ಕಂಪ್ಯೂಟರ್
ಕಂಪ್ಯೂಟರ್ (ಗಣಕ, ಗಣಕಯಂತ್ರ) ಎನ್ನುವುದು ದತ್ತಾಂಶದ (ಡೇಟಾ) ಸಂಸ್ಕರಣೆ ಹಾಗೂ ಸಂಗ್ರಹಣೆಯನ್ನು ಸುಲಭವಾಗಿಸುವ ವಿದ್ಯುನ್ಮಾನ ಸಾಧನ. ಗಣಿತದ ಲೆಕ್ಕಾಚಾರಗಳು ಹಾಗೂ ತಾರ್ಕಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ದತ್ತಾಂಶವನ್ನು ಸಂಸ್ಕರಿಸುವುದು ಹಾಗೂ ಆ ಮೂಲಕ ದೊರಕುವ ಮಾಹಿತಿಯನ್ನು ನಂತರದ ಬಳಕೆಗಾಗಿ ಉಳಿಸಿಡಲು ಸಾಧ್ಯವಾಗಿಸುವುದು ಕಂಪ್ಯೂಟರಿನ ವೈಶಿಷ್ಟ್ಯ.
ಪರಿಚಯ
[ಬದಲಾಯಿಸಿ]- ಕಂಪ್ಯೂಟರ್ ಒಳರವಾನೆ ಸಂಸ್ಕರಣೆ ಹಾಗೂ ಹೊರರವಾನೆ ಸಾಧನಗಳನ್ನು ಹೊಂದಿದ್ದು ಒಳರವಾನೆ ಸಾಧನಗಳ ಮೂಲಕ ನೀಡಿದಂತಹ ಮಾಹಿತಿಯನ್ನು ಸಂಸ್ಕರಿಸಿ ಹೊರರವಾನೆ ಸಾಧನಗಳ ಮೂಲಕ ಉಪಯೋಗಿಸಿ(ಯೂಜರ್)ಗೆ ನೀಡುವುದಲ್ಲದೇ ಮಾಹಿತಿ ಮತ್ತು ದತ್ತಾಂಶಗಳನ್ನು ಶೇಖರಿಸಿಡಬಹುದಾದ ಸಾಧನವಾಗಿರುತ್ತದೆ.
- ಅಲ್ಲದೇ ಶೇಖರಿಸಿಟ್ಟ ಅಥವಾ ನಾವು ನೀಡಿದಂತಹಾ ಮಾಹಿತಿಯನ್ನು ಒಂದು ಗಣಕಯಂತ್ರ ದಿಂದ ಮತ್ತೊಂದು ಗಣಕಯಂತ್ರಕ್ಕೆ ಸಂಪರ್ಕಜಾಲದ ಮೂಲಕ ನಮ್ಮ ಆದೇಶದ ಮೇರೆಗೆ ರವಾನಿಸುತ್ತದೆ. ಇಂದು ಬಹುತೇಕ ಕ್ಷೇತ್ರಗಳಲ್ಲಿ ಕಂಪ್ಯೂಟರ್‌ನ್ನು ಬಳಸುತ್ತಾರೆ.
- ಕಂಪ್ಯೂಟರಿಗೆ ಉಳಿಸಲಾದ ದತ್ತಾಂಶವನ್ನು ನಿರ್ದಿಷ್ಟ ಹೆಜ್ಜೆಗಳಲ್ಲಿ ಸಂಸ್ಕರಿಸಲಾಗುತ್ತದೆ. ಬಳಕೆದಾರರ ಅಯ್ಕೆಗೆ ಅನುಗುಣವಾಗಿ ಇಂತಹ ನಿರ್ದೇಶನಗಳನ್ನು ನೀಡುವುದು ತಂತ್ರಾಂಶದ (ಸಾಫ್ಟ್‌ವೇರ್) ಕೆಲಸ. ಬಳಕೆದಾರ ಕಂಪ್ಯೂಟರನ್ನು ಬಳಸಲು ನೆರವಾಗುವುದು.
- ದತ್ತಾಂಶ ಸಂಸ್ಕರಣೆಯಲ್ಲಿ ತಂತ್ರಾಂಶ ನೀಡುವ ನಿರ್ದೇಶನಗಳನ್ನು ಪಾಲಿಸುವುದೆಲ್ಲ ಯಂತ್ರಾಂಶದ (ಹಾರ್ಡ್‌ವೇರ್) ಜವಾಬ್ದಾರಿ. ಕಂಪ್ಯೂಟರ್‌ನಲ್ಲಿ ದ್ವಿಮಾನ ಪದ್ಧತಿಯ (ಬೈನರಿ ಪದ್ಧತಿ) ಯಂತ್ರ ಭಾಷೆಯನ್ನು ಬಳಸಲಾಗಿದ್ದು, ಅದು ನಾವು ನೀಡುವ ಎಲ್ಲ ಮಾಹಿತಿಗಳನ್ನು, ಅಂದರೆ ಅಕ್ಷರಗಳು, ಅಂಕೆಗಳು, ಚಿತ್ರಗಳು, ವಿರಾಮ ಚಿಹ್ನೆಗಳು ಹಾಗೂ ಖಾಲಿ ಸ್ಥಾನ, ದ್ವಿಮಾನ ಪದ್ಧತಿಯಲ್ಲಿ ಸ್ವೀಕರಿಸಿ ಅರ್ಥೈಸಿಕೊಳ್ಳುತ್ತದೆ.
ವ್ಯುತ್ಪತ್ತಿ
[ಬದಲಾಯಿಸಿ]- ಲ್ಯಾಟಿನ್ ಪದಗಳಾದ 'computus' ಹಾಗೂ 'computare'ಗಳನ್ನು 'ಕಂಪ್ಯೂಟರ್' ಹೆಸರಿನ ಮೂಲ ಎಂದು ಗುರುತಿಸಲಾಗಿದೆ [೧]. ಇವು ಇಂಗ್ಲಿಷಿನ 'ಕಂಪ್ಯೂಟ್' ಪದದ ಸಮಾನಾರ್ಥಕಗಳು. ಹಾಗಾಗಿ 'ಲೆಕ್ಕ ಮಾಡುವ' ಅಥವಾ 'ಗಣನೆ ಮಾಡುವ' ಯಂತ್ರವೇ ಕಂಪ್ಯೂಟರ್.
- ಯಾಂತ್ರಿಕ ಕಂಪ್ಯೂಟರುಗಳ ಆವಿಷ್ಕಾರಕ್ಕೆ ಮೊದಲು ಲೆಕ್ಕಾಚಾರ ಮಾಡುವ ಕೆಲಸದಲ್ಲಿ ತೊಡಗಿದ್ದ ವ್ಯಕ್ತಿಗಳನ್ನೇ ಕಂಪ್ಯೂಟರುಗಳೆಂದು ಕರೆಯಲಾಗುತ್ತಿತ್ತು. ಯಂತ್ರಗಳ ನೆರವಿನಿಂದ ಲೆಕ್ಕಾಚಾರ ಮಾಡುವುದು ಸಾಧ್ಯವಾದ ನಂತರ ಅಂತಹ ಯಂತ್ರಗಳನ್ನು ಕಂಪ್ಯೂಟರ್ ಎಂದು ಗುರುತಿಸುವ ಅಭ್ಯಾಸ ಬೆಳೆಯಿತು.
ಕಂಪ್ಯೂಟರ್ ಇತಿಹಾಸ
[ಬದಲಾಯಿಸಿ]- ಮೊದಲ ಕಂಪ್ಯೂಟರುಗಳನ್ನು ರೂಪಿಸುವಲ್ಲಿ ಚಾರ್ಲ್ಸ್ ಬ್ಯಾಬೇಜ್, ಅಲನ್ ಟ್ಯೂರಿಂಗ್, ಜಾನ್ ನ್ಯೂಮನ್ ಮೊದಲಾದವರು ಮಹತ್ವದ ಪಾತ್ರ ವಹಿಸಿದ್ದರು.ಡಿಫರೆನ್ಸ್ ಇಂಜಿನ್ ಹಾಗೂ ಅನಲಿಟಿಕಲ್ ಇಂಜಿನ್ ಎಂಬ ಹೆಸರಿನ ಕಂಪ್ಯೂಟರುಗಳನ್ನು ವಿನ್ಯಾಸಗೊಳಿಸಿದ ಬ್ರಿಟನ್ನಿನ ವಿಜ್ಞಾನಿ ಚಾರ್ಲ್ಸ್ ಬ್ಯಾಬೇಜ್‌ನನ್ನು ಕಂಪ್ಯೂಟರ್ ಪಿತಾಮಹ ಎಂದು ಗುರುತಿಸಲಾಗುತ್ತದೆ. ಆಧುನಿಕ ಕಂಪ್ಯೂಟರುಗಳ ಬಗ್ಗೆ ಮೊದಲ ಕಲ್ಪನೆ ಈತನದು.
ಕಂಪ್ಯೂಟರ್ ವಿಧಗಳು
[ಬದಲಾಯಿಸಿ]ಕಾರ್ಯಾಚರಣೆಯ ಸಾಮರ್ಥ್ಯ ಹಾಗೂ ಉಪಯೋಗಗಳ ಆಧಾರದ ಮೇಲೆ ಕಂಪ್ಯೂಟರುಗಳಲ್ಲಿ ಹಲವು ವಿಧ. ಅವುಗಳಲ್ಲಿ ಕೆಲವನ್ನು ಹೀಗೆ ಪಟ್ಟಿಮಾಡುವುದು ಸಾಧ್ಯ:
ವೈಯಕ್ತಿಕ (ಪರ್ಸನಲ್) ಕಂಪ್ಯೂಟರ್, ಅಥವಾ 'ಪಿಸಿ'
[ಬದಲಾಯಿಸಿ]- ಸಾಮಾನ್ಯವಾಗಿ ಬಳಕೆಯಲ್ಲಿರುವ ಬಹಳಷ್ಟು ಕಂಪ್ಯೂಟರುಗಳು ಈ ವಿಧದವು. ಡೆಸ್ಕ್‌ಟಾಪ್, ಲ್ಯಾಪ್‌ಟಾಪ್ ಹಾಗೂ ಟ್ಯಾಬ್ಲೆಟ್ ಕಂಪ್ಯೂಟರುಗಳೆಲ್ಲ ಇದಕ್ಕೆ ಉದಾಹರಣೆಗಳು. ಇಂದಿನ ಸ್ಮಾರ್ಟ್ ಫೋನುಗಳನ್ನೂ ಇದೇ ಗುಂಪಿಗೆ ಸೇರಿಸಬಹುದು. ಪರ್ಸನಲ್ ಕಂಪ್ಯೂಟರುಗಳನ್ನು ಮೈಕ್ರೋಕಂಪ್ಯೂಟರ್ ಎಂದು ಗುರುತಿಸುವ ಅಭ್ಯಾಸವೂ ಇತ್ತು.
- ಹೆಚ್ಚು ಸಾಮರ್ಥ್ಯದ, ವಿಶೇಷ ಯಂತ್ರಾಂಶಗಳನ್ನು ಹೊಂದಿದ್ದ ಶಕ್ತಿಶಾಲಿ ಕಂಪ್ಯೂಟರುಗಳನ್ನು 'ವರ್ಕ್‍ಸ್ಟೇಶನ್'ಗಳೆಂದು ಗುರುತಿಸಲಾಗುತ್ತಿತ್ತು. ತಂತ್ರಜ್ಞಾನ ಬೆಳೆದಂತೆ ಪರ್ಸನಲ್ ಕಂಪ್ಯೂಟರು ಗಳಲ್ಲೇ ಹೆಚ್ಚಿನ ಸೌಲಭ್ಯಗಳು ದೊರಕುವಂತಾಗಿ ಪಿಸಿಗಳಿಗೂ ವರ್ಕ್‌ಸ್ಟೇಶನ್‌ಗಳಿಗೂ ನಡುವಿನ ವ್ಯತ್ಯಾಸ ಮಸುಕಾಗಿದೆ.
ಮಧ್ಯಮ ಶ್ರೇಣಿಯ (ಮಿಡ್‌ರೇಂಜ್) ಕಂಪ್ಯೂಟರುಗಳು
[ಬದಲಾಯಿಸಿ]ಕಂಪ್ಯೂಟರ್ ಕುಟುಂಬದಲ್ಲಿ ಪರ್ಸನಲ್ ಕಂಪ್ಯೂಟರುಗಳ ನಂತರದ ಸ್ಥಾನ ಮಧ್ಯಮ ಗಾತ್ರದ ('ಮಿಡ್‌ರೇಂಜ್') ಕಂಪ್ಯೂಟರುಗಳದು. ಇಂತಹ ಕಂಪ್ಯೂಟರುಗಳನ್ನು ಹೆಚ್ಚಿನ ಸಂಖ್ಯೆಯ ಬಳಕೆದಾರರು ಏಕಕಾಲದಲ್ಲೇ ಬಳಸುವುದು ಸಾಧ್ಯ. ಮಿಡ್‌ರೇಂಜ್ ಕಂಪ್ಯೂಟರುಗಳನ್ನು 'ಮಿನಿಕಂಪ್ಯೂಟರ್' ಎಂದೂ ಗುರುತಿಸಲಾಗುತ್ತಿತ್ತು.
ಮೈನ್‌ಫ್ರೇಮ್
[ಬದಲಾಯಿಸಿ]ಇವು ಅಪಾರ ಪ್ರಮಾಣದ ದತ್ತಾಂಶವನ್ನು ನಿಭಾಯಿಸಲು ಬೇಕಾದ ಸಂಸ್ಕರಣಾ ಸಾಮರ್ಥ್ಯ ಹಾಗೂ ವಿಶ್ವಾಸಾರ್ಹತೆಯನ್ನು ಹೊಂದಿರುವ ಕಂಪ್ಯೂಟರುಗಳು. ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಜೀವವಿಮಾ ಸಂಸ್ಥೆಗಳು ಮೊದಲಾದೆಡೆಗಳಲ್ಲಿ ಈ ಬಗೆಯ ಕಂಪ್ಯೂಟರುಗಳನ್ನು ಬಳಸಲಾಗುತ್ತದೆ.
ಸೂಪರ್‌ಕಂಪ್ಯೂಟರ್
[ಬದಲಾಯಿಸಿ]ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯ ಹೊಂದಿರುವ ಹೆಗ್ಗಳಿಕೆ ಈ ಬಗೆಯ ಕಂಪ್ಯೂಟರುಗಳದು. ಇವು ಅತ್ಯಂತ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಪ್ರಮಾಣದ ಲೆಕ್ಕಾಚಾರಗಳನ್ನು ಕೈಗೊಳ್ಳಬಲ್ಲವು. ಅತ್ಯಂತ ಕ್ಲಿಷ್ಟ ಲೆಕ್ಕಾಚಾರಗಳನ್ನು ಬಳಸುವ ಹವಾಮಾನ ಮುನ್ಸೂಚನೆ, ವೈಜ್ಞಾನಿಕ ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಇವನ್ನು ಬಳಸಲಾಗುತ್ತದೆ.
ಉಪಯೋಗಗಳು
[ಬದಲಾಯಿಸಿ]ದೂರಸಂಪರ್ಕ, ಶಿಕ್ಷಣ, ಆರೋಗ್ಯ, ವಿಜ್ಞಾನ, ಕೃಷಿ, ಬ್ಯಾಂಕಿಂಗ್, ಜೀವವಿಮೆ, ಕೋರ್ಟು-ಕಚೇರಿ, ವ್ಯಾಪಾರ, ಕಾರ್ಖಾನೆ, ಚಲನಚಿತ್ರ, ಮುದ್ರಣ - ಹೀಗೆ ಕಂಪ್ಯೂಟರ್ ಎಲ್ಲ ಕ್ಷೇತ್ರಗಳಲ್ಲೂ ಉಪಯುಕ್ತ. ವ್ಯವಹಾರ, ಶಿಕ್ಷಣ, ಪದಸಂಸ್ಕರಣೆ, ಮನರಂಜನೆ, ಸಂಶೋಧನೆ ಮೊದಲಾದ ಅನೇಕ ಕ್ಷೇತ್ರಗಳಲ್ಲಿ ಕಂಪ್ಯೂಟರುಗಳು ಬಳಕೆಯಾಗುತ್ತವೆ. ಭಾರೀ ಪ್ರಮಾಣದ ಮಾಹಿತಿ ಸಂಗ್ರಹಣೆ ಇವುಗಳ ಇನ್ನೊಂದು ಪ್ರಮುಖ ಉಪಯೋಗ.
ಕಂಪ್ಯೂಟರಿನ ಕಾರ್ಯಾಚರಣೆ
[ಬದಲಾಯಿಸಿ]- ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್ (ಸಿಪಿಯು), ಅಂದರೆ ಕೇಂದ್ರೀಯ ನಿಯಂತ್ರಣ ಘಟಕ, ಕಂಪ್ಯೂಟರಿನ ಪ್ರಮುಖ ಅಂಗ. ಕಂಪ್ಯೂಟರಿನ ಮೆಮೊರಿಯಲ್ಲಿ ಶೇಖರವಾಗಿರುವ ತಂತ್ರಾಂಶಗಳನ್ನು ಬಳಸಿಕೊಂಡು, ನಾವು ನೀಡುವ ಇನ್‌ಪುಟ್‌ನ ಮೇಲೆ ಅಗತ್ಯ ಲೆಕ್ಕಾಚಾರ ಮಾಡಿ ಔಟ್‌ಪುಟ್ ಅನ್ನು ಒದಗಿಸುವುದು ಈ ಘಟಕದ ಕೆಲಸ.
- ಇದರಲ್ಲಿ ಲೆಕ್ಕಾಚಾರ ಮಾಡುವುದಕ್ಕಾಗಿ ಅರ್ಥ್‌ಮೆಟಿಕ್ ಆಂಡ್ ಲಾಜಿಕ್ ಯೂನಿಟ್ (ಎಎಲ್‌ಯು) ಹಾಗೂ ಯಾವಾಗ ಏನು ಲೆಕ್ಕಾಚಾರ ಮಾಡಬೇಕು, ಆ ಲೆಕ್ಕಾಚಾರವನ್ನು ಹೇಗೆ ನಿಯಂತ್ರಿಸಬೇಕು ಮುಂತಾದವನ್ನು ತೀರ್ಮಾನಿಸುವ ಕಂಟ್ರೋಲ್ ಯೂನಿಟ್ (ಸಿಯು) ಎಂಬ ಎರಡು ಭಾಗಗಳಿರುತ್ತವೆ
ತಂತ್ರಾಂಶ
[ಬದಲಾಯಿಸಿ]- ಕಂಪ್ಯೂಟರ್ ಯಾವುದೇ ಕೆಲಸ ಮಾಡಬೇಕಾದರೂ ಆ ಕೆಲಸದ ಕುರಿತ ಎಲ್ಲ ವಿವರ ಹಾಗೂ ನಿರ್ದೇಶನಗಳನ್ನು ಅದಕ್ಕೆ ಮುಂಚಿತವಾಗಿಯೇ ಕೊಟ್ಟಿರಬೇಕಾಗುತ್ತದೆ. ಈ ವಿವರ ಹಾಗೂ ನಿರ್ದೇಶನಗಳನ್ನು ಕೊಡುವುದು ಸಾಫ್ಟ್‌ವೇರ್, ಅಂದರೆ ತಂತ್ರಾಂಶದ ಕೆಲಸ. ನಾವು ಕೊಟ್ಟ ಇನ್‌ಪುಟ್ ಬಳಸಿ ಏನೇನು ಲೆಕ್ಕಾಚಾರ ಮಾಡಬೇಕು.
- ಯಾವ ರೀತಿಯ ಔಟ್‌ಪುಟ್ ಕೊಡಬೇಕು ಎನ್ನುವುದನ್ನೆಲ್ಲ ಅವು ಕಂಪ್ಯೂಟರ್‌ಗೆ ವಿವರಿಸುತ್ತವೆ. ವಿವಿಧ ಉದ್ದೇಶ ಹಾಗೂ ಉಪಯೋಗಗಳಿಗಾಗಿ ಅನೇಕ ಬಗೆಯ ತಂತ್ರಾಂಶಗಳು ಬಳಕೆಯಾಗುತ್ತವೆ. ಸಾಫ್ಟ್‌ವೇರ್ ಭೌತಿಕವಾಗಿ ಸ್ಪರ್ಶಿಸಲು ಬರುವುದಿಲ್ಲ. ಸಾಫ್ಟ್‌ವೇರ್‌ಗಳನ್ನು ಪ್ರಮುಖವಾಗಿ ಮೂರು ಭಾಗಗಳಾಗಿ ವಿಂಗಡಿಸುತ್ತಾರೆ.
- ಅವುಗಳೆಂದರೆ ಸಿಸ್ಟಂ ಸಾಫ್ಟ್‌ವೇರ್, ಪ್ರೊಗ್ರಾಮಿಂಗ್ ಸಾಫ್ಟ್‌ವೇರ್ ಮತ್ತು ಅಪ್ಲಿಕೇಶನ್ ಸಾಫ್ಟ್‌ವೇರ್. ಒಂದು ಕಂಪ್ಯೂಟರ್ ಅನ್ನು ಬಳಸುವಲ್ಲಿನ ಮೂಲ ಕಾರ್ಯಗಳನ್ನು ಈ ಸಿಸ್ಟಮ್ ಸಾಫ್ಟ್‌ವೇರ್ ರೂಪಿಸುತ್ತದೆ ಮತ್ತು ಕಾರ್ಯಗಳಿಗೆ ಚಾಲನೆ ನೀಡುತ್ತದೆ.
- ಇದು ಡಿವೈಸ್ ಡ್ರೈವರ್‌ಗಳು, ಆಪರೇಟಿಂಗ್ ಸಿಸ್ಟಮ್, ಸರ್ವರ್‌ಗಳು, ವಿಂಡೋ ಸಿಸ್ಟಂ ಮುಂತಾದವುಗಳ ಸಂಯೋಜನೆಯನ್ನು ಒಳಗೊಂಡಿರುತ್ತದೆ. ಸಿಸ್ಟಂ ಸಾಫ್ಟ್‌ವೇರ್ ಕಂಪ್ಯೂಟರ್‌ನಲ್ಲಿ ಬಳಸಲಾಗುವ ಬೇರೆ ಬೇರೆ ಹಾರ್ಡ್‌ವೇರ್ ಭಾಗಗಳು ಸಂಯೋಜಿತವಾಗಿ ಕಾರ್ಯ ನಿರ್ವಹಿಸುವಂತೆ ವ್ಯವಸ್ಥಿತಗೊಳಿಸುತ್ತದೆ.
- ಪ್ರೋಗ್ರಾಮಿಂಗ್ ಸಾಫ್ಟ್‌ವೇರ್ ಕಂಪ್ಯೂಟರ್ ಸಾಫ್ಟ್‌ವೇರ್‌ಗಳನ್ನು ಮತ್ತು ಪ್ರೋಗ್ರಾಮ್‌ಗಳನ್ನು ಬರೆಯಲು ಸಹಾಯ ಮಾಡುತ್ತದೆ. ಅಂತಿಮ ಬಳಕೆದಾರರಾದ ನಮಗೆ ಅಪ್ಲಿಕೇಶನ್ ಸಾಫ್ಟ್‌ವೇರ್‌ಗಳನ್ನು ಬಳಸುವ ಕುರಿತು ತಿಳಿದಿದ್ದರೆ ಸಾಕು.
ಪ್ರೋಗ್ರಾಮಿಂಗ್
[ಬದಲಾಯಿಸಿ]ಕಂಪ್ಯೂಟರಿಗೆ ಬೇಕಾದ ತಂತ್ರಾಂಶಗಳನ್ನು ಸಿದ್ಧಪಡಿಸುವ, ಅಂದರೆ, ಅದರಲ್ಲಿ ಬಳಕೆಯಾಗುವ ಕ್ರಮವಿಧಿಗಳನ್ನು (ಪ್ರೋಗ್ರಾಮ್) ಬರೆಯುವ ಕೆಲಸಕ್ಕೆ ಪ್ರೋಗ್ರಾಮಿಂಗ್ ಎಂದು ಹೆಸರು. ಪ್ರೋಗ್ರಾಮ್ ಬರೆಯಲು ಬಳಕೆಯಾಗುವ ಭಾಷೆಗಳನ್ನು ಪ್ರೋಗ್ರಾಮಿಂಗ್ ಭಾಷೆಗಳೆಂದು ಕರೆಯುತ್ತಾರೆ.
ಅಪ್ಲಿಕೇಶನ್ ಸಾಫ್ಟ್‌ವೇರ್
[ಬದಲಾಯಿಸಿ]- ಕಂಪ್ಯೂಟರ್ ಎಂದರೆ ಬಹೂಪಯೋಗಿ ಯಂತ್ರ ಎಂಬುದು ಈ ಅಪ್ಲಿಕೇಶನ್ ಸಾಫ್ಟ್‌ವೇರ್ ಕುರಿತು ತಿಳಿದಾಗ ನಮಗೆ ಅರಿವಾಗುತ್ತದೆ. ವಿಭಿನ್ನ ಕಾರ್ಯಗಳಲ್ಲಿ ಸಹಾಯಕವಾಗುವಂತೆ ಈ ಅಪ್ಲಿಕೇಶನ್ ಅಥವಾ ಬಳಕೆಯ ಸಾಫ್ಟ್‌ವೇರ್‌ಗಳನ್ನು ರೂಪಿಸಿರಲಾಗುತ್ತದೆ.
- ಇದರಲ್ಲಿ ಅನೇಕ ಪ್ರಕಾರದ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳಿದ್ದು, ಇಂಟರ್ನೆಟ್ ಬಳಸಲು ಬೇಕಾದ ಬ್ರೌಸರ್ ಕೂಡಾ ಇದರಲ್ಲಿ ಬರುತ್ತದೆ. ಬರವಣಿಗೆ ಮಾಡಲು, ಕಂಪ್ಯೂಟರ್ ಆಧಾರಿತ ಚಿತ್ರ ರಚಿಸಲು, ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಎಡಿಟ್ ಮಾಡಲು, ದತ್ತಾಂಶ ಸಂಗ್ರಹಣೆ ಮಾಡಲು, ಗಣಕ ಕಾರ್ಯಗಳಿಗೆ ಬಳಸಲು ಮತ್ತು ವೀಡಿಯೋ ಗೇಮ್‌ಗಳಿಗಾಗಿ ವಿಭಿನ್ನ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳು ಇರುತ್ತವೆ. ಸಾಮಾನ್ಯವಾಗಿ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಇರುವ ಕಂಪ್ಯೂಟರ್‌ನಲ್ಲಿ ಈ ಕೆಳಗಿನ ಅಪ್ಲಿಕೇಶನ್‌ಗಳು ಇರುತ್ತವೆ:
- ಬರವಣಿಗೆ ಹಾಗೂ ದತ್ತಾಂಶ ಸಂಗ್ರಹಣೆಗಾಗಿ ವರ್ಡ್‌ಪ್ಯಾಡ್, ನೋಟ್‌ಪ್ಯಾಡ್, ಎಂಎಸ್ ವರ್ಡ್, ಎಂಎಸ್ ಎಕ್ಸೆಲ್ ,ಎಂ ಎಸ್ ಪವರ್ ಪೋಯಿಂಟ್ ಮುಂತಾದ ಸಾಫ್ಟ್‌ವೇರ್‌ಗಳು, ಚಿತ್ರ ಬಿಡಿಸಲು ಪೇಂಟ್, ಗೇಮ್‌ಗಳು, ಇಂಟರ್ನೆಟ್ ಬ್ರೌಸರ್ ಮುಂತಾದವುಗಳು ಇರುತ್ತವೆ.
- ಇವಲ್ಲದೇ ಅಗತ್ಯಕ್ಕೆ ತಕ್ಕಂತೆ ನಾವು ಹೊಸ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳನ್ನು ಕೂಡಾ ಸ್ಥಾಪನೆ (ಇನ್‌ಸ್ಟಾಲ್) ಮಾಡಿಕೊಳ್ಳಬಹುದು. ಉದಾಹರಣೆಗೆ ಡೆಸ್ಕ್‌ಟಾಪ್ ಡಿಕ್ಷನರಿಗಳು, ಮ್ಯಾಪ್‌ಗಳು, ಫೋಟೋ ಎಡಿಟ್ ಮಾಡುವ ಅಡೋಬ್ ಫೋಟೋಶಾಪ್, ಪುಟವಿನ್ಯಾಸ ಮಾಡುವ ಇನ್‌ಡಿಸೈನ್ ಅಥವಾ ಕ್ವಾರ್ಕ್ ಎಕ್ಸ್‌ಪ್ರೆಸ್, ಡಿಜಿಟಲ್ ಚಿತ್ರಗಳನ್ನು ಹಾಗೂ ಎನಿಮೇಶನ್ ಚಿತ್ರಗಳನ್ನು ಮಾಡುವ ಇಲ್ಲಸ್ಟ್ರೇಟರ್ ಮುಂತಾದವುಗಳು.
- ಇವಲ್ಲದೇ ಬೇರೆ ಬೇರೆ ವಿಜ್ಞಾನ, ವೈದ್ಯಕೀಯ, ಬೇರೇ ಬೇರೆ ವ್ಯವಹಾರಗಳಲ್ಲಿರುವವರು ತಮ್ಮ ಅಗತ್ಯಕ್ಕೆ ತಕ್ಕಂತೆ ಬೇರೆ ಬೇರೆ ಸಾಫ್ಟ್‌ವೇರ್‌ಗಳನ್ನು ಸ್ಥಾಪಿಸಿಕೊಂಡು ಬಳಸುತ್ತಾರೆ. ಈ ಸಾಫ್ಟ್‌ವೇರ್‌ಗಳ ಬಳಕೆಯಿಂದ ಅವರ ದೈನಂದಿನ ಕಾರ್ಯಗಳು ಅತ್ಯಂತ ಸುಲಭವಾಗುತ್ತವೆ.
- ಸಾಫ್ಟ್‌ವೇರ್ ಇಂಜಿನಿಯರುಗಳು ಇಂತಹ ವಿಭಿನ್ನ ಕ್ಷೇತ್ರಗಳ ಅಗತ್ಯಗಳಿಗೆ ತಕ್ಕಂತೆ ಅಪ್ಲಿಕೇಶನ್ ಸಾಫ್ಟ್‌ವೇರ್‌ಗಳನ್ನು ರೂಪಿಸುತ್ತಾರೆ. ಈ ಎಲ್ಲ ಅಪ್ಲಿಕೇಶನ್ ಸಾಫ್ಟ್‌ವೇರ್‌ಗಳನ್ನು ಸ್ಥಾಪಿಸಲು ಮತ್ತು ಬಳಸಿಕೊಳ್ಳಲು ಒಂದು ವೇದಿಕೆಯಿದ್ದು, ಅದನ್ನು ಆಪರೇಟಿಂಗ್ ಸಿಸ್ಟಮ್ ಎಂದು ಕರೆಯುತ್ತಾರೆ.
- ಆಪರೇಟಿಂಗ್ ಸಿಸ್ಟಮ್ ಸಹಾ ಒಂದು ಅತ್ಯಂತ ಮುಖ್ಯ ಸಾಫ್ಟ್‌ವೇರ್ ಆಗಿದೆ. ಇದು ಕಂಪ್ಯೂಟರ್‌ನಲ್ಲಿರುವ ಮೆಮರಿ, ಸಂಗ್ರಹ, ಪ್ರಕ್ರಿಯೆಗಳು, ಎಲ್ಲ ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್‌ಗಳನ್ನು ನಿರ್ವಹಿಸುತ್ತದೆ. ಡಾಸ್, ವಿಂಡೋಸ್, ಲಿನಕ್ಸ್ ಮುಂತಾದವುಗಳು ಈ ಆಪರೇಟಿಂಗ್ ಸಿಸ್ಟಮ್‌ಗೆ ಉದಾಹರಣೆಯಾಗಿವೆ.
ಯಂತ್ರಾಂಶ
[ಬದಲಾಯಿಸಿ]- ಕಂಪ್ಯೂಟರಿಗೆ ಸಂಬಂಧಪಟ್ಟ ಎಲ್ಲ ಭೌತಿಕ ಭಾಗಗಳನ್ನೂ ಹಾರ್ಡ್‌ವೇರ್ (ಯಂತ್ರಾಂಶ) ಎಂದು ಕರೆಯುತ್ತಾರೆ. ಕಂಪ್ಯೂಟರಿನ ಮಾನಿಟರ್, ಕೀಬೋರ್ಡ್, ಮೌಸ್ ಇವೆಲ್ಲ ಯಂತ್ರಾಂಶಕ್ಕೆ ಉದಾಹರಣೆಗಳು.
- ಇವುಗಳಲ್ಲಿ ಕಂಪ್ಯೂಟರಿಗೆ ಮಾಹಿತಿಯನ್ನು ನೀಡಲು (ಇನ್‌ಪುಟ್) ಬಳಕೆಯಾಗುವ ಮೌಸ್, ಕೀಬೋರ್ಡ್, ಟಚ್ ಸ್ಕ್ರೀನ್ ಮುಂತಾದ ಸಾಧನಗಳಿಗೆ ಇನ್‌ಪುಟ್ ಡಿವೈಸಸ್ ಎಂದು ಕರೆಯುತ್ತಾರೆ. ಕಂಪ್ಯೂಟರಿನಿಂದ ಮಾಹಿತಿಯನ್ನು ಪಡೆದುಕೊಳ್ಳಲು (ಔಟ್‌ಪುಟ್) ಬಳಕೆಯಾಗುವ ಮಾನಿಟರ್, ಸ್ಪೀಕರ್, ಪ್ರಿಂಟರ್ ,ಸ್ಕ್ಯಾನರ್ ಮುಂತಾದ ಸಾಧನಗಳಿಗೆ ಔಟ್‌ಪುಟ್ ಡಿವೈಸಸ್ ಎಂದು ಹೆಸರು.
ಮೆಮೊರಿ
[ಬದಲಾಯಿಸಿ]ಕಂಪ್ಯೂಟರ್ ಸಹಾಯದಿಂದ ರೂಪಿಸಿದ ಮಾಹಿತಿಯನ್ನು ಅದರ ಮೆಮೊರಿಯಲ್ಲಿ ಶೇಖರಿಸಿಡುವುದು ಸಾಧ್ಯ. ಇದನ್ನು ಕಂಪ್ಯೂಟರಿನ ಜ್ಞಾಪಕಶಕ್ತಿ ಎಂದೂ ಕರೆಯಬಹುದು. ಮಾಹಿತಿ ಹಾಗೂ ತಂತ್ರಾಂಶಗಳೆರಡೂ ಈ ಮೆಮೊರಿಯಲ್ಲೇ ಶೇಖರವಾಗಿರುತ್ತವೆ.
ಕಂಪ್ಯೂಟರ್ ಉಪಯೋಗಗಳು
[ಬದಲಾಯಿಸಿ]- ಕಂಪ್ಯೂಟರ್‌ನಿಂದ ಸಾಮಾನ್ಯ ಬಳಕೆದಾರನಿಗೆ ಅನೇಕ ಉಪಯೋಗಗಳಿವೆ. ಅವುಗಳು ಯಾವುವೆಂದು ಇಲ್ಲಿ ನೋಡೋಣ: ಕಂಪ್ಯೂಟರ್‌ನಲ್ಲಿ ದಾಖಲೆಗಳನ್ನು, ಮಾಹಿತಿಗಳನ್ನು, ಚಿತ್ರಗಳನ್ನು, ಇ-ಬುಕ್‌ಗಳನ್ನು, ಹಾಡುಗಳನ್ನು, ಚಲನಚಿತ್ರಗಳನ್ನು ಶೇಖರಿಸಿ ಇಡಬಹುದು.
- ವಿದ್ಯಾರ್ಥಿಗಳು, ಸಂಶೋಧಕರು ಪ್ರೊಜೆಕ್ಟ್ ಸಿದ್ಧಗೊಳಿಸಲು, ಅಧ್ಯಯನ ಮಾಡಲು ಕಂಪ್ಯೂಟರ್ ಅಪ್ಲಿಕೇಶನ್‍ಗಳನ್ನು ಬಳಸಿಕೊಳ್ಳಬಹುದು. ಎಂಎಸ್ ವರ್ಡ್‌ನಂತಹ ಅಪ್ಲಿಕೇಶನ್‌ಗಳಲ್ಲಿ ಬರೆಯುವುದು, ತಿದ್ದುವುದು, ಹೊಂದಿಸುವುದು ಅತ್ಯಂತ ಸುಲಭವಾಗಿದ್ದು, ಕೈಬರಹಕ್ಕಿಂತ ಇದು ಅತ್ಯಂತ ಸುಲಭ ಮತ್ತು ವೇಗದ್ದಾಗಿರುತ್ತದೆ.
- ಕಠಿಣವಾದ ಲೆಕ್ಕಗಳನ್ನು ಕಂಪ್ಯೂಟರ್ ಬಳಸಿ ಮಾಡುವುದು ಅತ್ಯಂತ ಸುಲಭವಾಗುತ್ತದೆ. ಕಲಿಕೆಯ ದೃಷ್ಟಿಯಿಂದ ಕಂಪ್ಯೂಟರ್ ಬಳಕೆ ಅತ್ಯಂತ ಪ್ರಯೋಜನಕಾರಿ. ಕಂಪ್ಯೂಟರ್‌ನಲ್ಲಿ ವೀಡಿಯೋ ಗೇಮ್ ಆಡುವುದು ಅತ್ಯಂತ ಮನರಂಜನೀಯವಾಗಿರುತ್ತದೆ. ಹೊಸ ಹೊಸ ಆಟಗಳನ್ನು ಕಂಪ್ಯೂಟರ್‌ನಲ್ಲಿ ಸ್ಥಾಪಿಸಿಕೊಂಡು ಆಡಬಹುದು.
- ಅಂತರಜಾಲವನ್ನು ಬಳಸಿ ಅಗತ್ಯ ಮಾಹಿತಿಗಳನ್ನು ಹುಡುಕಬಹುದು ಮತ್ತು ಅಂತರಜಾಲದಿಂದ ಪಡೆದ ಮಾಹಿತಿಗಳನ್ನು ಕಂಪ್ಯೂಟರ್ ಹಾರ್ಡ್ ಡ್ರೈವ್‌ಗಳಲ್ಲಿ ಶೇಖರಿಸಿ ಇಡಬಹುದು. ಇಮೇಲ್ ಮಾಡಲು, ಸಾಮಾಜಿಕ ಸಂವಹನ ನಡೆಸಲು ಬಳಸಬಹುದಾಗಿದೆ.
- ಕಂಪ್ಯೂಟರ್‌ನಲ್ಲಿ ಬರೆದದ್ದನ್ನು, ಇಂಟರ್ನೆಟ್‌ನಿಂದ ಡೌನ್‌ಲೋಡ್ ಮಾಡಿದ್ದನ್ನು ಬಾಹ್ಯ ಹಾರ್ಡ್‌ಡಿಸ್ಕ್‌ಗಳಾದ ಸಿಡಿ, ಡಿವಿಡಿ, ಪೆನ್‌ಡ್ರೈವ್ ಮುಂತಾದವುಗಳ ಮುಖಾಂತರ ಇತರರೊಂದಿಗೆ ಹಂಚಿಕೊಳ್ಳುವುದು ಅಥವಾ ಬೇರೊಂದು ಕಂಪ್ಯೂಟರ್‌ಗೆ ವರ್ಗಾಯಿಸುವುದು ಎಲ್ಲವೂ ಸುಲಭ.
- ಒಮ್ಮೆ ಕಂಪ್ಯೂಟರ್ ಮತ್ತು ಅಂತರಜಾಲದ ಬಳಕೆಯ ಜಗತ್ತಿಗೆ ತೆರೆದುಕೊಂಡರೆ, ಅದು ಅಸಂಖ್ಯ ಸಾಧ್ಯತೆಗಳನ್ನು ಒದಗಿಸುತ್ತದೆ, ಮತ್ತು ಕಲಿಕೆ ಅತ್ಯಂತ ಆಸಕ್ತಿದಾಯಕ ಮತ್ತು ಆನಂದದಾಯಕವಾದದ್ದಾಗಿರುತ್ತದೆ.
- ಕಂಪ್ಯೂಟರ್ ಬಳಕೆಯನ್ನು ಕನಿಷ್ಟ ಶಿಕ್ಷಣವಿರುವವರಿಗೂ ಕಲಿಯಲು ಸುಲಭವಾಗುವಂತೆ ರೂಪಿಸುವಲ್ಲಿ ನೂರಾರು ಇಂಜಿನಿಯರುಗಳ ಪಾತ್ರ ದೊಡ್ಡದಿದೆ. ಆಸಕ್ತಿಯಿಂದ ಕಲಿಯುವವರಿಗೆ ಕಂಪ್ಯೂಟರ್ ಬಳಕೆ ನಿಜಕ್ಕೂ ಅತ್ಯಂತ ಸುಲಭವಿದೆ.
ನೋಡಿ
[ಬದಲಾಯಿಸಿ]- ಲಿನಕ್ಸ್ ವಿತರಣೆಗಳು:
- ಕಾರ್ಯನಿರ್ವಹಣ ಸಾಧನ:
ಉಲ್ಲೇಖಗಳು
[ಬದಲಾಯಿಸಿ]- ↑ http://www.cciw.com/ content/computer_ etymology.html
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಕಂಪ್ಯೂಟರ್ ಕುಟುಂಬ Archived 2017-03-04 ವೇಬ್ಯಾಕ್ ಮೆಷಿನ್ ನಲ್ಲಿ., ಇಜ್ಞಾನ ಡಾಟ್ ಕಾಮ್
- ಸರ್ಕಾರಿ ನೌಕರರಿಗೆ ‘ಕಂಪ್ಯೂಟರ್’