ವಿಷಯಕ್ಕೆ ಹೋಗು

ಅರಿಸ್ಟೋಲೋಕಿಯೇಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರಿಸ್ಟೋಲೋಕಿಯೇಸಿ

ಈಶ್ವರೀ ಕುಟುಂಬದ ಸಸ್ಯಗಳು ಹೂತೋಟಗಳಲ್ಲಿ ಇವು ಶೃಂಗಾರ ಮತ್ತು ಅಲಂಕಾರ ಸಸ್ಯಗಳು (ಅರಿಸ್ಟೋಲೋಕಿಯೇಸಿ). ಔಷಧಿ ಗುಣವಿದೆ ಎಂದು ನಂಬಲಾಗಿದೆ. ಇವು ಮೂಲಿಕೆ. ಸಾಮಾನ್ಯ ವಾರ್ಷಿಕ ಬಳ್ಳಿ ಮತ್ತು ದೊಡ್ಡ ಬಹುವಾರ್ಷಿಕ ಬಳ್ಳಿಗಳಾಗಿ ವಿಕಸಿಸಿವೆ. ಉಷ್ಣ ಮತ್ತು ಸಮಶೀತೋಷ್ಣವಲಯಗಳಲ್ಲಿ ಬೆಳೆವಣಿಗೆ ಸಹಜವಾಗಿ ಆಗುತ್ತದೆ. ಭಾರತದಲ್ಲಿ ಗಂಗಾನದಿಯ ಬಯಲಿನಲ್ಲೂ ದಖನ್ ಪ್ರಸ್ಥಭೂಮಿಯಲ್ಲೂ ವಿಪುಲವಾಗಿ ಹಬ್ಬಿದೆ. ಈ ಸಸ್ಯಗಳು ಸರಳವಾಗಿವೆ. ಜೋಡಣೆ ಪರ್ಯಾಯ. ದ್ವಿಲಿಂಗ ಪುಷ್ಪದ ಅಂಡಾಶಯ ಅಧೋಸ್ಥಿತಿಯಲ್ಲಿದ್ದು, ಸಂಯುಕ್ತ ಪುಷ್ಪಪತ್ರದ ನಾಳ ಕೇಸರ ಸಮೂಹ, ಶಲಾಕೆ, ಶಲಾಕಾಗ್ರಗಳನ್ನು ಮುಚ್ಚಿಕೊಂಡಿದೆ. ಪುಷ್ಪಪತ್ರದ ನಾಳದ ಕತ್ತಿನ ಒಳಭಾಗದಲ್ಲಿ ಸಣ್ಣ ಎಳೆಗಳು ಒಳಮುಖವಾಗಿ ಬೆಳೆದಿವೆ. ಪತಂಗಾದಿಗಳು ಒಳಗೆ ಹೋದ ಅನಂತರ ಮಧುವೂ ಸಿಕ್ಕದೆ ಹೊರಕ್ಕೂ ಬರಲಾಗದೆ ಸ್ವಲ್ಪಕಾಲ ಅಲ್ಲೇ ಅಲೆದಾಡುತ್ತದೆ. ಹೊರಹೊರಟ ಮೇಲೆ ಆ ಹೂವಿನ ಪರಾಗದಿಂದೊಡಗೂಡಿ ಮತ್ತೊಂದು ಪುಷ್ಪವನ್ನು ಹೊಕ್ಕು ಅನ್ಯಪರಾಗ ಸ್ಪರ್ಶಕಾರ್ಯಕ್ಕೆ ನೆರವಾಗುತ್ತದೆ. ಫಲ ಶುಷ್ಕಮಾದರಿ. ಬೀಜಕೋಶ ಸಿಡಿದು ಪ್ರಸಾರ ಗಾಳಿಯಿಂದಾಗುತ್ತದೆ.[]

ಪ್ರಭೇದಗಳು

[ಬದಲಾಯಿಸಿ]

ಈ ಕುಟುಂಬದ ಸುಮಾರು ೪೦೦ ಪ್ರಭೇದಗಳಲ್ಲಿ ಸುಮಾರು ೨೫ ಮುಖ್ಯವಾದವು. ಅರಿಸ್ಟೊಲೋಕಿಯ ಬ್ರಾಕ್ಟಿಯೇಟಾ (ಸಂಸ್ಕೃತ-ಪತ್ರಭಂಗ. ಕನ್ನಡ-ಈಶ್ವರೀಗಿಡ) ಅರಿಸ್ಟೊಲೋಕಿಯ ಇಂಡಿಕ (ಸಂಸ್ಕೃತ-ರುದ್ರಜಾತ, ಸುನಂದ. ಕನ್ನಡ-ಈಶ್ವರೀಬಳ್ಳಿ) ಈ ಪ್ರಭೇದಗಳು ಮಾನವನ ಆರೋಗ್ಯಪಾಲನೆಯಲ್ಲೂ ರೋಗ ಚಿಕಿತ್ಸೆಯಲ್ಲೂ ಪ್ರಾಮುಖ್ಯ ಪಡೆದಿವೆ. ಈ ಸಸ್ಯಗಳ ಬೇರು, ಕಾಂಡ, ಎಲೆ, ಬೀಜ—ಇವು ವಿರೇಚಕವಾಗಿಯೂ ಉದರಕ್ರಿಮಿನಾಶಕವಾಗಿಯೂ ಬಳಕೆಯಲ್ಲಿವೆ. ಸಿಫಿಲಿಸ್, ಗೊನೋರಿಯ ಮತ್ತು ಚರ್ಮರೋಗಗಳಲ್ಲೂ ವಿವಿಧ ರೀತಿಯಲ್ಲಿ ಅವನ್ನು ಉಪಯೋಗಿಸುತ್ತಾರೆ. ಉದರಶೂಲೆ, ಹೊಟ್ಟೆನೋವು, ಭೇದಿ, ಕಾಲರ ಮತ್ತು ಜ್ವರ—ಇವುಗಳಿಗೆ ಈ ಗಿಡದ ಜೊತೆಗೆ ಮೆಣಸು, ಶುಂಠಿ, ಹರಳೆಣ್ಣೆ ಇತ್ಯಾದಿಗಳಿಂದ ತಯಾರಿಸಿದ ಕಷಾಯವನ್ನು ಕುಡಿಸುತ್ತಾರೆ. ಬೇರನ್ನು ತೊನ್ನುರೋಗಕ್ಕೆ ಹಚ್ಚಲು ಉಪಯೋಗಿಸುವರು. ಬೇರಿನ ಕಷಾಯವನ್ನು ಹುಳುಕಡ್ಡಿಗೂ ಎಲೆಯ ಚೂರ್ಣವನ್ನು ಎಕ್ಸಿಮಾ ಮತ್ತು ಗಾಯಗಳಿಗೂ ಬೇರು, ಕಾಂಡ ಮತ್ತು ಎಲೆಗಳ ರಸವನ್ನು ಹಾವು ಕಡಿತಕ್ಕೂ ಬೇರನ್ನು ಮಾತ್ರ ಗರ್ಭಪಾತಕ್ಕೂ ಉಪಯೋಗಿಸುತ್ತಾರೆ. ಶಕ್ತಿವರ್ಧಕವಾಗಿಯೂ ಬೇರನ್ನು ಉಪಯೋಗಿಸುವುದುಂಟು.

ಅರಿಸ್ಟೊಲೋಕಿಯ ಬ್ರಾಕ್ಟಿಯೇಟಾ ಗಿಡದ ಉಪಯೋಗಗಳು

[ಬದಲಾಯಿಸಿ]

ಜೀವರಸಾಯನ ಶಾಸ್ತ್ರಜ್ಞರು ಅರಿಸ್ಟೊಲೋಕಿಯ ಬ್ರಾಕ್ಟಿಯೇಟಾ ಗಿಡದ ಬೇರು, ಕಾಂಡ, ಎಲೆ ಮುಂತಾದುವನ್ನು ವಿಶ್ಲೇಷಿಸಿ ಅಚ್ಚ ಹಳದಿಯ ಮತ್ತು ಕಿತ್ತಳೆ ಬಣ್ಣದ ಅರಿಸ್ಟೊನೋಕಿಕ್ ಆಮ್ಲಗಳನ್ನು ಸೂಕ್ಷ್ಮ ಹರಳಿನ ರೂಪದಲ್ಲಿ ಬೇರ್ಪಡಿಸಿರುವರು. ಇದರ ಬೀಜದಿಂದ ಜೊತೆಗೆ ಒಂದು ರೀತಿಯ ಎಣ್ಣೆಯನ್ನು ತಯಾರಿಸಿರುವರು.

ಅರಿಸ್ಟೊಲೋಕಿಯ ಮಾಕ್ರೋಫಿಲ್ಲ

[ಬದಲಾಯಿಸಿ]

ಅರಿಸ್ಟೊಲೋಕಿಯ ಮಾಕ್ರೋಫಿಲ್ಲ (ಅ. ಬ್ರೆಜಿಲೆನ್ಸಿಸ್). ಅ. ಗೋಡ್ಲಿಯಾನ, ಅ. ಗ್ರಾಂಡಿಫ್ಲೋರ ಈ ಪ್ರಬೇಧಗಳನ್ನು ಹೂ ಮತ್ತು ಕೈತೋಟಗಳಲ್ಲಿ ಬೆಳೆಸುವರು. ಅ. ಮಾಕ್ರೋಫೈಲ ಬೆಳೆದು ದೊಡ್ಡ ದೊಡ್ಡ ಎಲೆಗಳನ್ನು ತಳೆದು ವಿಸ್ತರಿಸಿಕೊಳ್ಳುವುದರಿಂದ ನೆರಳಿನ ಗಿಡವಾಗಿ ಬೆಳೆಸುವುದುಂಟು. ಅ. ಗ್ರಾಂಡಿಫ್ಲೋರ ಅತಿ ದೊಡ್ಡದಾದ ಪುಷ್ಪಗಳನ್ನು ಬಿಡುವ ಸಸ್ಯಗಳಲ್ಲಿ ಒಂದು. ಈ ಏರುಬಳ್ಳಿಯ ಪುಷ್ಪ ಪತ್ರನಾಳವೇ ಸುಮಾರು ಮೂರು ಅಡಿಗಳ ಉದ್ದವಿರುವುದರಿಂದಲೂ ಇದರ ಹೂ ಆಶ್ಚರ್ಯಕರವಾಗಿರುವುದರಿಂದಲೂ ಇದನ್ನು ಹೂತೋಟಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುವರು. ಅ. ಬ್ರೆಜಿಲೆನ್ಸಿಸ್ ಅ. ಗೋಡ್ಲಿಯಾನಗಳನ್ನು ಕೊಂಬೆಗಳಿಂದ ಸುಲಭವಾಗಿ ಬೆಳೆಸಬಹುದು.

ಉಲ್ಲೇಖ

[ಬದಲಾಯಿಸಿ]
  1. [೧] Archived 2006-03-21 ವೇಬ್ಯಾಕ್ ಮೆಷಿನ್ ನಲ್ಲಿ.The families of flowering plants L. Watson and M. J. Dallwitz