ಕೋಲೆಬಸವ
ಕೋಲೆಬಸವ-ಜಾನಪದ ವೃತ್ತಿಜೀವನದಲ್ಲಿ ಒಂದು ಕಲೆಯಾಗಿ ಪರಿಣಮಿಸಿರುವ ಮನೋರಂಜಕ ಆಟ. ಸಾಮಾನ್ಯವಾಗಿ ಕೆಲವು ಗ್ರಾಮಗಳಲ್ಲಿ, ತೀರಿಕೊಂಡವರ ಹೆಸರಿನಲ್ಲಿ ಒಂದು ಹೆಣ್ಣುಕರುವನ್ನೋ ಅಥವಾ ಹೋರಿಕರುವನ್ನೋ ಮುದ್ರೆಯೊತ್ತಿ ಬಿಟ್ಟುಬಿಡುವ ಸಂಪ್ರದಾಯ ಈಗಲೂ ಉಂಟಷ್ಟೆ. ಸ್ವೇಚ್ಛೆಯಾಗಿ ತಿರುಗಾಡುವ ಅಂಥ ಬೀದಿಕರುಗಳನ್ನು ಹಿಡಿದುಕೊಂಡು ಈ ಆಟಕ್ಕೆ ಬಳಸಲಾಗುತ್ತದೆ.
ಕೋಲುಬಸವ ಎಂಬುದು ಕಪಿಲೆಬಸವ ಎಂಬುದರ ಅಪಭ್ರಂಶವಿರಬಹುದು. ಕಪಿಲೆಬಸವ ಎಂಬುವುದೇ ಕವಲೆಬಸವ, ಕೌಲೆಬಸವ, ಕೋಲೆಬಸವ-ಎಂದು ರೂಪಾಂತರ ಹೊಂದಿದೆ. ಕೆಲವು ಕಡೆಗಳಲ್ಲಿ ಕೌಲೆತ್ತು ಇಲ್ಲವೆ ಗಂಗೆತ್ತು ಎಂತಲೂ ಇದನ್ನು ಕರೆಯಲಾಗುತ್ತದೆ.ಇಲ್ಲಿ ಕಪಿಲೆ ಎಂದರೆ ಹಸು. ಈ ಹಸುವಿನ ಜೊತೆ ಬಸವನ್ನು ಜೋಡಿಸಿಕೊಂಡು ಕೋಲೆಬಸವನ ಆಟ ಏರ್ಪಟ್ಟಿದೆ. ಬಸವನನ್ನು ರಾಮನೆಂತಲೂ ಹಸುವನ್ನು ಸೀತೆಯೆಂತಲೂ ಕರೆಯುವುದು ವಾಡಿಕೆ. ಜೊತೆಗೆ ಒಂದು ಚಿಕ್ಕ ಇಳಗರುವನ್ನೂ ಲಗತ್ತಿಸಿಕೊಂಡು ಅದನ್ನು ಲಕ್ಷ್ಮಣನಾಗಿ ಬಳಿಸಿಕೊಳ್ಳುವುದೂ ಉಂಟು.
ಗ್ರಾಮದಿಂದ ಗ್ರಾಮಕ್ಕೆ ಸಾಗುವ ಈ ಜನರ ಆಟ ಬಹಳ ವಿಚಿತ್ರವಾಗಿ ಕಾಣುತ್ತದೆ. ಕೋಲೆಬಸವಗಳು ಪ್ರಯಾಣ ಕಾಲದಲ್ಲಿ ಮಾಲೀಕರ ಗಂಟುಮೂಟೆ ಹೊರುತ್ತವೆ. ಯಾವುದಾದರೂ ಹಳ್ಳಿಗೆ ಬಂದರೆ ಊರ ಹೊರಗಿನ ಚಾವಡಿಯಲ್ಲಿ ಇಲ್ಲವೇ ಆಲದ ಮರದ ನೆರಳಡಿಯೇ ಇವರ ಬಿಡಾರ.
ಕೋಲೆಬಸವನ ಆಟ
[ಬದಲಾಯಿಸಿ]ಕೋಲೆಬಸವನ ಜೋಡಿ ನೋಡಲು ಬಹಳ ಸುಂದರವಾಗಿ ಕಾಣುತ್ತದೆ. ಅವುಗಳ ದೇಹ ಮತ್ತು ಭುಜಗಳನ್ನು ಎತ್ತರವಾಗಿ ಕಾಣುವಂತೆ ವರ್ಣವರ್ಣದ ಜೂಲುಗಳಿಂದ ಅಲಂಕರಿಸಿರುತ್ತಾರೆ. ಕೋಡುಗಳು ಪುಟ್ಟದಾಗಿದ್ದರೂ ಉದ್ದನಾಗಿ ತೋರುವಂತೆ ಬಟ್ಟೆ ಸುತ್ತಿ ಸಿಂಗರಿಸಿರುತ್ತಾರೆ. ಕೋಡಿನ ತುದಿಗಳಲ್ಲಿ ಬಣ್ಣ ಬಣ್ಣದ ಕುಚ್ಚುಗಳನ್ನು ಜೋಡಿಸಿರುತ್ತಾರೆ. ಕಾಲುಗಳಿಗೆ ಗಗ್ಗರ ಕಟ್ಟಿರುತ್ತಾರೆ. ಹಣೆಯ ಮೇಲೆ ಲೋಹದಿಂದ ಮಾಡಿದ ಶ್ರೀರಾಮನ ಇಲ್ಲವೆ ಆಂಜನೇಯನ ಲಾಂಛನವನ್ನು ಅಳವಡಿಸಿರುತ್ತಾರೆ; ಇಲ್ಲವೆ ಕವಡೆಸರದಲ್ಲಿ ಶೃಂಗರಿಸುತ್ತಾರೆ. ಕೋಲೆಬಸವನನ್ನು ಆಡಿಸುವ ಜನರಲ್ಲಿ ಇಬ್ಬರು ವಾದ್ಯದವರು. ಅವರಲ್ಲಿ ಒಬ್ಬಾತ ಮುಖವೀಣೆ ಬಾರಿಸುತ್ತಾನೆ. ಮತ್ತೊಬ್ಬ ಡೋಲು ಬಾರಿಸುತ್ತಾನೆ. ಉಳಿದಿಬ್ಬರು ಬಸವನನ್ನು ಆಡಿಸುತ್ತಾರೆ.
ಕೋಲೆಬಸವನ ಆಟದಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ಅವುಗಳ ಸಿಂಗಾರ, ನಟನೆ, ಆಟಗಾರರ ಮಾತುಗಾರಿಕೆ-ಇವು. ಆಟದ ಮುಖ್ಯ ಕಥೆ ಸೀತಾರಾಮರ ಲಗ್ನ. ಸೀತೆ ಹಾಗೂ ರಾಮರ ಕಡೆ ಒಬ್ಬೊಬ್ಬರು ನಿಂತು ಲಗ್ನ ಮಾಡಿಸುವಾಗ ಅವರಲ್ಲಿ ನಡೆಯುವ ಸಂಭಾಷಣೆ, ಏರ್ಪಡುವ ಸನ್ನಿವೇಶಗಳು ತುಂಬ ವಿನೋದವಾಗಿರುತ್ತದೆ. ಆಟಗಾರರಲ್ಲಿ ಒಬ್ಬಾತ ರಾಮನನ್ನು (ಬಸವ) ಕರೆದು `ಗೌಡರ ಹೆಸರನ್ನು ಕೇಳಿ, ಗೌಡರು ದಾನಧರ್ಮ ತೂಗುವುದು ಬಲಗೈ. . . . . . . ಗೊತ್ತಾಯ್ತಾ ಎಂದು ಅವರ ಬಲಗೈ ತೋರಿಸಿದರೆ ಬಸವ ತನ್ನ ಬಲಗಾಲನ್ನು ಹಿಂದಕ್ಕೆ ಕೊಂಚ ಎತ್ತಿ ತೋರಿಸುತ್ತದೆ; ಗೌಡರಿಗೆ ನಮಸ್ಕಾರ ಮಾಡೆಂದರೆ ಬಾಗಿ ಮುಂದಿನ ಕಾಲನ್ನು ಹಿಂಭಾಗಕ್ಕೆ ಬಾಗಿಸಿ ತಲೆಬಾಗಿ ನಮಸ್ಕರಿಸುತ್ತದೆ.
ಅನಂತರ ಲಕ್ಷ್ಮಣನನ್ನು (ಪುಟ್ಟ ಕರು) ಆತ ಕರೆಯುತ್ತಾನೆ. ಕರೆದು `ಕುಸ್ತಿ ಮಾಡು ಬಾರೋ ಎನ್ನುತ್ತಾನೆ. ಆಗ ಲಕ್ಷ್ಮಣ ಬಂದು ಸುತ್ತು ಹಾಕುತ್ತದೆ. `ಹೋಗಪ್ಪ ಎಂದು ಹೇಳಿದ ಕೂಡಲೆ ಸ್ವಲ್ಪ ದೂರ ಹೋಗಿ ನಿಲ್ಲುತ್ತದೆ.ಸೀತೆಯೊಡನೆ ರಾಮನ ಲಗ್ನ ಮಾಡಿಸುವ ರೀತಿಯಂತೂ ತುಂಬ ಆಕರ್ಷಕವಾದುದು.ರಾಮನ ಕಡೆ ವ್ಯಕ್ತಿ `ನಮ್ಮ ರಾಮಣ್ಣನಿಗೆ ಹೆಣ್ಣು ಕೊಡುವವರು ಯಾರು?' ಎಂದು ಕೇಳುತ್ತಾನೆ.`ನಾವು ಎಂದು ಉತ್ತರಿಸುತ್ತಾನೆ, ಸೀತೆ ಕಡೆಯವ. ಮದುವೆ ಬೇಕೋ ಬೇಡವೋ ಎಂದು ತಿಳಿಯಲು `ಏನಪ್ಪ, ಮದ್ವಿ ಬೇಕಾ?' ಎಂದು ಕೇಳುತ್ತಾನೆ ಗಂಡಿನವ. ಹೆಣ್ಣಿನವ `ಧಾರೆ ಅಕ್ಕಿ ತಕ್ಕೊಂಡು ಬಂದಿದಿಯಾ?' ಎಂದು ರಾಮನನ್ನು ಕೇಳಿದರೆ ಬಸವ ತಂದಿದೀನಿ ಅನ್ನುವಂತೆ ತಲೆ ಹಾಕುತ್ತದೆ.
ಸೀತಮ್ಮನೂ (ಹಸು) ತಲೆ ಹಾಕಿ ಮದುವೆಗೆ ತನ್ನ ಸಮ್ಮತಿ ನೀಡುತ್ತದೆ.
ಮುಂದಿನ ಆಟದಲ್ಲಿ ಮದುವೆಗೆ ಮೊದಲಿನ ಗಂಡು ಹೆಣ್ಣುಗಳ ಮುನಿಸು, ಅವುಗಳ ಬೇಡಿಕೆಗಳು, ಮಧ್ಯಸ್ಥಗಾರರ ಸಮಾಧಾನ-ಈ ಪ್ರಸಂಗಗಳು ಬರುತ್ತವೆ. ಕೊನೆಗೆ ಬಾಜಾಬಜಂತ್ರಿಯೊಡನೆ ರಾಮಸೀತೆಯರ ವಿವಾಹ ಜರಗುತ್ತದೆ.
ಲಗ್ನವಾದ ಮೇಲೆ ರಾಮಚಂದ್ರ ತಾನು ಕಲಿತ ಕೆಲವು ಚಮತ್ಕಾರಗಳನ್ನು ಪ್ರದರ್ಶಿಸುತ್ತಾನೆ. ರಾಮಚಂದ್ರ ಎದೆಯ ಮೇಲೆ ನಿಂತುಕೊಳ್ಳುವ ದೃಶ್ಯ ಅಪರೂಪವಾಗಿರುತ್ತದೆ. ಮೂರು ಕಾಲನ್ನು ತೊಡೆಯ ಮೇಲೆ ಇರಿಸಿ ಒಂದು ಕಾಲನ್ನು ಮಲಗಿರುವವನ ಎದೆಯ ಮೇಲೆ ಇರಿಸುತ್ತಾನೆ. `ಸ್ವಲ್ಪ ನಾಟ್ಕ ಕುಣಿಯಪ್ಪ ಅಂತ ಹೇಳಿದರೆ ತಕದಿಂ ತಕದಿಂ ಎಂದು ಕುಣಿಯುತ್ತಾನೆ. `ಕೆಳಕ್ಕೆ ಹೋಗಪ್ಪ ಅಂತ ಹೇಳಿದರೆ ಕೆಳಕ್ಕೆ ಹೋಗಿ ನಿಲ್ಲುತ್ತಾನೆ.
ಕೋಲೆಬಸವ ಆಡಿಸುವವರು
[ಬದಲಾಯಿಸಿ]ಭಿಕ್ಷಾಟನೆಯೇ ಈ ವೃತ್ತಿಯವರ ಮುಖ್ಯ ಗುರಿ. ಸಿಂಗರಿಸಿದ ಜೋಡಿ ದನಗಳನ್ನು ಓಲಗದೊಡನೆ ಮನೆಮನೆಯ ಬಾಗಿಲ ಮುಂದೆ ತಂದು ನಿಲ್ಲಿಸಿ ಆಟವಾಡಿಸಿ ಈ ಜನ ದವಸಧಾನ್ಯ, ಬಟ್ಟೆಬರೆ ಸಂಗ್ರಹಿಸುತ್ತಾರೆ. ಇವರಲ್ಲಿ ಒಬ್ಬ ಓಲಗದವ. ಈತ ಶಾಸ್ತ್ರ ಹೇಳುವ ಅಭ್ಯಾಸ ಮಾಡಿಕೊಂಡಿರುತ್ತಾನೆ, ಒಳ್ಳೆಯದನ್ನು ನುಡಿಯುತ್ತಾನೆ. `ಶ್ರೀರಾಮನಿಗೆ ಪಂಚೆ ಕೊಡಿ', `ಸೀತಮ್ಮನಿಗೆ ಸೀರೆ ಕೊಡಿ', `ಅವರ ಲಗ್ನಕ್ಕೆ ಕಾಸು ಕೊಡಿ'-ಎಂದು ಅಂಗಲಾಚಿ ಜನರನ್ನು ಬೇಡುತ್ತಾನೆ. ಜೊತೆಗೆ ಅವುಗಳಿಗೆ ಮೇವನ್ನೂ ಸಂಪಾದನೆ ಮಾಡಿಕೊಳ್ಳುತ್ತಾನೆ. ಸುಗ್ಗಿಯ ದಿವಸಗಳಲ್ಲಿ ಈ ತಂಡದವರು ಕೋಲೆಬಸವ ಜೊತೆ ಕಣಗಳಿಗೆ ಹೋಗಿ ಅಲ್ಲಿ ದವಸವನ್ನು ಸಂಗ್ರಹಿಸುತ್ತಾರೆ. ಮಕ್ಕಳಿಗೆ ಭೀ ಬಾಲಗ್ರಹ (ಹಲ್ಲು ಕಚ್ಚುವಿಕೆ, ಇಲ್ಲವೆ ಕಿರಚಾಟ) ಮುಂತಾದವುಗಳ ನಿವಾರಣೆಗೆ ಮಕ್ಕಳು ಬಸವನ ದೇಹದ ಅಡಿಯಿಂದ ನುಸುಳುವಂತೆ ಮಾಡುತ್ತಾರೆ. ಪ್ರಸಾದವಾಗಿ ಕುಂಕುಮವನ್ನು ಕೊಡುತ್ತಾರೆ.
ಸಾಮಾನ್ಯವಾಗಿ ಕೋಲೆಬಸವ ಆಡಿಸುವವರು ಕಡುಬಡವರು. ವಂಶಪಾರಂಪರ್ಯವಾಗಿ ತಮ್ಮ ಈ ಕಸಬನ್ನು ಅವರು ಮುಂದುವರಿಸಿಕೊಂಡು ಬಂದವರಾಗಿರುತ್ತಾರೆ. ಮನೆಮಠ ಇದ್ದರೂ ಅವರಿಗೆ ಅದರ ಕಡೆ ಗಮನವಿರುವುದಿಲ್ಲ. ವರ್ಷವೆಲ್ಲ ಊರಿಂದ ಊರಿಗೆ ವಲಸೆ ಹೋಗಿ ಬಸವನನ್ನು ಆಡಿಸಿ ಭಿಕ್ಷೆ ಬೇಡಿ ಜೀವನ ಸಾಗಿಸುವುದೇ ಇವರಿಗೆ ಪ್ರಿಯ. ಈ ಜನಾಂಗದವರಲ್ಲಿ ಕೆಲವರಿಗೆ ಈಗೀಗ ಅಲ್ಪ ಸ್ವಲ್ಪ ಜಮೀನು ಲಭ್ಯವಾಗಿದ್ದು ಅಂಥವರು ಬೇಸಾಯಕ್ಕೆ ಇಳಿದಿದ್ದಾರೆ. ಅಷ್ಟಾಗಿ ವಿದ್ಯಾವಂತರಲ್ಲದಿದ್ದರೂ ಕಸಬಿಗೆ ತಕ್ಕ ಮಾತಿನ ಚಮತ್ಕಾರ ಇವರಲ್ಲಿ ಬೆಳೆದುಬಂದಿದೆ. ಅದರಿಂದಾಗಿ ಇವರ ಜೀವನ ಇಂದಿಗೂ ಸುಗಮವಾಗಿ ಸಾಗುತ್ತಿದೆ. ಮೂಕಪ್ರಾಣಿಗಳನ್ನು ಜೊತೆ ಹಾಕಿಕೊಂಡು ರಾಮಸೀತೆಯರ ಹೆಸರಿಟ್ಟು ಆಡಿಸಿ ಜನರಲ್ಲಿ ಒಂದು ಕಡೆ ಪೌರಾಣಿಕ ಪ್ರಜ್ಞೆಯನ್ನು ಇವರು ಎಚ್ಚರಿಸುತ್ತಾರಲ್ಲದೆ ಸಾಮಾನ್ಯ ಜನರ ಮದುವೆ ಕಲಾಪವನ್ನು ಪ್ರಹಸನ ರೂಪದಲ್ಲಿ ಅಡಿ ತೋರಿಸಿ ಅವರನ್ನು ಸಂತೋಷಗೊಳಿಸುವ ಕೆಲಸವನ್ನೂ ಮಾಡುತ್ತಾರೆ.