರೆ, ಈ ಎಲ್ಲ ಆಟಗಳೂ ಸಾಮಾಜಿಕ ಕಥಾವಸ್ತುವನ್ನು ಕುರಿತು ಕಟ್ಟಿದಂಥವು. ಎರಡನೆಯದಾಗಿ ಹಾಡು ಕುಣಿತಗಳಿಗಿಂತ ಸರಸವಾದ ಸಂಭಾಷಣೆಯಲ್ಲಿ ಮೇಲುಗೈ ಪಡೆದಿರುವಂಥವು. ಇವುಗಳ ಮುಖ್ಯವಾದ್ಯ ಡಪ್ಪು. ಇವುಗಳಿಗೆ ಡಪ್ಪಿನಾಟಗಳೆಂದೂ ಹೆಸರು. ಇದೇ ಪರಂಪರೆಯಲ್ಲಿ ಶ್ರೀ ಕೃಷ್ಣ ಪಾರಿಜಾತವವೂ ಬರುತ್ತದೆ. ಇದರ ಕಥೆ, ಸಂಗೀತ, ತತ್ತ್ವ ರಂಗಭೂಮಿಗೇ ಕಳೆಕಟ್ಟುವಂಥದ್ದು.
ಬೊಂಬೆಯಾಟ : (ಪಪೆಟ್) ಕನ್ನಡ ಜನಪದ ರಂಗಭೂಮಿಯಲ್ಲಿ ಬಹಳ ಜನಾನುರಾಗ ಗಳಿಸಿದ ಒಂದು ಮನೋರಂಜನ ಪ್ರಕಾರವೆಂದರೆ ಬೊಂಬೆಯಾಟ. ಬೊಂಬೆಗಳಿಗೆ ಪಾತ್ರಗಳಂತೆ ವೇಷತೊಡಿಸಿ ಅಲಂಕಾರ ಮಾಡಿ ಅವುಗಳಿಂದ ಮಾನವನ ಚಟುವಟಿಕೆಗಳ ಅನುಕರಣ ಮಾಡಿಸುವ ಕಲೆ ಅದು. ತುಂಬ ಹಿಂದಿನ ಕಾಲದಿಂದ ಈ ಕಲೆ ಅನೇಕ ಪೌರಸ್ತ್ಯ ದೇಶಗಳಲ್ಲಿ ಬೆಳೆದುಬಂದಿದೆ. ಸೂತ್ರದ ಬೊಂಬೆ ಎಂದು ಕರೆಸಿಕೊಳ್ಳುವ ಈ ಕಲೆ ಕನ್ನಡನಾಡಿನಲ್ಲಿ ಹಿಂದಿನ ಕಾಲದಿಂದ ಇದ್ದಿರಬೇಕು. ಗೊಂಬೆಯಾಟವನಾಡಿಸಿದ ಮಹಾಭಾರತವ ಎಂಬ ಪುರಂದರದಾಸರ ನುಡಿ ಅಥವಾ ಡಿಂಭದೊಳು ಪ್ರಾಣವಿರಲು ಕಾಂಬ ಸೂತ್ರಗೊಂಬೆಯಂತೆ ಎಂಬ ಕನಕದಾಸರ ನುಡಿ ಈ ಮಾತಿನ ಸತ್ಯಾರ್ಥವನ್ನು ಸೂಚಿಸುತ್ತದೆ. ಭರತೇಶನ ಆಸ್ಥಾನಕ್ಕೆ ಆಗಮಿಸಿದ ಆಟಗಾರರಲ್ಲಿ ಗೊಂಬೆಯಾಡಿದವರೂ ಇದ್ದರೆಂದು ರತ್ನಾಕರವರ್ಣಿ ಹಾಡಿದ್ದಾನೆ. ವಿಜಯನಗರ ಕಾಲದ ಶಿಲಾಶಾಸನಗಳಲ್ಲಿಯೂ ಬೊಂಬೆಯಾಟವನ್ನು ಕುರಿತು ಮಾತುಗಳಿವೆ.
ಪಾತ್ರಗಳಂತೆ ವೇಷಭೂಷಣಗಳನ್ನು ಧರಿಸಿದ ಬೊಂಬೆಗಳನ್ನು ಸೂತ್ರ ಹಿಡಿದು ಆಡಿಸುವವನೇ ಸೂತ್ರಧಾರ. ರಾಮಾಯಣ, ಮಹಾಭಾರತ, ಭಾಗವತಗಳ ಅನೇಕ ನಾಟಕೀಯ ಕಥಾವಸ್ತುಗಳನ್ನು ಬೊಂಬೆಯಾಟಕ್ಕೆ ಅಳವಡಿಸಿಕೊಳ್ಳಲಾಗಿದೆ. ಬೊಂಬೆಗಳು ಆಡುವಾಗ, ಕುಣಿಯುವಾಗ, ಯುದ್ಧ ಮಾಡುವಾಗ, ಅಭಿನಯ ಮಾಡುವಾಗ ಹಿಮ್ಮೇಳದ ಗೀತೆ ಮಾತು ಶಬ್ದವಿಶೇಷಗಳ ಸಂಯೋಜನೆಯನ್ನು ಪರದೆಯ ಹಿಂದೆ ನಿಂತು ಬೊಂಬೆಗಳ ಅವಯವಗಳಿಗೆ ಕಟ್ಟಿದ ಸೂತ್ರಗಳನ್ನು ತನ್ನ ಕೈಬೆರಳು ಹಸ್ತ ಮುಂಗಟ್ಟುಗಳಿಗೆ ಕಟ್ಟಿಕೊಂಡು ಆಡಿಸುವ ಸೂತ್ರದಾರ ಹಾಗೂ ಮೇಳದವರು ಒದಗಿಸುತ್ತಾರೆ. ಬೆಳಗಾಂವಿಯ ಗೊಂಬೆ ಅನಂತಪ್ಪನವರು ಮನೆತನದಿಂದ ಗೊಂಬೆಯಾಟದ ಕಲೆಯಲ್ಲಿ ಪರಿಣತರು. ಅವರ ಮೇಳದವರು ರಂಗದ ಮೇಲೆ ಒಟ್ಟಿಗೆ ಹತ್ತಾರು ಬೊಂಬೆಗಳನ್ನು ಪಾತ್ರದಲ್ಲಿ ತರುತ್ತಿದ್ದರು. ಸತ್ಯಭಾಮೆಯ ಪಾತ್ರ ವಹಿಸಿದ ಬೊಂಬೆ ಕೃಷ್ಣನ ಮೇಲೆ ಮುನಿಸಿಕೊಂಡು, ತನ್ನ ಆಭರಣಗಳನ್ನೆಲ್ಲ-ಮೂಗುತಿಯನ್ನು ಮೊದಲು ಮಾಡಿ-ಕಳೆದೆಸೆದು ಶೋಕಾಭಿನಯ ಮಾಡುವಾಗ ಪ್ರೇಕ್ಷಕರ ಕಣ್ಣು ಒದ್ದೆಯಾಗುತ್ತಿದ್ದುವೆಂದು ಮುದವೀಡು ಕೃಷ್ಣರಾಯರು ಬರೆದಿದ್ದಾರೆ. ಅತ್ಯಂತ ನಿಷ್ಕೃಷ್ಟವಾದ ಸಾಧನೆಯಿಂದ ಕರಗತ ಮಾಡಿಕೊಂಡಿದ್ದ ಕಲೆ ಅದು. ಹಿಂದಿನ ಕಾಲದ ಜಾತ್ರೆ ಉತ್ಸವಗಳಲ್ಲಿ ಮುಖ್ಯ ಮನೋರಂಜನ ಪ್ರಕಾರವಾಗಿದ್ದ ಬೊಂಬೆಯಾಟ ಇಂದು ಕನ್ನಡನಾಡಿನಲ್ಲಿ ಇಳಿಮುಖವಾಗುತ್ತಿದೆ.
ತೊಗಲು ಬೊಂಬೆ : ತೊಗಲುಬೊಂಬೆ ಕನ್ನಡದ ಜನಪದರಂಗದ ಇನ್ನೊಂದು ಪ್ರಮುಖ ಮನೋರಂಜನ ಪ್ರಕಾರ. ಬಲು ತೆಳ್ಳಗಾಗುವಂತೆ ಚರ್ಮವನ್ನು ಹದಮಾಡಿ, ಮಾನವ ಮತ್ತು ಪ್ರಾಣಿಪಕ್ಷಿಗಳ ಆಕಾರ ಬರುವಂತೆ ಕತ್ತರಿಸಿ, ಮಡಿಸಿ ಪಟ್ಟೆಗಳನ್ನು ಹೆಣೆದು, ಕತ್ತರಿಯಿಂದಲೇ ಕುಸುರಿ ಕೆಲಸ ಮಾಡಿ, ಅಂಗ ಉಡುಪು ಕೇಶಗಳನ್ನು ಸೂಚಿಸುವಂತೆ ಬೇರೆ ಬೇರೆ ಬಣ್ಣಗಳನ್ನು ಸೂಕ್ತವಾಗಿ ತುಂಬಿ-ಆ ಆಕೃತಿಯ ಎರಡೂ ತುದಿಗಳನ್ನು ಸೀಳುಬೆತ್ತಕ್ಕೆ ಸಿಕ್ಕಿಸಿದ ಅನಂತರ ಅವನ್ನು ಬಿಳಿಯ ಪರದೆಯ ಹಿಂದೆ ಹಿಡಿದು ಅದರ ಹಿಂದಿನಿಂದ ತೀಕ್ಷ್ಣವಾದ ಬೆಳಕನ್ನು ಬೀಳಿಸುತ್ತಾರೆ. ಪರದೆಯ ಮೇಲೆ ಬಿದ್ದ ಆ ವರ್ಣರಂಜಿತ ಆಕಾರಗಳು-ಹತ್ತು ತಲೆಯ ರಾವಣ, ಸಾವಿರ ಹೆಡೆಯ ಆದಿಶೇಷ, ಬೃಹತ್ತಾಗಿ ಬೆಳೆದು ಆಕಾಶವನ್ನು ಅಳೆಯುವ ತ್ರಿವಿಕ್ರಮ, ಇಂತಹವಂತೂ ಬಲು ಪರಿಣಾಮಕಾರಿಯಾದ ಚಿತ್ರಗಳಾಗುತ್ತವೆ. ನಡೆದಾಡುವಂತೆ, ಹಾರುವಂತೆ, ಕುಣಿಯುವಂತೆ, ಕದನವಾಡುವಂತೆ, ಸಂಭಾಷಿಸುವಂತೆ ಕೈಚಳಕದಿಂದ ಆಡಿಸುತ್ತಾರೆ. ಪರದೆಯ ಮುಂದೆ ಕುಳಿತ ಜನಕ್ಕೆ ವರ್ಣರಂಜಿತ ಚಲನಚಿತ್ರವನ್ನೇ ನೋಡಿದ ಅನುಭವವಾಗುತ್ತವೆ. ಈ ಅಟದಲ್ಲಿಯೂ ಪೌರಾಣಿಕ ಪ್ರಸಂಗಗಳೇ ಬಹಳ. ಮಾತು ಗೀತ, ಶಬ್ದ ವಿಶೇಷಗಳನ್ನೆಲ್ಲ ಆಟಗಾರ ಮತ್ತು ಅವನ ಮೇಳದವರು (ಎಂದರೆ, ಆತನ ತಂದೆ, ತಾಯಿ, ಹೆಂಡತಿ, ಮಕ್ಕಳು ಮೊದಲಾದವರು) ಪರದೆಯ ಮೇಲಿನ ಪಾತ್ರಗಳಿಗೆ ಸರಿಯಾಗಿ ಹೊಂದಿಸಿ ಹೊರಡಿಸುತ್ತಾರೆ. ಕಿಳ್ಳೆಕೇತರೆಂಬ ಹೆಸರಿನ ಈ ಆಟಗಾರರು ತೊಗಲುಬೊಂಬೆಯ ಕಲೆಯಲ್ಲಿ ನಿಷ್ಣಾತರು. ಈ ಜನದ ಅನೇಕ ಮನೆತನಗಳು ಕನ್ನಡನಾಡಿನ ಬಳ್ಳಾರಿ ಜಿಲ್ಲೆಯಲ್ಲಿ ಇದ್ದುವು. ಬೊಂಬೆಯಾಟದಂತೆಯೇ ತೊಗಲುಬೊಂಬೆಯೂ ಇಂದು ಕನ್ನಡ ಜನಮನದಿಂದ ಮೆಲ್ಲಮೆಲ್ಲನೆ ಮರೆಯಾಗುತ್ತಿದೆ.
ಮೂಡಲಪಾಯ : ಕರಾವಳಿಯ ಯಕ್ಷಗಾನವನ್ನು ಸ್ಥೂಲವಾಗಿ ಹೋಲುತ್ತ, ಘಟ್ಟದ ಮೇಲಿನ ಮೈದಾನ ಪ್ರದೇಶಗಳಲ್ಲಿ ಪ್ರಸಿದ್ಧವಾಗಿರುವ ಜನಪದ ರಂಗಭೂಮಿಯ ಮತ್ತೊಂದು ಪ್ರಕಾರ ಮೂಡಲಪಾಯ. ಈ ಆಟಕ್ಕೆ ಅಟ್ಟದಾಟ, ಬಯಲಾಟ, ದೊಡ್ಡಾಟ, ದೊಂಬಿದಾಸರ ಕುಣಿತ, ದಶಾವತಾರದ ಆಟ ಎಂಬ ಹೆಸರುಗಳೂ ಇವೆ. ಪಾತ್ರಗಳ ಹಾಡು, ಕುಣಿತ, ಸಂಭಾಷಣೆ, ಅಭಿನಯಗಳ ದೃಷ್ಟಿಯಿಂದ ಇದರಲ್ಲಿ ಯಕ್ಷಗಾನದಷ್ಟು ನಿಷ್ಕೃಷ್ಟತೆ, ಶಾಸ್ತ್ರೀಯತೆ ಇಲ್ಲ. ಇದರ ಕಲಾವಿದರು ಯಕ್ಷಗಾನದ ಕಲಾವಿದರಂತೆ ಸುಶಿಕ್ಷಿತರಲ್ಲ, ಸುಸಂಸ್ಕೃತರಲ್ಲ ಎಂದರೂ ಸಲ್ಲುತ್ತದೆ. ಆದ್ದರಿಂದ ಪಾತ್ರಪೋಷಣೆಯಲ್ಲಿ ಅರಕೆಯಾಗುತ್ತದೆ. ಅರ್ಥ ತಿಳಿಯದಿದ್ದರೂ ಶಬ್ದದ ಆಟಾಟೋಪಕ್ಕೆ ಮರುಳಾಗಿ, ಬಲು ಭಾರವಾದ ಭಾಷೆಯನ್ನು ಪಾತ್ರಧಾರಿಗಳು ಗಟ್ಟಿಮಾಡಿ ಉರುಳಿಸಿ ಬಿಡುತ್ತಾರೆ. ಸಮರದ ಸಂದರ್ಭಗಳಲ್ಲಿ ಬಣ್ಣದ ವೇಷದ ನೃತ್ಯ ನೆಗೆದಾಟಗಳೂ ಆಗಬಹುದು. ಇಷ್ಟಾದರೂ ವೀರರಸ ಪ್ರತಿಪಾದನೆಯಲ್ಲಿ ಮೂಡಲಪಾಯ ಹೆಸರು ಪಡೆದಿದೆ.
ಪುರಾಣದ ಪ್ರಸಂಗಗಳೇ ಮೂಡಲಪಾಯದ ಕಥಾವಸ್ತುಗಳು. ರಾತ್ರಿಯಿಂದ ಮುಂಜಾವಿನವರೆಗೆ ನಡೆಯುವ ರಂಗದಮೇಲಿನ ಈ ಆಟಗಳಲ್ಲಿ ಹಾಡು, ಕುಣಿತ, ಹಾಸ್ಯ, ಮಾತು ಯಥೇಚ್ಚವಾಗಿರುತ್ತವೆ. ಇಲ್ಲಿಯ ವೇಷಭೂಷಣ ಮುಖವರ್ಣಿಕೆಗಳು ಸೂಕ್ಷ್ಮತೆಯನ್ನು ಮೀರಿದಂಥವು. ಪಾತ್ರಗಳನ್ನು ಸಭೆಗೆ ಪರಿಚಯಮಾಡಿಕೊಡುವ ಸಲುವಾಗಿ, ಅಲ್ಲದೆ ರಂಗಕ್ಕೆ ಬಂದ ಪ್ರತಿಯೊಂದು ಪಾತ್ರದಿಂದಲೂ ಹಿಂದಿನ, ಇಂದಿನ, ಮುಂದಿನ ಸಂಗತಿಗಳನ್ನು ಹೊರಡಿಸುವ ಸಲುವಾಗಿ ಸಾರಥಿ ಇಲ್ಲವೆ ಕೋಡಂಗಿ ಎಂಬ ಹಾಸ್ಯಪಾತ್ರ ವಿರುತ್ತದೆ. ರಂಗದ ಮೇಲೆ, ಹಿಂದಿನ ಪರದೆಯ ಮುಂದೆ, ಮಧ್ಯದಲ್ಲಿ, ಭಾಗವತನನ್ನು ಹೊಂದಿಕೊಂಡು ಹಾಡುವ ಹಿಮ್ಮೇಳದವರಿರುತ್ತಾರೆ. ಸುಂದರಿ, ಮೃದಂಗ, ತಾಳ ಮೊದಲಾದ ವಾದ್ಯ ವಿಶೇಷಗಳನ್ನು ಹಿಮ್ಮೇಳ ಬಳಸುತ್ತದೆ.
ಮೂಡಲಪಾಯದಲ್ಲಿ ಪ್ರಧಾನಪಾತ್ರವೆಂದರೆ ಕಥಾನಾಯಕನಲ್ಲ, ಖಳನಾಯಕ ಎಂದರೆ ಇಲ್ಲಿ ರಾಮನಿಗಿಂತ ರಾವಣನಿಗೆ ಹೆಚ್ಚಿನ ಮಹತ್ತ್ವ ಕೊಟ್ಟು ಆ ಪಾತ್ರವನ್ನು ತುಂಬ ಎಚ್ಚರಿಕೆಯಿಂದ ಸಿದ್ಧಗೊಳಿಸುತ್ತಾರೆ. ಖಳನಾಯಕನ ಪಾತ್ರಕ್ಕೆ ಬಣ್ಣದ ವೇಷ ಎಂದೂ ಹೆಸರು. ಬಣ್ಣದ ವೇಷ ಕಟ್ಟುವ ಕಲಾವಿದ, ಚಾವಡಿಯಲ್ಲೋ ತನ್ನ ಹಟ್ಟಿಯಲ್ಲೊ ರೌದ್ರಾಲಂಕಾರ ಮಾಡಿಕೊಂಡು, ವೇಷಭೂಷಣಗಳನ್ನು ಧರಿಸಿ, ಬೆಳಕಿನ ಮಧ್ಯೆ, ಓಲಗ ತಮಟೆ ತುತ್ತೂರಿಗಳನ್ನು ಮುಂದೆ ಮಾಡಿಕೊಂಡು ಮೆರವಣಿಗೆಯಲ್ಲಿ ರಂಗಮಂಚಕ್ಕೆ ಬರುವುದು ವಾಡಿಕೆ. ಮಾರ್ಗದ ಮಧ್ಯೆ ಅಲ್ಲಲ್ಲಿ ನಿಂತು ಆತ ಸುತ್ತು ನೃತ್ಯ ಮಾಡುತ್ತಾನೆ. ಹಾರುತ್ತಾನೆ, ನೆಗೆಯುತ್ತಾನೆ, ಅಟ್ಟಹಾಸ ಆಟೋಪಗಳನ್ನು ಮಾಡುತ್ತಾ ಬರುತ್ತಾನೆ. ರಾತ್ರಿ ಪ್ರಾರಂಭವಾದ ಆಟ ಮುಂಜಾನೆ ಮುಗಿಯುವ ಹೊತ್ತಿಗೆ ಆತನ ಚಿತ್ರ ನೋಟಕರ ಕಣ್ಣಿಗೆ ಕಟ್ಟಿಹೋಗುತ್ತದೆ; ಧ್ವನಿ ಕಿವಿಗಳಲ್ಲಿ ಮೊರೆಯುತ್ತದೆ. ಆತ ಒಳ್ಳೆಯ ನಟನಾದರಂತೂ ನೋಟಕರ ಮೈಯಲ್ಲಿ ಅಡಿಗಡಿಗೆ ಜುಮ್ಮು ತಟ್ಟುತ್ತದೆ.
ಮೂಡಲಪಾಯ ಕನ್ನಡನಾಡಿನ ಬಯಲುಸೀಮೆಯ ಹಳ್ಳಿಗಳಲ್ಲಿ ಪ್ರದರ್ಶನಗೊಳ್ಳುವ ಒಂದು ಅದ್ಭುತರಮ್ಯ ಮನೋರಂಜನ ಪ್ರಕಾರ. ಇಂದು ಅದರ ಮೇಲೆ ಪಟ್ಟಣಗಳಲ್ಲಿನ ವೃತ್ತಿನಿರತ ರಂಗಭೂಮಿಯ ಪ್ರಭಾವ ಹೆಚ್ಚಾಗಿ ಬಿದ್ದು ಅದರ ಮೂಲರೂಪ ಬದಲಾಗುತ್ತಾ ನಡೆದಿದ್ದರೂ ಉತ್ತರ ಕರ್ನಾಟಕದಲ್ಲಿ ಹೆಚ್ಚು ಪ್ರಚಲಿತವಾಗಿರುವ ಕೃಷ್ಣಪಾರಿಜಾತದಂಥ ದೊಡ್ಡಾಟದ ಪ್ರಕಾರಗಳ ಪ್ರಭಾವ ವೈಶಿಷ್ಟ್ಯಗಳು ಇನ್ನೂ ಮಾಸಿಹೋಗಿಲ್ಲ.
ಸಣ್ಣಾಟ : ಮೂಡಲಪಾಯದ ಛಾಯೆಯನ್ನೇ ಪಡಿಮೂಡಿಸುತ್ತಿದ್ದರೂ ವೃತ್ತಿನಿರತ ನಾಟಕದ ಪರದೆ, ಪರಿಕರಗಳನ್ನು ಇತ್ತೀಚೆಗೆ ಹೆಸರು ಪಡೆಯುತ್ತಿರುವ ಮತ್ತೊಂದು ಜಾನಪದ ಪ್ರಕಾರವೆಂದರೆ ಸಣ್ಣಾಟ. ಮೂಡಲಪಾಯಕ್ಕೂ ವೃತ್ತಿನಿರತ ರಂಗಭೂಮಿಗೂ ಮಧ್ಯದ ಮೈಲಿಗಲ್ಲು ಇದು. ಮೂಡಲಪಾಯದಂತೆ ಇಲ್ಲೂ ಭಾಗವತನೂ ಹಿಮ್ಮೇಳದವರೂ ಕಥೆಯ ಸೂತ್ರಗಳನ್ನು ಪದ್ಯರೂಪದಲ್ಲಿ ಹೇಳಿದ ಮೇಲೆ ಪಾತ್ರಗಳು ಮಾತನಾಡಿ ಅಭಿನಯಿಸುತ್ತವೆ. ಆದರೆ ಇಲ್ಲಿಯ ವೇಷಭೂಷಣ, ರಂಗಸಜ್ಜಿಕೆ, ಪಾತ್ರಾಲಂಕಾರಗಳೆಲ್ಲ ಕಂಪನಿಯ ನಾಟಕಗಳನ್ನೇ ಅನುಕರಿಸಿ ಮಾಡಿದಂಥವು. ಅಲ್ಲದೆ ಇದರ ಕಥಾವಸ್ತು ಪೌರಾಣಿಕವಲ್ಲದೆ ಸಾಧುಸಂತರ ಜೀವನಗಳನ್ನು ಕುರಿತು ಕಟ್ಟಿದ ಆಟಗಳು ಇವು. ಬೆಳಗಾಂವಿ ಜಿಲ್ಲೆಯ ನೀಲಕಂಠಪ್ಪ ಪತ್ತಾರ, ಹಣ್ಣಿಕೇರಿ ಶಿವಾನಂದ ಕವಿಗಳು ಇಂಥ ಸಣ್ಣಾಟಗಳನ್ನು ಬರೆದವರಲ್ಲಿ ಪ್ರಮುಖರು. ನಿಜಗುಣ ಶಿವಯೋಗಿ, ತಿರುನೀಲಕಂಠ, ಕಬೀರದಾಸ ಮುಂತಾದವು ಇವರ ಪ್ರಮುಖ ಸಣ್ಣಾಟಗಳು. ಧಾರವಾಡದ ಬಳಿಯ ಕೆಳಗೇರಿಯಲ್ಲಿಯ ಪ್ರಸಿದ್ಧವಾದ ಕಲೆಗಾರ ತಂಡ ಕನ್ನಡನಾಡಿನ ಹಾಗೂ ಹೊರಗಿನ ಸಾಧುಸಂತರ ಜೀವನಗಳನ್ನು ಸಣ್ಣಾಟಗಳಲ್ಲಿ ಅಳವಡಿಸಿದೆ. ನೀತಿಪ್ರಸಾರವೇ ಸಣ್ಣಾಟದ ಮುಖ್ಯ ಗುರಿ.
ವೃತ್ತಿನಿರತ ರಂಗಭೂಮಿ
[ಬದಲಾಯಿಸಿ]ಕಲಿತವರ ಮನೋರಂಜನೆಯ ಸಲುವಾಗಿ, ಸಂಸ್ಕೃತ ನಾಟಕಗಳನ್ನು ಆಧಾರವಾಗಿಟ್ಟುಕೊಂಡಿದ್ದ ಅರಮನೆ ರಂಗಭೂಮಿಗೂ ಕಲಿಯದವರ ಮನೋರಂಜನೆ ಮಾಡುತ್ತಿದ್ದ ಜಾನಪದ ರಂಗಭೂಮಿಗೂ ನಡುವೆ, ಜನಸಾಮಾನ್ಯರ ಎಂದರೆ ಮಧ್ಯಮವರ್ಗದ ಜನತೆಯನ್ನು ರಂಜಿಸುವ ಧ್ಯೇಯದಿಂದ, ಹುಟ್ಟಿದುದೇ ವೃತ್ತಿನಿರತ ರಂಗಭೂಮಿ. ಭಾರತದಲ್ಲಿ ಇದರ ಬೆಳೆವಣಿಗೆಯಾಗಿರುವುದು ಕಳೆದ ಸು. 150 ವರ್ಷಗಳ ಕಾಲದಲ್ಲಿ ಅಷ್ಟೆ.
ಪಾಶ್ಚಾತ್ಯ ಸಂಪರ್ಕದಿಂದಾಗಿ ರಂಗಕಲೆಯ ಬಗ್ಗೆ ಜನರಲ್ಲಿ ಬಂದ ಹೊಸ ಅರಿವು ಭಾರತದ ವೃತ್ತಿ ರಂಗಭೂಮಿಯ ಸ್ಥಾಪನೆಗೆ ಪ್ರಚೋದನೆ ಕೊಟ್ಟಿತು. ಕಲೆಯನ್ನೇ ಕಾಯಕವಾಗಿ ಮಾಡಿಕೊಂಡಿದ್ದ ಈ ರಂಗಭೂಮಿ 1775-76ರಲ್ಲಿ ಮೊದಲಿಗೆ ಕೋಲ್ಕತ್ತದಲ್ಲಿ ಪ್ರಾರಂಭವಾಯಿತು. ಇದರ ಪ್ರಭಾವದಿಂದ 1842ರ ಹೊತ್ತಿಗೆ ಮುಂಬಯಿಯಲ್ಲಿ ಬಾಡಿಗೆಗೆ ಕೊಡಮಾಡುವ ರಂಗಶಾಲೆಗಳನ್ನು ನಿರ್ಮಿಸಲಾಯಿತು. 30 ವರ್ಷಗಳ ಅನಂತರ ಪಾರ್ಸಿ ಹಾಗೂ ಮರಾಠೀ ನಾಟಕ ಕಂಪನಿಗಳು ಉತ್ತರ ಕರ್ಣಾಟಕ ಹಾಗೂ ಮೈಸೂರಿಗೆ ಭೇಟಿಯಿತ್ತು ನಾಟಕಗಳನ್ನು ಪ್ರದರ್ಶಿಸಿದ ಮೇಲೆ ಕನ್ನಡನಾಡಿನಲ್ಲಿ ವೃತ್ತಿನಿರತ ರಂಗಭೂಮಿಯ ಅವತಾರವಾಯಿತೆನ್ನಬೇಕು. ಉತ್ತರ ಕರ್ನಾಟಕ ರಂಗಭೂಮಿ : ಕರ್ನಾಟಕ ರಂಗಭೂಮಿಯ ಸ್ಥೂಲನೋಟಕ್ಕೆ ಪ್ರಾದೇಶಿಕ ಒಳ ವೈವಿಧ್ಯಗಳು ಅಷ್ಟಾಗಿ ಕಾಣಿಸಲಿಕ್ಕಿಲ್ಲ. ಕಾರಣ ಯಾವುದೇ ಕಲೆಯ ಸೂಕ್ಷ್ಮ ನೆಲೆಗಳನ್ನು ಪರಿಚಯಿಸಿಕೊಳ್ಳಬೇಕಾದರೆ ಪ್ರಾದೇಶಿಕವಾದ ಕೇಂದ್ರಗಳತ್ತಲೇ ನಮ್ಮ ದೃಷ್ಟಿ ಹರಿಸಬೇಕಾಗುತ್ತದೆ. ಈ ರೀತಿಯ ಚಲನೆಯಿಂದ ಕರ್ನಾಟಕದ ಕರಾವಳಿಯ, ಮಲೆನಾಡಿನ ಬಯಲು ಸೀಮೆಯ ಸೊಗಸುಗಳು ಕಣ್ಣಿಗೆ ಕಟ್ಟುತ್ತವೆ. ಆಯಾ ಮಣ್ಣಿನ ಗುಣಗಳು ಅಲ್ಲಲ್ಲಿಯ ಕಲೆಗಳನ್ನು ಸಂಸ್ಕೃತಿಯನ್ನು ಹೇಗೆ ರೂಪಿಸಿವೆ? ಹೇಗೆ ಬೆಳೆಸಿವೆ ಎಂಬುನ್ನು ನೋಡಲೂ ಇದರಿಂದ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ರಂಗಭೂಮಿಗಿರುವ ವೈವಿಧ್ಯತೆ, ವೈಶಿಷ್ಟ್ಯತೆಯನ್ನು ಪರಿಚಯಿಸಿಕೊಳ್ಳೋಣ. ಇಲ್ಲಿಯ ಯಕ್ಷಗಾನ ಮೂಡಲಪಾಯ ದೊಡ್ಡಾಟಗಳಿಗೆ 500-600 ವರ್ಷಗಳಿಗಿಂತಲೂ ಸುದೀರ್ಘವಾದ ಚರಿತ್ರೆ ಇದೆ. ಒಂದು ಕಾಲದಲ್ಲಿ ಬಯಲಿನಲ್ಲಿ ನಡೆಯುತ್ತಿದ್ದ ಬಯಲಾಟಗಳನ್ನು ನೋಡುವುದೇ ಈ ಭಾಗದ ಜನರಿಗೆ ಹಬ್ಬವಾಗಿತ್ತು. 1960-70 ರ ದಶಕದಲ್ಲಿ ಬೆಳಗಾಂವಿ ಮತ್ತು ಧಾರವಾಡದ ಪರಿಸರದಲ್ಲಿ ನಡೆದ ರಂಗ ಪ್ರಯೋಗಗಳು ಹಾಗೂ ಆಧುನಿಕ ರಂಗಭೂಮಿಯನ್ನು ಕಟ್ಟಲು ನಡೆಸಿದಂತೆ ಪ್ರಯತ್ನಗಳು ನಾಡಿನ ಚರಿತ್ರೆಯಲ್ಲೇ ಗಮನಾರ್ಹವೆನಿಸಿದೆ. ಕುಲಗೋಡ ತಮ್ಮಣ್ಣನ ಶ್ರೀ ಕೃಷ್ಣ ಪಾರಿಜಾತ, ಬಸರಗಿ ಕುಂಬಾರನ ರಾಧಾನಾಟ, ಬೈಲವಾಡ ಪತ್ತಾರ, ಮಾಸ್ತರನ ಸಂಗ್ಯಾ-ಬಾಳ್ಯಾ, ಚುರಮುರಿ ಶೇಷಗಿರಿರಾಯರ ಶಾಕುಂತಲದ ಅನುವಾದ, ಹಲಸಿ ವಿದ್ಯಾಮಂಡಳದ ವಿದ್ಯಾರ್ಥಿ ಬಳಗ ಪ್ರದರ್ಶಿಸಿದ ಕಂಪನಿ ಶೈಲಿಯ ನಾಟಕಗಳು. ಶಾಂತ ಕವಿಗಳ ಕರ್ನಾಟಕ ನಾಟಕ ಮಂಡಳಿಯ ಸಂಘಟನೆ ಇವೆಲ್ಲವೂ ರಂಗಭೂಮಿ ಚರಿತ್ರೆಯ ಮಹತ್ತ್ವದ ಮೈಲಿಗಲ್ಲುಗಳು.
I. ಜನಪದ ರಂಗಭೂಮಿ. : ಯಕ್ಷಗಾನ ಬಯಲಾಟ. ಯಕ್ಷಗಾನದ ಉಗಮ ಹಾಗೂ ಪ್ರಸಾರದ ಬಗ್ಗೆ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಸು. 500 ವರ್ಷಗಳಿಂದ ಈ ಕಲೆ ಕರ್ನಾಟಕದಲ್ಲಿ ಪರಂಪರಾನುಗತವಾಗಿ ಬೆಳೆದು ಬಂದಿದೆ. ಆಂಧ್ರದ ಕೂಚಿಪುಡಿ ತಮಿಳುನಾಡಿನ ಮೇಳತ್ತೂರು ಭಾಗವತಮೇಳ ಮತ್ತು ಕರ್ನಾಟಕದ ಉತ್ತರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜನಪ್ರಿಯವಾಗಿರುವ ಯಕ್ಷಗಾನ ಬಯಲಾಟ- ಈ ಮೂರು ರಂಗ ಪ್್ರ್ ರಗಳನ್ನು ಯಕ್ಷಗಾನವೆಂದೇ ಕರೆಯುತ್ತಾರೆ. ಮೂಲತಃ ಯಕ್ಷಗಾನವೆಂಬುದು ಒಂದು ಸಂಗೀತ ಶೈಲಿಯೆಂದು, ಕಾವ್ಯ ಪ್ರಕಾರವೆಂದು ಹೇಳುವ ವಾದಗಳಿವೆ. ಕಾಲಾಂತರದಲ್ಲಿ ಹಲವು ಪರಿಕರಗಳನ್ನು ಒಳಗೊಂಡು ಯಕ್ಷಗಾನ ಬಂiÀÄಲಾಟ ಬೆಳೆದು ಬಂದಿರಬೇಕೆನ್ನಲು ಆಧಾರಗಳಿವೆ. ಯಕ್ಷಗಾನವನ್ನು ಆಡಿಸುವ ಸೂತ್ರಧಾರನಿಗೆ ಭಾಗವತ ಎಂದು ಹೆಸರು. ಇವನಿಂದಾಗಿ ಯಕ್ಷಗಾನಕ್ಕೆ ಭಾಗವತರ ಆಟವೆಂದೂ ಕರೆಯುತ್ತಾರೆ. ಈ ಆಟವನ್ನು ಆಡುವ ಕಲಾವಿದರ ತಂಡಕ್ಕೆ ಮೇಳ ಎಂದು ಕರೆಯುತ್ತಾರೆ. ಸಂಗೀತ, ಸಂಭಾಷಣೆ, ಕುಣಿತ, ಅಭಿನಯ, ವೇಷಭೂಷಣಗಳ ಸೊಗಸಾದ ಸಮೀಕರಣದಿಂದ ಯಕ್ಷಗಾನ ಅತ್ಯಾಕರ್ಷಕ ರಂಗ ಕಲೆ ಎನಿಸಿದೆ. ಯಕ್ಷಗಾನದಲ್ಲಿ ಎರಡು ಪ್ರಭೇದಗಳಿವೆ. 1. ತಾಳಮದ್ದಳೆ, 2. ಬಂiÀÄಲಾಟ.
1. ತಾಳಮದ್ದಳೆ: ಮಲೆನಾಡಿನಲ್ಲಿ ಬರುವ ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ವರ್ಷದ 6 ತಿಂಗಳು ಮಳೆ. ಮಳೆಗಾಲದಲ್ಲಿ ಬಂiÀÄಲಾಟವಾಡಲು ಆಗುವುದಿಲ್ಲ. ಆಗ ದೇವಸ್ಥಾನ, ಚಾವಡಿ, ಮನೆಯ ಅಂಗಳದ ಸ್ಥಳಗಳಲ್ಲಿ ತಾಳ ಮದ್ದಳೆ ಕೂಟಗಳು ನಡೆಯುತ್ತವೆ. ತಾಳಮದ್ದಳೆಗೆ ರಂಗಸ್ಥಳ ಬೇಕಿಲ್ಲ. ವೇಷ ಭೂಷಣಗಳ ಅಗತ್ಯವೂ ಇಲ್ಲ. ಭಾಗವತ, ಹಿಮ್ಮೇಳದವರು ಕುಳಿತವರ ಎದುರಿಗೆ ಅರ್ಥದಾರಿಗಳು ಕೂರುತ್ತಾರೆ. ಭಾಗವತನು ಯಕ್ಷಗಾನ ಪದಗಳನ್ನು ಹಾಡುತ್ತಾನೆ. ಮದ್ದಳೆಕಾರ ತಾಳಕ್ಕೆ ತಕ್ಕಂತೆ ಮದ್ದಳೆ ಬಾರಿಸುತ್ತಾನೆ. ಭಾಗವತನ ಪದದ ಅರ್ಥಕ್ಕನುಗುಣವಾಗಿ ಅರ್ಥದಾರಿಗಳು ಕುಳಿತಲ್ಲಿಯೇ ಆಶು ಸಂಭಾಷಣೆ ನಡೆಸುತ್ತಾರೆ. ಪ್ರಸಂಗವು ಹಾಡು-ಮಾತಿನಿಂದ ಕಳೆ ಕಟ್ಟುತ್ತದೆ. ಅಲ್ಲಿ ಸೇರಿದ್ದ ಪ್ರೇಕ್ಷಕರ ತಾಳಮದ್ದಳೆ ಪ್ರಸಂಗವನ್ನು ತನ್ಮಯತೆಯಿಂದ ಅನುಭವಿಸುತ್ತಾರೆ.
2. ಬಯಲಾಟ: ಮಳೆಗಾಲದ ನಂತರ ಯಕ್ಷಗಾನವು ಬಯಲಿನಲ್ಲಿ ಪ್ರದರ್ಶನಗೊಳ್ಳಲು ಸಿದ್ಧವಾಗುತ್ತದೆ. ಮೊದಲು ಊರಿನ ದೇವರ ಎದುರಿನಲ್ಲಿ ಪ್ರದರ್ಶನ ನೀಡಲಾಗುತ್ತದೆ. ಆಮೇಲೆ ಹರಕೆ ಹೊತ್ತವರ ಆಮಂತ್ರಣದ ಮೇರೆಗೆ ಅಲ್ಲಿಗೆ ಹೋಗಿ ಪ್ರದರ್ಶನ ನೀಡಲಾಗುವುದು. ಹಿಂದೆ ಊರಿನ ಶ್ರೀಮಂತರು, ಜಮೀನುದಾರರು ಈ ಕಲೆಯನ್ನು ಪೋಷಿಸುತ್ತಿದ್ದರು. ಈಗ ಜನರ ಪ್ರೋತ್ಸಾಹದಿಂದ ಪ್ರೇಕ್ಷಕರ ನೆರವಿನಿಂದ ಯಕ್ಷಗಾನ ಕಲೆ ಮುಂದುವರಿದಿದೆ.
ಸಾಮಾನ್ಯವಾಗಿ ಯಕ್ಷಗಾನ ಪ್ರಸಂಗಗಳು ಪೌರಾಣಿಕ ಕಥೆಗಳನ್ನು ಆಧರಿಸಿರುತ್ತವೆ. ಪ್ರತಿ ಪ್ರಸಂಗಕ್ಕೂ ಪ್ರತ್ಯೇಕ ಗೀತೆಗಳಿರುತ್ತವೆ. ಹಾಡುಗಾರಿಕೆಯೇ ಪಾತ್ರದ ಮನೋಸ್ಥಿತಿ ಮತ್ತು ಭಾವತೀವ್ರತೆಯನ್ನು ಸೂಚಿಸುತ್ತದೆ. ಭಾಗವತನ ಹಾಡುಗಳೇ ನಟರ ಆಶು ಸಂಭಾಷಣೆಗೆ ಆಧಾರ. ಭಾಗವತ ಎರಡು ಪಂಕ್ತಿ ಹಾಡಿದರೆ ಸಾಕು ನಟರು ಅದರ ಎಳೆ ಹಿಡಿದು ಮಾತನ್ನು ಪೋಣಿಸುತ್ತಾರೆ. ನಟರ ಮಾತಿನ ಗತ್ತು, ಕುಣಿತದ ಆರ್ಭಟ, ಹನುಮನಾಯಕನ ಹಾಸ್ಯ, ಕಿರೀಟ, ವೇಷಭೂಷಣ, ವರ್ಣಮಯ ಪ್ರಸಾದನಗಳಿಂದ ಯಕ್ಷಗಾನ ಬಯಲಾಟದ ಆಕರ್ಷಣೆ ಇಮ್ಮಡಿಸುತ್ತದೆ.
ಯಕ್ಷಗಾನ ಬಯಲಾಟದಲ್ಲಿ ಮುಖ್ಯವಾಗಿ ಎರಡು ಭೇದಗಳಿವೆ. 1. ತೆಂಕತಿಟ್ಟು. 2. ಬಡಗತಿಟ್ಟು. ದಕ್ಷಿಣ ಕನ್ನಡ ಜಿಲ್ಲೆ ಉಡುಪಿಯನ್ನು ಗಡಿಯಾಗಿರಿಸಿಕೊಂಡರೆ ಉತ್ತರ ಭಾಗದ ಸಂಪ್ರದಾಯ ಬಡಗುತಿಟ್ಟು, ದಕ್ಷಿಣ ಭಾಗದ ಸಂಪ್ರದಾಯ ತೆಂಕ ತಿಟ್ಟು. ಎರಡೂ ಸಂಪ್ರದಾಯಗಳ ಪ್ರಸಂಗಸಾಹಿತ್ಯ ಒಂದೇ ಆಗಿರುತ್ತದೆ. ಆದರೆ ಹಾಡುವ ಕ್ರಮ, ಕುಣಿತದ ವಿಧಾನ, ವಾದ್ಯಗಳನ್ನು ನುಡಿಸುವ ರೀತಿಯಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸ ಕಂಡು ಬರುತ್ತದೆ. ಕರಾವಳಿ ಪ್ರದೇಶದ ಹಲವಾರು ಮೇಳಗಳು ದೇಶ ವಿದೇಶಗಳನ್ನು ಸುತ್ತಿ ಯಕ್ಷಗಾನವನ್ನು ಪ್ರದರ್ಶಿಸಿವೆ. ಮೂಡಲ ಪಾಯ ಬಂiÀÄಲಾಟ : ಉತ್ತರ ಕರ್ನಾಟಕದಲ್ಲಿಯೇ ಅತ್ಯಂತ ಶ್ರೀಮಂತ ಪರಂಪರೆಯನ್ನು ಹೊಂದಿರುವ ರಂಗ ಕಲೆ ಇದು. ಯಕ್ಷಗಾನದ ಹಾಗೆಯೇ ಮೂಡಲಪಾಯವು ಮೂಲದಲ್ಲಿ ಪುರ್ವದ ಸಂಗೀತ ಶೈಲಿಯಾಗಿದ್ದು ಅನಂತರದಲ್ಲಿ ಅದು ಬಂiÀÄಲಾಟವಾಗಿ ಬೆಳೆದ ಕಥೆಯನ್ನು ರಂಗ ಭೂಮಿ ಇತಿಹಾಸ ತಿಳಿಸುತ್ತದೆ. ಮೂಡಲ ಪಾಯವು ದಕ್ಷಿಣಾದಿ ಸಂಗೀತದ ಒಂದು ಕವಲು. ಧಾರವಾಡ ಭಾಗದಲ್ಲಿ ಬಂiÀÄಲಾಟದ ಹಾಡುಗಳನ್ನು ಮೂಡಲಪಾಯದ ಶೈಲಿ, ಯಕ್ಷಗಾನ ಶೈಲಿಯವು ಎಂದು ಪ್ರತ್ಯೇಕಿಸುವುದುಂಟು. ಬೆಳಗಾಂವಿ, ಬಳ್ಳಾರಿ, ಬಿಜಾಪುರ, ಧಾರವಾಡ, ಗುಲ್ಬರ್ಗಾ ಜಿಲ್ಲೆಗಳಲ್ಲಿ ಮೂಡಲಪಾಯ ಬಂiÀÄಲಾಟಗಳ ಜನಪ್ರಿಯತೆ ಹೆಚ್ಚು. ಮೈಸೂರು ಪ್ರದೇಶಗಳಲ್ಲಿಯೂ ಸಹ ಈ ಕಲೆ ಅಸ್ತಿತ್ವದಲ್ಲಿದೆ. ಬೆಳಗಾಂವಿ, ಬಿಜಾಪುರ ಪ್ರದೇಶಗಳಲ್ಲಿ ಈ ಬಂiÀÄಲಾಟಕ್ಕೆ ದೊಡ್ಡಾಟವೆಂದು ಕರೆಯುತ್ತಾರೆ. ಈ ಭಾಗದಲ್ಲಿ ಸಣ್ಣಾಟಗಳು ಹುಟ್ಟಿಕೊಂಡ ಮೇಲೆ ಅವುಗಳಿಂದ ಪ್ರತ್ಯೇಕಿಸಲು ಈ ದೊಡ್ಡಾಟ ಹೆಸರು ರೂಢಿಗೆ ಬಂದಿರಬೇಕು. ದೊಡ್ಡಾಟದ ರಂಗಸ್ಥಳವು ದೊಡ್ಡದಾಗಿರುತ್ತದೆ. ಪ್ರೇಕ್ಷಕರು ಮೂರೂ ಕಡೆಯಿಂದ ನೋಡಬಹುದಾದ ರೀತಿಯಲ್ಲಿ ದೊಡ್ಡಾಟದ ಅಟ್ಟ ರಚನೆಯಾಗಿರುತ್ತದೆ. ದೊಡ್ಡಾಟದಲ್ಲಿ ಮುಮ್ಮೇಳ ಹಿಮ್ಮೇಳ ಎರಡೂ ಇರುತ್ತವೆ. ಪಾತ್ರಧಾರಿ ಮುಮ್ಮೇಳದೊಂದಿಗೆ ತಾನೂ ಹಾಡುತ್ತಾನೆ. ಹಿಮ್ಮೇಳದವರು ಹಾಡುವಾಗ ಕುಣಿಯುತ್ತಾರೆ. ಈ ಆಟವನ್ನು ನಡೆಸುವವನು ಸಾರಥಿ. ಪಾತ್ರವನ್ನು ಪ್ರೇಕ್ಷಕರಿಗೆ ಪರಿಚಯಿಸುತ್ತಾ ದಿನ ನಿತ್ಯದ ಘಟನೆಗಳನ್ನು ಆಟದ ಸನ್ನಿವೇಷಕ್ಕೆ ಹೋಲಿಸುತ್ತಾ ಕಥೆಯನ್ನು ಸಾಗಿಸುವುದು ಇವನ ಕರ್ತವ್ಯ. ಕಥೆಯು ಪುರಾಣ ಪ್ರಸಂಗವನ್ನು ಆಧರಿಸಿರುತ್ತದೆ. ನಮ್ಮ ಜನಪದ ಕವಿಗಳು ಮೊದಲು ಹಾಡಿನ ರೂಪದಲ್ಲಿ ಇಂಥ ಕಥೆಗಳನ್ನು ರಚಿಸಿಕೊಡುತ್ತಿದ್ದರು. ಹಾಡಿಗೆ ತಕ್ಕ ಮಾತುಗಳನ್ನು ನಟನು ಶಕ್ತ್ಯಾನುಸಾರ ಹೇಳುತ್ತಿದ್ದ. ಕಾಲಾಂತರದಲ್ಲಿ ನಟರ ಮಾತುಗಳನ್ನು ಬರೆದಿಡುವ ಪದ್ಧತಿ ರೂಢಿಯಾಯಿತು. ದೊಡ್ಡಾಟದ ಮಾತುಗಳು ಪ್ರಾಸಬದ್ಧವಾಗಿರುತ್ತವೆ ಮತ್ತು ಶಿಷ್ಟವಾಗಿರುತ್ತವೆ.
ಗಣಪತಿಯ ಸ್ತುತಿಯೊಂದಿಗೆ ಆಟದ ಆರಂಭ. ಮೊದಲ ದೃಶ್ಯವೇ ಒಡ್ಡೋಲಗ ವಿರುತ್ತದೆ. ಪ್ರತಿ ಪಾತ್ರವನ್ನೂ ಸಾರಥಿ ಪರಿಚಯಿಸುತ್ತಾನೆ. ಅವರು ಬಂದಿರುವ ಉದ್ದೇಶವನ್ನು ತಿಳಿಸುತ್ತಾನೆ. ಸಂಗೀತವು ಪಾತ್ರಗಳ ಪ್ರವೇಶ ಮತ್ತು ನಿರ್ಗಮನವನ್ನು ಸೂಚಿಸುತ್ತದೆ. ರಾತ್ರಿ ಹತ್ತು ಗಂಟೆಯಿಂದ ಬೆಳಕು ಹರಿಯುವವರೆಗೂ ದೊಡ್ಡಾಟದ ಕಥೆ ನಡೆಯುತ್ತದೆ. ವೀರರಸ ಪ್ರಧಾನವಾಗಿರುವ ದೊಡ್ಡಾಟಗಳ ಕುಣಿತ ವೇಷಭೂಷಣ ಮುಖವರ್ಣಿಕೆಗಳಲ್ಲಿಯೂ ಭವ್ಯತೆ ಇರುತ್ತದೆ. ಐರಾವಣ ಮೈರಾವಣ, ದಕ್ಷ ಯಜ್ಞ, ಭೀಮ ವಿಲಾಸ, ಲವಕುಶ, ಮನೋರಾಯ ಮುಂತಾದ ಹಲವಾರು ದೊಡ್ಡಾಟಗಳು ಉತ್ತರ ಕರ್ನಾಟಕದ ತುಂಬ ಜನಪ್ರಿಯತೆ ಪಡೆದಿವೆ.
ಸಣ್ಣಾಟ - ಡಪ್ಪಿನಾಟಗಳು. : ಸಣ್ಣಾಟಗಳನ್ನು ಡಪ್ಪಿನಾಟಗಳೆಂದೂ ಕರೆಯುತ್ತಾರೆ. ತಪ್ಪಿನ ವಾದ್ಯಗಳೊಂದಿಗೆ ಸಾಗುವ ಹಾಡುಗಳನ್ನೊಳಗೊಂಡಿರುವುದರಿಂದ ಇದು ಡಪ್ಪಿನಾಟ. 19ನೆಯ ಶತಮಾನದ ಉತ್ತರಾರ್ಧದಲ್ಲಿ ಈ ಬಗೆಯ ಆಟಗಳು ರಂಗದ ಮೇಲೆ ಬೆಳಕು ಕಂಡವು. ವಿದ್ವಾಂಸರು ಡಪ್ಪಿನಾಟಗಳಲ್ಲಿ ಎರಡು ಹಂತಗಳನ್ನು ಗುರುತಿಸುತ್ತಾರೆ. 1. ಹಾಡುಗಳೇ ಪ್ರಧಾನವಾಗಿರುವ ಬಂiÀÄಲಾಟಗಳು; 2. ಕವಿಗಳಿಂದ ರಚನೆಯಾದ ಕಾದ್ರೊಳ್ಳಿಧರತಿಯ ಬಂiÀÄಲಾಟಗಳು.
ಡಪ್ಪಿನ ಗತಿಗೆ ಹೊಂದಿಕೊಳ್ಳುವ ವಿಶಿಷ್ಟ ಲಯ, ಧಾಟಿಗಳಿರುವ ಹಾಡುಗಳೇ ಮೊದಲ ಹಂತದ ಆಟಗಳಲ್ಲಿ ಪ್ರಮುಖ. ಇವುಗಳಲ್ಲಿ ಹಾಡಿನ ಮೂಲಕವೇ ಕಥೆ ಚಲಿಸುತ್ತದೆ. ಮಾತುಗಳು ನಿರ್ದಿಷ್ಟವಾಗಿರುವುದಿಲ್ಲ. ಹಾಡುಗಳೆಲ್ಲ ಕವಿ ಸೃಷ್ಟಿಯಾದರೆ ಮಾತುಗಳು ನಟರ ಸೃಷ್ಟಿ. ರಾಧಾನಾಟ್ಯ, ಸಂಗ್ಯಾ-ಬಾಳ್ಯಾ, ರೂಪಸೇನ ಮುಂತಾದವು ಈ ಮಾದರಿಯ ಆಟಗಳೆನಿಸಿದೆ. ಎರಡನೆಯ ಹಂತದ ಆಟಗಳಲ್ಲಿ ಕವಿ ಕೃತಿಗಳಿಗೇ ಪ್ರಾಧಾನ್ಯ. ಹಾಡು ಮಾತುಗಳನ್ನು ಜೊತೆಗೂಡಿಸಿ ಡಪ್ಪಿನಾಟಗಳನ್ನು ಬರೆಯುವ ಪರಂಪರೆಯು ಬೆಳಗಾಂವಿ ಜಿಲ್ಲೆ ಕಾದ್ರೊಳ್ಳಿಯ ನೀಲಕಂಠಪ್ಪನಿಂದ ಪ್ರಾರಂಭವಾಯಿತು. ಸು. 1920ರಲ್ಲಿ ಈ ಕವಿಯ ತಿರುನೀಲಕಂಠ ಡಪ್ಪಿನಾಟ ಪ್ರಯೋಗವಾಯಿತು, ಜನಪ್ರಿಯವೂ ಆಯಿತು. ಮುಂದೆ ಬೆಳಗಾಂವಿ ಪರಿಸರದಲ್ಲಿ ಇಂಥ ಹಲವಾರು ಡಪ್ಪಿನಾಟಗಳು ರಚನೆಯಾಗಿ ಪ್ರಯೋಗಗೊಂಡವು. ಹೀಗೆ ‘ಕಾದ್ರೊಳ್ಳಿ ಶೈಲಿ’ ಯ ಆಟಗಳು ಬೆಳಗಾಂವಿ ಪರಿಸರದಲ್ಲಿ ಪ್ರಚಾರಕ್ಕೆ ಬಂದವು.
ಯಾವುದೇ ಡಪ್ಪಿನಾಟವು ಸಣ್ಣಪದ (ಗಣಪತಿ ಸ್ತುತಿ)ದೊಂದಿಗೆ ಆರಂಭವಾಗುತ್ತದೆ. ಇದಾದ ಮೇಲೆ ಪುರ್ವ ರಂಗದಲ್ಲಿ ಕಥೆಯ ಪರಿಚಯ, ಆಡುವ ಉದ್ದೇಶ ಪ್ರಯೋಗವಾಗುತ್ತದೆ. ಆಮೇಲೆ ಉತ್ತರರಂಗದಲ್ಲಿ ಹಾಡು, ಅಭಿನಯದ ಮೂಲಕ ಕಥೆ ಪ್ರದರ್ಶನಗೊಳ್ಳುತ್ತದೆ. ಡಪ್ಪಿನಾಟಗಳಲ್ಲಿ ಪೌರಾಣಿಕ ಐತಿಹಾಸಿಕ ಸಾಮಾಜಿಕ ಜಾನಪದ ಭಕ್ತರ ಕಥೆಗಳೆಂದು ವಿಂಗಡಿಸಲಾಗುತ್ತದೆ. ಇವುಗಳ ಸಂಭಾಷಣೆ, ಸಂಗೀತ, ಕುಣಿತಗಳಲ್ಲಿ ದೊಡ್ಡಾಟದ ಆರ್ಭಟವಿರುವುದಿಲ್ಲ.
ದಾಸರಾಟ : ದಾಸರು ಎಂಬುದು ಜಾತಿವಾಚಕ ಪದ. ದಾಸರು ಆಡುವ ಆಟಗಳೇ ದಾಸರಾಟಗಳು. ಪ್ರಾಚೀನ ಕಾಲದಲ್ಲಿ ದೇವಾಲಯಗಳಲ್ಲಿ ಹಾಡು ಕುಣಿತಗಳ ಸೇವೆಗಾಗಿ ದೇವದಾಸಿಯರನ್ನು ನೇಮಿಸುತ್ತಿದ್ದ ಸಂಪ್ರದಾಯವಿತ್ತು. ದೇವಾಲಯದ ರಂಗ ಮಂಟಪದಲ್ಲಿ ಜರುಗುತ್ತ್ತಿದ್ದ ಪ್ರದರ್ಶನಗಳು ಸಾಮಾನ್ಯವಾಗಿ ಊರ ಪ್ರತಿಷ್ಠಿತರಿಗೆ ಸೀಮಿತವಾಗಿದ್ದವು. ಕಾಲಾಂತರದಲ್ಲಿ ದೇವಾಲಯಗಳ ಶಿಸ್ತು ಸಡಿಲಗೊಳ್ಳಲು ದೇವದಾಸಿಯರ ಬದುಕಿಗೆ ಭದ್ರತೆ ದೊರೆಯದಂತಾಯಿತು. ಆಗ ಇಂಥ ಪ್ರದರ್ಶನಗಳು ಬೀದಿಗೆ ಬರುವುದು ಅನಿವಾರ್ಯವಾಯಿತು. ಜನರ ಅಭಿರುಚಿಗೆ ತಕ್ಕಂತೆ ಹಾಡು ಕುಣಿತ, ಮಾತುಗಳಲ್ಲಿ ಮಾರ್ಪಾಟುಗಳಾದವು.
ದಾಸರಾಟದ ರಂಗ ಸ್ಥಳ ನಿರ್ದಿಷ್ಟವಿಲ್ಲ. ಊರ ಚಾವಡಿ ಕಟ್ಟೆ, ಗುಡಿ ಗುಡಾರಗಳ ಮುಂಭಾಗ, ಶ್ರೀಮಂತರ ಮನೆಯ ಅಂಗಳಗಳಲ್ಲಿ ಈ ಆಟ ಪ್ರದರ್ಶನಗೊಳ್ಳುತ್ತಿತ್ತು. ಇದರಲ್ಲಿ ಮೂರೇ ಮುಖ್ಯ ಪಾತ್ರಗಳು. ಚಿಮಣಾ (ನಾಯಕಿ), ಗೊಡ್ಡಿ ಭೀಮಣ್ಣ (ನಾಯಕ), ಜವಾರಿ (ವಿದೂಷಕ) ಇನ್ನುಳಿದ ಪಾತ್ರಗಳಾಗಿ ಹಿಮ್ಮೇಳದವರು ಸಹಕರಿಸುತ್ತಾರೆ. ಕೃಷ್ಣನ ರಾಸ ಲೀಲೆಯ ಸನ್ನಿವೇಶಗಳು ಮತ್ತು ಪ್ರೇಮದ ಕಥೆಗಳನ್ನು ಇವರು ಅಭಿನಯಿಸಿ ತೋರಿಸುತ್ತಾರೆ. ಹಾಡುಗಳಿಗಾಗಿ ಲಾವಣಿ, ಜಾವಳಿ ಮತ್ತು ದಾಸರ ಕೀರ್ತನೆಗಳನ್ನು ಬಳಸಿಕೊಳ್ಳುತ್ತಾರೆ. ಬರುಬರುತ್ತ ಪ್ರೇಕ್ಷಕರು ಬಂiÀÄಸುವಂಥ ಹಾಡುಗಳನ್ನು ಹಾಡಿ ಕುಣಿಯುವುದು ನಡೆಯಿತು. ಇದರಿಂದ ಕಥೆ ಹೀಗೆ ಸರಿದು ದಾಸರಾಟವೆಂಬುದು ಮೋಜಿನ ಕಾಲಾಪನೆಯಾಗಿ ಪರಿಣಮಿಸಿತು. ಹೀಗಾದಾಗ ದಾಸರಾಟದಲ್ಲಿ ದ್ವಾಸಿ ಊಟ ಅಲ್ಲ, ಎಂದು ಹೇಳುವುದು ರೂಢಿಗೆ ಬಂದಿರಬೇಕು. ರಾಧಾನಾಟ : ಡಪ್ಪಿನಾಟಗಳಲ್ಲಿ ರಾಧಾನಾಟದ ಆಕರ್ಷಣೆ ವಿಶೇಷವಾದುದು. ದಾಸರಾಟದ ಪರಿಷ್ಕೃತ ರೂಪವೇ ರಾಧಾನಾಟವೆಂಬುದು ಕೆಲವರ ಅಭಿಪ್ರಾಯ. ಇನ್ನೊಂದು ಅಭಿಪ್ರಾಯದ ಪ್ರಕಾರ ಮಹಾರಾಷ್ಟ್ರದ ತಮಾಷಾದ ಪ್ರೇರಣೆಯಿಂದ ರಾಧಾನಾಟ ಹುಟ್ಟಿಕೊಂಡಿತೆಂಬುದು. ಇನ್ನು ಈ ಬಗ್ಗೆ ಖಚಿತತೆ ಇಲ್ಲ. ಡಪ್ಪಿನ ಗತ್ತು ಲಾವಣಿ ಧಾಟಿಯ ಹಾಡುಗಳು, ಬೆಡಗಿನ ಮಾತುಗಳು, ಗೊಲ್ಲತಿ ಪ್ರಸಂಗ, ಚಿಮಣಾಳ ಕುಣಿತ, ಇವುಗಳಿಂದ ರಾಧಾನಾಟದ ಆಕರ್ಷಣೆ ಹೇಳತೀರದು. ಮೊದಲ ಹಂತದಲ್ಲಿ ಈ ಆಟವು ಕೃಷ್ಣ ರಾಧೆಯರ ಕಥೆಯನ್ನೇ ಒಳಗೊಂಡಿದ್ದಿರಬೇಕು. ಕಾಲಕ್ರಮೇಣ ಈ ಭಾಗದ ಜನರ ಕಲಾವಂತಿಕೆಯಿಂದ ಈ ಆಟದ ಕಥೆಗೆ ಸಾಮಾಜಿಕ ಆಯಾಮ ಪ್ರಾಪ್ತವಾಗಿರಬೇಕು. ಈ ಆಟದ ಪುರ್ವರಂಗದಲ್ಲಿ ಗೋಪಾಲ-ಗೊಲ್ಲತಿಯರ ಹಾಲು ಮೊಸರು ಮಾರುವ ಪ್ರಸಂಗ ನಡೆಯುತ್ತದೆ. ಉತ್ತರ ರಂಗದಲ್ಲಿ ಹೆಣ್ಣು ಹೆಚ್ಚೋ-ಗಂಡು ಹೆಚ್ಚೋ ಎಂಬ ಚರ್ಚೆ ಪ್ರಧಾನವಾಗಿ ಬೆಳೆಯುತ್ತದೆ. ಪುರ್ವ ರಂಗದಲ್ಲಿದ್ದ ಗೋಪಾಲ, ರಾಧಾ, ಧೂತಿ ಪಾತ್ರಗಳು ಉತ್ತರ ರಂಗದಲ್ಲಿ ಗಲಪೋಜಿ, ಚಿಮಣಾ, ಸಖಾರಾಮತಾತ್ಯಾ, ಆಗಿ ಬರುತ್ತಾರೆ. ಕಲಾವಿದರು ತಮ್ಮ ಅನುಭವ, ಅಧ್ಯಾತ್ಮ ಹಾಗೂ ಮಾತಿನ ಚಾತುರ್ಯ ತೋರಿಸಲು ಉತ್ತರರಂಗ ಸಾಕಷ್ಟು ಅವಕಾಶ ಕಲ್ಪಿಸುತ್ತದೆ. ಇದೇ ಆಟ ಬಿಜಾಪುರ ಭಾಗದಲ್ಲಿ ಬೀಬೀ ಇಂಗಳಗಿ ಆಟವೆಂದು ಪ್ರಸಿದ್ಧಿ ಪಡೆದಿದೆ. ಇದಕ್ಕೆ ಬೀಬೀ ಇಂಗಳಗಿಯ ಹಸವನಾಬನೆಂಬ ಕಲಾವಿದನಿಂದ ಆ ಆಟವು ಅಲ್ಲಿ ತುಂಬ ಜನಪ್ರಿಯವಾಯಿತೆಂದು ತಿಳಿಯುತ್ತದೆ. ಆಯಾ ಭಾಗದ ಕವಿಗಳು, ಕಲಾವಿದರು, ಹಾಡುಗಳನ್ನು ಬರೆದು ಇದಕ್ಕೆ ಸೇರಿಸಿದ್ದಾರೆ. ತಮ್ಮ ಆಶಯಕ್ಕೆ ತಕ್ಕಂತೆ ಬದಲಿಸಿಕೊಂಡು ಈ ಆಟವನ್ನು ಆಡುತ್ತಾರೆ. ಬೆಳಗಾಂವಿ ಭಾಗದಲ್ಲಿ ಬಸರಗಿ ಕುಂಬಾರನ ರಂಗ ಪ್ರತಿ ಹೆಚ್ಚು ಪ್ರಚಲಿತದಲ್ಲಿದೆ.
ಇವತ್ತಿಗೂ ಬೆಳಗಾಂವಿ, ಬಿಜಾಪುರ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ರಾಧಾನಾಟ ಪ್ರದರ್ಶನಗೊಳ್ಳುತ್ತದೆ. ಈ ಆಟವನ್ನಾಡುವ ವೃತ್ತಿ ತಂಡಗಳೂ ಇಲ್ಲಿವೆ. ರಾಧಾನಾಟದ ಜೊತೆಗೆ ರೂಪ ಸಿಂಗನಾಟ, ಬಲವಂತ, ಬಸವಂತ, ಕಟ್ಟಿಚೆನ್ನ, ಸಂಗ್ಯಾ-ಬಾಳ್ಯಾ ಮುಂತಾದ ಆಟಗಳನ್ನೂ ಈ ತಂಡಗಳು ಆಡುತ್ತವೆ.
ಸಂಗ್ಯಾ-ಬಾಳ್ಯಾ: ಇದು ಕರ್ನಾಟಕದ ತುಂಬಾ ಜನಪ್ರಿಯತೆ ಪಡೆದಿರುವ ಸಣ್ಣಾಟ. ಇದು 19ನೆಯ ಶತಮಾನದ ಮಧ್ಯ ಭಾಗದಲ್ಲಿ ಬೆಳಗಾಂವಿ ಜಿಲ್ಲೆಯ ಬೈಲಹೊಂಗಲದಲ್ಲಿ ಜರುಗಿರುವ ನೈಜ ಘಟನೆ ಎಂದು ಹೇಳಲಾಗುತ್ತದೆ. ಸಂಗ್ಯಾ ಬೈಲಹೊಂಗಲದ ಶ್ರೀಮಂತ ಯುವಕ. ಗಂಗಿ ಅದೇ ಊರಿನ ವ್ಯಾಪರಸ್ಥ ಲಗಳೇರ ಈರಣ್ಣನ ಹೆಂಡತಿ. ಬಲು ರೂಪವತಿ. ಸಂಗ್ಯಾ ಗಂಗಿಯನ್ನು ಒಲಿಸಿಕೊಳ್ಳಲು ಅವಳ ಹಿಂದೆ ಬೀಳುತ್ತಾನೆ. ಗೆಳೆಯ ಬಾಳ್ಯಾ ಮತ್ತು ಕುಂಟಲಗಿತ್ತಿ ಪರಮ್ಮನ ನೆರವಿನಿಂದ ಯಶಸ್ವಿಯೂ ಆಗುತ್ತಾನೆ. ಗುಟ್ಟಾಗಿ ನಡೆದಿದ್ದ ಇವರ ಹಾದರವು ಕೆಲವೇ ದಿನಗಳಲ್ಲಿ ಈರಣ್ಣನಿಗೆ ಗೊತ್ತಾಗುತ್ತದೆ. ಅವನು ತಮ್ಮಂದಿರನ್ನು ಕರೆದುಕೊಂಡು ಹೋಗಿ ಸಂಗ್ಯಾನ ಕೊಲೆ ಮಾಡುತ್ತಾನೆ. ಪೊಲೀಸರು ಈರಣ್ಣನಿಗೆ ಫಾಸಿ ಶಿಕ್ಷೆ ಕೊಡುತ್ತಾರೆ. ಈ ಘಟನೆಗೆ ಬಯಲಾಟದ ರೂಪ ಕೊಟ್ಟವನು ಬೈಲವಾಡದ ಪತ್ತಾರ ಮಾಸ್ತರ. ರೂಪವತಿಯಾಗಿದ್ದ ಗಂಗಿಯನ್ನು ಪ್ರೀತಿಸಿ ಅವಳಿಂದ ಅವಮಾನಿತನಾದ ಬೈಲವಾಡ ಪತ್ತಾರ ಮಾಸ್ತರ ಅವಳ ಮೇಲಿನ ಸೇಡಿಗಾಗಿ ಈ ನಾಟಕ ಬರೆದನೆಂದೂ ಈ ಭಾಗದ ಜನರು ಹೇಳುತ್ತಾರೆ. ಏನೇ ಇರಲಿ, ಇದನ್ನು ಅಪ್ಪಟ ಜನಪದ ಆಟವನ್ನಾಗಿ ಬೆಳೆಸಿದವರು ಈ ಭಾಗದ ಕಲಾವಿದರು. ಇದರ ಜನಪ್ರಿಯತೆಯಿಂದಾಗಿ ಬಂiÀÄಲಾಟದ ಕಥೆ ಕಂಪನಿ ನಾಟಕವಾಗಿ, ಹವ್ಯಾಸಿ ನಾಟಕವಾಗಿ, ಸಿನಿಮಾ ಆಗಿ ಅತ್ಯಧಿಕ ಪ್ರಮಾಣದಲ್ಲಿ ಪ್ರದರ್ಶನಗಳನ್ನು ಕಂಡಿದೆ. ಬೇರೆ ಬೇರೆ ಭಾಷೆಯ ರಂಗಭೂಮಿಯನ್ನು ಅಲಂಕರಿಸಿದೆ. ಸಂಗ್ಯಾ-ಬಾಳ್ಯಾ ಬಯಲಾಟದಷ್ಟು ಪ್ರಸಾರ ಮತ್ತು ಪ್ರಚಾರ ಪಡೆದ ಕಥೆ ಭಾರತೀಯ ರಂಗಭೂಮಿಯಲ್ಲಿಯೇ ಮತ್ತೊಂದಿರಿಲಿಕ್ಕಿಲ್ಲವೆನ್ನಬಹುದು.
ಶ್ರೀಕೃಷ್ಣಪಾರಿಜಾತ: ಶ್ರೀಕೃಷ್ಣನ ಪಾರಿಜಾತ ಪ್ರಸಂಗವನ್ನು ಬಂiÀÄಲಾಟವನ್ನಾಗಿ ಪ್ರದರ್ಶಿಸಿದ ಶ್ರೇಯಸ್ಸು ಉತ್ತರ ಕರ್ನಾಟಕಕ್ಕೇ ಸಲ್ಲುತ್ತದೆ. ರಾಯಚೂರು ಜಿಲ್ಲೆಯ ಅಪರಾಳ ತಮ್ಮಣ್ಣನ ಕೀರ್ತನ ಕಾವ್ಯವಾಗಿದ್ದ ಶ್ರೀಕೃಷ್ಣಪಾರಿಜಾತವನ್ನು ಬಂiÀÄಲಾಟಕ್ಕೆ ಅಳವಡಿಸಿ ಜನಪ್ರಿಯಗೊಳಿಸಿದವನು ಬೆಳಗಾಂವಿ ಜಿಲ್ಲೆ ಗೋಕಾಕ ತಾಲೂಕಿನ ಕುಲಗೋಡ ತಮ್ಮಣ್ಣನು. ಇವನ ರಂಗಪ್ರಜ್ಞೆಯಿಂದ ಪಾರಿಜಾತದ ಕಥೆ ಭಕ್ತ ಶೃಂಗಾರ ಹಾಸ್ಯ ರಸಗಳ ರಸಾಯನವಾಗಿ ಪರಿಣಮಿಸಿತು. ಸಂಸಾರದಿಂದ ಅಧ್ಯಾತ್ಮ, ಅಧ್ಯಾತ್ಮದಿಂದ ಸಂಸಾರಕ್ಕೆ ಸಂಚರಿಸುವ ಇಲ್ಲಿಯ ಚರ್ಚೆ, ಮಧುರವಾದ ಸಂಗೀತ ಮತ್ತು ದೂತಿಯ ಹಾಸ್ಯ- ಈ ಸಂಗತಿಗಳೆಲ್ಲ ಈ ಬಂiÀÄಲಾಟಗಳಲ್ಲಿ ಅನನ್ಯವಾಗಿ ಸೇರಿಕೊಂಡಿವೆ. ಪಾತ್ರಧಾರಿಗಳು ಸ್ವತಃ ಹಾಡುವ, ಸ್ತ್ರೀಯರು ಅಭಿನಯಿಸುವ ಪರಂಪರೆ ಪಾರಿಜಾತದಿಂದಲೇ ಪ್ರಾರಂಭವಾಯಿತು. ಸತ್ಯಭಾಮ ಪಾತ್ರದಿಂದ ಪ್ರಸಿದ್ಧಳಾದ ಕೌಜಲಗಿ ನಿಂಗವ್ವ ಕನ್ನಡ ರಂಗಭೂಮಿಯ ಮೊದಲ ನಟಿ ಎಂಬ ಗೌರವಕ್ಕೆ ಪಾತ್ರಳಾಗಿದ್ದಾಳೆ.
ಮೊದಲ ಹಂತದಲ್ಲಿ ಪಾರಿಜಾತವನ್ನು ಬೆಳೆಸಿದವರು ಕುಲಗೋಡ ತಮ್ಮಣ್ಣ, ಕೌಜಲಗಿ ನಿಂಗವ್ವ, ಬಡಕುಂದ್ರಿ ಬಸ್ಸಪ್ಪ ಮುಂತಾದ ಹಿರಿಯರು. ಹಿಂದುಸ್ಥಾನೀ ಸಂಗೀತದ ಧಾಟಿಗಳನ್ನು ಬಳಸಿ ಪಾರಿಜಾತವನ್ನು ಇನ್ನಷ್ಟು ಜನಪ್ರಿಯಗೊಳಿಸಿದವರು ನಂದಿ ರಾಮಣ್ಣ, ಶಿರಗುಪ್ಪೆ ಕಾಡಗೌಡ, ಬರಗಿ ರಾಚಯ್ಯ, ಯತ್ತಂಬಿ ಕುಂಬಾರ, ಬಸಾಪುರದ ಅಪ್ಪರಾಯಪ್ಪ, ಲೋಕಾಪುರ ದೇಶಪಾಂಡೆ, ಅಪ್ಪಲಾಲ ನದಾಫ ಮೊದಲಾದವರು. ಪಾರಿಜಾತವು ನೂರಾರು ವರುಷಗಳಿಂದ ಈ ಭಾಗದ ಜನರನ್ನು ರಂಜಿಸುತ್ತ ಬಂದಿದೆ. ಇವತ್ತಿಗೂ ರಂಜಿಸುತ್ತ ಮುಂದುವರೆದಿದೆ. II. ವೃತ್ತಿ ರಂಗಭೂಮಿ : ಆಧುನಿಕ ರಂಗಭೂಮಿಯ ಮಹತ್ತ್ವದ ಭಾಗವೆನಿಸಿದ ಕಂಪನಿ ನಾಟಕಗಳು ಮೊದಲು ರಂಗದ ಮೇಲೆ ಕಾಣಿಸಿಕೊಂಡಿದ್ದು ಉತ್ತರ ಕರ್ನಾಟಕದಲ್ಲಿಯೇ ಇದಕ್ಕೆ ಕಾರಣಗಳಿವೆ. 1885ರಲ್ಲಿ ಮುಂಬಯಿಯಿಂದ ಈ ಭಾಗಕ್ಕೆ ರೈಲು ಸಂಚಾರ ಪ್ರಾರಂಭವಾಯಿತು. ಇದರಿಂದ ಜನರ ವ್ಯಾಪಾರ ವಹಿವಾಟುಗಳ ಜೊತೆಗೆ ಕಲೆಗಳ ಸಂಚಾರಕ್ಕೂ ದಾರಿ ಸುಗಮವಾಯಿತು. ಕಂಪನಿ ನಾಟಕಗಳ ಕೇಂದ್ರವಾಗಿದ್ದ ಮುಂಬಯಿಯಿಂದ ಕೆಲವು ನಾಟಕ ಕಂಪನಿಗಳು ಉತ್ತರ ಕರ್ನಾಟಕದ ಪ್ರಮುಖ ನಗರಗಳಿಗೆ ಬಂದು ಕ್ಯಾಂಪ್ ಮಾಡತೊಡಗಿದವು. ಅವು ಪ್ರದರ್ಶಿಸುತ್ತಿದ್ದ ಪಾರಸಿ ಮತ್ತು ಮರಾಠಿ ನಾಟಕಗಳು ಇಲ್ಲಿಯ ಜನರಿಗೆ ಹೊಸ ಆಕರ್ಷಣೆಯಾದವು. ಕ್ರಮೇಣ ಮರಾಠಿ ನಾಟಕಗಳನ್ನು ನೋಡುವುದು, ಮರಾಠಿ ಹಾಡುಗಳನ್ನು ಗುನುಗುನಿಸುವುದೇ ಇಲ್ಲಿಯ ಜನರ ಶೋಕಿಯಾಯಿತು. ಪರಿಣಾಮ 1850-80ರ ಅವಧಿಯಲ್ಲಿ ಬೆಳಗಾಂವಿ ಹುಬ್ಬಳ್ಳಿ ಧಾರವಾಡ ಪ್ರದೇಶಗಳು ಶೈಕ್ಷಣಿಕವಾಗಿ ಆಡಳಿತಾತ್ಮಕವಾಗಿ ಹೇಗೋ ಹಾಗೆ ಸಾಂಸ್ಕೃತಿಕವಾಗಿಯೂ ಮರಾಠಿಮಯವಾಗಿ ಪರಿಣಮಿಸಿದವು. ಕನ್ನಡದಲ್ಲಿ ಒಳ್ಳೆಯ ನಾಟಕಗಳಿಲ್ಲ, ಒಳ್ಳೆಯ ನಟ ನಟಿಯರಿಲ್ಲ ಎಂಬ ಕೊರಗು ಧಾರವಾಡ ಸೀಮೆಯ ಜನರಿಂದ ಕೇಳಿಬರತೊಡಗಿತು. ಕನ್ನಡ ರಂಗಭೂಮಿಗೆ ಒದಗಿದ ಈ ದುಃಸ್ಥಿತಿಗೆ ಶಾಂತಕವಿಗಳಂತ ಹಿರಿಯರ ಮನಸ್ಸು ಮರುಗಿತು. ಭಾಷಾಭಿಮಾನ ಕೆರಳಿತು. ಮರಾಠಿ ನಾಟಕಗಳ ಮಾದರಿಯಲ್ಲಿಯೇ ಕನ್ನಡದಲ್ಲಿಯೂ ನಾಟಕಗಳನ್ನಾಡುವ ಛಲ ಬೆಳೆಯಿತು. ಹೀಗೆ ಕನ್ನಡ ನಾಡು-ನುಡಿಯ ಅಭಿಮಾನದಿಂದ ಕಂಪನಿ ನಾಟಕಗಳನ್ನಾಡುವ ಸ್ಥಿತಿ ಉತ್ತರ ಕರ್ನಾಟಕಕ್ಕೆ ಎದುರಾಯಿತು.
ಕರ್ನಾಟಕ ವೃತ್ತಿರಂಗಭೂಮಿಯ ಕಥನವನ್ನು ಬೆಳಗಾಂವಿ ಜಿಲ್ಲೆಯ ಹಲಸಿ ಕಂಪನಿಯಿಂದಲೋ (1869) ಅಥವಾ ಧಾರವಾಡ ಜಿಲ್ಲೆಯ ಶರತಪುರ ನಾಟಕಮಂಡಳಿಯಿಂದಲೋ (1972) ಆರಂಭಿಸುತ್ತೇವೆ. ಆದರೆ ಇವೆರಡೂ ಕಂಪನಿಗಳು ವೃತ್ತಿಯ ಶಿಸ್ತನ್ನು ಅಷ್ಟಾಗಿ ಅಳವಡಿಸಿಕೊಂಡಿರಲಿಲ್ಲ. ಸಂಘಟನೆ, ಸಂಚಾರ ಮತ್ತು ನಾಟಕ ಪ್ರದರ್ಶನಗಳಲ್ಲಿ ಇವು ಅರೆವೃತ್ತಿ ಅರೆ ಹವ್ಯಾಸಿಗಳಾಗಿದ್ದವು. ಶ್ರೀರಂಗರು ಇವುಗಳಿಗೆ ಅರೆವೃತ್ತಿಯ ರಂಗಭೂಮಿಗಳೆಂದು ಕರೆದಿದ್ದಾರೆ. ವೃತ್ತಿಯ ಶಿಸ್ತನ್ನು ಅಳವಡಿಕೊಂಡ ಕರ್ನಾಟಕದ ಕಂಪನಿಯೆಂದರೆ ಶಿವಮೂರ್ತಿಸ್ವಾಮಿ ಕಣಬರಗಿಮಠರ ಶ್ರೀ ಕಾಡಸಿದ್ದೇಶ್ವರ ಸಂಗೀತ ನಾಟಕ ಮಂಡಳಿ. ತೊಣ್ಣೂರ (1899) ಶಿವಮೂರ್ತಿಸ್ವಾಮಿಗಳು ಗೋಕಾಕ ಮಿಲ್ಲಿನಲ್ಲಿ ನೌಕರಿ ಮಾಡುತ್ತಿದ್ದರು. ರಂಗಕಲೆಯ ಬಗ್ಗೆ ಬಹಳ ಆಸಕ್ತಿ ಇತ್ತು. ಆಗಾಗ ಇವರು ಮಿಲ್ಲಿನ ಕೆಲಸಕ್ಕಾಗಿ ಮುಂಬಯಿಗೆ ಹೋಗಿ ಬರುತ್ತಿದ್ದರು. ಅಲ್ಲಿದ್ದಾಗ ಮತ್ತು ಬೆಳಗಾಂವಿಗೆ ಬರುತ್ತಿದ್ದ ಮರಾಠ ನಾಟಕಗಳನ್ನು ತಪ್ಪದೆ ನೋಡುತ್ತಿದ್ದರು. ಅಲ್ಲಿಯ ಹೊಸತನವನ್ನು ಕನ್ನಡ ರಂಗಭೂಮಿಗೂ ತುಂಬಲು ಹಂಬಲಿಸುತ್ತಿದ್ದರು. ಅವರ ಪ್ರಯತ್ನದ ಫಲವಾಗಿಯೇ ಕೊಣ್ಣೂರ ಕಂಪನಿಯು ವೃತ್ತಿರಂಗಭೂಮಿಯ ವೈಭವ ಪರಂಪರೆಗೆ ನಾಂದಿ ಹಾಡಿತು. ಮೊದಲಿಗೆ ಡೈನಮೋ ವಿದ್ಯುತ್ತನ್ನು ಬಳಸಿದ ಟ್ರಾನ್ಸ್ಫರ್ ಸೀನರಿಗಳನ್ನು ಅಳವಡಿಸಿದ ಮತ್ತು ಸ್ತ್ರೀ ಪಾತ್ರಕ್ಕೆ ಸ್ತ್ರೀಯರಿದ್ದರೇ ಚೆಂದ ಎಂದು ಕಲಾವಿದೆಯರಿಗೆ ಅವಕಾಶ ನೀಡಿದ ಹೆಗ್ಗಳಿಕೆ ಈ ಕಂಪನಿಯವರದು. ರಂಗಸಂಗೀತ, ರಂಗಶಿಕ್ಷಣ ಹಾಗೂ ಕಂಪನಿಯ ವ್ಯವಸ್ಥಾಪನೆಗೂ ಈ ಕಂಪನಿ ತುಂಬ ಮಹತ್ತ್ವ ನೀಡಿತು.
ಶನಿಪ್ರಭಾವ, ಮನೋವಿಜಯ, ಬಸವೇಶ್ವರ ಮುಂತಾದವು ಈ ಕಂಪನಿಯ ಪ್ರಸಿದ್ಧ ನಾಟಕಗಳು. ಬೆಳವಿ ರಾಚಯ್ಯ, ಚಿಕ್ಕೋಡಿ ಶಿವಲಿಂಗಯ್ಯ, ಮುರಗೋಡ ಗಂಗಾಧರಪ್ಪ, ಬಳ್ಳಾರಿ ಬಸಪ್ಪ, ಪೀತಾಂಬರಪ್ಪ, ಡೋಂಗರೆ, ಗುರುಲಿಂಗಪ್ಪ, ಗುಳೇದಗುಡ್ಡ, ಯಲ್ಲೂಬಾಯಿ ಗುಳೇದಗುಡ್ಡ ಮೊದಲಾದ ಪ್ರಸಿದ್ಧ ನಟನಟಿಯರು ಈ ಕಂಪನಿಯಲ್ಲಿದ್ದರು. ಗರುಡ ಸದಾಶಿವರಾಯರು ಕೆಲಕಾಲ ಈ ಕಂಪನಿಯಲ್ಲಿ ಅಭಿನಯದ ಶಿಕ್ಷಕರಾಗಿದ್ದರು. ಗುರುಸಿದ್ದಯ್ಯ, ಸಾಗಾವಿಮಠ ಎಂಬುವರು ವ್ಯವಸ್ಥಾಪಕರಾಗಿದ್ದರು. 20 ವರುಷಗಳ ರಂಗಸೇವೆಯ ಅನಂತರ ಕಂಪನಿ ನಿಂತಿತು. ಇಲ್ಲಿದ್ದ ಕಲಾವಿದರು ತಾವು ಗಳಿಸಿದ್ದ ಅನುಭವದ ಮೇಲೆ ಸ್ವತಂತ್ರ ಕಂಪನಿಗಳನ್ನು ಹುಟ್ಟುಹಾಕಿದರು. ಇದರಿಂದ ಕರ್ನಾಟಕದಲ್ಲಿ ನಾಟಕ ಕಂಪನಿಗಳ ಬೆಳೆಗೆ ನೆಲ ಹದವಾಯಿತು.
ಕೊಣ್ಣೂರ ಕಂಪನಿ ಅನಂತರ ಉತ್ತರ ಕರ್ನಾಟಕದಲ್ಲಿ ತಲೆಯೆತ್ತಿದ ನಾಟಕ ಕಂಪನಿಗಳ ಹೆಸರನ್ನು ಹೀಗೆ ಪಟ್ಟಿ ಮಾಡಬಹುದು. ಶಿರಹಟ್ಟಿ ವೆಂಕೋಬರಾಯರ ಶ್ರೀ ಮಹಾಲಕ್ಷ್ಮೀ ಪ್ರಾಸಾದಿಕ ಸಂಗೀತ ನಾಟಕ ಮಂಡಳಿ-1911. ಲಕ್ಷ್ಮೇಶ್ವರದ ಬಚ್ಚಾಸಾನಿ ದೊಡ್ಡಮನಿಯವರ ಸ್ತ್ರೀ ನಾಟಕ ಮಂಡಳಿ 1912. ಹೊಂಬಳ ಶಂಕರಗೌಡರ ಶ್ರೀ ಸಂಕರ ಲಿಂಗೇಶ್ವರ ಸಂಗೀತ ನಾಟಕ ಮಂಡಳಿ-1912, ವಾಮನ ರಾವ ಮಾಸ್ತರರ ವಿಶ್ವ ಗುಣಾದರ್ಶ ಸಂಗೀತ ನಾಟಕ ಮಂಡಳಿ 1914, ಗರುಡ ಸದಾಶಿವರಾಯರ ಶ್ರೀ ದತ್ತಾತ್ರೇಯ ಸಂಗೀತ ನಾಟಕ ಮಂಡಳಿ-1919, ಗುಳೇದ ಗುಡ್ಡ ಗಂಗೂ ಬಾಯಿಯವರ ಶ್ರೀ ಕೃಷ್ಣ ಸಂಗೀತ ನಾಟಕ ಮಂಡಳಿ-1925 ಚಿಕ್ಕೋಡಿ ಶಿವಲಿಂಗ ಸ್ವಾಮಿಗಳ ಸಿರ್ಸಿಮಾರಿಕಾಂಬಾ ನಾಟಕ ಮಂಡಳಿ, ಬಸನಗೌಡ ಅಬ್ಬಿಗೇರಿ ಅವರ ಕನ್ನಡ ಸಾಹಿತ್ಯ ಸೇವಾ ಸಂಗೀತ ನಾಟಕ ಮಂಡಳಿ-1928, ಶಿವ ಯೋಗಪ್ಪ ವಾಲಿ ಅವರ ಲೋಕಸೇವಾ ಸಂಗೀತ ನಾಟಕ ಮಂಡಳಿ ಸಂಪಗಾವಿ-1928, ಚಿಂದೋಡಿ ಶಾಂತವೀರಪ್ಪನವರ ಶ್ರೀ ಗುರು ಕೆ.ಬಿ.ಆರ್ ಡ್ರಾಮಾ ಕಂಪನಿ-1928, ಯರಾಸಿ ಭರಮಪ್ಪನವರ ಶ್ರೀ ವಾಣಿ ವಿಲಾಸ ಸಂಗೀತ ನಾಟಕ ಮಂಡಳಿ-1929, ಲಕ್ಷ್ಮಣರಾವ್ ಅಸುಂಡಿಯವರ ಶಿವಾನಂದ ಸಂಗೀತ ನಾಟಕ ಮಂಡಳಿ-1930, ಕಂದಗಲ್ಲ ಹನುಮಂತರಾಯರ ಲಲಿತ ಕಲೋದ್ದಾರಕ ನಾಟಕ ಮಂಡಳಿ-1933, ಸೂಡಿ ಹುಚ್ಚಪ್ಪ ಏಣಗಿ ಬಾಳಪ್ಪನವರ ಗುರುಸೇವಾ ಸಂಗೀತ ನಾಟಕ ಮಂಡಳಿ-1933, ಭೀಮಪ್ಪ ಹೂಗಾರರ ಶ್ರೀ ಭಾಗ್ಯೋದಯ ನಾಟಕ ಮಂಡಳಿ, ಅಥಣಿ-1933, ಗೋಕಾಕ ತುಕಾರಾಮಪ್ಪನವರ ಶ್ರೀ ಶಾರದಾ ಸಂಗೀತ ನಾಟಕ ಮಂಡಳಿ-1934, ಹುಲಿಮನೆ ಸೀತಾರಾಮ ಶಾಸ್ತ್ರಿಗಳ ಜಯ ಕರ್ನಾಟಕ ನಾಟಕ ಮಂಡಳಿ-1935, ಸೋನುಬಾಯಿ ದೊಡ್ಡಮನಿಯವರ ನೂತನ ಸಂಗೀತ ನಾಟಕ ಮಂಡಲಿ-1935, ಹಂದಿಗನೂರು ಸಿದ್ರಾಮಪ್ಪನವರ ವಿಶ್ವಕಲಾರಂಜನ ನಾಟಕ ಮಂಡಳಿ-1937, ಬಸವರಾಜ ಮನಸೂರರ ಕಲಾಪ್ರಕಾಶ ನಾಟಕ ಮಂಡಳಿ-1939, ಪಂಡಿತ ಪುಟ್ಟರಾಜ ಗವಾಯಿಗಳ ನಾಟಕ ಮಂಡಳಿ ಗದಗ-1940. ಚಿತ್ತರಗಿ ಗಂಗಾಧರ ಶಾಸ್ತ್ರಿಗಳ ಕುಮಾರ ವಿಜಯ ನಾಟ್ಯಸಂಘ-1942, ನ್ಯಾಮತಿ ಶಾಂತಪ್ಪನವರ ಶ್ರೀ ಮಹೇಶ ನಾಟ್ಯ ಸಂಘ-1942, ಏಣಗಿ ಬಾಳಪ್ಪ ಮತ್ತು ಎಲ್.ಎಸ್. ಇನಾಮದಾರರ ವೈಭವ ಶಾಲಿ ನಾಟ್ಯ ಸಂಘ-1943. ಅಮ್ಮಣಗಿ ದೇಸಾಯಿ ಅವರ ಶ್ರೀ ಮಲ್ಲಿಕಾರ್ಜುನ ನಾಟ್ಯ ಸಂಘ-1943, ವಸಂತಸಾ ನಾಕೋಡ ಸಹೋದರರ ವಸಂತಕಲಾ ನಾಟ್ಯಸಂಘ ಹುಬ್ಬಳ್ಳಿ-1943, ರಹಿಮಾನವ್ವ ಕುಕನೂರರ ಶ್ರೀ ಲಲಿತಕಲಾ ನಾಟ್ಯ ಸಂಘ-1950, ಚೆನ್ನ ಬಸಪ್ಪ ಕವಲಿ ಅವರ ಕಲಾಪ್ರಕಾಶ ನಾಟಕ ಮಂಡಳಿ, ಬ್ಯಾಡಗಿ-1950, ಸಿದ್ದರಾಜ ಉಜ್ಜಯಿನಿಮಠದ ಸಮಾಜ ವಿಕಾಸ ನಾಟಕ ಮಂಡಳಿ-1951, ಸಂಗಪ್ಪ ಬೆಳವುಣಕಿ ಅವರ ಶ್ರೀ ವೀರಭದ್ರೇಶ್ವರ ನಾಟಕ ಸಂಘ-1959, ಬಿ.ಆರ್ ಅರಿಷಿನ ಗೋಡಿ ಅವರ ಶ್ರೀ ಹುಚ್ಚೇಶ್ವರ ನಾಟ್ಯ ಸಂಘ-1961, ಗುಡಗೇರಿ ಎನ್. ಬಸವರಾಜರ ಶ್ರೀ ಸಂಗಮೇಶ್ವರ ನಾಟ್ಯ ಸಂಘ-1963, ಶಂಕ್ರಯ್ಯ ಸ್ವಾಮಿ ಕಡಪಟ್ಟಿಯವರ ಶ್ರೀ ಗುರುಪ್ರಸಾದ ನಾಟ್ಯ ಸಂಘ, ಜಮಖಂಡಿ-1963, ಬಿ. ಓಬಳೇಶ ಅವರ ಶ್ರೀ ಓಂಕರೇಶ್ವರ ನಾಟ್ಯ ಸಂಘ, ರಾಣಿಬೆನ್ನೂರು-1965, ಮಲ್ಲನಗೌಡ ದೇಸಾಯಿ ಯವರ ಶ್ರೀ ಶೈಲ ಮಲ್ಲಿಕಾರ್ಜುನ ನಾಟ್ಯ ಸಂಘ-1966, ಸಿ.ಕೆ. ಜೋಷಿ ಅವರ ಕರ್ನಾಟಕ ಕಲಾ ಸಂಘ, ಯಂಕಂಚಿ-1968, ಪುಡಿ ಶೇಖರಯ್ಯನವರ ಶ್ರೀ ಭಾರತಿ ನಾಟ್ಯ ಸಂಘ-1969, ಬಿ.ಎಸ್. ಪಟ್ಟಣಶೆಟ್ಟಿಯವರ ಶ್ರೀ ಶೈಲ ಮಲ್ಲಿಕಾರ್ಜುನ ನಾಟ್ಯ ಸಂಘ-1975, ವೀರನ ಗೌಡ ಪಾಟೀಲರ ಶ್ರೀ ಸಂಗಮೇಶ್ವರ ನಾಟ್ಯ ಸಂಘ ಆಶಾಪುರ-1982, ಮಂಡಲಗಿರಿ ಕಂಪನಿ, ಶೇಖರ ಮಾಸ್ತರರ ಕಂಪನಿ, ಶ್ರೀಧರ ಹೆಗಡೆಯವರ ಕಂಪನಿ, ನಾಗರಾಜ ಸಾಗರರ ಕಂಪನಿ, ರಾಜು ತಾಳಿಕೋಟೆಯವರ ಕಂಪನಿ, ಬಸವರಾಜ ಹಿರೇಮಠ ಕಂಪನಿ, ಕೆ. ನಾಗಯ್ಯ ಸ್ವಾಮಿಗಳ ಕಂಪನಿ.
ಅಲ್ಪ ಕಾಲ ಸೇವೆ ಗೈದ ಕಂಪನಿಗಳ ಹೆಸರನ್ನು ಇಲ್ಲಿ ಉಲ್ಲೇಖಿಸಿಲ್ಲ. ಮೇಲಿನ ಪಟ್ಟಿ ಗಮನಿಸಿದರೆ, 1900-70ರ ಕಾಲಾವಧಿಯಲ್ಲಿ ಉತ್ತರ ಕರ್ನಾಟಕವು ನಾಟಕ ಕಂಪನಿಗಳ ಸಮೃದ್ಧ ಬೆಳೆಯನ್ನು ಕಂಡಿತ್ತೆಂಬುದು ಸ್ಪಷ್ಟ. ಈ ಅವಧಿಯಲ್ಲಿ ಹೊಸ ನಾಟಕಗಳಿಂದ ಹೊಸ ರಂಗ ಪರಿಕರಗಳಿಂದ ಪ್ರೇಕ್ಷಕರನ್ನು ಆಕರ್ಷಿಸಿ ವೃತ್ತಿ ರಂಗಭೂಮಿ ಬೆಳೆಯಿತು. ಪ್ರೇಕ್ಷಕರನ್ನು ಬೆಳೆಸಿತು. ಅದ್ಭುತವಾದ ರಂಗ ಸಜ್ಜಿಕೆ, ಸೀನ ಸೀನರಿಗಳಿಗೆ ಶಿರಹಟ್ಟಿಕಂಪನಿ, ಹೆಸರಾಗಿತ್ತು. ಈ ಕಂಪನಿಯ ದಶಾವತಾರ ನಾಟಕ ನಾಡಿನ ತುಂಬ ಪ್ರಚಾರವಾಗಿತ್ತು. ಹಾಸ್ಯರಸ ಪ್ರಧಾನ ನಾಟಕಗಳಿಂದ ಹಲಗೇರಿ ಕಂಪನಿ ಪ್ರಸಿದ್ಧವಾಗಿತ್ತು. ವಾಮನರಾಯರ ಕಂಪನಿಯು ರಂಗ ಸಂಗೀತದಿಂದ ಹೆಸರುವಾಸಿಯಾಗಿತ್ತು. ಗರುಡರ ಕಂಪನಿಯು ಅಭಿನಯ ಪ್ರಧಾನ ನಾಟಕಗಳಿಂದ ಕೀರ್ತಿ ಪಡೆದಿತ್ತು. ಕಂದಗಲ್ಲರ ನಾಟಕಗಳಿಗೆ ಮತ್ತು ಸಾಮಾಜಿಕ ನಾಟಕಗಳಿಗೆ ವಿಶೇಷ ಮಹತ್ತ್ವ ತಂದುಕೊಟ್ಟ ಕಂಪನಿಗಳೆಂದರೆ ಗೋಕಾಕ ಕಂಪನಿ ಮತ್ತು ಜಮಖಂಡಿ ಕಂಪನಿಗಳು. ಮರಾಠಿ ನಾಟಕಗಳ ಪ್ರಯೋಗಶೀಲತೆ ಯನ್ನು ಅಳವಡಿಸಿ, ರಂಗಭೂಮಿಗೆ ಹೊಸತನ ತಂದ ಕಂಪನಿಗಳಲ್ಲಿ ಏಣಗಿ ಭಾಳಪ್ಪನವರ ಕಂಪನಿ ಪ್ರಮುಖವಾದುದು.
ಪ್ರೇಕ್ಷಕರನ್ನು ಕಡಿಮೆ ಅವಧಿಯಲ್ಲಿ ರಂಜಿಸಿ, ಕಥೆ, ಚಾಲನೆ ನೀಡುವಂಥ ಸಂಗೀತವನ್ನು ನಾಟಕ ಕಂಪನಿಗಳು ಪ್ರಯೋಗಿಸಿದವು. ರಂಗ ಸಂಗೀತ ಪರಂಪರೆಯನ್ನು ನಿರ್ಮಿಸಿದವು. ಕಂಪನಿಗಳಲ್ಲಿ ಸಂಗೀತ ಹೇಳಿಕೊಡಲು ಗವಾಯಿಗಳಿರುತ್ತಿದ್ದರು. ನಟರ ಕಂಠತ್ರಾಣ ಪರೀಕ್ಷಿಸಿಯೇ ಪಾತ್ರ ಕೊಡುವ ಪದ್ಧತಿ ಇತ್ತು. ಹಿಂದಿನ ಕಾಲದಲ್ಲಿ ಹಾಡಬಲ್ಲವನೇ ನಟ, ಹಾಡುವುದೇ ನಾಟಕ, ಎನ್ನುವಂಥ ಸ್ಥಿತಿ ಇತ್ತು. ಸಂಗೀತ ಪ್ರಧಾನ ನಾಟಕಗಳ ಕಾಲದಲ್ಲಿ ಗಾಯಕ-ನಟರ ದೊಡ್ಡ ಪರಂಪರೆ ನಿರ್ಮಾಣವಾಯಿತು. ವಾಮನರಾವ್ ಮಾಸ್ತರ, ಬಸವರಾಜ ಮನಸೂರ, ಗಂಗು ಬಾಯಿಗುಳೇದ ಗುಡ್ಡ, ಡಿ. ಮುದ್ದು ವೀರಾಚಾರ್ಯ, ಬೇವೂರ ಬಾದಷಾ ಮಾಸ್ತರ, ನೀಲಕಂಠ ಬುವಾ, ಗಾಡಗೋಳಿ ಮುರಗೋಡ ಗಂಗಾಧರಪ್ಪ, ತುಕಾರಾಮ ಬುವಾ ಗೋಕಾಕ, ಸೋನುಬಾಯಿ ದೊಡ್ಡ ಮನಿ, ಏಣಗಿ ಬಾಳಪ್ಪ, ಗಿರಡಿ ಗಂಗಯ್ಯ ಮೊದಲಾದ ನಟ-ನಟಿಯರು ಗಾಯನದಿಂದ ಪ್ರೇಕ್ಷಕರನ್ನು ರಂಜಿಸಿ ಪ್ರಸಿದ್ಧರಾಗಿದ್ದರು.
ಗರುಡ ಸದಾಶಿವರಾಯರಿಂದ ಅಭಿನಯಕ್ಕೆ ಮಹತ್ತ್ವ ಬಂತು. ಕಂದಗಲ್ಲ ಹನುಮಂತರಾಯರಿಂದ ಧ್ವನಿರಮ್ಯತೆಯ ಸಂಭಾಷಣೆ ಒತ್ತು ದೊರೆಯಿತು. ಕೋಲ ಕಾಂತಪ್ಪನವರಿಂದ ನಲವಡಿ ಶ್ರೀಕಂಠಶಾಸ್ತ್ರಿಗಳಿಂದ, ಎಚ್.ಟಿ. ಮಹಾಂತೇಶ ಶಾಸ್ತ್ರಿಗಳಿಂದ ನಾಟಕದ ಲಲಿತ ಸಂಭಾಷಣೆಗೆ, ಸಾಮಾಜಿಕ ಸಮಸ್ಯೆಗಳಿಗೆ ಪ್ರಾಧಾನ್ಯತೆ ದೊರೆಯಿತು. ಚಿಕ್ಕೋಡಿ ಶಿವಲಿಂಗ ಸ್ವಾಮಿಗಳ ‘ಕಿತ್ತೂರು ಚೆನ್ನಮ್ಮ’ ಕೃತಿಯಿಂದ ಐತಿಹಾಸಿಕ ನಾಟಕಗಳಿಗೆ ಸ್ಫೂರ್ತಿ ದೊರೆಯಿತು. ಅಚ್ಯುತರಾವ್ ಹುಯಿಲಗೋಳ, ಎಲ್.ಎಸ್.ಇನಾಮದಾರ, ಆರ್.ಡಿ.ಕಾಮತ ಜಿ.ಜಿ.ಹೆಗಡೆ, ಪುಟ್ಟರಾಜು ಗವಾಯಿಗಳು ಪಿ.ಬಿ.ಧುತ್ತರಗಿ, ಕೆ.ಎನ್.ಸಾಳುಂಕೆ, ಮಾರುತೇಶ ಮಾಂಡ್ರೆ, ಎಚ್.ಎನ್.ಹೂಗಾರ, ಎಚ್.ಆರ್.ಬಸ್ಮೆ, ಅರಿಷಿಣಗೋಡಿ, ಎನ್.ಎಸ್.ಜೋಷಿ, ಹುಲಿಮನೆ ಸೀತಾರಾಮಶಾಸ್ತ್ರಿ, ನೀಲಕಂಠರಾವ್ ಶೇಡಬಾಳಕರ, ವಿತ್ತರಗಿ ಗಂಗಾಧರಶಾಸ್ತ್ರಿ, ಬಿ.ಓಬಳೇಶ, ಮೋಹನಕುಮಾರ ಕೀರಣಗಿ, ನಿಟ್ಟಾಲಿ ಕವಿ, ಹಾವೇರಿ ಬಸವಲಿಂಗಶಾಸ್ತ್ರಿ, ಎನ್.ಎಸ್.ತಾರನಾಳ, ಪ್ರಕಾಶ ಕಡಪಟ್ಟಿ, ಬಿ.ವಿ.ಈಶ, ನಾದೆ ನರಸಿಂಹಮೂರ್ತಿ, ಎಸ್ ಬಸವರಾಜ ಮೊದಲಾದವರಿಂದ ಕಂಪನಿಗಳಿಗಾಗಿ ವೈವಿಧ್ಯಪುರ್ಣ ನಾಟಕಗಳು ರಚನೆಯಾದವು. 1980ರಿಂದ ಈಚೆಗೆ ಹೊಸ ನಾಟಕಗಳ ಕೊರತೆಯಿಂದಾಗಿ ಬಹು ದೊಡ್ಡ ಕಂದರ ನಿರ್ಮಾಣವಾಗಿದೆ.
ಸ್ವಾತಂತ್ರ್ಯ ಪುರ್ವದ ಕಾಲದಲ್ಲಿ ಕಂಪನಿ ನಾಟಕಗಳು ವಸಾಹತುಶಾಹಿ ಸರಕಾರವನ್ನು ಪ್ರತಿಭಟಿಸುವುದರಲ್ಲಿ ಮಹತ್ತ್ವದ ಪಾತ್ರವಹಿಸಿದವು. ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ವೀರ ಸಿಂಧೂರ ಲಕ್ಷ್ಮಣ, ನರಗುಂದ ಬಂಡಾಯ, ಗರುಡ ಸದಾಶಿವರಾಯರ ಪಾದುಕಾ ಕಂದಗಲ್ಲರ ಅಕ್ಷಯಾಂಬರ ಮುಂತಾದ ನಾಟಕಗಳು ಜನರಲ್ಲಿ ಸ್ವಾತಂತ್ರ್ಯದ ಅಭಿಮಾನವನ್ನು ಜಾಗೃತಿಗೊಳಿಸಿದವು. ಅವತ್ತಿನ ಸಂದರ್ಭದಲ್ಲಿ ಜನರಿಗೆ ಗೊತ್ತಾಗುವ ಆದರೆ ಅಧಿಕಾರಿಗಳಿಗೆ ಗೊತ್ತಾಗದಂತೆ ರಹಸ್ಯ ಭಾಷೆಯನ್ನು ರೂಪಕ ಕಥೆಗಳನ್ನು ವೃತ್ತಿರಂಗಭೂಮಿ ರೂಪಿಸಿಕೊಂಡಿತ್ತು. ಜೊತೆಗೆ ಭೂಗತ ಚಳವಳಿಗಾರರಿಗೆ, ಚಳವಳಿಗಾರರ ಮನೆ ಮಂದಿಗೆ ನಾಟಕ ಕಂಪನಿಗಳು ಆಸರೆಯ ತಾಣಗಳಾಗಿದ್ದವು. ಸ್ವಾತಂತ್ರ್ಯ ಸಿಕ್ಕ ಮೇಲೆ ದೇಶದ ರಾಜಕೀಯ ಚಿತ್ರ, ಸಮಾಜದ ಚಿತ್ರ ಬದಲಾಯಿತು. ಭಾಷಾವಾರು ಪ್ರಾಂತಗಳ ರವಾನೆಯಿಂದ ಗಡಿ ಸಮಸ್ಯೆಗಳು ತಲೆದೋರಿದವು. ರಾಜಕಾರಣಿಗಳು ಅಧಿಕಾರಕ್ಕಾಗಿ ಕಚ್ಚಾಡತೊಡಗಿದರು. ಶಿಕ್ಷಣದಿಂದ ನಗರೀಕರಣದಿಂದ ಹೊಸ ಹೊಸ ಸಮಸ್ಯೆಗಳು ಎದುರಾದವು. ಇಂಥವುಗಳನ್ನೆಲ್ಲ ಬಿಂಬಿಸಲು ಕಂಪನಿ ನಾಟಕಗಳು ಪ್ರಯತ್ನಿಸಿದವು. ದೇಶದ ಹಿತಾಸಕ್ತಿ, ಸಾಮಾಜಿಕ ಸೌಖ್ಯ, ಕುಟುಂಬದ ಯೋಗಕ್ಷೇಮ ಸಾರುವಂಥ ನಾಟಕಗಳು ಈ ಅವಧಿಯಲ್ಲಿ ಪ್ರದರ್ಶನಗೊಂಡವು.
ನಟ ಪರಂಪರೆಯನ್ನು ರೂಪಿಸಿದ್ದು ನಾಟಕ ಕಂಪನಿಗಳ ಮಹತ್ತ್ವದ ಸಾಧನೆಗಳಲ್ಲಿ ಒಂದು. ಮೊದಲಿನ ಕಾಲದಲ್ಲಿ ಶರೀರ ಹಾಗೂ ಶಾರೀರಗಳೆರಡೂ ನಟನ ಅಳತೆ ಗೋಲಾಗಿದ್ದವು. ನಟನಾಗುವವನಿಗೆ ರೂಪ, ಗಾಂಭೀರ್ಯ, ಮಧುರ ಕಂಠ ಹಾಗೂ ಸಂವಾದ ಶೈಲಿ ಬೇಕಾಗುತ್ತಿತ್ತು. ಇಂಥ ವ್ಯಕ್ತಿತ್ವದ ನಟರು ಗಾನಾಭಿನಯಗಳಿಂದ ಪಾತ್ರಕ್ಕೆ ಕಳೆ ಕಟ್ಟುತ್ತಿದ್ದರು. ಕೆಲವು ನಟರಂತೂ ತಮ್ಮ ವ್ಯಕ್ತಿತ್ವದಿಂದ, ಅಭಿನಯ ಕೌಶಲ್ಯದಿಂದ ಒಂದೊಂದು ಪಾತ್ರಗಳನ್ನೂ ಆಕಸ್ಮಾತ್ ಮೆಚ್ಚಿಕೊಂಡಿದ್ದರು. ವಿಶಿಷ್ಟ ಪಾತ್ರಗಳಿಂದಲೇ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿದ್ದರು. ಆಂಜನೇಯನ ಪಾತ್ರದಲ್ಲಿ ಬೆಳ್ಳೂರು ನಂಜುಂಡಯ್ಯ, ದಶರಥನ ಪಾತ್ರದಲ್ಲಿ ಗರುಡ ಸದಾಶಿವರಾಯರು, ಭೀಷ್ಮನ ಪಾತ್ರದಲ್ಲಿ ಹಂದಿಗನೂರು ಸಿದ್ರಾಮಪ್ಪ , ಭೀಮನ ಪಾತ್ರದಲ್ಲಿ ಅದೃಶ್ಯಪ್ಪ, ಮಾನವಿ, ಅಶ್ವತ್ಥಾಮನ ಪಾತ್ರದಲ್ಲಿ ಎಲಿವಾಳ ಸಿದ್ದಯ್ಯಸ್ವಾಮಿ, ಶಕುನಿ ಪಾತ್ರದಲ್ಲಿ ಲಾಠಿ ಗುಂಡಪ್ಪ, ಬಸವಣ್ಣನ ಪಾತ್ರದಲ್ಲಿ ಏಣಗಿ ಬಾಳಪ್ಪ ಹೀಗೆಯೇ ಪಾತ್ರಗಳಿಂದ ನಟರು, ನಟರಿಂದ ಪಾತ್ರ ಬೆಳೆದು ಬೆಳಗಿದ್ದು ಒಂದು ಅದ್ಭುತವೇ. ನೂರಾರು ವರ್ಷಗಳ ಅವಧಿಯಲ್ಲಿ ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿ ಕಂಪನಿಗಳನ್ನು ಕಟ್ಟಿ ಬೆಳೆಸಿತು. ಕಲಾವಿದರನ್ನು ರೂಪಿಸಿತು. ಪ್ರೇಕ್ಷಕರನ್ನು ಕಟ್ಟಿತು. ರಂಗ ಸಂಗೀತ ಪರಂಪರೆಯನ್ನು ನಿರ್ಮಿಸಿತು. ನಾಟಕಗಳಿಂದ ಸಮಕಾಲೀನ ಬದುಕಿಗೆ ಸ್ಪಂದಿಸಿತು. ಹೀಗೆ ಹಲವಾರು ದೃಷ್ಟಿಗಳಿಂದ ಇತಿಹಾಸವನ್ನು ಸೃಷ್ಟಿಸಿದ್ದ ವೃತ್ತಿ ರಂಗಭೂಮಿಯು 1970ರಿಂದ ಸಮಸ್ಯೆಗಳನ್ನು ಎದುರಿಸುತ್ತ ಸೋತ ಹೆಜ್ಜೆಗಳಿಂದ ನಡೆಯುತ್ತಿದೆ. ಇದರ ಪುನಶ್ಚೇತನಕ್ಕಾಗಿ ಸರಕಾರದಿಂದ ಹಲವಾರು ಯೋಜನೆಗಳು ಜಾರಿಯಾದರೂ ಪ್ರಯೋಜನ ಕಂಡುಬರುತ್ತಿಲ್ಲ. ವರುಷದಿಂದ ವರುಷಕ್ಕೆ ಕಂಪನಿಗಳು ಮುಚ್ಚುತ್ತಿವೆ. ಹೀಗೆಯೇ ಆದರೆ ಕೆಲ ವರ್ಷಗಳಲ್ಲಿ ಹೇಳಿಕೊಳ್ಳಲು ಒಂದು ನಾಟಕ ಕಂಪನಿಯೂ ಉಳಿಯಲಿಕ್ಕಿಲ್ಲ. ಹೀಗಾಗದಂತೆ ನೋಡಿಕೊಳ್ಳಬೇಕು. ವೃತ್ತಿರಂಗದ ನಿಜವಾದ ವೈರಿ ಹೊರಗಿದ್ದಾನೋ ಒಳಗಿದ್ದಾನೋ ಪತ್ತೆ ಹಚ್ಚಬೇಕು. ಪುನಶ್ಚೇತನದ ಆದ್ಯತೆಗಳು ಹೇಗಿರಬೇಕು? ಎಂಬುದು ಸ್ಪಷ್ಟವಾಗಬೇಕು. ಪರಿಸ್ಥಿತಿ ಕೈಮೀರುವ ಮೊದಲು, ಈ ರಂಗಭೂಮಿಯ ಒಳಗಿನಿಂದ, ಹೊರಗಿನಿಂದ ಎಲ್ಲರಿಂದ ಕಾಯಕಲ್ಪದ ಚಟುವಟಿಕೆಗಳು ಪ್ರಾಮಾಣಿಕವಾಗಿ ನಡೆಯಬೇಕು.
III. ಹವ್ಯಾಸಿ ರಂಗಭೂಮಿ : ವೃತ್ತಿ ರಂಗಭೂಮಿಯ ಜೊತೆಯಲ್ಲೇ ಹವ್ಯಾಸಿ ರಂಗಭೂಮಿ ಉತ್ತರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿತು. 1896 ರ ಸು., ಧಾರವಾಡದ ಮದಿಹಾಳದಲ್ಲಿ ಪ್ರಾಚ್ಯ ಕ್ರೀಡಾ ಸಂವರ್ಧಕ ಮಂಡಳಿಯೇ ಮೊದಲ ಹವ್ಯಾಸಿ ರಂಗಸಂಸ್ಥೆ ಎನಿಸಿದೆ. ಪೌರಾಣಿಕ ನಾಟಕಗಳಿಂದ ಪ್ರಾರಂಭವಾದ ಸಂಸ್ಥೆ ಸಾಮಾಜಿಕ ನಾಟಕಗಳನ್ನು ಪ್ರಯೋಗಿಸಿತು. 1899ರಲ್ಲಿ ಮುಗಳಿ ಶ್ರೀನಿವಾಸ ರಾಯರು ನೇತೃತ್ವದಲ್ಲಿ ‘ಬಾದಾಮಿ ಅಮೆಚೂರ್ಸ್’ ರಂಗ ಸಂಸ್ಥೆ ಸ್ಥಾಪನೆಯಾಯಿತು. ಚುರಮುರಿಯವರ ಶಾಕುಂತಲವನ್ನು ಇದು ಬಾದಾಮಿ, ಬಾಗಲಕೋಟೆ, ಬಿಜಾಪುರ ನಗರಗಳಲ್ಲಿ ಪ್ರದರ್ಶಿಸಿತು. ಈ ಸಂಘದಿಂದ ಸ್ಫೂರ್ತಿ ಪಡೆದು ಮುದವೀಡು ಕೃಷ್ಣರಾಯರು ಧಾರವಾಡದಲ್ಲಿ ಭರತ ಕಲೋತ್ತೇಜಕ ಸಂಗೀತ ಸಮಾಜವನ್ನು ಸ್ಥಾಪಿಸಿದರು. 1905ರಲ್ಲಿ ಇದು ಚುರುಮುರಿಯವರ ‘ಶಾಕುಂತಲವನ್ನು’ ಅಭಿನಯಿಸಿತು. ಇದರ ಜೊತೆಗೆ ಸೌಭದ್ರ, ರಾಮರಾಜ್ಯ ವಿಯೋಗ, ಮೃಚ್ಛಕಟಿಕ ಮೊದಲಾದ ನಾಟಕಗಳನ್ನು ಆಡಿತು. ಧಾರವಾಡದ ರೈಲ್ವೆ ಕಛೇರಿಯಲ್ಲಿದ್ದ ನೌಕರರೇ ಇಲ್ಲಿ ಕಲಾವಿದರಾಗಿದ್ದರು. ರೈಲ್ವೆ ಕಛೇರಿ ಚೆನ್ನೈಗೆ ವರ್ಗವಾದಾಗ ಸಂಘಕ್ಕೆ ಕಲಾವಿದರ ಕೊರತೆ ಎದುರಾಯಿತು.
ಭರತ ಕಲೋತ್ತೇಜಕ ಸಮಾಜವನ್ನು ಅನುಸರಿಸಿ ಧಾರವಾಡ, ಬಿಜಾಪುರ, ಬೆಳಗಾವಿ ಭಾಗಗಳಲ್ಲಿ ಹಲವಾರು ವಿಲಾಸಿ ರಂಗ ಸಂಸ್ಥೆಗಳು ಹುಟ್ಟಿಕೊಂಡವು. ಅವುಗಳಲ್ಲಿ ಗದುಗಿನ ಹುಯಿಲಗೋಳ ನಾರಾಯಣರಾಯರ ‘ಯಂಗ್ಮನ್ಸ್ ಫುಟ್ಬಾಲ್ಕ್ಲಬ್ ಅಮೆಚೂರ್ಸ್’ ಪ್ರಮುಖವಾದುದು. ಈ ಸಂಘವು ನಾರಾಯಣರಾಯರೇ ಬರೆದ ಶಿಕ್ಷಣ ಸಂಭ್ರಮ, ಸ್ತ್ರೀಧರ್ಮ-ರಹಸ್ಯ ಮೊದಲಾದ ನಾಟಕಗಳನ್ನು ಪ್ರದರ್ಶಿಸಿತು. 1927 ರಲ್ಲಿ ಕೆರೂರು ವಾಸುದೇವಾಚಾರ್ಯರು ಬಾಗಲಕೋಟೆಯಲ್ಲಿ ‘ವಾಸುದೇವ ವಿನೋದಿನಿ ಸಭಾ’ ಆರಂಭಿಸಿದರು. ವಾಸುದೇವಾಚಾರ್ಯರೇ ಅನುವಾದಿಸಿದ ಇಂಗ್ಲಿಷ್ ನಾಟಕಗಳನ್ನು ಪ್ರದರ್ಶಿಸಿ ಈ ಸಂಸ್ಥೆ ಜನಪ್ರಿಯತೆ ಪಡೆಯಿತು. ಇದಾದ ಮೇಲೆ ಈ ಭಾಗದಲ್ಲಿ ಹಲವಾರು ಹವ್ಯಾಸಿ ನಾಟಕ ತಂಡಗಳು ತಲೆಯೆತ್ತಿದವು. ಶ್ರೀರಂಗರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಸಂದರ್ಭದಲ್ಲಿ ಹವ್ಯಾಸಿ ರಂಗ ಚಟುವಟಿಕೆಗಳಿಗೆ ಜೋರು ಬಂದಿತು. ಅವರು ಧಾರವಾಡದಲ್ಲಿ ಕನ್ನಡ ಅಮೆಚೂರ್ಸ್ ನಾಟ್ಯಸಂಘವನ್ನು 1933 ರಲ್ಲಿ ಪ್ರಾರಂಭಿಸಿದರು. ಶ್ರೀರಂಗರ ವೈಚಾರಿಕ ನಾಟಕಗಳಿಂದ ಈ ಸಂಸ್ಥೆ ರಂಗಭೂಮಿಯ ಮೇಲೆ ಹೊಸ ಕ್ರಾಂತಿಯನ್ನೇ ಮಾಡಿತು. ಇದರಿಂದ ಸ್ಫೂರ್ತಿ ಪಡೆದು ಯುವಕರು, ಕಾಲೇಜು ವಿದ್ಯಾರ್ಥಿಗಳು, ನೌಕರರು ಶ್ರಿರಂಗರ ನಾಟಕಗಳನ್ನು ಆಡಲಿಕ್ಕೆಂದು ರಂಗಸಂಸ್ಥೆಗಳನ್ನು ಕಟ್ಟಿಕೊಂಡರು. ಬೆಳಗಾಂವಿ, ಬಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ, ಗದಗ ಮುಂತಾದ ಸ್ಥಳಗಳಲ್ಲಿ ಹವ್ಯಾಸಿ ರಂಗಚಟುವಟಿಕೆಗಳು ಭರದಿಂದ ಸಾಗಿದವು. ಶ್ರೀರಂಗರ ಶೋಕಚಕ್ರ, ಹರಿಜನ್ವಾರ, ಹುಟ್ಟಿದ್ದು ಹೊಲೆಯೂರು, ಕತ್ತಲೆ ಬೆಳಕು, ಕೇಳು ಜನಮೇಜಯ ಮುಂತಾದ ನಾಟಕಗಳು ಪ್ರೇಕ್ಷಕರಿಗೆ ಹೊಸ ಸಾಮಾಜಿಕ ಅರಿವು ಮತ್ತು ವಿಚಾರಶಕ್ತಿಯನ್ನು ತಂದುಕೊಟ್ಟವು. ಒಟ್ಟಿನಲ್ಲಿ ಕನ್ನಡ ಅಮೇಚೂರ್ಸ್ ನಾಟ್ಯ ಸಂಘ ಮತ್ತು ಕಲೋಪಾಸಕ ಮಂಡಳಿಯಿಂದ ಹವ್ಯಾಸಿ ರಂಗಭೂಮಿಯು ಚಳವಳಿಯ ರೂಪ ಪಡೆಯಿತು.
ಶ್ರೀರಂಗರ ಅನಂತರ ಜಿ.ಬಿ. ಜೋಶಿ, ಚಂದ್ರಶೇಖರ ಕಂಬಾರ, ಚಂದ್ರಕಾಂತ ಕುಸನೂರ, ಗಿರೀಶ ಕಾರ್ನಾಡ, ಚಂದ್ರಶೇಖರ ಪಾಟೀಲ, ಹೂಲಿ ಶೇಖರ ಮೊದಲಾದವರ ನಾಟಕಗಳಿಂದ ಉತ್ತರ ಕರ್ನಾಟಕದ ಹವ್ಯಾಸಿ ರಂಗಭೂಮಿ ಚೆನ್ನಾಗಿಯೇ ಬೆಳೆಯಿತು. ನೀನಾಸಂ ರಂಗ ಶಿಕ್ಷಣ ಕೇಂದ್ರದಿಂದ ತರಬೇತಿ ಪಡೆದು ಬಂದ ಕಲಾವಿದರು ನಿರ್ದೇಶಕರು ಹವ್ಯಾಸಿ ರಂಗಭೂಮಿಯನ್ನು ಜೀವಂತವಾಗಿಟ್ಟಿದ್ದಾರೆ. ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಒಂದು ಇಲ್ಲವೆ ಎರಡರಂತೆ ಹವ್ಯಾಸಿ ರಂಗತಂಡಗಳಿವೆ. ಇವು ವರುಷದಲ್ಲಿ ಎರಡು-ಮೂರು ಬಾರಿ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳುತ್ತವೆ. ಟಿ.ವಿ.ಯಿಂದಾಗಿ ಇತ್ತೀಚೆಗೆ ಹವ್ಯಾಸಿ ರಂಗಭೂಮಿಯೂ ಸೊರಗಿದಂತೆ ಕಾಣುತ್ತದೆ. ಇಲ್ಲಿಯ ಕಲಾವಿದರು ಟಿ.ವಿ. ಮತ್ತು ಸಿನಿಮಾ ಮಾಧ್ಯಮಗಳತ್ತ ಒಲಿದ ಪರಿಣಾಮವೋ, ಬದಲಾದ ಪ್ರೇಕ್ಷಕರ ಅಭಿರುಚಿಯ ಪರಿಣಾಮವೋ ಹವ್ಯಾಸಿ ರಂಗಭೂಮಿಯಲ್ಲಿ ಮೊದಲಿನ ಉತ್ಸಾಹ ಉಳಿದಿಲ್ಲ, ನೀನಾಸಂ ತಿರುಗಾಟ ರಂಗಾಯಣದ ಚಟುವಟಿಕೆಗಳು, ಅಕಾಡೆಮಿಯು ಹಮ್ಮಿಕೊಳ್ಳುವ ನಾಟಕೋತ್ಸವ ಗಳು, ಗ್ರಾಮೀಣ ಭಾಗದ ಜಾತ್ರೆ ಉತ್ಸವಗಳಲ್ಲಿ ನಡೆಯುವ ಕಂಪನಿ ಶೈಲಿಯ ನಾಟಕಗಳು ಹವ್ಯಾಸಿ ರಂಗಭೂಮಿಯನ್ನು ಮುಂದುವರೆಸಿದೆ. ಉತ್ತರ ಕರ್ನಾಟಕ ರಂಗಭೂಮಿಯ ಪ್ರಭಾವ-ಪ್ರೇರಣೆ : 1842ರಲ್ಲಿ ಕರ್ಕಿಯ ಯಕ್ಷಗಾನ ಮೇಳವು ಸಾಂಗ್ಲಿಗೆ ಭೇಟಿ ಕೊಟ್ಟು ಶ್ರೀಮಂತ ಅಪ್ಪಾಸಾಹೇಬ ಪಟವರ್ಧನರ ಆಶ್ರಯದಲ್ಲಿ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಿತು. 1849-50ರಲ್ಲಿ ಗೋಕರ್ಣದ ಯಕ್ಷಗಾನ ಮೇಳವು ಈಚಲರಂಜಿಗೆ ಹೋಗಿ ಪ್ರದರ್ಶನ ನೀಡಿತು. ಈ ರೀತಿಯ ಪ್ರದರ್ಶನಗಳಿಂದ ಪ್ರೇರಣೆ ಪಡೆದುಕೊಂಡು ಮರಾಠಿ ರಂಗಭೂಮಿ ಹುಟ್ಟಿಕೊಂಡಿತು. ಇದಕ್ಕೆ ಮರಾಠಿ ರಂಗಭೂಮಿಯ ಇತಿಹಾಸವೇ ನಿದರ್ಶನ.
ಅಣ್ಣಾಸಾಹೇಬ ಕಿರ್ಲೋಸ್ಕರರ ಸಂಗೀತ ಶಾಕುಂತಲವು 31 ಅಕ್ಟೋಬರ್ 1880ರಂದು ಪುಣೆಯಲ್ಲಿ ಪ್ರದರ್ಶನವಾಯಿತು. ಈ ನಾಟಕದಿಂದ ಮರಾಠಿಯಲ್ಲಿ ಸಂಗೀತ ನಾಟಕಗಳ ಯುಗ ಆರಂಭವಾಯಿತೆಂದು, ಅಣ್ಣಾಸಾಹೇಬ ಕಿರ್ಲೋಸ್ಕರ ಸಂಗೀತ ನಾಟಕಗಳ ಪಿತಾಮಹ ಎಂದು ಮರಾಠಿ ರಂಗಭೂಮಿ ಚರಿತ್ರೆ ವರ್ಣಿಸುತ್ತದೆ. ಆದರೆ ಅಣ್ಣಾಸಾಹೇಬ ಕಿರ್ಲೋಸ್ಕರರ ಮೇಲೆ ಶ್ರೀಕೃಷ್ಣ ಪಾರಿಜಾತದ ಪ್ರಭಾವವಿರುವುದನ್ನು ಅವರ ‘ಶಾಕುಂತಲ’ದ ಮೇಲೆ ಚುರುಮುರಿಯವರ ಶಾಕುಂತಲದ ಪ್ರಭಾವವಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ. ಸ್ವತಃ ಕಿರ್ಲೋಸ್ಕರರೇ ತನ್ನ ಶಾಕುಂತಲದೊಳಗಿನ ಹಾಡುಗಳಿಗೆ ಪಾರಿಜಾತದ ದಾಟಿಗಳನ್ನು ಸೂಚಿಸಿದ್ದಾರೆ. ಮರಾಠಿ ರಂಗಭೂಮಿಯಲ್ಲಿ ಪಾತ್ರಧಾರಿಗಳು ಸ್ವತಃ ಹಾಡುವಂತಾದುದು, ಸ್ತ್ರಿಯರು ಸ್ತ್ರೀ ಪಾತ್ರ ಮಾಡಲು ಪ್ರವೇಶಿಸಿದ್ದುದು ಕಿರ್ಲೋಸ್ಕರ ರಿಂದಲೇ ಎಂಬುದನ್ನು ಅಲ್ಲಿಯ ರಂಗಭೂಮಿ ಚರಿತ್ರೆ ದಾಖಲಿಸುತ್ತದೆ, ಆದರೆ ಈ ಎಲ್ಲ ವಿಶೇಷತೆಗಳು ಉತ್ತರ ಕರ್ನಾಟಕದ ಜನಪ್ರಿಯ ರಂಗ ಕಲೆ ಶ್ರೀ ಕೃಷ್ಣ ಪಾರಿಜಾತ ದಲ್ಲಿದ್ದವು. ಕಿರ್ಲೋಸ್ಕರರ ಮೇಲೆ ಈ ಪಾರಿಜಾತ ಅಗಾಧ ಪರಿಣಾಮ ಬೀರಿತ್ತು. ಅವರು ಮರಾಠಿಯಲ್ಲಿ ಪಾರಿಜಾತ ಬರೆದು ಆಡಲು ಯತ್ನಿಸಿದ್ದನ್ನು ನಾ.ಸಿ.ಫಡಕೆ ಉಲ್ಲೇಖಿಸಿದ್ದಾರೆ.
ಧಾರವಾಡದ ತಂತು ಪುರಸ್ಥ ನಾಟಕ ಮಂಡಳಿ (1889) ನೆರೆಯ ಆಂಧ್ರಪ್ರದೇಶಕ್ಕೆ ಹೋಗಿ ಅಲ್ಲಿ ನಾಟಕಗಳನ್ನು ಆಡಲು, ಇದರಿಂದ ಪ್ರೇರಣೆ ಪಡೆದು ಆಧುನಿಕ ಆಂಧ್ರ ರಂಗಭೂಮಿ ಹುಟ್ಟಿಕೊಂಡಿತೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಈ ರೀತಿ, ನೆರೆಹೊರೆಯ ರಂಗಭೂಮಿಗಳ ಕೊಡು ಕೊಳುವಿಕೆಯಿಂದ ಭಾರತೀಯ ರಂಗಪರಂಪರೆಯು ಶ್ರೀಮಂತವಾಗಿ ಬೆಳೆಯಲು ಸಾಧ್ಯವಾಯಿತು. (ಆರ್.ಎಂ.) ದಕ್ಷಿಣ ಕರ್ನಾಟಕದ ವೃತ್ತಿ ರಂಗಭೂಮಿ : 20ನೆಯ ಶತಮಾನ ನಾಟಕಗಳ ಯುಗ. ಪಂಡಿತರಿಂದ-ಪಾಮರರವರೆಗೆ, ಮಹಾರಾಜರಿಂದ ಕೂಲಿ ಕಾರ್ಮಿಕರವರೆಗೆ ಎಲ್ಲ ಸ್ತರದವರೂ ರಂಗಮಂದಿರದಲ್ಲಿ ಒಟ್ಟಿಗೇ ಕುಳಿತು ನಾಟಕ ನೋಡುವ ಪರಂಪರೆಯನ್ನು ಹುಟ್ಟುಹಾಕಿದ ಹೆಗ್ಗಳಿಕೆ ಈ ಶತಮಾನಕ್ಕೆ ಸಲ್ಲಬೇಕು. ಈ ರೀತಿಯ ಸಮಾನತೆ ಸಾಧ್ಯವಾಗಿದ್ದು ವೃತ್ತಿರಂಗಭೂಮಿ - ನಾಟಕ ಕಂಪನಿಗಳಿಂದ. ವೃತ್ತಿ ರಂಗಭೂಮಿ ಅಸ್ತಿತ್ವಕ್ಕೆ ಬಂದದ್ದು ಮಧ್ಯಮವರ್ಗದ ಮನರಂಜನೆಗಾಗಿ. ಕೈಗಾರಿಕಾ ಕ್ರಾಂತಿಯ ಫಲವಾಗಿ ಹೊಸದಾಗಿ ಹುಟ್ಟಿಕೊಂಡಿದ್ದ ಮಧ್ಯಮವರ್ಗ ತನ್ನದೇ ಆದ ಮಾಧ್ಯಮವೊಂದರ ಶೋಧನೆಗೆ ತೊಡಗಿ ಕಂಡುಕೊಂಡದ್ದೇ ಈ ನಾಟಕ ಕಂಪನಿಗಳು. ಭಾರತ ದೇಶವನ್ನು ಆಳುತ್ತಿದ್ದ ಬ್ರಿಟಿಷರು ಕೋಲ್ಕತ್ತಾದಲ್ಲಿ ಮೊದಲು (1775) ಇಂಗ್ಲಿಷ್ ನಾಟಕಗಳನ್ನು, ಬರಬರುತ್ತ ಸ್ಥಳೀಯ ಭಾಷೆಗಳಲ್ಲಿ ಅವುಗಳ ಅನುವಾದಿತ ನಾಟಕಗಳನ್ನು ಪ್ರದರ್ಶಿಸಿದಾಗ ರಂಗಕಲೆಯ ಬಗ್ಗೆ ಆಸಕ್ತಿ ತಾಳಿದ್ದ ಭಾರತೀಯ ಮಧ್ಯಮವರ್ಗದಲ್ಲಿ ಹೊಸ ಅರಿವು ಮೂಡಿತು. ನಿಧಾನವಾಗಿಯಾದರೂ ಪುರ್ವದಿಂದ ಪಶ್ಚಿಮಕ್ಕೆ ಈ ಗಾಳಿ ಬೀಸಿತು. ಸು. 1842ರಲ್ಲಿ ಮುಂಬಯಿನಲ್ಲಿಯೂ ಇದೇ ಮಾದರಿಯಲ್ಲಿ ನಾಟಕಗಳ ಪ್ರದರ್ಶನ ಆರಂಭವಾಯಿತು. ಮುಂಬಯಿನ ಪಾರ್ಸಿ ಜನಾಂಗದವರು ಇಂತಹ ನಾಟಕಗಳ ಪ್ರದರ್ಶನಕ್ಕಾಗಿಯೇ ರಂಗಮಂದಿರ ನಿರ್ಮಿಸಿ ಬಾಡಿಗೆ ಕೊಡಲಾರಂಭಿಸದರು. ಅನಂತರದ ದಿನಗಳಲ್ಲಿ ರಂಗಪರಿಕರಗಳನ್ನೂ ಅವರೇ ಪುರೈಸಿದರು. ಪಾರ್ಸಿಗಳು ಮೂಲತಃ ವ್ಯಾಪಾರಿಗಳು. ನಾಟಕವೊಂದು ಪ್ರದರ್ಶನ ಕಾಣಬೇಕಾದರೆ ಅದಕ್ಕೆ ಬೇಕಾದ ವ್ಯಾವಹಾರಿಕ ಶಿಸ್ತುಗಳನ್ನೆಲ್ಲ ಇದೇ ಜನಾಂಗ ಕಲ್ಪಿಸಿಕೊಟ್ಟಿದ್ದರಿಂದ ವೃತ್ತಿ ನಾಟಕ ಕಂಪನಿಗಳನ್ನು ಇತ್ತೀಚಿನ ವರ್ಷಗಳವರೆಗೆ ಪಾರ್ಸಿ ರಂಗಭೂಮಿ ಎಂದೇ ಕರೆಯುತ್ತ ಬರಲಾಯಿತು! ಸಂಸ್ಕೃತ ನಾಟಕಗಳನ್ನು ಆಧಾರವಾಗಿಟ್ಟುಕೊಂಡ ಅರಮನೆಯ ಪ್ರದರ್ಶನಗಳು ಕಲಿತ, ಕುಲೀನ ಜನತೆಯ ಮನೋರಂಜನೆಯಾದರೆ, ಕಲಿಯದವರ ಮನೋರಂಜನೆಗೆ ಜಾನಪದ ನಾಟಕಗಳಿದ್ದವು. ಆದರೆ ಮಧ್ಯಮವರ್ಗಕ್ಕೆ ಅಂದರೆ ಜನಸಾಮಾನ್ಯರಿಗೆ ಬೇರೆಯದೇ ಆದ ಸುವರ್ಣ ಮಾಧ್ಯಮವೊಂದು ಬೇಕಾಗಿತ್ತು. ಕಂಪನಿ ನಾಟಕಗಳು ಆ ಕೊರತೆಯನ್ನು ತುಂಬಿದವು. ಪ್ರಜಾಪ್ರಭುತ್ವದೆಡೆಗೆ ಸಾಗಿದ್ದ ಮೈಸೂರು ಅರಸು ಮನೆತನವೂ ಈ ಬೇಡಿಕೆಗಳಿಗೆ ಸ್ಪಂದಿಸಿತು. ಉತ್ತರ ಕರ್ನಾಟಕದಲ್ಲಿ ಮಧ್ಯಮವರ್ಗದ ಶಿಕ್ಷಿತ ಸಮುದಾಯ ಇಂತಹ ನಾಟಕ ಕಂಪನಿಗಳನ್ನು ಸ್ಥಾಪಿಸಿದ್ದರೆ, ಹಳೇ ಮೈಸೂರು ಪ್ರದೇಶದಲ್ಲಿ ಮೈಸೂರು ಅರಸರುಗಳೇ ಈ ನಾಟಕ ಕಂಪನಿಗಳನ್ನು ಸ್ಥಾಪಿಸಿ, ಕೆಲಕಾಲ ಪೋಷಿಸಿದರು.
ಜಾನಪದ ನಾಟಕಗಳಾಗಲೀ ಅಥವಾ ಅರಮನೆಗಳು ಪೋಷಿಸಿಕೊಂಡು ಬಂದ ಅದುವರೆಗಿನ ಸಂಸ್ಕೃತ ನಾಟಕಗಳಿಗಾಗಲೀ ಪ್ರಾಯೋಜಕರಿದ್ದರು. ಆದರೆ ದುಡ್ಡು ಕೊಟ್ಟು ನಾಟಕ ನೋಡುವ ಪರಿಪಾಠ ಆರಂಭವಾದದ್ದು ನಾಟಕ ಕಂಪನಿಗಳು ಅಸ್ತಿತ್ವ ಪಡೆದ ಅನಂತರ. ಹೆಚ್ಚಿನ ದರದ ಟಿಕೆಟ್ ಕೊಳ್ಳುವ ಸ್ಥಿತಿವಂತರಿಗೆ ಮುಂದಿನ ಸಾಲುಗಳಲ್ಲಿ, ಕಡಿಮೆ ದರದ ಟಿಕೆಟ್ ಕೊಳ್ಳುವ ಬಡವರಿಗೆ ಹಿಂದಿನ ಸೀಟುಗಳಲ್ಲಿ ಕುಳಿತುಕೊಂಡು ನಾಟಕ ನೋಡುವ ವ್ಯವಸ್ಥೆಯೇ ಅಂದಿನಿಂದ ಇಂದಿನವರೆಗೂ ಜಾರಿಯಲ್ಲಿರುವುದಾದರೂ, ಎಲ್ಲ ವರ್ಗದ ಜನರು ಒಂದೇ ರಂಗಮಂದಿರದಲ್ಲಿ ಕುಳಿತುಕೊಂಡು ನಾಟಕ ನೋಡುವಂತೆ ಮಾಡಿದ್ದು ಕಂಪನಿ ನಾಟಕಗಳ ಬಹುದೊಡ್ಡ ಕೊಡುಗೆ. ಪಾರ್ಸಿ ಜನಾಂಗದವರು ನಾಟಕಗಳಿಗೆ ಇಂತಹದೊಂದು ವ್ಯಾವಹಾರಿಕ ಶಿಸ್ತು ಕಲ್ಪಿಸಿದ ಅನಂತರ ಮರಾಠಿ ನಾಟಕ ಕಂಪನಿಗಳು ಹುಟ್ಟಿಕೊಂಡವು. ಹತ್ತಿಪ್ಪತ್ತು ವರ್ಷಗಳ ಅನಂತರ ಅವು ಕನ್ನಡ ನಾಡಿಗೂ ಬಂದು ಪ್ರದರ್ಶನ ಕೊಡಲಾರಂಭಿಸಿದವು. ಕರ್ನಾಟಕದೊಂದಿಗೆ ಇಂತಹದೊಂದು ಕೊಡುಕೊಳ್ಳುವಿಕೆಯ ಸಂಬಂಧ ಆದಾಗಲೇ ಸ್ಥಾಪಿತವಾಗಿತ್ತು. ಕನ್ನಡ ನಾಡಿನ ಯಕ್ಷಗಾನ ಹಾಗೂ ಕೃಷ್ಣ ಪಾರಿಜಾತ ಮರಾಠಿ ನಾಡಿನಲ್ಲಿ ಸಾಕಷ್ಟು ಪ್ರಯೋಗ ನೀಡಿದ್ದವು.
ಉತ್ತರ ಕರ್ನಾಟಕದಲ್ಲಿ ಈ ಮರಾಠಿ ನಾಟಕ ಕಂಪನಿಗಳು 18ನೆಯ ಶತಮಾನದ ಕೊನೆಯಲ್ಲಿ ಪ್ರದರ್ಶನ ನೀಡಲಾರಂಭಿಸಿದ ಮೇಲೆ ಕನ್ನಡ ನಾಡಿನ ಆ ಭಾಗದ ಕಲಾಲೋಕವೆಲ್ಲ ಮರಾಠಿಮಯವಾಯಿತು. ಇದನ್ನು ಪ್ರತಿಭಟಿಸಲೆಂದೇ ಕನ್ನಡ ಭಾಷೆಯ ಮೇಲಿನ ಪ್ರೇಮದಿಂದ ಕನ್ನಡ ನಾಟಕಗಳು ಉತ್ತರ ಕರ್ನಾಟಕದಲ್ಲಿ ಹುಟ್ಟಿಕೊಂಡರೆ(1872), ಹಳೇ ಮೈಸೂರಿನಲ್ಲಿ ಕಲೆಗೆ ಅಪಾರ ಪ್ರೋತ್ಸಾಹ ನೀಡುತ್ತಿದ್ದ ಮೈಸೂರು ಅರಸರ ಪ್ರೋತ್ಸಾಹದಿಂದಾಗಿ ಈ ನಾಟಕ ಕಂಪನಿಗಳು (1881) ಅಸ್ತಿತ್ವಕ್ಕೆ ಬಂದವು. 1812ರಿಂದಲೂ ಅರಮನೆಯ ಆಶ್ರಯದಲ್ಲಿ ಬಿಡಾರದ ದಶಾವತಾರ ಮೇಳ ಆಟವನ್ನು ಪ್ರದರ್ಶಿಸುತ್ತಿತ್ತು. ಬೆಂಗಳೂರು ಕೆಂಪೇಗೌಡ ಸಹ ಸ್ವತಃ ಯಕ್ಷಗಾನ ರಚಿಸಿದ್ದನಂತೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಅಳಿಯ ಲಿಂಗರಾಜೇ ಅರಸು ಅವರು 60ಕ್ಕೂ ಮೇಲ್ಪಟ್ಟ ಯಕ್ಷಗಾನ ರಚಿಸಿದ್ದರು. ಅವರ ಕೃತಿಗಳನ್ನು ಅರಮನೆಯಲ್ಲಿದ್ದ ನಾಟಕ ಸಂಘವೇ ಅಭಿನಯಿಸುತ್ತಿತ್ತು.
ಉತ್ತರ ಕರ್ನಾಟಕವನ್ನು ಮರಾಠಿಮಯ ಮಾಡಿದ್ದ ಮರಾಠಿ ನಾಟಕ ಕಂಪನಿಗಳು ಮೈಸೂರಿಗೆ ಬರಲು ತಡ ಮಾಡಲಿಲ್ಲ. ಮೈಸೂರು ಮಹಾರಾಜರು ಕಲೆಗೆ ನೀಡುತ್ತಿದ್ದ ಪ್ರೋತ್ಸಾಹದ ಸಂಗತಿ ಎಲ್ಲೆಡೆಯೂ ಹಬ್ಬಿತ್ತು. 1876-77ರಲ್ಲಿ ಸಾಂಗ್ಲಿಯ ಮರಾಠ ನಾಟಕ ಕಂಪನಿಯು ಸೌಭದ್ರಾ, ಶಾಕುಂತಲಾ ಎಂಬ ಮರಾಠಿ ನಾಟಕಗಳನ್ನು ಹಾಗೂ ಮುಂಬಯಿನ ಬಾಲೀವಾಲಾ ಪಾರ್ಸಿ ನಾಟಕ ಕಂಪನಿ ಮೈಸೂರಿನ ಅರಮನೆಯಲ್ಲಿ ದೊರೆ ಚಾಮರಾಜ ಒಡೆಯರ ಸಮ್ಮುಖದಲ್ಲಿ ಇಂದ್ರಸಭಾ, ಗುಲೇಬ ಕಾವಲಿ ಉರ್ದು ನಾಟಕಗಳ ಪ್ರದರ್ಶನಗಳನ್ನು ನೀಡಿತು. ಇದರಿಂದ ಪ್ರಭಾವಿತರಾದ ಮಹಾರಾಜರು, ಇಂತಹ ನಾಟಕಗಳು ಕನ್ನಡದಲ್ಲೂ ಬರಲಿ ಎಂದು ಆದೇಶ ಕೊಟ್ಟರು. ಮುಂದಿನ ದಿನಗಳಲ್ಲಿ ಮಹಾರಾಜರು ಈ ನಾಟಕಗಳ ಪ್ರದರ್ಶನವನ್ನು ಅರಮನೆಯ ಗಣ್ಯರಿಗೆ ಮಾತ್ರ ಸೀಮಿತವಾಗಿರಿಸಲಿಲ್ಲ. ಮೈಸೂರಿನ ಜನತೆ ಹಾಗೂ ಸುತ್ತಲಿನ ಗ್ರಾಮಸ್ಥರೂ ವೀಕ್ಷಿಸಲು ಅನುವಾಗುವಂತೆ ಪ್ರದರ್ಶನದ ವ್ಯವಸ್ಥೆ ಮಾಡುತ್ತಿದ್ದರು. ಅದುವರೆಗೆ ಮೈಸೂರು ಭಾಗದ ಜನತೆ ಇಂತಹ ನಾಟಕಗಳನ್ನು ನೋಡಿಯೇ ಇರಲಿಲ್ಲ. ಪಾರ್ಸಿ ನಾಟಕಗಳ ರಂಗಸಜ್ಜಿಕೆ, ವಿನ್ಯಾಸ, ವೇಷಭೂಷಣ, ಬೆಳಕಿನ ವ್ಯವಸ್ಥೆಗೆ ಜನ ಮಾರುಹೋದರು. ಕನ್ನಡ ಭಾಷೆಯಲ್ಲಿ ಇಂತಹ ನಾಟಕಗಳನ್ನು ಪ್ರದರ್ಶಿಸಬೇಕೆಂಬ ಆಸೆ ಮೊಳಕೆಯೊಡೆದದ್ದು, ಅದು ಹುರಿಗೊಂಡದ್ದು ಈ ಹಂತದ ಬೆಳೆವಣಿಗೆ. ಮರಾಠಿ ಹಾಗೂ ಪಾರ್ಸಿ ಕಂಪನಿಗಳು ಬಂದು ಹೋದ ಮೇಲೆ ಅವುಗಳ ಪ್ರಭಾವದಿಂದಾಗಿ ಅರಮನೆಯ ರಾಯಲ್ ಶಾಲೆಗೆ ಸೇರಿದ ವಿದ್ಯಾರ್ಥಿಗಳು ಪ್ರಹ್ಲಾದ ನಾಟಕವನ್ನು 1880ರಲ್ಲಿ ಪ್ರಯೋಗಾರ್ಥವಾಗಿ ಪ್ರದರ್ಶಿಸಿ ಯಶಸ್ವಿಯಾದರು. ಅನಂತರ ಆಸ್ಥಾನದ ವಿದ್ವಾಂಸರು, ಗಾಯಕರು, ರಾಯಲ್ ಶಾಲೆಯ ಅಧ್ಯಾಪಕವರ್ಗ ಒಟ್ಟಾಗಿ ಕಲೆತು ಬಸವಪ್ಪ ಶಾಸ್ತ್ರಿಗಳು ಕನ್ನಡಕ್ಕೆ ಪರಿವರ್ತಿಸಿದ ಶಾಕುಂತಲ ನಾಟಕವನ್ನು ಅಭ್ಯಾಸ ಮಾಡಿ 1881 ನವೆಂಬರ್ 9ರಂದು ದೊರೆಗಳ ಸಮ್ಮುಖದಲ್ಲಿ ಅಭಿನಯಿಸಿದರು. ಪಾರ್ಸಿ ಕಂಪನಿಗಳಂತೆ ವೇಷಭೂಷಣ, ರಂಗಸಜ್ಜಿಕೆ, ವಿನ್ಯಾಸ, ರಂಗಸಂಗೀತ ಹಾಗೂ ಬಸವಪ್ಪ ಶಾಸ್ತ್ರಿಗಳ ಸೊಗಸಾದ ಅನುವಾದದಿಂದಾಗಿ ನಾಟಕ ಕಳೆಗಟ್ಟುತ್ತದೆ. ಜನತೆಯ ನಾಡಿಮಿಡಿತ ಅರಿತ ಮೈಸೂರು ಶ್ರೀಚಾಮರಾಜೇಂದ್ರ ಒಡೆಯರ್ 1882ರಲ್ಲಿ ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ ಸ್ಥಾಪಿಸಿದರು. ಆಸ್ಥಾನ ವಿದ್ವಾನ್ ಬಸವಪ್ಪ ಶಾಸ್ತ್ರಿಗಳೇ ಸ್ವತಃ ಮುಂದೆ ನಿಂತು ಕಲಾವಿದರುಗಳಿಗೆ ತಾಲೀಮು ಮಾಡಿಸಿದರು. ಶಾಸ್ತ್ರಿಗಳ ಶ್ರೇಷ್ಠಮಟ್ಟದ ಸಾಹಿತ್ಯ ಹಾಗೂ ಸಂಗೀತ ಜನಮನ ಗೆದ್ದಿತು. ಮೈಸೂರು, ಮಂಡ್ಯ, ಬೆಂಗಳೂರು ಮುಂತಾದ ಕಡೆ ಶಾಕುಂತಲ ನಾಟಕದ ನೂರಾರು ಪ್ರದರ್ಶನಗಳಾದವು.
ಇದೇ ಸಂದರ್ಭದಲ್ಲಿ ಮಂಡ್ಯಂ ರಂಗಾಚಾರ್ಯರು ತಮ್ಮ ಸ್ನೇಹಿತರೊಡಗೂಡಿ ರಾಜಧಾನಿ ನಾಟಕ ಮಂಡಳಿ ಸ್ಥಾಪಿಸಿದರು. ಈ ಮಂಡಳಿಯ ಮುಖ್ಯ ಚೇತನಗಳ ಪೈಕಿ ಮಾದಪ್ಪ ಶಾಸ್ತ್ರಿಗಳು ಪ್ರಮುಖರು. ಅವರು ರಚಿಸಿದ ಮಕರಂದಿಕ ಪರಿಣಯ ಭಾರಿ ಜನಪ್ರಿಯವಾಯಿತು. ರಾಜಧಾನಿ ನಾಟಕ ಮಂಡಳಿ ಅರಮನೆಯ ಕಂಪನಿಯೊಳಗೇ ಪೈಪೋಟಿ ನಡೆಸಿತು. ಇಂತಹ ಪೈಪೋಟಿ ಬೇಡ ಎಂದು ಬಂiÀÄಸಿದ ಅರಮನೆಯ ವ್ಯವಹಾರ ಚತುರರು ರಾಜಧಾನಿ ನಾಟಕ ಮಂಡಳಿಯ ಎಲ್ಲ ಒಳ್ಳೆಯ ಕಲಾವಿದರ ಮನವೊಲಿಸಿ ಅರಮನೆಯ ನಾಟಕಸಭಾಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅರಮನೆ ಕಂಪನಿ ಮತ್ತಷ್ಟು ಸಮರ್ಥವಾಯಿತು. ಮಹಾರಾಜರು ಸ್ಥಾಪಿಸಿದ ಈ ನಾಟಕ ಸಭಾ ಮುಂದಿನ 35 ವರ್ಷಗಳ ಕಾಲ (1917 ರ ವರೆಗೆ) ನಾಡಿನ ಹಲವೆಡೆ ಸಂಚಾರ ಮಾಡಿ ನಾಟಕ ಪ್ರದರ್ಶಿಸುವ ವೃತ್ತಿ ಕಂಪನಿಯಾಯಿತು. ಆರಂಭದಲ್ಲಿ ಸಂಸ್ಕೃತ ಹಾಗೂ ಶೇಕ್ಸ್‌ಪಿಯರ್ನ ಇಂಗ್ಲಿಷ್ ನಾಟಕಗಳ ಅನುವಾದಗಳು ಪ್ರದರ್ಶನಗಳಾದವು. ಅರಮನೆ ಆಸರೆಯಿಂದ ಕ್ರಮೇಣ ಪ್ರತ್ಯೇಕಗೊಂಡ ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ ಮುಂದೆ ಶಾಕುಂತಲ ಕರ್ನಾಟಕ ನಾಟಕ ಸಭಾ ಆಯಿತು. 1917ಕ್ಕೆ ಈ ನಾಟಕ ಸಭಾ ತನ್ನ ಚಟುವಟಿಕೆ ಸ್ಥಗಿತಗೊಳಿಸಿದರೂ 1919ರಿಂದ ಮತ್ತೆ ಶ್ರೀ ಚಾಮುಂಡೇಶ್ವರಿ ಕರ್ನಾಟಕ ನಾಟಕ ಸಭಾ ಹೆಸರಿನಲ್ಲಿ ಪುನರಾರಂಭವಾಯಿತು. ಮಳವಳ್ಳಿ ಸುಂದರಮ್ಮ ಸೇರಿದಂತೆ ಹಲವಾರು ಕಲಾವಿದರು ಕಂಪನಿಯ ಸಾರಥ್ಯ ವಹಿಸಿ 30ರ ದಶಕದವರೆಗೂ ಕಂಪನಿಯನ್ನು ನಡೆಸಿಕೊಂಡು ಬಂದರು.
ಅರಮನೆ ನಾಟಕಸಭಾದ ಮತ್ತೊಂದು ಮುಖ್ಯ ಕೊಡುಗೆ ಎಂದರೆ, ಮೈಸೂರು ಸೀಮೆಯಲ್ಲಿ ಹಲವಾರು ನಾಟಕ ಮಂಡಳಿಗಳ ಹುಟ್ಟು. ಮುಂದಿನ ಒಂದೆರಡು ದಶಕಗಳಲ್ಲಿ ಸ್ಥಾಪನೆಯಾದ ಯಾವುದೇ ನಾಟಕ ಮಂಡಳಿ ಅಥವಾ ನಾಟಕ ಸಭಾಗಳಿಗೆ ಅರಮನೆಯ ಶ್ರೀ ಚಾಮರಾಜೇಂದ್ರ ನಾಟಕ ಸಭಾದ ಪ್ರೇರಣೆಯೇ ಕಾರಣ.
ಹಳೇ ಮೈಸೂರು ಭಾಗದಲ್ಲಿ ಮೈಸೂರು ಹೊರತುಪಡಿಸಿದರೆ, ಬೆಂಗಳೂರಿನಲ್ಲಿ ನಾಟಕ ಪ್ರಯೋಗಗಳಾದದ್ದೇ ಹೆಚ್ಚು. ವಿಕ್ಟೋರಿಯಾ ಪಾರ್ಸಿ ಕಂಪನಿ ಬೆಂಗಳೂರಿನಲ್ಲಿ 1876ರಲ್ಲೇ ನಾಟಕಗಳ ಪ್ರದರ್ಶನ ನೀಡಿತ್ತು. ಮೈಸೂರು ಮಹಾರಾಜರು ಸ್ಥಾಪಿಸಿದ ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ 1882ರಲ್ಲಿ ಹಲವು ನಾಟಕಗಳನ್ನು ಬೆಂಗಳೂರಿನಲ್ಲಿ ಪ್ರದರ್ಶಿಸಿತು. ಮಂಡ್ಯಂ ರಂಗಾಚಾರ್ ಸ್ನೇಹಿತರು ಸ್ಥಾಪಿಸಿದ ರಾಜಧಾನಿ ಸಂಗೀತ ಮೇಳ 1883ರಲ್ಲಿ ಸತ್ಯವರ್ಮ, ಹರಿಶ್ಚಂದ್ರ, ಶಾಕುಂತಲಾ, ಚಂದ್ರಹಾಸ, ಕಾಮಪಲ ಚರಿತೆ ಮುಂತಾದ ನಾಟಕಗಳನ್ನು ಬೆಂಗಳೂರಿನಲ್ಲಿ ಪ್ರಯೋಗಿಸಿತು. ಮೈಸೂರು ಯುವರಾಜ ನಂಜರಾಜ ಬಹದ್ದೂರ್ ನಾಟಕ ಕಂಪನಿ 1884-85ರಲ್ಲಿ ಹಲವಾರು ನಾಟಕಗಳನ್ನು ಪ್ರದರ್ಶಿಸಿತು. 1899ರಲ್ಲಿ ದಿ ಪಾರ್ಸಿ ಒಪೆರಾ ಟ್ರೂಪ್ ಬೆಂಗಳೂರಿನ ತುಳಸಿತೋಟದಲ್ಲಿ ಪ್ರದರ್ಶಿಸಿದ ಡಾಡಿ ಡೇರಿಯಾ ಅರ್ಥಾತ್ ‘ಖುದಾದಾದ್’ ಭಾರೀ ಹೆಸರು ಗಳಿಸಿತು.
ಬೆಂಗಳೂರಿನಲ್ಲಿ ಪ್ರದರ್ಶನ ನೀಡಿದ ಈ ಮೇಲಿನ ತಂಡಗಳೆಲ್ಲ ಹೊರಗಿನವುಗಳಾದರೆ, ಅದೇ ಕಾಲಕ್ಕೆ ಬೆಂಗಳೂರಿನಲ್ಲೇ ಶುರುವಾದ ಮೊದಲ ನಾಟಕ ಕಂಪನಿಗಳಲ್ಲಿ ಸಿದ್ದಿಕಟ್ಟೆಯ ರಸಿಕ ಮಾನಸೋಲ್ಲಾಸಿನಿ ನಾಟಕ ಸಭಾ(ಪೆರಿಸ್ವಾಮಿ ಅಯ್ಯಂಗಾರ್ 1883) ಮತ್ತು ಗೊಲ್ಲರಪೇಟೆ ನಾಟಕಸಭಾ(1883-85) ಮುಖ್ಯವಾದವು. ಆ ಕಾಲದ ಹೆಸರಾಂತ ನಟರಾದ ಎಸ್ ಎಸ್ ಸೆಟಲೂರ ಹಾಗೂ ಎನ್ ಟಿ ಗೋಪಾಲ ಅಯ್ಯಂಗಾರ್ ಮತ್ತೊಂದು ವೃತ್ತಿ ನಾಟಕ ಕಂಪನಿ ಸ್ಥಾಪಿಸಿದರು. ವೀಣೆ ವಿದ್ವಾನ್ ಗೋಪಾಲರಾವ್, ಗೌರಿನರಸಿಂಹಯ್ಯ, ಧರ್ಮದೇವಿ ನರಸಿಂಹಮೂರ್ತಿ, ತಿಮ್ಮಪ್ಪ ಮೊದಲಾದ ಹೆಸರಾಂತ ಕಲಾವಿದರು ನಟಿಸುತ್ತಿದ್ದರು. ಬೆಂಗಳೂರು ಹೆಬ್ಬಾರ್ ಶ್ರೀ ವೈಷ್ಣವರ ಆಶ್ರಯದಲ್ಲಿ ಹುಟ್ಟಿದ ರಸಿಕ ಮಾನಸೋಲ್ಲಾಸಿನಿ 1886ರಲ್ಲಿ ನಿಂತಿತು. ಗೊಲ್ಲರಪೇಟೆ ನಾಟಕ ಸಭಾದಲ್ಲಿ ಮುಖ್ಯರಾದವರು ಸಂಗೀತ ವಿದ್ವಾನ್ ತಾಯಪ್ಪನವರು, ಬಿ ರಾಚಪ್ಪ, ಪೆದ್ದ ಮುನಿಸ್ವಾಮಿ ಹಾಗೂ ಕೈವಾರ ಸಹೋದರರು. ಬಹಳ ಬೇಗ ಪ್ರಖ್ಯಾತಿಗೆ ಬಂದ ಈ ತಂಡ ಅಷ್ಟೇ ಬೇಗ ಒಡೆದು ಎರಡಾಯಿತು. ಸಂಗೀತ ವಿದ್ವಾನ್ ತಾಯಪ್ಪ, ತಿಮ್ಮಪ್ಪ ಮತ್ತಿತರ ಕಲಾವಿದರು ಸಂಗೀತ ಸಾಗರ ಚಂದ್ರೋದಯ ಸಭಾ ಕಟ್ಟಿಕೊಂಡರೆ, ಕೈವಾರ ಕೃಷ್ಣರಾವ್, ರಾಮರಾವ್ ಸಹೋದರರು ಸಿಟಿ ಒಪೆರಾ ಟ್ರೂಪ್ ಕಟ್ಟಿಕೊಂಡು, ‘ಪ್ರಭಾವತಿ ದರ್ಬಾರ್’, ಮನುಚರಿತೆ, ಹರಿಶ್ಚಂದ್ರ’ ಮುಂತಾದ ನಾಟಕಗಳನ್ನು ಪ್ರದರ್ಶಿಸಿದರು. ಬಿ ರಾಚಪ್ಪ, ನಕಲಿ ವೆಂಕಟಾಚಲಯ್ಯ ಈ ಕಂಪನಿಯ ಹೆಸರಾಂತ ನಟರು. ಸ್ವಲ್ಪ ಸಮಯದಲ್ಲೇ ಇದು ಸ್ಥಗಿತಗೊಂಡು ಪೆರಿಶಾಮಯ್ಯಂಗಾರರ ಸಂಗೀತ ಸಾಗರ ಚಂದ್ರೋದಯ ಸಭಾ ಮತ್ತು ಕೈವಾರ ಸಹೋದರರ ಸಿಟಿ ಅಪೇರಾ ಟ್ರೂಪ್ ಅಸ್ತಿತ್ವಕ್ಕೆ ಬಂದಿತು. ಇದೇ ಅವಧಿಯಲ್ಲಿ ಬೆಂಗಳೂರಿನವರೇ ಸ್ಥಾಪಿಸಿ ತುಸು ಹೆಚ್ಚು ಕಾಲ ತನ್ನ ಅದ್ದೂರಿ ಪ್ರದರ್ಶನಗಳೊಂದಿಗೆ ಅಸ್ತಿತ್ವದಲ್ಲಿದ್ದ ಕಂಪನಿ ಎಂದರೆ ವ್ಯಾಪಾರಿ ಬುಳ್ಳಪ್ಪ ಸ್ಥಾಪಿಸಿದ ನಾಟಕ ಕಂಪನಿ. ಇದರ ಕಾಲವನ್ನು 1876-89ರ ಮಧ್ಯೆ ಎಂದು ಹೇಳಲಾಗುತ್ತದೆಯಾದರೂ ಎಚ್.ಕೆ. ರಂಗನಾಥ್ ಪ್ರಕಾರ ಟ್ರೂತ್ ಪತ್ರಿಕೆಯ ಮಾಲೀಕರಾಗಿದ್ದ ಸಾಹುಕಾರ ಬುಳ್ಳಪ್ಪನವರು ಬಹುದ್ರವ್ಯವನ್ನು ವಿನಿಯೋಗಿಸಿ 1895-96ರಲ್ಲಿ ಸಂಘವೊಂದನ್ನು ಕಟ್ಟಿ ಆರೆಂಟು ವರ್ಷ ತುಂಬಾ ಯಶಸ್ವಿಯಾಗಿ ನಡೆಸಿಕೊಂಡು ಬಂದರು (ವೃತ್ತಿ ರಂಗದರ್ಶನ-ಕಸಾಪ 1993). ಗುಬ್ಬಿ ಚನ್ನಬಸವೇಶ್ವರ ಕೃಪಾ ಪೋಷಿತ ನಾಟಕ ಸಂಘ ಮೊದಲಿಗೆ ಯಕ್ಷಗಾನ ನಾಟಕಗಳನ್ನು ಪ್ರದರ್ಶಿಸುತ್ತಿತ್ತು. ಯಕ್ಷಗಾನವನ್ನು ಅದೇ ತಾನೇ ಆರಂಭವಾದ ಪಾರ್ಸಿ ನಾಟಕಗಳು ಪ್ರಭಾವಿಸಿದ್ದವು. ಹಾಗಾಗಿ ಅವು ಯಕ್ಷಗಾನ ಹಾಗೂ ನಾಟಕಗಳ ಮಿಶ್ರಣವಾಗಿ ಯಕ್ಷಗಾನ ನಾಟಕ ಎನಿಸಿಕೊಂಡಿದ್ದವು. ಕುಮಾರ ರಾಮನ ಕತೆÀ ಅಂತಹ ಒಂದು ಯಕ್ಷಗಾನ ನಾಟಕ. 1886ರಲ್ಲಿ ಬೆಂಗಳೂರಿನಲ್ಲಿ ಇದರ ಪ್ರದರ್ಶನದ ದಾಖಲೆಗಳು ಸಿಗುತ್ತವೆ (ಆಗಿನ್ನೂ ಗುಬ್ಬಿ ವೀರಣ್ಣನವರು ಈ ಕಂಪನಿ ಸೇರಿರಲಿಲ್ಲ). ವೀರಪ್ಪಶಾಸ್ತ್ರಿ ರಚಿಸಿದ ಚೋರ ಕತೆ, ಜಗನ್ಮೋಹನ ಚರಿತೆ, ಪಾಂಡವ ವಿಜಯ, ಹರಿಶ್ಚಂದ್ರ, ಇಂದ್ರಸಭಾ, ಧರ್ಮಪಾಲ ಚರಿತೆ, ಸತ್ಯವರ್ಮ ಚರಿತೆ ಮುಂತಾದ ಪೌರಾಣಿಕ ನಾಟಕಗಳು ಮುಂದಿನ ದಿನಗಳಲ್ಲಿ ಪ್ರದರ್ಶನ ಕಂಡವು. ಇವು ಪ್ರಯೋಗವಾಗುವ ಹೊತ್ತಿಗೆ ಯಕ್ಷಗಾನವು ನಾಟಕವಾಗಿ ಪರಿವರ್ತನೆಯಾಗಿದ್ದವು. ಇಲ್ಲಿ ಯಕ್ಷಗಾನ ಎಂದರೆ ಮೂಡಲಪಾಯವೂ ಹೌದು. ಮತ್ತೊಂದೆಡೆ ಯಕ್ಷಗಾನ ಪ್ರಯೋಗ ಕರಾವಳಿ ಜಿಲ್ಲೆಗಳಲ್ಲಿ ಎಂದಿನಂತೆಯೇ ಇದ್ದವು. ಮುಂದಿನ ಒಂದೆರಡು ದಶಕಗಳವರೆಗೆ ನಾಟಕಗಳಲ್ಲಿ ಮೂಡಲಪಾಯ ಅಥವಾ ಯಕ್ಷಗಾನದ ದಟ್ಟಛಾಯೆ ಇದ್ದೇ ಇತ್ತು. ಮಿಠಾಯಿ ಸಾಹುಕಾರದಂತಹ ನಗೆ ನಾಟಕವೂ ಅದೇ ಕಾಲಕ್ಕೆ ಪ್ರದರ್ಶನಗೊಂಡಿದ್ದು ಕುತೂಹಲಕಾರಿ ಬೆಳೆವಣಿಗೆಯಾಗಿ ಕಾಣುತ್ತದೆ.
ರಸಿಕ ಮಾನಸೋಲ್ಲಾಸಿನಿಯಿಂದ ಗುಬ್ಬಿ ಕಂಪನಿವರೆಗೆ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಎಲ್ಲ ನಾಟಕ ಕಂಪನಿಗಳಿಗೂ ಅದು ಸಂಕ್ರಮಣದ ಕಾಲವಾಗಿರಬೇಕು. ಬಣ್ಣದ ಪರದೆಗಳು, ವೇಷ-ಭೂಷಣ, ಪೆಟ್ರೋಮ್ಯಾಕ್ಸ್ ಲೈಟುಗಳು, ಸಂಗೀತಮಯವೇ ಆಗಿದ್ದ ಜಾಗದಲ್ಲಿ ಸಂಭಾಷಣೆಗೆ ಆದ್ಯತೆ ನೀಡಿದ್ದು ಈ ಎಲ್ಲ ಹೊಸತುಗಳಿಂದ ಮೈಸೂರು ಸೀಮೆಯ ರಂಗಭೂಮಿ ಸ್ಥಿತ್ಯಂತರ ಪಡೆದ ಕಾಲ ಅದಾಗಿರಬೇಕು. ಬೆಂಗಳೂರು ನಾಟಕ ಸಂಘ, ಸೀಡೆಡ್ ಡಿಸ್ಟ್ರಿಕ್ಟ್ ಅಸೋಸಿಯೇಶನ್ 1900ರಲ್ಲಿ, ಶ್ರೀಕಂಠೇಶ್ವರ ಕರ್ನಾಟಕ ನಾಟಕ ಸಂಘ 1907ರಲ್ಲಿ, ನಂಜಾಸಾನಿಯವರ ನಾಟಕ ಕಂಪನಿ 1908ರಲ್ಲಿ ಅಸ್ತಿತ್ವಕ್ಕೆ ಬಂತು. ನಂಜಾಸಾನಿಯವರ ನಾಟಕ ಕಂಪನಿ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲವಾದರೂ ಕಂಪನಿ ನಾಟಕ ಪರಂಪರೆ ಆರಂಭವಾದ ಎರಡು ದಶಕಗಳಲ್ಲೇ ಸ್ತ್ರೀಯರೂ ಅದರ ಸಾರಥ್ಯ ವಹಿಸಿದ್ದಕ್ಕೆ ಇದು ಉದಾಹರಣೆಯಾಗಿದೆ.
ಕವಳಪ್ಪನವರ ಶ್ರೀ ಗಂಧರ್ವ ನಾಟಕ ಮಂಡಳಿ, ಅಣ್ಣಯ್ಯಪ್ಪ, ಲಕ್ಷ್ಮೀನರಸಿಂಹರಾವ್ ನಾಟಕ ಸಂಘಗಳು, ಶ್ರೀ ಶಾರದಾ ವಿಲಾಸ ನಾಟಕ ಸಭಾ ಅನಂತರದಲ್ಲಿ ಅಸ್ತಿತ್ವಕ್ಕೆ ಬಂದ ಹಲವು ನಾಟಕ ತಂಡಗಳು. ಆದರೆ ಇವುಗಳ ಕಾಲಘಟ್ಟ ಸರಿಯಾಗಿ ತಿಳಿದುಬಂದಿಲ್ಲ. 1902ರಲ್ಲಿ ರತ್ನಾವಳಿ ಥಿಯೇಟ್ರಿಕಲ್ ಕಂಪನಿ ಸ್ಥಾಪಿಸಿ ಬೆಂಗಳೂರಿನಿಂದ ತಮ್ಮ ನಾಟಕ ಪ್ರದರ್ಶನ ಆರಂಭಿಸಿದ ನಾಟಕ ಶಿರೋಮಣಿ ವರದಾಚಾರ್ಯರು ಅದಕ್ಕೂ ಕೆಲ ಸಮಯ ಮೊದಲು ಬೆಂಗಳೂರು ಯೂನಿಯನ್ ಕಲಾವಿಲಾಸಿಗಳ ಸಂಘದಲ್ಲಿ ಅಭಿನಯಿಸಿದ್ದರ ಬಗ್ಗೆ ದಾಖಲೆ ಸಿಗುತ್ತದೆ. ಮಹಾರಾಷ್ಟ್ರದ ಕಂಪನಿ ಬೆಂಗಳೂರು ನಗರದಲ್ಲಿ ತನ್ನ ಮೊಟ್ಟ ಮೊದಲ ಕ್ಯಾಂಪ್ ಮಾಡಿದ್ದು 1905ರಲ್ಲಿ. ಇವರ ನಾಟಕಗಳ ದೃಶ್ಯ ಸಂಯೋಜನೆ, ಪರಿಕರಗಳಿಂದ ಪ್ರಭಾವ ಹೊಂದಿದ ವರದಾಚಾರ್ಯರು ಈ ಕಂಪನಿಯಲ್ಲಿ ಅನುಭವ ಪಡೆದಿದ್ದ ಕಪನೀಪತಿರಾವ್ ಅವರನ್ನು ತಮ್ಮ ಕಂಪನಿಗೆ ಕರೆದೊಯ್ದರು. ಈ ಹಂತದಲ್ಲಿ ಪ್ರಯೋಗವಾದ ಶಾಕುಂತಲ, ರತ್ನಾವಳಿ, ಮನ್ಮಥ ವಿಜಯ, ಹರಿಶ್ಚಂದ್ರ, ‘ಸತ್ಯವರ್ಮ’, ‘ಮಂದಾರದಲ್ಲಿ ಪರಿಣಯ’, ಮಾಲವಿಕಾಗ್ನಿಮಿತ್ರ, ನಿರುಪಮಾ, ‘ರಾಮವರ್ಮ ಲೀಲಾವತಿ’, ಕಾಮಪಾಲ, ‘ಪ್ರತಾಪ ಸಿಂಹ’, ‘ಸದಾರಮೆ’-ಮುಂತಾದ ಜನಪದ-ಪೌರಾಣಿಕ ನಾಟಕಗಳು ಪಕ್ಕಾ ಪಾರ್ಸಿ ಶೈಲಿಯಲ್ಲಿ ಪ್ರದರ್ಶನ ಕಂಡವು. 1876ರಿಂದ ನಿರಂತರ ಪ್ರಯೋಗಶೀಲತೆ ಮುಖಾಂತರ ಸ್ಥಿತ್ಯಂತರಕ್ಕೆ ಒಳಗಾದ ಕಂಪನಿ ನಾಟಕ ಶೈಲಿಯ ಒಂದು ನಿರ್ದಿಷ್ಟ ಹಂತ ತಲುಪಿದ್ದು ಈ ಅವಧಿಗೆ; ಅಂದರೆ 20ನೆಯ ಶತಮಾನದ ಆರಂಭಕ್ಕೆ.
ವರದಾಚಾರ್ಯ ಯುಗ : ಈ ಹಂತದಲ್ಲಿ ವರದಾಚಾರ್ಯ ಎಂಬ ಮಹಾನ್ ನಟನ ರಂಗಪ್ರವೇಶವಾಯಿತು. ತಮ್ಮ ನಟನಾ ಕೌಶಲ್ಯದ ಜತೆಗೆ ಶಿಸ್ತುಬದ್ಧವಾಗಿ ಕಂಪನಿ ನಡೆಸುವ ಕಲಾವಿದರಿಗೆ ಸೂಕ್ತ ಅವಕಾಶ ನೀಡುವ ನಾಯಕತ್ವ ಗುಣ, ರಂಗಸಂಗೀತದಲ್ಲಿ ಔಚಿತ್ಯ, ನಾಟಕದ ಪರದೆಗಳನ್ನು ಬರೆಸುವ ಚಾತುರ್ಯ ಇವೆಲ್ಲವನ್ನೂ ವರದಾಚಾರ್ಯರು ಕರಗತ ಮಾಡಿಕೊಂಡಿದ್ದರು. ನಾಯಕನ ಪಾತ್ರಕ್ಕೆ ಬೇಕಾದ ಅಂಗಸೌಷ್ಠವ, ಗಾಂಭೀರ್ಯ ಅವರಿಗಿತ್ತು. ರೂಪಕ್ಕೆ ತಕ್ಕ ಪಾಂಡಿತ್ಯವೂ ಇದ್ದಿತು. ಇದಕ್ಕೆ ಮೆರಗು ಬಂದದ್ದು ಅವರ ಕಂಠಬಲ. ಹಾಗಾಗಿ ರತ್ನಾವಳಿ ನಾಟಕ ಕಂಪನಿ ಎರಡು ದಶಕಗಳ ಕಾಲ ನಾಡಿನಾದ್ಯಂತ ಮನೆಮಾತಾಗಿತ್ತು. ರಂಜನೆ ಜತೆಗೆ ಚಿಂತನೆಗೂ ಅವರ ನಾಟಕಗಳು ಅವಕಾಶ ಮಾಡಿಕೊಟ್ಟವು.
ದಂತಕತೆಯಾದ ವರದಾಚಾರ್ಯರ ಜೀವನಶೈಲಿಯನ್ನು ಆಧರಿಸಿ ಕನ್ನಡ ಕಾದಂಬರಿ ಸಾರ್ವಭೌಮ ಅನಕೃ ‘ನಟಸಾರ್ವಭೌಮ’ ಎಂಬ ಬೃಹತ್ ಕಾದಂಬರಿ ರಚಿಸಿದ್ದಾರೆ. ಕನ್ನಡ ಕಾದಂಬರಿ ಪ್ರಕಾರದ ಕ್ಲಾಸಿಕ್ಸ್‌ಗಳಲ್ಲಿ ಒಂದಾದ ಈ ಕೃತಿ ರಚನೆಗೆ ವರದಾಚಾರ್ಯರ ವರ್ಣಮಯ ವ್ಯಕ್ತಿತ್ವವೇ ಕಾರಣ.
ಹರಿಶ್ಚಂದ್ರ, ದುಷ್ಯಂತ, ಕೀಚಕ, ಅರ್ಜುನ, ಶಿಶುಪಾಲ, ರಾವಣ, ಹಿರಣ್ಯಕಶಿಪು ಮುಂತಾದ ಧೀರೋದ್ದಾತ ಪಾತ್ರಗಳಲ್ಲಿ ವರದಾಚಾರ್ಯರು; ಹಾಸ್ಯಪಾತ್ರಗಳಿಗೆ ಕೃಷ್ಣಮೂರ್ತಿರಾಯರೂ, ಸ್ತ್ರೀ ಪಾತ್ರಗಳಲ್ಲಿ ನಾಗೇಂದ್ರರಾಯರೂ, ಬೋಧರಾಯರು, ವಿದೂಷಕ ಪಾತ್ರಗಳಲ್ಲಿ ಮರಿರಾಯರು, ಶಾಮರಾಯರು, ಜಯರಾಯರು ದಂತಕತೆಯಾಗಿಬಿಟ್ಟರು.
ಗುಬ್ಬಿ ವೀರಣ್ಣ ಯುಗ : ವರದಾಚಾರ್ಯರ ಅನಂತರ ಗುಬ್ಬಿ ವೀರಣ್ಣನವರ ಯುಗ ಆರಂಭವಾಯಿತು. ಕನ್ನಡ ರಂಗಭೂಮಿಯ ದೊಡ್ಡಣ್ಣನಾಗಿ ಬಹು ದೀರ್ಘಕಾಲ ಆಳಿದ ಗುಬ್ಬಿ ವೀರಣ್ಣನವರ ನಾಟಕ ಕಂಪನಿ ವೃತ್ತಿರಂಗಭೂಮಿಯ ಒಂದು ಮಾದರಿಯಾಗಿ ಉಳಿಯಿತು. ವೀರಣ್ಣನವರ ಸಂಘಟನಾ ಕುಶಲತೆಯೇ ಇದಕ್ಕೆ ಕಾರಣ. ವೀರಣ್ಣನವರ ಪ್ರವೇಶಕ್ಕೆ ಮುಂಚೆ ಅಂದರೆ 19ನೆಯ ಶತಮಾನದ ಅಂತ್ಯದಲ್ಲಿಯೇ ಗುಬ್ಬಿ ಚನ್ನಬಸವೇಶ್ವರ ನಾಟಕ ಕಂಪನಿ ಅಸ್ತಿತ್ವದಲ್ಲಿತ್ತು. ಆಗ ಚಂದಣ್ಣನವರ ನೇತೃತ್ವದಲ್ಲಿ ಯಕ್ಷಗಾನ ಹಾಗೂ ನಾಟಕಗಳನ್ನು ಪ್ರದರ್ಶಿಸುತ್ತಿತ್ತು. ಆದರೆ ಗುಬ್ಬಿ ಕಂಪನಿಗೆ ವೈಭವದ ದಿನಗಳು ಬಂದದ್ದು ವೀರಣ್ಣನವರ ಪ್ರವೇಶದ ಅನಂತರ.
ಪರದೆ ಎಳೆಯುವ ಕಾರ್ಮಿಕನಾಗಿ ಗುಬ್ಬಿ ಕಂಪನಿ ಪ್ರವೇಶಿಸಿದ ವೀರಣ್ಣ ಕ್ರಮೇಣ ಕಂಪನಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಅಸಂಖ್ಯಾತ ನಟ-ನಟಿಯರಿಗೆ ತರಬೇತು ನೀಡಿ, ಹಲವಾರು ನಾಟಕಕಾರರಿಂದ ಹೊಸ ನಾಟಕಗಳನ್ನು ಬರೆಯಿಸಿ, ಅದ್ದೂರಿ ಪರಿಕರಗಳಿಂದ ನಾಟಕಗಳನ್ನು ಕಳೆ ಕಟ್ಟಿಸಿದರು.
1919ರಲ್ಲಿ ಅವರು ಬಹುದೀರ್ಘ ಅವಧಿಯ ಬೆಂಗಳೂರು ಕ್ಯಾಂಪು ಐತಿಹಾಸಿಕ. ಆ ಕಾಲದಲ್ಲೇ ಕುರುಕ್ಷೇತ್ರ ನಾಟಕಕ್ಕೆ 35 ಸಾವಿರ ಖರ್ಚುಮಾಡಿ ರಂಗ ಸಜ್ಜಿಕೆ ಮಾಡಿದ ದಿಗ್ಗಜ. ಆನೆ, ಕುದುರೆ ಮುಂತಾದ ಜೀವಂತ ಪ್ರಾಣಿಗಳನ್ನು ಪ್ರಥಮ ಬಾರಿಗೆ ರಂಗದ ಮೇಲೆ ತಂದ ವೀರಣ್ಣ ಪ್ರೇಕ್ಷಕರು ಉಸಿರು ಬಿಗಿಹಿಡಿದು ನಾಟಕ ನೋಡುವಂತೆ ಮಾಡಿದರು.
ರಂಗಸಜ್ಜಿಕೆ, ಉಡುಗೆ-ತೊಡುಗೆ, ಪ್ರಸಾಧನ, ಬೆಳಕಿನ ಸಂಯೋಜನೆ, ಪ್ರಯೋಗ ತಂತ್ರ ಎಲ್ಲದರಲ್ಲೂ ವೀರಣ್ಣನವರು ಅಚ್ಚುಕಟ್ಟು. ಅದ್ದೂರಿ ರಂಗಸಜ್ಜಿಕೆ ನಿರ್ಮಿಸುವಲ್ಲಿ ವೀರಣ್ಣನವರಿಗೆ ವೀರಣ್ಣನವರೇ ಸಾಟಿ. ಬೆಂಗಳೂರು ನಗರದಲ್ಲಿ ಮೂರು ಬಾರಿ ರಂಗಮಂದಿರ ಕಟ್ಟಿಸಿದ ಕೀರ್ತಿ ಗುಬ್ಬಿ ವೀರಣ್ಣ ಕಂಪನಿಗೆ ಸಲ್ಲುತ್ತದೆ.
ಪ್ರೇಕ್ಷಕರ ನಾಡಿಮಿಡಿತ ಅರಿತಿದ್ದ ವೀರಣ್ಣ ಕಾಲಕಾಲಕ್ಕೆ ಹೊಸ ನಾಟಕಗಳನ್ನು ಬರೆಸಿದರು. ಬೆಳ್ಳಾವೆ ನರಹರಿಶಾಸ್ತ್ರಿ, ಬಿ. ಪುಟ್ಟಸ್ವಾಮಯ್ಯ, ಎಚ್.ಟಿ. ಮಹಾಂತೇಶಶಾಸ್ತ್ರಿಗಳಂತಹ ಪ್ರಖ್ಯಾತ ನಾಟಕಕಾರರು ಗುಬ್ಬಿ ವೀರಣ್ಣರಿಗಾಗಿಯೇ ಹಲವಾರು ನಾಟಕಗಳನ್ನು ರಚಿಸಿಕೊಟ್ಟರು. ಎಂ.ಎನ್. ಗಂಗಾಧರರಾಯ, ಸುಬ್ಬಯ್ಯ ನಾಯ್ಡು, ಮಳಪಳ್ಳಿ ಸುಂದರಮ್ಮ, ಜಿ. ನಾಗೇಶರಾಯ, ವಾಸುದೇವರಾವ್, ಸಿ.ಬಿ. ಮಲ್ಲಪ್ಪ, ಅಶ್ವತ್ಥಮ್ಮ, ಜಯಮ್ಮ, ಗುರುಮೂರ್ತಪ್ಪ, ಜಿ.ವಿ. ಸುಂದರಮ್ಮ, ಜಿ.ವಿ. ಸ್ವರ್ಣಮ್ಮ, ಜಿ.ವಿ. ಮಾಲತಮ್ಮ, ರಂಗನಾಯಕಮ್ಮ, ಚಿಕ್ಕ ಬಸವರಾಜು, ದೊಡ್ಡ ಬಸವರಾಜು, ಕೊಟ್ಟೂರುಪ್ಪ, ಸಿಂಗನಲ್ಲೂರು ಪುಟ್ಟಸ್ವಾಮಯ್ಯ, ಬಿ ವಿ ಕಾರಂತ, ಜಿ ವಿ ಐಯ್ಯರ್, ಮುತ್ತುರಾಜ್, ರಾಜ್ಕುಮಾರ್ ಗುಬ್ಬಿ ಕಂಪನಿಯಲ್ಲಿ ಅರಳಿದ ಪ್ರತಿಭೆಗಳು. ಇಂತಹ ಅಸಾಮಾನ್ಯ ಕಲಾವಿದರು ತಮ್ಮ ಇಡೀ ಪ್ರತಿಭೆಯನ್ನು ಧಾರೆ ಎರೆದು ಗುಬ್ಬಿ ಕಂಪನಿಯ ಕೀರ್ತಿ ಆಚಂದ್ರಾರ್ಕವಾಗುವಂತೆ ಮಾಡಿದರು.
ಜಾನಪದ ಕಥಾವಸ್ತುವುಳ್ಳ ಸದಾರಮೆ, ಗುಲೇಬಕಾವಲಿ, ಪ್ರಭಾಮಣಿ ವಿಜಯ; ಮಹಾಭಾರತ-ರಾಮಾಯಣ ಆಧರಿಸಿದ ಕುರುಕ್ಷೇತ್ರ, ಸುಭದ್ರಾ ಕಲ್ಯಾಣ, ದಶಾವತಾರ, ಲವಕುಶ, ಶ್ರೀಕೃಷ್ಣಲೀಲೆ, ಸಾಮಾಜಿಕ ನಾಟಕಗಳಾದ ಸಾಹುಕಾರ, ಅಣ್ಣತಮ್ಮ; ಕನ್ನಡದ ಪ್ರಥಮ ಕವಿಯಿತ್ರಿ ಅಕ್ಕನ ಕುರಿತ ಅಕ್ಕಮಹಾದೇವಿ-ಮುಖ್ಯವಾದ ನಾಟಕಗಳು. ಐತಿಹಾಸಿಕ ನಾಟಕಗಳ ಪ್ರಯೋಗ ತುಸು ಕಡಿಮೆಯಾದರೂ ಎಲ್ಲ ಪ್ರಕಾರದ ನಾಟಕಗಳು ಗುಬ್ಬಿ ವೀರಣ್ಣ ಮಂಡಳಿಯಲ್ಲಿ ಅಭಿನಯಿಸಲ್ಪಟ್ಟವು.
ಮಕ್ಕಳ ರಂಗಭೂಮಿಯಲ್ಲಿ ಇಂದಿಗೂ ನಿರೀಕ್ಷೆಯಷ್ಟು ಕೆಲಸ ಆಗಿಲ್ಲ. ಆದರೆ ವೀರಣ್ಣನವರು 1925ರಲ್ಲೇ ಮಕ್ಕಳಿಗಾಗಿ ಬಾಲಕಲಾವಿವರ್ಧಿನಿ ಎಂಬ ತಂಡ ಕಟ್ಟಿದ್ದರು. ಬೆಳ್ಳಾವೆ ಅವರು ಮಕ್ಕಳಿಗಾಗಿ ಶ್ರೀಕೃಷ್ಣ ಪಾರಿಜಾತ, ಜಲಂಧರ, ಕೃಷ್ಣ ಗಾರುಡಿ, ಭಾಮಾ ಪರಿಣಯ ಎಂಬ ನಾಟಕಗಳನ್ನು, ಭೀಮರಾಜು ಅವರು ಸಾವಿತ್ರಿ, ಕಬೀರ್ಲೀಲೆ ನಾಟಕಗಳನ್ನು ರಚಿಸಿಕೊಟ್ಟಿದ್ದರು.
ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮುಂಬಯಿ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಹಲವು ಬಾರಿ ಪ್ರವಾಸ ಮಾಡಿ ಹಲವು ತಿಂಗಳುಗಳ ಕಾಲ ನಾಟಕ ಪ್ರದರ್ಶಿಸಿದ ವೀರಣ್ಣ ತಮ್ಮ ಕಂಪನಿಗೆ ಅಖಿಲ ಭಾರತದ ವ್ಯಕ್ತಿತ್ವ ನೀಡಿದರು.
1919ರಿಂದ 7 ವರ್ಷಗಳ ಕಾಲ ಚೆನ್ನೈ, ಮಹಾರಾಷ್ಟ್ರದಲ್ಲಿ ಹಲವು ಬಾರಿ ಪ್ರವಾಸ ಮಾಡಿದ್ದರು. ಕೊಯಮತ್ತೂರು, ಚೆನ್ನೈ, ಮದುರೆ, ಈರೋಡು ಸುತ್ತಲಿನ ಹಲವಾರು ಪಟ್ಟಣಗಳಲ್ಲಿ ಸದಾರಮೆ, ಸುಭದ್ರಾ ಪರಿಣಯ, ಪ್ರಹ್ಲಾದ ಚರಿತ್ರೆ ಜನಪ್ರಿಯವಾದವು. ಸದಾರಮೆ, ಕುರುಕ್ಷೇತ್ರ, ಕೃಷ್ಣಲೀಲೆ ನಾಟಕಗಳು 1935ರಲ್ಲಿ ಮುಂಬಯಿ ಕನ್ನಡಿಗರ ಮನೆ ಮಾತಾಯಿತು. ಆಂಧ್ರಪ್ರದೇಶದ ವಾರಂಗಲ್, ಬೆಜವಾಡ, ರಾಜಮಹೇಂದ್ರಿ, ವಿಜಯನಗರ, ಗುಂಟೂರು ಮುಂತಾದ ಕಡೆ ಕನ್ನಡ ನಾಟಕಗಳಿಗೆ ಸಿಕ್ಕ ಪ್ರೋತ್ಸಾಹದಿಂದ ಉತ್ಸುಕರಾದ ವೀರಣ್ಣನವರು ತೆಲುಗು ಭಾಷೆಗೆ ಅನುವಾದಿಸಿ ನಾಟಕ ಪ್ರದರ್ಶಿಸಿದರು. ತೆಲುಗು ಪ್ರದೇಶದಲ್ಲಿ ಕನ್ನಡ ನಾಟಕಗಳಿಗೇ ಇಷ್ಟೊಂದು ಬೆಲೆ ಇರುವಾಗ ತೆಲುಗು ಭಾಷೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಬಹುದು ಎಂಬ ಅವರ ಊಹೆ ನಿಜವಾಯಿತು. ಹೈದರಾಬಾದ್ನಲ್ಲಿ ಸತತ 5 ತಿಂಗಳು ನಾಟಕ ಪ್ರದರ್ಶಿಸಿ ಕರ್ನಾಟಕಾಂಧ್ರ ನಾಟಕ ಸಾರ್ವಭೌಮ ಬಿರುದಾಂಕಿತರಾದರು.
ವೀರಣ್ಣ ಸಂಘಟನಾ ಚತುರರು ಮಾತ್ರವಲ್ಲ, ಉತ್ತಮ ನಟರೂ ಹೌದು. ಅವರ ಅಭಿನಯದಲ್ಲಿ ಒಂದು ವಿಶೇಷತೆ ಇತ್ತು. ಸದಾರಮೆಯಲ್ಲಿ ಕಳ್ಳ ಮತ್ತು ಆದಿಮೂರ್ತಿ ಪಾತ್ರಗಳಿಗೆ ವೀರಣ್ಣನವರೇ ಒಂದು ವಿಶೇಷ ಶೈಲಿ ನಿರ್ಮಿಸಿದರು. ‘ಗುಲೇಬಕಾವಲಿ’ಯಲ್ಲಿ ವೀರಣ್ಣನವರು ಅಭಿನಯಿಸುತ್ತಿದ್ದ ಮುತ್ತುಸ್ವಾಮಿ, ಜಯಮ್ಮನವರ ಮೋಹಶಾಸನೆ ಪಾತ್ರಕ್ಕೆ ಜನ ಮುಗಿಬೀಳುತ್ತಿದ್ದರು. ಪ್ರಭಾಮಣಿ ವಿಜಯದ ಅವರ ವೀರೋಚನ ಹಾಗೂ ಜಯಮ್ಮನವರ ತಾರಾಮಂಜರಿ ಪಾತ್ರವೂ ಅಷ್ಟೇ ಪ್ರಸಿದ್ಧಿ. ಸುಭದ್ರಾ ಪರಿಣಯದಲ್ಲಿ ವೀರಣ್ಣನವರ ಬ್ರಾಹ್ಮಣ ಪಾತ್ರದ್ದು ಮತ್ತೊಂದು ವಿಶೇಷ.
‘ಕನ್ನಡ ವೃತ್ತಿ ರಂಗಭೂಮಿ ಇತಿಹಾಸದಲ್ಲಿ ಗುಬ್ಬಿ ಕಂಪನಿಯ ಆಯಸ್ಸು ದೊಡ್ಡದು, ಅಷ್ಟೇ ದೊಡ್ಡದು ಅವರ ಸಾಧನೆ. ಇಷ್ಟು ದೀರ್ಘಕಾಲ ಒಬ್ಬ ವ್ಯಕ್ತಿ ನೇತೃತ್ವದಲ್ಲಿ ಬಾಳಿದ ವೃತ್ತಿ ನಾಟಕ ಕಂಪನಿ ಭಾರತದಲ್ಲಿ ಅಷ್ಟೇ ಅಲ್ಲ, ಪ್ರಪಂಚದಲ್ಲಿಯೇ ಇಲ್ಲ ಎಂದರೆ ಅತಿಶಯೋಕ್ತಿ ಆಗಲಾರದು’ ಎನ್ನುತ್ತಾರೆ ಗುಬ್ಬಿ ಕಂಪನಿ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿರುವ ಸಿಂಧುವಳ್ಳಿ ಅನಂತಮೂರ್ತಿ. ಕವಲಪ್ಪನವರ ಶ್ರೀಗಂಧರ್ವ ನಾಟಕ ಮಂಡಳಿ, ರಂಗನಾಥ ಮೊದಲಿಯಾರರ ಶ್ರೀಶಾರದಾ ವಿಲಾಸ ನಾಟಕ ಮಂಡಳಿ (1917), ದೊಡ್ಡಮಲ್ಲಪ್ಪನವರ ಶ್ರೀಸಾಮ್ರಾಜ್ಯ ನಾಟಕ ಮಂಡಳಿ(1920), ರಸಿಕ ಜನಾನಂದ ನಾಟಕ ಸಭಾ(1922), ಕನಕಲಕ್ಷ್ಮಮ್ಮ ಮತ್ತು ಪ್ರೇಮಿಗಳು ಸ್ಥಾಪಿಸಿದ ಶ್ರೀ ವರದಾಚಾರ್ಯ ಸ್ಮಾರಕ ಕಲಾಸಂಘ(1926), ಸುಗುಣ ಬೋಧಕ ಸಮಾಜ, ಬೆಂಗಳೂರು(1932), ತುಮಕೂರು ಸೀತಾರಾಮಯ್ಯನವರ ಸೀತಾಮನೋಹರಿ ಕಂಪನಿ(1934), ಪೈಲ್ವಾನ್ ಅಣ್ಣಯ್ಯಪ್ಪ ಮತ್ತು ತಮಾಷ್ ಮಾಧವರಾವ್ ಅವರ ಕಲಾಸೇವಾ ಮಂಡಳಿ(1934), ಡಿ.ಮುರಾರಾಚಾರ್ಯರ ಶ್ರೀ ಚಂದ್ರಮೌಳೇಶ್ವರ ನಾಟಕ ಮಂಡಳಿ (1940), ಗುರುರಾಜ ನಾಟಕ ಮಂಡಳಿ, ಕುಕನೂರು ಕಂಪನಿ, ಕಂಠೀರವ ಕಲಾವಿದರು, ಸಾಮ್ರಾಜ್ಯ ಲಕ್ಷ್ಮೀ ನಾಟಕ ಸಭಾ, ಆನಂದ ಕಲಾಮಿತ್ರ ಮಂಡಳಿ, ಶ್ರೀರಂಗ ಕಲಾನಾಟಕ ಸಂಘ, ಬೇಗೂರು ಕೃಪಾಪೋಷಿತ ನಾಟಕ ಸಭಾ, ಕೆಂಪೇಗೌಡ ನಾಟಕ ಮಂಡಳಿ, ಆನಂದರಾಮ ಸೇವಾ ಸಂಘ-ಇವೇ ಮುಂತಾದವು ಆ ಕಾಲದಲ್ಲಿ ನಾಟಕ ಪರಂಪರೆಯನ್ನು ಯಶಸ್ವಿಯಾಗಿ ಮುಂದವರಿಸಿದ ತಂಡಗಳು.
ರಂಗೇರಿದ ಭಕ್ತಿ ಪ್ರಧಾನ ನಾಟಕಗಳು : ಕಬೀರದಾಸ ಗುಬ್ಬಿ ಕಂಪನಿಯ ಮತ್ತೊಂದು ಪ್ರಸಿದ್ಧ ನಾಟಕ. ಸಿ.ಬಿ. ಮಲ್ಲಪ್ಪನವರ ಕಬೀರದಾಸನ ಪಾತ್ರ ಅದಕ್ಕೆ ಕಾರಣ. ಕಬೀರನ ಪ್ರಸಿದ್ಧಿಯನ್ನು ನೆಚ್ಚಿಕೊಂಡೇ ಮಲ್ಲಪ್ಪ ಶ್ರೀಚಂದ್ರಮೌಳೇಶ್ವರ ನಾಟಕ ಸಭಾ ಎಂಬ ಮತ್ತೊಂದು ಕಂಪನಿ ಮಾಡಿದ್ದರು. ಗುಬ್ಬಿ ಕಂಪನಿ ಮೂಲಕ ಹಾಗೂ ಮಲ್ಲಪ್ಪನವರ ಕಂಪನಿ ಮೂಲಕ ಹಳೇ ಮೈಸೂರು ಭಾಗದ ರಂಗರಸಿಕರಿಗೆ ಭಕ್ತಿ ಪ್ರಧಾನ ನಾಟಕವನ್ನು ಹೇಗೆ ಕಳೆಗಟ್ಟಿಸಬಹುದು ಎಂಬುದರ ಪರಿಚಯವಾಯಿತು. ಕಬೀರದಾಸ, ತುಕಾರಾಮ, ತುಳಸೀದಾಸ ಪಾತ್ರಗಳನ್ನು ಅತ್ಯಂತ ಮನೋಜ್ಞವಾಗಿ ಅಭಿನಯಿಸುತ್ತಿದ್ದ ಮಲ್ಲಪ್ಪನವರಿಗೆ ಅಭಿನವ ಭಕ್ತಶಿರೋಮಣಿ ಎಂದು ಪ್ರೇಕ್ಷಕರು ಗೌರವ ಸಲ್ಲಿಸಿದರು. ರಂಗಗೀತೆಗಳನ್ನು ಹಾಡುವುದರಲ್ಲೂ ಮಲ್ಲಪ್ಪನವರದು ದೊಡ್ಡ ಹೆಸರು. ಅವರ ಹಾಡುಗಳಿಗೆ ಮಾರುಹೋದ ಮೈಸೂರು ಮಹಾರಾಜರು ಹಲವು ಬಾರಿ ತಮ್ಮ ಆಸ್ಥಾನಕ್ಕೆ ಕರೆಸಿಕೊಂಡು ಸಂಗೀತ ಕಚೇರಿಗಳನ್ನೇ ಮಾಡಿಸಿದ್ದರು.
ಮಹಮ್ಮದ್ ಪೀರ್ ವೃತ್ತಿ ಕಂಪನಿಯ ಮತ್ತೊಂದು ದಂತಕತೆ, ಷಹಜಹಾನ್ ನಾಟಕ ಪ್ರದರ್ಶನದೊಂದಿಗೆ ಅವರು ತಮ್ಮ ಚಂದ್ರಕಲಾ ನಾಟಕ ಕಂಪನಿ ಆರಂಭಿಸಿದರು. ಗೌತಮ ಬುದ್ಧ ಅವರ ಕಂಪನಿಯ ಮತ್ತೊಂದು ಯಶಸ್ವಿ ನಾಟಕ. ಶ್ರೇಷ್ಠ ನಟರ ಸಾಲಿಗೆ ಸೇರಿದ ಪೀರ್ ಅವರು ಅಭಿನಯ, ಸಂಗೀತ, ಪರಿಕರ ಬಳಕೆಯಲ್ಲಿ ಔಚಿತ್ಯ ತಂದು ಕನ್ನಡ ನಾಟಕ ಕಂಪನಿ ಪರಂಪರೆಗೆ ಘನತೆ ತಂದುಕೊಟ್ಟರು. ಪೌರಾಣಿಕ ಪಾತ್ರಗಳ ವಿಜೃಂಭಣೆಯ ಕಾಲದಲ್ಲಿ ಷಹಜಹಾನ್, ಬುದ್ಧನಂತಹ ಪಾತ್ರಗಳನ್ನು ಅದೇ ಪ್ರಥಮ ಬಾರಿಗೆ ರಂಗದ ಮೇಲೆ ಅಜರಾಮರಗೊಳಿಸಿದರು. ಪೀರ್ ಅಕಾಲ ಮರಣವನ್ನಪ್ಪಿದರೂ ತಮ್ಮ ಅಲ್ಪ ಜೀವಿತ ಕಾಲದಲ್ಲೇ ರಂಗಭೂಮಿಯ ಶಾಶ್ವತ ಉನ್ನತಿಗೆ ಶ್ರಮಿಸಿದರು.
ಅಭಿನಯ ಮಾದರಿಗೆ ಒಂದು ಗತ್ತುಗಾರಿಕೆ ಮತ್ತು ಘನತೆ ತಂದುಕೊಟ್ಟ ಮತ್ತೊಬ್ಬ ನಟ ಸುಬ್ಬಯ್ಯ ನಾಯ್ಡು. ಬೆಂಗಳೂರಿನಲ್ಲಿ ಇವರು ಸ್ಥಾಪಿಸಿದ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ತನ್ನ ಚಟುವಟಿಕೆ ಆರಂಭಿಸಿದ್ದು 1932ರಲ್ಲಿ. ಆರ್ ನಾಗೇಂದ್ರರಾಯರು, ಎಂ.ಎಸ್. ಸುಬ್ಬಣ್ಣ, ಲಕ್ಷ್ಮೀಬಾಯಿ, ಕಮಲಾಬಾಯಿ ಮುಂತಾದ ಅಭಿನೇತ್ರಿಗಳನ್ನು ಚಿತ್ರರಂಗದಿಂದ ನಾಯ್ಡು ವಾಪಸ್ ಕರೆತಂದರು. ಭೂಕೈಲಾಸ, ಕೀಚಕವಧೆ, ರಾಮಾಯಣ, ದಕ್ಷಯಜ್ಞ, ಸದಾರಮೆ, ನಿರುಪಮಾ, ಲಂಕಾದಹನ ಇವರ ಕಂಪನಿಯ ಅತ್ಯಂತ ಜನಪ್ರಿಯ ನಾಟಕಗಳು. ಸೊಲ್ಲಾಪುರ, ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಹಲವು ಬಾರಿ ಕ್ಯಾಂಪ್ ಮಾಡಿದ ಹೆಗ್ಗಳಿಕೆ ಈ ಕಂಪನಿಯದು. ಸುಬ್ಬಯ್ಯನಾಯ್ಡು ಕಂಪನಿಯ ಬಣ್ಣದ ಸೀನರಿ. ವಿವಿಧ ವರ್ಣದ ನೆರಳು-ಬೆಳಕಿನ ವೈಖರಿಯನ್ನು ಹಳೇ ಮೈಸೂರಿನ ಹಳೆ ತಲೆಮಾರಿನ ಜನ ಇನ್ನೂ ಮರೆತಿಲ್ಲ. ತಿರುಗುವ ರಂಗಭೂಮಿ ಶ್ರೀ ಸುಬ್ಬಯ್ಯನಾಯ್ಡು ಅವರ ಅದ್ಭುತ ಪ್ರಯೋಗ. ಒಂದು ದೃಶ್ಯ ಆದ ಬಳಿಕ ಇನ್ನೊಂದು ದೃಶ್ಯಕ್ಕೆ ಸ್ಟೇಜ್ ತಿರುಗಿಕೊಳ್ಳುವುದು. ಪರದೆ ಎಳೆವ ತೆಗೆವ ಅಗತ್ಯವಿರಲಿಲ್ಲ. ಶ್ರೀರಾಮ ಜನನ ಇಲ್ಲಿ ಪ್ರಯೋಗಗೊಂಡ ನಾಟಕ. ಮತ್ತೂ ಮರೆಯಲಾರದ ಸಂಗತಿ ಎಂದರೆ ಆಕರ್ಷಕ ಶರೀರ, ಶಾರೀರ ಹೊಂದಿದ್ದ ಸುಬ್ಬಯ್ಯನಾಯ್ಡು ಅವರ ಅಭಿನಯದ ಮಾದರಿ.
ಮೈಸೂರು ಮಹಾರಾಜರು ಸ್ಥಾಪಿಸಿದ್ದ ಚಾಮುಂಡೇಶ್ವರಿ ಕರ್ನಾಟಕ ನಾಟಕ ಸಭಾದ ಮಾಲೀಕತ್ವವನ್ನು ರಾಜರು ಬಿಟ್ಟುಕೊಟ್ಟ ಅನಂತರ 1946ರ ವರೆಗೂ ಹಲವಾರು ಕಲಾವಿದರು ಆ ಕಂಪನಿಯನ್ನು ನಡೆಸಿಕೊಂಡು ಬಂದರು. ಅಭಿನಯ ವಿಶಾರದೆ ಮಳವಳ್ಳಿ ಸುಂದರಮ್ಮ ಅವರೂ ಒಮ್ಮೆ ಈ ಕಂಪನಿಯ ಸಾರಥ್ಯ ವಹಿಸಿಕೊಂಡು ಯಶಸ್ವಿಯಾಗಿ ನಡೆಸಿದರು.
ಈ ಮೂಲಕ ಕಂಪನಿ ಮಾಲೀಕತ್ವವನ್ನು ಯಶಸ್ವಿಯಾಗಿ ನಿಭಾಯಿಸಿದ ಉತ್ತರ ಕರ್ನಾಟಕದ ರಂಗನಟಿಯರ ಉಜ್ವಲ ಇತಿಹಾಸದ ಸಾಲಿನಲ್ಲಿ ಸುಂದರಮ್ಮ ಅವರೂ ಸೇರಿದರು (ಪುರುಷನಿಗೆ ಸರಿಸಾಟಿಯಾಗಿ ಕಂಪನಿ ಮಾಲೀಕತ್ವ ವಹಿಸಿಕೊಂಡು ಹೆಣಗಿದ ಪರಂಪರೆ ಉತ್ತರ ಕರ್ನಾಟಕದಲ್ಲಿ 20ನೆಯ ಶತಮಾನದ ಆರಂಭದಿಂದಲೇ ಇತ್ತು).
ಸಂಪುರ್ಣ ಆಡುಭಾಷೆಯಲ್ಲೇ ನಾಟಕ: ಸೀತಾಮನೋಹರ ನಾಟಕ ಕಂಪನಿ, ಗುಬ್ಬಿ ಕಂಪನಿ, ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿಗಳಲ್ಲಿ 15 ವರ್ಷ ನಟನಾಗಿ ಅನುಭವ ಪಡೆದ ಹಿರಣ್ಣಯ್ಯನವರು ಮೈಸೂರಿನಲ್ಲಿ 1942ರಲ್ಲಿ ಮಿತ್ರಮಂಡಳಿ ಸ್ಥಾಪಿಸಿದರು. 1944ರಲ್ಲಿ ಪ್ರಥಮ ಪ್ರಯೋಗ ಕಂಡ ಕೆ ಹಿರಣ್ಣಯ್ಯನವರ ದೇವದಾಸಿ ವೃತ್ತಿರಂಗಭೂಮಿಯ ಮತ್ತೊಂದು ಮೈಲಿಗಲ್ಲು. ತಾವೇ ರಚಿಸಿದ ಈ ನಾಟಕದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಹಿರಣ್ಣಯ್ಯ ಪ್ರೇಕ್ಷಕರ ಮನೋಭಿತ್ತಿಯಲ್ಲಿ ಅಚ್ಚಳಿಯದೆ ಉಳಿದಿತ್ತು.
ಇದರ ಬೆನ್ನ ಹಿಂದೆಯೇ ಬಂದ ಪಂಗನಾಮ, ಮಕ್ಮಲ್ ಟೋಪಿ ನಾಟಕಗಳು ಹಾಸ್ಯ, ವಿಡಂಬನೆಯ ಹೊಸದೊಂದು ಪ್ರಕಾರಕ್ಕೆ ನಾಂದಿಯಾಯಿತು. ಕೈಲಾಸಂರಂತೆ ನಾಟಕದಲ್ಲಿ ಆಡುಭಾಷೆಯನ್ನು ಕೆ. ಹಿರಣ್ಣಯ್ಯನವರು ಯಶಸ್ವಿಯಾಗಿ ಬಳಸಿದರು. ಕೆ. ಹಿರಣ್ಣಯ್ಯ ಆರಂಭಿಸಿದ ಈ ಹಾಸ್ಯ ನಾಟಕ ಪರಂಪರೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದವರು ಅವರ ಪುತ್ರ ಮಾಸ್ಟರ್ ಹಿರಣ್ಣಯ್ಯವರು. ನಾಟಕ ಕಂಪನಿ ಎಂದರೆ ಏಳು-ಬೀಳು ಸಹಜವಾದದ್ದು. ಹಿರಣ್ಣಯ್ಯನವರೂ ಇದಕ್ಕೆ ಹೊರತಾಗಿರಲಿಲ್ಲ. ತಂದೆಯ ನಾಟಕ ಕಂಪನಿಯ ಏರಿಳಿತ ಕಂಡು ಮಗ ಬೆಚ್ಚಿಹೋದರು. ತಂದೆಯ ನಾಟಕ ಕಂಪನಿ ತೀವ್ರ ಸಂಕಟಕ್ಕೆ ಸಿಲುಕಿದಾಗ ಮಾಸ್ಟರ್ ನಲುಗಿಹೋದರು. ಈ ನಾಟಕದ ಸಹವಾಸವೇ ಬೇಡ ಎಂದು ದೂರ ಸರಿದರು.
ಅಂತಹ ಹೊತ್ತಿನಲ್ಲಿ ಮಾಸ್ಟರ್ ಹಿರಣ್ಣಯ್ಯನವರಲ್ಲಿ ಧೈರ್ಯ ತುಂಬಿ ಮತ್ತೆ ನಾಟಕಕ್ಕೆ ಕರೆ ತಂದವರು ಸಾಹಿತಿಗಳಾದ ಅನಕೃ, ಬೀಚಿ, ರಾಮಮೂರ್ತಿ ಹಾಗೂ ಕಿಡಿ ಶೇಷಪ್ಪನವರು. ಈ ಘಟನೆ ನಡೆದದ್ದು 1953ರಲ್ಲಿ. ನಟನಾಗಿ ಬಳ್ಳಾರಿ ಲಲಿತಮ್ಮನವರ ಕಂಪನಿಯಲ್ಲಿ ಮತ್ತೆ ಪ್ರವೇಶ ಮಾಡಿದ್ದ ಹಿರಣ್ಣಯ್ಯ ಅನಂತರ ಅದರ ಪಾಲುದಾರರೂ ಆದರು. ಮುನಿರಂಗಪ್ಪನವರ ಸಹಭಾಗಿತ್ವದಲ್ಲಿ ಮತ್ತೊಂದು ಕಂಪನಿ ತೆರೆದು ಕೆಲ ಕಾಲ ನಡೆಸಿದರು. 1960ರ ಹೊತ್ತಿಗೆ ಮತ್ತೆ ಹಿರಣ್ಣಯ್ಯ ಮಿತ್ರಮಂಡಳಿಯನ್ನು ಪುನರಾರಂಭಿಸಿದರು.
1963ರಲ್ಲಿ ತಾವೇ ರಚಿಸಿ, ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ‘ಲಂಚಾವತಾರ’ ರಾಜಕೀಯ ವಿಡಂಬನೆಯ ಹೊಸ ಹಾದಿ ನಿರ್ಮಿಸಿತು. ಇದು ಹಿರಣ್ಣಯ್ಯ ಮಿತ್ರ ಮಂಡಳಿಯ ಅತ್ಯಂತ ಯಶಸ್ವಿ ನಾಟಕ. ಕಳೆದ 40 ವರ್ಷಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಪ್ರಯೋಗ ಕಂಡಿದೆ. ಹಾಸ್ಯ, ವಿಡಂಬನೆಯ, ಸಂಭಾಷಣಾ ಪ್ರಧಾನವಾದ ತಮ್ಮದೇ ಆದ ಶೈಲಿಯೊಂದನ್ನು ನಿರ್ಮಿಸಿದವರು ಮಾಸ್ಟರ್ ಹಿರಣ್ಣಯ್ಯ. ಅವರು ಆಕರ್ಷಕ ಮಾತುಗಾರರು. ಪ್ರಚಲಿತ ಘಟನಾವಳಿಗೆ ಆಧರಿಸಿ, ಟೀಕಾಸ್ತ್ರಗಳ ಪ್ರಯೋಗ, ಪುನರಾವರ್ತನೆಯಲ್ಲಿ ವಿನೂತನ ಅನುಭವ ಎನ್ನಲಾಗುತ್ತದೆಯೇ ಎನ್ನುವವರಿದ್ದಾರೆ. ಆದರೆ ಮಾತುಗಾರಿಕೆಯೇ ಒಂದು ನಾಟಕವೂ ಆಗಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಮಹಿಳೆಯರೇ ನಾಟಕ ಕಂಪನಿ ನಡೆಸಿದ ಉಜ್ವಲ ಪರಂಪರೆಯ ಮುಂದುವರಿಕೆಯಾಗಿ ಆರ್. ನಾಗರತ್ನಮ್ಮನವರು 1958ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಿದ ಸ್ತ್ರೀ ನಾಟಕ ಮಂಡಳಿ ಪ್ರಮುಖವಾದುದು. ಆದರೆ ಸರಿಯಾದ ಮಾಹಿತಿ ಇಲ್ಲದೇ ನಾಗರತ್ನಮ್ಮನವರದೇ ಮೊದಲ ಮಹಿಳಾ ನಾಟಕ ಕಂಪನಿ ಎಂದವರಿದ್ದಾರೆ.
ಪುರುಷ ಪಾತ್ರಗಳು ಸೇರಿದಂತೆ ಎಲ್ಲ ಪಾತ್ರಗಳಲ್ಲೂ ಮಹಿಳೆಯರದೇ ಅಭಿನಯ. ನಾಟಕಗಳಲ್ಲಿ ಭಾಗವಹಿಸುವ ಇಚ್ಛೆ ಇದ್ದರೂ ಹಿಂದೇಟು ಹಾಕುತ್ತಿದ್ದ ನಗರದ ಮಹಿಳೆಯರಲ್ಲಿ ಪರೋಕ್ಷವಾಗಿ ಸ್ಥೈರ್ಯ ತಂದುಕೊಟ್ಟದ್ದು ಈ ಮಂಡಳಿಯ ಹೆಚ್ಚುಗಾರಿಕೆ, ಭೀಮ, ಕಂಸ, ರಾವಣನ ಪಾತ್ರದಲ್ಲಿ ನಾಗರತ್ನಮ್ಮ ಮನೆಮಾತಾದರೆ ಅವರ ತಂಗಿ ಆರ್. ಮಂಜುಳ ಹಾಸ್ಯಪಾತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದವರು. ಮತ್ತೊಬ್ಬ ಸಹೋದರ ಆರ್. ಪರಮಶಿವನ್ ಹೆಸರಾಂತ ಸಂಗೀತ ನಿರ್ದೇಶಕರು.
ಆರು ಮಂದಿ ಅಕ್ಕ-ತಂಗಿಯರು ಸೇರಿ 40ರ ದಶಕದಲ್ಲಿ ಬಾಲ ಸರಸ್ವತಿ ನಾಟಕ ಕಂಪನಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಸಹೋದರಿಯರಲ್ಲಿ ಮಧ್ಯದವರಾದ ಲಕ್ಷ್ಮಮ್ಮ ಇದರ ಮಾಲೀಕರು. ಆಂಜನೇಯನ ಪಾತ್ರದಲ್ಲಿ ಅವರು ಪ್ರಸಿದ್ಧಿ ಪಡೆದವರು. ರಾಮಕ್ಕ, ಸಾವಿತ್ರಮ್ಮ ಇತರ ಪಾತ್ರಗಳಲ್ಲಿ ಅಭಿನಯಿಸಿದರೆ, ಸಕ್ಕೂಬಾಯಮ್ಮ ಎಂಬುವರು ಹಾರ್ಮೋನಿಯಂ ನುಡಿಸುತ್ತಿದ್ದರು. ಆವಶ್ಯಕತೆ ಇದ್ದ ಕಡೆ ಪುರುಷರು ಕೈ ಜೋಡಿಸಿದರೂ ಪ್ರಧಾನವಾಗಿ ಇದು ಮಹಿಳೆಯರ ನಾಟಕ ತಂಡ. ‘ಸತಿ ಸಾವಿತ್ರಿ’, ‘ಹರಿಶ್ಚಂದ್ರ’, ‘ರಾಮಾಂಜನೇಯ ಯುದ್ಧ’, ‘ಸಾರಂಗಧರ’ - ಪ್ರಮುಖವಾಗಿ ಅಭಿನಯಿಸುತ್ತಿದ್ದ ನಾಟಕಗಳು, ಸತ್ಯವಾನ, ರಾಮ, ರಾವಣ, ಆಂಜನೇಯ ಮುಂತಾದ ಎಲ್ಲ ಪುರುಷ ಪಾತ್ರಗಳಲ್ಲಿ ಕ್ವಚಿತ್ತಾಗಿ ಪುರುಷರು ಅಭಿನಯಿಸಿದ್ದು ಹೊರತುಪಡಿಸಿದರೆ ಇದೂ ಮತ್ತೊಂದು ಪ್ರಮೀಳಾ ರಾಜ್ಯ.
ಶೇಷಾದ್ರಿ ನಾಟಕ ಮಂಡಳಿ 60ರ ದಶಕದಲ್ಲಿ ಬೆಂಗಳೂರಿನಲ್ಲಿ ಅಸ್ತಿತ್ವದಲ್ಲಿತ್ತು. ಇದರಲ್ಲೂ ಸ್ತ್ರೀಯರು ಪ್ರಧಾನ ಪಾತ್ರ ವಹಿಸಿದರು. ಇವರು ಆಂಧ್ರಪ್ರದೇಶದ ಸುರಭಿ ಸಂಬಂಧಿಕರು (ಒಂದೇ ಕುಟುಂಬದ ನೂರಾರು ಕಲಾವಿದರನ್ನು ಒಳಗೊಂಡ ಆಂಧ್ರಪ್ರದೇಶದ ಸುರಭಿ ನಾಟಕ ತಂಡ ಈ ದೇಶದ ಅತಿ ಬೃಹತ್ತಾದ ನಾಟಕ ಕಂಪನಿ). ಮೈಸೂರು ಜಿಲ್ಲೆಯವರಾದ ಪಂಕಜಾ ರವಿಶಂಕರ್ ಎಂಬುವರು ಬೆಂಗಳೂರಿನಲ್ಲಿ ನೆಲೆ ನಿಂತಿದ್ದು ಒಂದು ಮಹಿಳಾ ತಂಡ ಕಟ್ಟಿಕೊಂಡಿದ್ದಾರೆ. ಆಗಾಗ ನಾಟಕಗಳನ್ನು ಪ್ರದರ್ಶಿಸುತ್ತಾರೆ.
ಒಂದೊಂದು ಕುಟುಂಬದ ಮೂರ್ನಾಲ್ಕು ಅಥವಾ ಒಂದೆರಡು ತಲೆಮಾರುಗಳು ನಾಟಕಕ್ಕೆ ಸಮರ್ಪಿಸಿಕೊಂಡ ಉದಾಹರಣೆಗಳು ದಕ್ಷಿಣ ಕರ್ನಾಟಕದಲ್ಲಿ ಸಿಗುತ್ತವೆ. ಬೆಂಗಳೂರಿನ ಬಾಲ ಸರಸ್ವತಿ ನಾಟಕ ಕಂಪನಿಯ ಆರು ಸಹೋದರಿಯರ ಪೈಕಿ ಒಬ್ಬರಾದ ಸುಮಿತ್ರಮ್ಮ ಅವರ ಮಗ ಕೃಷ್ಣರಾವ್ ಈಗಲೂ ಹೆಸರಾಂತ ಹಾರ್ಮೋನಿಯಂ ಮಾಸ್ತರ್. ಕೃಷ್ಣರಾವ್ ಸ್ವತಃ ಕಂಪನಿ ಮಾಡದಿದ್ದರೂ ಇವರ ಮನೆಯಲ್ಲಿರುವ ಕಲಾವಿದರನ್ನೆಲ್ಲ ಒಟ್ಟುಗೂಡಿಸಿದರೆ ಅದೇ ಒಂದು ಕಂಪನಿಯಾಗುತ್ತದೆ. 80ರ ದಶಕದಿಂದ ಇಲ್ಲಿವರೆಗೂ ಬೆಂಗಳೂರಿನ ಪೌರಾಣಿಕ ನಾಟಕಗಳಿಗೆ ಅನಿವಾರ್ಯವಾದ ಪ್ರತಿಭಾ ನಾರಾಯಣ್, ಭಾಗ್ಯಶ್ರೀ, ಸರಸ್ವತಿ, ಮಂಜುಳ, ಇಂದ್ರಾಣಿ ಎಲ್ಲರೂ ಕೃಷ್ಣರಾವ್ ಮಕ್ಕಳು. 60ರ ದಶಕದಲ್ಲಿ ಹಳೇ ಮೈಸೂರು ಪ್ರದೇಶದಲ್ಲಿ ನಾಟಕ ಪ್ರಯೋಗಗಳಿಗೆ ಕೊರತೆ ಇರಲಿಲ್ಲ. ಗುಬ್ಬಿ ಕಂಪನಿಯ ದಶಾವತಾರ, ಕುರುಕ್ಷೇತ್ರ, ಲವಕುಶ, ಎಡೆಯೂರು ಸಿದ್ಧಲಿಂಗೇಶ್ವರ ಮಹಾತ್ಮೆ ನಾಟಕಗಳ ಪ್ರಯೋಗ ನಿರಂತರ ಇದ್ದವು. 60ರ ದಶಕದ ಈಚೆಗೆ ಘಟಾನುಘಟಿ ಕಲಾವಿದರನ್ನು ಇಟ್ಟುಕೊಂಡು ವೈಭವದ ಪೌರಾಣಿಕ, ತದನಂತರ ಸಾಮಾಜಿಕ ನಾಟಕಗಳನ್ನು ಪ್ರಯೋಗಿಸಿದ ಇಬ್ಬರು ಪ್ರಮುಖ ವ್ಯಕ್ತಿಗಳೆಂದರೆ ಮಹದೇವಸ್ವಾಮಿ ಮತ್ತು ಶ್ರೀಕಂಠಮೂರ್ತಿ.
ಮಹದೇವಸ್ವಾಮಿ ಅವರು ಕನ್ನಡ ಥಿಯೇಟರ್ಸ್ ಕಂಪನಿಯನ್ನು 1963, 64, 65, 67ರಲ್ಲಿ ವೈಭವದಿಂದ ನಡೆಸಿ 70ರ ದಶಕದಲ್ಲಿ ತುಸು ನೇಪಥ್ಯಕ್ಕೆ ಸರಿದರೆ, ಶ್ರೀಕಂಠಮೂರ್ತಿಗಳು ತಮ್ಮ ಶ್ರೀಕಂಠೇಶ್ವರ ನಾಟ್ಯ ಸಂಘದ ಮೂಲಕ ಅದನ್ನು ಮುಂದುವರಿಸಿದರು. ಅಲ್ಲಿದ್ದ ಮಹಾನ್ ನಟರುಗಳೇ ಇಲ್ಲಿಗೆ ಬಂದರು. ‘ರಾಜಾ ವಿಕ್ರಮ, ಚಂದ್ರಹಾಸ-ನಾಟಕಗಳನ್ನು ರಚಿಸಿದ ಯೋಗಾನರಸಿಂಹಮೂರ್ತಿ ಅವರೇ ತಮ್ಮ ಎರಡೂ ನಾಟಕಗಳಿಗೆ ಹಾಡುಗಳನ್ನು ಬರೆದು, ಅತ್ಯಂತ ಮುತುವರ್ಜಿಯಿಂದ ಸಂಗೀತ ನಿರ್ದೇಶನ ಮಾಡಿದ್ದಾರೆ.
ಭಾಷಾಡಂಬರವಿಲ್ಲದ ಸರಳ, ಆದರೆ ಅದ್ಭುತ ನಾಟಕೀಯ ಗುಣಗಳನ್ನೊಳಗೊಂಡ ಈ ನಾಟಕಗಳು ಪಳಗಿದ ಕಲಾವಿದರ ಅಭಿನಯ ಕಾರಣವಾಗಿ ಪ್ರೇಕ್ಷಕರು ಮುಗಿಬಿದ್ದರು. ಅದರಲ್ಲೂ ಶ್ರೀಕಂಠಮೂರ್ತಿಯವರ ವಿಕ್ರಮ ಹಾಗೂ ಎಚ್.ಟಿ. ಅರಸು ಅವರ ದುರ್ಜಯ ಪಾತ್ರಗಳು ಜನಪ್ರಿಯವಾಗಿದ್ದವು. ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸುತ್ತಿದ್ದ ಮಹದೇವಪ್ಪ ಹೆಸರಿನ ಇಬ್ಬರು ನಟರುಗಳಲ್ಲಿ ಶನಿ ಪಾತ್ರ ಮಾಡುತ್ತಿದ್ದ ಮಹದೇವಪ್ಪ ಶನಿ ಮಹದೇವಪ್ಪ ಎಂದೂ, ರಾಜಾ ವಿಕ್ರಮದಲ್ಲಿ ಭಟ್ಟಿ ಪಾತ್ರ ಮಾಡುತ್ತಿದ್ದ ಮಹದೇವಪ್ಪ ಭಟ್ಟಿ ಮಹದೇವಪ್ಪ ಎಂದೇ ಮುಂದೆ ಪರಿಚಿತರಾದರು. ನಟ(ಟಿ) ಪ್ರಧಾನವಾದ, ನಟ ಪರಂಪರೆಯನ್ನೇ ಸೃಷ್ಟಿಸಿದ ಕಂಪನಿ ನಾಟಕಗಳಲ್ಲಿ ಹೀಗೆ ಒಂದೊಂದು ಪಾತ್ರಗಳ ದಂತಕತೆಯಾದವರು ಅಸಂಖ್ಯಾತ ಜನ. ಪುಟ್ಟಬಸಪ್ಪ ಎಂಬ ದೊಡ್ಡ ಸಂಗೀತ ವಿದ್ವಾಂಸರು, ಸುಬ್ರಮಣ್ಯಶಾಸ್ತ್ರಿ, ಕೀರ್ತನ ಕೇಸರಿ ಗುರುರಾಜುಲು ನಾಯ್ಡು, ಲಕ್ಷ್ಮಣದಾಸ್, ಚಿತ್ರನಟ ಉಮೇಶ್, ಆರ್. ನಾಗರತ್ನಮ್ಮ ಮುಂತಾದ ಹೆಸರಾಂತ ಕಲಾವಿದರುಗಳು ಈ ಎರಡೂ ಕಂಪನಿಗಳ ವೈಭವಕ್ಕೆ ಕಾರಣರಾದರು. ನಾದಮಹರ್ಷಿ ಎಂದೇ ಪ್ರತೀತಿಯಾಗಿದ್ದ ಶ್ರೀಕಂಠಮೂರ್ತಿಗಳು ದೊಡ್ಡ ಸಂಗೀತ ವಿದ್ವಾಂಸರು. 1962-66ರ ವರೆಗೆ ಅಸ್ತಿತ್ವದಲ್ಲಿದ್ದ ಹೊನ್ನಪ್ಪ ಭಾಗವತರ್ ಅವರ ಉಮಾ ಮಹೇಶ್ವರಿ ಸಂಗೀತ ನಾಟಕ ಮಂಡಳಿಯ ಶ್ರೀನಿವಾಸ ಕಲ್ಯಾಣ ನಾಟಕ ಒಂದು ಅಭೂತಪುರ್ವ ಪ್ರಯೋಗ. ಶ್ರೀನಿವಾಸನ ಪಾತ್ರದಲ್ಲಿ ಹೊನ್ನಪ್ಪನವರದು ಅಮೋಘ ಅಭಿನಯ. ಚಿತ್ರನಟರಾದ ದಿನೇಶ್, ಮುಸುರಿ ಕೃಷ್ಣಮೂರ್ತಿ ಹಾಗೂ ಚಂದ್ರಯ್ಯಸ್ವಾಮಿ, ಸಿದ್ಧಲಿಂಗಪ್ಪನವರಂತಹ ಅನುಭವಿ ನಟರು ಇದರಲ್ಲಿ ಇದ್ದರು. 1966ರಲ್ಲಿ ಕಣಗಾಲ್ ಪ್ರಭಾಕರಶಾಸ್ತ್ರಿ ಅವರು ಆರಂಭಿಸಿದ ಪಂಪಾ ಥಿಯೇಟರ್ಸ್ ಕಂಪನಿಯ ಜನಪ್ರಿಯ ನಾಟಕ ಪ್ರಚಂಡ ರಾವಣ. 1968ರಲ್ಲಿ ಸತತ 100 ಪ್ರಯೋಗ ಕಂಡಿತು. ರಾವಣನ ಪಾತ್ರ ವಹಿಸಿದ್ದ ಚಿತ್ರನಟ ವಜ್ರಮುನಿಗೆ ಜನಪ್ರಿಯತೆ ತಂದುಕೊಟ್ಟ ನಾಟಕ.
ನಾಟಕ ಕಂಪನಿಗಳ ಮೂಲಕವೇ ಹೆಸರು ಮಾಡಿದ ಇತರ ಕಲಾವಿದರುಗಳೆಂದರೆ ಎ.ಎನ್. ಶೇಷಾಚಾರ್, ಮುನಿರಂಗಪ್ಪ, ಲಕ್ಷ್ಮೀಬಾಯಿ, ರಂಗನಾಯಕಮ್ಮ, ಬಿ.ಎಸ್. ಮಂಜುಳಮ್ಮ, ಪಾರ್ಥಸಾರಥಿ, ಮುಸುರಿ ಕೃಷ್ಣಮೂರ್ತಿ, ಸುಶೀಲಮ್ಮ ಮುಸುರಿ, ಶೇಷಗಿರಿರಾವ್, ಜಿ.ವಿ. ಅಯ್ಯರ್, ಬಾಲಕೃಷ್ಣ, ರಾಜಕುಮಾರ್, ನರಸಿಂಹರಾಜು, ಬಿ.ಎನ್. ಚಿನ್ನಪ್ಪ, ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ, ಕೆ.ವಿ. ಆಚಾರ್, ಬಿ.ಎಂ. ನಾರಾಯಣದಾಸ್, ಅಚ್ಯುತದಾಸ್ ಮೊದಲಾದವರು.
ಹಳೇ ಮೈಸೂರು ಭಾಗದ ಎಲ್ಲ ಪಟ್ಟಣಗಳಲ್ಲಿ ನಾಟಕ ಕಂಪನಿಗಳು ನಿರಂತರ ಕ್ಯಾಂಪ್ ಮಾಡುತ್ತಿದ್ದವಾದರೂ ಅತಿ ಹೆಚ್ಚು ನಾಟಕಗಳು ಪ್ರಯೋಗವಾಗುತ್ತಿದ್ದುದು ಬೆಂಗಳೂರು ನಗರದಲ್ಲಿ. ಅಂತೆಯೇ ನಾಟಕ ಕಂಪನಿ ಉತ್ತರ ಕರ್ನಾಟಕದ್ದಿರಲಿ, ಹಳೇ ಮೈಸೂರಿನದಿರಲಿ ಬೆಂಗಳೂರಿನಲ್ಲಿ ಕ್ಯಾಂಪ್ ಮಾಡುವುದೆಂದರೆ ಪ್ರತಿಷ್ಠೆಯ ವಿಷಯವಾಗಿತ್ತು.
ಪ್ರತಿಭಾ ನಾರಾಯಣ್ ಎಂಬ ವೃತ್ತಿ ಕಲಾವಿದರು ಬೆಂಗಳೂರಿನಲ್ಲಿ ಪ್ರತಿಭಾ ಕಲಾನಿಕೇತನವನ್ನು 70ರ ದಶಕದಲ್ಲಿ ಸ್ಥಾಪಿಸಿಕೊಂಡಿದ್ದು, ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಸೇರಿದಂತೆ ಎಲ್ಲ ಬಗೆಯ ನಾಟಕಗಳನ್ನು ಪ್ರದರ್ಶಿಸುತ್ತಿದ್ದಾರೆ.
ಪ್ರಸಿದ್ಧ ನಟರಾಗಿದ್ದ ಮಾರಪ್ಪ ಅವರ ಪುತ್ರ ಹಾಗೂ ಹೆಸರಾಂತ ನಟ ಮಾ.ನ. ಮೂರ್ತಿ ಜಯಚಾಮರಾಜೇಂದ್ರ ಕಲಾಸಂಘ ಕಟ್ಟಿಕೊಂಡಿದ್ದು ಎಂಬತ್ತರ ದಶಕದಿಂದಲೂ ನಿರಂತರವಾಗಿ ನಾಟಕ ಪ್ರದರ್ಶನ ಮಾಡುತ್ತ ಬಂದಿದ್ದಾರೆ.
ಬೆಂಗಳೂರಿನ ಗುಬ್ಬಿ ರಂಗಮಂದಿರದಲ್ಲಿ, ಹಿರಣ್ಣಯ್ಯ ಹಾಗೂ ಮುನಿರಂಗಪ್ಪನವರ ಒಡೆತನದಲ್ಲಿ ಸುಭಾಷ್ ಮೈದಾನದ ಕೆಂಪಾಂಬುಧಿ ಕೆರೆಯಲ್ಲಿದ್ದ ರಂಗಮಂದಿರದಲ್ಲಿ 50, 60ರ ದಶಕದಲ್ಲಿ ನಿರಂತರ ನಾಟಕ ಪ್ರಯೋಗಗಳು ನಡದೇ ಇದ್ದವು. ಆ ಕಾಲಕ್ಕೆ ಆಗಲೇ ನಗರದ ಹವ್ಯಾಸಿ ರಂಗಭೂಮಿ ಕ್ರಿಯಾಶೀಲವಾಗಿದ್ದರೂ ವೃತ್ತಿ ಕಂಪನಿಯ ದಟ್ಟ ಪ್ರಭಾವ ಅಳಿಸಿರಲಿಲ್ಲ. ಪರ್ವತವಾಣಿಯವರ ಅಬ್ಬಾ ಏನ್ ಹೆಂಡ್ತಿ ನಾಟಕದ ಕುರಿತು 1952ರಲ್ಲಿ ವಾಕ್ಚಿತ್ರ ಪತ್ರಿಕೆಯ ಚಿತ್ರಕಲಾವಿದರ ಚೌಚೌ ಕಾಲಂನಲ್ಲಿ ದಾಶರಥಿ ದೀಕ್ಷಿತ್ ಹೀಗೆ ಬರೆಯುತ್ತಾರೆ: ಇದು ಜಟ್ಟೆಪ್ಪನವರ (ಹೆಸರಾಂತ ವೃತ್ತಿ ನಾಟಕ ಕಂಪನಿ) ಸ್ತ್ರೀ ನಾಟಕ ನೆನಪಿಗೆ ತರುತ್ತದೆ. ಅದೇ ಛಾಯೆ ಇಲ್ಲಿದೆ. 1953ರಲ್ಲಿ ಪ್ರದರ್ಶನ ಕಾಣುತ್ತಿದ್ದ ಪರ್ವತವಾಣಿಯವರ ‘ಸುಂದ್ರೋಪಸುಂದ್ರ’ ನಾಟಕಕ್ಕೆ ವೃತ್ತಿ ನಾಟಕ ಕಂಪನಿಗಳಿಗೆ ಪ್ರಕಟಿಸುವ ಕರಪತ್ರದ ಮಾದರಿಯಲ್ಲಿ ‘ಇಂಪಾದ ಗಾನ, ಮನರಂಜನೆಯ ನಾಟಕ’ ಎಂದೇ ಮುದ್ರಿಸಲಾಗಿದೆ.
20ನೆಯ ಶತಮಾನದ ಮೊದಲ 50 ವರ್ಷಗಳ ಕಾಲ ಕ್ಯಾಂಪ್ ಮಾಡಿದ ನಾಡಿನ ಎಲ್ಲ ಪ್ರತಿಷ್ಠಿತ ನಾಟಕ ಕಂಪನಿಗಳಿಗೆ ಆ ಕಾಲದ ಹಳೇ ಮೈಸೂರು ಪ್ರಾಂತದ ಜನಸಂಖ್ಯೆಯ ಒಟ್ಟು ರಂಗಾಸಕ್ತರೆಲ್ಲರನ್ನು ಸೆಳೆಯಲು ಸಾಧ್ಯವಾಗಿದ್ದು ಒಂದು ಇತಿಹಾಸವಾದರೆ, ಈ ಕಾಲಘಟ್ಟ ಹಾಗೂ ನಂತರದ ದಿನಗಳಲ್ಲಿ ಇದು ಹುಟ್ಟು ಹಾಕಿದ ವೃತ್ತಿಶೈಲಿಯ ಹವ್ಯಾಸಿ ನಾಟಕಗಳದ್ದೇ ಪ್ರತ್ಯೇಕವಾದ ದೊಡ್ಡದಾದ ಅಧ್ಯಾಯ. ಕಂಪನಿಗಳಲ್ಲಿ ನಾಟಕ ನೋಡಿದ ಹಳ್ಳಿ, ಪಟ್ಟಣದ ಆಸಕ್ತರೆಲ್ಲರೂ ಅದೇ ಮಾದರಿಯಲ್ಲಿ ತಾವಾಗೆ ನಾಟಕವಾಡಲು ಆರಂಭಿಸಿದರು. ಪ್ರತಿ ಹಳ್ಳಿ, ಪಟ್ಟಣಗಳಲ್ಲಿ ಹವ್ಯಾಸಿ ನಾಟಕ ತಂಡ ಹುಟ್ಟಿಕೊಂಡವು. ಇದು ನಾಟಕ ಕಂಪನಿಗಳ ಬಹುದೊಡ್ಡ ಕೊಡುಗೆಯೂ ಹೌದು. ಚರ್ಚೆಗಳಲ್ಲಿ ಬರೆಹದಲ್ಲಿ ದಾಖಲಾಗದ ಇನ್ನೊಂದು ವ್ಯಾಪಕವಾದ ರಂಗ ಚಟುವಟಿಕೆ.
ಕಂಪನಿಯನ್ನು ತೊರೆದು ಬಂದಿದ್ದ ಹಾರ್ಮೊನಿಯಂ ಮಾಸ್ತರುಗಳು ಹಾರ್ಮೋನಿಯಂ ಶೇಷಗಿರಿರಾವ್ ಇವರ ಗುರುಗಳಾದರು ಅಥವಾ ಒಂದಿಷ್ಟು ಶಾಸ್ತ್ರೀಯವಾಗಿ ಹಾರ್ಮೋನಿಯಂ ವಾದ್ಯ ಕಲಿತುಕೊಂಡು ನಾಟಕ ಕಂಪನಿಗಳ ಪ್ರದರ್ಶನಗಳನ್ನು ಸತತವಾಗಿ ನೋಡುವ ಮೂಲಕ ರಂಗಗೀತೆ, ಕಂದ, ಸೀಸ ಪದ್ಯಗಳಿಗೆ ಸಾಥ್ ಕೊಡುವಷ್ಟು ವಿದ್ಯೆ ಕಲಿತ ಮಾಸ್ತರುಗಳು ತಾವಾಗೆ ನಾಟಕವಾಡಲು ಸಿದ್ಧತೆ ಮಾಡಿಕೊಂಡವರಿಗೆ ನಾಟಕ ಕಲಿಸಲು ಮುಂದೆ ಬಂದರು. ಅವು ಸಂಗೀತ ಪ್ರಧಾನವಾಗಿದ್ದ ನಾಟಕದ ದಿನಗಳು. ಸಂಗೀತ ನಿರ್ದೇಶಕರೇ ನಾಟಕ ನಿರ್ದೇಶಕರು. ರಂಗಾಸಕ್ತರಲ್ಲಿ ನಾಟಕ ಪ್ರಯೋಗದ ಸಾಧ್ಯತೆಯನ್ನು ಒಡಮೂಡಿಸಿದವರು ಈ ಸಂಗೀತ ಮಾಸ್ತರುಗಳು.
ಹವ್ಯಾಸಿಗಳಿಗೆ ಎದುರಾಗುವ ಮೊದಲ ಕೊರತೆ ಮಹಿಳಾ ಕಲಾವಿದರದು. ವೃತ್ತಿ ಶೈಲಿಯ ಈ ನಾಟಕಗಳಿಗೆ ಅಂತಹ ಕೊರತೆ ಉಂಟಾಗಲಿಲ್ಲ. ಕೆಲ ದಿನಮಟ್ಟಿಗೆ ವೃತ್ತಿ ಕಂಪನಿಯ ಅನುಭವ ಪಡೆದಿದ್ದ, ವೃತ್ತಿ ಕಂಪನಿ ಸ್ಥಗಿತಗೊಂಡಾಗ ಅಥವಾ ಕ್ಯಾಂಪು ಬದಲಾಯಿಸಿದಾಗ ಅವನ್ನು ತೊರೆದು ಬರುತ್ತಿದ್ದ ಮಹಿಳಾ ಕಲಾವಿದರು ತಕ್ಕಮಟ್ಟಿಗೆ ಎಲ್ಲ ಕಡೆಗೂ ಲಭ್ಯವಿರುತ್ತಿದ್ದರು. ಇಂತಹವರು ಈ ಕೊರತೆ ತುಂಬಿದರು. ಸಂಗೀತ ಮಾಸ್ತರುಗಳು ಹಾಗೂ ಮಹಿಳಾ ಕಲಾವಿದರು ವೃತ್ತಿಯವರಾದರೆ, ಅವರೊಂದಿಗೆ ನಟಿಸುವ ಪುರುಷರು ಹಾಗೂ ಸಂಘಟಕರೆಲ್ಲರು ಹವ್ಯಾಸಿಗಳು. ಪಾತ್ರಧಾರಿಗಳೇ ಕೈಯಿಂದ ದುಡ್ಡು ಹಾಕಿಕೊಂಡು, ಸೀನರಿ, ಲೈಟು, ಸ್ಟೇಜು ಬಾಡಿಗೆ, ಮಹಿಳಾ ಕಲಾವಿದರ ಹಾಗೂ ಸಂಗೀತ ಮಾಸ್ತರುಗಳ ಸಂಭಾವನೆಯ ಖರ್ಚಿನ ಹೊಣೆ ಹೊತ್ತರು. ಅವರ ಉತ್ಸಾಹದಿಂದ ಉತ್ತರೋತ್ತರವಾಗಿ ನಾಟಕ ಪ್ರಯೋಗಗಳಾಗುತ್ತಲೇ ಹೋದವು. ಕೆಲವೊಮ್ಮೆ ನಾಟಕಕ್ಕೆ ಟಿಕೆಟಿಟ್ಟು ಆ ಖರ್ಚನ್ನು ಭರಿಸುವ ವಿಫಲ ಯತ್ನಗಳಾದವು. ಇನ್ನು ಹಲವು ಸಂದರ್ಭಗಳಲ್ಲಿ ನಾಟಕ ಪ್ರೇಮಿಗಳಾಗಿದ್ದು ತಕ್ಕಮಟ್ಟಿಗೆ ಸ್ಥಿತಿವಂತರಾದವರು ಇದರ ಪ್ರಾಯೋಜಕರಾದರು. ನಾಟಕಗಳಿಗೆ ಬಾಡಿಗೆಗೆ ವೇಷ ಭೂಷಣ ಒದಗಿಸುವ ಅಂಗಡಿಗಳು ತೆರೆದದ್ದು ಇದೇ ಸಂದರ್ಭದಲ್ಲಿ. 60 ಮತ್ತು 70ರ ದಶಕ ಹಳ್ಳಿಗರಿಗೆ ಮಾತ್ರವಲ್ಲ, ನಗರದ ಹವ್ಯಾಸಿಗಳಿಗೂ ಅದು ಪೌರಾಣಿಕ ನಾಟಕಗಳ ವೈಭವದ ಕಾಲ. ಕುರುಕ್ಷೇತ್ರ, ಶನಿಪ್ರಭಾವ, ಸುಭದ್ರಾ ಕಲ್ಯಾಣ, ಪಾಂಡವ ವಿಜಯ, ವಿರಾಟಪರ್ವ, ಸಂಪುರ್ಣ ರಾಮಾಯಣ, ನಾಟಕಗಳಂತೂ ಮೇಲಿಂದ ಮೇಲೆ ಪ್ರಯೋಗ ಕಂಡವು.
ನಗರದಲ್ಲಿ ಚದುರಿ ಹೋದ ವೃತ್ತಿ ಕಲಾವಿದರು ಒಂದೆಡೆ ಸೇರಿ ನಾಟಕ ಸಿದ್ಧಪಡಿಸಿಕೊಂಡು ಪ್ರಾಯೋಜಕರನ್ನು ಹೊಂದಿಸಿಕೊಳ್ಳುವುದು ಒಂದೆಡೆ ನಡೆದಿದ್ದರೆ, ಅಭಿನಯದಲ್ಲಿ ಆಸಕ್ತಿ ಇರುವ, ತಕ್ಕ ಮಟ್ಟಿಗೆ ಹಾಡಬಲ್ಲ, ಹೇಳಿಕೊಟ್ಟರೆ ಕಂದ, ಸೀಸ ಪದ್ಯಗಳನ್ನು ನುಡಿಯಬಲ್ಲ ಒಂದು ಹಳ್ಳಿಯ ಹಾಗೂ ಪಟ್ಟಣ-ನಗರಗಳ ಒಂದು ವಸತಿ ಪ್ರದೇಶದ ಹವ್ಯಾಸಿಗಳು ಒಟ್ಟಿಗೆ ಕೂಡಿಕೊಂಡು ನಾಟಕದ ಸಿದ್ಧತೆ ಮತ್ತೊಂದೆಡೆ ನಡೆದಿರುತ್ತಿತ್ತು. ಮಹಿಳಾ ಪಾತ್ರಗಳಿಗೆ ಹಾಗೂ ಸಂಗೀತ ನಿರ್ದೇಶನಕ್ಕೆ (ಇವರೇ ನಾಟಕ ನಿರ್ದೇಶಕರು ಸಹ) ಮಾತ್ರ ವೃತ್ತಿ ಕಲಾವಿದರನ್ನು ನಿರ್ದಿಷ್ಟ ಸಂಭಾವನೆಗೆ ಆಹ್ವಾನಿಸುತ್ತಿದ್ದರು. ಇದರಿಂದಾಗಿ ವೃತ್ತಿ ಕಂಪನಿ ನಿಂತ ಕಾರಣಕ್ಕೋ ಅಥವಾ ಬೇರಾವುದೋ ಕಾರಣಕ್ಕೋ ಅದನ್ನು ತೊರೆದು ಬಂದ ಮಹಿಳಾ ಕಲಾವಿದರು ನಿರುದ್ಯೋಗಿಗಳಾಗಲಿಲ್ಲ. ಸಂಗೀತವನ್ನು ನೆಚ್ಚಿದವರು ಕೀರ್ತನೆ ಹಾಡುವ ಅಥವಾ ನಾಟಕ ಕಲಿಸುವ ಮೂಲಕವೋ ಒಂದು ನೆಲೆ ಕಂಡುಕೊಂಡರು. ಆದರೆ ಬರೀ ಅಭಿನಯ ಬಲ್ಲ ಪುರುಷ ಕಲಾವಿದರು ಬಹುತೇಕ ನಿರುದ್ಯೋಗಿಗಳಾದರು ಅಥವಾ ಮತ್ತೆ ನಾಟಕ ಕಂಪನಿಗಳಿಗೆ ವಾಪಸಾದರು.
ಕೆಲವು ಮಹಿಳಾ ಕಲಾವಿದರು ಕಂಪನಿಗಳಿಗೆ ಬದಲಾಗಿ ಹಳ್ಳಿ-ನಗರದ ಹವ್ಯಾಸಿ ನಾಟಕಗಳ ಕಲಾವಿದರಾಗಿ ಮುಂದುವರಿದರು. ಅಭಿನಯ ಅವರಿಗೆ ವೃತ್ತಿಯಾದ್ದರಿಂದ ಹವ್ಯಾಸಿ ನಾಟಕಗಳಲ್ಲಿ ಅಭಿನಯಿಸಿದರೂ ಅವರೆಲ್ಲ ವೃತ್ತಿ ಕಲಾವಿದರು. ಆದರೆ ನಾಟಕಗಳನ್ನು ಸಂಘಟಿಸಿ, ಅಭಿನಯಿಸಿದ ಇತರೆಲ್ಲ ರಂಗಕರ್ಮಿಗಳು ಹವ್ಯಾಸಿಗಳು. ನಾಟಕ ಮಾತ್ರ ವೃತ್ತಿ ಕಂಪನಿ ಶೈಲಿ. ಆದ್ದರಿಂದಲೇ ಇದು ವೃತ್ತಿ ಅಥವಾ ಹವ್ಯಾಸಿ ಎಂಬ ಸುಲಭ ವಿಂಗಡನೆಗೆ ದಕ್ಕುವುದಲ್ಲ. ಇಂತಹದೊಂದು ವ್ಯಾಪಕ ರಂಗ ಚಟುವಟಿಕೆ ಮುಂದಿನ ಅರ್ಧ ಶತಮಾನ ಕಾಲ ಹಳೆ ಮೈಸೂರಿನ ಎಲ್ಲ ಊರುಗಳಲ್ಲಿ ನಾಟಕವನ್ನು ಜೀವಂತವಾಗಿಟ್ಟಿತು. ನಾಟಕದ ಸಮಕಾಲೀನತೆ, ಅದರ ಗುಣಮಟ್ಟದ ಬಗ್ಗೆ ಏನೇ ಮಾತಿರಲಿ, ಆದರೆ ಅಸಂಖ್ಯಾತ ನಾಟಕ ಪ್ರಯೋಗಗಳಾದವು. ಪುರಾಣದ ಪಾತ್ರಗಳ ಕಲ್ಪನೆಗಳು ಜನಮಾನಸದಲ್ಲಿ ಅಚ್ಚೊತ್ತಿದ ಹಾಗೆ ಉಳಿದುಕೊಂಡು ಬಂದವು. ಗಣೇಶ ಉತ್ಸವ, ರಾಜ್ಯೋತ್ಸವದ ವೇದಿಕೆಗಳಲ್ಲಿ ಪ್ರಯೋಗ ಕಾಣುತ್ತಿದ್ದುದು ಇವೇ ವೃತ್ತಿ ನಾಟಕ ಕಂಪನಿ ಶೈಲಿಯ ನಾಟಕಗಳು. ಒಂದು ಬಡಾವಣೆಯಲ್ಲಿ ಅಥವಾ ಒಂದು ಊರಿನಲ್ಲಿ ಯಾವುದಾದರೂ ಒಂದು ದೇವರ ಹೆಸರಿನ ಸಂಘದ ಅಡಿಯಲ್ಲಿ ನಾಟಕ ಪ್ರಯೋಗವಾಗುತ್ತವೆ. ನಾಟಕದ ಅನಂತರ ಆ ಸಂಘ ಯಾವುದೂ ಅಸ್ತಿತ್ವದಲ್ಲಿರುವುದಿಲ್ಲ. ಮತ್ತೊಮ್ಮೆ ನಾಟಕ ಏರ್ಪಟ್ಟಾಗ ಅದೇ ಹೆಸರಿರಬಹುದು ಅಥವಾ ಬೇರೆ ಹೆಸರಿರಬಹುದು. ಒಟ್ಟಿನಲ್ಲಿ ನಾಟಕವಾಡುವುದಷ್ಟೇ ಇಲ್ಲಿ ಮುಖ್ಯ.
ಹೊಸದಾಗಿ ಅಸ್ತಿತ್ವಕ್ಕೆ ಬಂದ ಈ ನಾಟಕ ಪ್ರಯೋಗದಿಂದ ವೃತ್ತಿ ನಾಟಕಗಳೇನೂ ಅಳಿಸಿಹೋಗಲಿಲ್ಲ. ತುಸು ಇಳಿಮುಖವಾದರೂ ಕಂಪನಿಗಳು ಮತ್ತೊಂದೆಡೆ ನಡದೇ ಇದ್ದವು. ಹಾಗಾಗಿ ವೃತ್ತಿ ನಾಟಕಕ್ಕೆ ಇದೊಂದು ಸೇರ್ಪಡೆ.
1994ರಲ್ಲಿ ಬೆಂಗಳೂರಿನಲ್ಲಿ ಗುಬ್ಬಿ ವೀರಣ್ಣ ರಂಗಮಂದಿರ ಆರಂಭವಾದ ಅನಂತರ ಸತತವಾಗಿ ವೃತ್ತಿ ನಾಟಕ ಪ್ರದರ್ಶನಗಳು ನಡೆಯುತ್ತಿವೆ. ಚಿಂದೋಡಿ ವೀರಪ್ಪನವರ ಪುತ್ರಿ ಚಿಂದೋಡಿ ಲೀಲಾ ಅವರ ಕೆಬಿಆರ್ ಡ್ರಾಮಾ ಕಂಪನಿ ‘ಪೊಲೀಸನ ಮಗಳು’ ನಾಟಕವನ್ನು ನಿರಂತರವಾಗಿ 1200ಕ್ಕೂ ಅಧಿಕ ಪ್ರದರ್ಶನ ನೀಡಿ ಗಿನ್ನಿಸ್ ದಾಖಲೆ ಸ್ಥಾಪಿಸಿತು. ಕರ್ನಾಟಕದಲ್ಲಿ ಮಾತ್ರ ಈಗ ನಾಟಕ ಕಂಪನಿಗಳು ಹೆಚ್ಚಾಗಿ ಅಸ್ತಿತ್ವದಲ್ಲಿರುವುದರಿಂದ ಸಹಜವಾಗಿ ಅವೇ ಇಲ್ಲಿ ಹೆಚ್ಚಿನ ಅವಕಾಶ ಪಡೆಯುತ್ತವೆ.
ಚಿತ್ರದುರ್ಗದ ಕುಮಾರಸ್ವಾಮಿ ಸಾರಥ್ಯದ ಶ್ರೀ ಕುಮಾರೇಶ್ವರ ನಾಟ್ಯ ಸಂಘ ಹಾಗೂ ಮಾಸ್ಟರ್ ಹಿರಣ್ಣಯ್ಯನವರ ಮಿತ್ರಮಂಡಳಿ ಹೊರತುಪಡಿಸಿದರೆ, ಹಳೇ ಮೈಸೂರು ಭಾಗದಲ್ಲಿ ಮತ್ತಾವ ನಾಟಕ ಕಂಪನಿಗಳು ಈಗ ಉಳಿದಿಲ್ಲ. ಕಂಪನಿ ಹೆಸರು ಉಳಿಸಿಕೊಂಡು ಆಗಾಗ ನಾಟಕ ಪ್ರದರ್ಶಿಸುವ ಇತರ ಹತ್ತಾರು ನಾಟಕ ಕಂಪನಿಗಳನ್ನು ಅರೆ ವೃತ್ತಿ ತಂಡಗಳು ಎಂದು ಕರೆಯಬಹುದಾಗಿದೆ.
ಒಂದು ಕಾಲದಲ್ಲಿ ಗಾರೆ ಕೆಲಸ ಮಾಡುತ್ತಿದ್ದ, ಹೆಚ್ಚಿನ ವಿದ್ಯಾಭ್ಯಾಸ ಮಾಡಿರದ ಚಿತ್ರದುರ್ಗದ ಕುಮಾರಸ್ವಾಮಿಯವರದು ತಾಜಾ ಆಶು ಪ್ರತಿಭೆ. ಹಾಸ್ಯ ಪಾತ್ರವನ್ನು ಬೆಳೆಸುತ್ತ ಹೋಗುವ ಅವರ ಅಭಿನಯದ ವೈಖರಿಗೆ ಮಾರುಹೋಗದವರಿಲ್ಲ. ಈ ವಿಷಯದಲ್ಲಿ ಮಾಸ್ಟರ್ ಹಿರಣ್ಣಯ್ಯನವರಿಗೆ ಹೋಲಿಸಬಹುದಾದ ಪ್ರತಿಭೆ ಅವರದು. ಹಾಸ್ಯ ಪಾತ್ರದ ಹೆಸರಾಂತ ನಟರು ಅವರು. ಕಳೆದ 35 ವರ್ಷಗಳಿಂದ ಕುಮಾರೇಶ್ವರ ನಾಟ್ಯಸಂಘವನ್ನು ಅವರು ನಡೆಸಿಕೊಂಡು ಬರುತ್ತಿದ್ದಾರೆ. ಹಳೇ ಮೈಸೂರಿನ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಕಲೆಕ್ಷನ್ ಇರಲಿ-ಬಿಡಲಿ ನಿರಂತರವಾಗಿ ನಾಟಕ ಪ್ರದರ್ಶನ ಮಾಡಿಕೊಂಡು ಬರುತ್ತಿದ್ದಾರೆ. ಶ್ರೀದೇವಿ ಮಹಾತ್ಮೆ, ಮದಕರಿ ನಾಯಕ, ‘ನಾಯಕನಹಟ್ಟಿ ತಿಪ್ಪೇಸ್ವಾಮಿ’, ‘ಮುದುಕನ ಮದುವೆ’- ಈ ಕಂಪನಿಯ ಹೆಸರಾಂತ ನಾಟಕಗಳು.
ಹಾಸನದ ಶಿವಕುಮಾರ್ ಎಂಬುವವರ ಮತ್ತೊಂದು ನಾಟಕ ಕಂಪನಿ 5-6 ವರ್ಷಗಳ ಹಿಂದೆ ನಿಂತು ಹೋಯಿತು. ಹಾಸನ ಕಡೆಯವರದೇ ದಲಿತ ಕೂಲಿಕಾರರ ಮತ್ತೊಂದು ನಾಟಕ ಕಂಪನಿ ಇತ್ತೀಚಿನ ನಾಲ್ಕೈದು ವರ್ಷಗಳ ಹಿಂದೆ ಅಸ್ತಿತ್ವದಲ್ಲಿ ಇತ್ತು. ಅವರ ಬಳಿ ಹೆಚ್ಚಿನ ನಾಟಕ ಪರಿಕರಗಳು ಇರಲಿಲ್ಲ. ಹಳ್ಳಿ ಜನರ ಬಳಿ ವಿನಂತಿಸಿ ಉಚಿತ ಜಾಗ, ರಂಗಮಂದಿರಕ್ಕೆ ಬೇಕಾದ ಕನಿಷ್ಠ ಸಾಮಾನುಗಳನ್ನು ಹೊಂದಿಸಿಕೊಂಡು ಸರಳ ರಂಗಸಜ್ಜಿಕೆಯಲ್ಲಿ ನಾಟಕವಾಡುತ್ತಿದ್ದರು. ನಾಟಕ ಪ್ರಯೋಗ ಸಾಧ್ಯವಾಗದಿದ್ದ ದಿನಗಳಲ್ಲಿ ಹೊಲ-ಗದ್ದೆಗಳಲ್ಲಿ ಕೂಲಿಗಳಾಗಿ ದುಡಿಯುತ್ತಿದ್ದರು. ನಾಟಕವಾಡಲು ಒಳ್ಳೆಯ ವಾತಾವರಣ ನಿರ್ಮಾಣವಾದಾಗ ಮತ್ತೆ ನಾಟಕ ಪ್ರದರ್ಶನಕ್ಕೆ ಅಣಿಯಾಗುತ್ತಿದ್ದರು. ಇವರು ಉತ್ತರ ಕರ್ನಾಟಕದಲ್ಲೂ ಸಾಕಷ್ಟು ಪ್ರವಾಸ ಮಾಡಿದ್ದಾರೆ. ಹಾಲಿ ಉತ್ತರ ಕರ್ನಾಟಕದ ನಾಟಕ ಕಂಪನಿಗಳಲ್ಲಿ ಹೆಚ್ಚಾಗಿ ಪ್ರದರ್ಶನ ಕಾಣುವ ಸಾಮಾಜಿಕ ನಾಟಕಗಳನ್ನು ಇವರು ಪ್ರದರ್ಶನ ಮಾಡುತ್ತಿದ್ದರು. ಇವರಿಗೆ ನಾಟಕದ ಮೂಲ ಪ್ರತಿಯೇ ಬೇಕೆಂದೇನೂ ಇಲ್ಲ. ನಾಟಕ ಕಂಪನಿಗಳ ನಾಟಕ ನೋಡಿ ಕಲಿತದ್ದನ್ನೇ ಅನುಕರಿಸಿ ತಮ್ಮ ಸಹಜ ಪ್ರತಿಭಾಪುರ್ಣ ಅಭಿನಯದ ಮೂಲಕ ನಾಟಕವನ್ನು ಕಳೆಗಟ್ಟಿಸುತ್ತಿದ್ದರು. ಹಳ್ಳಿಗಳಲ್ಲಿ ಹಾಗೂ ನಗರದ ಗಲ್ಲಿ ಗಲ್ಲಿಗಳಲ್ಲಿ ನಾಟಕವಾಡುವ ಪೌರಾಣಿಕ ಅಥವಾ ಸಾಮಾಜಿಕ ನಾಟಕ ಪ್ರದರ್ಶಿಸುವ ಹವ್ಯಾಸಿಗಳು ನಾಟಕದ ಹಸ್ತಪ್ರತಿ ಹುಡುಕುವ ಗೋಜಿಗೆ ಹೋಗುವುದಿಲ್ಲ. ಅವರು ಮಾಸ್ತರುಗಳನ್ನು ಹುಡುಕುತ್ತಾರೆ. ಮಾಸ್ತರುಗಳಿಗೆ ಇಡೀ ನಾಟಕವೇ ಬಾಯಿಪಾಠವಾಗಿರುತ್ತದೆ. ಕಲಾವಿದರಲ್ಲೂ ಕೆಲವರಿಗೆ ಅವರು ಮಾಡುವ ನಿರ್ದಿಷ್ಟ ಪಾತ್ರ ಅಷ್ಟೇ ಏಕೆ ಇಡೀ ನಾಟಕವೇ ಬಾಯಲ್ಲಿರುತ್ತದೆ. ಜಾನಪದದ ಮಾದರಿಯಲ್ಲಿ ಇದು ಒಂದು ರೀತಿ ಮೌಖಿಕ ಪರಂಪರೆಯಾಗಿ ಬೆಳೆದಿದೆ. ಒಂದು ಕೃತಿ ಮೌಖಿಕ ಪರಂಪರೆಗೆ ಸಂದು ಹೋದರೆ ಅದು ಅಮರವೆಂದೇ ಅರ್ಥ. ಮಹಾಭಾರತದ ಕತೆಯನ್ನು ಸಾಂದ್ರವಾಗಿ ಹೇಳುವ ಬಿ. ಪುಟ್ಟಸ್ವಾಮಯ್ಯನವರ ಕುರುಕ್ಷೇತ್ರ, ಕಣಗಾಲ್ ಪ್ರಭಾಕರಶಾಸ್ತ್ರಿಯವರ ಪ್ರಚಂಡ ರಾವಣ ಇದೇ ಪ್ರತೀತಿಗೆ ಸೇರಿಬಿಟ್ಟಿವೆ. ಅನೇಕರ ಬಾಯಲ್ಲಿ ನಮ್ಮ ಮಹಾಭಾರತ, ರಾಮಾಯಣ, ಭಾಗವತದ ಕತೆಗಳು ಗೊತ್ತಿರುತ್ತವೆ. ಬೆಂಗಳೂರಿನ ವಜ್ರಪ್ಪನವರಂತಹ ಖ್ಯಾತ ಹಾರ್ಮೋನಿಯಂ ಮಾಸ್ತರುಗಳು ನಾಟಕಕಾರರಾಗಿರುವುದೂ ಇದೇ ಕಾರಣಕ್ಕೆ.
ಮಹಿಳಾ ಕಲಾವಿದರ ಹಾಗೂ ಹಾರ್ಮೋನಿಯಂ ಮಾಸ್ತರ್ಗಳ ಲಭ್ಯತೆ ಈ ನಾಟಕದ ಪ್ರಯೋಗ ಹೆಚ್ಚಾಗಲು ಒಂದು ಪ್ರಬಲವಾದ ಕಾರಣ. ವಜ್ರಪ್ಪ ಅತ್ಯಂತ ಜನಪ್ರಿಯ ಹಾರ್ಮೋನಿಯಂ ಮಾಸ್ತರ್. ಕಳೆದ ಐದು ದಶಕಗಳಲ್ಲಿ ಬೆಂಗಳೂರು ಹಾಗೂ ಸುತ್ತಲಿನ ಸಾವಿರಾರು ಪ್ರದರ್ಶನಗಳಿಗೆ ಇವರೇ ಮಾಸ್ತರ್. ಪುಟ್ಟಸ್ವಾಮಯ್ಯ, ಬೆಳ್ಳಾವೆ ಅವರ ನಾಟಕಗಳನ್ನು ಕಲಿಸುವ ಜತೆಗೆ ಇವರೇ ಸ್ವತಃ ನಾಟಕಗಳನ್ನು ರಚಿಸಿ, ಕಲ್ಪಿಸಿದ್ದಾರೆ.
ಶಾಸ್ತ್ರೀಯ ಹಿನ್ನೆಲೆಯ ರಂಗಸಂಗೀತವನ್ನು, ಕ್ಲಿಷ್ಟಕರವಾದ ಕಂದ, ಸೀಸ ಪದ್ಯಗಳನ್ನು ಹಾಡಲು ಎಲ್ಲ ಹವ್ಯಾಸಿ ಕಲಾವಿದರಿಗೆ ಸಾಧ್ಯವಿಲ್ಲ. ಅವರಿಗೆ ಹಾಡಲು ಬಂದಷ್ಟನ್ನೇ, ‘ಸರಿ, ಭೇಷ್’ ಎಂದು ಬೆನ್ನು ತಟ್ಟಿ ಹಾಡಿಸಿದರು ಮಾಸ್ತರುಗಳು. ನಿಮ್ಮ ಹಾಡುಗಾರಿಕೆ ಶಾಸ್ತ್ರೀಯ ನಿಯಮಗಳಿಗೆ ಬದ್ಧವಾಗಿಲ್ಲ ಎಂದು ಎದೆಗುಂದಿಸಿಬಿಟ್ಟಿದ್ದರೆ ಈಗ ನಾಟಕವಾಡಲು ಬಂದವರ ಪೈಕಿ ಅರ್ಧಕ್ಕಿಂತ ಹೆಚ್ಚು ಮಂದಿ ‘ನಮಗೆ ನಾಟಕ ಬೇಡ, ಏನೂ ಬೇಡ...’ ಎಂದು ಬೆನ್ನು ತಿರುಗಿಸಿಬಿಡುತ್ತಿದ್ದರು. ನಾಟಕದ ಪರಿಕರ ಬಾಡಿಗೆ ಕೊಡುವವರು, ಹಾರ್ಮೋನಿಯಂ ಮಾಸ್ತರುಗಳು, ಮಹಿಳಾ ಕಲಾವಿದರು ಎಷ್ಟೋ ಪಾಲು ನಿರುದ್ಯೋಗಿಗಳಾಗಿಬಿಡುತ್ತಿದ್ದರು. ಅದೆಲ್ಲಕ್ಕಿಂತ ಹೆಚ್ಚಾಗಿ ಇಷ್ಟೊಂದು ಅಧಿಕ ಸಂಖ್ಯೆಯಲ್ಲಿ ನಾಟಕ ಪ್ರಯೋಗಗಳೇ ಆಗುತ್ತಿರಲಿಲ್ಲ.
ಕೀರ್ತನ ಕಲೆ ಮೊದಲೂ ಇತ್ತು. ಆದರೆ ನಾಟಕದ ಸಂಸ್ಕಾರ ಪಡೆದು ಕೀರ್ತನಕ್ಕೆ ಮರಳಿದವರ ಪ್ರತಿಭೆ ಇಮ್ಮಡಿಗೊಂಡಿತು. ಅವರು ಪ್ರಸಿದ್ಧ ಕೀರ್ತನಕಾರರಾದರು. ಕೀರ್ತನಕ್ಕೆ ಸಾಹಿತ್ಯ, ಸಂಗೀತದ ಜತೆಗೆ ಅಭಿನಯವೂ ಬೇಕಲ್ಲವೇ? ನಾಟಕದ ಅನುಭವ ಅದನ್ನು ಧಾರಾಳವಾಗಿ ನೀಡಿತು. ಹರಿಕಥಮ್ಮ, ಗುರುರಾಜುಲು ನಾಯ್ಡು, ಬಿ.ಪಿ. ರಾಜಮ್ಮ, ಗುರುಸಿದ್ಧಪ್ಪ(ಕನಕದಾಸ), ನಾರಾಯಣದಾಸ್, ಲಕ್ಷ್ಮಣದಾಸ್ ಅವರುಗಳ ಕೀರ್ತನ ಮತ್ತಷ್ಟು ಕಳೆಗಟ್ಟಲು ಅವರುಗಳ ನಾಟಕದ ಹಿನ್ನೆಲೆ ಕೂಡ ಕಾರಣ. ಬುದ್ಧ, ಗಾಂಧೀಜಿ, ಅಂಬೇಡ್ಕರ್, ಗುಬ್ಬಿ ವೀರಣ್ಣನವರ ಕುರಿತೂ ಲಕ್ಷ್ಮಣದಾಸ್ ಅವರು ಕೀರ್ತನ ಮಾಡಲು ನಾಟಕದ ಅನುಭವ ಪ್ರೇರೇಪಣೆ ನೀಡಿತು ಎನ್ನುವುದು ಈ ನಾಟಕಗಳ ಹೆಚ್ಚುಗಾರಿಕೆ. ಹಳೇ ಮೈಸೂರಿನ ಹಳ್ಳಿಗಳಲ್ಲಿ ವೃತ್ತಿ ನಾಟಕ ಕಂಪನಿ ಶೈಲಿಯ ನಾಟಕವಾಡುವ ಪರಿಪಾಠ ತುಸು ಕಡಿಮೆಯಾಗಿದ್ದರೂ ನಿಂತು ಹೋಗಿಲ್ಲ. ನಾಗಮಂಗಲ, ಮಂಡ್ಯ, ಕೊಳ್ಳೇಗಾಲ, ಕೋಲಾರ, ಮೈಸೂರು ಗ್ರಾಮಾಂತರ ಪ್ರದೇಶಗಳಲ್ಲಿ ಈಗಲೂ ನಿರಂತರವಾಗಿ ನಾಟಕ ಪ್ರಯೋಗ ನಡೆಯುತ್ತಲೇ ಇವೆ. ತುಮಕೂರು ಜಿಲ್ಲೆಯಲ್ಲಿ ಪೌರಾಣಿಕ ನಾಟಕಗಳ ಪ್ರದರ್ಶನ ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತದೆ. ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಾತ್ರ ವೃತ್ತಿ ಶೈಲಿ ನಾಟಕ ಪ್ರಯೋಗಗಳ ಸಂಖ್ಯೆ ತೀರಾ ಕಡಿಮೆ. ಹೊಸಕೋಟೆಯಲ್ಲಿ ತೆಲುಗು ಪೌರಾಣಿಕ ನಾಟಕಗಳ ಪ್ರದರ್ಶನಗಳಾಗುತ್ತವೆ.
ಬೆಳ್ಳಾವೆ ನರಹರಿಶಾಸ್ತ್ರಿಗಳ ‘ಸಂಪುರ್ಣ ರಾಮಾಯಣ’, ‘ಕೃಷ್ಣಗಾರುಡಿ’ ನಾಟಕಗಳ ಪ್ರದರ್ಶನ ತುಮಕೂರು ಜಿಲ್ಲೆಯಲ್ಲಿ ಅಧಿಕ. ತೋರಣಗಲ್ಲು ರಾಜಾರಾವ್ ರಚಿಸಿ, ನಂಜನಗೂಡು ಶ್ರೀಕಂಠಶಾಸ್ತ್ರಿಗಳು ಪರಿಷ್ಕರಿಸಿ, ಮಳವಳ್ಳಿ ಸುಬ್ಬಣ್ಣ ಮತ್ತಷ್ಟು ಪರಿಷ್ಕರಿಸಿ, ಬಿ.ಎಂ. ನಾರಾಯಣದಾಸ್ ಪ್ರಕಟಿಸಿದ ‘ಸುಭದ್ರ ಕಲ್ಯಾಣ’ ನಾಟಕವಂತೂ ತುಮಕೂರು ಜಿಲ್ಲೆಯಲ್ಲಿ ಸೀಜನ್ನಲ್ಲಿ ಭಾರಿ ಪ್ರದರ್ಶನ ಕಾಣುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಪುಟ್ಟಾಚಾರಿ ರಚಿಸಿದ ಶನಿಮಹಾತ್ಮೆ ನಾಟಕದ ಪ್ರದರ್ಶನ ಹೆಚ್ಚು. ಪುಟ್ಟಸ್ವಾಮಯ್ಯನವರ ‘ಕುರುಕ್ಷೇತ್ರ’ ನಾಟಕವಂತೂ ಎತ್ತಿಕೊಂಡವರ ಕೈಗೂಸಾಗಿದೆ. ಮೂಲ ಪ್ರತಿ ಉಳಿದೇ ಇಲ್ಲ. ಅದನ್ನು ಆಧಾರವಾಗಿಟ್ಟುಕೊಂಡು ಸಾವಿರ ತರಹದ ಭಿನ್ನ ಪ್ರಯೋಗಗಳಿವೆ. ಉಳಿದಂತೆ ಹಳೇ ಮೈಸೂರಿನ ಎಲ್ಲ ಜಿಲ್ಲೆಗಳಲ್ಲಿ ಈಗಲೂ ಉತ್ತರ ಕರ್ನಾಟಕದ ಕವಿಗಳಾದ (ವೃತ್ತಿ ನಾಟಕಕಾರರು) ಧುತ್ತರಗಿ, ಮಾಂಡ್ರೆ, ಹೂಗಾರ, ಅರಿಷಿಣಗೋಡಿ ರಚಿಸಿದ ನಾಟಕಗಳು ಪ್ರದರ್ಶನವಾಗುತ್ತವೆ.
ಉತ್ತರ ಕರ್ನಾಟಕದ ಬಹುತೇಕ ಎಲ್ಲ ಪ್ರಮುಖ ನಾಟಕ ಕಂಪನಿಗಳು ಹಳೇ ಮೈಸೂರಿನ ಬಹಳಷ್ಟು ಪ್ರದೇಶದಲ್ಲಿ ಅದರಲ್ಲೂ ಹೆಚ್ಚಾಗಿ ಬೆಂಗಳೂರಿನಲ್ಲಿ ಪ್ರದರ್ಶನ ನೀಡಿವೆ. ಶಿರಹಟ್ಟಿ ವೆಂಕೋಬರಾಯ, ಗುಳೇದಗುಡ್ಡ ಗಂಗೂಬಾಯಿ, ಯುರಾಸಿ ಭರಮಪ್ಪ, ಗರುಡ ಸದಾಶಿವರಾವ್, ವಾಮನರಾವ್ ಮಾಸ್ತರ, ಚಿಂದೋಡಿ ವೀರಪ್ಪ, ಗೋಕಾಕ ಬಸವಣ್ಣೆಪ್ಪ, ಏಣಗಿ ಬಾಳಪ್ಪ ಮೊದಲಾದವರ ನಾಟಕ ಕಂಪನಿಗಳು ಬೆಂಗಳೂರು ನಗರದಲ್ಲಿ ದಾಖಲೆಯ ಪ್ರದರ್ಶನ ನೀಡಿವೆ.
ವೃತ್ತಿ ನಾಟಕ ಕಂಪನಿಗಳ ಕೊಡುಗೆಯನ್ನು ಪಟ್ಟಿ ಮಾಡುವಾಗ ಮಹಾಕಾವ್ಯಗಳನ್ನು, ಶಾಸ್ತ್ರೀಯ ಗಾಯನವನ್ನು ಸಾಮಾನ್ಯ ಜನತೆಯ ಮಧ್ಯೆ ಪಸರಿಸುವಂತೆ ಮಾಡಿದ್ದು, ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕಾಣಿಕೆ, ಅಕ್ಷರಸ್ಥ ಇರಲಿ, ಅನಕ್ಷರಸ್ಥ ಇರಲಿ ಅವನಲ್ಲಿ ನಾನೂ ನಾಟಕದಲ್ಲಿ ಭಾಗವಹಿಸಬಲ್ಲೆ ಎಂಬ ಆತ್ಮ ವಿಶ್ವಾಸವನ್ನು ತುಂಬಿದ್ದು-ಇವೇ ಮೊದಲಾದ ಅಂಶಗಳನ್ನು ಪಟ್ಟಿ ಮಾಡಲಾಗುತ್ತದೆ. ಹಳೇ ಮೈಸೂರಿನ ವೃತ್ತಿ ಮಾದರಿ ನಾಟಕಗಳಿಗೂ ಇವೇ ಮಾತು ಬಹುಪಾಲು ಅನ್ವಯಿಸುತ್ತವೆ.
ಇತ್ತೀಚಿನ ವರ್ಷಗಳ ಇವರ ಪೌರಾಣಿಕ ನಾಟಕಗಳಲ್ಲಿ ಸಮಕಾಲೀನ ಶೋಧನೆ ಇಲ್ಲವೆನ್ನುವ ಕಾರಣಕ್ಕೆ (ಇಲ್ಲಿಯೂ ಗಮನ ಸೆಳೆಯಲಾರದಷ್ಟು ವಿರಳ ಪ್ರಯತ್ನಗಳು ನಡೆದಿವೆ), ಪರಿಕರ, ಬೆಳಕಿನ ವ್ಯವಸ್ಥೆಯಲ್ಲಿ ಉಂಟಾದ ಸುಧಾರಣೆಯನ್ನು ನಾಟಕಗಳಲ್ಲಿ ತರಲಿಲ್ಲ ಎಂಬ ಕಾರಣಕ್ಕೆ ಮಾಧ್ಯಮದಲ್ಲಿ ಈ ನಾಟಕಗಳು ಚರ್ಚೆಯಾಗಲಿಲ್ಲ, ದಾಖಲಾಗಲಿಲ್ಲ. ಆದರೆ ಕಳೆದ ಶತಮಾನದಲ್ಲಿ ನೂರಾರು ವೃತ್ತಿ ಕಲಾವಿದರು, ಇದರೊಂದಿಗೆ ಅಸಂಖ್ಯಾತ ಹವ್ಯಾಸಿ ಕಲಾವಿದರು ಓಣಿ ಓಣಿಗಳಲ್ಲಿ ನಾಟಕವನ್ನು ಜೀವಂತವಾಗಿಟ್ಟರು. ಸಾಂಸ್ಕೃತಿಕವಾಗಿ ಬಹುದೊಡ್ಡ ನಿರ್ವಾತವನ್ನು ತುಂಬಿದರು.
ಹವ್ಯಾಸಿ ರಂಗಭೂಮಿ : ಹೊಟ್ಟೆಪಾಡಿಗೆ ಬೇರೆ ವೃತ್ತಿಯಲ್ಲಿದ್ದುಕೊಂಡು, ನಾಟಕವನ್ನು ಹವ್ಯಾಸವಾಗಿಸಿಕೊಂಡು ಆಗಾಗ ನಾಟಕ ಪ್ರದರ್ಶಿಸುವ ತಂಡಗಳನ್ನು ಹವ್ಯಾಸಿ ರಂಗಭೂಮಿ ಎಂದು ಕರೆಯಲಾಗಿದೆ. ಇಂತಹ ತಂಡಗಳು ನಗರ, ಹಳ್ಳಿಗಳೆರಡರಲ್ಲೂ ಅಸ್ತಿತ್ವದಲ್ಲಿವೆ. ಹಳ್ಳಿ ಹವ್ಯಾಸಿಗಳು ಜಾನಪದ ಬಂiÀÄಲಾಟ ಹಾಗೂ ಕಂಪನಿ ಶೈಲಿಯ ನಾಟಕಗಳನ್ನು ಕಳೆದ ಶತಮಾನದುದ್ದಕ್ಕೂ ಪ್ರದರ್ಶಿಸುತ್ತಲೇ ಬಂದಿದ್ದಾರೆ. ಬಹು ವ್ಯಾಪಕವಾದ ರಂಗಕ್ರಿಯೆ ಇದು.
ನಗರ, ಪಟ್ಟಣಗಳ ಶಿಕ್ಷಿತ ಮಧ್ಯಮರ್ಗದ ಜನ ಕಟ್ಟಿಕೊಂಡ ತಂಡಗಳು ಹತ್ತಿರತ್ತಿರ ಒಂದು ನೂರು ವರ್ಷಗಳಿಂದ ಹಲವು ವಿಭಿನ್ನ ಪ್ರಯೋಗಗಳನ್ನು ಮಾಡುತ್ತಲೇ ಬಂದಿವೆ. ತಂತ್ರಜ್ಞಾನದ ಬೆಳೆವಣಿಗೆಯನ್ನು ರಂಗದ ಮೇಲೆ ಬಳಸಿಕೊಂಡ ಕಾರಣ ಇವರ ನಾಟಕಗಳು ನವೀನ ಎನಿಸಿವೆ. ಅದರಲ್ಲೂ ಕಳೆದ 50 ವರ್ಷಗಳ ಕಾಲ ಕನ್ನಡ ಹವ್ಯಾಸಿ ರಂಗಭೂಮಿ ಹೆಚ್ಚು ಪ್ರಯೋಗಶೀಲವಾಗಿತ್ತು. ನಾನಾ ತರಹದ ನಾಟಕಗಳು ರಂಗದ ಮೇಲೆ ಬಂದವು. ಇಂತಹದೊಂದು ಪ್ರಯೋಗಶೀಲತೆಯಲ್ಲಿ ಹಳ್ಳಿಯೂ ಕೈಗೂಡಿಸಿದ್ದು ಇತ್ತೀಚಿನ ಮೂರು ದಶಕಗಳ ಬೆಳೆವಣಿಗೆ, ಹಳ್ಳಿ ಮೂಲದಿಂದಲೇ ರಂಗಭೂಮಿಯಲ್ಲಿ ಅದ್ಭುತ ಎನ್ನುವ ಸಾಧನೆಯೂ ಸಾಧ್ಯವಾಯಿತು. ರೆಪರ್ಟರಿಗಳು ಹುಟ್ಟಿಕೊಂಡದ್ದೇ ಹೆಗ್ಗೋಡು, ಸಾಣೇಹಳ್ಳಿ, ತಿಪಟೂರು, ತುಮರಿಯಂತಹ ಹಳ್ಳಿಗಳಲ್ಲಿ, ಅರೆಪಟ್ಟಣ ಪ್ರದೇಶಗಳಲ್ಲಿ.
ಮೊದಲು ವರ್ತಕರು ಮುಂದೆ ತುಸು ದಿನಗಳಲ್ಲೇ ಸರ್ಕಾರಿ ಹಾಗೂ ಖಾಸಗಿರಂಗದ ನೌಕರರು ನಗರದ ಹವ್ಯಾಸಿ ತಂಡಗಳನ್ನು ಕಟ್ಟಿದರು. ಸ್ವಾತಂತ್ರ್ಯೋತ್ತರ ನೆಹರೂ ಭಾರತದಲ್ಲಿ ಕೈಗಾರಿಕರಣ ತೀವ್ರಗೊಂಡು, ಅದರಲ್ಲೂ ಬೆಂಗಳೂರು ನಗರದಲ್ಲಿ ಸಾರ್ವಜನಿಕ ವಲಯದ (ಪಬ್ಲಿಕ್ ಸೆಕ್ಟರ್) ಕೈಗಾರಿಕೆಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾದ ಅನಂತರ ಇಲ್ಲಿನ ಕಾರ್ಮಿಕರು ಶಿಕ್ಷಿತ ವಲಯದ ಇಂತಹ ಹವ್ಯಾಸಿ ತಂಡಗಳನ್ನು ಸೇರಿಕೊಂಡು ಅವುಗಳನ್ನು ಬಲಪಡಿಸಿದರು. ಮತ್ತೆ ಹಲವರು ತಮ್ಮ ತಮ್ಮ ವಸತಿ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಪ್ರಯೋಗ ಕಾಣುತ್ತಿದ್ದ ಕಂಪನಿ ಶೈಲಿಯ ಹವ್ಯಾಸಿ ಪೌರಾಣಿಕ, ಸಾಮಾಜಿಕ ನಾಟಕಗಳಲ್ಲೂ ಭಾಗವಹಿಸಿದರು. ಹವ್ಯಾಸಿ ತಂಡಗಳಿಗೆ ಕಾರ್ಖಾನೆಗಳ ಆಡಳಿತ ಮಂಡಳಿಗಳಿಂದಲೂ ಹೆಚ್ಚಿನ ಉತ್ಸಾಹ ಉತ್ತೇಜನ ದೊರೆಯಿತು. ಶಾಲೆ-ಕಾಲೇಜುಗಳೂ ಹವ್ಯಾಸಿ ರಂಗಭೂಮಿಯ ಬೆಳೆವಣಿಗೆಗೆ ಗಣನೀಯ ಕೊಡುಗೆ ನೀಡಿವೆ.
ಬೆಂಗಳೂರಿನಲ್ಲಿ 1909ರಲ್ಲಿ ಆರಂಭವಾದ ಅಮೆಚೂರ್ ಡ್ರಾಮ್ಯಾಟಿಕ್ ಅಸೊಸಿಯೇಷನ್ (ಎಡಿಎ)ನ್ನು ಹಳೆ ಮೈಸೂರು ಭಾಗದ ಮೊದಲ ನಗರ ಹವ್ಯಾಸಿ ತಂಡ ಎಂದು ಕರೆಯಬಹುದು. ಅದಾಗಲೇ ಅಸ್ತಿತ್ವದಲ್ಲಿದ್ದ ಮದ್ರಾಸಿನ ಸುಗುಣ ವಿಲಾಸಿ ಸಭಾ ನಾಟಕ ಸಂಸ್ಥೆಯ ಕಾರ್ಯಚಟುವಟಿಕೆಗಳು ಇದಕ್ಕೆ ಮಾದರಿಯಾದದ್ದು ಆರಂಭ ಘಟ್ಟದಲ್ಲಿ ಮಾತ್ರ. ಅದನ್ನು ಮೀರಿ ಎಡಿಎ ಬೆಳೆಯಿತು. ತನ್ನ ಕಾಲದಲ್ಲಿ ಪ್ರಚಲಿತವಿದ್ದ ಕಂಪನಿ ಶೈಲಿಯ ಪೌರಾಣಿಕ, ಐತಿಹಾಸಿಕ ನಾಟಕಗಳ ಪ್ರದರ್ಶನದಿಂದ ಆರಂಭಿಸಿ, ಎಲ್ಲ ಹೊಸ ಪ್ರಯೋಗಗಳಿಗೆ ತನ್ನನ್ನು ತಾನು ತೆರೆದುಕೊಂಡಿತು. ಪ್ರತಿಭಾವಂತರ ಹಿಂಡೇ ಈ ಸಂಸ್ಥೆಯನ್ನು ಸೇರಿಕೊಂಡಿತು. ಪಾರಂಪರಿಕ ಹಾಗೂ ಪಾಶ್ಚಾತ್ಯ ಅಭಿನಯ ಮಾದರಿಗಳ ಪರಿಚಯ ಪಡೆದಿದ್ದ ಬಳ್ಳಾರಿ ರಾಘವ ಎಂಬ ದೈತ್ಯ ಪ್ರತಿಭೆಯ ನಟ ಈ ಸಂಸ್ಥೆ ಸೇರಿಕೊಂಡ ಮೇಲೆ ಇದರ ಚಟುವಟಿಕೆಗಳು ನಾಡಿನಾದ್ಯಂತ ವಿಸ್ತಾರ ಪಡೆದುಕೊಂಡವು. ಪಂಡಿತ್ ತಾರಾನಾಥರು ರಚಿಸಿದ ‘ದೀನಬಂಧು ಕಬೀರ್’ ನಾಟಕವಾಗಿ ಯಶಸ್ವಿ ಪ್ರಯೋಗ ಕಂಡಿತು. ಖ್ಯಾತ ಅಭಿನೇತ್ರಿಗಳನ್ನೊಳಗೊಂಡಿದ್ದ ಈ ತಂಡ ಹಿಂದಿ, ಇಂಗ್ಲಿಷ್, ತೆಲುಗು ಭಾಷೆಯಲ್ಲೂ ನಾಟಕಗಳನ್ನು ಪ್ರದರ್ಶಿಸುತ್ತಿತ್ತು. ರವೀಂದ್ರನಾಥ ಟ್ಯಾಗೋರ್(1919), ಸರೋಜಿನಿ ನಾಯ್ಡು(1921) ಸ್ವತಃ ಎಡಿಎ ನಾಟಕಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ವರದಾಚಾರ್ಯರ ರತ್ನಾವಳಿ, ಅರಮನೆ ಕಂಪನಿಗೆ ಸರಿಸಾಟಿಯಾಗಿ ಇದರ ಪ್ರದರ್ಶನಗಳು ಇದ್ದವೆಂಬುದು ಈ ಹವ್ಯಾಸಿ ತಂಡದ ಹೆಗ್ಗಳಿಕೆ. ಇಂಗ್ಲಿಷ್ನಲ್ಲಿ ‘ಥಿಯೇಟರ್’ ಕನ್ನಡದಲ್ಲಿ ‘ರಂಗಭೂಮಿ’ ಎಂಬ ಪತ್ರಿಕೆಗಳನ್ನು ಆರಂಭಿಸಿತು. ಎಂ.ಎಲ್ಎಸ್. ಶಾಸ್ತ್ರೀ, ಬಿ ಶ್ರೀನಿವಾಸಯ್ಯಂಗಾರ್ ಪಾತ್ರ ಗಣನೀಯ. ಈ ಸಂಸ್ಥೆ ಇಂದಿಗೂ ಕಾರ್ಯನಿರತವಾಗಿದೆ. ಶತಮಾನೋತ್ಸವ ಆಚರಣೆಗೆ ಸಜ್ಜಾಗುತ್ತಿರುವ ಸಂಸ್ಥೆ. ನಗರದ ರವೀಂದ್ರ ಕಲಾಕ್ಷೇತ್ರದ ಮುಂಭಾಗದಲ್ಲಿ ರಂಗಮಂದಿರವನ್ನು ನಿರ್ಮಿಸಿದೆ.
1918ರಲ್ಲಿ ಎಡಿಎ ಸಂಸ್ಥೆ ಏರ್ಪಡಿಸಿದ್ದ ನಾಟಕ ರಚನಾ ಸ್ಪರ್ಧೆಯಲ್ಲಿ ಭಾಗವಹಿಸಿದ ಟಿ.ಪಿ. ಕೈಲಾಸಂರ ಟೊಳ್ಳುಗಟ್ಟಿ ನಾಟಕ ಕನ್ನಡ ಹವ್ಯಾಸಿ ರಂಗಭೂಮಿ ಚರಿತ್ರೆಯಲ್ಲಿ ಸಾಮಾಜಿಕ ಪ್ರಹಸನದ ದಾರಿಯನ್ನು ತೆರೆಯಿತು.
ಮುಂದೆ ಬೆಂಗಳೂರಿನಲ್ಲಿ 1930ರಲ್ಲಿ ಅಸ್ತಿತ್ವಕ್ಕೆ ಬಂದ ಮಲ್ಲೇಶ್ವರಂ ಅಮೆಚೂರ್ ಅಸೋಸಿಯೇಷನ್ ಕೈಲಾಸಂರ ನಾಟಕಗಳನ್ನೇ ಹೆಚ್ಚಾಗಿ ಪ್ರದರ್ಶಿಸಿತು. ಸಿ.ಕೆ. ನಾಗರಾಜರಾಯರು 1936ರಲ್ಲಿ ಅಸ್ತಿತ್ವಕ್ಕೆ ತಂದ ಯುನೈಟೆಡ್ ಆರ್ಟಿಸ್ಟ್ ತಂಡ ಮತ್ತೆ ವೈವಿಧ್ಯಮಯ ನಾಟಕಗಳತ್ತ ಮುಖ ಮಾಡಿತು. 40ರ ದಶಕದಲ್ಲಿ ಸ್ಥಾಪಿತವಾದ ಛಾಯಾ ಆರ್ಟಿಸ್ಟ್ ತಂಡ ಪರ್ವತವಾಣಿ ನಾಟಕಗಳನ್ನು ಹೆಚ್ಚು ಪ್ರದರ್ಶಿಸಿತು. ಪರ್ವತವಾಣಿ ಅವರು ವಿಶ್ವದ ಪ್ರಸಿದ್ಧ ಕ್ಲಾಸಿಕ್ಸ್‌ಗಳನ್ನು ಅದರಲ್ಲೂ ವಿಶೇಷವಾಗಿ ಶೇಕ್ಸ್‌ಪಿಯರ್ ನಾಟಕಗಳನ್ನು ಕನ್ನಡದ ಜಾಯಮಾನಕ್ಕೆ ಅನುಗುಣವಾಗಿ ರೂಪಾಂತರಿಸಿದರು. ಅವು ಪರ್ವತವಾಣಿಯವರ ಸ್ವಂತ ರಚನೆ ಎನಿಸುವಷ್ಟು ತಾಜಾ ಆಗಿದ್ದವು. ಶೇಕ್ಸ್‌ಪಿಯರ್ನ ಟೇಮಿಂಗ್ ಆಫ್ ದಿ ಶ್ರ್ಯೂ ಆಧರಿಸಿ ರಚಿಸಿದ ಬಹುದ್ದೂರು ಗಂಡು ಹಾಗೂ ಉಂಡಾಡಿ ಗುಂಡ ಆ ಕಾಲಕ್ಕೆ ಅತಿ ಹೆಚ್ಚು ಪ್ರದರ್ಶನ ಕಂಡ ಜನಪ್ರಿಯ ನಾಟಕ ಎನಿಸಿದವು. ಕೆ.ವಿ. ಅಯ್ಯರ್ ಅವರು 1954-55ರಲ್ಲಿ ತಮ್ಮ ಗರಡಿ ಮನೆಯಲ್ಲಿ ಆರಂಭಿಸಿದ ರವಿ ಕಲಾವಿದರು ತಂಡ ಎರಡು ತಿಂಗಳಿಗೊಮ್ಮೆ ಹೊಸ ನಾಟಕ ನೀಡುವ ಯೋಜನೆ ಆರಂಭಿಸಿತು. ಮರಾಠಿ ನಾಟಕಕಾರ ಪು.ಲ. ದೇಶಪಾಂಡೆ ಅವರ ತನುವೂ ನಿನ್ನದೇ ಈ ತಂಡದ ಹೆಸರಾಂತ ನಾಟಕ. ಹವ್ಯಾಸಿ ರಂಗಭೂಮಿಗೆ ರಂಗಪರಿಕರ, ಮೈಕ್ ಸೆಟ್ಗಳು ಅಸ್ತಿತ್ವಕ್ಕೆ ಬಂದ ಕಾಲಘಟ್ಟ ಅದು. ವೃತ್ತಿ ರಂಗಭೂಮಿಯ ಹಾಗೆ ಹವ್ಯಾಸಿ ರಂಗಭೂಮಿಗೆ ಮಹಿಳೆ ಪ್ರವೇಶ ಬೇಗ ಆಗಲಿಲ್ಲ. 1940-50ರ ದಶಕದವರೆಗೆ ಕಾಯಬೇಕಾಯಿತು.
ಬೆಂಗಳೂರಿನಲ್ಲಿ ನಡೆದ ರಂಗ ಚಟುವಟಿಕೆಗಳು ಶಿಕ್ಷಿತ ಮಧ್ಯಮವರ್ಗಕ್ಕೆ ಸೀಮಿತ ಎನಿಸಿದಾಗಿ ಆ ಕುಂದುಕೊರತೆಯನ್ನು ಮೀರಿ ವ್ಯಾಪಕವಾದದ್ದು ಪ್ರಭಾತ್ ಕಲಾವಿದರ ಅದ್ದೂರಿ ಪ್ರದರ್ಶನಗಳು. ಜನಪ್ರಿಯ ಧಾಟಿಗಳನ್ನು ಹಾಕಿಕೊಂಡು ಸಂಯೋಜಿಸಿದ ನೃತ್ಯ, ಕಣ್ಣು ಕೋರೈಸುವ ಬೆಳಕು, ವೇಷ-ಭೂಷಣದಿಂದಾಗಿ ಸಿಂಡ್ರೆಲಾ, ಗೋವಿನ ಕಥೆ ಮುಂತಾದವು ಬಹುಬೇಗ ಜನಪ್ರಿಯವಾದವು. 1951ರಲ್ಲಿ ಬೆಂಗಳೂರಿನಲ್ಲಿ ಅ.ನ. ಸುಬ್ಬರಾಯರು ಲಲಿತಕಲೆಗಳಿಗೆ ಸಂಬಂಧಿಸಿದ ಕಲಾ ಮಾಸ ಪತ್ರಿಕೆ ಆರಂಭಿಸುವ ಜತೆಗೆ ಚಿತ್ರಾ ಎಂಬ ತಂಡ ಹುಟ್ಟುಹಾಕಿ ಚಿತ್ರಕಲೆ, ನಾಟಕಗಳನ್ನು ವ್ಯವಸ್ಥಿತವಾಗಿ ಸಂಘಟಿಸಿದರು. ವೈವಿಧ್ಯಮಯ ನಾಟಕಗಳು ಈ ಹಂತದಲ್ಲಿ ಪ್ರದರ್ಶನಗೊಂಡವು. ದುಡಿಯುವ ವರ್ಗದ ನೋವು-ನಲಿವುಗಳಿಗೆ ಸಾಹಿತ್ಯ ಸ್ಪಂದಿಸಬೇಕೆನ್ನುವ ಪ್ರಗತಿಶೀಲ ಚಳವಳಿಯ ಉತ್ತುಂಗದ ಕಾಲ ಅದು. ನಾಟಕವೂ ಇದರಿಂದ ಹೊರತಾಗಲಿಲ್ಲ. ಪ್ರಗತಿಶೀಲ ಚಳವಳಿಯ ಅಧ್ವರ್ಯುಗಳಲ್ಲೊಬ್ಬರಾದ ನಿರಂಜನ ಅವರು ರಚಿಸಿದ ‘ಕವಿಪುಂಗವ’ ನಾಟಕವನ್ನು ಚಿತ್ರಾ ಪ್ರದರ್ಶಿಸಿತು. ಕವಿಪುಂಗವ ಕೂಲಿಕಾರರ ಬದುಕನ್ನು ಅನಾವರಣಗೊಳಿಸುವ ನಾಟಕ.
ಪೈಲ್ವಾನ್ ಅಣ್ಣಯ್ಯಪ್ಪನವರ ಕಲಾಜ್ಯೋತಿ, ಉಮೇಶರುದ್ರರ ಸಾಧನಾ ತಂಡ, ಕಲಾಭೂಷಿಣಿ, ಕಮಲ ಕಲಾಮಂದಿರ, ಕಲಾಕುಂಜ ಇಂತಹ ಹತ್ತಾರು ತಂಡಗಳು ಬೆಂಗಳೂರಿನ ಹವ್ಯಾಸಿ ರಂಗಭೂಮಿಯನ್ನು ಜೀವಂತವಾಗಿಟ್ಟವು. ಟಿ ಪಿ ಕೈಲಾಸಂರ ಪ್ರಹಸನಗಳು, ಪರ್ವತವಾಣಿಯವರ ನಾಟಕಗಳ ಜತೆಗೆ ಹಲವಾರು ಅನುವಾದಗಳೂ ಈ ಹಂತದಲ್ಲಿ ಪ್ರಯೋಗಗೊಂಡವು. ಹವ್ಯಾಸಿ ನಾಟಕಗಳ ಆರಂಭದ ಕಾಲಘಟ್ಟದಲ್ಲಿ ನಾ. ಕಸ್ತೂರಿ, ದಾಶರಥಿ ದೀಕ್ಷಿತ್, ಕೈವಾರ ರಾಜಾರಾವ್, ಕ್ಷೀರಸಾಗರ ಅವರ ನಾಟಕಗಳೂ ಅನಂತರದ ದಿನಗಳಲ್ಲಿ ವೈನತೇಯ, ಎ.ಎಸ್. ಮೂರ್ತಿ, ಗುಂಡಣ್ಣ, ನಾ.ಕೃ. ಸತ್ಯನಾರಾಯಣರ ನಾಟಕಗಳು ಹವ್ಯಾಸಿ ರಂಗಭೂಮಿಯನ್ನು ಪೋಷಿಸಿಕೊಂಡು ಬಂದವು. ಈ ಹಂತದಲ್ಲಿ ಹತ್ತಾರು ನಾಟಕ ತಂಡಗಳು ಬೆಂಗಳೂರು ಹಾಗೂ ಹಳೇ ಮೈಸೂರು ಪ್ರಾಂತದ ಪಟ್ಟಣಗಳಲ್ಲಿ ಹುಟ್ಟಿಕೊಂಡವು. ಆದರೆ ನಾಟಕಕ್ಕೆ ಸಾಂಘಿಕ ಶಕ್ತಿ ತಂದುಕೊಟ್ಟದ್ದು ನಾಟ್ಯ ಸಂಘ. ರಾಷ್ಟ್ರದ ಹಲವೆಡೆ ಘಟಕಗಳನ್ನು ಹೊಂದಿದ್ದ ತಂಡ ಇದು. ಬೆಂಗಳೂರಿನಲ್ಲಿ ಇದರ ಒಂದು ಶಾಖೆ ಅಸ್ತಿತ್ವಕ್ಕೆ ಬಂದಿತು.
20ನೆಯ ಶತಮಾನದ ಮೂರನೆಯ ದಶಕದಲ್ಲಿ ಕಾಲೇಜಿನ ರಂಗಚಟುವಟಿಕೆಗಳು ಗಮನಾರ್ಹವಾಗಿ ಕಾಣಿಸತೊಡಗಿದವು. ಈ ನಿಟ್ಟಿನಲ್ಲಿ 1927ರಲ್ಲಿ ಎಂ.ಎಸ್. ನಾರಾಯಣಶಾಸ್ತ್ರಿಗಳ ನೇತೃತ್ವದಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಸ್ಥಾಪನೆಗೊಂಡ ಯೂನಿವರ್ಸಿಟಿ ಅಮೆಚೂರ್ಸ್ ಅಸೋಸಿಯೇಷನ್ ಮೊದಲಿಗೆ ಮುಖ್ಯವಾಗುತ್ತದೆ. ಈ ತಂಡವು ಅಲ್ಲಿಯ ಅಧ್ಯಾಪಕರೇ ರಚಿಸಿಕೊಡುತ್ತಿದ್ದ ನಾಟಕಗಳನ್ನು ತೆಗೆದುಕೊಳ್ಳುತ್ತಿದ್ದವು. ಅಂತಹ ನಾಟಕಗಳಲ್ಲಿ ಬಿ ಎಂ ಶ್ರೀ ಯವರ ಗದಾಯುದ್ಧಂ, ಅಶ್ವತ್ಥಾಮನ್, ಪಾರಸಿಕರು, ಕುವೆಂಪುರವರ ಯಮನ ಸೋಲು, ಬೆರಳ್ಗೆ ಕೊರಳ್ ಮುಂತಾದವು ಗಮನಾರ್ಹವೆನಿಸುತ್ತವೆ. 1928ರಲ್ಲಿ ಪ್ರದರ್ಶನಗೊಂಡ ಯಮನಸೋಲು ನಾಟಕದಲ್ಲಿ ಕುವೆಂಪುರವರೇ ಸ್ವತಃ ಸತ್ಯವಾನನ ಪಾತ್ರವನ್ನು ಅಭಿನಯಿಸಿದ್ದರು. ಈ ಸಂಘದಲ್ಲಿ ಪ್ರಸಿದ್ಧಿಗೆ ಬಂದವರೆಂದರೆ ಸಿ.ಬಿ. ಜಯರಾವ್, ವಿ.ಕೆ. ಶ್ರೀನಿವಾಸನ್(ಬುಳ್ಳ), ಬಿ. ಕೃಷ್ಣ, ಎ.ಸಿ. ನರಸಿಂಹಮೂರ್ತಿ, ಎಂ. ನಟೇಶ್, ಎಂ. ಅಮೀರ್, ಎ.ಎನ್. ಮೂರ್ತಿರಾವ್, ಹೆಚ್.ಕೆ. ರಂಗನಾಥ ಮೊದಲಾದವರು. ಮಹಾರಾಜ ಕಾಲೇಜಿನ ಈ ಸಂಘ 1945ರಲ್ಲಿ ಒಡೆಯಿತು. ಎರಡು ಸಂಸ್ಥೆಗಳಾಯಿತು.
ಇದೇ ರೀತಿಯಲ್ಲಿ ಬೆಂಗಳೂರಿನ ಕಾಲೇಜು ರಂಗ ಚಳವಳಿಯಲ್ಲಿ ದೊಡ್ಡ ಪಾತ್ರ ನಿರ್ವಹಿಸಿದ ಬೆಂಗಳೂರಿನ ಮೆಡಿಕಲ್ ಕಾಲೇಜು, ಲಾ ಕಾಲೇಜು, ರೇಣುಕಾಚಾರ್ಯ ಕಾಲೇಜು, ಬಸವನಗುಡಿ ನ್ಯಾಷನಲ್ ಕಾಲೇಜು ಮತ್ತು ಎಂ ಇ ಎಸ್ ಕಾಲೇಜುಗಳು ಮುಖ್ಯವಾದವು. ಈ ಚಟುವಟಿಕೆಗಳಿಂದ ಹೊರಬಂದ ಅನೇಕರು ರಂಗಭೂಮಿಯಲ್ಲಿ ಮುಖ್ಯರಾಗಿದ್ದಾರೆ. ಅವರಲ್ಲಿ ನಾಣಿ, ಪದ್ದಣ್ಣ, ಕಪ್ಪಣ್ಣ, ನಾಗೇಶ್, ಲೋಕೇಶ್ ಮೊದಲಾದ ಅನೇಕರನ್ನು ಹೆಸರಿಸಬಹುದು.
ಸ್ವಾತಂತ್ರ್ಯಾನಂತರದ ಕರ್ನಾಟಕದಲ್ಲಿ ಕಾಲೇಜುಗಳ ಸಂಖ್ಯೆ ಜಾಸ್ತಿಯಾಯಿತು. ಅವುಗಳಲ್ಲಿ ಕಾಲೇಜಿನ ವಾರ್ಷಿಕೋತ್ಸವ ಸಂದರ್ಭಗಳಲ್ಲಿ ನಾಟಕ ಪ್ರದರ್ಶನಗಳು ಮೊದಲಾದವು. ಇಂತಹ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರದ ಅಧೀನಕ್ಕೊಳಪಟ್ಟು ಸ್ಥಾಪನೆಯಾದ ನಾಟ್ಯ ಸಂಘ ಥಿಯೇಟರ್ ಸಂಸ್ಥೆಯು, ಅಂತರ ಕಾಲೇಜು ನಾಟಕ ಸ್ಪರ್ಧೆಗೆ ವೇದಿಕೆಯನ್ನು ಸೃಷ್ಟಿಸಿತು. ಈ ನೆಲೆಯಲ್ಲಿ ಕಾಲೇಜಿನ ರಂಗ ಚಟುವಟಿಕೆಗಳು ಇನ್ನಷ್ಟು ವ್ಯಾಪಕವಾಯಿತು. ಕರಾವಳಿಯ ಉಡುಪಿಯ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು, ಇದರೊಂದಿಗೆ ಮಂಗಳೂರಿನ ಮಾನಸ ಗಂಗೋತ್ರಿಯ ಹಿಮಕರ ನಾಟಕ ಸಂಘ, ಉಡುಪಿಯ ಪುರ್ಣಪ್ರಜ್ಞ ಕಾಲೇಜು, ಕೊಡಗು ಜಿಲ್ಲೆ ಗೋಣಿಕೊಪ್ಪಲಿನ ಕಾವೇರಿ ಕಾಲೇಜು, ಚಿತ್ರಕಲಾ ಪರಿಷತ್ತು, ಎಂ ಇ ಎಸ್ ಕಾಲೇಜು, ನ್ಯಾಷನಲ್ ಕಾಲೇಜುಗಳು ಮುಖ್ಯವಾಗುತ್ತವೆ.
ನಾಟ್ಯ ಸಂಘದ ನೇತೃತ್ವದಲ್ಲಿ 1950ರಿಂದ ಬೆಂಗಳೂರಿನಲ್ಲಿ ಆರಂಭಿಸಿದ ಉಲ್ಲಾಳ್ಶೀಲ್ಡ್ ಕಾಲೇಜು ನಾಟಕ ಸ್ಪರ್ಧೆಯು ಕಾಲೇಜುಗಳಲ್ಲಿ ಅತ್ಯುತ್ತಮ ನಾಟಕಗಳ ಹುಟ್ಟಿಗೆ ಕಾರಣವಾಯಿತು. ನಾಟಕ ಚಟುವಟಿಕೆಯನ್ನು ಇದು ತೀವ್ರಗೊಳಿಸಿತು.
ಈ ಮಧ್ಯೆ ಬಂದು ಹೋದದ್ದೇ ಅಸಂಗತ ನಾಟಕ ಪರಂಪರೆ. ಬೆಂಗಳೂರಿನ ರಂಗತಂಡಗಳಲ್ಲದೇ ಮೈಸೂರು, ಧಾರವಾಡಗಳಲ್ಲೂ ಅಸಂಗತ ನಾಟಕಗಳ ಪ್ರಯೋಗ-ಚರ್ಚೆ ಕೆಲಕಾಲ ನಡೆಯಿತು. ಚಂದ್ರಕಾಂತ ಕುಸನೂರು, ನ.ರತ್ನ, ಚಂದ್ರಶೇಖರ ಪಾಟೀಲರ ಅಸಂಗತ ನಾಟಕಗಳು ಯಶಸ್ವಿಯಾದವು. ಆದರೆ ಅಸಂಗತ ನಾಟಕಗಳ ಪರಂಪರೆ ಬಹುಕಾಲ ಬಾಳಲಿಲ್ಲ.
ಕನ್ನಡ ಕಲಾಸಂಘ ಬೆಂಗಳೂರಿನಲ್ಲೂ ಶ್ರೀರಂಗರ ನಾಟಕಗಳ ಪ್ರದರ್ಶನಕ್ಕೆ ವೇದಿಕೆಯೊದಗಿಸಿಕೊಟ್ಟಿತು. 1956ರಲ್ಲಿ ಶ್ರೀರಂಗರು ಬೆಂಗಳೂರಿಗೆ ಬಂದು ನೆಲೆಸಿದರು. ಹರಿತ ಸಂಭಾಷಣೆಯ, ಬುದ್ಧಿ ಪ್ರಧಾನವಾದ ಅವರ ನಾಟಕಗಳು ಆ ನಂತರದಿಂದ ಬೆಂಗಳೂರಿನಲ್ಲಿ ಹೆಚ್ಚಾಗಿ ಪ್ರದರ್ಶನಗೊಂಡವು. ಶ್ರೀರಂಗರು ರಂಗಶಿಕ್ಷಣಕ್ಕೆ ಒತ್ತು ನೀಡಿ ಆ ನಿಟ್ಟಿನಲ್ಲಿ ಒಂದು ಪರಿಪಾಠ ಹಾಕಿಕೊಟ್ಟದ್ದು, ಅವರು ನಾಟಕಗಳಿಗೆ ನೀಡಿದ ಕೊಡುಗೆಗಿಂತ ದೊಡ್ಡದು. ಮೊದಲ ಬಾರಿಗೆ ಶಿಕ್ಷಕರಿಗೆ ರಂಗ ತರಬೇತಿ ಕಾರ್ಯಾಗಾರ ಏರ್ಪಡಿಸಿದರು. ದೆಹಲಿಯಲ್ಲಿ ಅದೇ ತಾನೇ ಆರಂಭವಾಗಿದ್ದ ರಾಷ್ಟ್ರೀಯ ನಾಟಕ ಶಾಲೆಗೆ (1959) ಕರ್ನಾಟಕದಿಂದ ಹೆಚ್ಚು ಜನ ಸೇರಿಕೊಳ್ಳುವಂತೆ ಒತ್ತಾಯಿಸಿದರು. ಭರತನ ನಾಟ್ಯಶಾಸ್ತ್ರದ ಅನುವಾದದ ಜತೆಗೆ, ಭಾರತೀಯ ರಂಗಭೂಮಿಯ ಪರಿಚಯವನ್ನು ಅವರ ಕೃತಿಗಳು ಹಾಗೂ ಸಂಪಾದಿತ ಕೃತಿಗಳು ಕಟ್ಟಿಕೊಡುತ್ತವೆ. ನಾಟಕಗಳ ಪ್ರಯೋಗಗಳಿಗೆ ಬೇಕಾದ ಬೌದ್ಧಿಕ ಪರಿಸರವನ್ನು ಕಟ್ಟಿಕೊಡುವಲ್ಲಿ ಅವರ ಕೊಡುಗೆ ಗಣನೀಯವಾದುದು. ನಾಟಕದಲ್ಲಿ ಅಭಿನಯದ ಜತೆ ಬೆಳಕು ರಂಗಪರಿಕರವನ್ನು ಹೆಚ್ಚಿನ ಶಿಸ್ತಿಗೆ ಒಳಪಡಿಸಿದ ಬಿ. ಚಂದ್ರಶೇಖರ್ (ಬಿಸಿ) ಅವರ ಪ್ರಯತ್ನಗಳ ಅನಂತರ ನಾಣಿ, ಆರ್. ನಾಗೇಶ್, ಎಲ್. ಕೃಷ್ಣಪ್ಪನಂತಹ ನೇಪಥ್ಯಕರ್ಮಿಗಳು ಹೆಚ್ಚು ಕ್ರಿಯಾಶೀಲರಾದರು. ರಾಷ್ಟ್ರೀಯ ನಾಟಕಶಾಲೆಯ ಪದವಿ ಪಡೆದ ನಂತರ ಹಿಂದೀ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ಬಿ.ವಿ. ಕಾರಂತರನ್ನು ಕರೆಸಿ(1969) ಅವರಿಂದ ‘ಏವಂ ಇಂದ್ರಜಿತ್’ ನಾಟಕ ಪ್ರಯೋಗಿಸಲಾಯಿತು. ರಾಷ್ಟ್ರೀಯ ನಾಟಕ ಶಾಲೆಯ ಮೊದಲ ತಂಡದಲ್ಲಿ ಅಭ್ಯಾಸ ಮಾಡಿದ ಜಿ.ವಿ. ಶಿವಾನಂದ, ವಿ. ರಾಮಮೂರ್ತಿ, ಕಾರಂತರು ತಮ್ಮ ಹೊಸ ಚಿಂತನೆಗಳಿಗೆ ಬೆಂಗಳೂರನ್ನು ವೇದಿಕೆ ಮಾಡಿಕೊಂಡರು. ಬೆಂಗಳೂರಿಗೆ ಸ್ಪಾಟ್ಲೈಟ್ಗಳ ಬಳಕೆ ಬಂದಾಗ ಅದನ್ನು ಮೊದಲು ಮೆಡಿಕೋಸ್ ತಂಡದವರು ಬಳಸಿದರು. ಅಲ್ಲಿಂದ ಮುಂದೆ ಬೆಂಗಳೂರಿನ ಹವ್ಯಾಸಿ ರಂಗಭೂಮಿ ತಾಂತ್ರಿಕವಾಗಿ ಅಪಾರ ಪ್ರಗತಿ ಸಾಧಿಸಿತು.
ಬೆಂಗಳೂರಿನಲ್ಲಿ ಕೈಗಾರಿಕೆಗಳ ಆಡಳಿತಮಂಡಳಿಯವರು ಸ್ವತಃ ನಾಟಕಗಳ ಬೆಂಬಲಕ್ಕೆ ನಿಂತದ್ದು ಮತ್ತೊಂದು ಬೆಳೆವಣಿಗೆ. ಕಾರ್ಖಾನೆಯ ಕಾರ್ಮಿಕರು ನಾಟಕ ಸಂಘಗಳನ್ನು ಕಟ್ಟಿಕೊಳ್ಳಲು ಅನುಮತಿ ನೀಡಿದರಷ್ಟೇ ಅಲ್ಲ. ನಾಟಕಗಳಿಗೆ ಪ್ರಾಯೋಜಕತ್ವವನ್ನೂ ನೀಡಿದರು. ಅನ್ಯನಿಮಿತ್ತ ರಜೆ, ಪಾಳಿ ಕೆಲಸದ ವೇಳೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಸಹಕರಿಸಿದರು. ಮಾಲೀಕರು ನೀಡಿದ ಈ ಸೌಲಭ್ಯ ಬಳಸಿಕೊಂಡು ಬಿನ್ನಿಮಿಲ್, ಕಿರ್ಲೋಸ್ಕರ್, ಬಿಇಎಲ್, ಎಚ್ಎಎಲ್, ಎಚ್ಎಂಟಿ, ಐಟಿಐ, ಬಿಇಎಂಎಲ್, ಎನ್ಜಿಇಎಫ್ಗಳಲ್ಲಿ ನಾಟಕ ತಂಡಗಳು ಹುಟ್ಟಿಕೊಂಡವು.
1972ರಲ್ಲಿ ರವೀಂದ್ರ ಕಲಾಕ್ಷೇತ್ರದ ಬಂiÀÄಲುರಂಗಮಂದಿರದಲ್ಲಿ ಏರ್ಪಡಿಸಿದ್ದ ಬಂiÀÄಲು ನಾಟಕೋತ್ಸವ ಹವ್ಯಾಸಿ ರಂಗಭೂಮಿ ಬೆಳೆವಣಿಗೆಯಲ್ಲಿ ಒಂದು ಪ್ರಮುಖ ಘಟ್ಟ. ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ನವ್ಯದ ಉಚ್ಛ್ರಾಯ ಕಾಲ ಅದು. ಕನ್ನಡ ಸಾಹಿತ್ಯ ಪ್ರಪಂಚಕ್ಕೆ ನವ್ಯ ಪಂಥ ಬಂದ ಹತ್ತು ವರ್ಷಗಳ ಅನಂತರ ಅದು ನಾಟಕಕ್ಕೆ ಬಂತು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಜಿ.ಎಸ್. ಶಿವರುದ್ರಪ್ಪ ಅವರು ಏರ್ಪಡಿಸಿದ್ದ ಕನ್ನಡ ನಾಟಕ ಪರಂಪರೆ ಮತ್ತು ಪ್ರಯೋಗ ವಿಚಾರ ಸಂಕಿರಣ ಇದಕ್ಕೆ ಪುರಕವಾದ ವಾತಾವರಣವನ್ನು ಕಲ್ಪಿಸಿಕೊಟ್ಟಿತು. ಇಲ್ಲಿ ಪ್ರದರ್ಶನಗೊಂಡ ಕಂಬಾರರ ಜೋಕುಮಾರಸ್ವಾಮಿ, ಲಂಕೇಶರ ಸಂಕ್ರಾಂತಿ ಹಾಗೂ ಅವರೇ ಅನುವಾದಿಸಿದ ಈಡಿಪಸ್ ನಾಟಕ ಕನ್ನಡ ರಂಗಭೂಮಿಯಲ್ಲಿ ಹೊಸ ಸಂಚಲನ ಉಂಟುಮಾಡಿತು. ಮೂರೂ ನಾಟಕಗಳನ್ನು ನಿರ್ದೇಶಿಸಿದ ಕಾರಂತರು ಸಂಗೀತ, ನೃತ್ಯಗಳಿಂದ ನಾಟಕವನ್ನು ಮತ್ತೆ ಕಳೆಗಟ್ಟಿಸಬಹುದಾದ ಸೂಚನೆ ನೀಡಿದರೆ, ಈ ಉತ್ಸವದ ಯಶಸ್ಸಿನ ಸೂತ್ರಧಾರರಾಗಿ ಲಂಕೇಶ್ ಕೆಲಸ ಮಾಡಿದರು. ಟಿಕೆಟ್ ತೆಗೆದುಕೊಂಡು ನಾಟಕ ನೋಡುವ ಪರಿಪಾಠ ಹವ್ಯಾಸಿ ರಂಗಭೂಮಿಯಲ್ಲಿ ಗಟ್ಟಿಯಾಗಿ ನೆಲೆಯೂರಿದ್ದು ಈ ಹಂತದಿಂದ. ಈ ಬಂiÀÄಲು ನಾಟಕೋತ್ಸವದ ಮತ್ತೊಂದು ಪ್ರಮುಖ ಬೆಳೆವಣಿಗೆ ಎಂದರೆ ಯಾವುದೋ ಒಬ್ಬ ನಟ ಅಥವಾ ನಾಟಕಕಾರನ ಹಿಂದೆ ಇರುತ್ತಿದ್ದ ಕಲಾವಿದರು, ರಂಗಕರ್ಮಿಗಳು ಒಂದು ತಂಡದ ವ್ಯಾಪ್ತಿಗೆ ಬಂದರು. ನಿರ್ದೇಶಕನೂ ಪ್ರಮುಖ ಸ್ಥಾನ ಪಡೆದ. ಗಂಭೀರ ಕಥಾವಸ್ತು ಹಾಗೂ ಅದನ್ನು ಅಷ್ಟೇ ಆಕರ್ಷಕವಾಗಿ ರಂಗದ ಮೇಲೆ ತರುವ ಪ್ರಯತ್ನಗಳು ತೀವ್ರಗೊಂಡವು. ಬೆನಕ, ರಂಗಸಂಪದ, ಅಂತರಂಗ, ಕಲಾಗಂಗೋತ್ರಿ, ರಂಗ ಸಂಪದ, ನಟರಂಗದಂತಹ ನಾಟಕ ತಂಡಗಳು ಈ ಹಂತದಿಂದ ಪ್ರಾಮುಖ್ಯತೆ ಗಳಿಸಿಕೊಂಡವು. ಸತ್ತವರ ನೆರಳು, ಕದಡಿದ ನೀರು, ಸಂಗ್ಯಾ ಬಾಳ್ಯಾ, ‘ಹರಕೆಯ ಕುರಿ’, ‘ಯಯಾತಿ’, ‘ಹ್ಯಾಮ್ಲೆಟ್’, ‘ಒಡಲಾಳ’, ‘ಮಹಾಚೈತ್ರ’, ಸುಲ್ತಾನ ಟಿಪ್ಪು, ತುಘಲಕ್ನಂತಹ ವಿಶ್ವದ ಯಾವುದೇ ಶ್ರೇಷ್ಠ ನಾಟಕಗಳನ್ನು ಸರಿಗಟ್ಟುವಂತಹ ನಾಟಕಗಳು ರಂಗದ ಮೇಲೆ ಬಂದವು.
1975ರಲ್ಲಿ ಜನ್ಮ ತಾಳಿದ ಸಮುದಾಯ ತಂಡವು ನಾಟಕವನ್ನು ಮಧ್ಯಮವರ್ಗದಿಂದ ಶ್ರಮಜೀವಿಗಳ ಬಳಿಗೆ ಕೊಂಡೊಯ್ಯಿತು. ತಾಯಿ, ಗೆಲಿಲಿಯೋ, ಹುತ್ತವ ಬಡಿದರೆ, ಪಂಚಮ, ಬೆಲ್ಚಿ, ಏಕಲವ್ಯ, ದಂಗೆಯ ಮುಂಚಿನ ದಿನಗಳು ನಾಟಕಗಳು ದುಡಿಯುವ ಜನತೆಯ ಆಶೋತ್ತರಗಳನ್ನು ಪ್ರತಿಬಿಂಬಿಸಿದವು.
ಬೀದಿ ನಾಟಕಗಳ ದೊಡ್ಡ ಆಂದೋಲನ ಈ ಹಂತದಲ್ಲಿ ನಡೆಯಿತು. ಚಿತ್ರಾ ತಂಡ ರಾಗ್ ಕಲಾವಿದರು ಬೀದಿ ನಾಟಕಗಳನ್ನು ಬೆಂಗಳೂರಿಗೆ ಪರಿಚಯಿಸಿದರೆ, ಸಮುದಾಯ ಅವನ್ನು ಮೂಲೆ ಮೂಲೆಗಳಿಗೆ ಕೊಂಡೊಯ್ದಿತು. ಸಮುದಾಯದ ರೈತನತ್ತ ಜಾಥಾದಂತಹ ರಾಜ್ಯವ್ಯಾಪಿ ಕಾರ್ಯಕ್ರಮಗಳು ಬೀದಿನಾಟಕವನ್ನು ಮನೆ ಮಾತಾಗಿಸಿತು.
ಸಮುದಾಯ ಬೆಂಗಳೂರಿನಲ್ಲಿ ಸಂಘಟಿಸಿದ್ದ ರಂಗ ತರಬೇತಿ ಕಾರ್ಯಾಗಾರವನ್ನು ಬಾದಲ್ ಸರ್ಕಾರ್ ನಡೆಸಿಕೊಟ್ಟ(1979) ಮೇಲೆ ಬೀದಿ ನಾಟಕಕ್ಕೆ ಒಂದು ಸೈದ್ಧಾಂತಿಕ ಸ್ವರೂಪ ಪ್ರಾಪ್ತವಾಯಿತು. ಮುಂದೆ ಇಲ್ಲಿನ ಎಲ್ಲ ಜನಪರ ಚಳವಳಿಗೆ ಬೀದಿ ನಾಟಕಗಳನ್ನು ಬಳಸಿಕೊಳ್ಳಲಾಯಿತು. ತುರ್ತುಪರಿಸ್ಥಿತಿಯನ್ನು ಘೋಷಿಸಿ, ಪ್ರಜಾಸತ್ತೆಯ ಕತ್ತು ಹಿಚುಕಿದ ಕಾರಣಕ್ಕೆ ಇಂದಿರಾ ಗಾಂಧಿ ಮೇಲೆ ಜನತೆಗೆ ಅಪಾರವಾದ ಸಿಟ್ಟಿದ್ದ ಕಾಲಘಟ್ಟ ಅದು. ಅದರ ಬೆನ್ನಿಗೇ ಇಂದಿರಾಗಾಂಧಿ ಚಿಕ್ಕಮಗಳೂರಿಗೆ ಬಂದು ಲೋಕಸಭೆಗೆ ಸ್ಪರ್ಧಿಸಿದರು. ಇಂದಿರಾ ವಿರುದ್ಧ ಬೀದಿ ನಾಟಕಗಳ ಆಂದೋಲನವೇ ನಡೆಯಿತು.
ಕನ್ನಡ ಹವ್ಯಾಸಿ ರಂಗಭೂಮಿಯ ಮುಂದಿನ ದಿನಗಳು ಪ್ರಯೋಗಶೀಲತೆ ಮತ್ತಷ್ಟು ತೀವ್ರಗೊಂಡ ಕಾಲ. ಪ್ರತಿ ಪ್ರಯೋಗದ ಅನಂತರ ಹುಟ್ಟಿಕೊಳ್ಳುತ್ತಿದ್ದ ಹೊಸ ಸವಾಲುಗಳಿಗೆ ಪರಿಹಾರವನ್ನು ಹುಡುಕುವ ದಾರಿಯಲ್ಲಿ ಮತ್ತಷ್ಟು ಒಳ್ಳೆಯ ಪ್ರಯೋಗಗಳೇ ಮೂಡಿಬಂದವು. ಕನ್ನಡದಲ್ಲಿ ನಾಟಕಗಳ ಕೊರತೆ ಎಂದಾಗ ಕತೆ, ಕಾದಂಬರಿಗಳನ್ನು ನಾಟಕಕ್ಕೆ ಅಳವಡಿಸಲಾಯಿತು. ಇಂತಹದೊಂದು ಪರಿಪಾಠ ಕಳೆದ ನಾಲ್ಕು ದಶಕಗಳ ಕಾಲ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ.
ಕನ್ನಡದ ಬಹುಮುಖ್ಯ ಕತೆ, ಕಾದಂಬರಿಗಳು (ಲಂಕೇಶರ ರೊಟ್ಟಿ, ಮುಸ್ಸಂಜೆಯ ಕಥಾ ಪ್ರಸಂಗ, ತೇಜಸ್ವಿಯವರ ತಬರನ ಕತೆ, ಕೃಷ್ಣೇಗೌಡನ ಆನೆ, ಕುಂ. ವೀರಭದ್ರಪ್ಪನವರ ಬೇಲಿ ಮತ್ತು ಹೊಲ-ಇತ್ಯಾದಿ) ನಾಟಕಗಳಾಗಿ ಕಳೆಕಟ್ಟಿದವು.
ನಾಟಕಗಳಲ್ಲಿ ಬರೀ ಮಾತಾಯಿತು. ನೀರಸವಾಯಿತು ಎನಿಸಿದಾಗ ಹಾಡು, ನೃತ್ಯಗಳಿಂದ ಸಮೃದ್ಧಗೊಳಿಸಲಾಯಿತು. ಗುಬ್ಬಿ ಕಂಪನಿ ಹಿನ್ನೆಲೆಯ ಕಾರಂತರೇ ಸಂಗೀತ ಪ್ರಧಾನ ನಾಟಕಗಳಿಗೆ ನಾಂದಿ ಹಾಡಿಬಿಟ್ಟಿದ್ದರು. ಒಳ್ಳೆಯ ಹಾಡುಗಾರರಾದ ಬಿ ಜಯಶ್ರೀ ಸ್ಪಂದನ ತಂಡದ ಮೂಲಕ ಸಂಗೀತ, ಕುಣಿತ ಪ್ರಧಾನವಾದ ಜಾನಪದ ನಾಟಕಗಳ ಪ್ರತೀತಿಯನ್ನು ಹುಟ್ಟುಹಾಕಿದರು. ಲಕ್ಷಾಪತಿ ರಾಜನ ಕತೆ, ಕರಿಮಾಯಿ, ಚಿತ್ರಪಟ ರಾಮಾಯಣ ಜಾನಪದ ಸೊಗಡಿನ ನಾಟಕಗಳು.
ಸಿ.ಆರ್. ಸಿಂಹ, ಮುಖ್ಯಮಂತ್ರಿ ಚಂದ್ರು, ಏಣಗಿ ನಟರಾಜ, ಹುಲುಗಪ್ಪ ಕಟ್ಟೀಮನಿ, ಉಷಾಭಂಡಾರಿ, ಮಂಜುನಾಥ ಬೆಳಕೆರೆಯಂತಹ ಅಪ್ರತಿಮ ನಟರ ಪಡೆ ನಿರ್ಮಾಣ ವಾಯಿತು. ಮೂಕಾಭಿನಯದಲ್ಲಿ ವಿ. ರಾಮಮೂರ್ತಿ, ಜಿ.ವಿ. ಶಿವಾನಂದ, ವಾಲ್ಟರ್ ಡಿಸೋಜ. ಬಿ.ವಿ. ರಾಜಾರಾಂ ಮಾಡಿದ ಸಾಧನೆ, ಏಕವ್ಯಕ್ತಿ ನಾಟಕ ಪ್ರದರ್ಶಗಳಲ್ಲಿ ಸಿ.ಆರ್. ಸಿಂಹ (ಟಿಪಿಕಲ್ ಟಿ.ಪಿ. ಕೈಲಾಸಂ, ಬಿ. ಜಯಶ್ರೀ(ಉರಿಯ ಉಯ್ಯಾಲೆ), ಕೃಷ್ಣಮೂರ್ತಿ ಕವತ್ತಾರ್(ಸಾಯುವನೇ ಚಿರಂಜೀವಿ), ಲಕ್ಷ್ಮೀ ಚಂದ್ರಶೇಖರ(ಹೆಣ್ಣಲ್ಲವೇ?), ಎನ್. ಮಂಗಳಾ(ಊರ್ಮಿಳಾ), ರಮಾನಂದಸ್ವಾಮಿ(ತುಘಲಕ್) ಅವರ ಸಾಧನೆ ಗಮನಾರ್ಹವಾದುದು.
ಮುಂಬಯಿನ ಪೃಥ್ವಿ ಥೇಟರ್ ಮಾದರಿಯಲ್ಲಿ ಅರುಂಧತಿ ನಾಗ್ ರಂಗಶಂಕರ ನಿರ್ಮಿಸಿದ್ದು, ನಂದನದಿಂದ ಸತತ ನೂರು ಗಂಟೆ ನಾಟಕ ಪ್ರದರ್ಶನ, ವಿಶ್ವರಂಗಭೂಮಿ ಆಚರಣೆ ಪರಿಪಾಠ-ಇವೆಲ್ಲ ಹವ್ಯಾಸಿ ರಂಗಭೂಮಿಯ ಕೆಲವು ಮೈಲುಗಲ್ಲುಗಳು. ತಮ್ಮ ಅಸಾಧಾರಣ ರಂಗವಿನ್ಯಾಸದಿಂದ ಸುರೇಶ ಅನಗಳ್ಳಿ ಗಮನಾರ್ಹ ನಿರ್ದೇಶಕನೆನಿಸಿದರೆ, ಪಾತ್ರಗಳ ಚಲನ-ವಲನಕ್ಕೆ ತುಡಿಯುವ ಜೀವಂತಿಕೆ ನೀಡಿ ರಂಗದ ಮೇಲೆ ಅನನ್ಯ ಲವಲವಿಕೆಯನ್ನೇ ಉಂಟುಮಾಡುವ ಇಕ್ಬಾಲ್ ಅಹ್ಮದ್, ಪ್ರಯೋಗಕ್ಕೆ ವೈಭವದ ಮೆರುಗು ತರುವ ಬಸವಲಿಂಗಯ್ಯ, ಜನಪದ ರೂಪಕಗಳ ಮೂಲಕ ಸಂಸ್ಕೃತ ನಾಟಕಗಳಿಗೆ ಮರುಜೀವ ನೀಡಿರುವ ಗೋಪಾಲಕೃಷ್ಣ ನಾಯಿರಿ, ದೇಶೀ ರಂಗಭೂಮಿಯ ಹುಡುಕಾಟದಲ್ಲಿರುವ ರಘುನಂದನ, ಈಗಾಗಲೇ ತಮ್ಮ ಅತ್ಯುತ್ತಮ ರಂಗ ಪ್ರಯೋಗಗಳನ್ನು ನೀಡಿರುವ ಪ್ರಸನ್ನ, ಚಿದಂಬರರಾವ್ ಜಂಬೆ ಮೊದಲಾದವರು ಭರವಸೆದಾಯಕ ನಿರ್ದೇಶಕರಾಗಿದ್ದಾರೆ.
ನಿರ್ಲಕ್ಷ್ಯಕ್ಕೆ ಒಳಗಾದ ಕಥಾವಸ್ತು, ಅವಕಾಶ ವಂಚಿತರನ್ನು ರಂಗದ ಮೇಲೆ ತರುವ ಮೂಲಕ ಸಿ.ಜಿ. ಕೃಷ್ಣಸ್ವಾಮಿ (ಸಿಜಿಕೆ) ರಂಗಭೂಮಿಯ ಮೂಲಸ್ವರೂಪವಾದ ಜಾತ್ಯಾತೀತತೆಯನ್ನು ಪೋಷಿಸಿ-ಬೆಳೆಸಿದರು. ಹಲವಾರು ರಂಗಕರ್ಮಿಗಳನ್ನು ಅವರು ಬೆಳೆಸಿದರು. ಸಿದ್ಧ ನಾಟಕಗಳಿಗೆ ಕಟ್ಟುಬೀಳದೆ ಹತ್ತಾರು ಹೊಸ ನಾಟಕಗಳನ್ನು ಬರೆಯಿಸಿದ ಶ್ರೇಯಸ್ಸು ಅವರದು.
90ರ ದಶಕದಿಂದ ನಾಟಕಗಳಿಗೆ ಅತಿಹೆಚ್ಚು ಹೊಸಬರನ್ನು ಆಕರ್ಷಿಸಿದ ಕೆ.ವಿ. ನಾಗರಾಜಮೂರ್ತಿ ಮತ್ತೊಬ್ಬ ದೈತ್ಯ ಸಂಘಟಕ. ಪ್ರಯೋಗರಂಗ, ಭಾರತ ಯಾತ್ರಾಕೇಂದ್ರದ ಮೂಲಕ ಕಾಲೇಜು ನಾಟಕಗಳಿಗೆ ಮತ್ತೆ ಜೀವ ತುಂಬಿದ ಅವರು ಈ ಮೂಲಕ ಕಾಲೇಜುಗಳಿಂದ ಹಲವು ಪ್ರತಿಭೆಗಳು ರಂಗಮಂದಿರಕ್ಕೆ ಹರಿದು ಬರುವಂತೆ ಮಾಡಿದ್ದಾರೆ.
ಗಿರೀಶ್ ಕಾರ್ನಾಡ್, ಎಚ್.ಎಸ್. ಶಿವಪ್ರಕಾಶ್, ಜಿ.ವಿ. ಜೋಷಿ 70 ಹಾಗೂ 80ರ ದಶಕದ ನಾಟಕಗಳನ್ನು ಕಳೆಗಟ್ಟಿಸಿದ್ದರೆ, ಹೂಲಿ ಶೇಖರ್, ನಿಸರ್ಗಪ್ರಿಯ, ರಾಜೇಂದ್ರ ಕಾರಂತ ಇತ್ತೀಚಿನ ಭರವಸೆ ಮೂಡಿಸುವ ನಾಟಕಕಾರರು. ಮಕ್ಕಳ ರಂಗಭೂಮಿಯಲ್ಲಿ ಆಗಿರುವ ಕೆಲಸ ಕಡಿಮೆ. ಈ ಕೊರತೆಯನ್ನು ನೀಗಲು ಬೆನಕ, ಬಿಂಬ, ರಂಗಕಹಳೆಯಂತಹ ತಂಡಗಳ ಮೂಲಕ ಪ್ರೇಮಾ ಕಾರಂತ, ಎನ್ ಎಸ್ ವೆಂಕಟರಾಂ, ಮಾಧವರಾವ್, ಸಿ ಲಕ್ಷ್ಮಣ, ಇಕ್ಬಾಲ್ ಅಹ್ಮದ್ ಮೊದಲಾದವರು ಗಣನೀಯ ಕೆಲಸ ಮಾಡಿದ್ದಾರೆ.
ರಂಗಭೂಮಿಯ ಇತಿಹಾಸವನ್ನು ದಾಖಲಿಸುವ ಪ್ರಯತ್ನಗಳು ಯಶಸ್ವಿಯಾಗಿ ಆಗಿಲ್ಲ. ಆದರೆ ಹವ್ಯಾಸಿ ರಂಗಭೂಮಿಯಲ್ಲಿ ರಂಗಭೂಮಿ ಕುರಿತೇ ಹುಟ್ಟಿಕೊಂಡ ಕೆಲವು ಪತ್ರಿಕೆಗಳು ಈ ಕೆಲಸವನ್ನು ಸ್ವಲ್ಪಮಟ್ಟಿಗೆ ಮಾಡಿವೆ. ಎಸ್.ವಿ. ವೆಂಕಟಸುಬ್ಬಯ್ಯ ನಂತಹವರು ವೈಯುಕ್ತಿಕ ಮಟ್ಟದಲ್ಲಿ ದಾಖಲೀಕರಣದ ಕೆಲಸ ಮಾಡಿದ್ದಾರೆ.
ರಂಗಭೂಮಿಯ ಇತಿಹಾಸವನ್ನು ದಾಖಲಿಸುವ ಪ್ರಯತ್ನಗಳು ಯಶಸ್ವಿಯಾಗಿ ಆಗಿಲ್ಲ. ಆದರೆ ಹವ್ಯಾಸಿ ರಂಗಭೂಮಿಯಲ್ಲಿ ರಂಗಭೂಮಿ ಕುರಿತೇ ಹುಟ್ಟಿಕೊಂಡ ಕೆಲವು ಪತ್ರಿಕೆಗಳು ಈ ಕೆಲಸವನ್ನು ಸ್ವಲ್ಪಮಟ್ಟಿಗೆ ಮಾಡಿವೆ. ಎಸ್.ವಿ. ವೆಂಕಟಸುಬ್ಬಯ್ಯ ನಂತಹವರು ವೈಯುಕ್ತಿಕ ಮಟ್ಟದಲ್ಲಿ ದಾಖಲೀಕರಣದ ಕೆಲಸ ಮಾಡಿದ್ದಾರೆ.
ನವ್ಯ ಸಾಹಿತ್ಯ ಸಂದರ್ಭದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ವೃತ್ತಿ, ಗ್ರಾಮೀಣ ನಾಟಕಗಳ ದಾಖಲೆ, ವಿಶ್ಲೇಷಣೆ ಇತ್ತೀಚಿನ ಕೆಲವರ್ಷಗಳಿಂದಷ್ಟೇ ಆರಂಭವಾಗಿದೆ. ಇವುಗಳನ್ನು ಆಧರಿಸಿ ರಂಗ ಇತಿಹಾಸ ಕಟ್ಟಬೇಕಾಗಿದೆ. ಹವ್ಯಾಸಿ ನಾಟಕ ಚಟುವಟಿಕೆಗಳ ದಾಖಲೆ, ಚರ್ಚೆಗೆಂದೇ ಕಾಲಕಾಲಕ್ಕೆ ಪತ್ರಿಕೆಗಳು ಜನ್ಮ ತಾಳಿವೆ. ರಂಗಭೂಮಿ, ನಾಂದಿ, ಮುಕ್ತ, ನಟನ, ಛಾಯಾ, ಸಮುದಾಯ ವಾರ್ತಾಪತ್ರ, ಬೀದಿ, ಈ ಮಾಸ ನಾಟಕ, ‘ರಂಗತೋರಣ’, ‘ರಂಗವಾಣಿ’ ಇವುಗಳಲ್ಲಿ ಪ್ರಮುಖವಾದವುಗಳು.
ಹಳೇ ಮೈಸೂರಿನಲ್ಲಿ ಹವ್ಯಾಸಿ ರಂಗಭೂಮಿಯ ದೀರ್ಘ ಇತಿಹಾಸವಾಗಲೀ ಪ್ರಯೋಗಶೀಲತೆಯಲ್ಲಾಗಲೀ ಆದ್ಯತೆ ಇರುವುದು ಬೆಂಗಳೂರು ನಗರಕ್ಕೆ, ಅನಂತರದ ಸ್ಥಾನ ಮೈಸೂರಿಗೆ.
ಮೈಸೂರು : ಮೈಸೂರು ನಗರದಲ್ಲಿ 1919ರಲ್ಲಿ ಟಿ. ಲಕ್ಷ್ಮಣಯ್ಯ ನೇತೃತ್ವದಲ್ಲಿ ಪ್ರಾರಂಭವಾದ ದಿ ಲಿಟರರಿ ಅಂಡ್ ಡ್ರಮಾಟಿಕ್ ಅಸೋಸಿಯೇಷನ್ 1944ರವರೆಗೂ ಕಾರ್ಯಶೀಲವಾಗಿತ್ತು. ಮಹಾರಾಜ ಕಾಲೇಜಿನ ಯಾಕೂಬ್ಸ್, ಮಿತ್ರಮೇಳ, ಕರ್ನಾಟಕ ಸಂಘ ಹವ್ಯಾಸಿ ರಂಗಭೂಮಿಗೆ ಉತ್ತಮ ನಟರನ್ನು ನೀಡಿತು. ಸಂಪತ್ (ಚೆಲುವಯ್ಯಂಗಾರ್) ನೇತೃತ್ವದ ಸ್ವಾಮ್ಸ್ ಲಿಟಲ್ ಥಿಯೇಟರ್ ಕೊಡುಗೆ ಕೂಡ ಗಣನೀಯ.
ಇಲ್ಲಿನ ಹಳೆಯ ಹವ್ಯಾಸಿ ತಂಡವೆಂದರೆ ಅಮರ ಕಲಾಸಂಘ. ವಾಸು (ವಾಸುದೇವಮೂರ್ತಿ) ಆರಂಭಿಸಿದ ಈ ರಂಗತಂಡ ಸಾಕ್ರೆಟಿಸ್, ಭ್ರಮೆ, ತುಘಲಕ್, ಹಾವು ಹರಿದಾಡತಾವ-ಮುಂತಾದ ಎಲ್ಲ ರೀತಿಯ ನಾಟಕಗಳನ್ನು ಪ್ರದರ್ಶಿಸುತ್ತ ಬಂದಿದೆ. ಸರಳ ಹಾಗೂ ಖುಷಿ ಕೊಡುವ ನಾಟಕಗಳಿಗೆ ಇದು ಆದ್ಯತೆ ನೀಡಿದೆ. ಸಿಂಧುವಳ್ಳಿ ಅನಂತಮೂರ್ತಿ ಆರಂಭಿಸಿದ ಸಮತೆಂತೋ (ಸರಸ್ವತಿಪುರದ ಮಧ್ಯದ ತೆಂಗಿನ ತೋಟ) ಎಲ್ಲರಂತವನಲ್ಲ ನನಗಂಡ, ಹುಯ್ಯಲವೋ ಡಂಗುರವ, ಘಾಸಿರಾಂ ಕೊತ್ವಾಲ ಮುಂತಾದ ನಾಟಕಗಳನ್ನು ಅಭಿನಯಿಸುತ್ತ ಬಂದಿದೆ. ಕಲಾಪ್ರಿಯ, ನಾಟ್ಯರಂಗ, ಅಂತರಂಗ, ಸ್ನೇಹಸಂಪದ ಇಲ್ಲಿನ ಮತ್ತೆ ಕೆಲವು ತಂಡಗಳು. ರಾಜಶೇಖರ ಕದಂಬರ ಕದಂಬ ರಂಗವೇದಿಕೆ ವೃತ್ತಿ, ಆಧುನಿಕ ಶೈಲಿಯ ಎಲ್ಲ ರೀತಿಯ ನಾಟಕಗಳನ್ನು ಪ್ರದರ್ಶಿಸಿದೆ. ಹಲವು ನಾಟಕ ಪ್ರದರ್ಶನಗಳಿಗೆ ವೇದಿಕೆ ಒದಗಿಸಿಕೊಟ್ಟಿದೆ. ಅತಿ ಹೆಚ್ಚು ಬೀದಿ ನಾಟಕ ಪ್ರದರ್ಶಿಸಿದ ತಂಡ ಹೆಜ್ಜೆಗೆಜ್ಜೆ, ರಮಾನಂದ, ಶಿವಕುಮಾರ, ಉದಯಕುಮಾರ ಈ ತಂಡದ ಮೂಲಕ ರಾಜ್ಯದ ಹಲವೆಡೆ ಬೀದಿ ನಾಟಕ ಅಭಿಯಾನ ಕೊಂಡೊಯ್ದಿದ್ದಾರೆ.
ಮಂಗಳೂರಿನ ಅಭಿವ್ಯಕ್ತಿ ತಂಡ ನಾಟಕೋತ್ಸವ, ರಂಗ ತರಬೇತಿಗಳಿಗೆ ಆದ್ಯತೆ ನೀಡಿದೆ. ಮಕ್ಕಳ ರಂಗಭೂಮಿಗೆ ತನ್ನನ್ನು ತೊಡಗಿಸಿಕೊಂಡಿದೆ. ಉಡುಪಿಯ ರಥಬೀದಿ ಗೆಳೆಯರು, ಸಮುದಾಯ ಕಲಾವಿದರು ಅಲ್ಲಿನ ಹವ್ಯಾಸಿ ಚಟುವಟಿಕೆಯನ್ನು ಜೀವಂತವಾಗಿಟ್ಟಿದ್ದರೆ, ರಂಗಭೂಮಿ ತಂಡ ಕಳೆದ ಎರಡು ದಶಕಗಳಿಂದ ನಿರಂತರವಾಗಿ ರಾಜ್ಯಮಟ್ಟದ ನಾಟಕ ಸ್ಪರ್ಧೆಯನ್ನು ಏರ್ಪಡಿಸುತ್ತ ಬಂದಿದೆ. ಕರ್ನಾಟಕದ ಎಲ್ಲ ಭಾಗಗಳಿಂದ ಅದರಲ್ಲೂ ಹೆಚ್ಚಾಗಿ ಹಳೇ ಮೈಸೂರಿನ ಬಹುತೇಕ ಹವ್ಯಾಸಿ ನಾಟಕ ತಂಡಗಳು ಇದರಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದುಕೊಂಡಿವೆ. ಆನಂದ ಗಾಣಿಗ ಈ ತಂಡಕ್ಕೆ ತಮ್ಮನ್ನು ಸಮರ್ಪಿಸಿಕೊಂಡು ದುಡಿಯುತ್ತಿರುವ ರಂಗಕರ್ಮಿ. ಮಾಸೂರರ ನೇತೃತ್ವದ ಸಾಗರದ ಉದಯ ಕಲಾವಿದರು ಶ್ರೀರಂಗರ ನಾಟಕ ಪ್ರದರ್ಶನಕ್ಕೆಂದೇ ಮೀಸಲಾಗಿರುವ ತಂಡ. ಶ್ರೀರಂಗರ ಬಹುತೇಕ ಎಲ್ಲ ನಾಟಕಗಳ ಪ್ರದರ್ಶನ, ಮರು ಪ್ರದರ್ಶನಗಳನ್ನು ಈ ತಂಡ ಮಾಡುತ್ತಲೇ ಬಂದಿದೆ.
ಬೆಂಗಳೂರು, ಮೈಸೂರಂತಹ ಕಡೆಯ ಪ್ರಯೋಗಶೀಲತೆಯನ್ನು ಅರಗಿಸಿಕೊಂಡು ವೃತ್ತಿ ಶೈಲಿಯ ಹಳೇ ನಾಟಕಗಳಿಂದ ಹಿಡಿದು ಹೊಸ ನಾಟಕಗಳನ್ನು ಕಾಸರಗೋಡಿನ ಯವನಿಕಾ, ಮಂಡ್ಯದ ಗೆಳೆಯರ ಬಳಗ, ಜನದನಿ, ಶಿವಮೊಗ್ಗದ ಅಭಿನಯ, ದೊಡ್ಡ ಬಳ್ಳಾಪುರದ ನಟ ಗಂಗೋತ್ರಿ, ಭದ್ರಾವತಿಯ ನವೋದಯ ಕಲಾಸಂಘ, ವಿಕಸಂ ಕಲಾವಿದರು, ಶ್ರೀರಾಮ ಕಲಾವಿದರು, ಹಾಸನದ ಅಭಿನಯ, ರಂಗಸಿರಿ, ಸಕಲೇಶಪುರ ತಾಲ್ಲೂಕು ಬೆಳ್ಳೇಕೆರೆಯ ಜೈ ಕರ್ನಾಟಕ ಸಂಘ, ದಾವಣಗೆರೆಯ ಪ್ರತಿಮಾ, ತುಮಕೂರಿನ ಶೃಂಗರಂಗ, ಅಮರೇಶ್ವರ ವಿಜಯ ನಾಟ್ಯ ಸಂಘ, ಚಿಕ್ಕಮಗಳೂರಿನ ರಂಗಶ್ರೀ, ಕೆಳದಿಯ ಭಾರತಿ ಕಲಾವಿದರು, ಸಿರಿಗೆರೆಯ ತರಳುಬಾಳು ಕಲಾಸಂಘ, ಸಾಣೇಹಳ್ಳಿಯ ಶಿವಕುಮಾರ ಕಲಾಸಂಘ, ಸಕಲೇಶಪುರ, ನಾಗಮಂಗಲ ತಂಡಗಳನ್ನು ಪ್ರಮುಖವಾಗಿ ಹೆಸರಿಸಬಹುದು.
ಬೆಂಗಳೂರಿನ ಹೊರಗೆ ನಟರಾಗಿ, ಸಂಘಟಕರಾಗಿ ಹವ್ಯಾಸಿ ರಂಗಭೂಮಿಯನ್ನು ಜೀವಂತವಾಗಿಟ್ಟವರ ಪೈಕಿ ಭದ್ರಾವತಿಯ ಶಾಮಮೂರ್ತಿ, ಮೈಸೂರಿನ ರಾಜಶೇಖರ ಕದಂಬ, ದಾವಣಗೆರೆಯ ಎಸ್ ಹಾಲಪ್ಪ, ಮಂಡ್ಯದ ಜಯಪ್ರಕಾಶಗೌಡ, ಶಿವರಾಂ, ಮಂಡ್ಯ ರಮೇಶ್, ಸಿರಿಗೆರೆಯ ಮೌನೇಶಾಚಾರ್, ಪಂಡಿತಾರಾಧ್ಯ ಸ್ವಾಮೀಜಿ ಮೊದಲಾದವರು ಎದ್ದು ಕಾಣುತ್ತಾರೆ.
ದಕ್ಷಿಣ ಕರ್ನಾಟಕದ ಹವ್ಯಾಸಿ ರಂಗ ಚಟುವಟಿಕೆ ಹಲವು ರಂಗಶಾಲೆಗಳ ಹುಟ್ಟಿಗೆ ಕಾರಣವಾಯಿತು. ಬೆಂಗಳೂರಿನ ಅಭಿನಯ ತರಂಗ, ಹೆಗ್ಗೋಡಿನ ನೀನಾಸಂ ರಂಗಶಾಲೆಗಳ ಜತೆಗೆ ಚಿತ್ರದುರ್ಗದ ಮುರುಘಾಮಠ ಶಿಕ್ಷಣ ಸಂಸ್ಥೆ, ಬೆಂಗಳೂರಿನ ಎಂಇಎಸ್ ಕಾಲೇಜು ಶಿಕ್ಷಣ ಸಂಸ್ಥೆ ಮುಂತಾದವು ನಾಟಕ ಡಿಪ್ಲೊಮಾ ತರಗತಿಗಳನ್ನು ಆರಂಭಿಸಿ ಹಲವು ಆಸಕ್ತರು ನಾಟಕದಲ್ಲಿ ತರಬೇತಿ ಪಡೆಯಲು ಕಾರಣವಾಗಿದೆ. 80-90ರ ದಶಕದಲ್ಲಿ ಹಳೇ ಮೈಸೂರಿನಲ್ಲಿ ಎರಡು ಪ್ರಮುಖ ರೆಪರ್ಟರಿ (ಸಂಚಾರಿ ವೃತ್ತಿ ನಾಟಕ ತಂಡ) ಸೇರಿದಂತೆ, ಹಲವಾರು ರೆಪರ್ಟರಿಗಳು ಹುಟ್ಟಿಕೊಂಡದ್ದು ಹವ್ಯಾಸಿ ರಂಗಭೂಮಿಯ ತೀವ್ರತೆ ದೃಷ್ಟಿಯಿಂದ ಪ್ರಮುಖ ಬೆಳೆವಣಿಗೆ. ಹವ್ಯಾಸಿ ಒಡಲೊಳಗಿನಿಂದ ಜನಿಸಿದ ಈ ರೆಪರ್ಟರಿಗಳು ರಂಗಭೂಮಿಗೆ ವೃತ್ತಿಪರತೆ ಒದಗಿಸಿಕೊಟ್ಟಿವೆ. ಉತ್ತರ ಕರ್ನಾಟಕಕ್ಕೆ ಹೊಂದಿಕೊಂಡಿರುವ ಸಾಗರ ತಾಲ್ಲೂಕಿನ ಹೆಗ್ಗೋಡು ನೀಲಕಂಠೇಶ್ವರ ನಾಟ್ಯಸಂಘಕ್ಕೆ (ನೀನಾಸಂ) ಮರುಜೀವ ನೀಡಿದ ಲೇಖಕ ಕೆ.ವಿ. ಸುಬ್ಬಣ್ಣ ಅವರು ನಿರಂತರ ನಾಟಕ ಪ್ರಯೋಗ, ಸಿನಿಮಾ ಪ್ರದರ್ಶನ, ಸಾಹಿತ್ಯಕ ಚರ್ಚೆಯ ಒಟ್ಟಾರೆ ಸಾಂಸ್ಕೃತಿಕ ಚಟುವಟಿಕೆಗಳ ಮಧ್ಯೆಯೇ ತಿರುಗಾಟ ಸಂಚಾರಿ ರಂಗತಂಡಕ್ಕೆ ಒಂದು ರೂಪು ನೀಡಿದರು.
1985ರಿಂದ ಈ ತಿರುಗಾಟ ಆರಂಭವಾಯಿತು. ನೀನಾಸಂನಲ್ಲಿ ರಂಗ ತರಬೇತಿ ಹೊಂದಿದ ವಿದ್ಯಾರ್ಥಿಗಳಿಂದ 3-4 ತಿಂಗಳ ಕಾಲ ಮೂರು ನಾಟಕಗಳನ್ನು ಸಿದ್ಧಪಡಿಸಿ ಕೊಂಡು ಮುಂದಿನ 5-6 ತಿಂಗಳು ರಾಜ್ಯದ ಹಲವಾರು ಪಟ್ಟಣ, ಊರು, ನಗರಗಳಲ್ಲಿ ಪ್ರದರ್ಶನ ನೀಡುತ್ತ ಬಂದದ್ದೇ ಈ ನೂತನ ಯೋಜನೆ. ಪ್ರತಿ ವರ್ಷ 40-50 ಊರುಗಳಲ್ಲಿ 100-150 ಪ್ರದರ್ಶನ ಆಗುತ್ತವೆ. ಕಳೆದ ಮೂರು ವರ್ಷಗಳಿಂದ ಮೂರು ನಾಟಕಗಳನ್ನು ಎರಡು ನಾಟಕಗಳಿಗೆ ಕಡಿಮೆ ಮಾಡಲಾಗಿದೆ. ಆದರೆ ಮರು ತಿರುಗಾಟ ಎಂಬ ಮತ್ತೊಂದು ಸಂಚಾರಿ ನಾಟಕ ಪ್ರದರ್ಶನಗಳನ್ನು ರೂಪಿಸಲಾಗಿದೆ. ಪ್ರತಿ ವರ್ಷ ಮೂರು ನಾಟಕಗಳ ಪೈಕಿ ವಿಶ್ವದ ಯಾವುದಾದರೂ ಶ್ರೇಷ್ಠ ಕೃತಿ, ಒಂದು ಸಂಸ್ಕೃತ ನಾಟಕ, ಒಂದು ಕನ್ನಡ ನಾಟಕ ಇರುತ್ತವೆ.
ಸಂಸ್ಕೃತ, ಇಂಗ್ಲಿಷ್ ಸೇರಿದಂತೆ ವಿಶ್ವದ ಹಲವು ಭಾಷೆಗಳ ಕ್ಲಾಸಿಕ್ಸ್‌ಗಳನ್ನು ಪರಿಚಯಿಸಿದ್ದು, ರಂಗಭೂಮಿಗೆ ತಮ್ಮನ್ನು ಸಮರ್ಪಿಸಿಕೊಳ್ಳುವಂತಹ ಹತ್ತಾರು ರಂಗಕರ್ಮಿಗಳಿಗೆ ತರಬೇತಿ ನೀಡಿ ಸಿದ್ಧಪಡಿಸಿದ್ದು ನೀನಾಸಂನ ಕೊಡುಗೆ. ತುಮರಿಯ ಕೆ.ಜಿ. ಕೃಷ್ಣಮೂರ್ತಿ ಅವರು ಶಾಲೆ, ಕಾಲೇಜುಗಳಲ್ಲಿ ನಾಟಕ ಪ್ರದರ್ಶನಕ್ಕಾಗಿಯೇ ರೆಪರ್ಟರಿ ತುಮರಿ ಮೇಳವನ್ನು ಆರಂಭಿಸಿದರು. ತಿಪಟೂರಿನ ನಟರಾಜ ಪ್ರೊಥಿಯು ಎಂಬ ರೆಪರ್ಟರಿ ಹುಟ್ಟು ಹಾಕಿದರು.
ಹೊಸದುರ್ಗ ತಾಲ್ಲೂಕು ಸಾಣೇಹಳ್ಳಿಯ ಮಠಾಧೀಶರೂ ಲೇಖಕರೂ ಆದ ಪಂಡಿತಾರಾಧ್ಯ ಸ್ವಾಮಿಗಳು ತಮ್ಮ ಶಿವಕುಮಾರ ಹವ್ಯಾಸಿ ಕಲಾಸಂಘದ ಮೂಲಕ 1997ರಲ್ಲಿ ಆರಂಭಿಸಿದ ಶಿವಸಂಚಾರ ರೆಪರ್ಟರಿ ರಾಜ್ಯದ ಮತ್ತೊಂದು ಪ್ರಮುಖ ಸಂಚಾರಿ ತಂಡ. ಪ್ರತಿವರ್ಷ 25 ಕಲಾವಿದರಿಗೆ ತರಬೇತಿ ನೀಡಿ ಮೂರು ನಾಟಕಗಳನ್ನು ಸಿದ್ಧಪಡಿಸಿಕೊಂಡು ರಾಜ್ಯದ ಪ್ರವಾಸ ಹೊರಡುವ ಶಿವಸಂಚಾರ ಕನಿಷ್ಟ 40-50 ಊರುಗಳಲ್ಲಿ ತಲಾ ಮೂರು ನಾಟಕಗಳ ಪ್ರದರ್ಶನ ನೀಡುತ್ತದೆ.
ವ್ಯವಸ್ಥಿತವಾದ ಜನಸಂಘಟನೆಯೂ ಶಿವಸಂಚಾರಕ್ಕೆ ಲಭ್ಯವಾಗಿರುವುದರಿಂದ ಅಪಾರ ಸಂಖ್ಯೆಯ ಪ್ರೇಕ್ಷಕರು ಈ ನಾಟಕ ಪ್ರದರ್ಶನಗಳಿಗೆ ಸೇರುತ್ತಾರೆ. ಕಳೆದ ಎಂಟು ವರ್ಷಗಳಲ್ಲಿ 24 ವಿಭಿನ್ನ ನಾಟಕಗಳನ್ನು ಸು. 340 ಊರುಗಳಲ್ಲಿ 1250 ಪ್ರದರ್ಶನ ನೀಡಿದೆ. 2005ರಲ್ಲಿ ಶಿವಸಂಚಾರ ತನ್ನ 9ನೆಯ ವರ್ಷದ ಪ್ರವಾಸವನ್ನು ಯಥಾ ಪ್ರಕಾರ ಮೂರು ನಾಟಕಗಳೊಂದಿಗೆ ಹೊರಟಿದೆ. ಶಿವಸಂಚಾರ ಇದುವರೆಗೂ ಬಹುತೇಕ ಕನ್ನಡ ನಾಟಕಗಳನ್ನೇ ಪ್ರದರ್ಶಿಸಿದೆ. ಹೊಸ ನಾಟಕಕಾರರು ಶಿವಸಂಚಾರದ ಮೂಲಕ ಸೃಷ್ಟಿಯಾಗಿದ್ದಾರೆ. ಶಿವಸಂಚಾರ ನಾಟಕ ಸಿದ್ಧತೆಯ ಹಂತದಲ್ಲಿ ಹಲವು ಯುವಕರು ರಂಗ ತರಬೇತಿ ಪಡೆದು ರಂಗಭೂಮಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.[೧] 20ನೆಯ ಶತಮಾನ ಉತ್ತರಾರ್ಧದ ಹವ್ಯಾಸಿ ರಂಗಭೂಮಿಯ ಬಹಳ ಪ್ರಮುಖ ಲಕ್ಷಣವೆಂದರೆ ಅದರ ಪ್ರಯೋಗಶೀಲತೆ. ಹೆಗ್ಗೋಡು, ಸಾಣೇಹಳ್ಳಿ, ಸಿರಿಗೆರೆಯಂತಹ ಅಪ್ಪಟ ಗ್ರಾಮೀಣ ಪ್ರದೇಶಗಳ ಜತೆ ಉಡುಪಿ, ಮೈಸೂರಿನಂತಹ ನಗರಗಳಲ್ಲೂ ಹಲವು ಪ್ರಯೋಗಶೀಲತೆಯನ್ನು ಪರೀಕ್ಷೆಗೆ ಒಡ್ಡಲಾಗಿದೆ. ಆದರೆ ಹವ್ಯಾಸಿ ರಂಗಭೂಮಿಯಲ್ಲಿ ಹೆಚ್ಚಿನ ಪ್ರಯೋಗಶೀಲತೆ ಬೆಂಗಳೂರಿನಿಂದಲೇ ಆಗಿದೆ. ಮಾದರಿಗಳು ಅಲ್ಲಿಂದಲೇ ರೂಪುಗೊಂಡಿವೆ. ಆದರೆ ರೆಪರ್ಟರಿ ಯೋಜನೆ ಮೊಳಕೆಯೊಡೆದು, ಹೆಗ್ಗೋಡು, ಸಾಣೇಹಳ್ಳಿಯಂತಹ ಕುಗ್ರಾಮಗಳಲ್ಲಿ ಮಾತ್ರ ಅದು ಸಫಲವಾಗಿದೆ.
ಬಿ.ವಿ. ಕಾರಂತರ ವಿಶೇಷ ಪ್ರಯತ್ನದಿಂದಾಗಿ ಮೈಸೂರಿನಲ್ಲಿ ರಂಗಾಯಣ ಸ್ಥಾಪನೆಯಾಯಿತು. ಇದು ಹವ್ಯಾಸಿಗಳ ಕಲ್ಪನೆಯ ಕೂಸಾದರೂ ನಾಟಕ ತಂಡವಾಗಿ ನೆಲೆ ನಿಂತಿತು. ನಾಟಕ ಹವ್ಯಾಸಿ ಆಗಿರಲು ಸಾಧ್ಯವಿಲ್ಲ. ವೃತ್ತಿಪರತೆ ಬೇಕು ಎಂದು 21ನೆಯ ಶತಮಾನದ ಆರಂಭದಲ್ಲೇ ಎದ್ದ ಪ್ರತಿಪಾದನೆಗೆ ಸಂವಾದಿಯಾಗಿ ತಿರುಗಾಟ, ಶಿವಸಂಚಾರ, ರಂಗಾಯಣ-ಅಷ್ಟೇ ಏಕೆ ಇಂದು ರಂಗಶಿಕ್ಷಣ ಪಡೆದ ಹಲವರು ನಾಟಕವನ್ನೇ ವೃತ್ತಿಯಾಗಿ ಮಾಡಿಕೊಂಡು ನೆಲೆ ನಿಲ್ಲುವ ಹಂತದಲ್ಲಿದ್ದಾರೆ. 20ನೆಯ ಶತಮಾನದ ನಿರಂತರ ಪ್ರಯೋಗಶೀಲತೆ 21ನೆಯ ಶತಮಾನದಲ್ಲಿ ಹೀಗೆ ಫಲ ಕೊಟ್ಟಿದೆ.